ಗೃಹ ವ್ಯವಹಾರಗಳ ಸಚಿವಾಲಯ

ಹರಿಯಾಣದ ಸೂರಜ್ ಕುಂಡ್‌ನಲ್ಲಿ ಎರಡು ದಿನಗಳ 'ಚಿಂತನ ಶಿಬಿರ'ವನ್ನು ಉದ್ದೇಶಿಸಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಮಾತನಾಡಿದರು

Posted On: 27 OCT 2022 6:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸ್ಫೂರ್ತಿಯೊಂದಿಗೆ, ಈ 'ಚಿಂತನ ಶಿಬಿರ'ವು ರಾಷ್ಟ್ರದ ಮುಂದಿರುವ ಎಲ್ಲಾ ಸವಾಲುಗಳನ್ನು ಒಗ್ಗಟ್ಟಿನಿಂದ ಎದುರಿಸಲು ವೇದಿಕೆಯನ್ನು ಒದಗಿಸುತ್ತದೆ

ಒಂದು ಕಾಲದಲ್ಲಿ ಹಿಂಸಾಚಾರ ಮತ್ತು ಅಶಾಂತಿಯ ಕೇಂದ್ರಬಿಂದುವಾಗದ್ದ ಎಡಪಂಥೀಯ ಉಗ್ರವಾದ, ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ಪ್ರದೇಶಗಳು ಈಗ ಅಭಿವೃದ್ಧಿಯ ಕೇಂದ್ರಬಿಂದುಗಳಾಗುತ್ತಿವೆ ಗಳಾಗುತ್ತಿವೆ

ಸೈಬರ್-ಅಪರಾಧವು ದೇಶ ಮತ್ತು ವಿಶ್ವದ ಮುಂದಿರುವ ದೊಡ್ಡ ಸವಾಲಾಗಿದೆ. ಇಂದು, ಗೃಹ ವ್ಯವಹಾರಗಳ ಸಚಿವಾಲಯವು ಅದರ ವಿರುದ್ಧ ಹೋರಾಡಲು ಬದ್ಧವಾಗಿದೆ

ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರವು 'ಸಂಪೂರ್ಣ ಸರಕಾರ' ಮತ್ತು 'ಟೀಮ್ ಇಂಡಿಯಾ ವಿಧಾನ'ದ ಅಡಿಯಲ್ಲಿ ಸಹಕಾರ, ಸಮನ್ವಯ ಮತ್ತು ಸಹಯೋಗ ಎಂಬ ಮೂರು 'ಸಿ' ವಿಧಾನವನ್ನು ಉತ್ತೇಜಿಸುತ್ತಿದೆ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರವು ದೇಶ ಮತ್ತು ಯುವಕರನ್ನು ಮಾದಕವಸ್ತುಗಳ ಪಿಡುಗಿನಿಂದ ರಕ್ಷಿಸಲು ದೃಢ ಸಂಕಲ್ಪ ಮಾಡಿದ್ದು,  ನಮ್ಮ ನೀತಿಯು ಈ ನಿಟ್ಟಿನಲ್ಲಿ ಫಲಿತಾಂಶಗಳನ್ನು ನೀಡುತ್ತಿದೆ. ಇದರ ಅಡಿಯಲ್ಲಿ ಇದುವರೆಗೆ 20,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ

ಇಂದಿನ ಜಗತ್ತಿನಲ್ಲಿ ಅಪರಾಧದ ಸ್ವರೂಪವು ಬದಲಾಗುತ್ತಿದೆ ಮತ್ತು ಅಪರಾಧವು ಗಡಿರಹಿತವಾಗುತ್ತಿದೆ. ಅದಕ್ಕಾಗಿಯೇ ರಾಜ್ಯಗಳು ಅದರ ವಿರುದ್ಧ ಹೋರಾಡಲು ಸಾಮಾನ್ಯ ಕಾರ್ಯತಂತ್ರವನ್ನು ರೂಪಿಸಬೇಕಾಗಿದೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ ಮತ್ತು ನಿರ್ಣಾಯಕ ವಿಜಯವನ್ನು ಸಾಧಿಸಲು ʻಎನ್ಐಎʼ ಮತ್ತು ಇತರ ಏಜೆನ್ಸಿಗಳನ್ನು ಬಲಪಡಿಸಲಾಗುತ್ತಿದೆ. 2024ರ ಮೊದಲು ಎಲ್ಲಾ ರಾಜ್ಯಗಳಲ್ಲಿ ʻಎನ್ಐಎ; ಶಾಖೆಗಳನ್ನು ಸ್ಥಾಪಿಸುವ ಮೂಲಕ ಭಯೋತ್ಪಾದನಾ ವಿರೋಧಿ ಜಾಲವನ್ನು ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ

ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ಎಲ್ಲಾ ರಾಜ್ಯಗಳು ವಿಧಿವಿಜ್ಞಾನವನ್ನು ಗರಿಷ್ಠವಾಗಿ ಬಳಸಬೇಕು, ಭಾರತ ಸರಕಾರವು ʻರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯವನ್ನು (ʻಎನ್ಎಫ್ಎಎಸ್‌ಯುʼ ) ಸ್ಥಾಪಿಸುವ ಮೂಲಕ ಮೂಲಕ ಸಾಧ್ಯವಿರುವ ಎಲ್ಲಾ ಸಹಾಯವನ್ನು ವಿಸ್ತರಿಸಿದೆ

ಗಡಿ ಭದ್ರತೆ ಮತ್ತು ಕರಾವಳಿ ಭದ್ರತೆಯನ್ನು ಖಾತರಿಪಡಿಸಲು ಕೇಂದ್ರದ ಏಜೆನ್ಸಿಗಳು ಹಾಗೂ ಭದ್ರತಾ ಪಡೆಗಳೊಂದಿಗೆ ಹೆಚ್ಚು ಸಂಘಟಿತ ಪ್ರಯತ್ನಗಳನ್ನು ಗಡಿ ರಾಜ್ಯಗಳು ಮಾಡುವ ಅಗತ್ಯವಿದೆ

ವಿಪತ್ತು ನಿರ್ವಹಣೆಯಲ್ಲಿ ಸರಕಾರವು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ ಮತ್ತು ಈ ಉಪಕ್ರಮಗಳ ಅನುಷ್ಠಾನವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುವಂತೆ ನಾನು ಎಲ್ಲಾ ಮುಖ್ಯಮಂತ್ರಿಗಳನ್ನು ವಿನಂತಿಸುತ್ತೇನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ, ಗೃಹ ವ್ಯವಹಾರಗಳ ಸಚಿವಾಲಯವು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳು; ಭಯೋತ್ಪಾದನೆ, ಮಾದಕವಸ್ತು ಕಳ್ಳಸಾಗಣೆ, ಎಡಪಂಥೀಯ ಉಗ್ರವಾದ ಮತ್ತು ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ಪ್ರಮುಖ ಮತ್ತು ಸೂಕ್ಷ್ಮ ವಿಷಯಗಳ ಬಗ್ಗೆ ಅತ್ಯಂತ ಪರಿಣಾಮಕಾರಿ ಮತ್ತು ದೂರಗಾಮಿ ಕ್ರಮಗಳನ್ನು ಕೈಗೊಂಡಿದೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಹರಿಯಾಣದ ಸೂರಜ್ ಕುಂಡ್‌ನಲ್ಲಿ ಎರಡು ದಿನಗಳ 'ಚಿಂತನ ಶಿಬಿರ'ದ ಮೊದಲ ದಿನವನ್ನುದ್ದೇಶಿಸಿ ಮಾತನಾಡಿದರು. ʻಚಿಂತನ ಶಿಬಿರʼದಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಗಳ ಗೃಹ ಸಚಿವರು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಆಡಳಿತಾಧಿಕಾರಿಗಳು ಭಾಗವಹಿಸುತ್ತಿದ್ದಾರೆ.

ಪ್ರಧಾನಮಂತ್ರಿ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಸ್ಫೂರ್ತಿಯೊಂದಿಗೆ ಈ ʻಚಿಂತನ ಶಿಬಿರʼವನ್ನು ಆಯೋಜಿಸಲಾಗುತ್ತಿದೆ, ಇದು ಸೈಬರ್ ಅಪರಾಧ, ಮಾದಕ ವಸ್ತುಗಳ ಪೂರೈಕೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯಂತಹ ಸವಾಲುಗಳನ್ನು ಒಗ್ಗಟ್ಟಿನಿಂದ ಎದುರಿಸಲು ಸಮಾನ ವೇದಿಕೆಯನ್ನು ಒದಗಿಸುತ್ತದೆ,ʼʼ ಎಂದು ಹೇಳಿದರು.  ಇಂದು ಅಪರಾಧಗಳ ಸ್ವರೂಪವು ಬದಲಾಗುತ್ತಿದೆ ಮತ್ತು ಅವು ಗಡಿರಹಿತವಾಗುತ್ತಿವೆ. ಅದಕ್ಕಾಗಿಯೇ ಎಲ್ಲಾ ರಾಜ್ಯಗಳು ಒಂದೇ ಕಾರ್ಯತಂತ್ರವನ್ನು ಹೊಂದುವ ಮೂಲಕ ಇವುಗಳ ವಿರುದ್ಧ ಹೋರಾಡಬೇಕಾಗುತ್ತದೆ ಎಂದು ಅವರು ಸಲಹೆ ನೀಡಿದರು. ಈ ಸಾಮಾನ್ಯ ಕಾರ್ಯತಂತ್ರವನ್ನು ರೂಪಿಸಲು ಮತ್ತು ಅನುಷ್ಠಾನಗೊಳಿಸಲು, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರವು 'ಸಹಕಾರಿ ಒಕ್ಕೂಟ ವ್ಯವಸ್ಥೆʼ, 'ಸಂಪೂರ್ಣ ಸರಕಾರ' ಮತ್ತು 'ಟೀಮ್ ಇಂಡಿಯಾ' ವಿಧಾನದ ಮನೋಭಾವದ ಅಡಿಯಲ್ಲಿ ʻ3 ಸಿʼ ಗಳನ್ನು - ಅಂದರೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಹಕಾರ, ಸಮನ್ವಯ, ಸಹಯೋಗವನ್ನು ಉತ್ತೇಜಿಸುತ್ತಿದೆ.

ಒಂದು ಕಾಲದಲ್ಲಿ ಹಿಂಸಾಚಾರ ಮತ್ತು ಅಶಾಂತಿಯ ಕೇಂದ್ರಬಿಂದುಗಳಾಗಿದ್ದ ಎಡಪಂಥೀಯ ಉಗ್ರವಾದ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರ ಭಾರತದ ಪ್ರದೇಶಗಳು ಈಗ ಅಭಿವೃದ್ಧಿಯ ಕೇಂದ್ರಬಿಂದುಗಳಾಗಿ ಮಾರ್ಪಡುತ್ತಿವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಕಳೆದ ಎಂಟು ವರ್ಷಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಭದ್ರತಾ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ ಮತ್ತು 2014ರಿಂದ ದಂಗೆ ಪ್ರಕರಣಗಳಲ್ಲಿ 74 ಪ್ರತಿಶತದಷ್ಟು ಕಡಿಮೆಯಾಗಿದೆ. ಭದ್ರತಾ ಪಡೆಗಳಲ್ಲಿ ಸಾವುನೋವುಗಳು 60 ಪ್ರತಿಶತ ಮತ್ತು ನಾಗರಿಕ ಸಾವುನೋವುಗಳು ಸುಮಾರು 90 ಪ್ರತಿಶತದಷ್ಟು ಕಡಿಮೆಯಾಗಿವೆ ಎಂದು ಅವರು ಹೇಳಿದರು. ಇದಲ್ಲದೆ, ʻಎನ್ಎಲ್ಎಫ್‌ಟಿʼ, ʻಬೋಡೋʼ, ʻಬ್ರೂʼ, ʻಕರ್ಬಿ ಆಂಗ್ಲಾಂಗ್‌ʼ ಜೊತೆ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಈ ಪ್ರದೇಶದಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸುವ ಪ್ರಯತ್ನಗಳನ್ನು ಮಾಡಲಾಗಿದೆ. ಇದರ ಅಡಿಯಲ್ಲಿ 9,000ಕ್ಕೂ ಹೆಚ್ಚು ಭಯೋತ್ಪಾದಕರು ಶರಣಾಗಿದ್ದಾರೆ. ಈಶಾನ್ಯದಲ್ಲಿ ಶಾಂತಿ ಮರುಸ್ಥಾಪನೆಯೊಂದಿಗೆ, ʻಎಎಫ್ಎಫ್‌ಸಿಎʼ ಅನ್ನು ಶೇಕಡಾ 60ಕ್ಕೂ ಹೆಚ್ಚು ಪ್ರದೇಶಗಳಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು. ʻಎಲ್‌ಡಬ್ಲ್ಯೂಇʼ ಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿಯಲ್ಲಿನ ಸುಧಾರಣೆಯನ್ನು ಎತ್ತಿ ತೋರಿಸಿದ ಶ್ರೀ ಅಮಿತ್‌ ಶಾ ಅವರು, ಈ ಪ್ರದೇಶಗಳಲ್ಲಿ ಹಿಂಸಾಚಾರದ ಘಟನೆಗಳು ಶೇಕಡಾ 77ರಷ್ಟು ಕಡಿಮೆಯಾಗಿವೆ ಮತ್ತು ಈ ಘಟನೆಗಳಲ್ಲಿ ಸಾವುಗಳು ಸಹ ಶೇಕಡಾ 85ರಷ್ಟು ಕಡಿಮೆಯಾಗಿವೆ ಎಂದು ಹೇಳಿದರು. ಆಗಸ್ಟ್ 5, 2019ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಅಲ್ಲಿ ಶಾಂತಿ ಮತ್ತು ಪ್ರಗತಿಯ ಹೊಸ ಶಕೆ ಪ್ರಾರಂಭವಾಗಿದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಆಗಸ್ಟ್ 5, 2019ರ ಹಿಂದಿನ 37 ತಿಂಗಳುಗಳಿಗೆ ಹೋಲಿಸಿದರೆ, ಆಗಸ್ಟ್ 5, 2019 ರ ನಂತರದ 37 ತಿಂಗಳುಗಳಲ್ಲಿ ಭಯೋತ್ಪಾದಕ ಘಟನೆಗಳಲ್ಲಿ ಶೇಕಡಾ 34ರಷ್ಟು ಮತ್ತು ಭದ್ರತಾ ಪಡೆಗಳಲ್ಲಿ ಸಾವುಗಳಲ್ಲಿ ಶೇಕಡಾ 54 ರಷ್ಟು ಕಡಿಮೆಯಾಗಿದೆ ಎಂದು ಅವರು ಮಾಹಿತಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರವು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಿದೆ ಮತ್ತು ಭಯೋತ್ಪಾದನೆ ವಿರುದ್ಧ ನಿರ್ಣಾಯಕ ವಿಜಯವನ್ನು ಸಾಧಿಸಲು ʻರಾಷ್ಟ್ರೀಯ ತನಿಖಾ ದಳʼ(ʻಎನ್ಐಎʼ) ಮತ್ತು ಇತರ ಸಂಸ್ಥೆಗಳನ್ನು ಬಲಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. 2024ಕ್ಕೂ ಮುನ್ನ ಎಲ್ಲಾ ರಾಜ್ಯಗಳಲ್ಲಿ ʻಎನ್ಐಎʼ ಶಾಖೆಯನ್ನು ತೆರೆಯುವ ಮೂಲಕ ಭಯೋತ್ಪಾದನಾ ವಿರೋಧಿ ಜಾಲವನ್ನು ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಶ್ರೀ ಶಾ ಅವರು ಮಾಹಿತಿ ನೀಡಿದರು. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ವಿಜಯವನ್ನು ಸಾಧಿಸಲು, ಕಾನೂನು ಚೌಕಟ್ಟನ್ನು ಬಲಪಡಿಸಲಾಗುತ್ತಿದೆ. ಇದರ ಅಡಿಯಲ್ಲಿ ʻಎನ್‌ಐಎʼ ಮತ್ತು ʻಯುಎಪಿಎʼ ಕಾನೂನುಗಳಿಗೆ ತಿದ್ದುಪಡಿ ಮಾಡುವ ಮೂಲಕ ವೈಯಕ್ತಿಕ ಭಯೋತ್ಪಾದಕರನ್ನು ಘೋಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಹೇಳಿದರು. ʻಎನ್‌ಐಎʼಗೆ ಹೆಚ್ಚುವರಿ ಪ್ರಾದೇಶಿಕ ನ್ಯಾಯವ್ಯಾಪ್ತಿಯನ್ನು ನೀಡಲಾಗಿದೆ ಮತ್ತು ಇದರೊಂದಿಗೆ ಭಯೋತ್ಪಾದಕರಿಗೆ ಸಂಬಂಧಿಸಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಕ್ಕನ್ನು ಸಹ ಏಜೆನ್ಸಿಗೆ ನೀಡಲಾಗಿದೆ ಎಂದು ಅವರು ಹೇಳಿದರು. 2024ರ ವೇಳೆಗೆ ದೇಶದ ಎಲ್ಲಾ ರಾಜ್ಯಗಳಲ್ಲಿ ʻಎನ್‌ಐಎʼ ಶಾಖೆಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ಶ್ರೀ ಶಾ ಮಾಹಿತಿ ನೀಡಿದರು. ಇಂದು ಕೇಂದ್ರ ಮತ್ತು ರಾಜ್ಯಗಳ ನಡುವಿನ ಪರಸ್ಪರ ಸಹಕಾರ ಮತ್ತು ಸಮನ್ವಯದಿಂದಾಗಿ ದೇಶದಲ್ಲಿನ ಬಹುಪಾಲು ಭದ್ರತಾ ಕೇಂದ್ರಬಿಂದುಗಳು ದೇಶವಿರೋಧಿ ಚಟುವಟಿಕೆಗಳಿಂದ ಬಹುತೇಕ ಮುಕ್ತವಾಗಿವೆ ಎಂದು ಅವರು ಹೇಳಿದರು. ಮಾದಕವಸ್ತುಗಳ ವಿರುದ್ಧ ಭಾರತ ಸರಕಾರದ ಶೂನ್ಯ ಸಹಿಷ್ಣುತೆಯ ನೀತಿಯು ಉತ್ತಮ ಫಲಿತಾಂಶಗಳನ್ನು ನೀಡುತ್ತಿದೆ. ಕಳೆದ 8 ವರ್ಷಗಳಲ್ಲಿ, 3,000 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 20,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು.

ಸೈಬರ್ ಅಪರಾಧವು ಇಂದು ದೇಶ ಮತ್ತು ವಿಶ್ವದ ಮುಂದಿರುವ ಒಂದು ದೊಡ್ಡ ಅಪಾಯವಾಗಿದೆ. ಗೃಹ ವ್ಯವಹಾರಗಳ ಸಚಿವಾಲಯವು ಇದರ ವಿರುದ್ಧ ಹೋರಾಡಲು ಸಿದ್ಧವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಗೃಹ ವ್ಯವಹಾರಗಳ ಸಚಿವಾಲಯವು ʻಸಿಆರ್‌ಪಿಸಿʼ, ʻಐಪಿಸಿʼ ಮತ್ತು ʻಎಫ್‌ಸಿಆರ್‌ಎʼ ಸುಧಾರಣೆಗಳ ಬಗ್ಗೆ ನಿರಂತರವಾಗಿ ಕಾರ್ಯೋನ್ಮುಖವಾಗಿದೆ ಮತ್ತು ಶೀಘ್ರದಲ್ಲೇ ಅವರ ಪರಿಷ್ಕೃತ ನೀಲನಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಅವರು ಹೇಳಿದರು. ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ರಾಜ್ಯಗಳು ವಿಧಿವಿಜ್ಞಾನದ ಗರಿಷ್ಠ ಬಳಕೆಯನ್ನು ಮಾಡಬೇಕು ಮತ್ತು ಕೇಂದ್ರ ಸರಕಾರವು ʻರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯʼದ (ಎನ್‌ಎಫ್‌ಎಸ್‌ಯು) ಸ್ಥಾಪಿಸುವ ಮೂಲಕ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಿದೆ ಎಂದು ಶ್ರೀ ಶಾ ಹೇಳಿದರು. ಗಡಿ ಭದ್ರತೆ ಮತ್ತು ಕರಾವಳಿ ಭದ್ರತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕೇಂದ್ರದ ಏಜೆನ್ಸಿಗಳು ಮತ್ತು ಭದ್ರತಾ ಪಡೆಗಳೊಂದಿಗೆ ಗಡಿ ರಾಜ್ಯಗಳು ಹೆಚ್ಚು ಸಂಘಟಿತ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರವು ವಿಪತ್ತು ನಿರ್ವಹಣೆಯಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ ಸಚಿವರು, ಈ ಉಪಕ್ರಮಗಳ ಅನುಷ್ಠಾನವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುವಂತೆ ಎಲ್ಲಾ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ರಾಷ್ಟ್ರದ ಮುಂದಿರುವ ಸವಾಲುಗಳ ವಿರುದ್ಧ ಹೋರಾಡಲು ಲಭ್ಯವಿರುವ ಆಂತರಿಕ ಭದ್ರತೆಯ ಎಲ್ಲಾ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವರು ಒತ್ತಿ ಹೇಳಿದರು. ಇದಕ್ಕಾಗಿ ಸಂಪನ್ಮೂಲ ಸದ್ಬಳಕೆ, ಸಂಪನ್ಮೂಲಗಳ ತರ್ಕಬದ್ಧ ಬಳಕೆ ಮತ್ತು ಸಂಪನ್ಮೂಲಗಳ ಕ್ರೋಢೀಕರಣ ಆಬೇಕು. ಇದು ರಾಜ್ಯಗಳ ನಡುವಿನ ಸಮನ್ವಯವನ್ನು ಮತ್ತಷ್ಟು ಸುಧಾರಿಸುತ್ತದೆ ಎಂದು ಅವರು ಸಲಹೆ ನೀಡಿದರು. ಸರಕಾರವು ʻಒಂದು ದತ್ತಾಂಶ, ಒಂದು ಪ್ರವೇಶʼ (ಒನ್‌ ಡೇಟಾ, ಒನ್‌ ಎಂಟ್ರಿ) ತತ್ವದ ಮೇಲೆ ಕೆಲಸ ಮಾಡುತ್ತಿದೆ ಮತ್ತು ಇದರ ಅಡಿಯಲ್ಲಿ, ʻಎನ್ಐಎʼಗೆ ಭಯೋತ್ಪಾದಕ ಪ್ರಕರಣಗಳಿಗೆ ಸಂಬಂಧಿಸಿದ ರಾಷ್ಟ್ರೀಯ ದತ್ತಾಂಶವನ್ನು ಒದಗಿಸಲಾಗಿದೆ. ಮಾದಕವಸ್ತು ಪ್ರಕರಣಗಳಿಗೆ ಸಂಬಂಧಿಸಿದ ರಾಷ್ಟ್ರೀಯ ದತ್ತಾಂಶವನ್ನು ʻ ಎನ್‌ಸಿಬಿʼ ಹೊಂದಿದೆ, ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ದತ್ತಾಂಶವನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಹೊಂದಿದೆ. ʻಎನ್‌ಸಿಆರ್‌ಬಿʼಗೆ ಬೆರಳಮುದ್ರೆ ದತ್ತಾಂಶ ರಚಿಸುವ ಜವಾಬ್ದಾರಿಯನ್ನು ನೀಡಲಾಗಿದೆ - ʻಎನ್ಎಎಫ್ಐಎಸ್ʼ ಮತ್ತು ʻನ್ಯಾಷನಲ್ ಡೇಟಾಬೇಸ್ ಆಫ್ ಸೆಕ್ಸ್ ಅಫೆಂಡರ್ಸ್ʼ (ಎನ್‌ಡಿಎಸ್ಒ) ಅನ್ನು ರಚಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಶ್ರೀ ಅಮಿತ್‌ ಶಾ ಅವರು ಮಾಹಿತಿ ನೀಡಿದರು. ನಿಯಂತ್ರಕ ಸುಧಾರಣೆಗಳ ಅಡಿಯಲ್ಲಿ, ʻಐ4ಸಿʼ ಅಂದರೆ ʻಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರʼವನ್ನು ರಚಿಸಲಾಗಿದೆ. ಸೈಬರ್ ಅಪರಾಧ ಪೋರ್ಟಲ್ ಅನ್ನು ರಚಿಸಲಾಗಿದೆ, ʻನ್ಯಾಟ್‌ಗ್ರಿಡ್ʼ ಅನ್ನು ಸಂಪರ್ಕಿಸುವ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ, ಖಾಸಗಿ ಭದ್ರತಾ ಏಜೆನ್ಸಿಗಳ ಪರವಾನಗಿಗೆ ಪೋರ್ಟಲ್ ಅನ್ನು ರಚಿಸಲಾಗಿದೆ ಮತ್ತು ʻಎಫ್‌ಸಿಆರ್‌ಎʼದಲ್ಲಿ ಸುಧಾರಣೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.  ʻಎಫ್‌ಸಿಆರ್‌ಎʼ ಸುಧಾರಣಾ ಕ್ರಮಗಳ ಅಡಿಯಲ್ಲಿ ದೇಶವಿರೋಧಿ ಚಟುವಟಿಕೆಗಳು, ಮತಾಂತರ, ಅಭಿವೃದ್ಧಿ ಯೋಜನೆಗಳಿಗೆ ರಾಜಕೀಯ ವಿರೋಧ ಅಥವಾ ಸರಕಾರದ ನೀತಿಗಳ ವಿರುದ್ಧ ಪ್ರಚಾರದಲ್ಲಿ ತೊಡಗಿರುವ ಕೆಲವು ಸಂಸ್ಥೆಗಳ ವಿರುದ್ಧ ಕ್ರಮವನ್ನು ಪ್ರಾರಂಭಿಸಲಾಗಿದೆ. ಜೊತೆಗೆ, ವಿದೇಶಿ ನಿಧಿಯ ದುರುಪಯೋಗವನ್ನು ತಡೆಗಟ್ಟಲು 2020ರಲ್ಲಿ ಮಾಡಲಾದ ತಿದ್ದುಪಡಿಯ ಅಡಿಯಲ್ಲಿ, ಪರಿಣಾಮಕಾರಿ ಮೇಲ್ವಿಚಾರಣೆ ಸಾಧ್ಯವಾಗಿದೆ ಎಂದು ಶ್ರೀ ಶಾ ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರವು ಮೂರು ಪ್ರಮುಖ ಸವಾಲುಗಳ ಮೇಲೆ ಕಾಲಮಿತಿಯ ಕಾರ್ಯತಂತ್ರದ ಅಡಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮೊದಲನೆಯದಾಗಿ, ಆರೋಗ್ಯ ಸೇವೆಗಳಿಗೆ ಸಂಪೂರ್ಣ ಯೋಜನೆ. ಇದರ ಅಡಿಯಲ್ಲಿ ʻಆಯುಷ್ಮಾನ್ ಸಿಎಪಿಎಫ್ʼ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಸುಮಾರು 35 ಲಕ್ಷ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿದೆ ಹಾಗೂ ಸುಮಾರು 20 ಕೋಟಿ ರೂ.ಗಳನ್ನು ನೀಡಲಾಗಿದೆ. ಎರಡನೆಯದಾಗಿ, ವಸತಿ ಕುರಿತ ತೃಪ್ತಿಯ ಅನುಪಾತವನ್ನು ಹೆಚ್ಚಿಸುವುದು. 2014ರಲ್ಲಿ ವಸತಿ ತೃಪ್ತಿಯ ಮಟ್ಟವು ಸುಮಾರು 37 ಪ್ರತಿಶತದಷ್ಟಿತ್ತು, ಇದು ಪ್ರಸ್ತುತ ಶೇಕಡಾ 48ಕ್ಕೆ ಏರಿದೆ. ಇದಲ್ಲದೆ, ʻಸಿಎಪಿಎಫ್‌ʼನಿಂದ ʻಇ-ಆವಾಸ್ ವೆಬ್ ಪೋರ್ಟಲ್ʼ ರಚನೆಯೊಂದಿಗೆ, ಈ ಮಟ್ಟವನ್ನು ಶೇಕಡಾ 60ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಮೂರನೆಯದಾಗಿ, ಪೊಲೀಸ್‌ ವ್ಯವಸ್ಥೆ ಸುಧಾರಣೆ. ಇದರ ಅಡಿಯಲ್ಲಿ100 ದಿನಗಳ ರಜೆ, ನಿವೃತ್ತಿ ವಯಸ್ಸನ್ನು 57 ರಿಂದ 60 ವರ್ಷಗಳಿಗೆ ಹೆಚ್ಚಿಸುವುದು ಮತ್ತು 64,640 ಅಭ್ಯರ್ಥಿಗಳ ನೇಮಕಾತಿ ಸೇರಿವೆ ಎಂದರು. ನಾವು ಪೊಲೀಸ್ ವ್ಯವಸ್ಥೆಯಲ್ಲಿ ಪ್ರಾದೇಶಿಕ ದೃಷ್ಟಿಕೋನದಿಂದ ವಿಷಯಾಧಾರಿತ ವಿಧಾನದ ಕಡೆಗೆ ಸಾಗಬೇಕಾಗಿದೆ ಎಂದು ಅಮಿತ್‌ ಶಾ ಅವರು ಅಭಿಪ್ರಾಯಪಟ್ಟರು.

ರಾಷ್ಟ್ರದ ಅಭಿವೃದ್ಧಿ, ಸ್ಥಿರತೆ ಮತ್ತು ಉತ್ತಮ ಆಡಳಿತಕ್ಕೆ ಆಂತರಿಕ ಭದ್ರತೆ ಬಹಳ ಮುಖ್ಯ. ಇದು ನಮ್ಮೆಲ್ಲರ ಸಮಾನ ಜವಾಬ್ದಾರಿಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ರಾಷ್ಟ್ರ ನಿರ್ಮಾಣದಲ್ಲಿ ಕೇಂದ್ರ ಮತ್ತು ರಾಜ್ಯಗಳು ಸಮಾನ ಜವಾಬ್ದಾರಿಯನ್ನು ಹೊಂದಿವೆ ಎಂದು ಅವರು ಹೇಳಿದರು. ಎಲ್ಲಾ ಏಜೆನ್ಸಿಗಳ ನಡುವೆ ನಿಕಟ ಸಹಕಾರ ಇದ್ದಾಗ ಮಾತ್ರ ದೇಶವು ಪ್ರಗತಿ ಸಾಧಿಸಲು ಸಾಧ್ಯ. ʻಅಮೃತ ಕಾಲʼದ ಅವಧಿಯಲ್ಲಿ ʻಸಹಕಾರಿ ಒಕ್ಕೂಟ ವ್ಯವಸ್ಥೆʼಯ ಮನೋಭಾವವು ನಮ್ಮ ಪ್ರೇರಕ ಶಕ್ತಿಯಾಗಿರಬೇಕು ಎಂದು ಹೇಳಿದ ಶ್ರೀ ಅಮಿತ್‌ ಶಾ ಅವರು, ಈ ʻಚಿಂತನ ಶಿಬಿರʼವು ಪ್ರಾದೇಶಿಕ ಸಹಕಾರವನ್ನು ಮತ್ತಷ್ಟು ವಿಸ್ತರಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

*****(Release ID: 1871508) Visitor Counter : 204