ಪ್ರಧಾನ ಮಂತ್ರಿಯವರ ಕಛೇರಿ
ಪ್ರಥಮ "ಅರುಣ್ ಜೇಟ್ಲಿ ಸ್ಮಾರಕ ಉಪನ್ಯಾಸ"ದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ
Posted On:
08 JUL 2022 11:24PM by PIB Bengaluru
ನಮಸ್ಕಾರ!
ಇಂದಿನ ದಿನ ನನಗೆ ಸರಿಪಡಿಸಲಾಗದ ನಷ್ಟದ ಮತ್ತು ಅಸಹನೀಯ ನೋವಿನ ದಿನವಾಗಿದೆ. ನನ್ನ ನಿಕಟ ಸ್ನೇಹಿತ ಮತ್ತು ಜಪಾನಿನ ಮಾಜಿ ಪ್ರಧಾನಿ ಶ್ರೀ ಶಿಂಜೊ ಅಬೆ ಅವರು ಈಗ ನಮ್ಮೊಂದಿಗೆ ಇಲ್ಲ. ಶ್ರೀ ಅಬೆ ಅವರು ನನ್ನ ಸ್ನೇಹಿತ ಮಾತ್ರವಲ್ಲ, ಅವರು ಭಾರತದ ಅಷ್ಟೇ ವಿಶ್ವಾಸಾರ್ಹ ಸ್ನೇಹಿತರೂ ಆಗಿದ್ದರು. ಅವರ ಅಧಿಕಾರಾವಧಿಯಲ್ಲಿ ಭಾರತ-ಜಪಾನ್ ರಾಜಕೀಯ ಸಂಬಂಧಗಳು ಹೊಸ ಎತ್ತರವನ್ನು ತಲುಪಿದ್ದಲ್ಲದೆ, ನಾವು ಎರಡೂ ದೇಶಗಳ ಪರಸ್ಪರ ಸಮಾನ ಹಂಚಿಕೊಂಡ ಪರಂಪರೆಯ ಸಂಬಂಧಗಳನ್ನು ಇನ್ನಷ್ಟು ವೃದ್ಧಿಸಿದ್ದೇವೆ. ಭಾರತದ ಅಭಿವೃದ್ಧಿಯ ವೇಗ ಮತ್ತು ಜಪಾನಿನ ಸಹಾಯದಿಂದ ಇಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಂದಾಗಿ ಮುಂದಿನ ವರ್ಷಗಳಲ್ಲಿ ಶ್ರೀ ಶಿಂಜೋ ಅಬೆ ಅವರು ಭಾರತದ ಹೃದಯದಲ್ಲಿ ಉಳಿಯುತ್ತಾರೆ. ನಾನು ಮತ್ತೊಮ್ಮೆ ನನ್ನ ಸ್ನೇಹಿತನಿಗೆ ನನ್ನ ತೀವ್ರವಾದ ದುಃಖ, ಸಂತಾಪಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಇಂದಿನ ಕಾರ್ಯಕ್ರಮವನ್ನು ನನ್ನ ಆಪ್ತ ಸ್ನೇಹಿತ ಅರುಣ್ ಜೇಟ್ಲಿ ಅವರಿಗೆ ಸಮರ್ಪಿಸಲಾಗಿದೆ. ಕಳೆದುಹೋದ ದಿನಗಳನ್ನು ನಾನು ನೆನಪಿಸಿಕೊಂಡಾಗ, ನಾನು ಅವರೊಂದಿಗಿನ ಅನೇಕ ಸಂಭಾಷಣೆಗಳು ಮತ್ತು ಅವರಿಗೆ ಸಂಬಂಧಿಸಿದ ಘಟನೆಗಳನ್ನು ನೆನಪಿಸಿಕೊಳ್ಳುತ್ತೇನೆ ಹಾಗು ಅವರ ಅನೇಕ ಹಳೆಯ ಸ್ನೇಹಿತರನ್ನು ನಾನು ಇಲ್ಲಿ ನೋಡುತ್ತಿದ್ದೇನೆ. ಅವರ ವಾಕ್ಚಾತುರ್ಯದಿಂದ ನಾವು ಗಾಢವಾಗಿ ಪ್ರಭಾವಿತರಾದೆವು ಮತ್ತು ಅವರ ಒನ್-ಲೈನರ್ ಗಳು (ಏಕ ಗೆರೆಯ/ಸಾಲಿನ ವಾಕ್ಯಗಳು) ದೀರ್ಘಕಾಲದವರೆಗೆ ಗಾಳಿಯಲ್ಲಿ ಪ್ರತಿಧ್ವನಿಸುತ್ತಿರುತ್ತವೆ. ಅವರ ವ್ಯಕ್ತಿತ್ವವು ವೈವಿಧ್ಯತೆಯಿಂದ ತುಂಬಿತ್ತು ಮತ್ತು ಅವರ ಸ್ವಭಾವವು ತುಂಬಾ ಸ್ನೇಹಪರವಾಗಿತ್ತು. ನಮ್ಮ ಮುಂದೆ ಇರುವ ಜನರು ಜೀವನದ ವಿವಿಧ ಸ್ತರಗಳಿಂದ ಬಂದವರು ಆದರೆ ಅವರೆಲ್ಲರೂ ಅರುಣ್ ಅವರ ಸ್ನೇಹಿತರಾಗಿದ್ದರು. ಇದು ಅರುಣ್ ಅವರ ಸ್ನೇಹಪರ ಸ್ವಭಾವದ ಗುಣಲಕ್ಷಣವಾಗಿದ್ದು, ಅವರ ವ್ಯಕ್ತಿತ್ವದ ಈ ಗುಣವನ್ನು ಪ್ರತಿಯೊಬ್ಬರೂ ಇಂದಿಗೂ ನೆನಪಿಸಿಕೊಳ್ಳುತ್ತಾರೆ ಮತ್ತು ಅವರನ್ನು ಕಳೆದುಕೊಂಡಿರುವಂತಹ ಭಾವವನ್ನು ಅನುಭವಿಸುತ್ತಿರುತ್ತಾರೆ.
ನಾನು ಅರುಣ್ ಜೇಟ್ಲಿ ಜೀ ಅವರಿಗೆ ನನ್ನ ವಿನಮ್ರ ನಮನಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಅರುಣ್ ಜೀ ಅವರ ಸ್ಮರಣಾರ್ಥ ಈ ಉಪನ್ಯಾಸದ ಶೀರ್ಷಿಕೆಯು 'ಒಳಗೊಳ್ಳುವಿಕೆಯ ಮೂಲಕ ಬೆಳವಣಿಗೆ, ಬೆಳವಣಿಗೆಯ ಮೂಲಕ ಒಳಗೊಳ್ಳುವಿಕೆ'. ಇದು ಸರ್ಕಾರದ ಅಭಿವೃದ್ಧಿ ನೀತಿಯ ಮೂಲ ಮಂತ್ರವಾಗಿದೆ. ನಮ್ಮ ಆಹ್ವಾನವನ್ನು ಸ್ವೀಕರಿಸಿದ್ದಕ್ಕಾಗಿ ಥರ್ಮನ್ (ಷಣ್ಮುಗರತ್ನಂ) ಅವರಿಗೆ ನಾನು ವಿಶೇಷವಾಗಿ ಆಭಾರಿಯಾಗಿದ್ದೇನೆ. ನಾನು ಅವರ ಮಾತುಗಳನ್ನು ಅನೇಕ ಬಾರಿ ಕೇಳಿದ್ದೇನೆ ಮತ್ತು ನಾನು ಅವರ ಕೆಲಸ ಕಾರ್ಯಗಳನ್ನು ಗಮನಿಸುತ್ತಲೇ ಬಂದಿದ್ದೇನೆ. ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಇತರ ದೇಶಗಳಿಗೆ ಹೋದಾಗ, ಅವರು ಸಾಕಷ್ಟು ಸಂಶೋಧನೆಗಳನ್ನು ಮಾಡುತ್ತಾರೆ ಮತ್ತು ಅವರ ಶೈಕ್ಷಣಿಕ ಚಿಂತನೆಯಲ್ಲಿ ಸ್ಥಳೀಯ ಸ್ಪರ್ಶವಿದೆ. ಅವರು ಜಾಗತಿಕ ಪರಿಸ್ಥಿತಿಯನ್ನು ವಿವರಿಸಿದ ರೀತಿ ಮತ್ತು ನಮ್ಮ ದೇಶದ ಮಕ್ಕಳೊಂದಿಗೆ ಸಂಪರ್ಕ ಹೊಂದಿರುವ ರೀತಿಯಲ್ಲಿ ನಾವು ಇಂದು ಅವರ ತತ್ತ್ವಶಾಸ್ತ್ರದ, ತಾತ್ವಿಕತೆಯ ಅನುಭವವನ್ನು ಪಡೆದಿದ್ದೇವೆ. ಈ ಕಾರ್ಯಕ್ರಮಕ್ಕಾಗಿ ಅವರು ತಮ್ಮ ವೇಳಾಪಟ್ಟಿಯಲ್ಲಿ ಸಮಯವನ್ನು ನಿಗದಿ ಮಾಡಿಕೊಂಡು ಬಂದಿರುವುದಕ್ಕಾಗಿ ನಾನು ಅವರಿಗೆ ತುಂಬಾ ಆಭಾರಿಯಾಗಿದ್ದೇನೆ.
ಸ್ನೇಹಿತರೇ,
ಇಂದು ನಾವು ಅರುಣ್ ಜೇಟ್ಲಿಯವರ ಉಪನ್ಯಾಸವನ್ನು ಯಾವ ವಿಷಯ ಶೀರ್ಷಿಕೆಯ ಮೇಲೆ ಪ್ರಾರಂಭಿಸಿದ್ದೇವೆ ಎಂಬುದನ್ನು ನಾನು ಸರಳ ಭಾಷೆಯಲ್ಲಿ ವಿವರಿಸಬೇಕೆಂದಾದರೆ, ಆಗ ಅದು 'ಸಬ್ ಕಾ ಸಾಥ್-ಸಬ್ ಕಾ ವಿಕಾಸ್'. ಆದರೆ ಇದೇ ಸಮಯದಲ್ಲಿ, ಈ ಉಪನ್ಯಾಸದ ವಿಷಯವು ಇಂದಿನ ನೀತಿ ನಿರೂಪಕರು ಎದುರಿಸುತ್ತಿರುವ ಸವಾಲುಗಳು ಮತ್ತು ಸಂದಿಗ್ಧತೆಗಳನ್ನು ಸಹ ಸೆರೆಹಿಡಿಯುತ್ತದೆ.
ನಾನು ನಿಮ್ಮೆಲ್ಲರಿಗೂ ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ಒಳಗೊಳ್ಳುವಿಕೆಯಿಲ್ಲದೆ ಬೆಳವಣಿಗೆ ನಿಜವಾಗಿಯೂ ಸಾಧ್ಯವೇ? ಇದನ್ನು ನಿಮಗೆ ನೀವೇ ಕೇಳಿಕೊಳ್ಳಿ. ಬೆಳವಣಿಗೆಯಿಲ್ಲದೆ ಒಳಗೊಳ್ಳುವಿಕೆಯ ಬಗ್ಗೆ ನಾವು ಯೋಚಿಸಬಹುದೇ?. ನಾನು ಸರ್ಕಾರದ ಮುಖ್ಯಸ್ಥನಾಗಿ 20 ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುವ ಅವಕಾಶವನ್ನು ಪಡೆದಿದ್ದೇನೆ ಮತ್ತು ನನ್ನ ಅನುಭವಗಳ ಸಾರಾಂಶವೆಂದರೆ – ಒಳಗೊಳ್ಳುವಿಕೆ ಇಲ್ಲದೆ, ಎಲ್ಲರ ಸೇರ್ಪಡೆಯಿಲ್ಲದೆ, ನಿಜವಾದ ಬೆಳವಣಿಗೆ ಸಾಧ್ಯವಿಲ್ಲ. ಮತ್ತು ಒಳಗೊಳ್ಳುವಿಕೆಯ ಗುರಿಯು ಬೆಳವಣಿಗೆಯನ್ನು ಒಳಗೊಳ್ಳದೆ ಸಾಧಿಸಲಾಗದು. ಆದ್ದರಿಂದ, ಎಲ್ಲರನ್ನೂ ಒಳಗೊಳ್ಳಲು ಪ್ರಯತ್ನಿಸುವ ಮೂಲಕ ಹಾಗು ಒಳಗೊಳ್ಳುವಿಕೆಯ ಮೂಲಕ ಬೆಳವಣಿಗೆಯ ಮಾರ್ಗವನ್ನು ನಾವು ಅನುಸರಿಸುತ್ತಿದ್ದೇವೆ.
ಕಳೆದ ಎಂಟು ವರ್ಷಗಳಲ್ಲಿ ಎಲ್ಲರನ್ನೂ ಒಳಗೊಳಿಸಿಕೊಳ್ಳುವ ಸೇರ್ಪಡೆ ಕಾರ್ಯಕ್ಕಾಗಿ ಭಾರತವು ಎಷ್ಟು ವೇಗ ಮತ್ತು ಪ್ರಮಾಣದಲ್ಲಿ ಕೆಲಸ ಮಾಡಿದೆ ಎಂದರೆ ಅದಕ್ಕೆ ಸಂಬಂಧಿಸಿ ಇಡೀ ವಿಶ್ವದಲ್ಲಿ ಅಂತಹ ಉದಾಹರಣೆಯನ್ನು ನೀವು ಎಂದಿಗೂ ಕಾಣಲು ಸಾಧ್ಯವಾಗದು. ಕಳೆದ ಎಂಟು ವರ್ಷಗಳಲ್ಲಿ ಭಾರತವು ಒಂಬತ್ತು ಕೋಟಿಗೂ ಹೆಚ್ಚು ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕವನ್ನು ನೀಡಿದೆ. ಈ ಸಂಖ್ಯೆಯು ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಸಿಂಗಾಪುರ ಮತ್ತು ನ್ಯೂಜಿಲ್ಯಾಂಡ್ ನ ಒಟ್ಟು ಜನಸಂಖ್ಯೆಗಿಂತ ಹೆಚ್ಚಾಗಿದೆ. ಈ ಅಗಾಧ ಪ್ರಮಾಣವನ್ನು ನೋಡಿ! ಕಳೆದ ಎಂಟು ವರ್ಷಗಳಲ್ಲಿ ಭಾರತವು ಬಡವರಿಗಾಗಿ 10 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದೆ. ಥರ್ಮನ್ ಜೀ ಈ ಸಾಧನೆಯನ್ನು ಬಹಳ ಭಾವಪೂರ್ಣವಾಗಿ ವಿವರಿಸಿದ್ದಾರೆ. ಈ ಸಂಖ್ಯೆಯು ದಕ್ಷಿಣ ಕೊರಿಯಾದ ಒಟ್ಟು ಜನಸಂಖ್ಯೆಯ ದುಪ್ಪಟ್ಟು ಪ್ರಮಾಣಕ್ಕಿಂತಲೂ ಅಧಿಕವಾದುದಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಭಾರತವು 45 ಕೋಟಿಗೂ ಹೆಚ್ಚು ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆದಿದೆ. ಈ ಸಂಖ್ಯೆಯು ಜಪಾನ್, ಜರ್ಮನಿ, ಬ್ರಿಟನ್, ಇಟಲಿ ಮತ್ತು ಮೆಕ್ಸಿಕೋಗಳ ಒಟ್ಟು ಜನಸಂಖ್ಯೆಗೆ ಸಮನಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಭಾರತವು ಬಡವರಿಗೆ 3 ಕೋಟಿ ಪಕ್ಕಾ ಮನೆಗಳನ್ನು ನೀಡಿದೆ. ಒಮ್ಮೆ ನಾನು ಸಿಂಗಾಪುರದ ಮಂತ್ರಿ ಎಸ್. ಈಶ್ವರನ್ ಅವರಿಗೆ ಈ ಅಂಕಿಅಂಶಗಳನ್ನು ಪ್ರಸ್ತಾಪಿಸಿದ್ದು ನನಗೆ ನೆನಪಿದೆ ಮತ್ತು ಇದು ಪ್ರತಿ ತಿಂಗಳು ಹೊಸ ಸಿಂಗಾಪುರವನ್ನು ನಿರ್ಮಿಸುವಂತಿದೆ ಎಂದು ಅವರು ನನಗೆ ಹೇಳಿದರು.
'ಒಳಗೊಳ್ಳುವಿಕೆಯ ಮೂಲಕ ಬೆಳವಣಿಗೆ, ಬೆಳವಣಿಗೆಯ ಮೂಲಕ ಒಳಗೊಳ್ಳುವಿಕೆ' ಎಂಬುದಕ್ಕೆ ನಾನು ನಿಮಗೆ ಮತ್ತೊಂದು ಉದಾಹರಣೆಯನ್ನು ನೀಡಲು ಬಯಸುತ್ತೇನೆ. ನಾವು ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಾರಂಭಿಸಿದ್ದೇವೆ, ಇದನ್ನು ಥರ್ಮನ್ ಜೀ ಉಲ್ಲೇಖಿಸಿದ್ದಾರೆ. ಆರೋಗ್ಯ ಕ್ಷೇತ್ರವು ಮುಂದಿನ ದಿನಗಳಲ್ಲಿ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುತ್ತದೆ ಎಂಬುದನ್ನೂ ಅವರು ಉಲ್ಲೇಖಿಸಿದರು. ಈ ಯೋಜನೆಯಡಿ, 50 ಕೋಟಿಗೂ ಹೆಚ್ಚು ಬಡವರಿಗೆ ಭಾರತದ ಅತ್ಯುತ್ತಮ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಯನ್ನು ಖಾತ್ರಿಪಡಿಸಲಾಗಿದೆ. 5 ಲಕ್ಷ ರೂಪಾಯಿಗಳವರೆಗೆ 50 ಕೋಟಿ ಜನರಿಗೆ ಉಚಿತ ಚಿಕಿತ್ಸೆ!. ಕಳೆದ ನಾಲ್ಕು ವರ್ಷಗಳಲ್ಲಿ ದೇಶದ 3.5 ಕೋಟಿಗೂ ಹೆಚ್ಚು ಜನರು ಆಯುಷ್ಮಾನ್ ಭಾರತ್ ಅಡಿಯಲ್ಲಿ ಉಚಿತ ಚಿಕಿತ್ಸೆ ಪಡೆದಿದ್ದಾರೆ. ನಾವು ಈ ಯೋಜನೆಯಲ್ಲಿ ಸೇರ್ಪಡೆಯತ್ತ ಗಮನ ಹರಿಸಿದ್ದೇವೆ. ಸಮಾಜದ ಕಟ್ಟಕಡೆಯ ಸಾಲಿನಲ್ಲಿರುವ ಕಡುಬಡವರು ಸಹ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಪಡೆಯಬೇಕು. ಸಮಯ ಕಳೆದಂತೆ, ಸೇರ್ಪಡೆಯ ಅಂಶವೂ ಬೆಳವಣಿಗೆಗೆ ಕಾರಣವಾಯಿತು ಎಂಬುದನ್ನು ನಾವು ನೋಡಿದ್ದೇವೆ. ಈ ಹಿಂದೆ ಹೊರಗಿಡಲ್ಪಟ್ಟವರು ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರಿದರು. ಇದರ ಪರಿಣಾಮವಾಗಿ, ಬೇಡಿಕೆಯು ಹೆಚ್ಚಾಯಿತು ಮತ್ತು ಬೆಳವಣಿಗೆಯ ಅವಕಾಶಗಳು ಸಹ ಏಕಕಾಲದಲ್ಲಿ ವಿಸ್ತರಿಸಿದವು. ಉತ್ತಮ ಆರೋಗ್ಯ ಸೌಲಭ್ಯಗಳಿಂದ ಹೊರಗುಳಿದಿದ್ದ ಭಾರತದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಚಿಕಿತ್ಸೆಗೆ ಪ್ರವೇಶವನ್ನು ಪಡೆದಾಗ, ಅದರ ನೇರ ಪರಿಣಾಮವೆಂದರೆ ಆರೋಗ್ಯ ಆರೈಕೆ ಸಾಮರ್ಥ್ಯವನ್ನು ಅದಕ್ಕೆ ಅನುಗುಣವಾಗಿ ಬಲಪಡಿಸಬೇಕಾಗಿತ್ತು. ಆಯುಷ್ಮಾನ್ ಭಾರತ್ ಯೋಜನೆ ಇಡೀ ಆರೋಗ್ಯ ಕ್ಷೇತ್ರವನ್ನು ಹೇಗೆ ಪರಿವರ್ತಿಸಿದೆ ಎಂಬುದನ್ನು ನಾನು ನಿಮಗೆ ಹೇಳುತ್ತೇನೆ.
2014ಕ್ಕಿಂತ ಮೊದಲು ದೇಶದಲ್ಲಿ 10 ವರ್ಷಗಳ ಅವಧಿಯಲ್ಲಿ ಸರಾಸರಿ 50 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿತ್ತು. ಕಳೆದ ಏಳೆಂಟು ವರ್ಷಗಳಲ್ಲಿ, ಭಾರತದಲ್ಲಿ ಸುಮಾರು 209 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ, ಹಿಂದಿನ ಅಂಕಿ ಅಂಶಗಳಿಗೆ ಹೋಲಿಸಿದಾಗ ಇದು ನಾಲ್ಕು ಪಟ್ಟು ಹೆಚ್ಚಾಗಿದೆ. ಈಗ ನೀವು 50 ಮತ್ತು 209 ರ ನಡುವಿನ ವ್ಯತ್ಯಾಸವನ್ನು ಊಹಿಸಬಹುದು! ಮತ್ತು ಮುಂದಿನ 10 ವರ್ಷಗಳ ಲೆಕ್ಕವನ್ನು ನಾನು ಮಾಡಿದರೆ, ಈ ಸಂಖ್ಯೆ 400 ಕ್ಕೆ ತಲುಪಲಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಭಾರತದಲ್ಲಿ ವೈದ್ಯಕೀಯ ಪದವಿ ಸೀಟುಗಳಲ್ಲಿ ಶೇಕಡಾ 75 ರಷ್ಟು ಹೆಚ್ಚಳವಾಗಿದೆ. ಈಗ ಭಾರತದಲ್ಲಿ ವಾರ್ಷಿಕ ಒಟ್ಟು ವೈದ್ಯಕೀಯ ಸೀಟುಗಳ ಸಂಖ್ಯೆ ಬಹುತೇಕ ದುಪ್ಪಟ್ಟಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ದೇಶವು ಈಗ ಹೆಚ್ಚಿನ ವೈದ್ಯರನ್ನು ಪಡೆಯುತ್ತಿದೆ ಮತ್ತು ಆಧುನಿಕ ವೈದ್ಯಕೀಯ ಮೂಲಸೌಕರ್ಯವನ್ನು ತ್ವರಿತವಾಗಿ ನಿರ್ಮಾಣ ಮಾಡಲಾಗುತ್ತಿದೆ. ಒಳಗೊಳ್ಳುವ ಮೂಲಕ ಬೆಳವಣಿಗಾಗಿ ತಂದ ಯೋಜನೆಯ ಪರಿಣಾಮವನ್ನು ನಾವು ಖಚಿತವಾಗಿ ನೋಡಬಹುದು. ನಾವು ಈ ಅಂಕಿ ಅಂಶವನ್ನು ಪ್ರಮಾಣೀಕರಿಸಬಹುದು. ಮತ್ತು ಅಂತಹ ಡಜನ್ ಗಟ್ಟಲೆ ಯೋಜನೆಗಳನ್ನು ನಾನು ಎಣಿಕೆ ಮಾಡಬಹುದು.
ಥರ್ಮನ್ ಜೀ ಅವರು ಉಲ್ಲೇಖಿಸಿದಂತೆ ಭಾರತದ ಡಿಜಿಟಲ್ ಇಂಡಿಯಾ ಅಭಿಯಾನವು ಸುಮಾರು ಐದು ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅಂತರ್ಜಾಲವು ಹಳ್ಳಿಗಳಲ್ಲಿನ ಕಡುಬಡವರ ಕೈಗೆಟುಕುವಂತೆ ಮಾಡಿದೆ. ಭಾರತದ ಭೀಮ್-ಯುಪಿಐ ಕೋಟ್ಯಂತರ ಬಡವರನ್ನು ಡಿಜಿಟಲ್ ಪಾವತಿ ಸೌಲಭ್ಯದೊಂದಿಗೆ ಸಂಪರ್ಕಿಸಿದೆ. ಭಾರತದ ಸ್ವನಿಧಿ ಯೋಜನೆಯು ನಮ್ಮ ಮಹಾನಗರ ಮುನಿಸಿಪಾಲಿಟಿಗಳಲ್ಲಿನ ಬೀದಿಬದಿ ವ್ಯಾಪಾರಿಗಳಿಗೆ ಒಂದು ಅವಕಾಶವನ್ನು ನೀಡಿದೆ, ಅವರೊಂದಿಗೆ ನಾವು ದೈನಂದಿನ ಸಂಬಂಧವನ್ನು ಹೊಂದಿದ್ದೇವೆ, ಅವರಿಗೆ ಬ್ಯಾಂಕಿಂಗ್ ವ್ಯವಸ್ಥೆಗೆ ಸೇರಲು ಅವಕಾಶ ನೀಡಲಾಗಿದೆ. ಈ ಹಿಂದೆ, ತನ್ನ ಸರಕುಗಳನ್ನು ಬ್ಯಾಂಕ್ ಮ್ಯಾನೇಜರ್ ಗೆ ಮಾರಾಟ ಮಾಡುತ್ತಿದ್ದ ಬೀದಿಬದಿ ವ್ಯಾಪಾರಿಯು ಬ್ಯಾಂಕಿಂಗ್ ವ್ಯವಸ್ಥೆಗೆ ಪ್ರವೇಶವನ್ನು ಹೊಂದಿರಲಿಲ್ಲ, ಆದರೆ ನಾವು ಅದನ್ನು ಸಾಧ್ಯವಾಗಿಸಿದ್ದೇವೆ. ಅಂತೆಯೇ, ಭಾರತವು ಮತ್ತೊಂದು ಕ್ಷೇತ್ರದಲ್ಲಿ ಉತ್ತಮ ಕೆಲಸವನ್ನು ಮಾಡಿದೆ. ಪ್ರಪಂಚದ ಅರ್ಥಶಾಸ್ತ್ರಜ್ಞರು ಇತ್ತೀಚಿನ ದಿನಗಳಲ್ಲಿ ಅದರ ಬಗ್ಗೆ ಸಾಕಷ್ಟು ಬರೆಯುತ್ತಿದ್ದಾರೆ ಮತ್ತು ಪ್ರಮುಖ ಏಜೆನ್ಸಿಗಳು ಸಹ ಅದನ್ನು ರೇಟಿಂಗ್ ಮಾಡುತ್ತಿವೆ.
ಆಶೋತ್ತರಗಳ ಜಿಲ್ಲೆ ಕಾರ್ಯಕ್ರಮವು ಭಾರತದ ಮತ್ತೊಂದು ಉಪಕ್ರಮವಾಗಿದ್ದು, ಇದು ದೇಶದ 100 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಾಸಿಸುವ ಕೋಟ್ಯಂತರ ಜನರ ಪ್ರಗತಿಗೆ ಕಾರಣವಾಗುತ್ತಿದೆ. ಭಾರತದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಹಿಂದುಳಿದ ಜಿಲ್ಲೆಗಳ ಆಶೋತ್ತರಗಳನ್ನು ಈಡೇರಿಸುವುದು ಈ ಕಾರ್ಯಕ್ರಮದ ಚಿಂತನೆಯಾಗಿದೆ. ಆ ಜಿಲ್ಲೆಯನ್ನು, ಅಲ್ಲಿಯ ಜನರನ್ನು ಆ ರಾಜ್ಯದ ಉನ್ನತ ಸ್ಥಾನಕ್ಕೆ ತರುವುದು ಮತ್ತು ನಂತರ ಕ್ರಮೇಣ ಅವರನ್ನು ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನಕ್ಕೆ ತರುವ ಪ್ರಯತ್ನ ಇದಾಗಿದೆ.
ಸ್ನೇಹಿತರೇ,
ಇದು ದೊಡ್ಡ ಸಕಾರಾತ್ಮಕ ಪರಿಣಾಮವನ್ನು ಬೀರಿದೆ, ಮತ್ತು ಈ 100 ಜಿಲ್ಲೆಗಳನ್ನು ಅಭಿವೃದ್ಧಿಯ ಜಗತ್ತಿಗೆ ಸೇರಿಸಲಾಗುತ್ತಿದೆ. ಭಾರತದ ರಾಷ್ಟ್ರೀಯ ಶಿಕ್ಷಣ ನೀತಿಯು ಒಂದು ದೊಡ್ಡ ಮಾದರಿ ಬದಲಾವಣೆಯಾಗಿದೆ ಮತ್ತು ಥರ್ಮನ್ ಜಿ ಕೂಡ ಅದರ ಬಗ್ಗೆ ಸಾಕಷ್ಟು ಒತ್ತು ನೀಡಿದರು. ಇಂಗ್ಲಿಷ್ ಗೊತ್ತಿಲ್ಲದವರು ಮತ್ತು ಹೊರಗುಳಿದವರು ಈಗ ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ ಮಾಡುವ ಮೂಲಕ ಮತ್ತಷ್ಟು ಪ್ರಗತಿ ಸಾಧಿಸುವ ಅವಕಾಶವನ್ನು ಗಳಿಸುತ್ತಾರೆ.
ಭಾರತದ ಉಡಾನ್ ಯೋಜನೆಯು ದೇಶದ ಅನೇಕ ಏರ್ ಸ್ಟ್ರಿಪ್ ಗಳನ್ನು(ಸಣ್ಣ ವಿಮಾನ ನಿಲ್ದಾಣಗಳನ್ನು) ಪುನರುಜ್ಜೀವನಗೊಳಿಸಿದೆ ಮತ್ತು ದೂರದ ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿಯೂ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಿದೆ. ಉಡಾನ್ ಯೋಜನೆಯು ವಿಮಾನ ಪ್ರಯಾಣಕ್ಕೆ ನಿಗದಿತ ದರವನ್ನು ನಿಗದಿ ಮಾಡಿದೆ. ಭಾರತದ ಉಡಾನ್ ಯೋಜನೆಯು ದೇಶದ ವಿವಿಧ ಮೂಲೆಗಳನ್ನು ವಾಯು ಮಾರ್ಗದ ಮೂಲಕ ಜೋಡಿಸಿದೆ ಮತ್ತು ಬಡವರಿಗೆ ವಿಮಾನಗಳಲ್ಲಿ ಹಾರುವ ಧೈರ್ಯವನ್ನು ನೀಡಿದೆ. ಹವಾಯಿ ಚಪ್ಪಲಿಗಳನ್ನು ಧರಿಸುವವರು ಕೂಡಾ ವಿಮಾನದಲ್ಲಿ ಹಾರಲು ಸಾಧ್ಯವಾಗುತ್ತದೆ ಎಂದು ನಾನು ಹೇಳುತ್ತಿದ್ದೆ. ಒಂದು ರೀತಿಯಲ್ಲಿ, ಸೇರ್ಪಡೆ ಮತ್ತು ಬೆಳವಣಿಗೆ ಎರಡೂ ಏಕಕಾಲದಲ್ಲಿ ನಡೆಯುತ್ತಿವೆ. ಇಂದು ಭಾರತದಲ್ಲಿ ವಾಯುಯಾನ ಕ್ಷೇತ್ರವು ಎಷ್ಟು ಬೆಳೆಯುತ್ತಿದೆಯೆಂದರೆ, 1,000 ಕ್ಕೂ ಹೆಚ್ಚು ಹೊಸ ವಿಮಾನಗಳಿಗೆ ಆರ್ಡರ್ ಮಾಡಲಾಗಿದೆ. ಈ ದೇಶದಲ್ಲಿ 1,000 ಕ್ಕೂ ಹೆಚ್ಚು ಹೊಸ ವಿಮಾನಗಳ ಖರೀದಿಗೆ ಪ್ರಯಾಣಿಕರ ಸೇರ್ಪಡೆಯ ನಿಟ್ಟಿನಲ್ಲಿ ನಮ್ಮ ದೋರಣೆಯಿಂದುಂಟಾದ ಪರಿಣಾಮಗಳು ಕಾರಣವಾಗಿವೆ.
ಜಲ ಜೀವನ್ ಮಿಷನ್ ದೇಶದ ಪ್ರತಿಯೊಂದು ಮನೆಯನ್ನು ಕೊಳವೆ ಮೂಲಕ ನೀರು ಸರಬರಾಜು ಮಾಡುವ ಮೂಲಕ ಸಂಪರ್ಕಿಸುತ್ತಿದೆ, ಇದರ ಬಗ್ಗೆ ಥರ್ಮನ್ ಜೀ ಮಾತನಾಡಿದರು, ಮತ್ತು ನಾನು ಗುಜರಾತ್ ನಲ್ಲಿ ಈ ಬಗ್ಗೆ ಬಹಳ ಪ್ರಮುಖವಾಗಿ ಕೆಲಸ ಮಾಡಿದ್ದೇನೆ. ನಳ್ಳಿಗಳಿಂದ ನೀರು ಲಭ್ಯವಾಗುವುದಲ್ಲದೆ, ಇದು ಸಮಯವನ್ನು ಉಳಿಸುತ್ತದೆ ಮತ್ತು ಜನರ ಸಮಸ್ಯೆಗಳನ್ನು ಪರಿಹರಿಸುತ್ತದೆ. ಜನರ ಆರೋಗ್ಯದಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಈ ಆಂದೋಲನವು ಸಾಮಾಜಿಕ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಶುದ್ಧ ಕುಡಿಯುವ ನೀರು ಮಕ್ಕಳಿಗೆ ಪೌಷ್ಠಿಕಾಂಶ ಒದಗಿಸುವಲ್ಲಿ ಪ್ರಮುಖ ವಿಷಯವಾಗಿದೆ ಮತ್ತು ನಮ್ಮ 'ನಲ್ ಸೆ ಜಲ್' (ನಳ್ಳಿಯ ಮೂಲಕ ನೀರು) ಅಭಿಯಾನವು ಆ ಸಮಸ್ಯೆಯನ್ನು ಪರಿಹರಿಸುವ ದೊಡ್ಡ ಆಂದೋಲನದ ಒಂದು ಭಾಗವಾಗಿದೆ. ಕೇವಲ ಮೂರು ವರ್ಷಗಳಲ್ಲಿ, ಈ ಮಿಷನ್ ಆರು ಕೋಟಿಗೂ ಹೆಚ್ಚು ಮನೆಗಳನ್ನು ನೀರಿನ ಸಂಪರ್ಕದೊಂದಿಗೆ ಬೆಸೆದಿದೆ.
ಭಾರತದಲ್ಲಿ ಸರಿಸುಮಾರು, 25 ರಿಂದ 27 ಕೋಟಿ ಮನೆಗಳಿವೆ, ಅವುಗಳಲ್ಲಿ ಆರು ಕೋಟಿ ಮನೆಗಳಿಗೆ ನೀರನ್ನು ಪೂರೈಸಲಾಗಿದೆ. ಇಂದಿನ ಈ ಒಳಗೊಳ್ಳುವಿಕೆಯು ದೇಶದ ಸಾಮಾನ್ಯ ಮನುಷ್ಯನ ಜೀವನವನ್ನು ಸುಲಭಗೊಳಿಸುತ್ತಿದೆ ಮತ್ತು ಮುಂದೆ ಸಾಗಲು, ಪ್ರಗತಿ ಹೊಂದಲು ಅವರನ್ನು ಉತ್ತೇಜಿಸುತ್ತಿದೆ. ಮತ್ತು ಯಾವುದೇ ದೇಶದ ಅಭಿವೃದ್ಧಿಯಲ್ಲಿ ಇದು ಎಷ್ಟು ಮುಖ್ಯ ಎಂಬುದು ಇಲ್ಲಿ ಕುಳಿತಿರುವ ಅರ್ಥಶಾಸ್ತ್ರ ಪ್ರಪಂಚದ ಜನರಿಗೆ ಚೆನ್ನಾಗಿ ತಿಳಿದಿದೆ.
ನಾನು ನಿಮಗೆ ಮತ್ತೊಂದು ಉದಾಹರಣೆಯನ್ನು ನೀಡುತ್ತೇನೆ. ನಿಮಗೂ ತಿಳಿದಿದೆ ಮತ್ತು ವಿಶ್ವಸಂಸ್ಥೆಯಲ್ಲಿಯೂ ಸಹ ಇದನ್ನು ಆಗಾಗ್ಗೆ ಚರ್ಚಿಸಲಾಗುತ್ತಿರುವುದನ್ನು ನಾನು ನೋಡಿದ್ದೇನೆ. ಆಸ್ತಿಯ ಹಕ್ಕು ಅದರ ಅಭಿವೃದ್ಧಿ ಗುರಿಗಳ ಭಾಗವಾಗಿ ಒಂದು ಪ್ರಮುಖ ಎಸ್.ಡಿ.ಜಿ. ವಿಷಯವಾಗಿದೆ. ಅನೇಕ ದೇಶಗಳಲ್ಲಿನ ಆಸ್ತಿ ಹಕ್ಕುಗಳು ದಶಕಗಳಿಂದ ವಿಶ್ವದ ಪ್ರಮುಖ ಸಮಸ್ಯೆಯಾಗಿ ಉಳಿದಿವೆ. ಮತ್ತು ಆಸ್ತಿ ಹಕ್ಕುಗಳ ವಿಷಯಕ್ಕೆ ಬಂದಾಗ, ಅಜ್ಞಾನಿಗಳು ಹೆಚ್ಚು ದುರ್ಬಲರಾಗಿರುತ್ತಾರೆ. ಅವರ ಬಳಿ ಯಾವುದೇ ದಾಖಲೆಗಳಿರುವುದಿಲ್ಲ. ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಈ ದಿಕ್ಕಿನಲ್ಲಿ ಭಾರತವು ಕೆಲಸ ಮಾಡಿದ ವೇಗವು ಅಭೂತಪೂರ್ವವಾಗಿದೆ ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಮತ್ತು ವಿಶ್ವದ ಶಿಕ್ಷಣ ತಜ್ಞರು ಹಾಗು ಅರ್ಥಶಾಸ್ತ್ರಜ್ಞರು ಸ್ವಾಮಿತ್ವ ಯೋಜನೆಯನ್ನು ಅಧ್ಯಯನ ಮಾಡುತ್ತಾರೆ ಮತ್ತು ಈ ಯೋಜನೆಯ ಅಡಿಯಲ್ಲಿ ದೇಶದ ಗ್ರಾಮೀಣ ಪ್ರದೇಶಗಳಲ್ಲಿನ ಮನೆಗಳು ಮತ್ತು ಕಟ್ಟಡಗಳ ನಕ್ಷೆಯ ಕೆಲಸ ಹೇಗೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ ಎಂಬುದನ್ನು ವಿಶ್ವದೊಂದಿಗೆ ಹಂಚಿಕೊಳ್ಳುತ್ತಾರೆ ಎಂದು ನಾನು ನಂಬುತ್ತೇನೆ. ಇಲ್ಲಿಯವರೆಗೆ, ನಾವು ಭಾರತದ 1.5 ಲಕ್ಷ ಹಳ್ಳಿಗಳಲ್ಲಿ ಡ್ರೋನ್ ಗಳ ಸಹಾಯದಿಂದ ಈ ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ಡ್ರೋನ್ ಗಳ ಮೂಲಕ ಸಮೀಕ್ಷೆಯನ್ನು ಮಾಡಲಾಗುತ್ತದೆ ಮತ್ತು ಇಡೀ ಪ್ರಕ್ರಿಯೆಯಲ್ಲಿ ಇಡೀ ಗ್ರಾಮವು ಹಾಜರಿರುತ್ತದೆ ಮತ್ತು ಈ ಸಮೀಕ್ಷೆಯನ್ನು ಡ್ರೋನ್ ಗಳ ಸಹಾಯದೊಂದಿಗೆ 1.5 ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪೂರ್ಣಗೊಳಿಸಲಾಗಿದೆ. 37,000 ಚದರ ಕಿಲೋಮೀಟರ್ ಭೂಮಿಯ ಮ್ಯಾಪಿಂಗ್ ಮಾಡಲಾಗಿದೆ ಮತ್ತು ಮಾಲೀಕರ ಒಪ್ಪಿಗೆಯೊಂದಿಗೆ 80 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಾಪರ್ಟಿ ಕಾರ್ಡುಗಳನ್ನು ರೂಪಿಸಲಾಗಿದೆ. ಇದು ಆಸ್ತಿಗಳ ಮಾಲೀಕರು ಮತ್ತು ಅವರ ನೆರೆಹೊರೆಯ ಜನರೊಂದಿಗೆ ಚರ್ಚೆಗಳನ್ನು ಒಳಗೊಂಡ ಸುದೀರ್ಘ ಪ್ರಕ್ರಿಯೆಯಾಗಿದೆ. ಇದರಿಂದ ಹಳ್ಳಿಗಳ ಜನರಿಗೆ ಬ್ಯಾಂಕ್ ಸಾಲಗಳನ್ನು ಪಡೆಯುವುದು ಸುಲಭವಾಗಿದೆ ಮತ್ತು ಅವರ ಭೂಮಿ ಈಗ ಕಾನೂನು ವಿವಾದಗಳಿಂದ ಮುಕ್ತವಾಗಿದೆ.
ಸ್ನೇಹಿತರೇ,
ಇಂದಿನ ಭಾರತವು ಬಲವಂತದಿಂದ, ಅನಿವಾರ್ಯತೆಯ ಸುಧಾರಣೆಗಳ ಬದಲು ದೃಢನಿಶ್ಚಯದ ಸುಧಾರಣೆಗಳ ಮೂಲಕ ಮುಂದಿನ 25 ವರ್ಷಗಳ ಅವಧಿಗೆ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದೆ. ದೇಶವು ತನ್ನ ಸ್ವಾತಂತ್ರ್ಯದ 100 ನೇ ವರ್ಷವನ್ನು ಆಚರಿಸುವಾಗ ಅದು ಎಲ್ಲಿರುತ್ತದೆ ಎಂಬ ಗುರಿಯೊಂದಿಗೆ, ಇಂದು ನಾವು ಮಾರ್ಗಸೂಚಿಯನ್ನು ಸಿದ್ಧಪಡಿಸುವ ಮೂಲಕ ಮುಂದುವರಿಯುತ್ತಿದ್ದೇವೆ. ದಶಕಗಳ ಹಿಂದೆ, ಬಲವಂತದಿಂದ, ಅನಿವಾರ್ಯತೆಯಿಂದ ಒಂದು ಸುಧಾರಣೆಯನ್ನು ಕೈಗೊಂಡಾಗ, ಅದು ಸಾಂಸ್ಥೀಕರಣಗೊಳ್ಳುವ ಸಾಧ್ಯತೆ, ಭರವಸೆ ಅತ್ಯಲ್ಪವಾಗಿತ್ತು ಎಂಬುದನ್ನು ದೇಶವು ನೋಡಿದೆ.
ಒತ್ತಾಯ ಅಥವಾ ಅನಿವಾರ್ಯತೆ ಕೊನೆಗೊಂಡ ತಕ್ಷಣ, ಸುಧಾರಣೆಯನ್ನು ಸಹ ಮರೆತುಬಿಡಲಾಗುತ್ತದೆ. ಸುಧಾರಣೆಗಳು ಎಷ್ಟು ಮುಖ್ಯವೋ ಪರಿಸರ ಮತ್ತು ಪ್ರೇರಣೆಯೂ ಅಷ್ಟೇ ಮುಖ್ಯ. ಈ ಹಿಂದೆ, ಹಿಂದಿನ ಸರ್ಕಾರಗಳಿಗೆ ಬೇರೆ ಯಾವುದೇ ಆಯ್ಕೆಯಿಲ್ಲದಿದ್ದಾಗ ಮಾತ್ರ ಭಾರತದಲ್ಲಿ ಪ್ರಮುಖ ಸುಧಾರಣೆಗಳು ನಡೆದವು. ನಾವು ಸುಧಾರಣೆಗಳನ್ನು ಒಂದು ಅಗತ್ಯ ಕೆಡುಕು ಎಂದು ಪರಿಗಣಿಸುವುದಿಲ್ಲ, ಆದರೆ ಗೆಲುವು-ಗೆಲುವಿನ ಆಯ್ಕೆಯಾಗಿ ಪರಿಗಣಿಸುತ್ತೇವೆ, ಇದರಲ್ಲಿ ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿ ಇದೆ. ಆದ್ದರಿಂದ, ಕಳೆದ ಎಂಟು ವರ್ಷಗಳಲ್ಲಿ ನಾವು ಕೈಗೊಂಡ ಸುಧಾರಣೆಗಳು ಹೊಸ ಸುಧಾರಣೆಗಳಿಗೆ ದಾರಿ ಮಾಡಿಕೊಟ್ಟಿವೆ.
ಇಂದು ಅರುಣ್ ಜೀ ಎಲ್ಲೇ ಇದ್ದರೂ, ಅವರು ಭಾಗವಹಿಸಿದ್ದ ಆಂದೋಲನದ ಪ್ರಯೋಜನಗಳನ್ನು ದೇಶವು ಪಡೆಯುತ್ತಿದೆ ಎಂದು ತೃಪ್ತಿ ಅವರಿಗಿರುತ್ತದೆ. ಜಿಎಸ್ಟಿ ಅಥವಾ ಐಬಿಸಿ ಕುರಿತ ಚರ್ಚೆಗಳು ವರ್ಷಗಳ ಕಾಲ ನಡೆದವು ಮತ್ತು ಅವುಗಳ ಯಶಸ್ಸು ಇಂದು ನಮ್ಮ ಮುಂದಿದೆ. ಕಂಪೆನಿ ಕಾಯ್ದೆಯನ್ನು ಅಪರಾಧಮುಕ್ತಗೊಳಿಸುವುದು, ಕಾರ್ಪೊರೇಟ್ ತೆರಿಗೆಗಳನ್ನು ಸ್ಪರ್ಧಾತ್ಮಕಗೊಳಿಸುವುದು, ಬಾಹ್ಯಾಕಾಶವನ್ನು ಮುಕ್ತಗೊಳಿಸುವುದು, ಕಲ್ಲಿದ್ದಲು ಗಣಿಗಾರಿಕೆ ಮತ್ತು ಪರಮಾಣು ವಲಯಗಳ ಸುಧಾರಣೆಗಳು ಇಂದು 21 ನೇ ಶತಮಾನದ ಭಾರತದ ವಾಸ್ತವವಾಗಿವೆ.
ಸ್ನೇಹಿತರೇ,
ನಮ್ಮ ನೀತಿಗಳು ಜನರ ನಾಡಿಮಿಡಿತವನ್ನು ಆಧರಿಸಿವೆ. ನಾವು ಹೆಚ್ಚು ಹೆಚ್ಚು ಜನರ ಮಾತುಗಳನ್ನು ಕೇಳುತ್ತೇವೆ ಮತ್ತು ಅವರ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುತ್ತೇವೆ. ಆದ್ದರಿಂದಲೇ ನಾವು ನಮ್ಮ ನೀತಿಗಳನ್ನು ಜನಪ್ರಿಯತೆಯ ಒತ್ತಡಕ್ಕೆ ಒಳಗಾಗಲು ಬಿಡಲಿಲ್ಲ. ಭಾರತವು ಕೋವಿಡ್ ಪರಿಸ್ಥಿತಿಯನ್ನು ಅನುಭವಿಸಿದೆ. ಅದರ ಕಷ್ಟಗಳಿಗೆ ಸಾಕ್ಷಿಯಾಗಿದೆ ಮತ್ತು ಜನರ ನಾಡಿ ಮಿಡಿತಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಜನಪ್ರಿಯತೆಗೆ ಬಲಿಯಾಗುವುದರ ನಡುವಿನ ವ್ಯತ್ಯಾಸವನ್ನು ಜಗತ್ತಿಗೆ ತೋರಿಸಿದೆ. ಜಾಗತಿಕ ಸಾಂಕ್ರಾಮಿಕ ರೋಗದ ಸಮಯದಲ್ಲಿ ವಿಶ್ವದ ಪ್ರಮುಖ ಅರ್ಥಶಾಸ್ತ್ರಜ್ಞರು ಏನು ಹೇಳುತ್ತಿದ್ದರು? ಜಾಗತಿಕ ಸಾಂಕ್ರಾಮಿಕದ ಸಮಯದಲ್ಲಿ, ಬೇಡಿಕೆ-ಚಾಲಿತ ಆರ್ಥಿಕತೆಗೆ ಪರಿಹಾರ ಪ್ಯಾಕೇಜ್ ಗಳಿಗಾಗಿ ವಿಶ್ವದ ಮೇಲೆ ಒತ್ತಡವಿತ್ತು ಮತ್ತು ಅದು ಜನಪ್ರಿಯ ಕ್ರಮವಾಗಿತ್ತು. . ನಾವು ಕೂಡ ಒತ್ತಡದಲ್ಲಿದ್ದೆವು ಮತ್ತು ಏನನ್ನೂ ಮಾಡದಿದ್ದಕ್ಕಾಗಿ ಟೀಕಿಸಲ್ಪಟ್ಟೆವು. ನಮ್ಮ ಬಗ್ಗೆ ಹೇಳದೆ ಉಳಿಸಿದುದಾದರೂ ಏನು?. ಜನರು ಇದನ್ನು ಬಯಸುತ್ತಾರೆ, ತಜ್ಞರು ಇದನ್ನು ಬಯಸುತ್ತಾರೆ ಮತ್ತು ಮಹಾನ್ ವಿದ್ವಾಂಸರು ಇದನ್ನು ಬಯಸುತ್ತಾರೆ ಎಂದು ಸಹ ಹೇಳಲಾಯಿತು. ಆದರೆ ಭಾರತವು ಒತ್ತಡಕ್ಕೆ ಮಣಿಯಲಿಲ್ಲ ಮತ್ತು ವಿವೇಚನೆಯಿಂದ ಶಾಂತವಾಗಿ ಪ್ರತ್ಯೇಕ ವಿಧಾನವನ್ನು ಅನುಸರಿಸಿತು. ಮಹಿಳೆಯರು, ರೈತರು ಮತ್ತು ಎಂಎಸ್ಎಂಇಗಳ ಮೇಲೆ ಗಮನ ಕೇಂದ್ರೀಕರಿಸಿ ನಾವು ಜನತೆ ಮೊದಲು ಎಂಬ ಧೋರಣೆ ಅನುಸರಿಸಿ ಬಡವರಿಗೆ ಭದ್ರತೆಯನ್ನು ಒದಗಿಸಿದ್ದೇವೆ. ಜನರ ನಾಡಿಮಿಡಿತದ ಬಗ್ಗೆ ಅಂದರೆ ಜನರಿಗೆ ಏನು ಬೇಕು ಮತ್ತು ಅವರ ಕಾಳಜಿ ಏನು ಎಂಬುದು ನಮಗೆ ತಿಳಿದಿದ್ದರಿಂದ ನಾವು ಪ್ರಪಂಚ ಯೋಚಿಸುತ್ತಿದ್ದುದಕ್ಕಿಂತ ಭಿನ್ನವಾದ ಏನನ್ನಾದರೂ ಮಾಡಲು ಸಾಧ್ಯವಾಯಿತು? ಆದ್ದರಿಂದ, ಭಾರತ ಮತ್ತು ಪ್ರಪಂಚದ ಉಳಿದ ಭಾಗಗಳ ಚೇತರಿಕೆಯ ನಡುವಿನ ವ್ಯತ್ಯಾಸವನ್ನು ನಾವು ಸ್ಪಷ್ಟವಾಗಿ ನೋಡಬಹುದು.
ಸ್ನೇಹಿತರೇ,
ನಾನು ಆಗಾಗ್ಗೆ ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತದ ಬಗ್ಗೆ ಮಾತನಾಡುತ್ತೇನೆ. ನಮ್ಮ ಸರ್ಕಾರವು ಜನರ ಜೀವನದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದ 1,500 ರಷ್ಟು ಕಾನೂನುಗಳನ್ನು ರದ್ದುಗೊಳಿಸಿದೆ. 2013 ರಲ್ಲಿ ಭಾರತೀಯ ಜನತಾ ಪಕ್ಷ ನನ್ನನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದಾಗ ಮತ್ತು 2014 ರಲ್ಲಿ ಚುನಾವಣೆಗಳು ನಡೆದಾಗ, ವ್ಯಾಪಾರ ಸಂಘದ ಜನರು ದೆಹಲಿಯಲ್ಲಿ ಒಂದು ಕಾರ್ಯಕ್ರಮಕ್ಕೆ ನನ್ನನ್ನು ಕರೆದದ್ದು ನನಗೆ ನೆನಪಿದೆ. ಆಗಿನ ಮನಸ್ಥಿತಿಯು ತುಂಬಾ ಪ್ರತಿಕೂಲವಾಗಿತ್ತು ಮತ್ತು ಅವರು ನನಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು, ನಾನು ನಿರ್ದಿಷ್ಟ ಕಾನೂನುಗಳನ್ನು ಮಾಡುತ್ತೇನೆಯೇ ಅಥವಾ ಇಲ್ಲವೇ. ಚುನಾವಣೆಗೂ ಮುನ್ನ ನಾನು (ಪ್ರಧಾನಿ) ಅಭ್ಯರ್ಥಿಯಾಗಿದ್ದರಿಂದ ನಾನು ಕೂಡ ಒತ್ತಡಕ್ಕೆ ಒಳಗಾಗಿದ್ದೆ. ನಿಮಗೆ ಕಾನೂನುಗಳು ಬೇಕು, ನಾನು ಹೊಸ ಕಾನೂನುಗಳನ್ನು ಖಾತರಿಪಡಿಸಲು ಸಾಧ್ಯವಿಲ್ಲ ಎಂದು ನಾನು ಅವರಿಗೆ ಹೇಳಿದೆ, ಆದರೆ ನಾನು ಪ್ರತಿದಿನ ಒಂದು ಕಾನೂನನ್ನು ರದ್ದುಗೊಳಿಸುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದಿದ್ದೆ. ಸ್ನೇಹಿತರೇ, ಸಾಮಾನ್ಯ ಜನರಿಗೆ ಹೊರೆಯಾಗಿ ಪರಿಣಮಿಸಿದ್ದ 1,500 ಕಾನೂನುಗಳನ್ನು ನಾನು ಮೊದಲ ಐದು ವರ್ಷಗಳಲ್ಲಿ ರದ್ದುಗೊಳಿಸಿದ್ದೇನೆ.
ಸ್ನೇಹಿತರೇ,
ನಮ್ಮ ಸರ್ಕಾರವು 30,000 ಕ್ಕೂ ಹೆಚ್ಚು ಅನುಸರಣೆಗಳನ್ನು ರದ್ದುಗೊಳಿಸಿದೆ ಎಂದು ತಿಳಿದರೆ ನಿಮಗೆ ಸಂತೋಷವಾಗಲಿದೆ, ಇವುಗಳು ಸುಲಭದಲ್ಲಿ ವ್ಯಾಪಾರ ಮಾಡಲು ಮತ್ತು ಅನುಕೂಲಕರ ಜೀವನಕ್ಕೆ ಅಡ್ಡಿಯಾಗಿದ್ದವು. 30,000 ಅನುಸರಣೆಗಳನ್ನು ತೆಗೆದುಹಾಕುವುದು ಎಂದರೆ ಜನರಲ್ಲಿ ಅಭೂತಪೂರ್ವ ನಂಬಿಕೆಯ ಯುಗದ ಉದಯ ಎಂದರ್ಥ. ನಾನು ಕೆಂಪು ಕೋಟೆಯಿಂದ ನನ್ನ ಭಾಷಣದ ಸಮಯದಲ್ಲಿ ಸರ್ಕಾರವು ಸಾಧ್ಯವಾದಷ್ಟು ಜನರ ಜೀವನದಿಂದ ಹೊರಹೋಗಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದೆ. ಜನರ ಜೀವನದಲ್ಲಿ ಸರ್ಕಾರದ ಪ್ರಭಾವವು ಕನಿಷ್ಠವಾಗಿರಬೇಕು, ಆದರೆ ಸರ್ಕಾರದ ಅಗತ್ಯವಿರುವವರು ಅದರ ಅನುಪಸ್ಥಿತಿಯನ್ನು, ಗೈರು ಹಾಜರಿಯನ್ನು ಅನುಭವಿಸಬಾರದು. ನಾವು ಈ ಎರಡು ತತ್ವಗಳನ್ನು ಅನುಸರಿಸಲು ಪ್ರಯತ್ನಿಸಿದ್ದೇವೆ.
ಇಂದು ಕನಿಷ್ಠ ಸರ್ಕಾರ ಎಂಬ ಧೋರಣೆಯು ಗರಿಷ್ಠ ಉತ್ಪಾದನೆಗಳು ಮತ್ತು ಫಲಿತಾಂಶಗಳಿಗೆ ಕಾರಣವಾಗುತ್ತಿದೆ ಎಂದು ನಿಮಗೆ ತಿಳಿಸಲು ನನಗೆ ಅಪಾರ ತೃಪ್ತಿ ಇದೆ. ನಾವು ನಮ್ಮ ಸಾಮರ್ಥ್ಯವನ್ನು ಬಹಳ ವೇಗವಾಗಿ ವಿಸ್ತರಿಸುತ್ತಿದ್ದೇವೆ ಮತ್ತು ಫಲಿತಾಂಶಗಳು ನಿಮ್ಮ ಮುಂದೆ ಇವೆ. ಕೋವಿಡ್ ಲಸಿಕೆಗಳ ಉದಾಹರಣೆಯನ್ನು ತೆಗೆದುಕೊಳ್ಳಿ. ನಮ್ಮ ದೇಶದ ಖಾಸಗಿ ವ್ಯಕ್ತಿಗಳು ಬಹಳ ಗಮನಾರ್ಹವಾದ ಕೆಲಸವನ್ನು ಮಾಡಿದ್ದಾರೆ, ಆದರೆ ಪ್ರಗತಿಯಲ್ಲಿರುವ ಪಾಲುದಾರನಾಗಿ ಸರ್ಕಾರವು ಅವರ ಹಿಂದೆ ಪೂರ್ಣ ಬಲದಿಂದ ಇತ್ತು. ವೈರಸ್ ಪ್ರತ್ಯೇಕಿಸುವಿಕೆಯಿಂದ ಹಿಡಿದು ತ್ವರಿತ ಪ್ರಯೋಗದವರೆಗೆ, ಧನಸಹಾಯದಿಂದ ಹಿಡಿದು ಲಸಿಕೆಗಳ ತ್ವರಿತ ಉತ್ಪಾದನೆಯವರೆಗೆ ಲಸಿಕೆಗಳನ್ನು ಉತ್ಪಾದಿಸುತ್ತಿದ್ದ ಕಂಪನಿಗಳಿಗೆ ಸರ್ಕಾರದಿಂದ ಸಂಪೂರ್ಣ ಬೆಂಬಲ ದೊರೆಯಿತು.
ನಮ್ಮ ಬಾಹ್ಯಾಕಾಶ ಪರಿಸರ ವ್ಯವಸ್ಥೆ ಮತ್ತೊಂದು ಉದಾಹರಣೆಯಾಗಿದೆ. ಇಂದು ಭಾರತವು ಇಡೀ ವಿಶ್ವದ ಅತ್ಯಂತ ವಿಶ್ವಾಸಾರ್ಹ ಮತ್ತು ಅತ್ಯಾಧುನಿಕ ಬಾಹ್ಯಾಕಾಶ ಸೇವೆ ಒದಗಿಸುವ ಸಂಸ್ಥೆಗಳಲ್ಲಿ ಒಂದಾಗಿದೆ. ನಮ್ಮ ಖಾಸಗಿ ವಲಯದ ಪರಿಸರ ವ್ಯವಸ್ಥೆಯು ಈ ಕ್ಷೇತ್ರದಲ್ಲಿಯೂ ಉತ್ತಮ ಕೆಲಸವನ್ನು ಮಾಡುತ್ತಿದೆ. ಆದರೆ ಅವರ ಹಿಂದೆ ಪ್ರಗತಿಯಲ್ಲಿರುವ ಪಾಲುದಾರನ ರೂಪದಲ್ಲಿ ಸರ್ಕಾರದ ಪೂರ್ಣ ಶಕ್ತಿಯೂ ಇದೆ, ಅದು ಪ್ರತಿಯೊಂದು ಸೌಲಭ್ಯ ಮತ್ತು ಮಾಹಿತಿಯನ್ನು ಒದಗಿಸುವ ಮೂಲಕ ಅವರಿಗೆ ಸಹಾಯ ಮಾಡುತ್ತಿದೆ.
ನಾವು ಭಾರತದ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯ ಉದಾಹರಣೆಯನ್ನು ಉಲ್ಲೇಖಿಸಿದಾಗ, ನಾವು ಫಿನ್ಟೆಕ್ ಮತ್ತು ಡಿಜಿಟಲ್ ಪಾವತಿಗಳಿಗೆ ಸಂಬಂಧಿಸಿದ ಅನೇಕ ದೊಡ್ಡ ಕಂಪನಿಗಳನ್ನು ಹೊಂದಿದ್ದೇವೆ. ಇಲ್ಲಿಯೂ ಸಹ, ಜೆ.ಎ.ಎಂ. ತ್ರಿಭುಜ (ಜ್ಯಾಂ ಟ್ರಿನಿಟಿ), ರುಪೇ, ಯುಪಿಐ ಮತ್ತು ಸರ್ಕಾರದ ಬೆಂಬಲಿತ ನೀತಿಗಳು ಅವುಗಳ ಹಿಂದೆ ಬಲವಾದ ನೆಲೆಯನ್ನು ಒದಗಿಸಿವೆ. ನಾನು ನಿಮ್ಮೊಂದಿಗೆ ಕೆಲವು ಉದಾಹರಣೆಗಳನ್ನು ಮಾತ್ರ ಹಂಚಿಕೊಂಡಿದ್ದೇನೆ. ಆದರೆ ಪ್ರಪಂಚಕ್ಕೆ ಇವುಗಳು ಸಂಶೋಧನೆಯ ವಿಷಯಗಳು ಎಂದು ನಾನು ಭಾವಿಸುತ್ತೇನೆ ಮತ್ತು ಶೈಕ್ಷಣಿಕ ಪ್ರಪಂಚವು ಅದರ ಆಳಕ್ಕೆ ಹೋಗಬೇಕೆಂದು ಒತ್ತಿಹೇಳುತ್ತೇನೆ. ಪ್ರಪಂಚದಾದ್ಯಂತದ ಅರ್ಥಶಾಸ್ತ್ರಜ್ಞರನ್ನು ಅದರ ಸೂಕ್ಷ್ಮಗಳನ್ನು ನೋಡುವುದಕ್ಕಾಗಿ ನಾನು ಆಹ್ವಾನಿಸುತ್ತೇನೆ. ಅನೇಕ ವೈವಿಧ್ಯಮಯ ಅಗತ್ಯಗಳನ್ನು ಹೊಂದಿರುವ ಬೃಹತ್ ದೇಶವಾಗಿದ್ದರೂ ನಾವು ಹೇಗೆ ಪ್ರಗತಿ ಸಾಧಿಸುತ್ತಿದ್ದೇವೆ?. ಒಂದು ರೀತಿಯಲ್ಲಿ, ಈಗ ಖಾಸಗಿ ವಲಯ ಅಥವಾ ಸರ್ಕಾರವು ಮಾತ್ರವೇ ಪ್ರಾಬಲ್ಯ ಹೊಂದಿರುವಂತಹ ಅತಿರೇಕದ ಮಾದರಿಗಳು ಹಳೆಯ ಸಂಗತಿಯಾಗುತ್ತಿವೆ. ಪ್ರಗತಿಯಲ್ಲಿರುವ ಪಾಲುದಾರನಾಗಿ ಸರ್ಕಾರವು ಖಾಸಗಿ ವಲಯವನ್ನು ಪ್ರೋತ್ಸಾಹಿಸಬೇಕಾದ ಸಮಯ ಇದು ಮತ್ತು ನಾವು ಈ ದಿಕ್ಕಿನಲ್ಲಿ ಮುಂದುವರಿಯುತ್ತಿದ್ದೇವೆ.
ಸ್ನೇಹಿತರೇ
ದೇಶದ ಸಾರ್ವಜನಿಕ ಮತ್ತು ಖಾಸಗಿ ವಲಯಗಳೆರಡರ ಮೇಲೂ ವಿಶ್ವಾಸವಿಟ್ಟು, ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವ ಈ ಮನೋಭಾವವೇ ಇದಕ್ಕೆ ಕಾರಣ, ಈ ಕಾರಣದಿಂದಾಗಿ ಭಾರತವು ಇಂದು ಬೆಳವಣಿಗೆಯ ಬಗ್ಗೆ ಅದ್ಭುತ ಉತ್ಸಾಹವನ್ನು ತೋರಿಸುತ್ತಿದೆ. ಇಂದು ನಮ್ಮ ರಫ್ತುಗಳು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿವೆ. ಸೇವಾ ವಲಯವು ಸಹ ತ್ವರಿತ ಬೆಳವಣಿಗೆಯತ್ತ ಸಾಗುತ್ತಿದೆ. ಪಿಎಲ್ಐ ಯೋಜನೆಗಳ ಪರಿಣಾಮ ಉತ್ಪಾದನಾ ವಲಯದ ಮೇಲೆ ಗೋಚರಿಸಲು ಪ್ರಾರಂಭಿಸಿದೆ. ಮೊಬೈಲ್ ಫೋನ್ ಗಳು ಸೇರಿದಂತೆ ಇಡೀ ವಿದ್ಯುನ್ಮಾನ ಉತ್ಪಾದನಾ ವಲಯವು ಹಲವು ಪಟ್ಟು ಬೆಳೆದಿದೆ. ಕೊರೋನಾ ಅವಧಿಯಲ್ಲಿ ನಾನು ಆಟಿಕೆಗಳ ಬಗ್ಗೆ ಶೃಂಗಸಭೆ ನಡೆಸಿದಾಗ, ಪ್ರಧಾನಿ ಕೆಲವೊಮ್ಮೆ ಪೊರಕೆಗಳು, ಸ್ವಚ್ಛತೆ ಮತ್ತು ಶೌಚಾಲಯಗಳ ಬಗ್ಗೆ ಮಾತನಾಡುತ್ತಾರೆ ಮತ್ತು ಈಗ ಅವರು ಆಟಿಕೆಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅನೇಕ ಜನರು ಆಶ್ಚರ್ಯಚಕಿತರಾಗಿದ್ದರು. ನನ್ನ ಮಾತುಗಳನ್ನು ಅನೇಕರು ಸರಿಯಾಗಿ ಗ್ರಹಿಸಲಿಲ್ಲ. ಏಕೆಂದರೆ ಅವು ವೈಭವೋಪೇತ ವಿಷಯಗಳಿಗೆ ಸೀಮಿತವಾಗಿದ್ದವು. ನಾನು ಆಟಿಕೆಗಳು ಮತ್ತು ಆಟಿಕೆ ತಯಾರಕರು, ತಂತ್ರಜ್ಞಾನ, ನಾವೀನ್ಯತೆ ಮತ್ತು ಹಣಕಾಸು ವಲಯದ ಮೇಲೆ ಗಮನ ಕೇಂದ್ರೀಕರಿಸಿದೆ. ಅಂದಿನಿಂದ ಎರಡು ವರ್ಷಗಳು ಪೂರ್ಣಗೊಂಡಿಲ್ಲ ಮತ್ತು ಆಟಿಕೆಗಳ ಆಮದು ತುಂಬಾ ಕಡಿಮೆಯಾಗಿದೆ ಎಂದರೆ, ನನ್ನ ದೇಶವಾಸಿಗಳು ಹೆಮ್ಮೆಪಡುತ್ತಾರೆ. ಇಲ್ಲದಿದ್ದರೆ, ನಾವು ನಮ್ಮ ಮನೆಗಳಲ್ಲಿ ವಿದೇಶಿ ನಿರ್ಮಿತ ಆಟಿಕೆಗಳನ್ನು ಹೊಂದಿರುತ್ತಿದ್ದೆವು. ಭಾರತೀಯ ಆಟಿಕೆಗಳು ಈ ಹಿಂದೆ ಆಮದು ಮಾಡಿಕೊಳ್ಳುತ್ತಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತಿವೆ. ಅಂದರೆ, ಅಲ್ಲಿ ಬಳಕೆಯಾಗದ ದೊಡ್ಡ ಸಾಮರ್ಥ್ಯವಿದೆ. ನೀವು ಪ್ರವಾಸೋದ್ಯಮದ ಬಗ್ಗೆ ಮಾತನಾಡಿದ್ದೀರಿ. ನಾನು ನಿಮ್ಮ ಮಾತನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ಭಾರತದ ಪ್ರವಾಸೋದ್ಯಮದ ಸಾಮರ್ಥ್ಯವು ಅಗಾಧವಾಗಿದೆ ಆದರೆ ನಾವು ಎಲ್ಲೋ ಸಿಕ್ಕಿಹಾಕಿಕೊಂಡಿದ್ದೇವೆ. ಭಾರತವನ್ನು ಅದರ ಸಂಪೂರ್ಣ ರೂಪದಲ್ಲಿ ವಿಶ್ವದ ಮುಂದೆ ಪ್ರಸ್ತುತಪಡಿಸುವ ಮನಸ್ಥಿತಿಯನ್ನು ನಾವು ಕಳೆದುಕೊಂಡಿದ್ದೇವೆ. ನಾನು ಯಾವಾಗಲೂ ನನ್ನ ವಿದೇಶಿ ಅತಿಥಿಗಳನ್ನು ಭಾರತದ ಕೆಲವು ಸ್ಥಳಗಳಿಗೆ ಭೇಟಿ ನೀಡುವಂತೆ ಒತ್ತಾಯಿಸುತ್ತೇನೆ. ಈ ವರ್ಷ ನಾವು 75 ಪ್ರಮುಖ ಸ್ಥಳಗಳಲ್ಲಿ ಯೋಗದ ಬಗ್ಗೆ ಕಾರ್ಯಕ್ರಮಗಳನ್ನು ನಡೆಸಿದ್ದೇವೆ, ಇದರಿಂದ ಜನರು ನಮ್ಮ ಪ್ರವಾಸಿ ತಾಣಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಪ್ರವಾಸೋದ್ಯಮದ ಸಾಮರ್ಥ್ಯವು ಭಾರತದಲ್ಲಿ ಎಷ್ಟಿದೆಯೆಂದರೆ ಅದು ವಿಶ್ವದ ಪ್ರಮುಖ ಆಕರ್ಷಣೆಯಾಗಬಹುದು ಎಂದು ನೀವು ಸರಿಯಾಗಿಯೇ ಹೇಳಿದ್ದೀರಿ.
ಸ್ನೇಹಿತರೇ,
ನಮ್ಮ ಡಿಜಿಟಲ್ ಅರ್ಥವ್ಯವಸ್ಥೆ ಕೂಡ ವೇಗವಾಗಿ ಬೆಳೆಯುತ್ತಿದೆ. ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯದಲ್ಲಿ ದಾಖಲೆಯ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಅಂದರೆ, ನಮ್ಮ ಬೆಳವಣಿಗೆಯ ಎಂಜಿನ್ ಗೆ ಸಂಬಂಧಿಸಿದ ಪ್ರತಿಯೊಂದು ವಲಯವು ಇಂದು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸ್ನೇಹಿತರೇ,
ಸ್ವಾತಂತ್ರ್ಯದ 'ಅಮೃತ್ ಕಾಲ್' ಭಾರತಕ್ಕೆ ಅಸಂಖ್ಯಾತ ಹೊಸ ಅವಕಾಶಗಳನ್ನು ತರುತ್ತಿದೆ. ನಮ್ಮ ದೃಢನಿಶ್ಚಯವು ಗಟ್ಟಿಯಾಗಿದೆ ಮತ್ತು ನಮ್ಮ ಉದ್ದೇಶವು ಅಚಲವಾಗಿದೆ. ನಾವು ನಮ್ಮ ನಿರ್ಣಯಗಳನ್ನು ಈಡೇರಿಸುತ್ತೇವೆ ಮತ್ತು 21 ನೇ ಶತಮಾನದಲ್ಲಿ ಭಾರತವು ಅರ್ಹವಾದ ಎತ್ತರವನ್ನು ಸಾಧಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಮತ್ತು ಥರ್ಮನ್ ಜೀ ಕೆಲವು ಸವಾಲುಗಳನ್ನು ಉಲ್ಲೇಖಿಸಿದ್ದಾರೆ, ಸವಾಲುಗಳಿವೆ ಎಂದು ನಾನು ಒಪ್ಪುತ್ತೇನೆ. ಆದರೆ ಸವಾಲುಗಳು ಇದ್ದರೆ, 130 ಕೋಟಿ ಪರಿಹಾರಗಳೂ ಇವೆ. ಇದು ನನ್ನ ನಂಬಿಕೆ ಮತ್ತು ಸವಾಲುಗಳಿಗೇ ನಾವು ಸವಾಲುಗಳನ್ನು ಹಾಕುವ ಮೂಲಕ ಮುನ್ನಡೆಯುವ ಸಂಕಲ್ಪವನ್ನು ಮಾಡಿದ್ದೇವೆ. ಆದ್ದರಿಂದ, ನಾವು ಒಳಗೊಳ್ಳುವಿಕೆಯ ಮಾರ್ಗವನ್ನು ಆರಿಸಿಕೊಂಡಿದ್ದೇವೆ ಮತ್ತು ಅದೇ ಮಾರ್ಗದ ಮೂಲಕ ಬೆಳವಣಿಗೆಯನ್ನು ಸಾಧಿಸಲು ನಾವು ಉದ್ದೇಶಿಸಿದ್ದೇವೆ. ಅರುಣ್ ಜೀ ಅವರನ್ನು ಮತ್ತೊಮ್ಮೆ ನೆನಪಿಸಿಕೊಂಡು, ನಾನು ನನ್ನ ಭಾಷಣವನ್ನು ಕೊನೆಗೊಳಿಸುತ್ತೇನೆ. ಥರ್ಮನ್ ಜೀ ಅವರಿಗೆ ವಿಶೇಷ ಧನ್ಯವಾದಗಳು! ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಧನ್ಯವಾದಗಳು!
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
************
(Release ID: 1842403)
Visitor Counter : 191
Read this release in:
Telugu
,
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Malayalam