ಪ್ರಧಾನ ಮಂತ್ರಿಯವರ ಕಛೇರಿ

ಜೋಶಿಮಠದ ಪರಿಸ್ಥಿತಿಯ ಬಗ್ಗೆ ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಉನ್ನತ ಮಟ್ಟದ ಪರಾಮರ್ಶೆ ನಡೆಸಿದರು


​​​​​​​ಅಲ್ಪಾವಧಿ, ಮಧ್ಯಮ ಮತ್ತು ದೀರ್ಘಕಾಲೀನ ಯೋಜನೆಗಳನ್ನು ಸಿದ್ದಪಡಿಸಲು ಭಾರತ ಸರ್ಕಾರದ ಏಜೆನ್ಸಿಗಳು ಮತ್ತು ತಜ್ಞರು ರಾಜ್ಯ ಸರ್ಕಾರಕ್ಕೆ ನೆರವಾಗಬೇಕು

ಎನ್‌ಡಿಆರ್‌ಎಫ್‌ನ ಒಂದು ತಂಡ ಮತ್ತು ಎಸ್‌ಡಿಆರ್‌ಎಫ್‌ನ 4 ತಂಡಗಳು ಈಗಾಗಲೇ ಜೋಶಿಮಠವನ್ನು ತಲುಪಿವೆ

ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ

ಗಡಿ ನಿರ್ವಹಣಾ ಕಾರ್ಯದರ್ಶಿ ಮತ್ತು ಎನ್‌ಡಿಎಂಎ ಸದಸ್ಯರು ನಾಳೆ ಉತ್ತರಾಖಂಡಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕನ ಮಾಡಲಿದ್ದಾರೆ

ಜೋಶಿಮಠದಿಂದ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ವಿವರಣೆ ನೀಡಿದ ಉತ್ತರಾಖಂಡ್‌ ಮುಖ್ಯ ಕಾರ್ಯದರ್ಶಿ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ, ಭಾರತೀಯ ಭೂವೈಜ್ಞಾನಿಕ ಸಮಿಕ್ಷೆ, ಐಐಟಿ ರೂರ್ಕಿ, ಹಿಮಾಲಯ ಭೂವಿಜ್ಞಾನ  ವಾಡಿಯಾ ಸಂಸ್ಥೆ, ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ ಮತ್ತು  ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ  ತಜ್ಞರ ತಂಡವು ಅಧ್ಯಯನ ಮತ್ತು ಶಿಫಾರಸುಗಳನ್ನು ಮಾಡಲಿದೆ

Posted On: 08 JAN 2023 6:50PM by PIB Bengaluru

ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು 2023 ರ ಜನವರಿ 8 ರಂದು ಜೋಶಿ ಮಠದಲ್ಲಿನ ಕಟ್ಟಡ ಹಾನಿ ಮತ್ತು ಭೂ ಕುಸಿತದ ಉನ್ನತ ಮಟ್ಟದ ಪರಾಮರ್ಶೆ ನಡೆಸಿದರು. ಸಂಪುಟ ಕಾರ್ಯದರ್ಶಿ; ಗೃಹ ಕಾರ್ಯದರ್ಶಿ; ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು; ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರು, ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ, ಡಿಎಂ ಮತ್ತು ಜೋಶಿಮಠದ ಅಧಿಕಾರಿಗಳು; ಉತ್ತರಾಖಂಡದ ಹಿರಿಯ ಅಧಿಕಾರಿಗಳು; ಐಐಟಿ ರೂರ್ಕಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ,ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ,  ಹಿಮಾಲಯ ಭೂವಿಜ್ಞಾನ ವಾಡಿಯಾ ಸಂಸ್ಥೆಯ ತಜ್ಞರು ಸಹ ವಿಸಿ (ವಿಡಿಯೊ ಕಾನ್ಫರೆನ್ಸ್) ಮೂಲಕ ಪರಿಶೀಲನೆಯಲ್ಲಿ ಭಾಗವಹಿಸಿದ್ದರು.

ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಳಜಿ ವಹಿಸಿದ್ದಾರೆ ಮತ್ತು ಮುಖ್ಯಮಂತ್ರಿ ಜತೆ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಕೇಂದ್ರ ತಜ್ಞರ ಬೆಂಬಲದೊಂದಿಗೆ ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳು ಪರಿಸ್ಥಿತಿ ಕುರಿತು ಅವಲೋಕಿಸಿದ್ದಾರೆ ಎಂದು ಉತ್ತರಾಖಂಡ ಮುಖ್ಯ ಕಾರ್ಯದರ್ಶಿ ಮಾಹಿತಿ ನೀಡಿದರು. ಸುಮಾರು 350 ಮೀಟರ್‌ ಅಗಲದ ಒಂದು ತುಂಡು ಭೂಮಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಮಾಹಿತಿ ನೀಡಿದರು. ಎನ್‌ಡಿಆರ್‌ಎಫ್‌ನ ಒಂದು ತಂಡ ಮತ್ತು ಎಸ್‌ಡಿಆರ್‌ಎಫ್‌ನ ನಾಲ್ಕು ತಂಡಗಳು ಜೋಶಿಮಠವನ್ನು ತಲುಪಿವೆ. ಜಿಲ್ಲಾಡಳಿತವು ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಮತ್ತು ಆಹಾರ, ಆಶ್ರಯ ಮತ್ತು ಭದ್ರತೆಗೆ ಸಾಕಷ್ಟು ವ್ಯವಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ. ಎಸ್‌ಪಿ ಮತ್ತು ಎಸ್‌ಡಿಆರ್‌ಎಫ್‌ನ ಪಡೆ ಈ ಸ್ಥಳದಲ್ಲಿ ಬೀಡುಬಿಟ್ಟಿವೆ. ಜೋಶಿಮಠದ ನಿವಾಸಿಗಳಿಗೆ ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಅವರ ಸಹಕಾರವನ್ನು ಕೋರಲಾಗುತ್ತಿದೆ. ಅಲ್ಪಾವಧಿ-ಮಧ್ಯಮ-ದೀರ್ಘಾವಧಿಯ ಯೋಜನೆಗಳನ್ನು ರೂಪಿಸಲು ತಜ್ಞರ ಸಲಹೆಯನ್ನು ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ಇದಲ್ಲದೆ, ಗಡಿ ನಿರ್ವಹಣಾ ಕಾರ್ಯದರ್ಶಿ ಮತ್ತು ಎನ್‌ಡಿಎಂಎಯ ಎಲ್ಲ ನಾಲ್ಕು ಸದಸ್ಯರು ಜನವರಿ 9 ರಂದು ಉತ್ತರಾಖಂಡಕ್ಕೆ ಭೇಟಿ ನೀಡಲಿದ್ದಾರೆ. ಅವರು ಜೋಶಿಮಠದಿಂದ ಈಗಷ್ಟೇ ಹಿಂದಿರುಗಿದ ತಾಂತ್ರಿಕ ತಂಡಗಳ (ಎನ್‌ಡಿಎಂಎ, ಎನ್‌ಐಡಿಎಂ, ಎನ್‌ಡಿಆರ್‌ಎಫ್‌, ಜಿಎಸ್‌ಐ, ಎನ್‌ಐಹೆಚ್‌, ವಾಡಿಯಾ ಇನ್‌ಸ್ಟಿಟ್ಯೂಟ್‌, ಐಐಟಿ ರೂರ್ಕಿ) ಶೋಧನೆ ಕುರಿತು ವಿವರವಾದ ಮೌಲ್ಯಮಾಪನವನ್ನು ಕೈಗೊಳ್ಳಲಿದ್ದಾರೆ ಮತ್ತು ಪರಿಸ್ಥಿತಿಯನ್ನು ಪರಿಹರಿಸಲು ತಕ್ಷಣದ, ಅಲ್ಪಾವಧಿಯ-ಮಧ್ಯಮ-ದೀರ್ಘಕಾಲೀನ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲಿದ್ದಾರೆ.

ಪೀಡಿತ ಪ್ರದೇಶದಲ್ಲಿ ವಾಸಿಸುವ ಜನರ ಸುರಕ್ಷತೆಯೇ ರಾಜ್ಯದ 
ತಕ್ಷಣದ ಆದ್ಯತೆಯಾಗಬೇಕು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಅವರು ಹೇಳಿದರು. ರಾಜ್ಯ ಸರ್ಕಾರವು ಸಂಕಷ್ಟಕ್ಕೆ ಸಿಲುಕಿರುವ ಜನರೊಂದಿಗೆ ಸ್ಪಷ್ಟವಾದ ಮತ್ತು ನಿರಂತರ ಸಂವಹನ ಮಾರ್ಗವನ್ನು ಹೊಂದಿರಬೇಕು. ಕಾರ್ಯಸಾಧ್ಯವಾಗಬಹುದಾದ ಪ್ರಾಯೋಗಿಕ ಕ್ರಮಗಳ ಮೂಲಕ ಪರಿಸ್ಥಿತಿ ಹದಗೆಡುವಿಕೆಯನ್ನು ತಡೆಯಲು ತಕ್ಷಣದ ಪ್ರಯತ್ನಗಳನ್ನು ಮಾಡಬೇಕು. ಬಾಧಿತ ಪ್ರದೇಶದ ಅಂತರ್‌-ಶಿಸ್ತಿನ ತನಿಖೆಯನ್ನು ಕೈಗೊಳ್ಳಬೇಕು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ), ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಎನ್‌ಐಡಿಎಂ), ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ), ರೂರ್ಕಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ಹಿಮಾಲಯ ಭೂವಿಜ್ಞಾನ ವಾಡಿಯಾ ಸಂಸ್ಥೆ (ಡಬ್ಲ್ಯುಐಎಚ್‌ಜಿ), ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ (ಎನ್‌ಐಎಚ್‌) ಮತ್ತು ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್‌ಐ) ಮುಂತಾದ ಕೇಂದ್ರೀಯ ಸಂಸ್ಥೆಗಳ ತಜ್ಞರು ಉತ್ತರಾಖಂಡ ರಾಜ್ಯದೊಂದಿಗೆ ಸಂಪೂರ್ಣ ಸರ್ಕಾರ ವಿಧಾನದ ಸ್ಫೂರ್ತಿಯಲ್ಲಿ ನಿಕಟವಾಗಿ ಕೆಲಸ ಮಾಡಬೇಕು. ಒಂದು ಸ್ಪಷ್ಟವಾದ ಕಾಲಮಿತಿಯ ಪುನರ್ನಿರ್ಮಾಣ ಯೋಜನೆಯನ್ನು ಸಿದ್ಧಪಡಿಸಬೇಕು. ನಿರಂತರ ಭೂಕಂಪದ ಮೇಲ್ವಿಚಾರಣೆಯನ್ನು ಮಾಡಬೇಕು. ಈ ಅವಕಾಶವನ್ನು ಬಳಸಿಕೊಂಡು, ಜೋಶಿಮಠಕ್ಕಾಗಿ ಅಪಾಯ ಸೂಕ್ಷ್ಮ ನಗರ ಅಭಿವೃದ್ಧಿ ಯೋಜನೆಯನ್ನು ಸಹ ಅಭಿವೃದ್ಧಿಪಡಿಸಬೇಕು ಎಂದು ಅವರು ತಿಳಿಸಿದರು.

*****



(Release ID: 1889698) Visitor Counter : 136