ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತ್ ನ ಕೆವಾಡಿಯಾದ ಏಕತಾ ನಗರದಲ್ಲಿರುವ ಏಕತಾ ಪ್ರತಿಮೆಯಲ್ಲಿ ಲೈಫ್ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಮಂತ್ರಿ
ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಘನತೆವೆತ್ತ ಶ್ರೀ ಆಂಟೋನಿಯೊ ಗುಟೆರಸ್ ಅವರೊಂದಿಗೆ ದ್ವಿಪಕ್ಷೀಯ ಸಭೆಯಲ್ಲಿ ಭಾಗಿ
ಈ ಉಪಕ್ರಮಕ್ಕಾಗಿ ಮತ್ತು ಸಂಕಲ್ಪದ ಬೆಂಬಲಕ್ಕೆ ವಿಶ್ವ ನಾಯಕರು ಪ್ರಧಾನಮಂತ್ರಿಯವರನ್ನು ಅಭಿನಂದಿಸಿದ ವಿಶ್ವ ನಾಯಕರು
ಪರಿಸರಕ್ಕೆ ಪೂರಕವಾದ ನೀತಿಗಳ ಅನುಸರಣೆಗಾಗಿ ಭಾರತದ ಬದ್ಧತೆಯಿಂದ ಅಪಾರವಾಗಿ ಉತ್ತೇಜನ ಪಡೆದಿರುವುದಾಗಿ ತಿಳಿಸಿದ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ
ಶ್ರೀ ಗುಟೆರಸ್ ಅವರ ಪೂರ್ವಜರು ಗೋವಾದೊಂದಿಗೆ ನಂಟು ಹೊಂದಿದ್ದಾರೆ, ಅವರನ್ನು ಗುಜರಾತ್ ಗೆ ಸ್ವಾಗತಿಸುವುದು ಕುಟುಂಬದ ಸದಸ್ಯರನ್ನು ಸ್ವಾಗತಿಸಿದಂತೆ: ಪ್ರಧಾನಮಂತ್ರಿ
"ಹವಾಮಾನ ಬದಲಾವಣೆಯು ಕೇವಲ ನೀತಿ ನಿರೂಪಣೆಯನ್ನು ಮೀರಿದ್ದಾಗಿದೆ"
'ಲೈಫ್ ಅಭಿಯಾನ ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟವನ್ನು ಪ್ರಜಾಸತ್ತಾತ್ಮಕಗೊಳಿಸುತ್ತದೆ, ಇದರಲ್ಲಿ ಪ್ರತಿಯೊಬ್ಬರೂ ಕೊಡುಗೆ ನೀಡಬಹುದು'
"ಲೈಫ್ ಅಭಿಯಾನ ನಮ್ಮೆಲ್ಲರನ್ನೂ ಪರಿಸರದ ಧರ್ಮದರ್ಶಿ (ಟ್ರಸ್ಟಿ)ಗಳನ್ನಾಗಿ ಮಾಡುತ್ತದೆ"
"ಲೈಫ್ ಅಭಿಯಾನ ಭೂಮಿಯ ಮೇಲಿನ ಜನರನ್ನು ಗ್ರಹದ ಪರವಾದ ಜನರನ್ನಾಗಿ ಒಗ್ಗೂಡಿಸುತ್ತದೆ"
"ಕಡಿಮೆ ಬಳಕೆ, ಮರುಬಳಕೆ ಮತ್ತು ಪುನರ್ ಬಳಕೆ' ಮತ್ತು ವರ್ತುಲಾಕಾರದ ಆರ್ಥಿಕತೆಯು ಸಾವಿರಾರು ವರ್ಷಗಳಿಂದ ಭಾರತೀಯರ ಜೀವನಶೈಲಿಯ ಭಾಗವಾಗಿದೆ"
"ಪ್ರಗತಿ ಮತ್
Posted On:
20 OCT 2022 1:12PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಘನತೆವೆತ್ತ ಶ್ರೀ ಆಂಟೋನಿಯೊ ಗುಟೆರಸ್ ಅವರೊಂದಿಗೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಪಾಲ್ಗೊಂಡರು. ತದನಂತರ ಗುಜರಾತ್ ನ ಕೆವಾಡಿಯಾದ ಏಕತಾ ನಗರದಲ್ಲಿರುವ ಏಕತಾ ಪ್ರತಿಮೆಯಲ್ಲಿ ಲೈಫ್ ಅಭಿಯಾನಕ್ಕೆ ಚಾಲನೆ ನೀಡಿದರು. ಪ್ರಧಾನಮಂತ್ರಿ ಮತ್ತು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಗಳು ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ವಿಶ್ವಸಂಸ್ಥೆಯ ಎಲ್ಲ ಪ್ರದೇಶಗಳನ್ನು ಪ್ರತಿನಿಧಿಸುವ 11 ರಾಷ್ಟ್ರಗಳ ಮುಖ್ಯಸ್ಥರು ಲೈಫ್ ಅಭಿಯಾನಕ್ಕೆ ಚಾಲನೆ ಕೊಟ್ಟ ಹಿನ್ನೆಲೆಯಲ್ಲಿ ಕಳುಹಿಸಿರುವ ಅಭಿನಂದನಾ ವೀಡಿಯೊ ಸಂದೇಶಗಳನ್ನು ಸಹ ಪ್ರಸಾರ ಮಾಡಲಾಯಿತು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರಿಗೆ ಭಾರತವು ಎರಡನೇ ಮನೆಯಿದ್ದಂತೆ ಮತ್ತು ಅವರು ತಮ್ಮ ಯೌವನದ ದಿನಗಳಲ್ಲಿ ಅನೇಕ ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದರು. ಗುಟೆರಸ್ ಅವರ ಪೂರ್ವಜರು ಭಾರತದ ಗೋವಾ ರಾಜ್ಯದೊಂದಿಗೆ ನಂಟು ಹೊಂದಿದ್ದಾರೆ ಎಂದು ಹೇಳಿದರು. ಭಾರತಕ್ಕೆ ಭೇಟಿ ನೀಡುವ ಅವಕಾಶವನ್ನು ಬಳಸಿಕೊಂಡಿದ್ದಕ್ಕಾಗಿ ಶ್ರೀ ಗುಟೆರಸ್ ಅವರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿಯವರು, ಗುಜರಾತ್ ಗೆ ಅವರನ್ನು ಸ್ವಾಗತಿಸುವುದು ಕುಟುಂಬದ ಸದಸ್ಯನನ್ನು ಸ್ವಾಗತಿಸಿದಂತೆ ಎಂದು ಪ್ರತಿಪಾದಿಸಿದರು.
ಅಭಿಯಾನ ಲೈಫ್ (ಎಲ್.ಐ.ಎಫ್.ಇ.) ಉಪಕ್ರಮವನ್ನು ಕೈಗೆತ್ತಿಕೊಂಡಿದ್ದಕ್ಕಾಗಿ ಭಾರತಕ್ಕೆ ಬೆಂಬಲದ ಸುರಿಮಳೆಗರೆದ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಈ ಸಂದರ್ಭದಲ್ಲಿ ತಮ್ಮ ಅಭಿನಂದನಾ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಎಲ್ಲ ರಾಷ್ಟ್ರಗಳ ಮುಖ್ಯಸ್ಥರಿಗೆ ಧನ್ಯವಾದ ಅರ್ಪಿಸಿದರು. ಹವಾಮಾನ ವೈಪರೀತ್ಯದ ವಿರುದ್ಧದ ಹೋರಾಟದಲ್ಲಿ ಏಕತೆಯ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಮೋದಿ, ಭಾರತದ ಹೆಮ್ಮೆಯ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಬೃಹತ್ ಪ್ರತಿಮೆಯಾದ ಏಕತಾ ಪ್ರತಿಮೆಯ ಮುಂದೆ ಅಭಿಯಾನ ಲೈಫ್ (ಎಲ್.ಐ.ಎಫ್.ಇ.)ಯ ಉದ್ಘಾಟನೆ ನಡೆಯುತ್ತಿದೆ ಎಂದು ಹೇಳಿದರು. "ವಿಶ್ವದ ಅತಿದೊಡ್ಡ ಪ್ರತಿಮೆಯು ನಿಗದಿತ ಗುರಿಗಳನ್ನು ಸಾಧಿಸುವಲ್ಲಿ ಸ್ಫೂರ್ತಿಯ ಸೆಲೆಯಾಗಲಿದೆ" ಎಂದು ಅವರು ಹೇಳಿದರು.
"ಮಾನದಂಡಗಳು ಅಸಾಧಾರಣವಾಗಿದ್ದಾಗ, ದಾಖಲೆಗಳು ದೊಡ್ಡದಾಗಿರುತ್ತವೆ" ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಗುಜರಾತ್ ನಲ್ಲಿ ಚಾಲನೆ ನೀಡುತ್ತಿರುವುದರ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ನವೀಕರಿಸಬಹುದಾದ ಇಂಧನ ಮತ್ತು ಹವಾಮಾನ ಸಂರಕ್ಷಣೆಯ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡ ದೇಶದ ಮೊದಲ ರಾಜ್ಯ ಗುಜರಾತ್ ಆಗಿದೆ ಎಂಬ ಮಾಹಿತಿ ನೀಡಿದರು. ನಾಲೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವುದಾಗಿರಲಿ ಅಥವಾ ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಜಲಸಂರಕ್ಷಣಾ ಯೋಜನೆಗಳನ್ನು ಪ್ರಾರಂಭಿಸುವುದಾಗಿರಲಿ, ಗುಜರಾತ್ ಸದಾ ಮುಂಚೂಣಿಯಲ್ಲಿರುತ್ತದೆ ಮತ್ತು ಅಂತಹ ಪ್ರವೃತ್ತಿಯನ್ನು ರೂಪಿಸುತ್ತದೆ ಎಂದರು.
ಹವಾಮಾನ ವೈಪರೀತ್ಯವು ಕೇವಲ ನೀತಿಗೆ ಸಂಬಂಧಿಸಿದ ವಿಷಯ ಎಂದು ಪ್ರಸಕ್ತ ಚಾಲ್ತಿಯಲ್ಲಿರುವ ಕಲ್ಪನೆಯತ್ತ ಬೊಟ್ಟು ಮಾಡಿದ ಪ್ರಧಾನಮಂತ್ರಿಯವರು, ಇದು ಚಿಂತನಾ ಪ್ರಕ್ರಿಯೆಗೆ ಕಾರಣವಾಗುತ್ತದೆ, ಅದು ಈ ಎಲ್ಲ ಪ್ರಮುಖ ವಿಷಯವನ್ನು ಸರ್ಕಾರ ಅಥವಾ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮಾತ್ರ ಬಿಡುತ್ತದೆ. ಜನರು ತಮ್ಮ ಸುತ್ತಮುತ್ತಲಿನ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ ಮತ್ತು ಕಳೆದ ಕೆಲವು ದಶಕಗಳಲ್ಲಿ ಅನಿರೀಕ್ಷಿತ ವಿಪತ್ತುಗಳು ಸಂಭವಿಸುತ್ತಿವೆ ಎಂದು ಅವರು ಹೇಳಿದರು. ಹವಾಮಾನ ಬದಲಾವಣೆಯು ನೀತಿ ನಿರೂಪಣೆಯನ್ನು ಮೀರಿದ್ದಾಗಿರುತ್ತದೆ ಮತ್ತು ಜನರು ಸ್ವತಃ ತಾವು ಒಬ್ಬ ವ್ಯಕ್ತಿಯಾಗಿ, ಕುಟುಂಬವಾಗಿ ಮತ್ತು ಸಮುದಾಯವಾಗಿ ಪರಿಸರಕ್ಕೆ ಕೊಡುಗೆ ನೀಡಬೇಕು ಎಂಬುದನ್ನು ಮನಗಾಣುತ್ತಿದ್ದಾರೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತಿದೆ ಎಂದರು.
"ಅಭಿಯಾನ ಲೈಫ್ ನ ಮಂತ್ರ 'ಪರಿಸರಕ್ಕಾಗಿ ಜೀವನಶೈಲಿ' ಎಂಬುದಾಗಿದೆ ಎಂದು ಪ್ರಧಾನಮಂತ್ರಿಯವರು, ಅಭಿಯಾನ ಲೈಫ್ (ಎಲ್.ಐ.ಎಫ್.ಇ.) ಪ್ರಯೋಜನಗಳನ್ನು ಒತ್ತಿ ಹೇಳಿ, ಇದು ಈ ಭೂಮಿಯ ರಕ್ಷಣೆಗಾಗಿ ಜನರ ಶಕ್ತಿಗಳನ್ನು ಜೋಡಿಸುತ್ತದೆ ಮತ್ತು ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಕಲಿಸುತ್ತದೆ ಎಂದು ಹೇಳಿದರು. ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟವನ್ನು ಅಭಿಯಾನ ಲೈಫ್ (ಎಲ್.ಐ.ಎಫ್.ಇ.) ಪ್ರಜಾಸತ್ತಾತ್ಮಕಗೊಳಿಸುತ್ತದೆ, ಇದರಲ್ಲಿ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊಡುಗೆ ನೀಡಬಹುದು ಎಂದು ಅವರು ಒತ್ತಿ ಹೇಳಿದರು. "ಪರಿಸರವನ್ನು ರಕ್ಷಿಸಲು ನಮ್ಮ ದೈನಂದಿನ ಜೀವನದಲ್ಲಿ ಮಾಡಬಹುದಾದ ಎಲ್ಲವನ್ನೂ ಮಾಡಲು ಅಭಿಯಾನ ಲೈಫ್ (ಎಲ್.ಐ.ಎಫ್.ಇ.) ನಮ್ಮನ್ನು ಪ್ರೇರೇಪಿಸುತ್ತದೆ. ನಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಪರಿಸರವನ್ನು ರಕ್ಷಿಸಬಹುದು ಎಂದು ಅಭಿಯಾನ ಲೈಫ್ (ಎಲ್.ಐ.ಎಫ್.ಇ.) ಭಾವಿಸುತ್ತದೆ", ಎಂದು ಪ್ರಧಾನಮಂತ್ರಿ ಹೇಳಿದರು. ವಿದ್ಯುತ್ ಬಿಲ್ ಹೊರೆಯನ್ನು ಕಡಿಮೆ ಮಾಡಲು ಮತ್ತು ಪರಿಸರವನ್ನು ರಕ್ಷಿಸಲು ಭಾರತದಲ್ಲಿ ಎಲ್ ಇಡಿ ಬಲ್ಬ್ ಗಳನ್ನು ಅಳವಡಿಸಿಕೊಂಡ ಉದಾಹರಣೆಯನ್ನು ಅವರು ನೀಡಿದರು. "ಇದು ಬೃಹತ್ ಉಳಿತಾಯವಾಗಿದ್ದು, ಪರಿಸರ ಪ್ರಯೋಜನಗಳಿಗೆ ಪೂರಕವಾಯಿತು ಮತ್ತು ಇದು ಪುನರಾವರ್ತಿತ ಶಾಶ್ವತ ಪ್ರಯೋಜನವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು.
ಗುಜರಾತ್ ಮಹಾತ್ಮ ಗಾಂಧಿಯವರ ಜನ್ಮಸ್ಥಳವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, "ಪರಿಸರ ಸಂರಕ್ಷಣೆಯ ಮಹತ್ವವನ್ನು ಬಹಳ ಹಿಂದೆಯೇ ಅರ್ಥಮಾಡಿಕೊಂಡ ಚಿಂತಕರಲ್ಲಿ ಅವರೂ ಒಬ್ಬರಾಗಿದ್ದರು ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಜೀವನವನ್ನು ನಡೆಸುತ್ತಿದ್ದರು. ಅವರು ಧರ್ಮದರ್ಶಿತ್ವ(ಟ್ರಸ್ಟಿ ಶಿಫ್)ದ ಪರಿಕಲ್ಪನೆಯನ್ನು ರೂಪಿಸಿದ್ದರು. ಅಭಿಯಾನ ಲೈಫ್ ನಮ್ಮೆಲ್ಲರನ್ನೂ ಪರಿಸರದ ಧರ್ಮದರ್ಶಿಗಳನ್ನಾಗಿ ಮಾಡುತ್ತದೆ. ಧರ್ಮದರ್ಶಿ (ಟ್ರಸ್ಟಿ) ಎಂದರೆ ಸಂಪನ್ಮೂಲಗಳ ವಿವೇಚನಾರಹಿತ ಬಳಕೆಗೆ ಅವಕಾಶ ನೀಡದ ವ್ಯಕ್ತಿ. ಒಬ್ಬ ಧರ್ಮದರ್ಶಿಯು ಪೋಷಕನಾಗಿ ಕೆಲಸ ಮಾಡುತ್ತಾನೆಯೇ ಹೊರತು ಶೋಷಕನಾಗಿ ಅಲ್ಲ" ಎಂದರು.
ಅಭಿಯಾನ ಲೈಫ್ (ಎಲ್.ಐ.ಎಫ್.ಇ.) ಪಿ 3 ಮಾದರಿ ಅಂದರೆ ಪ್ರೊ ಪ್ಲಾನೆಟ್ ಪೀಪಲ್ (ಭೂಗ್ರಹದ ಪರವಾದ ಜನತೆ) ನ ಸ್ಫೂರ್ತಿಯನ್ನು ಸಾಕಾರಗೊಳಿಸುತ್ತದೆ ಎಂದು ಪ್ರಧಾನಮಂತ್ರಿಯವರು ವಿವರಿಸಿದರು. ಅಭಿಯಾನ ಲೈಫ್, ಭೂಮಿಯ ಮೇಲಿನ ಜನರನ್ನು ಭೂಗ್ರಹಪರವಾದ ಜನರಾಗಿ ಒಗ್ಗೂಡಿಸುತ್ತದೆ, ಅವರೆಲ್ಲರನ್ನೂ ಅವರ ಆಲೋಚನೆಗಳಲ್ಲಿ ಒಂದುಗೂಡಿಸುತ್ತದೆ. ಇದು 'ಗ್ರಹಕ್ಕಾಗಿ, ಗ್ರಹಕ್ಕೋಸ್ಕರ, ಗ್ರಹದಿಂದ ಎಂಬ ಜೀವನಶೈಲಿ' ಎಂಬ ಮೂಲ ತತ್ವಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಗತಕಾಲದ ತಪ್ಪುಗಳಿಂದ ಕಲಿಯುವ ಮೂಲಕ ಮಾತ್ರ ಭವಿಷ್ಯತ್ತಿಗೆ ದಾರಿ ಮಾಡಿಕೊಡಲು ಸಾಧ್ಯ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು ಸಾವಿರಾರು ವರ್ಷಗಳಿಂದ ಪ್ರಕೃತಿಯನ್ನು ಆರಾಧಿಸುವ ಸಂಪ್ರದಾಯವನ್ನು ಹೊಂದಿದೆ ಎಂದು ಅವರು ಸ್ಮರಿಸಿದರು. ವೇದಗಳು ಪ್ರಕೃತಿಯ ಪಂಚಭೂತಗಳಾದ ಜಲ, ಭೂಮಿ, ನೆಲ, ಗಾಳಿ, ಬೆಂಕಿ ಮತ್ತು ನೀರಿನ ಮಹತ್ವವನ್ನು ನಿಖರವಾಗಿ ಉಲ್ಲೇಖಿಸುತ್ತವೆ ಎಂದರು. ಪ್ರಧಾನಮಂತ್ರಿಯವರು ಅಥರ್ವವೇದವನ್ನು ಉಲ್ಲೇಖಿಸಿ, "ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಃ" ಅಂದರೆ, ಭೂಮಿಯೇ ನಮ್ಮ ತಾಯಿ ಮತ್ತು ನಾವು ಅವಳ ಮಕ್ಕಳು" ಎಂದು ತಿಳಿಸಿದರು.
'ಕಡಿಮೆ ಬಳಕೆ, ಮರುಬಳಕೆ ಮತ್ತು ಪುನರ್ ಬಳಕೆ ಮಾಡುವುದು' ಮತ್ತು ವರ್ತುಲಾಕಾರದ ಆರ್ಥಿಕತೆಯ ಪರಿಕಲ್ಪನೆಯ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಇದು ಸಾವಿರಾರು ವರ್ಷಗಳಿಂದ ಭಾರತೀಯರ ಜೀವನಶೈಲಿಯ ಒಂದು ಭಾಗವಾಗಿದೆ ಎಂದು ಉಲ್ಲೇಖಿಸಿದರು. ವಿಶ್ವದ ಇತರ ಭಾಗಗಳ ಬಗ್ಗೆಯೂ ಮಾತನಾಡಿದ ಪ್ರಧಾನಮಂತ್ರಿಯವರು, ಇಂತಹ ಪ್ರಚಲಿತ ಆಚರಣೆಗಳು, ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬಾಳಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದರು. "ಅಭಿಯಾನ ಲೈಫ್ (ಎಲ್.ಐ.ಎಫ್.ಇ.) ಪ್ರಕೃತಿಯ ಸಂರಕ್ಷಣೆಗೆ ಸಂಬಂಧಿಸಿದ ಪ್ರತಿಯೊಂದು ಜೀವನಶೈಲಿಯನ್ನು ಒಳಗೊಂಡಿರುತ್ತದೆ, ಇದನ್ನು ನಮ್ಮ ಪೂರ್ವಜರು ಅಳವಡಿಸಿಕೊಂಡಿದ್ದರು ಮತ್ತು ಅದನ್ನು ಇಂದಿನ ನಮ್ಮ ಜೀವನಶೈಲಿಯ ಭಾಗವಾಗಿಸಬೇಕು" ಎಂದು ಅವರು ಹೇಳಿದರು.
ಹವಾಮಾನ ಬದಲಾವಣೆಯ ಪಿಡುಗನ್ನು ಎದುರಿಸಲು ಭಾರತ ಬದ್ಧವಾಗಿದೆ. ಇಂದು, "ಭಾರತದಲ್ಲಿ ವಾರ್ಷಿಕ ತಲಾ ಇಂಗಾಲದ ಹೆಜ್ಜೆಗುರುತು ವಿಶ್ವದ ಸರಾಸರಿಯಾದ ವರ್ಷಕ್ಕೆ 4 ಟನ್ ಗಳಿಗೆ ಹೋಲಿಸಿದರೆ ಕೇವಲ 1.5 ಟನ್ ಗಳಷ್ಟಿದೆ ಎಂದು ಪ್ರಧಾನಮಂತ್ರಿಯವರು ಮಾಹಿತಿ ನೀಡಿದರು." ಅದೇನೇ ಇದ್ದರೂ, ಹವಾಮಾನ ಬದಲಾವಣೆಯಂತಹ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಭಾರತವು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದೆ. ಉಜ್ವಲ ಯೋಜನೆ, ಪ್ರತಿ ಜಿಲ್ಲೆಯಲ್ಲೂ 75 'ಅಮೃತ ಸರೋವರ'ಗಳ ನಿರ್ಮಾಣ ಮತ್ತು ತ್ಯಾಜ್ಯದಿಂದ ಸಂಪತ್ತಿನ ಸೃಷ್ಟಿಗೆ ಅಭೂತಪೂರ್ವ ಒತ್ತು ನೀಡುವ ಉಪಕ್ರಮಗಳ ಬಗ್ಗೆ ಶ್ರೀ ಮೋದಿ ಅವರು ಉಲ್ಲೇಖಿಸಿದರು. ಇಂದು ಭಾರತವು ವಿಶ್ವದಲ್ಲಿ ನವೀಕರಿಸಬಹುದಾದ ಇಂಧನದ ನಾಲ್ಕನೇ ಅತಿದೊಡ್ಡ ಸಾಮರ್ಥ್ಯವನ್ನು ಹೊಂದಿದೆ. "ಇಂದು ನಾವು ಪವನ ಶಕ್ತಿಯಲ್ಲಿ ನಾಲ್ಕನೇ ಮತ್ತು ಸೌರ ಶಕ್ತಿಯಲ್ಲಿ ಐದನೇ ಸ್ಥಾನದಲ್ಲಿದ್ದೇವೆ. ಕಳೆದ 7-8 ವರ್ಷಗಳಲ್ಲಿ ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ಸುಮಾರು 290 ಪ್ರತಿಶತದಷ್ಟು ಹೆಚ್ಚಾಗಿದೆ. ಗಡುವಿನ 9 ವರ್ಷ ಮುಂಚಿತವಾಗಿ ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ವಿದ್ಯುತ್ ಸಾಮರ್ಥ್ಯದ 40 ಪ್ರತಿಶತವನ್ನು ಸಾಧಿಸುವ ಗುರಿಯನ್ನು ಸಹ ನಾವು ಸಾಧಿಸಿದ್ದೇವೆ. ನಾವು ಪೆಟ್ರೋಲ್ ನಲ್ಲಿ 10 ಪ್ರತಿಶತ ಎಥೆನಾಲ್ ಮಿಶ್ರಣದ ಗುರಿಯನ್ನು ಸಾಧಿಸಿದ್ದೇವೆ, ಅದೂ ಸಹ ಗಡುವಿನ 5 ತಿಂಗಳ ಮೊದಲೇ ಈ ಸಾಧನೆ ಮಾಡಿದ್ದೇವೆ. ರಾಷ್ಟ್ರೀಯ ಜಲಜನಕ ಅಭಿಯಾನ ಮೂಲಕ, ಭಾರತವು ಪರಿಸರ ಸ್ನೇಹಿ ಇಂಧನ ಮೂಲದತ್ತ ಸಾಗಿದೆ. ಇದು ಭಾರತ ಮತ್ತು ವಿಶ್ವದ ಅನೇಕ ದೇಶಗಳು ನಿವ್ವಳ ಶೂನ್ಯದ ತಮ್ಮ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ", ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಗತಿ ಮತ್ತು ಪ್ರಕೃತಿ ಹೇಗೆ ಜೊತೆಜೊತೆಯಾಗಿ ಸಾಗಬಹುದು ಎಂಬುದಕ್ಕೆ ಭಾರತವು ಒಂದು ಪ್ರಮುಖ ಉದಾಹರಣೆಯಾಗಿದೆ. ಈಗ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿರುವುದರಿಂದ, ನಮ್ಮ ಅರಣ್ಯ ಪ್ರದೇಶವೂ ಹೆಚ್ಚುತ್ತಿದೆ ಮತ್ತು ವನ್ಯಜೀವಿಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಅವರು ಹೇಳಿದರು.
ಒಂದು ಸೂರ್ಯ, ಒಂದು ವಿಶ್ವ ಒಂದು ಗ್ರಿಡ್ (ಒನ್ ಸನ್, ಒನ್ ವರ್ಲ್ಡ್, ಒನ್ ಗ್ರಿಡ್) ಎಂಬ ಜಾಗತಿಕ ಅಭಿಯಾನದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಭಾರತವು ಈಗ ವಿಶ್ವದೊಂದಿಗಿನ ತನ್ನ ಪಾಲುದಾರಿಕೆಯನ್ನು ಇನ್ನೂ ಹೆಚ್ಚಿಸಲು ಬಯಸುತ್ತದೆ ಮತ್ತು ಅಂತಹ ಗುರಿಗಳ ಕಡೆಗೆ ತನ್ನ ಸಂಕಲ್ಪವನ್ನು ಬಲಪಡಿಸಲು ಬಯಸುತ್ತದೆ ಎಂದು ಹೇಳಿದರು. "ವಿಪತ್ತು ತಾಳಿಕೊಳ್ಳುವ ಮೂಲಸೌಕರ್ಯಕ್ಕಾಗಿ ಒಕ್ಕೂಟವನ್ನು ರಚಿಸುವ ಮೂಲಕ, ಭಾರತವು ಪರಿಸರ ಸಂರಕ್ಷಣೆಯ ಬಗ್ಗೆ ತನ್ನ ಪರಿಕಲ್ಪನೆಯನ್ನು ಜಗತ್ತಿಗೆ ತಿಳಿಸಿದೆ. ಅಭಿಯಾನ ಲೈಫ್ (ಎಲ್.ಐ.ಎಫ್.ಇ.) ಈ ಸರಣಿಯ ಮುಂದಿನ ಹೆಜ್ಜೆಯಾಗಿದೆ", ಎಂದು ಪ್ರಧಾನಮಂತ್ರಿ ಹೇಳಿದರು.
ಭಾರತ ಮತ್ತು ವಿಶ್ವಸಂಸ್ಥೆ ಒಟ್ಟಾಗಿ ಕೆಲಸ ಮಾಡಿದಾಗಲೆಲ್ಲಾ, ಜಗತ್ತನ್ನು ಉತ್ತಮ ತಾಣವನ್ನಾಗಿ ಮಾಡಲು ಹೊಸ ಮಾರ್ಗಗಳು ಕಂಡುಬಂದಿವೆ ಎಂಬ ಅಂಶವನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. "ಭಾರತವು ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರಸ್ತಾಪಿಸಿತ್ತು, ಇದನ್ನು ವಿಶ್ವಸಂಸ್ಥೆಯು ಬೆಂಬಲಿಸಿತ್ತು. ಇಂದು ಇದು ಆರೋಗ್ಯಕರ ಜೀವನವನ್ನು ನಡೆಸಲು ವಿಶ್ವದಾದ್ಯಂತದ ಲಕ್ಷಾಂತರ ಜನರಿಗೆ ಸ್ಫೂರ್ತಿದಾಯಕವಾಗಿದೆ" ಎಂದು ಅವರು ಹೇಳಿದರು. ವಿಶ್ವಸಂಸ್ಥೆಗೆ ಬೆಂಬಲವನ್ನು ಪಡೆದ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷದ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿಯವರು, ಭಾರತವು ತನ್ನ ಸಾಂಪ್ರದಾಯಿಕ ಮತ್ತು ಪರಿಸರ ಸ್ನೇಹಿ, ಸಿರಿ ಧಾನ್ಯಗಳೊಂದಿಗೆ ಜಗತ್ತನ್ನು ಸಂಪರ್ಕಿಸಲು ಬಯಸುತ್ತದೆ ಎಂದು ಹೇಳಿದರು. ಮುಂದಿನ ವರ್ಷ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವಾಗಿದ್ದು ಈ ಕುರಿತಂತೆ ವಿಶ್ವದಾದ್ಯಂತ ಚರ್ಚಿಸಲಾಗುವುದು ಎಂದು ಅವರು ಹೇಳಿದರು. "ಅಭಿಯಾನ ಲೈಫ್ (ಎಲ್.ಐ.ಎಫ್.ಇ.) ಅದನ್ನು ವಿಶ್ವದ ಮೂಲೆಮೂಲೆಗಳಿಗೆ, ಪ್ರತಿ ದೇಶಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತದೆ" ಎಂದು ಅವರು ಹೇಳಿದರು. "ಪ್ರಕೃತಿ ರಕ್ಷತಿ ರಕ್ಷಿತಾ, ಅಂದರೆ, ಪ್ರಕೃತಿಯನ್ನು ರಕ್ಷಿಸುವವರನ್ನು ಪ್ರಕೃತಿ ರಕ್ಷಿಸುತ್ತದ ಎಂಬ ಈ ಮಂತ್ರವನ್ನು ನೆನಪಿಟ್ಟುಕೊಳ್ಳಬೇಕು. ನಮ್ಮ ಅಭಿಯಾನ ಲೈಫ್ ಅನ್ನು ಅನುಸರಿಸುವ ಮೂಲಕ ನಾವು ಉತ್ತಮ ಜಗತ್ತನ್ನು ನಿರ್ಮಿಸುತ್ತೇವೆ ಎಂದು ನಾನು ಭಾವಿಸುತ್ತೇನೆ" ಎಂದು ಪ್ರಧಾನಮಂತ್ರಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಗೌರವಾನ್ವಿತ ಶ್ರೀ ಆಂಟೋನಿಯೊ ಗುಟೆರಸ್ ಅವರು, ನಮ್ಮ ಗ್ರಹಕ್ಕೆ ಅಪಾಯ ಎದುರಾಗಿರುವ ಈ ಸಮಯದಲ್ಲಿ, ನಮಗೆ ಎಲ್ಲರ ಸಹಕಾರ ಬೇಕು ಎಂದು ಹೇಳಿದರು. ಪರಿಸರಕ್ಕಾಗಿ ಜೀವನಶೈಲಿ - ಲೈಫ್ ಉಪಕ್ರಮವನ್ನು ಅಗತ್ಯ ಮತ್ತು ಭರವಸೆಯ ಸತ್ಯಗಳನ್ನು ಎತ್ತಿ ತೋರಿಸಲು ವಿನ್ಯಾಸಗೊಳಿಸಲಾಗಿದೆ. ನಾವೆಲ್ಲರೂ, ವ್ಯಕ್ತಿಗಳು ಮತ್ತು ಸಮುದಾಯಗಳು, ನಮ್ಮ ಗ್ರಹ ಮತ್ತು ನಮ್ಮ ಸಾಮೂಹಿಕ ಭವಿಷ್ಯವನ್ನು ರಕ್ಷಿಸುವ ಪರಿಹಾರದ ಭಾಗವಾಗಬಹುದು ಮತ್ತು ಭಾಗವಾಗಿರಬೇಕು. ಹವಾಮಾನ, ಬದಲಾವಣೆ, ಜೀವವೈವಿಧ್ಯದ ನಷ್ಟ ಮತ್ತು ಮಾಲಿನ್ಯ ಎಂಬ ತ್ರಿವಳಿ ಅಪಾಯವಿರುವ ಗ್ರಹದ ತುರ್ತು ಪರಿಸ್ಥಿತಿಯ ಮೂಲದಲ್ಲಿ ಅತಿಯಾದ ಬಳಕೆಯೂ ಇದೆ. ನಮ್ಮ ಜೀವನಶೈಲಿಯನ್ನು ಬೆಂಬಲಿಸಲು ನಾವು 1.6 ಭೂಗ್ರಹಕ್ಕೆ ಸಮಾನವಾದ ಭೂಮಿಯನ್ನು ಬಳಸುತ್ತಿದ್ದೇವೆ. ಈ ದೊಡ್ಡ ಮಿತಿಮೀರಿದ ಬಳಕೆ ಹೆಚ್ಚಳವು ದೊಡ್ಡ ಅಸಮಾನತೆಯಿಂದ ಕೂಡಿದೆ ಎಂದು ಅವರು ಹೇಳಿದರು. ಲೈಫ್ (ಎಲ್.ಐ.ಎಫ್.ಇ.) ಆಂದೋಲನದ ಉಪಕ್ರಮಗಳು ಪ್ರಪಂಚದಾದ್ಯಂತ ಹರಡುತ್ತವೆ ಎಂದು ಅವರು ಆಶಿಸಿದರು. "ಪರಿಸರಕ್ಕೆ ಪೂರಕವಾದ ನೀತಿಗಳನ್ನು ಅನುಸರಿಸಲು ಭಾರತ ಮಾಡಿರುವ ಬದ್ಧತೆ ಮತ್ತು ನವೀಕರಿಸಬಹುದಾದ ಇಂಧನದಲ್ಲಿ ಹೂಡಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ಅದರ ಸಂಕಲ್ಪದಿಂದ ತಾವು ಅಪಾರವಾಗಿ ಉತ್ತೇಜನಪಡೆದಿದ್ದಾಗಿ ಹೇಳಿದ ಅವರು, ಭಾರತ ಅಂತಾರಾಷ್ಟ್ರೀಯ ಸೌರ ಸಹಯೋಗವನ್ನು ಬೆಂಬಲಿಸುತ್ತಿದೆ ಎಂದರು. ನಾವು ನವೀಕರಿಸಬಹುದಾದ ಇಂಧನ ಕ್ರಾಂತಿಯನ್ನು ಬಿಚ್ಚಿಡುವ ಅಗತ್ಯವಿದೆ ಮತ್ತು ಈ ಕಾರ್ಯಸೂಚಿಯನ್ನು ಮುನ್ನಡೆಸಲು ಭಾರತದೊಂದಿಗೆ ಶ್ರಮಿಸಲು ನಾನು ಎದುರು ನೋಡುತ್ತಿದ್ದೇನೆ ಎಂದರು. ಈಜಿಪ್ಟ್ ನಲ್ಲಿ ನಡೆಯುವ ಮುಂಬರುವ ಕಾಪ್ 27 ರ ಬಗ್ಗೆ ಮಾತನಾಡಿದ ಮಹಾ ಪ್ರಧಾನ ಕಾರ್ಯದರ್ಶಿಯವರು, ಪ್ಯಾರಿಸ್ ಒಪ್ಪಂದದ ಎಲ್ಲ ಆಧಾರಸ್ತಂಭಗಳಲ್ಲಿ ವಿಶ್ವಾಸವನ್ನು ಬಹಿರಂಗಪಡಿಸಲು ಮತ್ತು ಕ್ರಮಗಳನ್ನು ವೇಗಗೊಳಿಸಲು ಈ ಸಮ್ಮೇಳನವು ಪ್ರಮುಖ ರಾಜಕೀಯ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದರು. "ಹವಾಮಾನದ ಪರಿಣಾಮಗಳು ಮತ್ತು ಅದರ ಬೃಹತ್ ಆರ್ಥಿಕತೆಗೆ ಅದರ ದುರ್ಬಲತೆಯೊಂದಿಗೆ, ಭಾರತವು ನಿರ್ಣಾಯಕ ಸೇತುವೆ ಪಾತ್ರವನ್ನು ವಹಿಸಬಹುದು" ಎಂದು ಅವರು ಹೇಳಿದರು.
ಮಹಾತ್ಮ ಗಾಂಧಿಯನ್ನು ಉಲ್ಲೇಖಿಸಿದ ಗುಟೆರಸ್, "ಜಗತ್ತಿನಲ್ಲಿ ಪ್ರತಿಯೊಬ್ಬರ ಅಗತ್ಯಗಳಿಗೆ ಸಾಕಾಗುವಷ್ಟು ಇದೆಯೇ ಹೊರತು ಪ್ರತಿಯೊಬ್ಬರ ದುರಾಸೆಯಷ್ಟು ಅಲ್ಲ" ಎಂದು ಹೇಳಿದರು. ನಾವು ಭೂಮಿಯ ಸಂಪನ್ಮೂಲಗಳನ್ನು ವಿವೇಚನೆ ಮತ್ತು ಗೌರವದಿಂದ ಪರಿಗಣಿಸಬೇಕು ಎಂದು ಅವರು ಹೇಳಿದರು. ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆರ್ಥಿಕತೆಗಳು ಮತ್ತು ಜೀವನಶೈಲಿಯನ್ನು ಬದಲಾಯಿಸಲು ಪ್ರತಿಜ್ಞೆ ಮಾಡಿದರು, ಇದರಿಂದ ನಾವು ಭೂಮಿಯ ಸಂಪನ್ಮೂಲಗಳನ್ನು ನ್ಯಾಯಯುತವಾಗಿ ಹಂಚಿಕೊಳ್ಳಲು ಮತ್ತು ನಮಗೆ ಅಗತ್ಯವಿರುವುದನ್ನು ಮಾತ್ರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಜಿ-20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವ ಮೂಲಕ ಸುಸ್ಥಿರತೆಯ ಹೊಸ ಯುಗಕ್ಕೆ ನಾಂದಿ ಹಾಡಲು, ಅದರ ಇತಿಹಾಸ, ಅದರ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಸಂಪೂರ್ಣವಾಗಿ ಅನುಗುಣವಾಗಿ ಭಾರತವನ್ನು ನಂಬುವಂತೆ ಅವರು ಎಲ್ಲರನ್ನೂ ಆಗ್ರಹಿಸಿದರು.
ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಶ್ರೀ ಸುಬ್ರಹ್ಮಣ್ಯಂ ಜೈಶಂಕರ್ ಮತ್ತು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಘನತೆವೆತ್ತ ಶ್ರೀ ಆಂಟೋನಿಯೊ ಗುಟೆರಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಸುಸ್ಥಿರತೆಯ ಕಡೆಗೆ ನಮ್ಮ ಸಾಮೂಹಿಕ ವಿಧಾನವನ್ನು ಬದಲಾಯಿಸಲು ಮೂರು ಆಯಾಮದ ಕಾರ್ಯತಂತ್ರವನ್ನು ಅನುಸರಿಸುವ ಗುರಿಯನ್ನು ಅಭಿಯಾನ ಲೈಫ್ (ಎಲ್.ಐ.ಎಫ್.ಇ.) ಹೊಂದಿದೆ. ಮೊದಲನೆಯದು, ತಮ್ಮ ದೈನಂದಿನ ಜೀವನದಲ್ಲಿ (ಬೇಡಿಕೆ) ಸರಳವಾದ ಆದರೆ ಪರಿಣಾಮಕಾರಿಯಾದ ಪರಿಸರ-ಸ್ನೇಹಿ ಕ್ರಿಯೆಗಳನ್ನು ರೂಢಿ ಮಾಡಿಕೊಳ್ಳಲು ವ್ಯಕ್ತಿಗಳನ್ನು ಪ್ರೇರೇಪಿಸುವುದು; ಎರಡನೆಯದು, ಬದಲಾಗುತ್ತಿರುವ ಬೇಡಿಕೆಗೆ (ಪೂರೈಕೆ) ಕೈಗಾರಿಕೆಗಳು ಮತ್ತು ಮಾರುಕಟ್ಟೆಗಳಿಗೆ ತ್ವರಿತವಾಗಿ ಸ್ಪಂದಿಸಲು ಅನುವು ಮಾಡಿಕೊಡುವುದು ಮತ್ತು; ಮೂರನೆಯದು, ಸುಸ್ಥಿರ ಬಳಕೆ ಮತ್ತು ಉತ್ಪಾದನೆ (ನೀತಿ) ಎರಡನ್ನೂ ಬೆಂಬಲಿಸಲು ಸರ್ಕಾರ ಮತ್ತು ಕೈಗಾರಿಕಾ ನೀತಿಯ ಮೇಲೆ ಪ್ರಭಾವ ಬೀರುವುದು.
*****
(Release ID: 1869542)
Visitor Counter : 1290
Read this release in:
Bengali
,
English
,
Urdu
,
Marathi
,
Hindi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam