ಪ್ರಧಾನ ಮಂತ್ರಿಯವರ ಕಛೇರಿ

ಬಾಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಡಿಜಿಟಲ್ ಪರಿವರ್ತನೆ ಕುರಿತ 2ನೇ ಅಧಿವೇಶನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಭಾಷಣದ ಕನ್ನಡ ಅವತರಣಿಕೆ 

Posted On: 16 NOV 2022 11:59AM by PIB Bengaluru

ಗೌರವಾನ್ವಿತರೇ,

ಡಿಜಿಟಲ್ ಪರಿವರ್ತನೆಯು ನಮ್ಮ ಕಾಲದ ಅತ್ಯಂತ ಗಮನಾರ್ಹ ಬದಲಾವಣೆಯಾಗಿದೆ. ಡಿಜಿಟಲ್ ತಂತ್ರಜ್ಞಾನಗಳ ಸೂಕ್ತ ಬಳಕೆಯು ಬಡತನದ ವಿರುದ್ಧದ ದಶಕಗಳ ಜಾಗತಿಕ ಹೋರಾಟದ ಬಲವನ್ನು ಹೆಚ್ಚಿಸುತ್ತದೆ. ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಡಿಜಿಟಲ್ ಪರಿಹಾರಗಳು ಸಹ ಸಹಾಯಕವಾಗಬಹುದು. ಕೋವಿಡ್ ಸಮಯದಲ್ಲಿ ಮನೆಯಿಂದಲೇ ಕೆಲಸ ಮತ್ತು ಕಾಗದ ರಹಿತ ಕಚೇರಿಗಳ ಉದಾಹರಣೆಗಳಲ್ಲಿ ಇದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಡಿಜಿಟಲ್ ಲಭ್ಯತೆಯು ನಿಜವಾಗಿಯೂ ಎಲ್ಲರನ್ನೂ ಒಳಗೊಂಡಾಗ ಮತ್ತು ಡಿಜಿಟಲ್ ತಂತ್ರಜ್ಞಾನದ ಬಳಕೆಯು ನಿಜವಾಗಿಯೂ ವ್ಯಾಪಕವಾದಾಗ ಮಾತ್ರ ಈ ಪ್ರಯೋಜನಗಳು ವಾಸ್ತವವಾಗುತ್ತವೆ. ದುರದೃಷ್ಟವಶಾತ್, ಇದುವರೆಗೆ ನಾವು ಈ ಶಕ್ತಿಯುತ ಸಾಧನವನ್ನು ಸರಳ ವ್ಯವಹಾರದ ಮಾನದಂಡವಾಗಿ ಮಾತ್ರ ನೋಡಿದ್ದೇವೆ, ಈ ಶಕ್ತಿಯನ್ನು ಲಾಭ ಮತ್ತು ನಷ್ಟದ ಲೆಕ್ಕಾಚಾರದಲ್ಲಿ ಬಂಧಿಸಲಾಗಿದೆ. ಡಿಜಿಟಲ್ ಪರಿವರ್ತನೆಯ ಪ್ರಯೋಜನಗಳು ಮಾನವ ಜನಾಂಗದ ಒಂದು ಸಣ್ಣ ವರ್ಗಕ್ಕೆ ಮಾತ್ರ ಸೀಮಿತವಾಗಿರಬಾರದು ಎಂಬುದು ನಮ್ಮ ಜಿ-20 ನಾಯಕರ ಅಭಿಮತವಾಗಿದೆ.

ಕಳೆದ ಕೆಲವು ವರ್ಷಗಳ ಭಾರತದ ಅನುಭವವು, ನಾವು ಡಿಜಿಟಲ್ ವ್ಯವಸ್ಥೆಯಲ್ಲಿ ಎಲ್ಲರನ್ನೂ ಒಳಗೊಳ್ಳುವಂತೆ ಮಾಡಿದರೆ, ಅದು ಸಾಮಾಜಿಕ-ಆರ್ಥಿಕ ಪರಿವರ್ತನೆಯನ್ನು ತರಬಹುದು ಎಂಬುದನ್ನು ನಮಗೆ ತೋರಿಸಿದೆ. ಡಿಜಿಟಲ್ ಬಳಕೆಯು ಪ್ರಮಾಣ ಮತ್ತು ವೇಗವನ್ನು ತರಬಹುದು. ಆಡಳಿತದಲ್ಲಿ ಪಾರದರ್ಶಕತೆ ತರಬಹುದು. ಭಾರತವು ಡಿಜಿಟಲ್ ಸಾರ್ವಜನಿಕ ಸರಕುಗಳನ್ನು ಅಭಿವೃದ್ಧಿಪಡಿಸಿದೆ, ಅದರ ಮೂಲಭೂತ ವಾಸ್ತುಶಿಲ್ಪವು ಅಂತರ್ಗತ ಪ್ರಜಾಪ್ರಭುತ್ವದ ತತ್ವಗಳನ್ನು ಹೊಂದಿದೆ. ಈ ಪರಿಹಾರಗಳು ಓಪನ್ ಸೋರ್ಸ್, ಓಪನ್ ಎಪಿಐ ಗಳು, ಓಪನ್ ಸ್ಟ್ಯಾಂಡರ್ಡ್‌ಗಳನ್ನು ಆಧರಿಸಿವೆ, ಇವು ಅಂತರ್‌ ಕಾರ್ಯಾಚರಣೆ ಮತ್ತು ಸಾರ್ವಜನಿಕವಾಗಿವೆ. ಇದು ಇಂದು ಭಾರತದಲ್ಲಿ ನಡೆಯುತ್ತಿರುವ ಡಿಜಿಟಲ್ ಕ್ರಾಂತಿಯ ನಮ್ಮ ವಿಧಾನವಾಗಿದೆ. ಉದಾಹರಣೆಗೆ, ನಮ್ಮ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ತೆಗೆದುಕೊಳ್ಳಿ.

ಕಳೆದ ವರ್ಷ, ವಿಶ್ವದ 40 ಪ್ರತಿಶತದಷ್ಟು ನೈಜ-ಸಮಯದ ಪಾವತಿ ವಹಿವಾಟುಗಳು ಯುಪಿಐ ಮೂಲಕ ನಡೆದಿವೆ. ಅದೇ ರೀತಿ, ನಾವು ಡಿಜಿಟಲ್ ಗುರುತಿನ ಆಧಾರದ ಮೇಲೆ 460 ಮಿಲಿಯನ್ ಹೊಸ ಬ್ಯಾಂಕ್ ಖಾತೆಗಳನ್ನು ತೆರೆದಿದ್ದೇವೆ, ಇವು ಇಂದು ಭಾರತವನ್ನು ಆರ್ಥಿಕ ಸೇರ್ಪಡೆಯಲ್ಲಿ ಜಾಗತಿಕ ನಾಯಕನನ್ನಾಗಿ ಮಾಡಿವೆ. ನಮ್ಮ ಓಪನ್ ಸೋರ್ಸ್ ಕೋವಿನ್‌ ಪ್ಲಾಟ್‌ಫಾರ್ಮ್ ಮಾನವ ಇತಿಹಾಸದಲ್ಲಿ ಅತಿದೊಡ್ಡ ಲಸಿಕಾ ಅಭಿಯಾನವನ್ನು ಮಾಡಿದೆ, ಇದು ಸಾಂಕ್ರಾಮಿಕ ಸಮಯದಲ್ಲಿಯೂ ಯಶಸ್ವಿಯಾಗಿದೆ.


ಗೌರವಾನ್ವಿತರೇ,
 

ಭಾರತದಲ್ಲಿ, ನಾವು ಡಿಜಿಟಲ್ ಲಭ್ಯತೆಯನ್ನು ಸಾರ್ವಜನಿಕಗೊಳಿಸುತ್ತಿದ್ದೇವೆ, ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ, ಇನ್ನೂ ದೊಡ್ಡ ಡಿಜಿಟಲ್ ಅಂತರ ಇದೆ. ಪ್ರಪಂಚದ ಬಹುತೇಕ ಅಭಿವೃದ್ಧಿಶೀಲ ರಾಷ್ಟ್ರಗಳ ನಾಗರಿಕರು ಯಾವುದೇ ರೀತಿಯ ಡಿಜಿಟಲ್ ಗುರುತನ್ನು ಹೊಂದಿಲ್ಲ. ಕೇವಲ 50 ದೇಶಗಳು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಹೊಂದಿವೆ. ಮುಂದಿನ ಹತ್ತು ವರ್ಷಗಳಲ್ಲಿ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಡಿಜಿಟಲ್ ಪರಿವರ್ತನೆಯನ್ನು ತರುತ್ತೇವೆ ಎಂದು ನಾವೆಲ್ಲರೂ ಒಟ್ಟಾಗಿ ಪ್ರತಿಜ್ಞೆ ಮಾಡಬಹುದೇ, ಇದರಿಂದ ವಿಶ್ವದ ಯಾವುದೇ ವ್ಯಕ್ತಿಯೂ ಡಿಜಿಟಲ್ ತಂತ್ರಜ್ಞಾನದ ಪ್ರಯೋಜನಗಳಿಂದ ವಂಚಿತರಾಗುವುದಿಲ್ಲ!
ಮುಂದಿನ ವರ್ಷ ತನ್ನ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ, ಭಾರತವು ಈ ಉದ್ದೇಶಕ್ಕಾಗಿ ಜಿ-20 ಪಾಲುದಾರರೊಂದಿಗೆ ಜಂಟಿಯಾಗಿ ಕೆಲಸ ಮಾಡುತ್ತದೆ. "ಅಭಿವೃದ್ಧಿಗಾಗಿ ಡೇಟಾ" ತತ್ವವು ನಮ್ಮ ಅಧ್ಯಕ್ಷತೆಯ ಒಟ್ಟಾರೆ ಧ್ಯೇಯವಾದ "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ"ದ ಅವಿಭಾಜ್ಯ ಅಂಗವಾಗಿದೆ.


ಧನ್ಯವಾದಗಳು.

ಸೂಚನೆ - ಇದು ಪ್ರಧಾನಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

*****



(Release ID: 1876666) Visitor Counter : 151