ಪ್ರಧಾನ ಮಂತ್ರಿಯವರ ಕಛೇರಿ

ವಾರಾಣಸಿಯ ಸಿಗ್ರಾದಲ್ಲಿ ಬಹು ಅಭಿವೃದ್ಧಿ ಉಪಕ್ರಮಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ

Posted On: 07 JUL 2022 7:48PM by PIB Bengaluru

ಹರ ಹರ ಮಹಾದೇವ!

ಕಾಶಿಯು 'ಸಾತ್ ವರ್, ನೌ ತ್ಯೋಹರ್' ಅಂದರೆ ವಾರದ ಏಳು ದಿನಗಳಲ್ಲಿ ಒಂಬತ್ತು ಉತ್ಸವಗಳಿಗೆ ಹೆಸರುವಾಸಿಯಾಗಿದೆ. ಅದರರ್ಥ, ಇಲ್ಲಿ ಪ್ರತಿದಿನ ಹೊಸ ಉತ್ಸವಗಳನ್ನು ನಡೆಸಲಾಗುತ್ತದೆ,  ಆಚರಿಸಲಾಗುತ್ತದೆ. ಇಂದು ಈ ಸಂದರ್ಭದಲ್ಲಿ ಇಲ್ಲಿ ನೆರೆದಿರುವ ನಿಮ್ಮೆಲ್ಲರಿಗೂ ಶುಭಾಶಯಗಳು!

ಉತ್ತರ ಪ್ರದೇಶದ ರಾಜ್ಯಪಾಲರಾದ  ಆನಂದಿಬೆನ್ ಪಟೇಲ್ ಜೀ, ಗೌರವಾನ್ವಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ, ಉತ್ತರ ಪ್ರದೇಶ ಸರ್ಕಾರದ ಸಚಿವರು, ಸಂಸದರು, ಎಲ್ಲಾ ಶಾಸಕರು ಮತ್ತು ವಾರಾಣಸಿಯ ನನ್ನ ಸಹೋದರ ಮತ್ತು ಸಹೋದರಿಯರೇ!

ನಾನು ಮೊದಲು ನಿಮ್ಮೆಲ್ಲರಿಗೂ ನನ್ನ ಹೃದಯಾಂತರಾಳದಿಂದ ಧನ್ಯವಾದ ಹೇಳಲು ಬಯಸುತ್ತೇನೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ, ನಾನು ನಿಮ್ಮ ಬಳಿಗೆ ಬಂದಿದ್ದೆ ಮತ್ತು ಉತ್ತರ ಪ್ರದೇಶದಲ್ಲಿ ಮತ್ತೆ ಸರ್ಕಾರ ರಚಿಸಲು ನಿಮ್ಮ ಸಹಾಯವನ್ನು ಕೇಳಿದ್ದೆ. ನೀವು, ಉತ್ತರ ಪ್ರದೇಶದ ಜನರು ಮತ್ತು ಕಾಶಿಯ ಜನರು ನನಗೆ ನೀಡಿದ ಅತ್ಯಂತ ಉತ್ಸಾಹಭರಿತ ಬೆಂಬಲ ನನಗೆ ಅತೀವ ಸಂತೋಷ ತಂದಿದೆ. ಆದ್ದರಿಂದ, ಚುನಾವಣೆಯ ನಂತರ ಮೊದಲ ಬಾರಿಗೆ ನಾನು ಇಂದು ನಿಮ್ಮ ಬಳಿಗೆ ಬಂದಿದ್ದೇನೆ. ಕಾಶಿಯ ಜನರಿಗೆ, ಉತ್ತರ ಪ್ರದೇಶದ ಜನರಿಗೆ ನಾನು ಹೃದಯಾಂತರಾಳದಿಂದ ಧನ್ಯವಾದಗಳನ್ನು ಅರ್ಪಿಸಲು ಮತ್ತು ಅವರನ್ನು ಅಭಿನಂದಿಸಲು ಬಯಸುತ್ತೇನೆ.

ಇಂದು, ನಾವು ದೈವಿಕ, ಭವ್ಯ ಮತ್ತು ಹೊಚ್ಚ ಹೊಸ ಕಾಶಿಯಲ್ಲಿ ಕಳೆದ ಎಂಟು ವರ್ಷಗಳಿಂದ ನಡೆಯುತ್ತಿರುವ ಅಭಿವೃದ್ಧಿಯ ಉತ್ಸವಕ್ಕೆ ಮತ್ತೊಮ್ಮೆ ಉತ್ತೇಜನ, ವೇಗೋತ್ಕರ್ಷವನ್ನು ನೀಡುತ್ತಿದ್ದೇವೆ. ಕಾಶಿ ಸದಾ ರೋಮಾಂಚಕ ಮತ್ತು ನಿರಂತರವಾಗಿ ಪ್ರವರ್ಧಮಾನಕ್ಕೆ ಬರುವ ನಗರವಾಗಿದೆ. ಈಗ ಕಾಶಿಯು ಇಡೀ ದೇಶದ ಮುಂದೆ ಪರಂಪರೆ ಮತ್ತು ಅಭಿವೃದ್ಧಿ -ಇವೆರಡರ ಚಿತ್ರವನ್ನು ಮೂಡಿಸಿದೆ; ನಿರಂತರವಾಗಿ ಭವ್ಯ, ದೈವಿಕ ಮತ್ತು ನಾವಿನ್ಯಪೂರ್ಣವಾಗಿ ರೂಪುಗೊಳ್ಳುತ್ತಿರುವ ಒಂದು ಪರಂಪರೆ; ಕಾಶಿಯ ಬೀದಿಗಳು, ಕೊಳಗಳು, ಘಟ್ಟಗಳು ಮತ್ತು ಹಾದಿಗಳು ಹಾಗು ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಿಗೆ ನಿರಂತರವಾಗಿ ಹರಡುತ್ತಿರುವ ಅಭಿವೃದ್ಧಿ ಆ ಚಿತ್ರದಲ್ಲಿದೆ. 

ಕಾಶಿಯಲ್ಲಿ ಒಂದು ಯೋಜನೆ ಮುಗಿದ ತಕ್ಷಣ, ನಾಲ್ಕು ಹೊಸ ಯೋಜನೆಗಳು ಪ್ರಾರಂಭವಾಗುತ್ತವೆ. ಇಂದಿಗೂ ಸಹ, 1,700 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಡಜನ್ ಗಟ್ಟಲೆ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಇಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ. ಕಾಶಿಯಲ್ಲಿ ರಸ್ತೆಗಳು, ನೀರು, ವಿದ್ಯುತ್, ಆರೋಗ್ಯ, ಶಿಕ್ಷಣ, ನೈರ್ಮಲ್ಯ ಮತ್ತು ಸೌಂದರ್ಯೀಕರಣಕ್ಕೆ ಸಂಬಂಧಿಸಿದ ಸಾವಿರಾರು ಕೋಟಿ ರೂ.ಗಳ ಯೋಜನೆಗಳು ಪೂರ್ಣಗೊಂಡಿವೆ. ಆದ್ದರಿಂದ, ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳ ಕೆಲಸವು ನಿರಂತರವಾಗಿ ನಡೆಯುತ್ತಿದೆ.

ಸಹೋದರ ಸಹೋದರಿಯರೇ,

 

ಕಾಶಿಯ ಆತ್ಮವು ಅವಿನಾಶಿಯಾಗಿದೆ, ಆದರೆ ನಾವು ಅದರ ರಚನೆಯನ್ನು ಸುಧಾರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಕಾಶಿಯನ್ನು ಹೆಚ್ಚು ಕ್ರಿಯಾತ್ಮಕ, ಪ್ರಗತಿಪರ ಮತ್ತು ಸಂವೇದನಾಶೀಲವಾಗಿಸುವುದು ನಮ್ಮ ಅಭಿವೃದ್ಧಿಯ ಉದ್ದೇಶವಾಗಿದೆ. ಕಾಶಿಯ ಆಧುನಿಕ ಮೂಲಸೌಕರ್ಯವು ಅದರ ಚಲನಶೀಲತೆಯನ್ನು, ಸೌಂದರ್ಯವನ್ನು ಹೆಚ್ಚಿಸುತ್ತಿದೆ. ಶಿಕ್ಷಣ, ಕೌಶಲ್ಯಗಳು, ಪರಿಸರ, ನೈರ್ಮಲ್ಯ ಮತ್ತು ವ್ಯಾಪಾರವನ್ನು ಪ್ರೋತ್ಸಾಹಿಸಿದಾಗ ಅಭಿವೃದ್ಧಿಯು ವೇಗವಾಗಿ ಸಾಗುತ್ತದೆ; ಹೊಸ ಸಂಸ್ಥೆಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಿಸಿದ ಪವಿತ್ರ ಸ್ಥಳಗಳ ದೈವಿಕತೆಯು ಆಧುನಿಕ ವೈಭವದೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದೇ ಸಮಯದಲ್ಲಿ ಬಡವರು ಮನೆಗಳು, ವಿದ್ಯುತ್, ನೀರು, ಅನಿಲ, ಶೌಚಾಲಯಗಳಂತಹ ಸೌಲಭ್ಯಗಳನ್ನು ಪಡೆದಾಗ ಮತ್ತು ನಾವಿಕರು, ನೇಕಾರರು, ಕುಶಲಕರ್ಮಿಗಳು, ಬೀದಿಬದಿ ವ್ಯಾಪಾರಿಗಳು ಮತ್ತು ವಸತಿರಹಿತರು ಸೇರಿದಂತೆ ಪ್ರತಿಯೊಬ್ಬರೂ ಪ್ರಯೋಜನಗಳನ್ನು ಪಡೆಯುತ್ತಾರೆ, ಆಗ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಸಾಧ್ಯವಾಗುತ್ತದೆ. 

ಇಂದಿನ ಕಾರ್ಯಕ್ರಮದಲ್ಲಿ ನಡೆದ ಉದ್ಘಾಟನೆಗಳು ಮತ್ತು ಶಂಕುಸ್ಥಾಪನೆಗಳು ಚಲನಶೀಲತೆ, ಪ್ರಗತಿಶೀಲತೆ ಮತ್ತು ಸಂವೇದನಾಶೀಲತೆಯನ್ನು ಪ್ರತಿಬಿಂಬಿಸುತ್ತವೆ. 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್'ಗೆ ನನ್ನ ಕಾಶಿ ಅತ್ಯುತ್ತಮ ಉದಾಹರಣೆಯಾಗಿದೆ.

 

ಸಹೋದರರೇ ಮತ್ತು ಸಹೋದರಿಯರೇ,

ನನ್ನನ್ನು ನಿಮ್ಮ ಸಂಸದನನ್ನಾಗಿ ಮಾಡುವ ಮೂಲಕ ಸೇವೆ ಸಲ್ಲಿಸಲು ನೀವು ನನಗೆ ಅವಕಾಶ ನೀಡಿದ್ದೀರಿ. ಆದ್ದರಿಂದ ನೀವು ಏನಾದರೂ ಒಳ್ಳೆಯದನ್ನು ಮಾಡಿದಾಗ, ಅದು ನನ್ನ ಸಂತೋಷವನ್ನು ದ್ವಿಗುಣಗೊಳಿಸುತ್ತದೆ. ಕಾಶಿಯ ಪ್ರಜ್ಞಾವಂತ ನಾಗರಿಕರು ದೇಶಕ್ಕೆ ದಿಕ್ಕು ದಿಶೆ ನೀಡಿದ ರೀತಿಯನ್ನು ನೋಡಿ ನನಗೆ ನಿಜವಾಗಿಯೂ ಸಂತೋಷವಾಗಿದೆ. ಶಾರ್ಟ್ ಕಟ್ ನಿಂದ ದೇಶಕ್ಕೆ ಲಾಭವಾಗಲಾರದು ಎಂಬ ಸಂದೇಶವನ್ನು ಕಾಶಿಯ ನಾಗರಿಕರು ಇಡೀ ದೇಶಕ್ಕೆ ರವಾನಿಸಿದ್ದಾರೆ. ಅಡ್ಡ ಹಾದಿಯಿಂದ ಕೆಲವು ನಾಯಕರಿಗೆ ಪ್ರಯೋಜನವಾಗಬಹುದು ಆದರೆ ದೇಶ ಅಥವಾ ಜನರಿಗೆ ಪ್ರಯೋಜನವಾಗುವುದಿಲ್ಲ.

ನನಗಿನ್ನೂ ನೆನಪಿದೆ, 2014 ರಲ್ಲಿ ಕಾಶಿಗೆ ಬಂದ ನಂತರ, ಜನರು ಬಂದು ಪ್ರಶ್ನೆಗಳನ್ನು ಕೇಳುತ್ತಿದ್ದರು - "ಇಲ್ಲಿ ತುಂಬಾ ಅವ್ಯವಸ್ಥೆ ಇದೆ, ಎಲ್ಲವನ್ನೂ ಹೇಗೆ ಸರಿಪಡಿಸಬಹುದು?". ಜನರು ಅದನ್ನು ಕೇಳುತ್ತಿದರು ಹೌದಲ್ಲವೇ? ಅವರ ಕಾಳಜಿಗಳು, ಕಳವಳಗಳು ಸಮರ್ಥನೀಯವಾಗಿದ್ದವು. ವಾರಣಾಸಿಯಲ್ಲಿ ಎಲ್ಲೆಡೆ ಸುಧಾರಣೆ ಮತ್ತು ಬದಲಾವಣೆಗೆ ಅವಕಾಶವಿತ್ತು. ವಾರಣಾಸಿಯ ಪರಿಸ್ಥಿತಿಯನ್ನು ಸುಧಾರಿಸಲು ದಶಕಗಳಿಂದ ಏನೂ ಮಾಡಲಾಗಿಲ್ಲ ಎಂಬುದು ಬಹಳ ಸ್ಪಷ್ಟವಾಗಿತ್ತು. ಅಂತಹ ಸನ್ನಿವೇಶದಲ್ಲಿ, ಜನರಿಗೆ ಕೆಲವು ಶಾರ್ಟ್-ಕಟ್ ಗಳ ಮೂಲಕ ಕೆಲವು ಪ್ರಯೋಜನಗಳನ್ನು ಒದಗಿಸಬಹುದಾಗಿತ್ತು, ಅದರಾಚೆಗೆ ಅವರು ಏನನ್ನೂ ಯೋಚಿಸಲು ಸಾಧ್ಯವಿರುತ್ತಿರಲಿಲ್ಲ. ಕಷ್ಟಪಟ್ಟು ದುಡಿಯುವುದು ಯಾರಿಗೆ ಬೇಕಾಗಿದೆ?

ಆದರೆ ಸರಿಯಾದ ಮಾರ್ಗವನ್ನು ತೋರಿಸಿದ್ದಕ್ಕಾಗಿ ಮತ್ತು ಸರಿಯಾದ ಮಾರ್ಗವನ್ನು ಆರಿಸಿಕೊಂಡಿದ್ದಕ್ಕಾಗಿ ನಾನು ವಾರಾಣಸಿಯ ಜನರನ್ನು ಶ್ಲಾಘಿಸಲು ಬಯಸುತ್ತೇನೆ. ಈಗಿರುವ ಪರಿಸ್ಥಿತಿಯನ್ನು ಸರಿಪಡಿಸುವುದಷ್ಟೇ ಅಲ್ಲ, ಭವಿಷ್ಯದಲ್ಲಿ ಹಲವಾರು ದಶಕಗಳ ಕಾಲ ವಾರಣಾಸಿಗೆ ಪ್ರಯೋಜನವಾಗುವಂತಹ ಕೆಲಸಕ್ಕಾಗಿ ಅವರು ಸ್ಪಷ್ಟವಾಗಿ ಒತ್ತಾಯಿಸಿದ್ದಾರೆ.

ಕಾಶಿಯ ನನ್ನ ಪ್ರೀತಿಯ ಸಹೋದರರೇ ಮತ್ತು  ಸಹೋದರಿಯರೇ,

 

ಈಗ ಇಲ್ಲಿ ಮಾಡಲಾಗುತ್ತಿರುವ, ನಡೆಯುತ್ತಿರುವ  ಕೆಲಸವು ಭವಿಷ್ಯಕ್ಕೆ ಉಪಯುಕ್ತವಾಗಲಿದೆಯೇ ಇಲ್ಲವೇ? ಇದು ಮುಂದಿನ ಪೀಳಿಗೆಗೆ ಉಪಯುಕ್ತವಾಗಲಿದೆಯೇ ಅಥವಾ ಇಲ್ಲವೇ? ಇದು ಇಲ್ಲಿನ ಯುವಜನರ ಭವಿಷ್ಯವನ್ನು ಉಜ್ವಲಗೊಳಿಸುತ್ತದೆಯೇ? ಇದು ಇಡೀ ಭಾರತವನ್ನು ಕಾಶಿಯ ಕಡೆಗೆ ಸೆಳೆಯುತ್ತದೆಯೇ ಅಥವಾ ಇಲ್ಲವೇ? ಇಡೀ ಭಾರತವೇ ಕಾಶಿಗೆ ಭೇಟಿ ಕೊಡುತ್ತದೆಯೋ ಇಲ್ಲವೋ?

ಸ್ನೇಹಿತರೇ,

 

ದೀರ್ಘಕಾಲೀನ ಯೋಜನೆ ಇದ್ದಾಗ, ನಾವು ಸ್ಪಷ್ಟವಾದ ಫಲಿತಾಂಶಗಳನ್ನು ಪಡೆಯುತ್ತೇವೆ ಎಂಬುದನ್ನು ನಾವು ಇಂದು ನೋಡಲು ಸಾಧ್ಯವಾಗಿದೆ. ಕಳೆದ ಎಂಟು ವರ್ಷಗಳಲ್ಲಿ, ಕಾಶಿಯ ಮೂಲಸೌಕರ್ಯವು ಎಲ್ಲಿಗೆ ತಲುಪಿದೆ? ಇದರಿಂದ ರೈತರು, ಕಾರ್ಮಿಕರು ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗುತ್ತಿದೆ. ವ್ಯಾಪಾರವು ಬೆಳೆಯುತ್ತಿದೆ, ವಹಿವಾಟು ಹೆಚ್ಚುತ್ತಿದೆ ಮತ್ತು ಪ್ರವಾಸೋದ್ಯಮವು ವಿಸ್ತರಿಸುತ್ತಿದೆ.

ರಿಕ್ಷಾ ಎಳೆಯುವವನು ಹೇಳುತ್ತಾನೆ, "ಸರ್, ನಾನು ದಿನವಿಡೀ ಸಾಕಷ್ಟು ಕೆಲಸವನ್ನು ಪಡೆಯುತ್ತಿದ್ದೇನೆ". ವ್ಯಾಪಾರಿ ಹೇಳುತ್ತಾನೆ, "ಸರ್, ಕೇವಲ ಒಂದು ತಿಂಗಳಲ್ಲಿ ಆರು ತಿಂಗಳ ಮೌಲ್ಯದ ಸರಕುಗಳನ್ನು ಮಾರಾಟ ಮಾಡಲಾಗುತ್ತಿದೆ". ಇದು ನಿಜವೋ ಅಲ್ಲವೋ? ವೇಗವು ವರ್ಧಿತವಾಗಿದೆಯೇ ಇಲ್ಲವೇ? ಮತ್ತು ಈ ರಸ್ತೆಗಳನ್ನು ನಿರ್ಮಿಸುತ್ತಿರುವುದರ ಜೊತೆಗೆ , ಬಡವರಿಗಾಗಿ ಮನೆಗಳನ್ನು ನಿರ್ಮಿಸಲಾಗುತ್ತಿದೆ, ಪೈಪ್ ಲೈನ್ ಗಳನ್ನು ಹಾಕಲಾಗುತ್ತಿದೆ, ಮತ್ತು ಸಣ್ಣ ಅಂಗಡಿಕಾರರ ವ್ಯವಹಾರಗಳು ಹಾಗು ಸಿಮೆಂಟ್ ಮತ್ತು ಉಕ್ಕಿನಂತಹ ನಿರ್ಮಾಣ ಸಂಬಂಧಿತ ಉದ್ಯಮಗಳು ಸಹ ಬೆಳೆಯುತ್ತಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದರಿಂದ ವಾರಣಾಸಿಯಲ್ಲಿ  ಮತ್ತು ಸುತ್ತಮುತ್ತಲಿನ  ಪ್ರದೇಶದಲ್ಲಿ ಉದ್ಯೋಗದ ಅವಕಾಶಗಳು ಹೆಚ್ಚಿವೆ.

ವಾರಣಾಸಿಯ ಜನರ ದೂರದೃಷ್ಟಿಯು ಈಗ ಇಡೀ ಪ್ರದೇಶಕ್ಕೆ ಪ್ರಯೋಜನಕಾರಿಯಾಗಿದೆ. ಇಂದು, ನೀವು ಕಾಶಿಯ ಸುತ್ತಲೂ ನೋಡಿದರೆ, ವರ್ತುಲ ರಸ್ತೆ, ವಿಶಾಲ ರಾಷ್ಟ್ರೀಯ ಹೆದ್ದಾರಿ, ಬಾಬತ್ಪುರ ಸಿಟಿ ಲಿಂಕ್ ರಸ್ತೆ, ಆಶಾಪುರ್ ಆರ್.ಒ.ಬಿ., ಚೌಕಾಘಾಟ್-ಲಹರ್ತಾರಾ ಫ್ಲೈಓವರ್ ಮತ್ತು ಮಹಮೂರ್ ಜಂಗ್ -ಮಂಡುವಾಡಿಹ್ ಫ್ಲೈಓವರ್ ಗಳು ವಾರಣಾಸಿಯ ಜನರ ಜೀವನವನ್ನು ತುಂಬಾ ಸುಲಭಗೊಳಿಸಿವೆ, ಅನುಕೂಲಕರಗೊಳಿಸಿವೆ. ವರುಣಾ ಮೇಲಿನ ರೈಲ್ವೆ ಮೇಲ್ಸೇತುವೆ ಪೂರ್ಣಗೊಂಡಾಗ, ಈ ಸೌಲಭ್ಯವು ಮತ್ತಷ್ಟು ಸುಧಾರಿಸಲಿದೆ.

 

ಇಂದು ಕಾಶಿಯ ಇನ್ನೂ 3 ರಸ್ತೆಗಳನ್ನು ಅಗಲಗೊಳಿಸುವ ಕೆಲಸ ಪ್ರಾರಂಭವಾಗಿದೆ. ಇದರೊಂದಿಗೆ, ಮೌ, ಅಜಂಗಡ, ಘಾಜಿಪುರ, ಬಲ್ಲಿಯಾ, ಭದೋಹಿ, ಮಿರ್ಜಾಪುರ್ ನಂತಹ ಅನೇಕ ಜಿಲ್ಲೆಗಳಿಂದ ಪ್ರಯಾಣಿಸುವುದು ಸುಲಭವಾಗಲಿದೆ ಮತ್ತು ಕಾಶಿಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಕೂಡಾ ಕನಿಷ್ಟ ಪ್ರಮಾಣಕ್ಕೆ ಇಳಿಯಲಿದೆ.

ಸಹೋದರರೇ ಮತ್ತು ಸಹೋದರಿಯರೇ,  

 

ನಗರಗಳ ಈ ವಿಶಾಲ ರಸ್ತೆಗಳನ್ನು ಸುತ್ತಮುತ್ತಲಿನ ಹಳ್ಳಿಗಳೊಂದಿಗೆ ಬೆಸೆಯುವ ಸಲುವಾಗಿ, ಇಂದು 9 ರಸ್ತೆಗಳಿಗೆ ಶಂಕುಸ್ಥಾಪನೆಯನ್ನು ಕೂಡಾ ಮಾಡಲಾಗಿದೆ. ಈ ರಸ್ತೆಗಳು ಮಳೆಗಾಲದಲ್ಲಿ ನಗರಕ್ಕೆ ಬರಲು ಹತ್ತಿರದ ಹಳ್ಳಿಗಳ ರೈತರು ಮತ್ತು ಯುವಜನರು ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸುತ್ತವೆ.

ತಹಸಿಲ್ ಮತ್ತು ಬ್ಲಾಕ್ ಕೇಂದ್ರಗಳಿಗೆ ಜಿಲ್ಲಾ ಕೇಂದ್ರಗಳೊಂದಿಗೆ ಸಂಪರ್ಕ ಕಲ್ಪಿಸಲು ಯೋಗಿ ಅವರ ಸರ್ಕಾರ ರಸ್ತೆಗಳ ಅಗಲೀಕರಣವನ್ನು ಮಾಡುತ್ತಿರುವ ಕಾರ್ಯವೂ ಶ್ಲಾಘನೀಯವಾದುದಾಗಿದೆ. ಇಂದು, ಸೇವಾಪುರಿಯಿಂದ ವಾರಣಾಸಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಗಲೀಕರಣದ ಕೆಲಸವೂ ಪ್ರಾರಂಭವಾಗಿದೆ. ಇದು ಪೂರ್ಣಗೊಂಡ ನಂತರ, ವಾರಣಾಸಿ ಜಿಲ್ಲೆಯ ಎಲ್ಲಾ ತಹಸಿಲ್ ಗಳು ಮತ್ತು ಬ್ಲಾಕ್ ಕೇಂದ್ರಗಳು 7 ಮೀಟರ್ ಅಗಲದ ರಸ್ತೆಗಳಿಂದ ಜೋಡಿಸಲ್ಪಡುತ್ತವೆ.

ಸಹೋದರರೇ ಮತ್ತು ಸಹೋದರಿಯರೇ,

 

ಈಗ ಮಾನ್ಸೂನ್ ತುಂಬಾ ಹತ್ತಿರದಲ್ಲಿದೆ. ದೇಶ ಮತ್ತು ಪ್ರಪಂಚದಾದ್ಯಂತದಿಂದ ಬಾಬಾ ಅವರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾಶಿಗೆ ಬರಲಿದ್ದಾರೆ. ವಿಶ್ವನಾಥ ಧಾಮ್ ಯೋಜನೆ ಪೂರ್ಣಗೊಂಡ ನಂತರ ಇದು ಮೊದಲ ಸಾವನ್ ಉತ್ಸವವಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ವಿಶ್ವನಾಥ ಧಾಮ್ ಬಗ್ಗೆ ಇಡೀ ಜಗತ್ತು ಹೊಂದಿರುವ ಉತ್ಸಾಹ, ಕುತೂಹಲ ನಿಮ್ಮ ಅನುಭವಕ್ಕೂ ಬಂದಿದೆ.

 

ಬಿಸಿಲಿನ ವಾತಾವರಣವಿದ್ದರೂ, ಈಗ ಪ್ರತಿದಿನ ಲಕ್ಷಾಂತರ ಭಕ್ತರು ಕಾಶಿ ವಿಶ್ವನಾಥ ಧಾಮಕ್ಕೆ ಬರುತ್ತಿದ್ದಾರೆ ಎಂದು ಯೋಗಿ ಜೀ ನನಗೆ ಹೇಳುತ್ತಿದ್ದರು. ಈ ಅವಧಿಯಲ್ಲಿ ಬಾಬಾನ ಭಕ್ತರು ಇಲ್ಲಿ ದೈವಿಕ, ಭವ್ಯ ಮತ್ತು ಹೊಸ ಕಾಶಿಯ ಅನುಭವವನ್ನು ಪಡೆಯುತ್ತಾರೆ

ಸಹೋದರರೇ ಮತ್ತು  ಸಹೋದರಿಯರೇ

 

ವಿಶ್ವದಾದ್ಯಂತದ ಭಕ್ತರು ಮತ್ತು ಪ್ರವಾಸಿಗರಿಗೆ ಕಾಶಿಯಲ್ಲಿ ಭಕ್ತಿ ಮತ್ತು ಆಧ್ಯಾತ್ಮಿಕತೆಯ ಅಡೆತಡೆರಹಿತ ಅನುಭವವನ್ನು ಒದಗಿಸುವುದು ನಮ್ಮ ಬದ್ಧತೆಯಾಗಿದೆ. ಈ ಹಿಂದೆ, ಒಬ್ಬ ಯಾತ್ರಿಕರು ನಮ್ಮ ಸ್ಥಳಕ್ಕೆ ಭೇಟಿ ನೀಡಿದಾಗ, ಹಳ್ಳಿಗಳ ಜನರು ಅವರನ್ನು ತಮ್ಮ ಮನೆಗಳಿಗೆ ಆಹ್ವಾನಿಸುತ್ತಿದ್ದರು ಮತ್ತು ಅವರಿಗೆ ಆಹಾರವನ್ನು ನೀಡುತ್ತಿದ್ದರು. ಸಾಧ್ಯವಿರುವ ಎಲ್ಲಾ ರೀತಿಯ ಸೇವೆಗಳನ್ನು ಅವರು ಯಾತ್ರಿಕರಿಗೆ ಒದಗಿಸುತ್ತಿದ್ದರು. ಕಾಶಿಯಲ್ಲಿಯೂ ಇದೇ ರೀತಿಯ ಸಂಪ್ರದಾಯವಿತ್ತು. ಭಕ್ತನಿಗೆ ಯಾವುದೇ ರೀತಿಯ ಅನಾನುಕೂಲತೆಗಳಾಗಬಾರದು ಎಂಬುದು ಇದರ ಉದ್ದೇಶವಾಗಿತ್ತು.

ನಮ್ಮ ಸರ್ಕಾರವೂ ಇದೇ ಮನೋಭಾವದಿಂದ ಕೆಲಸ ಮಾಡುತ್ತಿದೆ. ಕಾಶಿ ಭೈರವ ಯಾತ್ರೆ, ನವ-ಗೌರಿ ಯಾತ್ರೆ, ನವದುರ್ಗಾ ಯಾತ್ರೆ, ಅಷ್ಟವಿನಾಯಕ ಯಾತ್ರೆಯಂತಹ ಪ್ರತಿಯೊಂದು ತೀರ್ಥಯಾತ್ರೆಗೂ ಸರ್ಕಾರವು ಸೌಲಭ್ಯಗಳನ್ನು ಸೃಷ್ಟಿಸುತ್ತಿದೆ, ಒದಗಿಸುತ್ತಿದೆ. ಪಂಚಕೋಸಿ ಪರಿಕ್ರಮಕ್ಕೆ ಹೋಗುವ ಮಾರ್ಗದಲ್ಲಿ, ಯಾತ್ರಿಕರ ವಿಶ್ರಾಂತಿಗೆ ಮತ್ತು ಹಲವಾರು ಸ್ಥಳಗಳಲ್ಲಿ ಸುಲಭದಲ್ಲಿ ಪೂಜೆಯನ್ನು ಸಲ್ಲಿಸಲು ಅವಶ್ಯವಾದ  ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಅದು ಕಾಶಿಯ ಅಸ್ಮಿತೆ ಯಾ ಗುರುತಿಸುವಿಕೆಯಾಗಿರಲಿ, ಅಥವಾ ಅದರ ಬೀದಿಗಳು ಮತ್ತು ಘಟ್ಟಗಳನ್ನು ಸ್ವಚ್ಛವಾಗಿಸುವುದು ಅಥವಾ ಗಂಗಾ ನದಿಯನ್ನು ಸ್ವಚ್ಚಗೊಳಿಸುವ ಸಂಕಲ್ಪವಾಗಲಿ, ಕೆಲಸವು ವೇಗವಾಗಿ ನಡೆಯುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ

 

ನಮಗೆ, ಅಭಿವೃದ್ಧಿ ಎಂದರೆ ಆಡಂಬರ ಮತ್ತು ಪ್ರದರ್ಶನ ಎಂದಲ್ಲ. ನಮಗೆ ಅಭಿವೃದ್ಧಿ ಎಂದರೆ ಬಡವರು, ದೀನದಲಿತರು, ವಂಚಿತರು, ಹಿಂದುಳಿದವರು, ಬುಡಕಟ್ಟು ಜನರು, ತಾಯಂದಿರು ಮತ್ತು ಸಹೋದರಿಯರ ಸಬಲೀಕರಣ. ಇಂದು ವಾರಣಾಸಿಯ 600 ಕ್ಕೂ ಹೆಚ್ಚು ಬಡ ಕುಟುಂಬಗಳು ಪಿ.ಎಂ. ಆವಾಸ್ ಯೋಜನೆಯಡಿ ತಮ್ಮ ಪಕ್ಕಾ ಮನೆಯನ್ನು ಪಡೆದುಕೊಂಡಿವೆ. ಅಂದರೆ, ನಾವು 600 ಹೊಸ ಲಕ್ಷಪತಿಗಳನ್ನು ಹೊಂದಿದ್ದೇವೆ. ಇಂದು ಮನೆಯ ಕನಸು ನನಸಾಗಿರುವವರಿಗೆ ಹೃತ್ಪೂರ್ವಕ ಅಭಿನಂದನೆಗಳು! ಮತ್ತು ಆ ಕುಟುಂಬಗಳ ತಾಯಂದಿರು ಮತ್ತು ಸಹೋದರಿಯರಿಗೆ ವಿಶೇಷವಾಗಿ ಅಭಿನಂದನೆಗಳು ಏಕೆಂದರೆ ನಿರ್ಮಿಸಿದ ಮನೆಯು ಆ ಮನೆಯ ತಾಯಂದಿರು ಮತ್ತು ಸಹೋದರಿಯರ ಹೆಸರಿನಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ.

ಪ್ರತಿ ಬಡ ಕುಟುಂಬಕ್ಕೂ ಪಕ್ಕಾ ಮನೆ ಒದಗಿಸಲು ಮತ್ತು ಪ್ರತಿ ಗ್ರಾಮೀಣ ಕುಟುಂಬಕ್ಕೂ ಕೊಳವೆ ಮೂಲಕ ನೀರು ಸರಬರಾಜು ಮಾಡಲು ನಾವು ದೃಢ ನಿರ್ಧಾರ ಮಾಡಿದ್ದು, ಆ ನಿಟ್ಟಿನಲ್ಲಿ ತ್ವರಿತಗತಿಯಿಂದ  ಕೆಲಸ ಮಾಡುತ್ತಿದ್ದೇವೆ. ಜಲ ಜೀವನ್ ಮಿಷನ್ ಅಡಿಯಲ್ಲಿ ಡಜನ್ ಗಟ್ಟಲೆ ನೀರಿನ ಯೋಜನೆಗಳ ಕೆಲಸ ಪ್ರಾರಂಭವಾಗಿದೆ. ಸಾವಿರಾರು ಕುಟುಂಬಗಳು, ವಿಶೇಷವಾಗಿ ಸಹೋದರಿಯರು ಇದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ. ನಿರ್ಗತಿಕ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಆಶ್ರಯ ಮನೆಗಳನ್ನು ನೀಡುವ ಮೂಲಕ 'ಸರ್ವರಿಗೂ ಅಭಿವೃದ್ಧಿ' ಎಂಬ ಮನೋಭಾವವನ್ನು, ಸ್ಪೂರ್ತಿಯನ್ನು ಬಲಪಡಿಸಲಾಗುವುದು.

ಸಹೋದರರೇ ಮತ್ತು  ಸಹೋದರಿಯರೇ

 

ಇಂತಹ ಎಲ್ಲರನ್ನೂ ಒಳಗೊಳ್ಳುವ  ಅಂತರ್ಗತ ಅಭಿವೃದ್ಧಿ ಮತ್ತು ಸರ್ವತೋಮುಖ ಅಭಿವೃದ್ಧಿ ಉತ್ತಮ ಆಡಳಿತವಲ್ಲದೆ ಬೇರೇನೂ ಅಲ್ಲ. ನೀವು ನೋಡಿ, ಸಣ್ಣ ವ್ಯಾಪಾರಿಗಳು ಮತ್ತು ಬೀದಿಬದಿ ವ್ಯಾಪಾರಿಗಳು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದರು. ಗೋಡೋಲಿಯಾ ಮತ್ತು ದಶಾಶ್ವಮೇಧ್ ನಡುವೆ ಈಗ ಗೌರವ್ ಪಥವನ್ನು ನಿರ್ಮಿಸಲಾಗಿದೆ. ಈಗ ಅಲ್ಲಿ ದಶಾಶ್ವಮೇಧ ಸಂಕೀರ್ಣವನ್ನು ಸಹ ನಿರ್ಮಿಸಲಾಗುವುದು. ಈ ಸಂಕೀರ್ಣವು ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸೌಲಭ್ಯಗಳನ್ನು ಒದಗಿಸುತ್ತದೆ. ಚೌಕಾಘಾಟ್-ಲಹರ್ತಾರಾ ಮೇಲ್ಸೇತುವೆ ಅಡಿಯಲ್ಲಿ  ಸುಮಾರು 2 ಕಿ.ಮೀ ಉದ್ದದ ವಿಶೇಷ ಮಾರಾಟ ವಲಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸಾರನಾಥದಲ್ಲಿ ಬೌದ್ಧ ಸರ್ಕ್ಯೂಟ್ ಸ್ಥಾಪಿಸುವ ಕೆಲಸ ಇಂದಿನಿಂದ ಪ್ರಾರಂಭವಾಗಿದೆ. ಅಲ್ಲಿಯೂ ಬೀದಿಬದಿ ವ್ಯಾಪಾರಿಗಳಿಗೆ ವಿಶೇಷ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.

ಸ್ನೇಹಿತರೇ,

 

ಎಸ್.ಇ.ಝಡ್ ಮತ್ತು ಆರ್ಥಿಕ ಕಾರಿಡಾರ್ ಗಳಂತಹ ವ್ಯವಸ್ಥೆಗಳ ಬಗ್ಗೆ ನೀವು ಸಾಕಷ್ಟು ಕೇಳಿರಬಹುದು, ಆದರೆ ಈಗ ನೀವು ಕಾಶಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿ ರಚಿಸಲಾದ ವಿಶೇಷ ವಲಯಗಳನ್ನು ನೋಡುತ್ತಿದ್ದೀರಿ. ಇದಲ್ಲದೆ, ಮೊದಲ ಬಾರಿಗೆ, ಬೀದಿ ಬದಿ ವ್ಯಾಪಾರಿಗಳು ಪಿಎಂ ಸ್ವನಿಧಿ ಯೋಜನೆಯಡಿ ಬ್ಯಾಂಕ್ ಸಾಲ ಪಡೆಯಲು ಪ್ರಾರಂಭಿಸಿದ್ದಾರೆ. ಇಲ್ಲಿಯವರೆಗೆ, ದೇಶಾದ್ಯಂತ ಸುಮಾರು 33 ಲಕ್ಷ ಸಂಗಾತಿಗಳು ಈ ಯೋಜನೆಯಡಿ ಸುಲಭದಲ್ಲಿ ಸಾಲ ಪಡೆದಿದ್ದಾರೆ, ಅದರಲ್ಲಿ ಕಾಶಿಯ ಸಾವಿರಾರು ಸ್ನೇಹಿತರು ಇದ್ದಾರೆ. 

ಸ್ನೇಹಿತರೇ,

 

ನಮ್ಮ ಸರ್ಕಾರವು ಸದಾ ಬಡವರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದೆ ಮತ್ತು ಎಲ್ಲಾ ಸಮಯದಲ್ಲೂ ಅವರನ್ನು ಬೆಂಬಲಿಸಲು ಪ್ರಯತ್ನಿಸಿದೆ. ಉಚಿತ ಕೊರೋನಾ ಲಸಿಕೆಗಳನ್ನು ಒದಗಿಸುವುದರಿಂದ ಹಿಡಿದು ಬಡವರಿಗೆ ಉಚಿತ ಪಡಿತರವನ್ನು ಒದಗಿಸುವವರೆಗೆ, ಸರ್ಕಾರವು ನಿಮಗೆ ಸೇವೆ ಸಲ್ಲಿಸುವಂತಹ ಯಾವುದೇ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ. ವರ್ಷಗಳಲ್ಲಿ ಡಿಜಿಟಲ್ ಮೂಲಸೌಕರ್ಯವನ್ನು ಸುಧಾರಿಸಿದ ರೀತಿಯಿಂದ ಬಡವರು ಮತ್ತು ಮಧ್ಯಮ ವರ್ಗದವರು ಅಪಾರ ಪ್ರಯೋಜನಗಳನ್ನು  ಪಡೆದಿದ್ದಾರೆ.

ಇಂದು ವಾರಣಾಸಿಯ ಜನರು ಮೊಬೈಲ್ ಫೋನ್ ಗಳು ಅಗ್ಗವಾಗಿರುವುದಕ್ಕೆ ಸಾಕ್ಷಿಯಾಗಿದ್ದಾರೆ ಮತ್ತು ಕರೆಗಳನ್ನು ಮಾಡುವುದು ಬಹುತೇಕ ಉಚಿತವಾಗಿದೆ. ಈಗ ಇಂಟರ್ನೆಟ್ (ಅಂತರ್ಜಾಲ)  ತುಂಬಾ ಅಗ್ಗವಾಗಿದೆ, ಜೀವನವು ಸುಲಭವಾಗುತ್ತಿದೆ ಮತ್ತು ಸಂಪಾದನೆಯ ಹೊಸ ಮಾರ್ಗಗಳು ತೆರೆದುಕೊಂಡಿವೆ. ದೇಶದಲ್ಲಿ ಫೋನ್ ಮತ್ತು ಇಂಟರ್ನೆಟ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ, ಅದಕ್ಕೆ ಸಂಬಂಧಿಸಿದ ವ್ಯವಹಾರಗಳು ಸಹ ವಿಸ್ತರಿಸುತ್ತಿವೆ.

ಸೇವಾ ವಲಯಕ್ಕೆ ಸಂಬಂಧಿಸಿ ಅತ್ಯಂತ ಕಡಿಮೆ ಹೂಡಿಕೆಯಲ್ಲಿ ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ. ಅಂತೆಯೇ, 5 ಲಕ್ಷ ರೂ.ವರೆಗಿನ ಉಚಿತ ಚಿಕಿತ್ಸೆಯು ಬಡವರನ್ನು ಒತ್ತಡರಹಿತರನ್ನಾಗಿ ಮಾಡಿದೆ. ಇದರೊಂದಿಗೆ, ಹಣದ ಕೊರತೆಯಿಂದಾಗಿ ಈ ಮೊದಲು ಚಿಕಿತ್ಸೆ ಪಡೆಯುವುದನ್ನು ತಪ್ಪಿಸುತ್ತಿದ್ದ ಬಡ ಜನರು ಕೂಡಾ ಈಗ ಆಸ್ಪತ್ರೆಗಳಿಗೆ ಹೋಗಲು ಧೈರ್ಯವನ್ನು ಮಾಡುತ್ತಿದ್ದಾರೆ.  ಅಂದರೆ, ಆಸ್ಪತ್ರೆಗಳಿಗೆ ಬೇಡಿಕೆ ಹೆಚ್ಚುತ್ತಿದೆ; ವೈದ್ಯಕೀಯ ಕಾಲೇಜುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ, ನಾವು ಯು.ಪಿ.ಯಲ್ಲಿಯೇ ಡಜನುಗಟ್ಟಲೆ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದ್ದೇವೆ. ಇಲ್ಲಿ ಕಾಶಿಯಲ್ಲಿಯೇ, ಕ್ಯಾನ್ಸರ್ ಮತ್ತು ಇತರ ಎಲ್ಲಾ ರೋಗಗಳಿಗೆ ಆಧುನಿಕ ಚಿಕಿತ್ಸೆಯ ದೊಡ್ಡ ಜಾಲವನ್ನು ರಚಿಸಲಾಗಿದೆ.

ಸ್ನೇಹಿತರೇ,

 

ಒಂದೆಡೆ ದೇಶದ ನಗರಗಳನ್ನು ಹೊಗೆ ಮುಕ್ತವಾಗಿಸಲು ನಾವು ಸಿ.ಎನ್. ಜಿ ಚಾಲಿತ ವಾಹನಗಳ ಸೌಲಭ್ಯಗಳನ್ನು ವಿಸ್ತರಿಸುತ್ತಿದ್ದೇವೆ. ಮತ್ತೊಂದೆಡೆ, ಡೀಸೆಲ್ ಮತ್ತು ಪೆಟ್ರೋಲ್ ದೋಣಿಗಳನ್ನು ಸಿ.ಎನ್.ಜಿ.ಗೆ ಪರಿವರ್ತಿಸಲು ಗಂಗಾ ಜೀ ಬಗ್ಗೆ ಕಾಳಜಿ ಹೊಂದಿರುವ ನಾವಿಕರಿಗೆ ನಾವು ಆಯ್ಕೆಯ ಅವಕಾಶವನ್ನು ನೀಡುತ್ತಿದ್ದೇವೆ. ಘಾಟ್ ನಲ್ಲಿ ಸ್ಥಾಪನೆಯಾಗಿರುವ  ದೇಶದ ಮೊದಲ ಸಿ.ಎನ್.ಜಿ ಸ್ಟೇಷನ್ ಕಾಶಿಯದ್ದು ಮತ್ತು ಕಾಶಿಗೆ ಅದರ ಬಗ್ಗೆ ಹೆಮ್ಮೆಯ ಭಾವನೆ ಇದೆ. 650 ಡೀಸೆಲ್-ಪೆಟ್ರೋಲ್ ದೋಣಿಗಳ ಪೈಕಿ 500 ಬೋಟುಗಳನ್ನು ಸಿ.ಎನ್.ಜಿ ಸೌಲಭ್ಯದೊಂದಿಗೆ ಜೋಡಿಸಲಾಗಿದೆ. 

ಈ ಸೌಲಭ್ಯದೊಂದಿಗೆ, ಪ್ರವಾಸಿಗರು ಗಂಗಾನದಿಯನ್ನು ಶಾಂತಿಯಿಂದ ವೀಕ್ಷಿಸುವ  ಸಂತೋಷವನ್ನು ಪಡೆಯುತ್ತಾರೆ ಮತ್ತು ಪರಿಸರಕ್ಕೂ ಇದರಿಂದ ಪ್ರಯೋಜನವಾಗಲಿದೆ. ಅದೇ ಸಮಯದಲ್ಲಿ, ನಾವಿಕರು ಇಂಧನಕ್ಕಾಗಿ ಮಾಡುವ ವೆಚ್ಚವು ಸಹ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಅಂದರೆ, ಕಡಿಮೆ ಖರ್ಚಿನಲ್ಲಿ ಹೆಚ್ಚು ಸಂಪಾದಿಸುವ ಮಾರ್ಗಗಳು ತೆರೆದುಕೊಳ್ಳುತ್ತವೆ.

ಸಹೋದರರೇ ಮತ್ತು  ಸಹೋದರಿಯರೇ 

ಕಾಶಿಯು ಜ್ಞಾನ, ಭಕ್ತಿ ಮತ್ತು ಆಧ್ಯಾತ್ಮಿಕತೆಯ ನಗರ ಮಾತ್ರವಲ್ಲ, ಇದು ಕ್ರೀಡೆಗಳ ಶ್ರೀಮಂತ ಸಂಪ್ರದಾಯವನ್ನು ಸಹ ಹೊಂದಿದೆ. ಮತ್ತು ಇಂದು ನಾನು ವಿಮಾನ ನಿಲ್ದಾಣದಿಂದ ಇಲ್ಲಿಗೆ ಬರುವಾಗ ನನ್ನ ಪ್ರಯಾಣದುದ್ದಕ್ಕೂ ಎಲ್ಲಾ ಆಟಗಾರರನ್ನು ಭೇಟಿಯಾಗಲು ಸಾಧ್ಯವಾಯಿತು. ಎಲ್ಲಾ ಆಟಗಾರರು ಅಲ್ಲಿ ನನ್ನ ಮುಂದೆ ಕುಳಿತಿದ್ದಾರೆ. ಈ ಬದಿಯಲ್ಲಿಯೂ ಆಟಗಾರರ ಗುಂಪು ಇದೆ. ಇಂದು ನಾನು ಅವರ ಉತ್ಸಾಹವನ್ನು ನೋಡಬಲ್ಲೆ. ಕಾಶಿಯಲ್ಲಿ ನಿರ್ಮಿಸಲಾಗುತ್ತಿರುವ ಕ್ರೀಡಾಂಗಣವು ಈಗ ಕಾಶಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ನಾನು ಭಾವಿಸುತ್ತೇನೆ. ಇಲ್ಲಿನ ಅಖಾಡಗಳು ವ್ಯಾಯಾಮ ಮತ್ತು ಕುಸ್ತಿಯ ಮೂಲಕ ಫಿಟ್ನೆಸ್ ಗೆ (ದೈಹಿಕ ಕ್ಷಮತೆ) ಉತ್ತೇಜನ ನೀಡುತ್ತಿವೆ. ಇಂದಿಗೂ ಕೂಡಾ , ನಾಗರ ಪಂಚಮಿಯ ದಿನದಂದು, ನಾವು ಈ ಕ್ಷೇತ್ರಗಳಲ್ಲಿ ಗತಕಾಲದ ಇಣುಕುನೋಟಗಳನ್ನು ಕಾಣಬಹುದು.

ಆದರೆ ಕ್ರೀಡೆಯು ಕೇವಲ ಫಿಟ್ ನೆಸ್ ಮತ್ತು ಮನರಂಜನೆಯ ಸಾಧನ ಮಾತ್ರವಲ್ಲ, ರಾಷ್ಟ್ರದ ಹೆಮ್ಮೆಯನ್ನು ಹೆಚ್ಚಿಸಲು ಮತ್ತು ಉತ್ತಮ ವೃತ್ತಿಜೀವನವನ್ನು ಹೊಂದಲು ಶ್ರೇಷ್ಟ ಮಾಧ್ಯಮವೂ ಆಗಿದೆ. ವಾರಣಾಸಿ ಸೇರಿದಂತೆ ಪೂರ್ವಾಂಚಲದ ಅನೇಕ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ, ಸಾಧನೆ ತೋರಿದ್ದಾರೆ. ಒಲಿಂಪಿಕ್ಸ್ ಗೆ ಸಂಬಂಧಿಸಿದ ಪ್ರತಿಯೊಂದು ಕ್ರೀಡೆಯ ಆಧುನಿಕ ಸೌಲಭ್ಯಗಳು ಕಾಶಿಯಲ್ಲಿ ಲಭ್ಯವಾಗುವುದನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಸರಕಾರದ ನಿರಂತರ ಪ್ರಯತ್ನಗಳು ಸಾಗಿವೆ. 

ಇಂದು ನಾವು ಈ ಸಾರ್ವಜನಿಕ ಸಭೆಯನ್ನು ನಡೆಸುತ್ತಿರುವ ಕ್ರೀಡಾಂಗಣವು ಶೀಘ್ರದಲ್ಲೇ ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ ಸಜ್ಜುಗೊಳ್ಳಲಿದೆ. 6 ದಶಕಗಳ ಹಿಂದೆ ನಿರ್ಮಿಸಲಾದ ಈ ಕ್ರೀಡಾಂಗಣಕ್ಕೆ 21 ನೇ ಶತಮಾನದ ಸೌಲಭ್ಯಗಳನ್ನು ಅಳವಡಿಸಲಾಗುವುದು. ಇದು 20 ಕ್ಕೂ ಹೆಚ್ಚು ಕ್ರೀಡೆಗಳಿಗೆ ಸಂಬಂಧಿಸಿ  ಅತ್ಯಾಧುನಿಕ (ಅಲ್ಟ್ರಾ ಮಾಡರ್ನ್) ಒಳಾಂಗಣ ಸೌಲಭ್ಯಗಳನ್ನು ಹೊಂದಿರಲಿದೆ. ಅತ್ಯುತ್ತಮ ತರಬೇತಿ ವ್ಯವಸ್ಥೆ, ಫಿಟ್ ನೆಸ್ ಸೆಂಟರ್ ಮತ್ತು ಹಾಸ್ಟೆಲ್ ನಂತಹ ವ್ಯವಸ್ಥೆಗಳನ್ನು ಸಹ ಇಲ್ಲಿ ಕಾಣಬಹುದು.

ಮಕ್ಕಳಿಗಾಗಿ 'ಮಕ್ಕಳ ವಲಯ”ವೂ ಇರುತ್ತದೆ, ಇದರಿಂದ ಅವರು ಕ್ರೀಡೆಗಳು ಮತ್ತು ಫಿಟ್ ನೆಸ್ ಬಗ್ಗೆ ಉತ್ಸಾಹ ತಾಳುವುದು ಸಾಧ್ಯವಾಗುತ್ತದೆ, ಮತ್ತು ಅವರು ಚಿಕ್ಕ ವಯಸ್ಸಿನಲ್ಲಿಯೇ ವೃತ್ತಿಪರ ಕ್ರೀಡೆಗಳ ಕಡೆಗೆ ತಮ್ಮ ಒಲವನ್ನು ಬೆಳೆಸಿಕೊಳ್ಳಬಹುದು. ಇಡೀ ಸಂಕೀರ್ಣವು ಆಧುನಿಕ ಸೌಲಭ್ಯಗಳನ್ನು ಹೊಂದಿರುವುದಲ್ಲದೆ ಪ್ಯಾರಾ ಗೇಮ್ಸ್ ಗೆ ಕೂಡಾ  ಬೆಂಬಲ ಒದಗಿಸುವಂತಿರುತ್ತದೆ.  ಡಾ. ಭೀಮರಾವ್ ಅಂಬೇಡ್ಕರ್ ಕ್ರೀಡಾ ಸಂಕೀರ್ಣದಲ್ಲಿ ಅಥ್ಲೆಟಿಕ್ಸ್ ಮತ್ತು ಬ್ಯಾಸ್ಕೆಟ್ ಬಾಲ್ ಗಾಗಿ ಆಧುನಿಕ ಸೌಲಭ್ಯಗಳು ಯುವ ಆಟಗಾರರಿಗೆ ಬಹಳ ದೊಡ್ಡ  ಸಹಾಯ ಮಾಡಲಿವೆ.

ಸಹೋದರರೇ ಮತ್ತು ಸಹೋದರಿಯರೇ, 

ಕಾಶಿಯ ಈ ನಿರಂತರ ಅಭಿವೃದ್ಧಿಯ ಪ್ರವಾಹ ಗಂಗಾಜಿಯಂತೆ ಹರಿಯುವಂತೆ ಮಾಡಲು  ನಾವೆಲ್ಲರೂ ಪ್ರಯತ್ನಗಳನ್ನು ನಡೆಸಬೇಕಾಗಿದೆ. ಹೌದು, ಕಾಶಿ ಮತ್ತು ಗಂಗೆಯ ಸ್ವಚ್ಛತೆಗಾಗಿ ನಾವು ತೆಗೆದುಕೊಂಡ ಪ್ರತಿಜ್ಞೆಯನ್ನು ಎಂದಿಗೂ ಮರೆಯಬಾರದು. ನೀವು ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುವಿರಲ್ಲವೇ? ನಿಮ್ಮ ಎರಡೂ ಕೈಗಳನ್ನು ಮೇಲಕ್ಕೆತ್ತಿ ಮತ್ತು ಹೇಳಿ- ನೀವು ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುವಿರಾ? ನಮ್ಮ ಕಾಶಿ ಸ್ವಚ್ಛವಾಗಿ ಉಳಿಯುತ್ತದೆಯೇ? ನಮ್ಮ ಕಾಶಿ ಸ್ವಚ್ಛವಾಗಿರುತ್ತದೆಯೇ? ನಮ್ಮ ಮಾತೆ ಗಂಗಾ ಸ್ವಚ್ಛವಾಗಿ ಉಳಿಯುತ್ತದೆಯೇ ಇಲ್ಲವೇ? ಯಾರೂ ಅದನ್ನು ಕಲುಷಿತಗೊಳಿಸುವುದಿಲ್ಲ, ಅಲ್ಲವೇ? ಅದನ್ನು ಕಲುಷಿತಗೊಳಿಸಲು ಯಾರೂ ಬಿಡುವುದಿಲ್ಲ, ಅಲ್ಲವೇ? 

ಇದು ನಮ್ಮ ಕಾಶಿ; ನಾವು ಕಾಶಿಯನ್ನು ಉಳಿಸಬೇಕು; ನಾವು ಕಾಶಿಯನ್ನು ನಿರ್ಮಿಸಬೇಕು, ಮತ್ತು ನಾವೆಲ್ಲರೂ ಒಟ್ಟಾಗಿ ಅದನ್ನು ಮಾಡುತ್ತೇವೆ.

 

ರಸ್ತೆಗಳು, ಘಾಟ್ ಗಳು ಮತ್ತು ಮಾರುಕಟ್ಟೆಗಳನ್ನು ಸ್ವಚ್ಛವಾಗಿಡುವುದು ಕಾಶಿಯ ನಿವಾಸಿಗಳು ಸಹಿತ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಬಾಬಾ ವಿಶ್ವನಾಥರ ಆಶೀರ್ವಾದ ಮತ್ತು ಕಾಶಿಯ ಜನರ ವಿಶ್ವಾಸದಿಂದ ನಾವು ಪ್ರತಿಯೊಂದು ನಿರ್ಧಾರವನ್ನೂ ಕಾರ್ಯಗತಗೊಳಿಸುತ್ತೇವೆ,  ಈಡೇರಿಸುತ್ತೇವೆ ಎಂಬ ವಿಶ್ವಾಸ ನನಗಿದೆ. ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

 

ಹರ ಹರ ಮಹಾದೇವ! ಧನ್ಯವಾದಗಳು!

ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

 

*************



(Release ID: 1842398) Visitor Counter : 93