ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದ ದೀಪೋತ್ಸವ ಆಚರಣೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅವತರಣಿಕೆ 

Posted On: 23 OCT 2022 8:37PM by PIB Bengaluru

ಸಿಯಾವರ ರಾಮಚಂದ್ರ ಕೀ ಜೈ!


ಸಿಯಾವರ ರಾಮಚಂದ್ರ ಕೀ ಜೈ!


ಸಿಯಾವರ ರಾಮಚಂದ್ರ ಕೀ ಜೈ!
 
ವೇದಿಕೆಯಲ್ಲಿ ಉಪಸ್ಥಿತರಿರುವ ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್ ಅವರೇ, ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರೇ, ಎಲ್ಲಾ ಅವಧ್‌ವಾಸಿಗಳೇ, ದೇಶ ಮತ್ತು ಜಗತ್ತಿನಾದ್ಯಂತ ಇರುವ ಶ್ರೀರಾಮ ಮತ್ತು ಶ್ರೀ ಭರತನ ಭಕ್ತರೇ, ಮಹಿಳೆಯರೇ ಮತ್ತು ಮಹನೀಯರೇ!

ಇಂದು ದೀಪಗಳಿಂದ ಝಗಮಗಿಸುತ್ತಿರುವ ಅಯೋಧ್ಯೆಯು ದೈವಿಕವಾಗಿ ಮತ್ತು ಭವ್ಯವಾಗಿ ಕಾಣುತ್ತಿದೆ. ಇಂದು ಅಯೋಧ್ಯೆ ನಗರವು ಭಾರತದ ಸಾಂಸ್ಕೃತಿಕ ಪುನರುಜ್ಜೀವನದ ಸುವರ್ಣ ಅಧ್ಯಾಯದ ಪ್ರತಿಬಿಂಬವಾಗಿದೆ. ರಾಮಾಭಿಷೇಕ ಮುಗಿಸಿ ಇಲ್ಲಿಗೆ ಬರುತ್ತಿದ್ದಾಗ ನಾನಾ ಭಾವ, ಭಾವನೆ, ಪರವಶತೆಯಲ್ಲಿ ಮುಳುಗಿದ್ದೆ.  14 ವರ್ಷಗಳ ವನವಾಸದ ನಂತರ ಭಗವಾನ್ ಶ್ರೀರಾಮ ಅಯೋಧ್ಯೆಗೆ ಬಂದಾಗ ಅಯೋಧ್ಯೆಯನ್ನು ಹೇಗೆ ಅಲಂಕರಿಸಲಾಗಿತ್ತು? ಎಂದು ನಾನು ಯೋಚಿಸುತ್ತಿದ್ದೆ. 'ತ್ರೇತಾ'ಯುಗದ ಅಯೋಧ್ಯೆಯನ್ನು ನೋಡಲಾಗಲಿಲ್ಲ, ಆದರೆ ಇಂದು ಶ್ರೀರಾಮನ ಆಶೀರ್ವಾದದಿಂದ ನಾವು 'ಅಮೃತಕಾಲ'ದಲ್ಲಿ ಚಿರಂತನವಾದ ಅಯೋಧ್ಯೆಯ ದಿವ್ಯತೆಯನ್ನು ನೋಡುತ್ತಿದ್ದೇವೆ.

ಸ್ನೇಹಿತರೇ,

ನಾವು ಹಬ್ಬಗಳು ಮತ್ತು ಆಚರಣೆಗಳು ಜೀವನದ ನೈಸರ್ಗಿಕ ಭಾಗವಾಗಿರುವ ನಾಗರಿಕತೆ ಮತ್ತು ಸಂಸ್ಕೃತಿಗೆ ಸೇರಿದವರು. ಸಮಾಜದಲ್ಲಿ ಹೊಸದೇನಾದರೂ ನಡೆದಾಗ ಹೊಸ ಹಬ್ಬವನ್ನು ಹುಟ್ಟು ಹಾಕುತ್ತೇವೆ. ಸಮಾಜದಲ್ಲಿ ‘ಸತ್ಯದ ವಿಜಯ ಮತ್ತು ಅಸತ್ಯದ ಸೋಲು’ಎಂಬ ಸಂದೇಶವನ್ನು ಜೀವಂತವಾಗಿಟ್ಟಿರುವ ಭಾರತದ ಮಾದರಿಗೆ ಯಾವುದೇ ಸಾಟಿಯಿಲ್ಲ. ರಾವಣನ ದಬ್ಬಾಳಿಕೆಯನ್ನು ಸಾವಿರಾರು ವರ್ಷಗಳ ಹಿಂದೆಯೇ ಶ್ರೀರಾಮನು ಕೊನೆಗೊಳಿಸಿದನು. ಆದರೆ ಇಂದು ಸಾವಿರಾರು ವರ್ಷಗಳ ನಂತರವೂ, ಆ ಘಟನೆಯಿಂದ ಹುಟ್ಟಿಕೊಂಡ ಪ್ರತಿಯೊಂದು ಮಾನವೀಯ ಮತ್ತು ಆಧ್ಯಾತ್ಮಿಕ ಸಂದೇಶವು ನಿರಂತರವಾಗಿ ದೀಪಗಳ ರೂಪದಲ್ಲಿ ಬೆಳಗುತ್ತಿದೆ.

ಸ್ನೇಹಿತರೇ,

ದೀಪಾವಳಿಯಂದು ಬೆಳಗುವ ದೀಪಗಳು ನಮಗೆ ಕೇವಲ ವಸ್ತುಗಳಲ್ಲ. ಅವುಗಳು ಭಾರತದ ಆದರ್ಶಗಳು, ಮೌಲ್ಯಗಳು ಮತ್ತು ತತ್ವಗಳ ರೋಮಾಂಚಕ ಆತ್ಮಗಳಾಗಿವೆ. ನಾವು ನೋಡುತ್ತಿರುವಂತೆ, ಈ ದೀಪಗಳ ಬೆಳಕು, ಈ ಬೆಳಕಿನ ಪ್ರಭಾವ, ರಾತ್ರಿಯ ದಿಗಂತದಲ್ಲಿ ಈ ಹೊಳೆಯುತ್ತಿರುವ ಕಿರಣಗಳು ಭಾರತದ ಮೂಲ ಮಂತ್ರವಾದ 'ಸತ್ಯಮೇವ ಜಯತೆ'ಯ ಘೋಷಣೆಯಾಗಿದೆ. “ಸತ್ಯಮೇವ ಜಯತೇ ನಾನೃತಂ ಸತ್ಯೇನ ಪನ್ಥಾ ವಿತತೋ ದೇವಯಾನಃ” - ಇದು ನಮ್ಮ ಉಪನಿಷತ್ತಿನ ಸಾಲುಗಳ ಘೋಷಣೆಯಾಗಿದೆ. ಅಂದರೆ ಯಾವಾಗಲೂ ಗೆಲುವು ಸತ್ಯಕ್ಕೆ ಸೇರಿದ್ದು, ಅಸತ್ಯಕ್ಕಲ್ಲ. “ರಾಮೋ ರಾಜಮಣಿ: ಸದಾ ವಿಜಯತೇ”- ಇದು ನಮ್ಮ ಋಷಿಗಳ ವಚನಗಳ ಘೋಷಣೆ. ಅಂದರೆ, ಜಯವು ಯಾವಾಗಲೂ ಶ್ರೀರಾಮನಿಗೆ ಸಮಾನಾರ್ಥಕವಾದ ಒಳ್ಳೆಯದಾಗಿರುತ್ತದೆಯೇ ಹೊರತು ರಾವಣನನ್ನು ಗುರುತಾದ ಕೆಟ್ಟದ್ದಲ್ಲ. ಆದ್ದರಿಂದಲೇ ಮಣ್ಣಿನ ದೀಪದಲ್ಲಿಯೂ ದೈವೀಶಕ್ತಿಯನ್ನು ಕಾಣುತ್ತಿದ್ದ ನಮ್ಮ ಋಷಿಮುನಿಗಳು ಹೇಳಿದ್ದರು – ದೀಪೋ ಜ್ಯೋತಿಃ ಪರಬ್ರಹ್ಮ ದೀಪೋ ಜ್ಯೋತಿಃ ಜನಾರ್ಧನ. ಅಂದರೆ ದೀಪದ ಬೆಳಕು ಬ್ರಹ್ಮ ಸ್ವರೂಪ. ಈ ಆಧ್ಯಾತ್ಮಿಕ ಬೆಳಕು ಭಾರತದ ಪ್ರಗತಿ ಮತ್ತು ಪುನರುತ್ಥಾನಕ್ಕೆ ಮಾರ್ಗದರ್ಶನ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ.


ಸ್ನೇಹಿತರೇ,
 
ಇಂದು, ಈ ಶುಭ ಸಂದರ್ಭದಲ್ಲಿ, ಈ ಲಕ್ಷಾಂತರ ದೀಪಗಳ ಪ್ರಖರ ಬೆಳಕಿನಲ್ಲಿ ನಾನು ದೇಶವಾಸಿಗಳಿಗೆ ಇನ್ನೊಂದು ವಿಷಯವನ್ನು ನೆನಪಿಸಲು ಬಯಸುತ್ತೇನೆ. ರಾಮಚರಿತ ಮಾನಸದಲ್ಲಿ, ಗೋಸ್ವಾಮಿ ತುಳಸಿದಾಸ್ ಅವರು ಹೀಗೆ ಹೇಳಿದ್ದಾರೆ - "ಜಗತ್ ಪ್ರಕಾಶ್ಯ ಪ್ರಕಾಶಕ ರಾಮೂ".. ಅಂದರೆ ಶ್ರೀರಾಮನು ಇಡೀ ಜಗತ್ತನ್ನು ಬೆಳಗಿಸುತ್ತಾನೆ. ಶ್ರೀರಾಮ ಇಡೀ ಜಗತ್ತಿಗೆ ದಾರಿದೀಪವಿದ್ದಂತೆ. ಈ ಬೆಳಕು ಯಾವುದು? ಇದು ದಯೆ ಮತ್ತು ಸಹಾನುಭೂತಿಯ ಬೆಳಕು; ಇದು ಮಾನವೀಯತೆ ಮತ್ತು ಘನತೆಯ ಬೆಳಕು; ಇದು ಸಮಚಿತ್ತತೆ ಮತ್ತು ಪ್ರೀತಿಯ ಬೆಳಕು. ಈ ಬೆಳಕು ಎಲ್ಲರಿಗೂ; ಈ ಬೆಳಕು ಎಲ್ಲರೊಂದಿಗೆ ಒಟ್ಟಾಗಿ ನಡೆಯುವ ಸಂದೇಶವನ್ನು ರವಾನಿಸುತ್ತದೆ. ಬಹುಶಃ ವರ್ಷಗಳ ಹಿಂದೆ ಗುಜರಾತಿ ಭಾಷೆಯಲ್ಲಿ ‘ದೀಪʼವನ್ನು ಕುರಿತು ಕವಿತೆ ಬರೆದಿದ್ದ ನೆನಪು. ಆ ಕವಿತೆಯ ಶೀರ್ಷಿಕೆ 'ದಿಯಾ'. ನಾನು ಇಂದು ಅದರ ಕೆಲವು ಸಾಲುಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಆ ಕವಿತೆಯಲ್ಲಿ ನಾನು ಹೀಗೆ ಬರೆದಿದ್ದೆ – દીવા જેવી આશ ને દીવા જેવો તાપ, દીવા જેવી આગ ને દીવા થકી હાશ. ઊગતા સૂરજને હર કોઈ પૂજે, એ તો આથમતી સાંજે’ય આપે સાથ. જાતે બળે ને બાળે અંધાર, માનવના મનમાં ઊગે રખોપાનો ભાવ. ಅದರ ಅರ್ಥ ಹೀಗಿದೆ, ದೀಪವು ಭರವಸೆಯನ್ನು ನೀಡುವುದು ಮಾತ್ರವಲ್ಲ, ಶಾಖವನ್ನೂ ಹೊರಸೂಸುತ್ತದೆ. ದೀಪವು ಬೆಂಕಿಯನ್ನು ತರುತ್ತದೆ ಮತ್ತು ಮುದವನ್ನು ನೀಡುತ್ತದೆ. ಪ್ರತಿಯೊಬ್ಬರೂ ಉದಯಿಸುವ ಸೂರ್ಯನನ್ನು ಪೂಜಿಸುತ್ತಾರೆ, ಆದರೆ ದೀಪವು ಕತ್ತಲೆಯಲ್ಲಿ ನಮಗೆ ಮಾರ್ಗದರ್ಶನ ನೀಡುತ್ತದೆ. ದೀಪವು ಸ್ವತಃ ಉರಿದು ಕತ್ತಲೆಯನ್ನು ಕಳೆಯುತ್ತದೆ. ದೀಪವು ವ್ಯಕ್ತಿಯಲ್ಲಿ ಸಮರ್ಪಣಾ ಭಾವವನ್ನು ತರುತ್ತದೆ. ನಾವು ಕಷ್ಟಪಟ್ಟು ಶ್ರಮಿಸುತ್ತೇವೆ (ಗುರಿಯನ್ನು ಸಾಧಿಸಲು) ಆದರೆ ಅದನ್ನು ಸಾಧಿಸಿದಾಗ, ನಾವು ಸಾಧನೆಯ ಬೆಳಕನ್ನು ಇಡೀ ಜಗತ್ತಿಗೆ ನಿಸ್ವಾರ್ಥ ಮನೋಭಾವದಿಂದ ಹರಡುತ್ತೇವೆ, ಅದನ್ನು ಇಡೀ ಜಗತ್ತಿಗೆ ಅರ್ಪಿಸುತ್ತೇವೆ.


ಸಹೋದರ, ಸಹೋದರಿಯರೇ,
 

ನಾವು ಸ್ವಾರ್ಥದಿಂದ ಮುಕ್ತರಾದಾಗ ಮತ್ತು ನಿಸ್ವಾರ್ಥತೆಯ ಈ ಪ್ರಯಾಣವನ್ನು ಕೈಗೊಂಡಾಗ, ಸಂಕಲ್ಪವು ಅದರಲ್ಲಿ ಸ್ವಯಂಚಾಲಿತವಾಗಿ ಲೀನವಾಗುತ್ತದೆ. ನಮ್ಮ ಆಲೋಚನೆಗಳು ಪೂರ್ಣವಾದಾಗ, ನಾವು ‘इदम् न मम्’ಎಂದು ಹೇಳುತ್ತೇವೆ. ಅಂದರೆ ಈ ಸಾಧನೆ ನನಗಲ್ಲ; ಇದು ಮನುಕುಲದ ಕಲ್ಯಾಣಕ್ಕಾಗಿ. ‘ದೀಪದಿಂದ ದೀಪಾವಳಿಯವರೆಗೆʼ ಭಾರತದ ತತ್ವವಾಗಿದೆ. ಇದು ಭಾರತದ ಪರಿಕಲ್ಪನೆ; ಇದು ಭಾರತದ ಸನಾತನ ಸಂಸ್ಕೃತಿ. ಭಾರತವು ಮಧ್ಯಕಾಲೀನ ಮತ್ತು ಆಧುನಿಕ ಕಾಲದಲ್ಲಿ ಅನೇಕ ಕರಾಳ ಯುಗಗಳನ್ನು ಎದುರಿಸಿರುವುದು ನಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಕೆಲವು ಮಹಾನ್ ನಾಗರಿಕತೆಗಳನ್ನು ನಾಶಪಡಿಸಿದ ಬಿರುಗಾಳಿಗಳಲ್ಲಿಯೂ ನಮ್ಮ ದೀಪಗಳು ಉರಿಯುತ್ತಲೇ ಇದ್ದವು ಮತ್ತು ಬೆಳಕನ್ನು ನೀಡುತ್ತಲೇ ಇದ್ದವು. ನಂತರ ನಾವು ಆ ಬಿರುಗಾಳಿಗಳನ್ನು ಶಾಂತಗೊಳಿಸಿದ ನಂತರ ಮತ್ತೆ ಎಚ್ಚರಗೊಂಡೆವು ಏಕೆಂದರೆ ನಾವು ದೀಪಗಳನ್ನು ಬೆಳಗಿಸುವುದನ್ನು ನಿಲ್ಲಿಸಲಿಲ್ಲ. ನಾವು ನಂಬಿಕೆಯನ್ನು ಬೆಳೆಸುವುದನ್ನು ನಿಲ್ಲಿಸಲಿಲ್ಲ. ಬಹಳ ಹಿಂದೆಯೇನಲ್ಲ, ಇತ್ತೀಚಿನ ಕಠಿಣ ಕೊರೊನಾ ಅವಧಿಯಲ್ಲಿಯೂ, ಪ್ರತಿಯೊಬ್ಬ ಭಾರತೀಯನೂ ಈ ಉತ್ಸಾಹದಲ್ಲಿ ದೀಪ ಹಿಡಿದು ನಿಂತರು. ಇಂದು, ಭಾರತವು ಕೊರೊನಾ ವಿರುದ್ಧ ಹೇಗೆ ಪ್ರಬಲವಾಗಿ ಹೋರಾಡುತ್ತಿದೆ ಎಂಬುದನ್ನು ಜಗತ್ತು ನೋಡುತ್ತಿದೆ. ಕತ್ತಲೆಯ ಪ್ರತಿಯೊಂದು ಯುಗದಿಂದ ಹೊರಹೊಮ್ಮುತ್ತಿರುವ ಭಾರತವು ಹಿಂದೆ ತನ್ನ ಶಕ್ತಿಯ ಬೆಳಕನ್ನು ಹರಡಿದೆ ಮತ್ತು ಭವಿಷ್ಯದಲ್ಲಿಯೂ ಅದನ್ನು ಹರಡುತ್ತದೆ ಎಂದು ಇದು ಸಾಬೀತುಪಡಿಸಿದೆ. ದೀಪ ನಮ್ಮ ಕೆಲಸಗಳಿಗೆ ಸಾಕ್ಷಿಯಾದಾಗ, ಕತ್ತಲೆಯ ಅಂತ್ಯವು ತಂತಾನೇ ಖಚಿತವಾಗುತ್ತದೆ. ದೀಪವು ನಮ್ಮ ಕಾರ್ಯಗಳಿಗೆ ಸಾಕ್ಷಿಯಾದಾಗ, ಹೊಸ ಉದಯ ಮತ್ತು ಹೊಸ ಆರಂಭದ ಆತ್ಮವಿಶ್ವಾಸವು ತಂತಾನೇ ಬಲಗೊಳ್ಳುತ್ತದೆ. ಈ ನಂಬಿಕೆಯೊಂದಿಗೆ ಮತ್ತೊಮ್ಮೆ ನಿಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳು! ಎಲ್ಲರೂ ಸಂಪೂರ್ಣ ಭಕ್ತಿಯಿಂದ ನನ್ನೊಂದಿಗೆ ಹೇಳಿ–


ಸಿಯಾವರ ರಾಮಚಂದ್ರ ಕೀ ಜೈ!


ಸಿಯಾವರ ರಾಮಚಂದ್ರ ಕೀ ಜೈ!


ಸಿಯಾವರ ರಾಮಚಂದ್ರ ಕೀ ಜೈ!
 
ಸೂಚನೆ: ಇದು ಪ್ರಧಾನಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣ ಹಿಂದಿಯಲ್ಲಿತ್ತು.

******


(Release ID: 1870757) Visitor Counter : 154