ಪ್ರಧಾನ ಮಂತ್ರಿಯವರ ಕಛೇರಿ
ಕಾರ್ಗಿಲ್ ಯೋಧರೊಂದಿಗೆ ದೀಪಾವಳಿ ಆಚರಣೆ ಸಂಭ್ರಮ – ಸಂವಾದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರಿಂದ ಭಾಷಣ
Posted On:
24 OCT 2022 2:23PM by PIB Bengaluru
ಭಾರತ್ ಮಾತಾ ಕೀ ಜೈ
ಭಾರತ್ ಮಾತಾ ಕೀ ಜೈ
ಅಪ್ರತಿಮ ಶೌರ್ಯ ಮತ್ತು ಕೆಚ್ಚೆದೆಯ ಸಾಹಸಕ್ಕೆ ಹೆಸರುವಾಸಿಯಾದ ಈ ಕಾರ್ಗಿಲ್ ಪುಣ್ಯ ಭೂಮಿಗೆ ನಮಸ್ಕರಿಸುವ ಮನದಾಳದ ಬಯಕೆಯು ನನ್ನನ್ನು ನಮ್ಮ ವೀರ ಪುತ್ರರು ಮತ್ತು ಪುತ್ರಿಯರ ಕಡೆಗೆ ಮತ್ತೆ ಮತ್ತೆ ಸೆಳೆಯುತ್ತಿದೆ. ನೀವೆಲ್ಲರೂ ನನಗೆ ಶಾಶ್ವತವಾದ ಕುಟುಂಬವಿದ್ದಂತೆ. ನಿಮ್ಮೆಲ್ಲರ ನಡುವೆ ಆಚರಿಸುವ ದೀಪಾವಳಿ ಹಬ್ಬವು ಸದಾ ಸಿಹಿಯಾಗಿರುತ್ತದೆ, ಸಂತಸ ಮೂಡಿಸುತ್ತದೆ, ಆನಂದ ತರುತ್ತದೆ. ನನ್ನ ದೀಪಾವಳಿಯ ಪ್ರಜ್ವಲ ಬೆಳಕು ಇಲ್ಲೇ ಹುಟ್ಟುತ್ತದೆ, ಇದು ಮುಂದಿನ ದೀಪಾವಳಿಯವರೆಗೆ ನನಗೆ ದಿಟ್ಟ ಮಾರ್ಗದರ್ಶನ ನೀಡುತ್ತದೆ. ನನಗೆ ದೀಪಾವಳಿಯ ಸಂತೋಷ, ಆನಂದ ಮತ್ತು ಉತ್ಸಾಹವು ನಿಮ್ಮೊಂದಿಗೆ ಇರುತ್ತದೆ. ಗಡಿಯಲ್ಲಿ ನಿಮ್ಮೊಂದಿಗೆ ದೀಪಾವಳಿ ಹಬ್ಬ ಆಚರಿಸಲು ನನಗೆ ಅವಕಾಶ ಸಿಗುತ್ತಿರುವುದು ನನ್ನ ಪಾಲಿನ ಅದೃಷ್ಟ. ಒಂದೆಡೆ ದೇಶದ ಈ ಸಾರ್ವಭೌಮ ಗಡಿ, ಮತ್ತೊಂದೆಡೆ ಅದಕ್ಕೆ ಸಮರ್ಪಿತವಾಗಿರುವ ಸೈನಿಕರು! ಒಂದೆಡೆ ಮಾತೃಭೂಮಿಯ ಸುಂದರ ಮಣ್ಣು ನಮ್ಮಲ್ಲಿದ್ದರೆ, ಮತ್ತೊಂದೆಡೆ ಈ ಮಣ್ಣನ್ನು ಶ್ರೀಗಂಧದ ‘ತಿಲಕ’ ಎಂದು ಹಣೆಗೆ ಹಚ್ಚಿಕೊಳ್ಳುವ ನನ್ನ ಧೀರ ಯುವ ಗೆಳೆಯರು ನಮ್ಮಲ್ಲಿದ್ದಾರೆ! ನನ್ನ ವೀರ ಸೈನಿಕರೇ! ವಾಸ್ತವ ಹೀಗಿರುವಾಗ ನನ್ನ ದೀಪಾವಳಿಯನ್ನು ನಾನು ಬೇರೆಲ್ಲಿ ಉತ್ತಮವಾಗಿ ಆಚರಿಸಬಹುದಿತ್ತು ಹೇಳಿ? ದೀಪಾವಳಿಯಂದು ನಮ್ಮಂತಹ ನಾಗರಿಕರ ಪಟಾಕಿಗಳು ಮತ್ತು ನಿಮ್ಮ ಪಟಾಕಿಗಳು ಬಿರುಸು ಬಾಣಗಳು ಸಂಪೂರ್ಣ ವಿಭಿನ್ನವಾಗಿವೆ. ಇವೆರಡನ್ನು ಎಂದಿಗೂ ಹೋಲಿಸಲು ಸಾಧ್ಯವೇ ಇಲ್ಲ!
ಸ್ನೇಹಿತರೆ,
ಅಪ್ರತಿಮ ಶೌರ್ಯ ಸಾಹಸದ ಜೊತೆಗೆ, ನಮ್ಮ ಸಂಪ್ರದಾಯವು ಮಾಧುರ್ಯಕ್ಕೂ ಹೆಸರುವಾಸಿಯಾಗಿದೆ. ಆದ್ದರಿಂದ ಭಾರತವು ತನ್ನೆಲ್ಲಾ ಹಬ್ಬಗಳನ್ನು ಪ್ರೀತಿಯಿಂದ, ಭಕ್ತಿ ಭಾವದಿಂದ ಆಚರಿಸುತ್ತದೆ. ಭಾರತವು ಇಡೀ ವಿಶ್ವದೊಂದಿಗೆ ಬೆಳಕಿನ ಹಬ್ಬ ಆಚರಿಸುತ್ತದೆ. ಇಂದು ದೀಪಾವಳಿಯಂದು, ನಾನು ಎಲ್ಲಾ ದೇಶವಾಸಿಗಳಿಗೆ ಮತ್ತು ಇಡೀ ವಿಶ್ವದ ಜನತೆಗೆ ಈ ವಿಜಯದ ಭೂಮಿಯಿಂದ ಅಂದರೆ ಕಾರ್ಗಿಲ್‌ನಿಂದ, ಎಲ್ಲಾ ಸೈನಿಕರ ನಡುವೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಹೇಳುತ್ತೇನೆ. ಕಾರ್ಗಿಲ್ ನಲ್ಲಿ ಭಆರತ ವಿಜಯ ಪತಾಕೆ ಹಾರಿಸದ ಒಂದೇ ಒಂದು ಯುದ್ಧ ಪಾಕಿಸ್ತಾನದ ವಿರುದ್ಧ ನಡೆದಿಲ್ಲ. ಇಂದಿನ ಜಾಗತಿಕ ಸನ್ನಿವೇಶದಲ್ಲಿ ಈ ಬೆಳಕಿನ ಹಬ್ಬ ಇಡೀ ಜಗತ್ತಿಗೆ ಶಾಂತಿಯ ಹಾದಿ ತೋರಿಸಬೇಕು. ಭಾರತ ಬಯಸುವುದೂ ಅದನ್ನೇ.
ಸ್ನೇಹಿತರೆ,
ದೀಪಾವಳಿ ಎಂದರೆ ಭಯೋತ್ಪಾದನೆ ಅಥವಾ ಹಿಂಸೆ ಅಥವಾ ಉಗ್ರತ್ವ ಅಥವಾ ದುಷ್ಟಶಕ್ತಿಗಳನ್ನು ಸೋಲಿಸಿದ ನಂತರ ಮಾಡುವ ಆಚರಣೆಯಾಗಿದೆ! ಇದು ದುಷ್ಟತನಕ್ಕೆ ಅಂತ್ಯ ಹಾಡುವ ಆಚರಣೆಯಾಗಿದೆ! ಕಾರ್ಗಿಲ್ ಯುದ್ಧವೂ ಅದನ್ನೇ ಮಾಡಿತು. ಕಾರ್ಗಿಲ್‌ನಲ್ಲಿ ನಮ್ಮ ಸೈನ್ಯವು ಭಯೋತ್ಪಾದನೆಯನ್ನು ಹತ್ತಿಕ್ಕಿತು. ವಿಜಯದಂದು ದೇಶವು ದೀಪಾವಳಿಯನ್ನು ಆಚರಿಸಿದ ರೀತಿಯನ್ನು ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಆ ವಿಜಯಕ್ಕೆ ಸಾಕ್ಷಿಯಾಗುವ ಭಾಗ್ಯ ನನಗೂ ಇತ್ತು, ಆ ಯುದ್ಧವನ್ನೂ ಹತ್ತಿರದಿಂದ ನೋಡಿದ್ದೆ. ನಾನು ನಮ್ಮ ಅಧಿಕಾರಿಗಳಿಗೆ ಕೃತಜ್ಞನಾಗಿದ್ದೇನೆ. ಏಕೆಂದರೆ ನಾನು ಇಲ್ಲಿಗೆ ಬಂದ ತಕ್ಷಣ ನನಗೆ ಹಲವಾರು ವರ್ಷಗಳ ಹಳೆಯ ಚಿತ್ರಗಳನ್ನು ತೋರಿಸಿದರು. ಅದು ನಾನು ನಮ್ಮ ಯೋಧರೊಂದಿಗೆ ಸಮಯ ಕಳೆದಿರುವ ಅವಿಸ್ಮರಣೀಯ ಚಿತ್ರಗಳು. ಆ ಛಾಯಾಚಿತ್ರಗಳನ್ನು ನೋಡುತ್ತಿದ್ದಾಗ ನನ್ನ ಮನವನ್ನು ಭಾವನೆಗಳು ಆವರಿಸಿಕೊಂಡವು. ಕೆಚ್ಚೆದೆಯ ಯೋಧರ ನಡುವೆ ಕಳೆದ ನನ್ನ ಕ್ಷಣಗಳನ್ನು ಮತ್ತೊಮ್ಮೆ ನೆನಪಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ತುಂಬಾ ಕೃತಜ್ಞನಾಗಿದ್ದೇನೆ; ನಾನು ನಿಮಗೆ ನಿಜವಾಗಿಯೂ ತುಂಬಾ ಕೃತಜ್ಞನಾಗಿದ್ದೇನೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ನಮ್ಮ ಯೋಧರು ಶತ್ರುಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾಗ ಅವರ ಮಧ್ಯೆ ಇರುವ ಸೌಭಾಗ್ಯ ನನ್ನದಾಗಿತ್ತು. ದೇಶದ ಸಾಮಾನ್ಯ ಪ್ರಜೆಯಾಗಿ ನನ್ನ ಕರ್ತವ್ಯವೇ ನನ್ನನ್ನು ರಣರಂಗಕ್ಕೆ ಕರೆತಂದಿತ್ತು. ದೇಶವು ತನ್ನ ಸೈನಿಕರಿಗೆ ರವಾನಿಸಿದ ಪರಿಹಾರ ಸಾಮಗ್ರಿಗಳನ್ನು ನಾವು ತಂದಿದ್ದೇವೆ. ಇದು ನಮ್ಮೆಲ್ಲರ ಪುಣ್ಯದ ಕಾರ್ಯವಾಗಿತ್ತು. ಜನರು ದೇವರಿಗೆ ತಮ್ಮ ಭಕ್ತಿ ತೋರಿಸುತ್ತಾರೆ. ಆದರೆ ದೇಶಪ್ರೇಮದ ಬಣ್ಣ ಬಳಿದಿದ್ದ ನಿಮ್ಮಂತಹ ಸೈನಿಕರನ್ನು ಪೂಜಿಸಲು ಅದು ನನ್ನ ಅವಕಾಶವಾಗಿತ್ತು. ಆ ಸಮಯದಿಂದ ನನಗೆ ಬಹಳಷ್ಟು ನೆನಪುಗಳಿವೆ, ಅದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾಲ್ಕೂ ದಿಕ್ಕಿನಲ್ಲೂ ವಿಜಯದ ಘೋಷ ಮೊಳಗುತ್ತಿರುವಂತೆ ಭಾಸವಾಯಿತು. ಒಂದೇ ಒಂದು ಕೂಗು ಇತ್ತು - 'ಮನ ಸಮರ್ಪಿತ, ತನ ಸಮರ್ಪಿತ. ಮತ್ತು ಯಹ ಜೀವನ ಸಮರ್ಪಿತ. ಚಾಹತಾ ಹೂಂ ದೇಶ ಕಿ ಧರತಿ ತುಜೆ ಕುಛ ಮತ್ತು ಭೀ ದೂಂ! (‘ಸಮರ್ಪಿತ ಮನಸ್ಸು, ಸಮರ್ಪಿತ ದೇಹ ಮತ್ತು ಸಮರ್ಪಿತ ಜೀವನ. ನಾನು ತಾಯ್ನಾಡಿಗೆ ಇನ್ನೂ ಹೆಚ್ಚಿನದನ್ನು ನೀಡಲು ಬಯಸುತ್ತೇನೆ’!)
ಸ್ನೇಹಿತರೆ,
ನಾವು ಆರಾಧಿಸುವ ರಾಷ್ಟ್ರ ಅಂದರೆ ನಮ್ಮ ಭಾರತ, ಇದು ಕೇವಲ ಭೌಗೋಳಿಕ ಭೂಮಿ ಅಲ್ಲ. ನಮ್ಮ ಭಾರತವು ಜೀವಂತ ಅಸ್ತಿತ್ವವಾಗಿದೆ. ಶಾಶ್ವತ ಅಸ್ತಿತ್ವ ಹೊಂದಿರುವ ಶಾಶ್ವತ ಪ್ರಜ್ಞೆಯಾಗಿದೆ. ಭಾರತ ಎಂದು ಹೇಳಿದಾಗ ಸನಾತನ ಸಂಸ್ಕೃತಿಯ ಚಿತ್ರಣ ನಮ್ಮ ಮುಂದೆ ಮೂಡುತ್ತದೆ; ಶೌರ್ಯದ ಪರಂಪರೆ ನಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ; ಪ್ರಬಲ ಶಕ್ತಿಯ ಸಂಪ್ರದಾಯವು ನಮ್ಮ ಮುಂದೆ ಹೊಳೆಯುತ್ತದೆ. ಇದು ಅಂತಹ ತಡೆಯಲಾಗದ ಚೈತನ್ಯ ಮತ್ತು ಸ್ಫೂರ್ತಿ ಪ್ರವಾಹವಾಗಿದೆ, ಇದು ಒಂದು ಬದಿಯಲ್ಲಿ ಪ್ರಬಲವಾದ ಹಿಮಾಲಯದಿಂದ ಹುಟ್ಟುತ್ತದೆ ಮತ್ತು ಇನ್ನೊಂದು ಬದಿಯಲ್ಲಿ ಹಿಂದೂ ಮಹಾಸಾಗರದಲ್ಲಿ ವಿಲೀನಗೊಳ್ಳುತ್ತದೆ. ಹಿಂದೆ, ಅನಂತ ಚಂಡಮಾರುತಗಳು ಅಪ್ಪಳಿಸಿದವು, ಅದು ಪ್ರಪಂಚದ ಪ್ರವರ್ಧಮಾನಕ್ಕೆ ಬರುತ್ತಿರುವ ನಾಗರಿಕತೆಗಳನ್ನು ಕಬಳಿಸಿತ್ತು, ಅದು ಅಂತಿಮವಾಗಿ ಕಳೆದುಹೋಯಿತು. ಆದರೆ ಭಾರತದ ಅಸ್ತಿತ್ವದ ಈ ಸಾಂಸ್ಕೃತಿಕ ಧಾರೆ ಇನ್ನೂ ಅಖಂಡ ಮತ್ತು ಶಾಶ್ವತ. ನನ್ನ ಪ್ರೀತಿಯ ಸೈನಿಕರೇ, ಒಂದು ರಾಷ್ಟ್ರ ಯಾವಾಗ ಅಮರವಾಗುತ್ತದೆ? ಅದರ ಮಕ್ಕಳು ಮತ್ತು ಅದರ ಧೈರ್ಯಶಾಲಿ ಪುತ್ರರು ಮತ್ತು ಪುತ್ರಿಯರು ತಮ್ಮ ಶಕ್ತಿ ಮತ್ತು ಸಂಪನ್ಮೂಲಗಳಲ್ಲಿ ಸಂಪೂರ್ಣ ನಂಬಿಕೆ, ಆತ್ಮವಿಶ್ವಾಸ ಹೊಂದಿರುವಾಗ ರಾಷ್ಟ್ರವು ಅಮರವಾಗುತ್ತದೆ. ಸೈನಿಕರ ತಲೆಗಳು ಹಿಮಾಲಯದ ಪ್ರಬಲ ಶಿಖರಗಳಂತೆ ಎತ್ತರದಲ್ಲಿದ್ದಾಗ ರಾಷ್ಟ್ರವು ಅಮರವಾಗಿರುತ್ತದೆ. ಚಲನ್ತು ಗಿರಯಃ ಕಾಮಂ ಯುಗಾಂತ ಪವನಹತಾಃ ಎಂದು ತನ್ನ ಸಂತತಿಯ ಬಗ್ಗೆ ಹೇಳಿದಾಗ ರಾಷ್ಟ್ರವು ಅಮರವಾಗುತ್ತದೆ. ಕೃಚ್ಛೇರಪಿ ನ ಚಲತ್ಯೇವ ಧೀರಾಣಾಂ ನಿಶ್ಚಲಂ ಮನಃ॥ ಅಂದರೆ ಪ್ರಳಯ ಕಾಲದ ಬಿರುಗಾಳಿಯಿಂದ ಮಹಾಪರ್ವತಗಳು ಬುಡಮೇಲಾಗಿರಬಹುದು, ಆದರೆ ನಿಮ್ಮಂತಹ ವೀರರ ಮನಸ್ಸು ಸದೃಢವೂ, ಅಚಲವೂ, ಅಮರವೂ ಆಗಿದೆ. ಆದ್ದರಿಂದ, ನಿಮ್ಮ ಶಕ್ತಿಯುತ ತೋಳುಗಳು ಹಿಮಾಲಯದ ದುಸ್ತರದ ಎತ್ತರಕ್ಕೆ ಸವಾಲು ಹಾಕುತ್ತವೆ; ನಿಮ್ಮ ಸದ್ಗುಣಶೀಲ ಮನಸ್ಸು ಮರುಭೂಮಿಯ ಸವಾಲುಗಳನ್ನು ಯಶಸ್ಸಿನೊಂದಿಗೆ ಎದುರಿಸುತ್ತದೆ. ಅನಂತ ಆಕಾಶ ಮತ್ತು ಅಮಿತ ಸಮುದ್ರವು ನಿಮ್ಮ ಅನಂತ ಶೌರ್ಯದ ಮುಂದೆ ಮಂಡಿಯೂರುತ್ತವೆ. ಭಾರತೀಯ ಸೇನೆಯ ಅಪ್ರತಿಮ ಶೌರ್ಯಕ್ಕೆ ಕಾರ್ಗಿಲ್ ಯುದ್ಧಭೂಮಿ ಪ್ರಬಲ ಸಾಕ್ಷಿಯಾಗಿದೆ. ಭಾರತೀಯ ಸೇನೆಯ ಧೈರ್ಯ ಮತ್ತು ಪರಾಕ್ರಮದ ಮುಂದೆ ಪರ್ವತಗಳ ಶಿಖರಗಳಲ್ಲಿಯೂ ಶತ್ರು ಸಣ್ಣದಾಗಿ ಕಾಣುತ್ತಾನೆ ಎಂಬುದಕ್ಕೆ ದ್ರಾಸ್, ಬಟಾಲಿಕ್ ಮತ್ತು ಟೈಗರ್ ಹಿಲ್ ಸಾಕ್ಷಿಯಾಗಿದೆ. ಅಪರಿಮಿತ ಪರಾಕ್ರಮದ ಸೈನಿಕರನ್ನು ಹೊಂದಿರುವ ದೇಶ, ಅದರ ಅಸ್ತಿತ್ವವು ಶಾಶ್ವತ, ಅಮರ ಮತ್ತು ಅಚಲವಾಗುತ್ತದೆ.
ಸ್ನೇಹಿತರು,
ನೀವೆಲ್ಲರೂ ನಮ್ಮ ಗಡಿಯನ್ನು ಕಾಪಾಡುತ್ತಿದ್ದೀರಿ ಮತ್ತು ದೇಶದ ರಕ್ಷಣೆಯ ಬಲವಾದ ಸ್ತಂಭಗಳು. ನಿಮ್ಮಿಂದಾಗಿ ದೇಶವಾಸಿಗಳು ದೇಶದೊಳಗೆ ಶಾಂತಿಯುತವಾಗಿ ಬದುಕಲು ಮತ್ತು ನಿರಾಳವಾಗಿರಲು ಸಾಧ್ಯವಾಗಿದೆ. ಆದರೆ ದೇಶದ ರಕ್ಷಣಾತ್ಮಕ ಗುರಾಣಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸಲು ಪ್ರತಿಯೊಬ್ಬ ಭಾರತೀಯನೂ ಅತ್ಯುತ್ತಮವಾಗಿ ಪ್ರಯತ್ನಿಸುತ್ತಿರುವುದು ನಿಜಕ್ಕೂ ಅದ್ಭುತವಾಗಿದೆ. ಗಡಿ ಸುಭದ್ರವಾಗಿ, ಆರ್ಥಿಕತೆ ಸದೃಢವಾಗಿ ಸಮಾಜದಲ್ಲಿ ಆತ್ಮವಿಶ್ವಾಸ ತುಂಬಿದಾಗ ಮಾತ್ರ ದೇಶ ಸುರಕ್ಷಿತ. ಇಂದು ಗಡಿಯಲ್ಲಿ ದೇಶದ ಬಲದ ಬಗ್ಗೆ ಸುದ್ದಿ ಕೇಳಿದಾಗ ನಿಮ್ಮ ಧೈರ್ಯ ಇಮ್ಮಡಿಯಾಗುತ್ತದೆ. ದೇಶದ ಜನರು ಸ್ವಚ್ಛತೆಯ ಧ್ಯೇಯಕ್ಕೆ ಕೈಜೋಡಿಸಿದಾಗ ಬಡವರಲ್ಲಿ ಬಡವರು ತಮ್ಮ ಪಕ್ಕಾ ಮನೆಗಳು, ಕುಡಿಯುವ ನೀರು, ವಿದ್ಯುತ್ ಮತ್ತು ಅನಿಲ ಸೌಲಭ್ಯಗಳನ್ನು ದಾಖಲೆ ಸಮಯದಲ್ಲಿ ಪಡೆದಾಗ, ಪ್ರತಿಯೊಬ್ಬ ಜವಾನನೂ ಹೆಮ್ಮೆ ಪಡುತ್ತಾನೆ. ಗಡಿಯಲ್ಲಿರುವಾಗ ಈ ಸೌಲಭ್ಯಗಳು ತನ್ನ ಮನೆ, ಗ್ರಾಮ ಅಥವಾ ನಗರವನ್ನು ತಲುಪುತ್ತಿವೆ ಎಂದು ತಿಳಿದಾಗ ಅವನು ಹೆಮ್ಮೆಪಡುತ್ತಾನೆ. ಸಂಪರ್ಕವು ಉತ್ತಮಗೊಳ್ಳುತ್ತಿದೆ ಮತ್ತು ಮನೆಗೆ ಕರೆ ಮಾಡಲು ಮತ್ತು ರಜೆಯ ಮೇಲೆ ಮನೆಗೆ ತಲುಪಲು ಅವನಿಗೆ ಸುಲಭವಾಗಿದೆ ಎಂದು ಅವನು ನೋಡಿದಾಗ ಅವನು ಸಂತೋಷಪಡುತ್ತಾನೆ.
ಸ್ನೇಹಿತರೆ,
ನನಗೆ ಗೊತ್ತು, ಕಳೆದ 7-8 ವರ್ಷಗಳಲ್ಲಿ ದೇಶದ ಆರ್ಥಿಕತೆಯು 10 ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಪುಟಿದೆದ್ದಾಗ, ನೀವು ಸಹ ನಿಜವಾಗಿಯೂ ಹೆಮ್ಮೆಪಡುತ್ತೀರಿ. ಒಂದು ಕಡೆ ನಿಮ್ಮಂತಹ ಯುವಕರು ಗಡಿ ನೋಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ನಿಮ್ಮ ಯುವ ಸ್ನೇಹಿತರು 80 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್‌ಗಳನ್ನು ಕಟ್ಟಿದ್ದಾರೆ. ಅವರು ಸಂಶೋಧನೆ ನಡೆಸಿ ಹೊಸತನ ಹುಡುಕುತ್ತಿರುವುದನ್ನು ನೋಡಿ ನೀವು ಸಹ ಉತ್ಸುಕರಾಗುತ್ತೀರಿ. 2 ದಿನಗಳ ಹಿಂದೆಯಷ್ಟೇ ಇಸ್ರೋ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ವಿಸ್ತರಣೆಗಾಗಿ 36 ಉಪಗ್ರಹಗಳನ್ನು ಒಟ್ಟಿಗೆ ಉಡಾವಣೆ ಮಾಡುವ ಮೂಲಕ ಭಾರತ ಹೊಸ ದಾಖಲೆ ನಿರ್ಮಿಸಿದೆ. ಭಾರತವು ಬಾಹ್ಯಾಕಾಶದಲ್ಲಿ ಅಂತಹ ಯಶಸ್ಸು ಸಾಧಿಸಿದಾಗ, ಖಂಡಿತವಾಗಿಯೂ ನಮ್ಮ ವೀರ ಸೈನಿಕರು ಹೆಮ್ಮೆಪಡುತ್ತಾರೆ. ಕೆಲವು ತಿಂಗಳ ಹಿಂದೆ ಉಕ್ರೇನ್‌ನಲ್ಲಿ ಯುದ್ಧ ಸಂಭವಿಸಿದಾಗ, ನಮ್ಮ ಪ್ರೀತಿಯ ತ್ರಿವರ್ಣ ಧ್ವಜವು ಅಲ್ಲಿ ಸಿಕ್ಕಿಬಿದ್ದ ಭಾರತೀಯರಿಗೆ ಹೇಗೆ ರಕ್ಷಣಾತ್ಮಕ ಗುರಾಣಿಯಾಯಿತು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಇಂದು ವಿಶ್ವದಲ್ಲಿ ಭಾರತದ ವೈಭವ ಮತ್ತು ಪಾತ್ರ ಹೆಚ್ಚುತ್ತಿದೆ ಮತ್ತು ಪ್ರತಿಯೊಬ್ಬರೂ ನೋಡುವಂತಾಗಿದೆ.
ಸ್ನೇಹಿತರೆ,
ಇಂದು ಭಾರತವು ತನ್ನ ಬಾಹ್ಯ ಮತ್ತು ಆಂತರಿಕ ಶತ್ರುಗಳ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತಿರುವುದರಿಂದ ಇವೆಲ್ಲಾ ಸಾಧ್ಯವಾಗಿದೆ. ಒಂದೆಡೆ ಗಡಿಯಲ್ಲಿ ಯೋಧರು ಗುರಾಣಿಯಾಗಿ ನಿಂತಿದ್ದರೆ, ಮತ್ತೊಂದೆಡೆ ದೇಶದೊಳಗಿನ ಶತ್ರುಗಳ ವಿರುದ್ಧವೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಕಳೆದ ಕೆಲವು ದಶಕಗಳಲ್ಲಿ ಹುಟ್ಟಿಕೊಂಡ ಭಯೋತ್ಪಾದನೆ, ನಕ್ಸಲೀಯ ಚಟುವಟಿಕೆ ಮತ್ತು ಉಗ್ರವಾದವನ್ನು ಬೇರು ಸಮೇತ ಕಿತ್ತು ಹಾಕಲು ದೇಶ ನಿರಂತರವಾಗಿ ಯಶಸ್ವಿ ಪ್ರಯತ್ನ ನಡೆಸುತ್ತಿದೆ. ನಕ್ಸಲ್ ಒಂದು ಕಾಲದಲ್ಲಿ ದೇಶದ ಬಹು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಆದರೆ ಇಂದು ಅದು ನಿರಂತರವಾಗಿ ಕುಗ್ಗುತ್ತಿದೆ. ಇಂದು ದೇಶವು ಭ್ರಷ್ಟಾಚಾರದ ವಿರುದ್ಧ ನಿರ್ಣಾಯಕ ಸಮರ ಸಾರಿದೆ. ಭ್ರಷ್ಟರು ಎಷ್ಟೇ ಶಕ್ತಿಶಾಲಿಯಾಗಿದ್ದರೂ ಈಗ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದುರಾಡಳಿತವು ದೀರ್ಘಕಾಲದವರೆಗೆ ದೇಶದ ಸಾಮರ್ಥ್ಯವನ್ನು ಕುಗ್ಗಿಸಿತ್ತು. ನಮ್ಮ ಅಭಿವೃದ್ಧಿಯ ಹಾದಿಯಲ್ಲಿ ಅಡೆತಡೆಗಳನ್ನು ಉಂಟುಮಾಡಿತು. ಇಂದು, 'ಸಬ್ಕಾ ಸಾಥ್ ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ ಮತ್ತು ಸಬ್ಕಾ ಪ್ರಯಾಸ್' ಎಂಬ ಮಂತ್ರದೊಂದಿಗೆ, ನಾವು ಹಿಂದಿನ ಎಲ್ಲಾ ನ್ಯೂನತೆಗಳನ್ನು ತ್ವರಿತವಾಗಿ ತೊಡೆದುಹಾಕುತ್ತಿದ್ದೇವೆ. ಇಂದು ಅತ್ಯಂತ ದಿಟ್ಟ ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಳ್ಳಲಾಗುತ್ತಿದೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಾಗಿ ತ್ವರಿತವಾಗಿ ಕಾರ್ಯಗತಗೊಳಿಸಲಾಗುತ್ತಿದೆ.
ಸ್ನೇಹಿತರೆ,
ವೇಗವಾಗಿ ಬದಲಾಗುತ್ತಿರುವ ಕಾಲದಲ್ಲಿ, ತಂತ್ರಜ್ಞಾನದ ಈ ಯುಗದಲ್ಲಿ ಭವಿಷ್ಯದ ಯುದ್ಧಗಳ ಸ್ವರೂಪವೂ ಬದಲಾಗಲಿದೆ. ಇಂದು ನಾವು ಹೊಸ ಸವಾಲುಗಳು, ಹೊಸ ವಿಧಾನಗಳು ಮತ್ತು ಹೊಸ ಯುಗದಲ್ಲಿ ರಾಷ್ಟ್ರೀಯ ರಕ್ಷಣೆಯ ಬದಲಾಗುತ್ತಿರುವ ಅವಶ್ಯಕತೆಗಳಿಗೆ ಅನುಗುಣವಾಗಿ ದೇಶದ ಮಿಲಿಟರಿ (ಸೇನಾ) ಶಕ್ತಿಯನ್ನು ಸಿದ್ಧಪಡಿಸುತ್ತಿದ್ದೇವೆ. ಸೇನೆಯಲ್ಲಿ ಹಲವು ದಶಕಗಳಿಂದ ಭಾವಿಸಿದ್ದ ಪ್ರಮುಖ ಸುಧಾರಣೆಗಳ ಅಗತ್ಯ ಇಂದು ಜಾರಿಯಾಗುತ್ತಿದೆ. ನಮ್ಮ ಪಡೆಗಳ ಉತ್ತಮ ಸಮನ್ವಯತೆ ಇರುವಂತೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ಪ್ರತಿ ಸವಾಲಿನ ವಿರುದ್ಧ ನಾವು ತ್ವರಿತ ಕ್ರಮ ತೆಗೆದುಕೊಳ್ಳಬಹುದು. ಇದಕ್ಕಾಗಿ ಸಿಡಿಎಸ್ (ರಕ್ಷಣಾ ಸೇವೆಗಳ ಮುಖ್ಯಸ್ಥರು)ನಂತಹ ಹುದ್ದೆ ಸೃಷ್ಟಿಸಲಾಗಿದೆ. ಗಡಿಯಲ್ಲಿ ಆಧುನಿಕ ಮೂಲಸೌಕರ್ಯಗಳ ಜಾಲ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ನಿಮ್ಮಂತಹ ನಮ್ಮ ಸ್ನೇಹಿತರು ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಹೆಚ್ಚು ಆರಾಮದಾಯಕರಾಗಿದ್ದಾರೆ. ಇಂದು ದೇಶದಲ್ಲಿ ಹಲವಾರು ಸೈನಿಕ ಶಾಲೆಗಳನ್ನು ತೆರೆಯಲಾಗುತ್ತಿದೆ. ಸೈನಿಕ ಶಾಲೆಗಳಲ್ಲಿ, ಸೈನಿಕ ತರಬೇತಿ ಸಂಸ್ಥೆಗಳನ್ನು ಹೆಣ್ಣುಮಕ್ಕಳಿಗಾಗಿ ತೆರೆಯಲಾಗಿದೆ. ನನ್ನ ಮುಂದೆ ಅನೇಕ ಹೆಣ್ಣು ಮಕ್ಕಳನ್ನು ನೋಡಲು ನಾನು ಹೆಮ್ಮೆಪಡುತ್ತೇನೆ. ನನ್ನ ನಂಬಿಕೆ, ಭಾರತೀಯ ಸೇನೆಗೆ ಹೆಣ್ಣುಮಕ್ಕಳ ಪ್ರವೇಶದಿಂದ, ನಮ್ಮ ಶಕ್ತಿ ಹೆಚ್ಚಾಗಲಿದೆ; ನಮ್ಮ ಶಕ್ತಿ ಹೆಚ್ಚಾಗುತ್ತದೆ.
ಸ್ನೇಹಿತರೆ,
ದೇಶದ ಭದ್ರತೆಯ ಪ್ರಮುಖ ಅಂಶವೆಂದರೆ 'ಸ್ವಾವಲಂಬಿ ಭಾರತ'; ಮತ್ತು ಭಾರತೀಯ ಸೇನೆಗಳು ಆಧುನಿಕ ಸ್ವದೇಶಿ ಶಸ್ತ್ರಾಸ್ತ್ರಗಳನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ವಿದೇಶಿ ಶಸ್ತ್ರಾಸ್ತ್ರಗಳು ಮತ್ತು ವಿದೇಶಿ ವ್ಯವಸ್ಥೆಗಳ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡಲು, ದೇಶದ 3 ಸಶಸ್ತ್ರ ಪಡೆಗಳು ಸ್ವಾವಲಂಬಿಯಾಗಲು ಸಂಕಲ್ಪ ಮಾಡಿವೆ. 400ಕ್ಕೂ ಹೆಚ್ಚು ರಕ್ಷಣಾ ಸಾಧನಗಳನ್ನು ವಿದೇಶದಿಂದ ಖರೀದಿಸುವುದಿಲ್ಲ ಎಂದು ನಿರ್ಧರಿಸಿರುವ ನಮ್ಮ 3 ಸಶಸ್ತ್ರ ಪಡೆಗಳನ್ನು ನಾನು ಪ್ರಶಂಸಿಸುತ್ತೇನೆ. ಈಗ ಈ 400 ಆಯುಧಗಳು, ಶಸ್ತ್ರಾಸ್ತ್ರಗಳು ಭಾರತದಲ್ಲೇ ತಯಾರಾಗಲಿದ್ದು, ಭಾರತದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲಿವೆ. ಇದರಿಂದ ಮತ್ತೊಂದು ದೊಡ್ಡ ಅನುಕೂಲವಾಗಲಿದೆ. ಭಾರತದ ಯೋಧ ತನ್ನ ದೇಶದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳೊಂದಿಗೆ ಹೋರಾಡಿದಾಗ ಅವನ ದಾಳಿ ಆತ್ಮವಿಶ್ವಾಸವು ಚಿಗುರೊಡೆಯುತ್ತದೆ. ಅದು ಶತ್ರುಗಳ ನೈತಿಕತೆಯನ್ನು ಹತ್ತಿಕ್ಕುವ ಧೈರ್ಯವನ್ನು ಹೆಚ್ಚಿಸುತ್ತದೆ. ಇಂದು ಒಂದು ಕಡೆ ನಮ್ಮ ಸೇನೆಗಳು ಹೆಚ್ಚು ಹೆಚ್ಚು 'ಮೇಡ್ ಇನ್ ಇಂಡಿಯಾ' ಶಸ್ತ್ರಾಸ್ತ್ರಗಳನ್ನು ಅಳವಡಿಸಿಕೊಳ್ಳುತ್ತಿರುವಾಗ ಮತ್ತೊಂದೆಡೆ ಸಾಮಾನ್ಯ ಭಾರತೀಯರು 'ಸ್ಥಳೀಯರಿಗೆ ಧ್ವನಿಯಾಗುತ್ತಿದ್ದಾರೆ(ವೋಕಲ್ ಫಾರ್ ಲೋಕಲ್)' ಎಂದು ನನಗೆ ಖುಷಿಯಾಗಿದೆ. ಅವರು ಸ್ಥಳೀಯ ಉತ್ಪನ್ನಗಳನ್ನು ಜಾಗತಿಕವಾಗಿ ಪರಿವರ್ತಿಸುವ ಕನಸು ಕಾಣುತ್ತಿದ್ದಾರೆ.
ಸ್ನೇಹಿತರೆ,
ಇಂದು, ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಗಳು, 'ಪ್ರಚಂಡ್' ಲಘು ಯುದ್ಧ ಹೆಲಿಕಾಪ್ಟರ್‌ಗಳು ಮತ್ತು ತೇಜಸ್ ಫೈಟರ್ ಜೆಟ್‌ಗಳಂತಹ ರಕ್ಷಣಾ ಸಾಧನಗಳು ಭಾರತದ ಶಕ್ತಿಗೆ ಸಮಾನಾರ್ಥಕವಾಗುತ್ತಿವೆ. ಇಂದು ಭಾರತವು ವಿಶಾಲ ಸಾಗರದಲ್ಲಿ 'ವಿಕ್ರಾಂತ್' ಯುದ್ಧ ವಿಮಾನವನ್ನು ಹೊಂದಿದೆ. ನೀರಿನ ತಳದಲ್ಲಿ ಹೋರಾಡಲು, ನಮ್ಮಲ್ಲಿ 'ಅರಿಹಂತ್' ಇದೆ. ಭಾರತದ ಬಳಿ 'ಪೃಥ್ವಿ' ಹಾಗೂ 'ಆಕಾಶ್' ಕ್ಷಿಪಣಿಗಳಿವೆ. ನಮ್ಮಲ್ಲಿ ವಿನಾಶಕಾರಿ 'ತಾಂಡವ' ಹಾಗೂ ಶಿವನ 'ತ್ರಿಶೂಲ' ಮತ್ತು 'ಪಿನಾಕ'ದಂತಹ ಕ್ಷಿಪಣಿಗಳಿವೆ. ಯುದ್ಧವು ಎಷ್ಟೇ ಆಕ್ರಮಣಕಾರಿಯಾಗಿದ್ದರೂ, ಭಾರತದ ‘ಅರ್ಜುನ’ ಯಾವಾಗಲೂ ನಿಖರ ಗುರಿಯನ್ನು ಹೊಡೆಯುತ್ತದೆ. ಭಾರತವು ಇಂದು ತನ್ನ ಸೇನಾ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಜತೆಗೆ, ರಕ್ಷಣಾ ಸಾಧನಗಳ ಪ್ರಮುಖ ರಫ್ತುದಾರನಾಗುತ್ತಿದೆ. ಭಾರತವು ಇಂದು ತನ್ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ಅದೇ ಸಮಯದಲ್ಲಿ, ಇದು ಡ್ರೋನ್‌ಗಳಂತಹ ಆಧುನಿಕ ಮತ್ತು ಪರಿಣಾಮಕಾರಿ ತಂತ್ರಜ್ಞಾನಗಳ ಮೇಲೆ ವೇಗವಾಗಿ ಕಾರ್ಯ ನಿರ್ವಹಿಸುತ್ತಿದೆ.
ಸಹೋದರ, ಸಹೋದರಿಯರೆ,
ಸಾಂಸ್ಕೃತಿಕವಾಗಿ, ನಾವು ಎಂದಿಗೂ ಯುದ್ಧವನ್ನು ಮೊದಲ ಆಯ್ಕೆಯಾಗಿ ಪರಿಗಣಿಸಿಲ್ಲ. ನಮ್ಮ ಶೌರ್ಯ ಮತ್ತು ಸಾಮಾಜಿಕ ಮೌಲ್ಯಗಳ ಕಾರಣದಿಂದಾಗಿ ನಾವು ಯಾವಾಗಲೂ ಯುದ್ಧವನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸಿದ್ದೇವೆ. ಯುದ್ಧ ನಡೆದಿರುವುದು ಲಂಕಾದಲ್ಲಾಗಲಿ, ಕುರುಕ್ಷೇತ್ರದಲ್ಲಾಗಲಿ ಕೊನೆಯವರೆಗೂ ಅದನ್ನು ತಪ್ಪಿಸಲು ಸಕಲ ಪ್ರಯತ್ನಗಳನ್ನು ಮಾಡಲಾಗಿದೆ. ಆದ್ದರಿಂದಲೇ ನಾವು ವಿಶ್ವಶಾಂತಿಯ ಧೂತರಾಗಿದ್ದೇವೆ. ನಾವು ಯುದ್ಧಕ್ಕೆ ವಿರುದ್ಧವಾಗಿದ್ದೇವೆ. ಆದರೆ ಶಕ್ತಿಯಿಲ್ಲದೆ ಶಾಂತಿ ಕೂಡ ಸಾಧ್ಯವಿಲ್ಲ. ನಮ್ಮ ಪಡೆಗಳಿಗೆ ಸಾಮರ್ಥ್ಯ ಹಾಗೂ ತಂತ್ರಗಾರಿಕೆ ಇದೆ. ಯಾರಾದರೂ ನಮ್ಮ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರೆ, ಅವರ ಭಾಷೆಯಲ್ಲಿ ಶತ್ರುಗಳಿಗೆ ಹೇಗೆ ತಕ್ಕ ಉತ್ತರ ನೀಡಬೇಕೆಂದು ನಮ್ಮ 3 ಸಶಸ್ತ್ರ ಪಡೆಗಳಿಗೆ ಚೆನ್ನಾಗಿ ತಿಳಿದಿದೆ.
ಸ್ನೇಹಿತರೆ,
ಇನ್ನೂ ಒಂದು ವಿಷಯವೇನೆಂದರೆ, ಗುಲಾಮಗಿರಿಯ ಮನಸ್ಥಿತಿ ನಮ್ಮ ದೇಶ ಮತ್ತು ನಮ್ಮ ಸೇನೆಗಳ ಮುಂದೆ ತಡೆಗೋಡೆಯಾಗಿ ನಿಂತಿತ್ತು, ಇಂದು ದೇಶವು ಈ ಮನಸ್ಥಿತಿಯನ್ನು ತೊಡೆದುಹಾಕುತ್ತಿದೆ. ಬಹುಕಾಲದಿಂದ ರಾಷ್ಟ್ರದ ರಾಜಧಾನಿಯ ರಾಜಪಥವು ಗುಲಾಮಗಿರಿಯ ಸಂಕೇತವಾಗಿತ್ತು. ಇಂದು ಅದನ್ನು ‘ಕರ್ತವ್ಯ-ಪಥ’ ಎಂದು ಮರುನಾಮಕರಣ ಮಾಡುವ ಮೂಲಕ ನಾವು ನವಭಾರತದಲ್ಲಿ ಹೊಸ ಆತ್ಮವಿಶ್ವಾಸ ತುಂಬಿದ್ದೇವೆ. ಒಂದು ಕಾಲದಲ್ಲಿ ಇಂಡಿಯಾ ಗೇಟ್ ಬಳಿ ವಸಾಹತುಶಾಹಿ ಆಳ್ವಿಕೆಯ ಸಂಕೇತ ಮತ್ತು ಕುರುಹು ಇತ್ತು. ಆದರೆ ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬೃಹತ್ ಪ್ರತಿಮೆಯನ್ನು ನಾವು ಸ್ಥಾಪಿಸಿದ್ದೇವೆ. ಅದು ಈಗ ನಮಗೆ ಸ್ಪಷ್ಟ ಮಾರ್ಗದರ್ಶನ ನೀಡುತ್ತಿದೆ. ರಾಷ್ಟ್ರೀಯ ಯುದ್ಧ ಸ್ಮಾರಕವಾಗಲಿ, ರಾಷ್ಟ್ರೀಯ ಪೊಲೀಸ್ ಸ್ಮಾರಕವಾಗಲಿ, ರಾಷ್ಟ್ರ ರಕ್ಷಣೆಗಾಗಿ ಏನನ್ನು ಬೇಕಾದರೂ ಮಾಡಲು ಪ್ರೇರೇಪಿಸುವ ಈ ಸ್ಮಾರಕಗಳು ನವಭಾರತದ ಸಂಕೇತಗಳೂ ಹೌದು. ಕೆಲವು ಸಮಯದ ಹಿಂದೆ, ದೇಶವು ಭಾರತೀಯ ನೌಕಾಪಡೆಯನ್ನು ಗುಲಾಮಗಿರಿಯ ಸಂಕೇತದಿಂದ ಮುಕ್ತಗೊಳಿಸಿದೆ. ಈಗ ಕೆಚ್ಚೆದೆಯ ಹೃದಯದ ಸಾಕಾರಮೂರ್ತಿ ಶಿವಾಜಿಯಿಂದ ಸ್ಫೂರ್ತಿ ಪಡೆದು ನೌಕಾ ಧ್ವಜಕ್ಕೆ ಹೊಸ ನೌಕಾಪಡೆಯ ಧ್ವಜ ಸೇರಿಸಲಾಗಿದೆ.
ಸ್ನೇಹಿತರೆ,
ಇಂದು ಇಡೀ ಜಗತ್ತು ಭಾರತ ಮತ್ತು ಅದರ ಬೆಳೆಯುತ್ತಿರುವ ಸಾಮರ್ಥ್ಯದತ್ತ ದೃಷ್ಟಿ ಹರಿಸಿದೆ. ಭಾರತದ ನೈಜಶಕ್ತಿ ಹೆಚ್ಚಾದಾಗ ಶಾಂತಿಯ ಭರವಸೆಯೂ ಹೆಚ್ಚುತ್ತದೆ. ಭಾರತದ ಶಕ್ತಿ ಹೆಚ್ಚಾದಾಗ ಸಮೃದ್ಧಿಯ ಸಾಧ್ಯತೆಯೂ ಹೆಚ್ಚುತ್ತದೆ. ಭಾರತದ ಶಕ್ತಿ ಹೆಚ್ಚಾದಾಗ ಇಡೀ ಪ್ರಪಂಚದಲ್ಲಿ ಸಮಬಾಳು ಇರುತ್ತದೆ. ಭಾರತದ ಈ ಶಕ್ತಿಗೆ 'ಆಜಾದಿ ಕಾ ಅಮೃತಕಾಲ್' ನಿಜವಾದ ಸಾಕ್ಷಿಯಾಗಲಿದೆ. ನಿಮ್ಮಂತಹ ಎಲ್ಲಾ ವೀರ ಸೈನಿಕರು ಇದರಲ್ಲಿ ಪ್ರಮುಖ ಪಾತ್ರ ಹೊಂದಿದ್ದಾರೆ, ಏಕೆಂದರೆ ನೀವೆಲ್ಲರೂ "ಭಾರತದ ಹೆಮ್ಮೆ"ಯಾಗಿದ್ದೀರಿ.
(ಭಾರತದ ಸೈನಿಕರಿಗೆ ಮೀಸಲಾಗಿರುವ ಹಿಂದಿ ಕವಿತೆಯ ವಿಶಾಲ ಅನುವಾದ)
“ನಿಮ್ಮ ದೇಹ, ಮನಸ್ಸು, ಬಯಕೆ ಮತ್ತು ಮಾರ್ಗವು ತ್ರಿವರ್ಣ ಧ್ವಜಕ್ಕೆ ಸಮಾನಾರ್ಥಕವಾಗಿದೆ. ನೀವು ಗೆಲುವನ್ನು ಘರ್ಜಿಸುವ ಆತ್ಮವಿಶ್ವಾಸ ಹೊಂದಿದ್ದೀರಿ; ನಿಮ್ಮ ವಿಶಾಲ ಎದೆಯು ಗಡಿಗಿಂತ ಅಗಲವಾಗಿದೆ; ನಿಮ್ಮ ಸಂಕಲ್ಪವು ಕನಸಿನಲ್ಲೂ ಪ್ರತಿಫಲಿಸುತ್ತದೆ, ಪ್ರತಿ ಹಂತದಲ್ಲೂ ನೈಜ ಶಕ್ತಿ ತೋರಿಸುತ್ತದೆ, ನೀವು ಭಾರತದ ಹೆಮ್ಮೆ,ಪ್ರತಿಯೊಬ್ಬ ಭಾರತೀಯನೂ ನಿನ್ನ ಬಗ್ಗೆ ಹೆಮ್ಮೆ ಪಡುತ್ತಾನೆ; ಪ್ರತಿ ಮನೆಯಲ್ಲೂ ನಿಮ್ಮ ವೀರಗಾಥೆ ಪ್ರತಿಧ್ವನಿಸುತ್ತದೆ; ಪುರುಷರು ಮತ್ತು ಮಹಿಳೆಯರು ನಿಮಗೆ ವಂದಿಸುತ್ತಾರೆ; ನಾವೆಲ್ಲರೂ ಸಮುದ್ರಕ್ಕಿಂತ ಆಳವಾಗಿ, ಗಾಢವಾಗಿ ನಿಮ್ಮ ಬಗ್ಗೆ ಪ್ರೀತಿ ಹೊಂದಿದ್ದೇವೆ; ನೀವು ನಿಮ್ಮ ಕುಟುಂಬ ಹೊಂದಿದ್ದೀರಿ; ನಿಮಗೂ ಕನಸುಗಳಿವೆ; ಆದರೂ ನೀವು ಇದನ್ನೆಲ್ಲ ದೇಶಕ್ಕೆ ಅರ್ಪಿಸಿದ್ದೀರಿ; ಈಗ ದೇಶದ ಶತ್ರುಗಳು ನಿಮ್ಮ ಕಬ್ಬಿಣದಂತಹ ಇಚ್ಛೆ ಮತ್ತು ಮನದಾಳವನ್ನು ಅರಿತಿದ್ದಾರೆ; ನೀವು ಭಾರತದ ಹೆಮ್ಮೆ; ಪ್ರತಿಯೊಬ್ಬ ಭಾರತೀಯನೂ ನಿನ್ನ ಬಗ್ಗೆ ಹೆಮ್ಮೆ ಪಡುತ್ತಾನೆ! ಪ್ರೀತಿಯ ವಿಷಯಕ್ಕೆ ಬಂದಾಗ, ನೀವು ಸಾಗರದ ಶಾಂತಿಯನ್ನು ಹೋಲುತ್ತೀರಿ. ಆದರೆ ಯಾರಾದರೂ ದೇಶವನ್ನು ಗುರಿಯಾಗಿಸಲು ಧೈರ್ಯ ಮಾಡಿದರೆ, ನೀವು ಧೈರ್ಯಶಾಲಿ 'ವಜ್ರ' ಮತ್ತು 'ವಿಕ್ರಾಂತ' ಮತ್ತು ನಿರ್ಭೀತ 'ಅಗ್ನಿ'ಯನ್ನು ಹೋಲುತ್ತೀರಿ! ನೀವು 'ನಿರ್ಭಯ್', 'ಪ್ರಚಂಡ್' ಮತ್ತು 'ನಾಗ್' (ಕ್ಷಿಪಣಿಗಳು) ಇದ್ದಂತೆ; ನೀನು 'ಅರ್ಜುನ್', 'ಪೃಥ್ವಿ' ಮತ್ತು 'ಅರಿಹಂತ್'; ನೀವು ಪ್ರತಿ ಕತ್ತಲೆಯ ಅಂತ್ಯಕಾರರು; ಇಲ್ಲಿ ನಿಮ್ಮ ತಪಸ್ಸು ದೇಶವನ್ನು ಕೃತಜ್ಞರನ್ನಾಗಿಸುತ್ತದೆ; ನೀವು ಭಾರತದ ಹೆಮ್ಮೆ; ಪ್ರತಿಯೊಬ್ಬ ಭಾರತೀಯನೂ ನಿನ್ನ ಬಗ್ಗೆ ಹೆಮ್ಮೆ ಪಡುತ್ತಾನೆ; ನಿಮ್ಮ ತಲೆಯನ್ನು ಸ್ವಾಭಿಮಾನದಿಂದ ಮೇಲಕ್ಕೆತ್ತಿ; ನೀವು ಆಗಸದಲ್ಲಿ ತೋರುವ ತೇಜಸ್ಸಿನ ಘರ್ಜನೆ; 'ಬ್ರಹ್ಮೋಸ್'ನ ಅಜೇಯ ಕೂಗು, ಅದು ಶತ್ರುಗಳ ಕಣ್ಣುಗುಡ್ಡೆಯನ್ನು ಅದುರಿಸುತ್ತದೆ; ಪ್ರತಿ ಕ್ಷಣವೂ ನಾವು ನಿಮಗೆ ಋಣಿಯಾಗಿದ್ದೇವೆ ಎಂಬ ಸತ್ಯವನ್ನು ರಾಷ್ಟ್ರವು ಪುನರುಚ್ಚರಿಸುತ್ತದೆ; ನೀವು ಭಾರತದ ಹೆಮ್ಮೆ; ಪ್ರತಿಯೊಬ್ಬ ಭಾರತೀಯನೂ ನಿನ್ನ ಬಗ್ಗೆ ಹೆಮ್ಮೆ ಪಡುತ್ತಾನೆ!”
ಮತ್ತೊಮ್ಮೆ ನನ್ನ ಕಾರ್ಗಿಲ್ ವೀರರು ನೆಲೆಸಿರುವ ಹಿಮಾಲಯದ ಮಡಿಲಿನಿಂದ ನನ್ನ ಕಡೆಯಿಂದ ಮತ್ತು ನನ್ನ ವೀರ ಸೈನಿಕರ ಪರವಾಗಿ ನಿಮಗೆಲ್ಲರಿಗೂ ಮತ್ತು ದೇಶದಲ್ಲಿರುವ ಮತ್ತು ವಿಶ್ವಾದ್ಯಂತ ಇರುವ ಭಾರತೀಯರಿಗೆ ದೀಪಾವಳಿಯ ಶುಭಾಶಯಗಳನ್ನು ಕೋರುತ್ತೇನೆ. ನನ್ನೊಂದಿಗೆ ಗಟ್ಟಿಯಾಗಿ ಹೇಳಿ, ಇದರಿಂದ ನಿಮ್ಮ ಧ್ವನಿ ಇಡೀ ಹಿಮಾಲಯದಲ್ಲಿ ಪ್ರತಿಧ್ವನಿಸುತ್ತದೆ!
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ವಂದೇ ಮಾತರಂ!
ವಂದೇ ಮಾತರಂ!
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ವರ ಭಾಷಣದ ಅಂದಾಜು ಅನುವಾದ ಇದಾಗಿದೆ. ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
(Release ID: 1870959)
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam