ಪ್ರಧಾನ ಮಂತ್ರಿಯವರ ಕಛೇರಿ
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮಹಾಕಾಲ್ ಲೋಕ ಯೋಜನೆಯ ಮೊದಲ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ನಂತರ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ ಮಹಾಕಾಲನ ದರ್ಶನ ಮತ್ತು ದೇವರಿಗೆ ಪೂಜೆ, ಆರತಿ ಸಲ್ಲಿಕೆ
"ಉಜ್ಜಯಿನಿ ಸಾವಿರಾರು ವರ್ಷಗಳಿಂದ ಭಾರತದ ಸಂಪತ್ತು ಮತ್ತು ಸಮೃದ್ಧಿ, ಜ್ಞಾನ ಮತ್ತು ಘನತೆ, ನಾಗರಿಕತೆ ಮತ್ತು ಸಾಹಿತ್ಯವನ್ನು ಮುನ್ನಡೆಸಿದೆ”
"ಉಜ್ಜಯಿನಿಯ ಪ್ರತಿಯೊಂದು ಕಣದಲ್ಲೂ ಆಧ್ಯಾತ್ಮಿಕತೆ ಆವರಿಸಿದೆ ಮತ್ತು ಅದು ಪ್ರತಿಯೊಂದು ಮೂಲೆ ಮೂಲೆಗೂ ಅಲೌಕಿಕ ಶಕ್ತಿಯನ್ನು ರವಾನಿಸುತ್ತಿದೆ"
"ಯಶಸ್ಸಿನ ಉತ್ತುಂಗವನ್ನು ತಲುಪಲು, ರಾಷ್ಟ್ರವು ತನ್ನ ಸಾಂಸ್ಕೃತಿಕ ಎತ್ತರವನ್ನು ಮುಟ್ಟುವುದು ಮತ್ತು ತನ್ನ ಅಸ್ಮಿತೆಯೊಂದಿಗೆ ಹೆಮ್ಮೆಯಿಂದ ನಿಲ್ಲುವುದು ಅತ್ಯಗತ್ಯ"
"ಆಜಾದಿ ಕಾ ಅಮೃತ್ ಕಾಲ್ ನಲ್ಲಿ, ಭಾರತವು 'ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಿ' ಮತ್ತು 'ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ' ಯಂತಹ ಪಂಚ ಪ್ರಾಣಗಳಿಗೆ ಕರೆ ನೀಡುತ್ತದೆ.
"ನನ್ನ ಪ್ರಕಾರ, ನಮ್ಮ ಜ್ಯೋತಿರ್ಲಿಂಗಗಳ ಅಭಿವೃದ್ಧಿಯು ಭಾರತದ ಆಧ್ಯಾತ್ಮಿಕ ಬೆಳಕಿನ ಬೆಳವಣಿಗೆ, ಭಾರತದ ಜ್ಞಾನ ಮತ್ತು ತತ್ವಶಾಸ್ತ್ರದ ಬೆಳವಣಿಗೆಯಾಗಿದೆ."
"ಭಾರತದ ಸಾಂಸ್ಕೃತಿಕ ತತ್ವಜ್ಞಾನವು ಮತ್ತೊಮ್ಮೆ ಶಿಖರಶೃಂಗವನ್ನು ತಲುಪುತ್ತಿದೆ ಮತ್ತು ಜಗತ್ತಿಗೆ ಮಾರ್ಗದರ್ಶನ ನೀಡಲು ಸಿದ್ಧವಾಗುತ್ತಿದೆ"
"ಭಾರತವು ತನ್ನ ಆಧ್ಯಾತ್ಮಿಕ ಆತ್ಮವಿಶ್ವಾಸದಿಂದಾಗಿ ಸಾವಿರಾರು ವರ್ಷಗಳಿಂದ ಅಮರವಾಗಿ ಉಳಿದಿದೆ"
"ಭಾರತಕ್ಕೆ ಧರ್ಮವೆಂದರೆ ನಮ್ಮ ಕರ್ತವ್ಯಗಳ ಸಾಮೂಹಿಕ ನಿರ್ಧಾರ"
"ಇಂದಿನ ನವ ಭಾರತವು ತನ್ನ ಪ್ರಾಚೀನ ಮೌಲ್ಯಗಳೊಂದಿಗೆ ಮುಂದುವರಿಯುತ್ತಿದೆ ಮತ್ತು ನಂಬಿಕೆಯ ಜೊತೆಗೆ ವಿಜ್ಞಾನ ಮತ್ತು ಸಂಶೋಧನೆಯ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುತ್ತಿದೆ"
"ಭಾರತವು ತನ್ನ ವೈಭವ ಮತ್ತು ಸಮೃದ್ಧಿಯನ್ನು ಮರುಸ್ಥಾಪಿಸುತ್ತಿದೆ, ಇಡೀ ಜಗತ್ತು ಮತ್ತು ಇಡೀ ಮಾನವಕುಲವು ಇದರಿಂದ ಪ್ರಯೋಜನ ಪಡೆಯುತ್ತದೆ"
"ಭಾರತದ ದೈವಿಕತೆಯು ಶಾಂತಿಯುತ ಜಗತ್ತಿಗೆ ದಾರಿ ಮಾಡಿಕೊಡುತ್ತದೆ."
Posted On:
11 OCT 2022 9:25PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಲ್ ಲೋಕ ಯೋಜನೆಯ ಮೊದಲನೇ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ನಂತರ ಮಹಾಕಾಲ್ ದೇವಾಲಯದ ಒಳ ಗರ್ಭಗುಡಿಯಲ್ಲಿ ಪೂಜೆ ಮತ್ತು ಆರತಿ ನೆರವೇರಿಸಿದರು ಹಾಗು ಆ ಬಳಿಕ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರನ್ನು ಸನ್ಮಾನಿಸಲಾಯಿತು. ನಂತರ ಪ್ರಸಿದ್ಧ ಗಾಯಕ ಶ್ರೀ ಕೈಲಾಶ್ ಖೇರ್ ಅವರಿಂದ ಶ್ರೀ ಮಹಾಕಾಲ್ ನ ಸ್ತುತಿ ಗಾನ ಮತ್ತು ಬೆಳಕು, ಧ್ವನಿ ಹಾಗು ಸುಗಂಧ ಪ್ರದರ್ಶನ ನಡೆಯಿತು.
ಪ್ರಧಾನಮಂತ್ರಿಯವರು ಭಗವಾನ್ ಮಹಾಕಾಲರನ್ನು ಹೊಗಳುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು ಮತ್ತು "ಜೈ ಮಹಾಕಾಲ್! ಉಜ್ಜಯಿನಿಯ ಈ ಶಕ್ತಿ, ಈ ಉತ್ಸಾಹ! ಅವಂತಿಕಾದ ಈ ತೇಜಸ್ಸು, ಈ ಅದ್ಭುತ, ಈ ಆನಂದ! ಮಹಾಕಾಲನ ಈ ಮಹಿಮೆ, ಈ ಶ್ರೇಷ್ಟತೆ ! 'ಮಹಾಕಾಲ ಲೋಕ'ದಲ್ಲಿ ಲೌಕಿಕವಾದುದೇನೂ ಇಲ್ಲ. ಶಂಕರ ದೇವರ ಸಹವಾಸದಲ್ಲಿ ಸಾಮಾನ್ಯವಾದುದೇನೂ ಇಲ್ಲ. ಎಲ್ಲವೂ ಅಲೌಕಿಕ ಮತ್ತು ಅಸಾಧಾರಣ. ಇದು ಅವಿಸ್ಮರಣೀಯ ಮತ್ತು ನಂಬಲಸಾಧ್ಯ." ಎಂದು ಹೇಳಿದರು. ಒಬ್ಬ ವ್ಯಕ್ತಿಯು ಮಹಾಕಾಲನ ಆಶೀರ್ವಾದವನ್ನು ಪಡೆದರೆ, ಆಗ ಕಾಲ (ಸಮಯದ)ದ ಅಸ್ತಿತ್ವವು ಸ್ಥಗಿತಗೊಳ್ಳುತ್ತದೆ, ಸಮಯದ ಗಡಿಗಳು ಕರಗಿಹೋಗುತ್ತವೆ ಮತ್ತು ಶೂನ್ಯದಿಂದ ಅನಂತತೆಯ ಕಡೆಗೆ ಪ್ರಯಾಣವು ಪ್ರಾರಂಭವಾಗುತ್ತದೆ ಎಂದೂ ಪ್ರಧಾನ ಮಂತ್ರಿ ಹೇಳಿದರು.
ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದ ಪ್ರಕಾರ ಉಜ್ಜಯಿನಿ ಭಾರತದ ಕೇಂದ್ರ ಬಿಂದುವಾಗಿರುವುದಲ್ಲದೆ, ಅದು ಭಾರತದ ಆತ್ಮದ ಕೇಂದ್ರವೂ ಆಗಿದೆ ಎಂದು ಪ್ರಧಾನ ಮಂತ್ರಿ ಅವರು ಅಭಿಪ್ರಾಯಪಟ್ಟರು. ಉಜ್ಜಯಿನಿ ಏಳು ಪವಿತ್ರ ಪುರಿಗಳಲ್ಲಿ ಒಂದಾಗಿರುವ ನಗರವಾಗಿದೆ ಮತ್ತು ಭಗವಾನ್ ಕೃಷ್ಣನು ಸ್ವತಃ ಶಿಕ್ಷಣಕ್ಕಾಗಿ ಬಂದ ಸ್ಥಳವಾಗಿದೆ. ಉಜ್ಜಯಿನಿ ರಾಜ ವಿಕ್ರಮಾದಿತ್ಯನ ವೈಭವ ಮತ್ತು ಭಾರತದ ಸುವರ್ಣಯುಗದ ಪ್ರಾರಂಭವನ್ನು ಕಂಡಿದೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಮುಂದುವರೆದು ಉಜ್ಜಯಿನಿ ತನ್ನಷ್ಟಕ್ಕೆ ತಾನೇ ಇತಿಹಾಸವನ್ನು ಒಗ್ಗೂಡಿಸಿದೆ ಎಂದೂ ನುಡಿದರು. "ಉಜ್ಜಯಿನಿಯ ಪ್ರತಿಯೊಂದು ಕಣದಲ್ಲೂ ಆಧ್ಯಾತ್ಮಿಕತೆ ಆವರಿಸಿಕೊಂಡಿದೆ, ಮತ್ತು ಅದು ಪ್ರತಿಯೊಂದು ಮೂಲೆ ಮೂಲೆಗೂ ಅಲೌಕಿಕ ಶಕ್ತಿಯನ್ನು ರವಾನಿಸುತ್ತಿದೆ " ಎಂದು ಅಭಿಪ್ರಾಯಪಟ್ಟ ಪ್ರಧಾನ ಮಂತ್ರಿ ಅವರು "ಉಜ್ಜಯಿನಿ ಸಾವಿರಾರು ವರ್ಷಗಳಿಂದ ಭಾರತದ ಸಂಪತ್ತು ಮತ್ತು ಸಮೃದ್ಧಿ, ಜ್ಞಾನ ಮತ್ತು ಘನತೆ, ನಾಗರಿಕತೆ ಮತ್ತು ಸಾಹಿತ್ಯವನ್ನು ಮುನ್ನಡೆಸಿದೆ" ಎಂದೂ ಹೇಳಿದರು.
"ಯಶಸ್ಸಿನ ಉತ್ತುಂಗವನ್ನು ತಲುಪಲು, ರಾಷ್ಟ್ರವು ತನ್ನ ಸಾಂಸ್ಕೃತಿಕ ಎತ್ತರವನ್ನು ತಲುಪುವುದು ಮತ್ತು ತನ್ನ ಅಸ್ಮಿತೆಯೊಂದಿಗೆ ಹೆಮ್ಮೆಯಿಂದ ನಿಲ್ಲುವುದು ಅತ್ಯಗತ್ಯ" ಎಂದು ಪ್ರಧಾನ ಮಂತ್ರಿ ಅವರು ವಿವರಿಸಿದರು. ಸಾಂಸ್ಕೃತಿಕ ಆತ್ಮವಿಶ್ವಾಸದ ಮಹತ್ವವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, "ಒಂದು ರಾಷ್ಟ್ರದ ಸಾಂಸ್ಕೃತಿಕ ವೈಭವವು ವಿಶ್ವ ವೇದಿಕೆಯಲ್ಲಿ ಅದರ ಯಶಸ್ಸಿನ ಬಾವುಟ ಹಾರಾಡುತ್ತಿರುವಾಗ ಮಾತ್ರ ಅಗಾಧವಾಗಿರುತ್ತದೆ. ಮತ್ತು, ಯಶಸ್ಸಿನ ಉತ್ತುಂಗವನ್ನು ತಲುಪಲು, ರಾಷ್ಟ್ರವು ತನ್ನ ಸಾಂಸ್ಕೃತಿಕ ಉತ್ಕೃಷ್ಟತೆಯನ್ನು ತಲುಪುವುದು ಮತ್ತು ಅದರ ಅಸ್ಮಿತೆಯೊಂದಿಗೆ, ಗುರುತಿಸುವಿಕೆಯೊಂದಿಗೆ ಹೆಮ್ಮೆಯಿಂದ ನಿಲ್ಲುವುದು ಸಹ ಅಗತ್ಯವಾಗಿದೆ." ಅದಕ್ಕಾಗಿಯೇ ಆಜಾದಿ ಕಾ ಅಮೃತ್ ಕಾಲ್ ನಲ್ಲಿ, ಭಾರತವು "ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತ" ಮತ್ತು "ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ" ಯಂತಹ ಪಂಚ ಪ್ರಾಣಗಳಿಗೆ ಕರೆ ನೀಡಿದೆ ಎಂದೂ ಅವರು ಹೇಳಿದರು. ಅದೇ ಉದ್ದೇಶಕ್ಕಾಗಿ, ಅಯೋಧ್ಯೆಯ ಭವ್ಯ ರಾಮ ಮಂದಿರದ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. "ಕಾಶಿಯಲ್ಲಿರುವ ವಿಶ್ವನಾಥ ಧಾಮವು ಭಾರತದ ಸಾಂಸ್ಕೃತಿಕ ರಾಜಧಾನಿಗೆ ಹೆಮ್ಮೆಯನ್ನು ಹೆಚ್ಚಿಸುತ್ತಿದೆ. ಸೋಮನಾಥದಲ್ಲಿ ಅಭಿವೃದ್ಧಿ ಕಾರ್ಯಗಳು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿವೆ. ಉತ್ತರಾಖಂಡದ ಬಾಬಾ ಕೇದಾರ್ ಅವರ ಆಶೀರ್ವಾದದಿಂದ, ಕೇದಾರನಾಥ-ಬದರಿನಾಥ್ ಯಾತ್ರಾ ಪ್ರದೇಶದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯಗಳನ್ನು ಬರೆಯಲಾಗುತ್ತಿದೆ. ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ನಮ್ಮ ನಾಲ್ಕು ಧಾಮ್ ಗಳು ಚಾರ್ ಧಾಮ್ ಯೋಜನೆಯ ಮೂಲಕ ಸರ್ವಋತು ರಸ್ತೆಗಳೊಂದಿಗೆ ಸಂಪರ್ಕ ಸಾಧಿಸಲಿವೆ", ಎಂದು ಪ್ರಧಾನ ಮಂತ್ರಿ ಹೇಳಿದರು. ಸ್ವದೇಶ್ ದರ್ಶನ್ ಮತ್ತು ಪ್ರಸಾದ ಯೋಜನೆಯ ಸಹಾಯದಿಂದ ನಮ್ಮ ಆಧ್ಯಾತ್ಮಿಕ ಪ್ರಜ್ಞೆಯ ಅಂತಹ ಅನೇಕ ಕೇಂದ್ರಗಳ ಹೆಮ್ಮೆಯನ್ನು ದೇಶಾದ್ಯಂತ ಮರುಸ್ಥಾಪಿಸಲಾಗುತ್ತಿದೆ. ಮತ್ತು ಈಗ ಈ ಸರಣಿಯಲ್ಲಿ, ಈ ಭವ್ಯ 'ಮಹಾಕಾಲ್ ಲೋಕ' ಕೂಡ ಭೂತಕಾಲದ ವೈಭವದೊಂದಿಗೆ ಭವಿಷ್ಯವನ್ನು ಸ್ವಾಗತಿಸಲು ಸಿದ್ಧವಾಗಿದೆ", ಎಂದು ಅವರು ಹೇಳಿದರು.
ಪ್ರಧಾನಮಂತ್ರಿಯವರು ಜ್ಯೋತಿರ್ಲಿಂಗಗಳ ಪ್ರಾಮುಖ್ಯತೆಯ, ಮಹತ್ವದ ಕುರಿತಾದ ತಮ್ಮ ಪರಿಕಲ್ಪನೆಯನ್ನು ವಿವರಿಸಿದರು. "ನಮ್ಮ ಜ್ಯೋತಿರ್ಲಿಂಗಗಳ ಈ ಅಭಿವೃದ್ಧಿಯು ಭಾರತದ ಆಧ್ಯಾತ್ಮಿಕ ಬೆಳಕಿನ ಬೆಳವಣಿಗೆ, ಭಾರತದ ಜ್ಞಾನ ಮತ್ತು ತತ್ವಶಾಸ್ತ್ರದ ಅಭಿವೃದ್ಧಿ ಎಂದು ನಾನು ನಂಬುತ್ತೇನೆ. ಭಾರತದ ಈ ಸಾಂಸ್ಕೃತಿಕ ತತ್ವಶಾಸ್ತ್ರವು ಮತ್ತೊಮ್ಮೆ ಉತ್ತುಂಗವನ್ನು ತಲುಪುತ್ತಿದೆ ಮತ್ತು ವಿಶ್ವಕ್ಕೆ ಮಾರ್ಗದರ್ಶನ ನೀಡಲು ಸಿದ್ಧವಾಗುತ್ತಿದೆ. ಭಗವಾನ್ ಮಹಾಕಾಲ ದಕ್ಷಿಣಾಭಿಮುಖವಾಗಿರುವ ಏಕೈಕ ಜ್ಯೋತಿರ್ಲಿಂಗವಾಗಿದೆ ಮತ್ತು ಇವು ಶಿವನ ಅಂತಹ ರೂಪಗಳಾಗಿವೆ, ಇದರ ಭಸ್ಮ ಆರತಿ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ ಎಂದರು. "ಪ್ರತಿಯೊಬ್ಬ ಭಕ್ತನೂ ಖಂಡಿತವಾಗಿಯೂ ತನ್ನ ಜೀವನದಲ್ಲಿ ಭಸ್ಮ ಆರತಿಯನ್ನು ನೋಡಲು ಬಯಸುತ್ತಾನೆ. ಈ ಸಂಪ್ರದಾಯದಲ್ಲಿ ನಮ್ಮ ಭಾರತದ ಜೀವಂತಿಕೆ ಮತ್ತು ರೋಮಾಂಚನವನ್ನು ನಾನು ಕಾಣುತ್ತೇನೆ", ಎಂದು ಶ್ರೀ ಮೋದಿ ಹೇಳಿದರು.
ಭಗವಾನ್ ಶಿವನ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿ ಅವರು "ಸೋಯಂ ಭೂತಿಂ ವಿಭೂಷಣಃ", ಅಂದರೆ, ಬೂದಿಯನ್ನು ಧರಿಸುವವನು ಸಹ 'ಸರ್ವಧಿಂಪಃ ಯಾವಾಗಲೂ' ಎಂದು ಹೇಳಿದರು. ಅವನು ಶಾಶ್ವತ ಮತ್ತು ಅವಿನಾಶಿಯೂ ಆಗಿದ್ದಾನೆ. ಆದ್ದರಿಂದ, ಮಹಾಕಾಲ ಇರುವಲ್ಲಿ, ಅವಧಿಗಳ ಗಡಿಗಳಿಲ್ಲ. "ಮಹಾಕಾಲ್ನ ಆಶ್ರಯಧಾಮದಲ್ಲಿ, ವಿಷದಲ್ಲಿಯೂ ಕಂಪನವಿದೆ. ಮಹಾಕಾಲ್ ಉಪಸ್ಥಿತಿಯಲ್ಲಿ, ಕೊನೆಯ ಹಂತದಿಂದಲೂ ಪುನರುಜ್ಜೀವನ, ಪುನಶ್ಚೇತನವಿದೆ", ಎಂದು ಅವರು ಹೇಳಿದರು.
ರಾಷ್ಟ್ರದ ಜೀವನದಲ್ಲಿ ಆಧ್ಯಾತ್ಮಿಕತೆಯ ಪಾತ್ರದ ಬಗ್ಗೆ ಮತ್ತಷ್ಟು ವಿವರಿಸಿದ ಶ್ರೀ ಮೋದಿ, "ಇದು ನಮ್ಮ ನಾಗರಿಕತೆಯ ಆಧ್ಯಾತ್ಮಿಕ ವಿಶ್ವಾಸವಾಗಿದೆ, ಇದರಿಂದಾಗಿ ಭಾರತವು ಸಾವಿರಾರು ವರ್ಷಗಳಿಂದ ಅಮರವಾಗಿದೆ. ಎಲ್ಲಿಯವರೆಗೆ ನಮ್ಮ ನಂಬಿಕೆಯ ಈ ಕೇಂದ್ರಗಳು ಜಾಗೃತವಾಗಿರುತ್ತವೆಯೋ, ಅಲ್ಲಿಯವರೆಗೆ ಭಾರತದ ಪ್ರಜ್ಞೆ ಜಾಗೃತವಾಗಿರುತ್ತದೆ ಮತ್ತು ಭಾರತದ ಆತ್ಮವು ಜಾಗೃತವಾಗಿರುತ್ತದೆ” ಎಂದರು.
ಇತಿಹಾಸವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು ಉಜ್ಜಯಿನಿಯ ಶಕ್ತಿಯನ್ನು ನಾಶಮಾಡಲು ಪ್ರಯತ್ನಿಸಿದ ಇಲ್ತಮಷ್ ನಂತಹ ಆಕ್ರಮಣಕಾರರ ಬಗ್ಗೆ ಮಾತನಾಡಿದರು. ಈ ಹಿಂದೆ ಭಾರತವನ್ನು ಶೋಷಿಸಲು ಮಾಡಿದ ಪ್ರಯತ್ನಗಳನ್ನು ಶ್ರೀ ಮೋದಿ ಅವರು ಸ್ಮರಿಸಿದರು. ನಮ್ಮ ಋಷಿಮುನಿಗಳನ್ನು ಉಲ್ಲೇಖಿಸಿದ ಅವರು "ಮಹಾಕಾಲ ಶಿವನ ಆಶ್ರಯದಲ್ಲಿ ಸಾವು ನಮಗೆ ಏನು ಮಾಡುತ್ತದೆ? ಎಂದು ಪ್ರಶ್ನಿಸಿದರು. ಮುಂದುವರೆದ ಅವರು, "ಭಾರತವು ಪುನರುಜ್ಜೀವನಗೊಂಡಿತು, ನಂತರ ಈ ಅಧಿಕೃತ ನಂಬಿಕೆಯ ಕೇಂದ್ರಗಳ ಶಕ್ತಿಯಿಂದ ಮತ್ತೆ ಮೇಲೇರಿತು, ಎದ್ದು ನಿಂತಿತು. ಇಂದು ಮತ್ತೊಮ್ಮೆ, ಆಜಾದಿ ಕಾ ಅಮೃತ ಮಹೋತ್ಸವದಲ್ಲಿ, ಅಮರ್ ಅವಂತಿಕಾ ಭಾರತದ ಸಾಂಸ್ಕೃತಿಕ ಅಮರತ್ವವನ್ನು ಘೋಷಿಸುತ್ತಿದೆ." ಎಂದರು.
ಭಾರತಕ್ಕೆ ಧರ್ಮ ಎಂದರೇನು ಎಂಬುದರ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಇದು ನಮ್ಮ ಕರ್ತವ್ಯಗಳ ಸಾಮೂಹಿಕ ನಿರ್ಧಾರವಾಗಿದೆ ಎಂದು ಒತ್ತಿ ಹೇಳಿದರು. "ಲೋಕ ಕಲ್ಯಾಣ ಮತ್ತು ಮಾನವಕುಲದ ಸೇವೆಯೇ ನಮ್ಮ ಸಂಕಲ್ಪಗಳ ಗುರಿಯಾಗಿದೆ." ನಾವು ಶಿವನನ್ನು ಪೂಜಿಸುತ್ತೇವೆ ಮತ್ತು ಇಡೀ ವಿಶ್ವದ ಕಲ್ಯಾಣದಲ್ಲಿ ಅನೇಕ ವಿಧಗಳಲ್ಲಿ ತೊಡಗಿಸಿಕೊಂಡಿರುವ ವಿಶ್ವಪತಿಗೆ ತಲೆಬಾಗುತ್ತೇವೆ ಎಂದವರು ಪುನರುಚ್ಚರಿಸಿದರು. "ಇದು ಭಾರತದ ತೀರ್ಥಯಾತ್ರೆಗಳು, ದೇವಾಲಯಗಳು, ಮಠಗಳು ಮತ್ತು ನಂಬಿಕೆಯ ಕೇಂದ್ರಗಳ ಸ್ಫೂರ್ತಿಯಾಗಿದೆ" ಎಂದು ಅವರು ಹೇಳಿದರು. "ವಿಶ್ವದ ಒಳಿತಿಗಾಗಿ, ಪ್ರಪಂಚದ ಒಳಿತಿಗಾಗಿ ಇಲ್ಲಿ ಎಷ್ಟು ಸ್ಫೂರ್ತಿಗಳು, ಪ್ರೇರಣೆಗಳು ಒದಗಿ ಬರಬಹುದು?", ಎಂದು ಶ್ರೀ ಮೋದಿ ಆಶ್ಚರ್ಯದಿಂದ ಉದ್ಗರಿಸಿದರು.
ಆಧ್ಯಾತ್ಮಿಕತೆ ಮತ್ತು ಶಿಕ್ಷಣದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಕಾಶಿಯಂತಹ ಆಧ್ಯಾತ್ಮಿಕ ಕೇಂದ್ರಗಳು ಧರ್ಮದ ಜೊತೆಗೆ ಜ್ಞಾನ, ತತ್ವಶಾಸ್ತ್ರ ಮತ್ತು ಕಲೆಯ ರಾಜಧಾನಿಯಾಗಿವೆ ಮತ್ತು ಉಜ್ಜಯಿನಿಯಂತಹ ಸ್ಥಳಗಳು ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಸಂಶೋಧನಾ ಕೇಂದ್ರಗಳಾಗಿವೆ ಎಂಬುದರತ್ತ ಗಮನಸೆಳೆದರು. ಇಂದಿನ ನವ ಭಾರತವು ತನ್ನ ಪ್ರಾಚೀನ ಮೌಲ್ಯಗಳೊಂದಿಗೆ ಮುಂದುವರಿಯುತ್ತಿದೆ ಮತ್ತು ನಂಬಿಕೆಯ ಜೊತೆಗೆ ವಿಜ್ಞಾನ ಮತ್ತು ಸಂಶೋಧನೆಯ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುತ್ತಿದೆ ಎಂದೂ ಪ್ರಧಾನಮಂತ್ರಿಯವರು ವಿವರಿಸಿದರು. "ಇಂದು ನಾವು ಖಗೋಳವಿಜ್ಞಾನ ಕ್ಷೇತ್ರದಲ್ಲಿ ವಿಶ್ವದ ದೊಡ್ಡ ಶಕ್ತಿಗಳಿಗೆ ಸಮಾನವಾಗಿ ನಿಂತಿದ್ದೇವೆ." ಎಂದ ಪ್ರಧಾನ ಮಂತ್ರಿ ಅವರು ಚಂದ್ರಯಾನ ಮತ್ತು ಗಗನಯಾನದಂತಹ ಭಾರತದ ಬಾಹ್ಯಾಕಾಶ ಕಾರ್ಯಾಚರಣೆಗಳ ಮೇಲೆ ಬೆಳಕು ಚೆಲ್ಲಿದರು. ಇಂದು ಭಾರತವು ಇತರ ದೇಶಗಳ ಉಪಗ್ರಹಗಳನ್ನು ಸಹ ಬಾಹ್ಯಾಕಾಶಕ್ಕೆ ಉಡಾಯಿಸುತ್ತಿದೆ ಎಂದು ಹೇಳಿದರು. "ಭಾರತವು ಆಕಾಶದಲ್ಲಿ ಆ ನೆಗೆತವನ್ನು ತೆಗೆದುಕೊಳ್ಳಲು ಸಿದ್ಧವಾಗಿದೆ" ಎಂದು ಶ್ರೀ ಮೋದಿ ಹೇಳಿದರು, "ರಕ್ಷಣಾ ಕ್ಷೇತ್ರದಲ್ಲಿ, ಭಾರತವು ಸಂಪೂರ್ಣ ಬಲದಿಂದ ಸ್ವಾವಲಂಬನೆಯತ್ತ ಸಾಗುತ್ತಿದೆ. ಕ್ರೀಡೆಯಿಂದ ಹಿಡಿದು ನವೋದ್ಯಮಗಳವರೆಗೆ ಭಾರತದ ಯುವಕರು ವಿಶ್ವ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದರು.
“ಎಲ್ಲೆಲ್ಲಿ ನಾವಿನ್ಯತೆ ಇದೆಯೋ ಅಲ್ಲಿ ನವೀಕರಣ ನಡೆಯುತ್ತದೆ” ಎಂದು ಪ್ರಧಾನಿ ಹೇಳಿದರು. ಗುಲಾಮಗಿರಿಯ ವರ್ಷಗಳಲ್ಲಿ ಉಂಟಾದ ನಷ್ಟದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, "ಭಾರತವು ತನ್ನ ಹೆಮ್ಮೆ, ಗೌರವ ಮತ್ತು ಪರಂಪರೆಯ ಸ್ಥಳಗಳನ್ನು ನವೀಕರಿಸುವ ಮೂಲಕ ತನ್ನ ವೈಭವವನ್ನು ಮರಳಿ ಪಡೆಯುತ್ತಿದೆ" ಎಂದು ಹೇಳಿದರು. ಇಡೀ ದೇಶ ಮತ್ತು ಮನುಕುಲವು ಅದರ ಪ್ರಯೋಜನಗಳನ್ನು ಪಡೆಯುತ್ತದೆ ಎಂದರು. “ಮಹಾಕಾಲರ ಆಶೀರ್ವಾದದಿಂದ ಭಾರತದ ಭವ್ಯತೆಯು ವಿಶ್ವದಲ್ಲಿ ಅಭಿವೃದ್ಧಿಯ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತದೆ ಮತ್ತು ಭಾರತದ ದೈವಿಕತೆಯು ಶಾಂತಿಯುತ ಜಗತ್ತಿಗೆ ದಾರಿ ಮಾಡಿಕೊಡುತ್ತದೆ” ಎಂದು ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಇಂದು ಮುಂಜಾನೆ, ಪ್ರಧಾನಮಂತ್ರಿ ಅವರು ಉಜ್ಜಯಿನಿಯ ಶ್ರೀ ಮಹಾಕಲ್ ಲೋಕದಲ್ಲಿ ಮಹಾಕಾಲ ಲೋಕ ಯೋಜನೆಯ ಮೊದಲ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಮಧ್ಯಪ್ರದೇಶದ ರಾಜ್ಯಪಾಲ ಶ್ರೀ ಮಂಗುಭಾಯಿ ಪಟೇಲ್, ಛತ್ತೀಸ್ ಗಢದ ರಾಜ್ಯಪಾಲ ಶ್ರೀ ಅನುಸುಯಾ ಉಯಿಕೆ, ಜಾರ್ಖಂಡ್ ರಾಜ್ಯಪಾಲ ಶ್ರೀ ರಮೇಶ್ ಬೈನ್ಸ್ ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಡಾ. ವೀರೇಂದ್ರ ಕುಮಾರ್, ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಶ್ರೀ ಜಿ ಕಿಶನ್ ರೆಡ್ಡಿ, ಕೇಂದ್ರ ಸಹಾಯಕ ಸಚಿವರಾದ ಶ್ರೀ ಫಗ್ಗಾನ್ ಸಿಂಗ್ ಕುಲಸ್ತೆ ಮತ್ತು ಶ್ರೀ ಪ್ರಹ್ಲಾದ್ ಪಟೇಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(Release ID: 1867020)
Visitor Counter : 194
Read this release in:
English
,
Urdu
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam