ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಾರಣಾಸಿಯಲ್ಲಿ ಅಖಿಲ ಭಾರತೀಯ ಶಿಕ್ಷಾ ಸಮಾಗಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ

ಪ್ರಕಟಣಾ ದಿನಾಂಕ: 07 JUL 2022 8:43PM by PIB Bengaluru

ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಜನಪ್ರಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ, ನನ್ನ ಸಂಪುಟ ಸಹೋದ್ಯೋಗಿ ಧರ್ಮೇಂದ್ರ ಪ್ರಧಾನ್ ಜೀ, ರಾಷ್ಟ್ರೀಯ ಶಿಕ್ಷಣ ನೀತಿ ಕರಡು ರಚನಾ ಸಮಿತಿಯ ಅಧ್ಯಕ್ಷ ಕೆ. ಕಸ್ತೂರಿರಂಗನ್ ಜಿ, ಸರ್ಕಾರದ ಇತರ ಸಚಿವರೇ, ಎಲ್ಲಾ ಉಪಕುಲಪತಿಗಳೇ, ಶಿಕ್ಷಣ ಸಂಸ್ಥೆಗಳ ನಿರ್ದೇಶಕರೇ, ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಶಿಕ್ಷಕರು ಮತ್ತು ಶಿಕ್ಷಣ ತಜ್ಞರೇ ಹಾಗು ಮಹಿಳೆಯರೇ ಮತ್ತು ಮಹನೀಯರೇ,

ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಪ್ರಮುಖ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಪವಿತ್ರ ಭೂಮಿಯಲ್ಲಿ 'ಅಖಿಲ ಭಾರತೀಯ ಶಿಕ್ಷಾ ಸಮಾಗಮ'ವನ್ನು ಆಯೋಜಿಸಲಾಗುತ್ತಿದೆ. ದೇಶವು ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ ಈ ಸಮಾವೇಶ ನಡೆಯುತ್ತಿದೆ. 'ಅಮೃತ ಕಾಲ'ದ ಸಮಯದಲ್ಲಿ ದೇಶದ ಸದ್ಗುಣಶೀಲ, ಮೌಲ್ಯಯುತ ನಿರ್ಣಯಗಳನ್ನು, ನಿರ್ಧಾರಗಳನ್ನು ಈಡೇರಿಸುವ ದೊಡ್ಡ ಜವಾಬ್ದಾರಿ ನಮ್ಮ ಶಿಕ್ಷಣ ವ್ಯವಸ್ಥೆಯ ಮೇಲೆ ಹಾಗು ನಮ್ಮ ಯುವ ಪೀಳಿಗೆಯ ಮೇಲಿದೆ.ಉಪನಿಷತ್ತುಗಳಲ್ಲಿ विद्यया अमृतम् अश्नुते ಅಂದರೆ ಜ್ಞಾನವು ಚಿರಂತನ ಮತ್ತು ಅದು ಅಮೃತದಂತೆ ಎಂದು ಹೇಳಲಾಗಿದೆ. ಕಾಶಿಯನ್ನು ಮೋಕ್ಷದ ನಗರ ಎಂದೂ ಕರೆಯಲಾಗುತ್ತದೆ, ಏಕೆಂದರೆ ಮೋಕ್ಷದ ಏಕೈಕ ಮಾರ್ಗವೆಂದರೆ ಜ್ಞಾನ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಕಾಶಿಯ ಪ್ರಮುಖ ಜ್ಞಾನ ಕೇಂದ್ರದಲ್ಲಿ ಶಿಕ್ಷಣ ಮತ್ತು ಸಂಶೋಧನೆ, ಕಲಿಕೆ ಮತ್ತು ತಿಳುವಳಿಕೆಯ ಮಹಾನ್ ಮಂಥನವು ಸಂಭವಿಸಿದಾಗ, ಅದರಿಂದ ಹೊರಹೊಮ್ಮುವ ಮಕರಂದವು ಖಂಡಿತವಾಗಿಯೂ ದೇಶಕ್ಕೆ ಹೊಸ ದಿಕ್ಕನ್ನು ತೋರಿಸುತ್ತದೆ. ಈ ಸಂದರ್ಭದಲ್ಲಿ, ನಾನು ಮಹಾಮಾನ (ಮದನ ಮೋಹನ) ಮಾಳವೀಯ ಜೀ ಅವರ ಪಾದಗಳಿಗೆ ನಮಸ್ಕರಿಸುತ್ತೇನೆ ಮತ್ತು ಈ ಕಾರ್ಯಕ್ರಮಕ್ಕಾಗಿ ನಿಮಗೆ ಶುಭ ಹಾರೈಸುತ್ತೇನೆ. ನಾನು ಕಾಶಿಯ ಸಂಸದ. ನೀವು ಕಾಶಿಗೆ ಬಂದಿರುವುದರಿಂದ, ಒಂದು ರೀತಿಯಲ್ಲಿ ನಾನು ಕೂಡ ನಿಮ್ಮ ಜೊತೆಯಲ್ಲಿ ಅತಿಥೇಯನಾಗಿದ್ದೇನೆ. ನೀವು ನನ್ನ ಅತಿಥಿಗಳು. ಉತ್ತಮ ವ್ಯವಸ್ಥೆಗಳನ್ನು ಮಾಡಲು ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಪ್ರಯತ್ನಿಸಿರುವುದರಿಂದ ನಿಮಗೆ ಹೆಚ್ಚಿನ ಸಮಸ್ಯೆಗಳು ಇರುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಆದರೆ ಆ ಬಳಿಕವೂ ಯಾವುದೇ ನ್ಯೂನತೆ ಇದ್ದರೆ, ಆಗ ದೋಷವು ನನ್ನದಾಗುತ್ತದೆ. ಮತ್ತು ಒಬ್ಬ ಅತಿಥೇಯನಾಗಿ, ಯಾವುದೇ ಅನಾನುಕೂಲತೆ ಇದ್ದರೆ, ಉಂಟಾದರೆ ನಾನು ಮುಂಚಿತವಾಗಿ ಕ್ಷಮೆಯಾಚಿಸುತ್ತೇನೆ.

ಸ್ನೇಹಿತರೇ,

ನಾನು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಇಲ್ಲಿಗೆ ಬಂದಿದ್ದೇನೆ. ಅಲ್ಲಿ ಮಧ್ಯಾಹ್ನದ ಊಟಕ್ಕಾಗಿ ಕೇಂದ್ರೀಕೃತ ಅಡುಗೆಮನೆ ಇತ್ತು ಮತ್ತು ಕಾಶಿಯ ಸರ್ಕಾರಿ ಶಾಲೆಯ 10-12 ವರ್ಷದ ಮಕ್ಕಳೊಂದಿಗೆ ಸಂವಹನ ನಡೆಸುವ ಅವಕಾಶವೂ ನನಗೆ ದೊರಕಿತ್ತು. ಅವರಿಂದ ನಾನು ಕೇಳಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಮುಂದಿನ ಬಾರಿ ಇಲ್ಲಿಗೆ ಬಂದಾಗ ನಾನು ಇಂದು ಭೇಟಿಯಾದ ವಿದ್ಯಾರ್ಥಿಗಳ ಶಿಕ್ಷಕರನ್ನು ಭೇಟಿಯಾಗಲು ಬಯಸುತ್ತೇನೆ. ಈ ಆಲೋಚನೆ ನನ್ನ ಮನಸ್ಸಿನಲ್ಲಿ ಏಕೆ ಬಂತು ಎಂದು ನೀವು ಆಶ್ಚರ್ಯ ಪಡುತ್ತಿರಬಹುದು. ಅವರೊಂದಿಗೆ ಕಳೆಯಲು ನನಗೆ ಕೇವಲ 10-15 ನಿಮಿಷಗಳು ಮಾತ್ರ ಇದ್ದವು, ಆದರೆ ಇದು ನನ್ನ ಮನಸ್ಸಿನಲ್ಲಿ ಶಾಶ್ವತವಾದ ಪ್ರಭಾವ ಬೀರಿತು, ಏಕೆಂದರೆ ಬಹಳ ಸಾಮಾನ್ಯ ಹಿನ್ನೆಲೆಯಿಂದ ಬಂದ ಆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಆತ್ಮವಿಶ್ವಾಸ ಮತ್ತು ವೈವಿಧ್ಯತೆ ಇತ್ತು. ಅವರ ಪ್ರತಿಭೆ ಎಷ್ಟಿತ್ತೆಂದರೆ, ನಿಮ್ಮ ಮೊಮ್ಮಗನು ಸಹ ಅಂತಹ ಪ್ರತಿಭೆಯನ್ನು ಹೊಂದಿದ್ದರೆ, ಯಾವುದೇ ಅತಿಥಿಗಳು ನಿಮ್ಮಲ್ಲಿಗೆ ಬಂದಾಗಲೆಲ್ಲ ಆ ಪ್ರತಿಭೆಯನ್ನು ಪ್ರದರ್ಶಿಸಲು ನೀವು ಅವನಿಗೆ ಹೇಳುತಿದ್ದೀರಿ. ಇಲ್ಲಿ ನಾನು ಹೇಳಬಯಸುವುದೇನೆಂದರೆ, ಇಂದಿನ ಪೀಳಿಗೆಯ ಈ ಸಾಮರ್ಥ್ಯವು ಅವರನ್ನು ನೀವು ಈಗ ಹೊಂದಿರುವ ಸ್ಥಾನಗಳಿಗೆ ಕರೆದೊಯ್ಯುಬಲ್ಲದು. ಆದರೆ ಆ ಹೊತ್ತಿಗೆ, ನೀವು ಅಲ್ಲಿ ಇರುವುದಿಲ್ಲ, ಆದರೆ ನೀವು ನಿರ್ಮಾಣ ಮಾಡಿರುವ ಸಂಸ್ಥೆಗಳು ಮುಂಬರುವ ದಿನಗಳಲ್ಲಿ ಅಂತಹ ಪ್ರತಿಭಾವಂತ ಮಕ್ಕಳನ್ನು ಸ್ವಾಗತಿಸುತ್ತವೆ. ಅಲ್ಲಿ ಅವರಿಗೆ ಯಾವುದನ್ನೂ ಕಳೆದುಕೊಂಡಿಲ್ಲ ಎಂಬ ಭಾವನೆ ಮೂಡುವುದನ್ನು ಖಾತ್ರಿಪಡಿಸಿಕೊಳ್ಳುವಂತಹ ಬಹಳ ದೊಡ್ಡ ಜವಾಬ್ದಾರಿಯನ್ನು ನೀವು ಹೊಂದಿದ್ದೀರಿ. ಮುಂದಿನ ಮೂರು ದಿನಗಳ ಕಾಲ ಇಲ್ಲಿ ನಡೆಯುವ ಚರ್ಚೆಗಳು ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಪರಿಣಾಮಕಾರಿಯಾದಂತಹ ಸಮರ್ಪಕ ದಿಕ್ಕು ದಿಸೆಗಳನ್ನು ನೀಡುತ್ತವೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ.

ಸ್ನೇಹಿತರೇ,

ನಿಮಗೆ ತಿಳಿದಿರುವಂತೆ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲ ಉದ್ದೇಶವೆಂದರೆ ಶಿಕ್ಷಣವನ್ನು ಸಂಕುಚಿತ ಚಿಂತನೆಯಿಂದ ಹೊರತೆಗೆಯುವುದು ಮತ್ತು ಅದನ್ನು 21 ನೇ ಶತಮಾನದ ಆಧುನಿಕ ವಿಚಾರಗಳೊಂದಿಗೆ ಸಂಯೋಜಿಸುವುದು ಮತ್ತು ಸಮಗ್ರಗೊಳಿಸುವುದಾಗಿದೆ. ನಮ್ಮ ದೇಶದಲ್ಲಿ ಬುದ್ಧಿವಂತಿಕೆ ಮತ್ತು ಪ್ರತಿಭೆಯ ಕೊರತೆ ಎಂದಿಗೂ ಇರಲಿಲ್ಲ. ಆದರೆ, ದುರದೃಷ್ಟವಶಾತ್, ಶಿಕ್ಷಣವು ಕೇವಲ ಉದ್ಯೋಗಗಳನ್ನು ಮಾತ್ರ ಪಡೆಯುವುದಕ್ಕೆ ಸೀಮಿತವಾಗಿರುವಂತಹ ವ್ಯವಸ್ಥೆಯನ್ನು ನಾವು ಹಿಂದಿನಿಂದ ಬಳುವಳಿಯಾಗಿ, ಆನುವಂಶಿಕವಾಗಿ ಪಡೆದಿದ್ದೇವೆ. ತಮ್ಮ ಆಳ್ವಿಕೆಯಲ್ಲಿ, ಬ್ರಿಟಿಷರು ತಮ್ಮ ಅಗತ್ಯಗಳನ್ನು ಪೂರೈಸಲು, ಸೇವಕ ವರ್ಗವನ್ನು ಸಿದ್ಧಪಡಿಸಲು ಈ ಶಿಕ್ಷಣ ವ್ಯವಸ್ಥೆಯನ್ನು ಒದಗಿಸಿದರು. ಸ್ವಾತಂತ್ರ್ಯಾನಂತರ, ಅದರಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗಿದ್ದರೂ, ಹೆಚ್ಚಿನವು ಬದಲಾಗದೆ ಉಳಿದವು. ಬ್ರಿಟಿಷರು ರಚಿಸಿದ ವ್ಯವಸ್ಥೆಯು ಎಂದಿಗೂ ಭಾರತೀಯ ನೈತಿಕತೆಯ ಭಾಗವಾಗಿರಲಿಲ್ಲ ಮತ್ತು ಅದು ನೈತಿಕತೆಯ ಭಾಗವಾಗಿರುವುದಕ್ಕೆ ಸಾಧ್ಯವೂ ಇರಲಿಲ್ಲ. ನಾವು ನಮ್ಮ ದೇಶದ ಪ್ರಾಚೀನ ಕಾಲಘಟ್ಟವನ್ನು ನೋಡಿದರೆ, ನಾವು ಶಿಕ್ಷಣದಲ್ಲಿ ವಿವಿಧ ಕಲೆಗಳ ಪರಿಕಲ್ಪನೆಯನ್ನು ಹೊಂದಿರುವುದು ಗೋಚರಿಸುತ್ತದೆ. ಮತ್ತು, ಬನಾರಸ್ ಇದಕ್ಕೆ ಜೀವಂತ ಉದಾಹರಣೆಯಾಗಿದೆ. ಬನಾರಸ್, ಜ್ಞಾನದ ಕೇಂದ್ರವಾಗಿತ್ತು ಏಕೆಂದರೆ ಅದು ಉತ್ತಮ ಗುರುಕುಲಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಹೊಂದಿತ್ತು. ಬನಾರಸ್, ಜ್ಞಾನದ ಕೇಂದ್ರವಾಗಿತ್ತು, ಏಕೆಂದರೆ ಇಲ್ಲಿನ ಜ್ಞಾನ ಮತ್ತು ಶಿಕ್ಷಣವು ಬಹು ಆಯಾಮವನ್ನು ಹೊಂದಿತ್ತು ಮತ್ತು ಬಹು-ಕ್ಷೇತ್ರಗಳನ್ನು ಒಳಗೊಂಡಿತ್ತು. ಶಿಕ್ಷಣದಲ್ಲಿನ ಈ ವೈವಿಧ್ಯತೆಯು, ನಮ್ಮ ಶಿಕ್ಷಣ ವ್ಯವಸ್ಥೆಗೆ ಸ್ಫೂರ್ತಿಯ, ಪ್ರೇರಣೆಯ ಮೂಲವಾಗಬೇಕು. ನಾವು ಪದವಿ ಪಡೆದ ಯುವಕರನ್ನು ಸೃಷ್ಟಿಸುವುದಷ್ಟೇ ಅಲ್ಲ, ದೇಶವು ಮುಂದೆ ಸಾಗಲು ಅಗತ್ಯವಿರುವಷ್ಟು ಮಾನವ ಸಂಪನ್ಮೂಲವನ್ನು ರೂಪಿಸುವ ಶಿಕ್ಷಣ ವ್ಯವಸ್ಥೆಯನ್ನು ಒದಗಿಸಬೇಕು. ನಮ್ಮ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಈ ಸಂಕಲ್ಪದಲ್ಲಿ ನಾಯಕತ್ವ ವಹಿಸಬೇಕು. ನಮ್ಮ ಶಿಕ್ಷಕರು ಈ ಮನೋಭಾವವನ್ನು ಎಷ್ಟು ವೇಗವಾಗಿ ಅಳವಡಿಸಿಕೊಳ್ಳುತ್ತಾರೋ, ಅಷ್ಟೇ ವೇಗದಲ್ಲಿ ಹೆಚ್ಚು ಹೆಚ್ಚು ಯುವಜನತೆ ಮತ್ತು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪ್ರಯೋಜನ ಪಡೆಯುತ್ತಾರೆ ಮತ್ತು ದೇಶದ ಭವಿಷ್ಯವೂ ಸಹ ಅಷ್ಟೇ ಪ್ರಯೋಜನಗಳನ್ನು ಪಡೆಯುತ್ತದೆ.

ಸ್ನೇಹಿತರೇ,

ಹೊಸ ವ್ಯವಸ್ಥೆಗಳ ಸೃಷ್ಟಿ, ಆಧುನಿಕ ವ್ಯವಸ್ಥೆಗಳ ಸೇರ್ಪಡೆ, ನವ ಭಾರತಕ್ಕೆ ಅಷ್ಟೇ ಮುಖ್ಯವಾಗಿದೆ. ಹಿಂದೆಂದೂ ಸಂಭವಿಸದ ಮತ್ತು ದೇಶವು ಸಾಧಿಸಲು ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವಿರದ ಗುರಿಗಳು ಇಂದಿನ ಭಾರತದಲ್ಲಿ ನಿಜವಾಗಿಯೂ ಸಾಕಾರಗೊಳ್ಳುತ್ತಿವೆ. ಈಗ ನೀವು ನೋಡಿ, ಕೊರೋನಾದಂತಹ ದೊಡ್ಡ ಸಾಂಕ್ರಾಮಿಕ ರೋಗದಿಂದ ನಾವು ವೇಗವಾಗಿ ಚೇತರಿಸಿಕೊಂಡಿದ್ದೇವೆ, ಮಾತ್ರವಲ್ಲ, ಇಂದು ಭಾರತವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಇಂದು ನಾವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿದ್ದೇವೆ. ಈ ಹಿಂದೆ ಸರ್ಕಾರದ ಹಿಡಿತದಲ್ಲಿದ್ದ ಬಾಹ್ಯಾಕಾಶ ತಂತ್ರಜ್ಞಾನದಂತಹ ಕ್ಷೇತ್ರಗಳನ್ನು ಖಾಸಗಿಯವರಿಗೆ ಮುಕ್ತಗೊಳಿಸಲಾಗಿದೆ. ಈಗ ಯುವಕರಿಗಾಗಿ ಒಂದು ಹೊಸ ಜಗತ್ತನ್ನು ಸಿದ್ಧಪಡಿಸಲಾಗುತ್ತಿದೆ ಮತ್ತು ಇಡೀ ಅವಕಾಶವು ಅವರ ಕೈಗೆಟುಕುವಷ್ಟು ಸನಿಹದಲ್ಲಿದೆ. ಸ್ನೇಹಿತರೇ. ಈ ಹಿಂದೆ ದೇಶದ ಹೆಣ್ಣುಮಕ್ಕಳಿಗೆ ನಿಷೇಧ ಹೇರಲಾಗಿದ್ದ ಕ್ಷೇತ್ರಗಳು ಇಂದು ಅವರ ಪ್ರತಿಭೆಗೆ ಸಾಕ್ಷಿಯಾಗುತ್ತಿವೆ.

ಸ್ನೇಹಿತರೇ,

ದೇಶದ ಮನಸ್ಥಿತಿ ಮತ್ತು ವೇಗವು ಈ ಪ್ರಮಾಣದಲ್ಲಿದ್ದಾಗ ನಾವು ನಮ್ಮ ಯುವಕರಲ್ಲಿ ಹೊಸ ಶಕ್ತಿಯನ್ನು ತುಂಬಬೇಕು, ಇದರಿಂದ ಅದು ಅವರ ಕನಸುಗಳಿಗೆ ರೆಕ್ಕೆಗಳನ್ನು ಒದಗಿಸುತ್ತದೆ. ಇಲ್ಲಿಯವರೆಗೆ, ಶಾಲೆಗಳು, ಕಾಲೇಜುಗಳು ಮತ್ತು ಪುಸ್ತಕಗಳು ಮಕ್ಕಳ ದಿಕ್ಕು ದಿಸೆಗಳನ್ನು ನಿರ್ಧರಿಸುತ್ತಿದ್ದವು. ಆದರೆ ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ನಂತರ ಯುವಕರ ಮೇಲಿನ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಮತ್ತು ಇದರೊಂದಿಗೆ, ಯುವಜನತೆಯ ಕನಸುಗಳು ಮತ್ತು ಆಶೋತ್ತರಗಳನ್ನು ನಿರಂತರವಾಗಿ ಪ್ರೋತ್ಸಾಹಿಸುವ ಮತ್ತು ಅವರ ಮನಸ್ಸು ಮತ್ತು ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ. ಆಗ ಮಾತ್ರ ಅವರನ್ನು ಸರ್ವಸಿದ್ಧರನ್ನಾಗಿಸಲು ನಮಗೆ ಸಾಧ್ಯವಾಗುತ್ತದೆ. ದೇಶದ ಯುವಜನತೆಯ ಪ್ರತಿಭೆಯನ್ನು ಗುರುತಿಸದೆ ಅವರ ಮೇಲೆ ಏನನ್ನಾದರೂ ಹೇರುವ ದಿನಗಳು ಕಳೆದುಹೋಗಿವೆ. ಅವರ ಅಗತ್ಯಗಳಿಗೆ ಅನುಗುಣವಾಗಿ ನಾವು ಶಿಕ್ಷಣ, ಸಂಸ್ಥೆಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ರೂಪಿಸಬೇಕು ಎಂಬುದನ್ನು ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಮಕ್ಕಳನ್ನು ಅವರ ಪ್ರತಿಭೆ ಮತ್ತು ಆಯ್ಕೆಗಳಿಗೆ ಅನುಗುಣವಾಗಿ ಕೌಶಲ್ಯಯುತರನ್ನಾಗಿಸುವಲ್ಲಿ ಹೊಸ ಶಿಕ್ಷಣ ನೀತಿಯ ಗಮನವು ಕೇಂದ್ರೀಕೃತವಾಗಿದೆ. ಶಿಕ್ಷಣ ನೀತಿಯು ನಮ್ಮ ಯುವಜನತೆಯು ಕೌಶಲ್ಯ, ಆತ್ಮವಿಶ್ವಾಸ, ಪ್ರಾಯೋಗಿಕ ಮತ್ತು ಲೆಕ್ಕಾಚಾರಯುಕ್ತರನ್ನಾಗಿಸಲು ಭೂಮಿಕೆಯನ್ನು ಸಿದ್ಧಪಡಿಸುತ್ತಿದೆ.

ಸ್ನೇಹಿತರೇ,

ದೇಶದಲ್ಲಿ ಕ್ಷಿಪ್ರ ಬದಲಾವಣೆಗಳಾಗುತ್ತಿರುವುದರ ನಡುವೆ, ಶಿಕ್ಷಣ ವ್ಯವಸ್ಥೆಯ ಪಾತ್ರ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಮಹಾನ್ ವ್ಯಕ್ತಿಗಳ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂಬುದಕ್ಕೆ ನಾನು ನಿಮಗೆ ಒಂದು ಉದಾಹರಣೆಯನ್ನು ನೀಡುತ್ತೇನೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಆರಂಭಿಕ ವರ್ಷಗಳಲ್ಲಿ ನನ್ನ ಅನುಭವವನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾನು ಮುಖ್ಯಮಂತ್ರಿಯಾದಾಗ ನನಗೆ ಆಡಳಿತದ ಅನುಭವವೇ ಇರಲಿಲ್ಲ. ಈ ಜವಾಬ್ದಾರಿ ಇದ್ದಕ್ಕಿದ್ದಂತೆ ಬಂದಿತ್ತು. ನಾನು ಒಂದು ವಿಚಾರವನ್ನು ಮಂಡಿಸಿದೆ. ನಾನು ನನ್ನ ಎಲ್ಲಾ ಕಾರ್ಯದರ್ಶಿಗಳಿಗೆ ಅವರು ಆಯಾ ಇಲಾಖೆಗಳ ಮುಖ್ಯಮಂತ್ರಿಗಳು ಎಂದು ಹೇಳಿದೆ. ಮುಂದಿನ ಐದು ವರ್ಷಗಳಲ್ಲಿ ಅವರು ತಮ್ಮ ಇಲಾಖೆಗಳನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂಬುದನ್ನು ವಿವರಿಸಲು ಅವರಿಗೆ ಹೇಳಿದೆ. ನಿಮ್ಮ ಸಾಧನೆ ಏನಾಗಿರುತ್ತದೆ ಮತ್ತು ಅದು ಗುಜರಾತ್ ನ ಸಾಮಾನ್ಯ ಜನರಿಗೆ ಹೇಗೆ ಪ್ರಯೋಜನಕಾರಿಯಾಗಿರುತ್ತದೆ? ಎಂಬ ಬಗ್ಗೆ ಅವರ ದೂರದೃಷ್ಟಿಯ ವಿವರವಾದ ಪ್ರಸ್ತುತಿಯನ್ನು ನನಗೆ ಒದಗಿಸುವಂತೆ ಅವರಿಗೆ ಹೇಳಿದೆ. ನಾನು ಇದನ್ನು ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳಿಗೆ ಹೇಳಿದೆ ಮತ್ತು ಪ್ರತಿದಿನ ಸಂಜೆ ಐದು ಗಂಟೆಗೆ ನನ್ನ ಮಂತ್ರಿಮಂಡಲದ ಎಲ್ಲಾ ಮಂತ್ರಿಗಳು ಮತ್ತು ಕಾರ್ಯದರ್ಶಿಗಳು ಸಾಮಾನ್ಯವಾಗಿ ಭೇಟಿಯಾಗುತ್ತಿದ್ದರು. ಕಾರ್ಯದರ್ಶಿಗಳಲ್ಲಿ ಒಬ್ಬರು ತಮ್ಮ ಇಲಾಖೆಯ ವಿವರವಾದ ಪ್ರಸ್ತುತಿಯನ್ನು ನೀಡುತ್ತಿದ್ದರು ಮತ್ತು ಅದು ಚರ್ಚೆಯಾಗುತ್ತಿತ್ತು. ಆ ಸಭೆಯಲ್ಲಿ ಎಲ್ಲಾ ಕಾರ್ಯದರ್ಶಿಗಳು ಹಾಜರಿರುತ್ತಿದ್ದರು. ಚರ್ಚೆಗಳು ನಡೆಯುತ್ತಿದ್ದವು ಮತ್ತು ನಮ್ಮ ಮಂತ್ರಿಗಳು ಕೂಡಾ ಇದರಲ್ಲಿ ಭಾಗವಹಿಸುತ್ತಿದ್ದರು. ನಾನು ಅವುಗಳನ್ನು ಕೇಳುತ್ತಿದ್ದೆ ಮತ್ತು ಕಲಿಯಲು ಪ್ರಯತ್ನಿಸುತ್ತಿದ್ದೆ. ಈ ಕಾರ್ಯಕ್ರಮವು ಸುಮಾರು ಒಂದು ತಿಂಗಳ ಕಾಲ ಮುಂದುವರಿಯಿತು. ಇದು ಸಂಜೆ ಐದು ಗಂಟೆಗೆ ಪ್ರಾರಂಭವಾಗಿ ರಾತ್ರಿ 10 ಗಂಟೆಯವರೆಗೆ ಮುಂದುವರಿಯುತ್ತಿತ್ತು. ಇದು ಬಹಳ ಗಂಭೀರವಾಗಿ ನಡೆಯುವ ಕಾರ್ಯಕ್ರಮವಾಗಿತ್ತು. ಪ್ರಾಯಶಃ ಇದು ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದ್ದಿರಬೇಕು. ಹೀಗೆ ಒಂದು ದಿನ ಕೈಗಾರಿಕೋದ್ಯಮಕ್ಕೆ ಸಂಬಂಧಿಸಿದ ಪ್ರಸ್ತುತಿ ಇತ್ತು. ಅವರು ಕೈಗಾರಿಕೆಗಳಿಗೆ ಸಂಬಂಧಿಸಿದ ಎಲ್ಲವನ್ನೂ ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ಹೇಗೆ ಕಾಣಬಹುದು ಎಂಬುದರ ಬಗ್ಗೆ ವಿವರಿಸುತ್ತಿದ್ದರು. ಕಾರ್ಯಕ್ರಮ ಮುಗಿದ ತಕ್ಷಣ, ಶಿಕ್ಷಣ ಕಾರ್ಯದರ್ಶಿ ನನ್ನ ಬಳಿಗೆ ಬಂದರು, ಏಕೆಂದರೆ ಅವರು ಮರುದಿನ ಅವರ ಪ್ರಸ್ತುತಿಯನ್ನು ಮಾಡಬೇಕಾಗಿತ್ತು. ಮರುದಿನ ಪ್ರಸ್ತುತಿಯನ್ನು ಮಾಡಲು ತಮಗೆ ಸಾಧ್ಯವಾಗುವುದಿಲ್ಲ ಎಂದು ಅವರು ನನಗೆ ಹೇಳಿದರು. ಒಂದು ತಿಂಗಳ ಹಿಂದೆ ಅವರಿಗೆ ತಮ್ಮ ಇಲಾಖೆಯ ಪ್ರಸ್ತುತಿಯನ್ನು ಮಂಡಿಸುವಂತೆ ತಿಳಿಸಿದ್ದರಿಂದ ಮತ್ತು ಕೊನೆಯ ಕ್ಷಣದಲ್ಲಿ ಪ್ರಸ್ತುತಿಯನ್ನು ನೀಡಲು ಅವರು ತಮ್ಮ ಅಸಮರ್ಥತೆಯನ್ನು ವ್ಯಕ್ತಪಡಿಸುತ್ತಿದ್ದುದರಿಂದ ನಾನು ಅವರಲ್ಲಿ ಕಾರಣವನ್ನು ಕೇಳಿದೆ. ತಾನು ಸಿದ್ಧವಿರುವುದಾಗಿ ಮತ್ತು ಪ್ರಸ್ತುತಿಯನ್ನು ಮಂಡಿಸಬಹುದು ಎಂದು ಅವರು ಹೇಳಿದರು, ಆದರೆ ಕೈಗಾರಿಕಾ ಅಭಿವೃದ್ಧಿಯ ಪ್ರಸ್ತುತಿಯನ್ನು ನೋಡಿದ ನಂತರ ಅದಕ್ಕಿದು ಸರಿಸಾಟಿಯಲ್ಲ ಎಂದು ತಾವು ಭಾವಿಸಿರುವುದಾಗಿ ಅವರು ಹೇಳಿದರು. ಎರಡೂ ಇಲಾಖೆಗಳು ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿವೆ ಎಂದು ಅವರು ಹೇಳಿದರು. ಕೈಗಾರಿಕಾ ಅಭಿವೃದ್ಧಿಯ ಪ್ರಸ್ತುತಿಯ ಬೆಳಕಿನಲ್ಲಿ ತಮ್ಮ ಪ್ರಸ್ತುತಿಯನ್ನು ಪರಿಷ್ಕರಿಸಲು ಅವರು ಸಮಯವನ್ನು ಕೋರಿದರು ಮತ್ತು ಆಗ ಮಾತ್ರ ಶೈಕ್ಷಣಿಕ ಮತ್ತು ಉದ್ಯಮಗಳೆರಡೂ ಪರಸ್ಪರ ಎಲ್ಲರನ್ನು ಒಳಗೊಳ್ಳುವ ಬೆಳವಣಿಗೆಯ ದಿಕ್ಕಿನಲ್ಲಿ ಕೆಲಸ ಮಾಡಲು ಸಾಧ್ಯ ಎಂದು ಹೇಳಿದರು. ವಿಶ್ವದ ಇತರ ವಿಶ್ವವಿದ್ಯಾಲಯಗಳ ಬಗ್ಗೆ ಮತ್ತು ಅವು ಯಾವ ದಿಕ್ಕಿನಲ್ಲಿ ಸಾಗುತ್ತಿವೆ ಎಂಬುದರ ಬಗ್ಗೆಯೂ ನಾವು ತಿಳಿದಿರಬೇಕು. ನಮ್ಮ ದೇಶ ಎಲ್ಲಿದೆ? ನಮ್ಮ ಯುವಜನರು ಯಾವ ಹಂತದಲ್ಲಿದ್ದಾರೆ? ಮುಂದಿನ 15-20 ವರ್ಷಗಳಲ್ಲಿ ಭಾರತದ ಉಸ್ತುವಾರಿ, ಜವಾಬ್ದಾರಿ ವಹಿಸಲಿರುವ ಯುವಕರನ್ನು ನಾವು ಹೇಗೆ ಸಿದ್ಧಪಡಿಸುತ್ತಿದ್ದೇವೆ. ಸ್ನೇಹಿತರೇ, ಇದು ನಮ್ಮೆದುರಿನ ಬಹಳ ದೊಡ್ಡ ಜವಾಬ್ದಾರಿ. ಮತ್ತು ಇದೇ ರೀತಿಯಲ್ಲಿ, ನಮ್ಮ ಎಲ್ಲಾ ಶಿಕ್ಷಣ ಸಂಸ್ಥೆಗಳೂ ತಾವು ಭವಿಷ್ಯದ ಸಿದ್ಧತೆ ಮಾಡಿಕೊಂಡಿದ್ದೇವೆಯೋ ಎಂಬುದನ್ನು ತಮಗೆ ತಾವೇ ಕೇಳಿಕೊಳ್ಳಬೇಕಾಗಿದೆ. ಪರೀಕ್ಷೆಗಳನ್ನು ನಡೆಸುವುದು ಮತ್ತು ಘಟಿಕೋತ್ಸವಗಳನ್ನು ನಡೆಸುವುದು ಮಾತ್ರ ತಮ್ಮ ಕರ್ತವ್ಯವೇ ಅಥವಾ ದೇಶವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸುವಾಗ ಪ್ರಮುಖ ಪಾತ್ರವಹಿಸುವಂತಹ ಸಂಸ್ಥೆಯನ್ನು ರಚಿಸಬೇಕೇ? ನೀವೆಲ್ಲರೂ ವರ್ತಮಾನದ ಬಗ್ಗೆ ಕಾಳಜಿ ವಹಿಸಬೇಕು. ನೀವು ನಿಮ್ಮ ಪೂರ್ವಜರ ಕೆಲಸವನ್ನು ಮುಂದುವರಿಸಬೇಕು. ಮತ್ತು ಇಂದು ಕೆಲಸ ಮಾಡುವವರು ಭವಿಷ್ಯದ ಬಗ್ಗೆ ಯೋಚಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕು. ನಾನು ಮೊದಲೇ ಹೇಳಿದಂತೆ, ನಾನು ಇಂದು ಕೆಲವು ವಿದ್ಯಾರ್ಥಿಗಳನ್ನು ಭೇಟಿಯಾದೆ ಮತ್ತು ಅವರ ಕುತೂಹಲವನ್ನು ಕಣ್ಣಾರೆ ಕಂಡು ಅನುಭವಿಸಿದೆ. ನಿಮ್ಮ ಮನೆಯಲ್ಲಿ ಪುಟ್ಟ ಮೊಮ್ಮಕ್ಕಳು ನಿಮಗೆ ಪ್ರಶ್ನೆಗಳನ್ನು ಕೇಳಿದಾಗ ನೀವು ಇದೇ ಅನುಭವವನ್ನು ಪಡೆಯುತ್ತಿರಬಹುದು. ಅವರ ಪ್ರಶ್ನೆಗಳಿಗೆ ಉತ್ತರಿಸಲು ನೀವು ಸ್ವಲ್ಪ ಸಮಯ ಯೋಚಿಸಬೇಕು. ಕೆಲವೊಮ್ಮೆ, ಅವರು ನಿಮ್ಮನ್ನು ಪೀಡಿಸುತ್ತಿದ್ದಾರೆ ಎಂಬ ಭಾವನೆ ನಿಮಗೆ ಬರಬಹುದು. ಆದರೆ ಅವರು ನಿಮ್ಮನ್ನು ಪೀಡಿಸುತ್ತಿಲ್ಲ. ವಾಸ್ತವವಾಗಿ, ನೀವು ಅವರಿಗೆ ಉತ್ತರಿಸಲು ಅಸಮರ್ಥರಾಗಿದ್ದೀರಿ. ನೀವೆಲ್ಲರೂ ಇದನ್ನು ನಿಮ್ಮ ಮನೆಗಳಲ್ಲಿ ಅನುಭವಿಸಿರಬೇಕು. ಇಂದಿನ ಪೀಳಿಗೆಯು ಗೂಗಲ್ ಮೂಲಕ ಅನ್ವೇಷಣೆ ನಡೆಸಿ ಅನೇಕ ಪ್ರಶ್ನೆಗಳೊಂದಿಗೆ ಬರುತ್ತದೆ. ಅವರು ನಿಮ್ಮ ಬುದ್ಧಿವಂತಿಕೆಯನ್ನು ಪ್ರಶ್ನಿಸುತ್ತಾರೆ ಏಕೆಂದರೆ ಅವರು ಗೂಗಲ್ ಏನು ನೀಡುತ್ತದೆಯೋ ಅದನ್ನು ಅನುಸರಿಸಿಕೊಂಡು ಬರುತ್ತಿರುತ್ತಾರೆ. ಮಗು ನಿಮ್ಮನ್ನು ಎದುರಿಸುತ್ತದೆ, ಪ್ರತಿಸವಾಲು ಹಾಕುತ್ತದೆ. ಈ ಮಕ್ಕಳು 10 ವರ್ಷಗಳ ನಂತರ ನಿಮ್ಮ ವಿಶ್ವವಿದ್ಯಾಲಯಕ್ಕೆ ಬಂದರೆ ನಿಮಗೆ ಏನಾಗುತ್ತದೆ? ಇಂದಿನಿಂದ ನಾವು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. ನೀವು ಮನೆಯಲ್ಲಿಯೇ ನಿಮ್ಮ ಮಕ್ಕಳೊಂದಿಗೆ ಹೊಂದಾಣಿಕೆಯ ಕೊರತೆಯನ್ನು ಅನುಭವಿಸುತ್ತಿದ್ದೀರಿ. ಶಾಲಾ ಕಾಲೇಜುಗಳಲ್ಲಿ ಹೊಸ ಆಲೋಚನೆಯೊಂದಿಗೆ ಇರುವ ಯುವ ಪೀಳಿಗೆಗೆ ಅನುಗುಣವಾಗಿ ಬದುಕಲು ನಮಗೆ ಸಾಧ್ಯವಾಗದಿದ್ದರೆ ಅದರಿಂದ ದೊಡ್ಡ ಅನ್ಯಾಯವಾಗುತ್ತದೆ. ಆದ್ದರಿಂದ, ನಾವು ಭವಿಷ್ಯವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದಕ್ಕೆ ಅನುಗುಣವಾಗಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ. ನಾನು ಕೆಲವು ದಿನಗಳ ಹಿಂದೆ ಡಿಜಿಟಲ್ ಇಂಡಿಯಾ ಅಭಿಯಾನದ ಅಂಗವಾಗಿ ಗಾಂಧಿನಗರದಲ್ಲಿ ಏರ್ಪಟ್ಟ ಪ್ರದರ್ಶನವನ್ನು ನೋಡಲು ಹೋಗಿದ್ದೆ. ಸರ್ಕಾರಿ ಶಾಲೆಗಳ ಮಕ್ಕಳು ಅಲ್ಲಿ ಇದ್ದರು. ಅಲ್ಲಿ 10, 11 ಮತ್ತು 12 ನೇ ತರಗತಿಯಲ್ಲಿ ಓದುವ ವಿದ್ಯಾರ್ಥಿಗಳಿದ್ದರು. ಈ ಮಕ್ಕಳು ಮಾಡಿದ ಪ್ರಾಜೆಕ್ಟ್ ಗಳನ್ನು ಮತ್ತು ಚಿಂತನೆಗಳನ್ನು ನೋಡುತ್ತಾ ನಾನು ಪ್ರಭಾವಿತನಾದೆ. ಇಷ್ಟು ಕಿರಿಯ ವಯಸ್ಸಿನಲ್ಲಿ ಅವರ ಸಂಶೋಧನಾ ಸಾಮರ್ಥ್ಯ ಮತ್ತು ಅವರ ಆವಿಷ್ಕಾರಗಳನ್ನು ನೋಡಿ ನಾನು ದಿಗ್ಭ್ರಮೆಗೊಂಡೆ. ಅನೇಕ ಮಕ್ಕಳು ಬಯೋಟೆಕ್ ಮತ್ತು ಜೆನೆಟಿಕ್ಸ್ ನಲ್ಲಿ ಆಸಕ್ತಿ ಹೊಂದಿದ್ದರು. ಅವರ ತರಗತಿಗಳಲ್ಲಿ ವಿಜ್ಞಾನದ ಮೂಲಭೂತ ಅಂಶಗಳನ್ನು ಅವರಿಗೆ ಕಲಿಸಲಾಗುತ್ತಿರುವ ಕಾಲದಲ್ಲಿಯೇ, ಅವರು ಜೀನ್ ಮ್ಯಾಪಿಂಗ್, ಅಫಿನಿಟಿ ಕ್ರೊಮ್ಯಾಟೋಗ್ರಫಿ ಮತ್ತು ಆನುವಂಶಿಕ ಗ್ರಂಥಾಲಯ ಆಧಾರಿತ ಸಲಕರಣೆಗಳ ಬಗ್ಗೆ ಮಾತನಾಡುತ್ತಿದ್ದರು. ಈಗ ವ್ಯತ್ಯಾಸ, ಅಂತರ ಎಷ್ಟು ದೊಡ್ಡದಾಗಿದೆ ಎಂಬುದನು ಕಲ್ಪಿಸಿಕೊಳ್ಳಿ. ಅವರ ಕೆಲಸವನ್ನು ನೋಡಿದಾಗ, ಅವರು ಉನ್ನತ ಶಿಕ್ಷಣಕ್ಕೆ ಹೋಗುವಾಗ ನಮ್ಮ ಸಂಸ್ಥೆಗಳು ಅವರ ಆಧುನಿಕ ಚಿಂತನೆಗೆ ಅನುಗುಣವಾಗಿ ಸಿದ್ಧಗೊಂಡಿರುತ್ತವೆಯೇ ಎಂದು ನಾನು ಆಶ್ಚರ್ಯ ಚಕಿತನಾಗಿದ್ದೇನೆ. ಈ ಮಕ್ಕಳು ತಮ್ಮ ಉನ್ನತ ಶಿಕ್ಷಣವನ್ನು ತಲುಪುವವರೆಗೆ ನಾವು ಕಾಯುತ್ತಿದ್ದರೆ, ಆ ಹೊತ್ತಿಗೆ ಜಗತ್ತು ಬಹುದೂರ ಸಾಗಿರುತ್ತದೆ, ಸ್ನೇಹಿತರೇ. ಆದುದರಿಂದ, ಮಕ್ಕಳನ್ನು ಪ್ರೇರೇಪಿಸುವ, ಅವರು ಪ್ರೇರಣೆ ಪಡೆಯುವ ಈ ವಯಸ್ಸಿನಲ್ಲಿ ಮಾರ್ಗದರ್ಶನ ಮತ್ತು ಸಂಪನ್ಮೂಲಗಳನ್ನು ಒದಗಿಸಲು ನಾವು ಈಗ ಯೋಜನೆ ರೂಪಿಸಬೇಕಾಗಿದೆ. ನಮ್ಮ ಸಂಸ್ಥೆಗಳಲ್ಲಿ ಅಂತಹ ವ್ಯವಸ್ಥೆಯನ್ನು ನಿರ್ಮಾಣ ಮಾಡಲು ನಾವು ತೊಡಗಿಕೊಳ್ಳಬೇಕು.

ಸ್ನೇಹಿತರೇ,

ರಾಷ್ಟ್ರೀಯ ಶಿಕ್ಷಣ ನೀತಿಯು ಈ ತಿಂಗಳ ಕೊನೆಯಲ್ಲಿ ಅಂದರೆ ಜುಲೈ 29 ರಂದು ಎರಡು ವರ್ಷಗಳನ್ನು ಪೂರ್ಣಗೊಳಿಸಲಿದೆ. ಮತ್ತು ಈಗಷ್ಟೇ ಧರ್ಮೇಂದ್ರ ಜೀ ಅವರು ಈ ಶಿಕ್ಷಣ ನೀತಿಯನ್ನು ಸಾಕಷ್ಟು ಚಿಂತನ-ಮಂಥನದ ನಂತರ ರೂಪಿಸಲಾಗಿದೆ ಎಂದು ನಮಗೆ ಹೇಳುತ್ತಿದ್ದರು. ಕಸ್ತೂರಿರಂಗನ್ ಅವರು ಅತ್ಯಂತ ಸಮರ್ಥ ನಾಯಕತ್ವವನ್ನು ಒದಗಿಸಿದರು ಮತ್ತು ಅವರಿಂದಾಗಿ ಇದು ಸಾಧ್ಯವಾಯಿತು. ಇಂತಹ ವೈವಿಧ್ಯಮಯ ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗೀಕರಿಸಿರುವುರಲ್ಲಿಯೇ ಒಂದು ದೊಡ್ಡ ಸಾಧನೆ ಅಡಕಗೊಂಡಿದೆ. ಇದು ದೊಡ್ಡ ಸಾಧನೆಯಾಗಿದೆ. ಆದರೆ ಅದರ ವಿಶೇಷತೆಗಳನ್ನು ನೋಡಿ. ಅದರ ಹಿಂದೆ ಸಾಕಷ್ಟು ಚಿಂತನ ಮಂಥನ ನಡೆಯಿತು. ಮತ್ತು ಸರ್ಕಾರಗಳಲ್ಲಿ ಸಾಮಾನ್ಯವಾಗಿ ದಾಖಲೆಗಳು ತಯಾರಾದ ನಂತರ ಅದನ್ನು ಸಮಯದ ಕೃಪಾದೃಷ್ಟಿಗೆ ಮತ್ತು ಕೆಲವು ವ್ಯಕ್ತಿಗಳ ಕಾರುಣ್ಯದ ದೃಷ್ಟಿಗೆ ಒಡ್ಡಿಕೊಳ್ಳಲು ಬಿಡಲಾಗುತ್ತದೆ. ಈ ದಾಖಲೆಯು ಕೆಲವು ದಿನಗಳವರೆಗೆ ಮೇಜನ್ನು ಅಲಂಕರಿಸುತ್ತದೆ. ನಂತರ ಒಂದು ಹೊಸ ದಸ್ತಾವೇಜು ಬಂದು ಅದನ್ನು ಸ್ಥಳಾಂತರಿಸುತ್ತದೆ. ಈ ವಿಷಯ ಅಲ್ಲಿಗೆ ಮುಕ್ತಾಯಗೊಳ್ಳುತ್ತದೆ. ನಿಮಗೆ ಕೂಡಾ ಈ ಸಂಸ್ಕೃತಿಯ ಅನುಭವ ಆಗಿರಬಹುದು. ಆದರೆ ನಾವು ಮಾತ್ರ ಆ ಸ್ಥಿತಿ ಬರಲು ಅವಕಾಶ ನೀಡಲಿಲ್ಲ.

ನಾವು ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರತಿಕ್ಷಣವೂ ಜೀವಂತವಾಗಿರಿಸಿದ್ದೇವೆ. ಬಹುಶಃ ಇಷ್ಟು ಕಡಿಮೆ ಅವಧಿಯಲ್ಲಿ ಕನಿಷ್ಠ 25 ವಿಚಾರ ಸಂಕಿರಣಗಳಿಗೆ ನಾನೇ ಹಾಜರಾಗಿದ್ದೇನೆ. 25 ಕ್ಕೂ ಹೆಚ್ಚು ವಿಚಾರ ಸಂಕಿರಣಗಳು ಇರಬೇಕು ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಈ ವಿಷಯದ ಬಗ್ಗೆ ನಿಯಮಿತವಾಗಿ ಮಾತನಾಡುತ್ತಿದ್ದೇನೆ. ಕಸ್ತೂರಿರಂಗನ್ ಅವರು ಈ ವರದಿಯನ್ನು ಸಲ್ಲಿಸಿದ ನಂತರ ಎಲ್ಲಾ ವರ್ಗಗಳ ಜನರೊಂದಿಗೆ ನಿರಂತರವಾಗಿ ಸಂವಹನ ನಡೆಸುತ್ತಿದ್ದಾರೆ. ಅವರು ಈ ನೀತಿಗೆ ಸಂಬಂಧಿಸಿದ ಸ್ಪಷ್ಟೀಕರಣಗಳು, ಚಿಂತನೆ ಮತ್ತು ಎಲ್ಲಾ ಹಿನ್ನೆಲೆ ಮಾಹಿತಿಯನ್ನು ವಿವರಿಸುತ್ತಿದ್ದಾರೆ. ಸರ್ಕಾರದ ಎಲ್ಲಾ ಇಲಾಖೆಗಳು ನಿರಂತರವಾಗಿ ವಿವಿಧ ಜನರನ್ನು ಸಂಪರ್ಕಿಸುತ್ತಿವೆ ಮತ್ತು ವಿವರಗಳನ್ನು ಒದಗಿಸುತ್ತಿವೆ. ಇದು 30 ವರ್ಷಗಳ ನಂತರ ಬಂದಿದೆ ಮತ್ತು ಇದನ್ನು ಕೇವಲ ಇತರ ಯಾವುದೇ ದಾಖಲೆ ಎಂಬಂತೆ ಪರಿಗಣಿಸಲಾಗದು. ನೀವು ಎಲ್ಲಾ ಪುಟಗಳನ್ನು ಓದಿದ್ದರೂ, ಮುಂದಿನ ಮೂರು ದಿನಗಳವರೆಗೆ ನೀವು ಈ ನೀತಿಯನ್ನು ಚಿಂತನ ಮಂಥನ ಮಾಡಿದಾಗ ನೀವು ಅನೇಕ ಸೂಕ್ಷ್ಮಗಳನ್ನು ಕಾಣುತ್ತೀರಿ. ಈ ಸಮಾವೇಶದ ಕೊನೆಯಲ್ಲಿ, ನಿಮ್ಮ ವಿಶ್ವವಿದ್ಯಾಲಯಗಳಲ್ಲಿ ಇದೇ ರೀತಿಯ ನಿರಂತರ ಚಿಂತನ ಮಂಥನವನ್ನು ನಡೆಸುವ ಯೋಜನೆಯನ್ನು ಮಾಡಿಕೊಳ್ಳಿ. ಇಲ್ಲಿ ಏನು ಹೇಳಲಾಗಿದೆಯೋ ಅದನ್ನು ಕೇಳಿ ಮತ್ತೆ ಅದರ ಗೊಡವೆ ಬೇಡ ಎಂದು ಸುಮ್ಮನಾಗಬೇಡಿ. ನೀವು ಈ ನೀತಿಯನ್ನು ನಿಮ್ಮ ಉಳಿದ ಸಹಚರರೊಂದಿಗೆ ಚರ್ಚಿಸಬೇಕು ಮತ್ತು ಆಗ ಮಾತ್ರ ಅದು ಪ್ರಯೋಜನಕಾರಿಯಾಗುತ್ತದೆ. ಮತ್ತು ಅದರ ಅನುಷ್ಠಾನದ ಸವಾಲುಗಳ ಬಗ್ಗೆ ಪ್ರತಿಯೊಂದು ವಿವರಕ್ಕೂ ನಾವು ಗಮನ ಕೊಡುತ್ತಿರಬೇಕು.

ಸ್ನೇಹಿತರೇ,

ಯಾರಾದರೂ ಕೆಲಸವನ್ನು ತಮ್ಮ ಕೈಗೆ ತೆಗೆದುಕೊಂಡು ನಿಭಾಯಿಸಿದಾಗ, ಸಮಸ್ಯೆಗಳಿಗೆ ಪರಿಹಾರವೂ ವೇಗವಾಗಿ ಲಭಿಸುತ್ತದೆ. ಯಾರಾದರೂ ಅದನ್ನು ಕೇವಲ ಸಮಸ್ಯೆ ಎಂದು ಪರಿಗಣಿಸಿದರೆ ಮತ್ತು ಪ್ರಯತ್ನಗಳನ್ನು ಮಾಡದಿದ್ದರೆ ಆಗ ಪರಿಹಾರವನ್ನು ಎಂದಿಗೂ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಸ್ನೇಹಿತರೇ! ಈ ಎರಡು ವರ್ಷಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ದೇಶವು ಅನೇಕ ದೃಢವಾದ ಕ್ರಮಗಳನ್ನು ಕೈಗೊಂಡಿದೆ. ಏತನ್ಮಧ್ಯೆ, ಪ್ರವೇಶ, ಗುಣಮಟ್ಟ ಮತ್ತು ಭವಿಷ್ಯದ ಸಿದ್ಧತೆಯಂತಹ ಪ್ರಮುಖ ವಿಷಯಗಳ ಬಗ್ಗೆ ಕಾರ್ಯಾಗಾರಗಳು ಸಹ ಸಾಕಷ್ಟು ಸಹಾಯ ಮಾಡಿವೆ. ದೇಶ ಮತ್ತು ವಿದೇಶಗಳ ಶಿಕ್ಷಣ ತಜ್ಞರೊಂದಿಗಿನ ಚರ್ಚೆಗಳು ಮತ್ತು ದೇಶದ ಶಿಕ್ಷಣ ಸಚಿವರೊಂದಿಗಿನ ನನ್ನ ಸಂವಾದಗಳು ಸಹ ಈ ಪ್ರಕ್ರಿಯೆಯನ್ನು ವೇಗಗೊಳಿಸಿವೆ. ಕೆಲವು ದಿನಗಳ ಹಿಂದಷ್ಟೇ, ನಮ್ಮ ಧರ್ಮೇಂದ್ರ ಜೀ ಅವರು ದೇಶದ ಎಲ್ಲಾ ಶಿಕ್ಷಣ ಸಚಿವರ ಸಭೆಯನ್ನು ಕರೆದಿದ್ದರು. ನಾವು ಅದನ್ನು ನಿಮ್ಮೊಂದಿಗೆ ಚರ್ಚಿಸುತ್ತಿರುವ ರೀತಿಯಲ್ಲೇ ಅವರೊಂದಿಗೂ ಚರ್ಚಿಸಲಾಯಿತು. ಅದರ 100 ಪ್ರತಿಶತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆಯೇ ಎಂಬುದೊಂದು ಪ್ರಶ್ನೆ ಇದೆ? ರಾಜ್ಯ ಸರ್ಕಾರಗಳು ಕೂಡಾ ಈ ದಿಕ್ಕಿನಲ್ಲಿ ಹಲವಾರು ಪ್ರಮುಖ ಕ್ರಮಗಳನ್ನು ಕೈಗೊಂಡಿವೆ. ಮತ್ತು ಪ್ರತಿಯೊಬ್ಬರ ಪ್ರಯತ್ನದ ಫಲವಾಗಿಯೇ ದೇಶವು, ವಿಶೇಷವಾಗಿ ದೇಶದ ಯುವಜನತೆ ಈ ಪ್ರಮುಖ ಬದಲಾವಣೆಯಲ್ಲಿ ಭಾಗವಹಿಸುವಂತಾಗಿದೆ.

ಸ್ನೇಹಿತರೇ,

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗಾಗಿ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಮೂಲಸೌಕರ್ಯಗಳ ಕೂಲಂಕುಷ ಪರಿಶೀಲನೆ ಮತ್ತು ಪರಿವರ್ತನೆಯನ್ನು ಮಾಡಲಾಗಿದೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ತೆರೆಯಲಾಗುತ್ತಿದೆ ಮತ್ತು ಹೊಸ ಐಐಟಿಗಳು ಮತ್ತು ಐಐಎಂಗಳನ್ನು ಸ್ಥಾಪಿಸಲಾಗುತ್ತಿದೆ. 2014ರಿಂದೀಚೆಗೆ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಶೇ.55ರಷ್ಟು ಹೆಚ್ಚಾಗಿದೆ. ಯುವಜನರಿಗೆ ಉತ್ತಮ ಅವಕಾಶಗಳನ್ನು ನೀಡುವ ಸಲುವಾಗಿ, ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಯನ್ನು ಈ ವರ್ಷದಿಂದ ಏಕರೂಪದ ಮಾನದಂಡಗಳೊಂದಿಗೆ ವಿಶ್ವವಿದ್ಯಾಲಯಗಳಾದ್ಯಂತ ಜಾರಿಗೆ ತರಲಾಗಿದೆ. ಇಂತಹ ಇನ್ನೂ ಅನೇಕ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಈ ಪ್ರಯತ್ನಗಳ ಫಲವಾಗಿ ಜಾಗತಿಕ ವಿಶ್ವವಿದ್ಯಾಲಯಗಳ ಶ್ರೇಯಾಂಕದಲ್ಲಿ ಭಾರತೀಯ ಸಂಸ್ಥೆಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಈ ಬದಲಾವಣೆ ಕೇವಲ ಆರಂಭ ಮಾತ್ರ. ಈ ದಿಕ್ಕಿನಲ್ಲಿ ನಾವು ಇನ್ನೂ ಬಹಳ ದೂರ ಸಾಗಬೇಕಾಗಿದೆ.

ಸ್ನೇಹಿತರೇ,

ರಾಷ್ಟ್ರೀಯ ಶಿಕ್ಷಣ ನೀತಿಯು ಈಗ ಮಾತೃಭಾಷೆಯಲ್ಲಿ ಅಧ್ಯಯನಕ್ಕೆ ದಾರಿಯನ್ನು ತೆರೆಯುತ್ತಿದೆ ಎಂಬ ಬಗ್ಗೆ ನನಗೆ ತೃಪ್ತಿ ಇದೆ. ಅದರಂತೆ, ಸಂಸ್ಕೃತದಂತಹ ಪ್ರಾಚೀನ ಭಾರತೀಯ ಭಾಷೆಗಳನ್ನು ಸಹ ಉತ್ತೇಜಿಸಲಾಗುತ್ತಿದೆ. ಸಂಸ್ಕೃತಕ್ಕೆ ಸಂಬಂಧಿಸಿದ ಜನರಿಗಾಗಿ ಇಲ್ಲಿ ವಿಶೇಷ ವ್ಯವಸ್ಥೆಗಳನ್ನು ಸಹ ಮಾಡಲಾಗಿರುವುದನ್ನು ನಾನು ಕಾಣುತ್ತಿದ್ದೇನೆ. ಕಾಶಿ ನೆಲದಿಂದ ಆಗಿರುವ ಈ ಆರಂಭವು ಖಂಡಿತವಾಗಿಯೂ ಭಾರತೀಯ ಭಾಷೆಗಳಿಗೆ ಮತ್ತು ನಿರ್ಣಯಗಳಿಗೆ ಹೊಸ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ.

ಸ್ನೇಹಿತರೇ,

ಸದ್ಯೋಭವಿಷ್ಯದಲ್ಲಿ ಭಾರತವು ವಿಶ್ವದ ಪ್ರಮುಖ ಜಾಗತಿಕ ಶಿಕ್ಷಣ ಕೇಂದ್ರವಾಗಿ ಹೊರಹೊಮ್ಮಬಹುದು ಎಂಬುದರಲ್ಲಿ ಸಂಪೂರ್ಣ ನಂಬಿಕೆ ನನಗಿದೆ. ಭಾರತವು ವಿಶ್ವದ ಯುವಜನತೆಗೆ ಶಿಕ್ಷಣದ ತಾಣವಾಗುವುದಲ್ಲದೆ, ವಿಶ್ವದ ಇತರ ದೇಶಗಳಲ್ಲಿ ನಮ್ಮ ಯುವಜನತೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಆದ್ದರಿಂದ, ನಾವು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ತಯಾರು ಮಾಡಬೇಕು. ಈ ದಿಶೆಯಲ್ಲಿ ದೇಶವು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಉನ್ನತ ಶಿಕ್ಷಣವನ್ನು ಸಿದ್ಧಪಡಿಸಲು ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಸುಮಾರು 180 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಂತರರಾಷ್ಟ್ರೀಯ ವ್ಯವಹಾರಗಳಿಗಾಗಿ ವಿಶೇಷ ಕಚೇರಿಗಳನ್ನು ಸ್ಥಾಪಿಸಲಾಗಿದೆ. ನೀವೆಲ್ಲರೂ ಈ ದಿಶೆಯಲ್ಲಿ ಅಗತ್ಯ ಚರ್ಚೆಗಳನ್ನು ನಡೆಸುವುದು ಮಾತ್ರವಲ್ಲದೆ, ಭಾರತದ ಹೊರಗಿನ ವ್ಯವಸ್ಥೆಗಳ ಬಗ್ಗೆಯೂ ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸಬೇಕೆಂದು ನಾನು ಆಶಿಸುತ್ತೇನೆ. ಈ ಹೊಸ ವ್ಯವಸ್ಥೆಗಳು ಭಾರತದ ಶಿಕ್ಷಣ ವ್ಯವಸ್ಥೆಯು ಅಂತರರಾಷ್ಟ್ರೀಯ ಅನುಭವಗಳೊಂದಿಗೆ ಜೋಡಿಸಿಕೊಳ್ಳಲು ಸಹಾಯ ಮಾಡುತ್ತವೆ.

ಸ್ನೇಹಿತರೇ,

ಮುಂದಿನ ಮೂರು ದಿನಗಳಲ್ಲಿ ನೀವು ವಿವಿಧ ಅಧಿವೇಶನಗಳಲ್ಲಿ ಅನೇಕ ಪ್ರಮುಖ ವಿಷಯಗಳನ್ನು ಚರ್ಚಿಸಲಿದ್ದೀರಿ. ಈ ಚರ್ಚೆಯು ವಿವಿಧ ಕ್ಷೇತ್ರಗಳಲ್ಲಿ ದೇಶಕ್ಕೆ ಹೊಸ ಹಾದಿಗಳಿಗೆ ಎಡೆಮಾಡಿಕೊಡುತ್ತದೆ ಮತ್ತು ಯುವ ಪೀಳಿಗೆಗೆ ಮಾರ್ಗದರ್ಶನ ನೀಡುತ್ತದೆ ಎಂದು ನಾನು ಆಶಿಸುತ್ತೇನೆ. ವಿಶ್ವದ ಅನೇಕ ದೇಶಗಳು ವಿವಿಧ ಕ್ಷೇತ್ರಗಳಲ್ಲಿನ ತಮ್ಮ ಪ್ರಗತಿಗೆ ವಿಶ್ವವಿದ್ಯಾಲಯಗಳಿಗೆ ಋಣಿಯಾಗಿವೆ. ವಿಶ್ವವಿದ್ಯಾಲಯಗಳು ನಿರಂತರವಾಗಿ ಸಾಮಾಜಿಕ-ಆರ್ಥಿಕ ಮತ್ತು ವೈಜ್ಞಾನಿಕ ವಿಷಯಗಳ ಬಗ್ಗೆ ಸಂಶೋಧನೆ ನಡೆಸುತ್ತವೆ, ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತವೆ. ನಾವು ಇಲ್ಲಿಯೂ ಅದೇ ಸಂಸ್ಕೃತಿ ಮತ್ತು ವೈಧಾನಿಕತೆಯನ್ನು ಬೆಳೆಸಬೇಕಾಗಿದೆ. ಇದು ಯುವ ಪೀಳಿಗೆಗೆ ದೇಶ ಮತ್ತು ದೇಶದ ನೀತಿಗಳ ಬಗ್ಗೆ ತಿಳುವಳಿಕೆಯನ್ನು ನೀಡುತ್ತದೆ ಮತ್ತು ಅವರು ಕೂಡಾ ಹಲವಾರು ಸಾಧ್ಯತೆಗಳ ಬಗ್ಗೆ ಅರಿತುಕೊಳ್ಳುತ್ತಾರೆ. ದೇಶದ ಯುವಜನರ ನವೀನ ಚಿಂತನೆ ಮತ್ತು ಹೊಸ ಆಲೋಚನೆಗಳೊಂದಿಗೆ ಹೆಚ್ಚು ಹೆಚ್ಚು ಹೊಂದಿಕೊಳ್ಳುವಂತಹ ಹೊಸ ವ್ಯವಸ್ಥೆಗಳು ರೂಪುಗೊಳ್ಳಬೇಕು ಎಂಬುದರಲ್ಲಿ ನಾನು ಸದಾ ನಂಬಿಕೆ ಇರಿಸಿದ್ದೇನೆ. ಇದು ಹೊಸ ಪ್ರತಿಭೆ ಮತ್ತು ಹೊಸ ಆಲೋಚನೆಗಳಿಗೆ ಹಾದಿ ತೆರೆಯುತ್ತದೆ. ನೀವೆಲ್ಲರೂ ಈ ಬಗ್ಗೆಯೂ ಚರ್ಚಿಸಬೇಕು ಮತ್ತು ನೀಲನಕ್ಷೆಯನ್ನು ತಯಾರಿಸಬೇಕು ಎಂದು ನಾನು ಆಶಿಸುತ್ತೇನೆ. ವಿವಿಧ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯಗಳು ಸರ್ಕಾರದೊಂದಿಗೆ ಹೇಗೆ ಪಾಲುದಾರರಾಗಬಹುದು ಎಂಬುದನ್ನೂ ಸಹ ಚರ್ಚಿಸಬಹುದು. ನೀವು ನಿಮ್ಮ ಸ್ವಂತ ಪರಿಣತಿಯನ್ನು, ತಜ್ಞತೆಯನ್ನು ನಿರ್ಧರಿಸಿಕೊಳ್ಳಬೇಕು. ನೀವು ನಿಮ್ಮ ಕ್ಷೇತ್ರದಲ್ಲಿ ಸಮೀಕ್ಷೆಗಳು ಮತ್ತು ಅಧ್ಯಯನಗಳನ್ನು ನಡೆಸಬೇಕು ಮತ್ತು ಸರ್ಕಾರಕ್ಕೆ ಸಲಹೆಗಳನ್ನು ನೀಡಬೇಕು. ನಿಮ್ಮ ವಿಶ್ವವಿದ್ಯಾಲಯದ 50-100 ಕಿ.ಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು ಯಾವುವು? ಪರಿಹಾರಗಳು ಯಾವುವು? ಸಂಪನ್ಮೂಲಗಳೇನು?, ಆ ಸಂಪನ್ಮೂಲಗಳಿಗಾಗಿ ಏನು ಮಾಡಬಹುದು? ಅಲ್ಲಿನ ಸಾಮಾನ್ಯ ಜನರ ಮನೋಭಾವವೇನು?.ಇದರಿಂದ ನಿಮ್ಮ ವಿದ್ಯಾರ್ಥಿಗಳಿಗೆ ಒಂದು ಯೋಜನೆ (ಪ್ರಾಜೆಕ್ಟ್) ಲಭಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ಉತ್ತಮ ವರದಿಯ ಸಾಧ್ಯತೆಯೂ ಇರುತ್ತದೆ. ಸರ್ಕಾರದ ಯಾವುದೇ ಯೋಜನೆಯ ಬಗ್ಗೆ, ಅದರ ಅನುಕೂಲಗಳು, ನ್ಯೂನತೆಗಳು ಮತ್ತು ಸುಧಾರಣೆಯ ಸಾಧ್ಯತೆಗಳ ಬಗ್ಗೆ ಉತ್ತಮ ವರದಿಯನ್ನು ಮಾಡಲು ಸಾಧ್ಯವಿದೆ. ಈ ಎಲ್ಲ ವಿಷಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದರೆ, ಅಭೂತಪೂರ್ವ ಫಲಿತಾಂಶಗಳು ಬರಬಹುದು. ನಾನು ಗುಜರಾತ್ ನಲ್ಲಿದ್ದಾಗ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಒಂದು ಕಾರ್ಯಕ್ರಮವಿದ್ದದ್ದು ನನಗೆ ನೆನಪಿದೆ. ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದ ಅಧಿಕಾರಿಗಳು ಗ್ರಾಮೀಣಾಭಿವೃದ್ಧಿಯಲ್ಲಿ ಸಾಕಷ್ಟು ಸಂಶೋಧನೆಗಳನ್ನು ಮಾಡಿದ ನಂತರ ಕೆಲವು ಪುಸ್ತಕಗಳನ್ನು ಸಿದ್ಧಪಡಿಸಿದ್ದರು. ಅವರು ಆ ಪುಸ್ತಕಗಳನ್ನು ನನಗೆ ಉಡುಗೊರೆಯಾಗಿ ನೀಡಿದರು. ನಾನು ಆ ಪುಸ್ತಕಗಳನ್ನು ಓದುತ್ತಿರುವಂತೆಯೇ ಅವುಗಳು ಬಹಳ ಆಸಕ್ತಿದಾಯಕವಾಗಿರುವುದನ್ನು ಕಂಡುಕೊಂಡೆ. ನಾನು ಇಲಾಖೆಗೆ ಒಂದು ಕೆಲಸವನ್ನು ಕೊಟ್ಟೆ. ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಮಕ್ಕಳು ಏನು ಹೇಳುತ್ತಿದ್ದಾರೆ ಮತ್ತು ಸರ್ಕಾರ ಹೇಗೆ ಮುಂದುವರಿಯುತ್ತಿದೆ ಎಂಬುದರ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯಲು ನಾನು ಅಧಿಕಾರಿಗಳಿಗೆ ಹೇಳಿದೆ. ನಿಮಗೆ ಆಶ್ಚರ್ಯವಾಗಬಹುದು, ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ನಮ್ಮ ಯೋಜನೆಗಳ ಹಲವು ವಿಷಯಗಳಲ್ಲಿ ನನಗೆ ಇದರಿಂದ ಸಹಾಯವಾಯಿತು. ಇದೊಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡಿದಂತಹ ಕೆಲಸವಾಗಿತ್ತು. ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತು ನಿರ್ಧಾರಗಳನ್ನು ತೆಗೆದುಕೊಳ್ಳುವುದು ತುಂಬಾ ಕಷ್ಟ. ನಮ್ಮ ಹೊಸ ಪೀಳಿಗೆಯು ತಳಮಟ್ಟದಲ್ಲಿ ಕಾರ್ಯಾಚರಿಸಿ,ವಾಸ್ತವಿಕ ಮಟ್ಟದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತದೆ. ಆ ವಿಷಯಕ್ಕಾಗಿ, ನಾವು ಪ್ರಯೋಗಾಲಯಗಳಲ್ಲಿ ಸಂಶೋಧನೆ ನಡೆಸುವ ಕೃಷಿ ವಿಶ್ವವಿದ್ಯಾಲಯವನ್ನು ಹೊಂದಿದ್ದೇವೆ. ಅದು ಹೇಗೆ ಕೆಲಸ ಮಾಡಿದರೂ, ಅದು ಪ್ರಮಾಣಪತ್ರವನ್ನು ಪಡೆಯುತ್ತದೆ ಮತ್ತು ಅದರ ಲೇಖನವನ್ನು ಅಂತರರಾಷ್ಟ್ರೀಯ ನಿಯತಕಾಲಿಕದಲ್ಲಿ ಪ್ರಕಟಿಸಲಾಗುತ್ತದೆ. ಅದು ಪದವಿಯನ್ನು ಪಡೆದರೂ, ಇಡೀ ಸಂಶೋಧನೆಯು ಪ್ರಯೋಗಾಲಯದಲ್ಲಿ ಉಳಿಯುತ್ತದೆ. ನಾವು 'ಲ್ಯಾಬ್ ಟು ಲ್ಯಾಂಡ್' ಗಾಗಿ ಮಾರ್ಗಸೂಚಿಯನ್ನು ಸಹ ಹೊಂದಿರಬೇಕು. ಪ್ರಯೋಗಾಲಯದಲ್ಲಿ ಏನಿದೆಯೋ ಅದನ್ನು ನಾವು ನೆಲದಲ್ಲಿ ಜಾರಿಗೆ ತರಬೇಕು. ಅದೇ ರೀತಿಯಲ್ಲಿ ತಳಮಟ್ಟದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅನುಭವವಿದೆ. ತಳಮಟ್ಟದ ವಾಸ್ತವಿಕತೆಯ ಅನುಭವ ಪ್ರಯೋಗಾಲಯಗಳಲ್ಲಿಯೂ ಬಳಕೆಯಾಗಬೇಕು. ಸಂಶೋಧನೆ ಮತ್ತು ಪಾರಂಪರಿಕ ಅನುಭವವನ್ನು ಹೇಗೆ ಶ್ರೀಮಂತಗೊಳಿಸುವುದು ಎಂಬುದರ ಬಗ್ಗೆ ನಾವು ಚಿಂತಿಸಬೇಕು. . ಅದೇ ರೀತಿ ಸಾಂಪ್ರದಾಯಿಕ ಔಷಧಿಯ ಜ್ಞಾನದೊಂದಿಗೆ ಅಂದರೆ, ಆಯುರ್ವೇದದ ಜ್ಞಾನದೊಂದಿಗೆ ಅದು ಸಮ್ಮಿಳಿತಗೊಳ್ಳಬೇಕು. ನೀವಾಗಲೀ ಅಥವಾ ನಾನಾಗಲೀ ಅದಕ್ಕೆ ಸವಾಲು ಹಾಕುವುದಿಲ್ಲ. ಆದರೆ ವಿಶ್ವದ ಅನೇಕ ದೇಶಗಳು ಸಾಂಪ್ರದಾಯಿಕ ವೈದ್ಯಕೀಯದಲ್ಲಿ, ಔಷಧಿಯಲ್ಲಿ ನಮಗಿಂತ ಮುಂದಿವೆ. ಹೀಗೆ ಏಕೆಂದರೆ ಇಂದಿನ ಕಾಲದಲ್ಲಿ ಫಲಿತಾಂಶಗಳು ಮತ್ತು ಪುರಾವೆಗಳೆರಡೂ ಅಗತ್ಯವಾಗಿವೆ. ಉದಾಹರಣೆಗೆ, ಈ ಮೂಲಿಕೆ ಬಹಳ ಉಪಯುಕ್ತವಾಗಿದೆ ಎಂದು ನಾವು ಹೇಳಿದರೆ ಮತ್ತು ನಾವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೇವೆ. ನಾವು ಫಲಿತಾಂಶಗಳನ್ನು ಪಡೆಯುತ್ತೇವೆ ಆದರೆ ಅದಕ್ಕೆ ಯಾವುದೇ ಪುರಾವೆಗಳಿಲ್ಲ, ಮತ್ತು ಆದ್ದರಿಂದ, ನಾವು ಫಲಿತಾಂಶಗಳೊಂದಿಗೆ ಪುರಾವೆಗಳನ್ನು ಹೊಂದಿರಬೇಕು. ನಾವು ಡೇಟಾಬೇಸ್ ಹೊಂದಿರಬೇಕು. ಬದಲಾವಣೆ ಎಲ್ಲಿಂದ ಮತ್ತು ಹೇಗೆ ನಡೆಯಿತು ಎಂಬುದರ ಸಂಪೂರ್ಣ ದಾಖಲೆಯನ್ನು ನಾವು ಹೊಂದಿರಬೇಕು. ಭಾವನೆಗಳ ಆಧಾರದ ಮೇಲೆ ನಾವು ಜಗತ್ತನ್ನು ಬದಲಾಯಿಸಲು ಸಾಧ್ಯವಿಲ್ಲ. ಇದನ್ನು ಪ್ರಪಂಚದ ಮುಂದೆ ಒಂದು ಮಾದರಿಯಾಗಿ ಪ್ರಸ್ತುತಪಡಿಸಲು ಸಾಧ್ಯವಿಲ್ಲ. ಆದ್ದರಿಂದ, ಫಲಿತಾಂಶಗಳಿದ್ದರೂ, ಇಂದಿನ ಜಗತ್ತಿನಲ್ಲಿ ಪುರಾವೆ ಬಹಳ ಅಗತ್ಯವಾಗಿದೆ ಮತ್ತು ಮುಖ್ಯವಾಗಿದೆ. ಆದ್ದರಿಂದ ಫಲಿತಾಂಶಗಳ ಬಗ್ಗೆ ತಿಳಿದಿರುವ ಆದರೆ ಪುರಾವೆಗಳ ಕೊರತೆಯಿರುವ ಪ್ರಕರಣಗಳಲ್ಲಿ ನಮ್ಮ ವಿಶ್ವವಿದ್ಯಾಲಯಗಳು ಕಾರ್ಯವಿಧಾನಗಳನ್ನು ರೂಪಿಸಬೇಕು ಮತ್ತು ಈ ನಿಟ್ಟಿನಲ್ಲಿ ವ್ಯವಸ್ಥೆಗಳು ಹಾಗು ಸಂಪ್ರದಾಯಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಮತ್ತು ನಿಮ್ಮ ಸಹಾಯವಿಲ್ಲದೆ ಅದು ಸಾಧ್ಯವಿಲ್ಲ. ನಮ್ಮ ವಿಶ್ವವಿದ್ಯಾಲಯಗಳು ಪುರಾವೆ ಆಧಾರಿತ ಸಾಂಪ್ರದಾಯಿಕ ವೈದ್ಯಕೀಯ, ಔಷಧಿಗಳ ಬಗ್ಗೆ ಬಹಳ ಉತ್ತಮವಾಗಿ ಸಂಶೋಧನೆ ನಡೆಸಬಹುದು.

ಸ್ನೇಹಿತರೇ,

ನಮ್ಮ ಜನಸಂಖ್ಯಾ ವೈವಿಧ್ಯತೆಯ ಲಾಭಾಂಶವು ನಮ್ಮ ಅತಿದೊಡ್ಡ ಶಕ್ತಿಯಾಗಿದೆ. ನಾವು ಅದನ್ನು ಕೂಡಾ ಚರ್ಚಿಸುತ್ತೇವೆ, ಆದರೆ ಈ ಜನಸಂಖ್ಯಾ ವೈವಿಧ್ಯತೆಯ ಲಾಭಾಂಶವನ್ನು ಅಧ್ಯಯನ ಮಾಡಿದ ಯಾವುದೇ ವಿಶ್ವವಿದ್ಯಾಲಯವಿದೆಯೇ? ಜನಸಂಖ್ಯಾ ವೈವಿಧ್ಯತೆಯ ಲಾಭಾಂಶದ ಅಂತಹ ಅವಕಾಶವು ಉದ್ಭವಿಸಿದಾಗ ಜಗತ್ತು ಯಾವ ರೀತಿಯ ಕ್ರಮಗಳನ್ನು ಕೈಗೊಂಡಿತು? ಆ ದೇಶಗಳಲ್ಲಿನ ವಿಶ್ವವಿದ್ಯಾಲಯಗಳು ಇದಕ್ಕೆ ಹೇಗೆ ಪ್ರತಿಕ್ರಿಯಿಸಿದವು ಮತ್ತು ಅವು ಹೇಗೆ ಪ್ರಯೋಜನ ಪಡೆದವು? ನಾವು ಅದರ ಬಗ್ಗೆ ಪುನರಾವರ್ತಿ ಹೇಳುತ್ತಲೇ ಇದ್ದರೂ, ಜನಸಂಖ್ಯಾ ವೈವಿಧ್ಯತೆಯ ಲಾಭಾಂಶದ ಸಾಧ್ಯತೆಗಳ ಬಗ್ಗೆ ನಾವು ಏಕೆ ಕೆಲಸ ಮಾಡುತ್ತಿಲ್ಲ? ಮುಂಬರುವ 20-25-30 ವರ್ಷಗಳವರೆಗೆ ದೇಶದ ಈ ಸಾಮರ್ಥ್ಯವನ್ನು ನಾವು ಹೇಗೆ ಬಳಸಿಕೊಳ್ಳಬಹುದು? ಪ್ರಪಂಚದ ರಾಷ್ಟ್ರಗಳ ಸ್ಥಿತಿಯನ್ನು ನೋಡಿ, ಶ್ರೀಮಂತ ದೇಶಗಳಲ್ಲಿ ಅತ್ಯಂತ ಶ್ರೀಮಂತ ದೇಶಗಳು ಕೂಡಾ ಅಲ್ಲಿ ಜನರ ವಯಸ್ಸು ಹೆಚ್ಚುತ್ತಿದೆ ಎಂಬ ಅಂಶದಿಂದ ತೊಂದರೆಗೀಡಾಗಿವೆ. ವೃದ್ಧಾಪ್ಯವು ಒಂದು ಸಮಸ್ಯೆಯಾಗಿದೆ ಮತ್ತು ಯುವ ಪೀಳಿಗೆಯು ಬಹುತೇಕ ಕಾಣೆಯಾಗಿದೆ. ಹಿರಿಯರು ಜನಸಂಖ್ಯೆಯ ದೊಡ್ಡ ಭಾಗವಾಗಿದ್ದಾರೆ. ಅವರು ದೇಶಗಳನ್ನು ನಡೆಸಲು ಅಸಮರ್ಥರಾಗಿದ್ದಾರೆ. ಈಗ ಈ ಚಕ್ರವು ಹೇಗಿದೆಯೆಂದರೆ ಪ್ರತಿಯೊಬ್ಬರೂ ಅದನ್ನು ಎದುರಿಸಬೇಕಾಗಿದೆ. ಇಂದು ನಮ್ಮ ದೇಶವು ಯುವಜನರ ದೇಶವಾಗಿದೆ, ಆದರೆ ಯುವಜನರ ಸಂಖ್ಯೆ ಕಡಿಮೆಯಾದಾಗ ಮತ್ತು ವಯಸ್ಸಾದವರ, ವೃದ್ಧರ ಸಂಖ್ಯೆ ಹೆಚ್ಚಾದಾಗ ನಮ್ಮ ದೇಶವೂ ವೃದ್ಧಾಪ್ಯದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆ ದಿನಗಳು ಬರುತ್ತವೆ. ವೃದ್ಧಾಪ್ಯದ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗಗಳನ್ನು ಕಂಡುಕೊಂಡ ಯಾರಾದರೂ ಜಗತ್ತಿನಲ್ಲಿ ಇದ್ದಾರೆಯೇ?

ಯುವಜನರ ಅನುಪಸ್ಥಿತಿಯಲ್ಲಿ ಅವರು ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತಿದ್ದಾರೆ? ಈ ಎಲ್ಲ ಸಂಗತಿಗಳು ಬಹಳ ಸರಾಗವಾಗಿ ಮುಂದುವರಿಯುವಂತೆ ಮಾಡಲು ಯಾವ ಕಾರ್ಯವಿಧಾನವನ್ನು, ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ?. ಈ ಎಲ್ಲಾ ವಿಷಯಗಳು ನಮ್ಮ ವಿಶ್ವವಿದ್ಯಾಲಯಗಳಿಗೆ ಅತ್ಯಂತ ಆಸಕ್ತಿಯ ಸಹಜ ಸ್ವರೂಪವಾಗಿರಬೇಕು. ವಿಶ್ವವಿದ್ಯಾಲಯಗಳಿಗೆ ಈ ನಿಟ್ಟಿನಲ್ಲಿ ಸಂಶೋಧನೆ ಮತ್ತು ಕೆಲಸಕ್ಕೆ ಉತ್ತಮ ಅವಕಾಶವಿದೆ ಎಂದು ನಾನು ನಂಬುತ್ತೇನೆ. ಈ ಯೋಜನೆಗಳನ್ನು ಮಕ್ಕಳಿಗೆ ನೀಡಿದರೆ, ಅವರು ಆ ಕುರಿತಾದ ದೃಷ್ಟಿಕೋನವನ್ನು, ಚಿಂತನೆಯನ್ನು ಬೆಳೆಸಿಕೊಳ್ಳುತ್ತಾರೆ. ಅವರು ಹೊಸ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಅವಕಾಶವನ್ನು ಸಹ ಪಡೆಯುತ್ತಾರೆ. ಈಗ ಹವಾಮಾನ ಬದಲಾವಣೆಯ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ನಮಗೆ ಅಪರಿಮಿತ ಅವಕಾಶಗಳಿವೆ. ಈಗ ನಮ್ಮ ದೇಶದಲ್ಲಿ ಸಿಡಿಆರ್ ಐ ಎಂಬ ಯೋಜನೆ ಇದೆ. ಹವಾಮಾನ ಬದಲಾವಣೆಯ ಸಂದರ್ಭದಲ್ಲಿ, ನಮ್ಮ ಮೂಲಸೌಕರ್ಯವು ಹವಾಮಾನದ ಏರಿಳಿತಗಳನ್ನು ತಡೆದುಕೊಳ್ಳುವಂತಿರಬೇಕು ಮತ್ತು ಸ್ಥಿತಿಸ್ಥಾಪಕತ್ವವನ್ನು, ಪುನರುಜ್ಜೀವನಗೊಳ್ಳುವಂತಹ ಸಾಮರ್ಥ್ಯವನ್ನು ಹೊಂದಿರಬೇಕು. ಈಗ ಅದರ ಬಗ್ಗೆ ಸಂಶೋಧನೆಯಿಲ್ಲದೆ ನಾವು ಹೇಗೆ ಮುಂದುವರಿಯಬಹುದು? ಈ ಹಿಂದೆ ಹೆಚ್ಚು ಪ್ರವಾಹವಾಗಲೀ ಅಥವಾ ಹೆಚ್ಚು ಮಳೆಯಾಗಲೀ ಇರಲಿಲ್ಲ. ಆದುದರಿಂದ ಈಗಿರುವಂತಹ ವ್ಯವಸ್ಥೆ ರೂಪುಗೊಂಡಿತು. ಪ್ರಕೃತಿಯೂ ನಮ್ಮನ್ನು ಬೆಂಬಲಿಸಿತು ಮತ್ತು ನಾವು ಕೂಡಾ ಪ್ರಕೃತಿಯನ್ನು ಬೆಂಬಲಿಸಿದೆವು. ಈಗ ನಾವು ಇದಕ್ಕೆ ತದ್ವಿರುದ್ಧವಾದುದನ್ನು ಮಾಡುತ್ತಿದ್ದೇವೆ. ಆದ್ದರಿಂದ, ಈ ಹೊಸ ಬಿಕ್ಕಟ್ಟನ್ನು ಎದುರಿಸಿ ಮುಂದೆ ಹೇಗೆ ಬದುಕಬೇಕು ಎಂಬುದರ ಬಗ್ಗೆ ನಾವು ವ್ಯವಸ್ಥೆಗಳನ್ನು ಮಾಡಬೇಕಾಗಿದೆ. ಇಂದು ಇಡೀ ಜಗತ್ತು ಸೌರಶಕ್ತಿಯತ್ತ ಸಾಗುತ್ತಿದೆ. ಉರಿಯುವ ಸೂರ್ಯನನ್ನು ಪಡೆದಿರುವುದು ಭಾರತದ ಒಂದು ಅದೃಷ್ಟ. ಸೂರ್ಯನನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ? ಈ ಶಕ್ತಿಯನ್ನು ನಾವು ನಮ್ಮ ಜೀವನ ವ್ಯವಸ್ಥೆಯ ಒಂದು ಭಾಗವನ್ನಾಗಿ ಮಾಡುವುದು ಹೇಗೆ? ಸರ್ಕಾರದ ನೀತಿಗಳಲ್ಲಿ ಸೌರಶಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಆದರೆ ಈ ಶಕ್ತಿಯನ್ನು ಬಳಸಲು ಹೊಸ ಸಂಶೋಧನೆಯ ಮೂಲಕ ನಾವು ಸಾಕಷ್ಟು ಕೆಲಸ ಮಾಡಬೇಕಾಗಿದೆ. ಅದೇ ರೀತಿ, ಸ್ವಚ್ಛ ಭಾರತ ಅಭಿಯಾನವನ್ನು ಪ್ರತಿಯೊಬ್ಬರೂ ಸಾಕಾರಗೊಳಿಸಿದ್ದಾರೆ. ಸ್ವಚ್ಛ ಭಾರತದ ಆಂದೋಲನದ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳಬಾರದು. ಆದರೆ ವಿಷಯಗಳು, ಸಂಗತಿಗಳು ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ನಾವು ತ್ಯಾಜ್ಯದಿಂದ ಸಂಪತ್ತಿನ ಸೃಷ್ಟಿಯತ್ತ ಯೋಜನೆಗಳನ್ನು ರೂಪಿಸದ ಹೊರತು, ತ್ಯಾಜ್ಯದ ವೃತ್ತಾಕಾರದ ಆರ್ಥಿಕತೆ ಹೇಗಿರಬಲ್ಲುದು. ಅದರ ಅತ್ಯುತ್ತಮ ಉತ್ಪನ್ನ ಯಾವುದು ಎಂಬುದನ್ನು ತಿಳಿಯದೆ ಯಾವುದೇ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯಗಳು ಇದನ್ನು ಸಂಶೋಧಿಸಬಹುದು. ಹೊಸ ಪೀಳಿಗೆಯು ತ್ಯಾಜ್ಯದಿಂದ ಅತ್ಯುತ್ತಮವಾದದ್ದನ್ನು ಹೇಗೆ ತಯಾರಿಸುವುದು ಎಂಬುದರ ಬಗ್ಗೆ ಪ್ರಯೋಗಗಳನ್ನು ಮಾಡಬಹುದು? ವೃತ್ತಾಕಾರದ ಆರ್ಥಿಕತೆಯನ್ನು ನಾವು ಹೇಗೆ ಬಲಪಡಿಸುತ್ತೇವೆ? ಈ ನಿಟ್ಟಿನಲ್ಲಿ ಇಂದು ನಮ್ಮ ವಿದ್ಯಾರ್ಥಿಗಳಿಗೆ ಹಲವು ಕ್ಷೇತ್ರಗಳು, ವಿಶೇಷವಾಗಿ ಸ್ಥಳೀಯ ಮಟ್ಟದಲ್ಲಿ ಅನೇಕ ಕ್ಷೇತ್ರಗಳು ತೆರೆದಿವೆ. ಇಂದು ದೇಶವು ಹೊಸ ಆತ್ಮವಿಶ್ವಾಸದೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಹೊಸ ಸಾಧನೆಗಳನ್ನು ಮಾಡುತ್ತಿದೆ. ಹೊಸ ಕ್ರೀಡಾ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ವಿಶೇಷ ಕ್ರೀಡಾ ವಿಶ್ವವಿದ್ಯಾಲಯಗಳಿರುವುದರಿಂದ ತಮ್ಮ ವಿದ್ಯಾರ್ಥಿಗಳಿಗೆ ಕ್ರೀಡೆಯೊಂದಿಗೆ ಯಾವುದೇ ಕೆಲಸವಿಲ್ಲ ಅಥವಾ ಸಂಬಂಧವಿಲ್ಲ ಎಂಬ ಭಾವನೆಯನ್ನು ನಮ್ಮ ವಿಶ್ವವಿದ್ಯಾಲಯಗಳು ಹೊಂದಬಾರದು. ನಮ್ಮ ವಿಶ್ವವಿದ್ಯಾಲಯಗಳ ಮೈದಾನಗಳು, ಕ್ರೀಡಾಂಗಣಗಳು, ಸಂಜೆ ವಿದ್ಯಾರ್ಥಿಗಳಿಂದ ಗಿಜಿಗುಡಬೇಕು. ಅಂತಹ ವಾತಾವರಣವನ್ನು ವಿಶ್ವವಿದ್ಯಾಲಯಗಳಲ್ಲಿ ಸೃಷ್ಟಿಸಬೇಕು, ಇದರಿಂದ ಮಕ್ಕಳು ತರಗತಿಗಳ ನಂತರ ತಕ್ಷಣವೇ ತಮ್ಮ ಮನೆಗಳಿಗೆ ಧಾವಿಸಲು ಇಷ್ಟಪಡುವುದಿಲ್ಲ.. ನಮ್ಮ ವಿಶ್ವವಿದ್ಯಾಲಯಗಳು ಈ ಗುರಿಗಳನ್ನು ನಿಗದಿಪಡಿಸಬಹುದು. ಪ್ರತಿಯೊಂದು ವಿಶ್ವವಿದ್ಯಾಲಯವು ತನ್ನ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳಿಗೆ ಗುರಿಗಳನ್ನು ನಿಗದಿಪಡಿಸಬಹುದಾದರೆ, ಇವು ಕೂಡಾ ನಮ್ಮ ವಿಶ್ವವಿದ್ಯಾಲಯಗಳ ಗುರಿಯಾಗಬಾರದೇಕೆ? ವಿಶ್ವವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳನ್ನು ಇತರ ದೇಶಗಳಲ್ಲಿ ಆಡುವಂತೆ ಕ್ರೀಡಾ ಕ್ಷೇತ್ರದಲ್ಲಿ ಸಿದ್ಧಪಡಿಸುವುದು ಹೇಗೆ? ಅವರಿಗೆ ಅಗತ್ಯವಾದ ಎಕ್ಸ್ ಪೋಶರ್ ದೊರೆಯುವಂತೆ ಮಾಡಬೇಕು. ಸ್ನೇಹಿತರೇ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇವಕ್ಕೆಲ್ಲ ವಿಫುಲ ಅವಕಾಶಗಳಿರುವುದರಿಂದ ನಾನು ಈ ಆಲೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಹಿಂದಿನ ವರ್ಷಗಳಲ್ಲಿ ನಾವು ಹೊಂದಿರದಿದ್ದುದನ್ನು ಈಗ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ. ಅದನ್ನು ಮುಂದಕ್ಕೆ ಒಯ್ಯುವುದು ನಮ್ಮ ಕೆಲಸ.

ಸ್ನೇಹಿತರೇ,

ದೇಶದ ಭವಿಷ್ಯವನ್ನು ರೂಪಿಸಲು ಅನುಕೂಲವಾಗುವಂತಹ ರಾಷ್ಟ್ರೀಯ ಶಿಕ್ಷಣ ನೀತಿಯ ನಾಯಕತ್ವವು ನಿಮ್ಮ ಕೈಯಲ್ಲಿದೆ ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಅಖಿಲ ಭಾರತೀಯ ಶಿಕ್ಷಾ ಸಮಾಗಮದಲ್ಲಿ ನಿಮ್ಮ ಚಿಂತನ ಮಂಥನದ ಅಮೃತ ಮತ್ತು ನಿಮ್ಮ ಸಲಹೆಗಳು ದೇಶಕ್ಕೆ ಹೊಸ ದಿಕ್ಕನ್ನು ನೀಡುತ್ತವೆ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ. ನೀವು ಯಾರೊಂದಿಗೆ ನಿಮ್ಮ ಸಮಯವನ್ನು ಕಳೆಯುತ್ತೀರೋ ಆ ಯುವಜನರನ್ನು ನೀವು ವರ್ತಮಾನಕ್ಕಾಗಿ ಅಲ್ಲ, ಬದಲಿಗೆ ನಾಳೆಗಾಗಿ, ಭವಿಷ್ಯಕ್ಕಾಗಿ ತಯಾರು ಮಾಡಬೇಕು. ನಾಳೆಗಾಗಿ ನೀವು ಅವರನ್ನು ತಯಾರು ಮಾಡಲು ಬಯಸಿದರೆ, ನೀವು ಮುಂದಿನ ವರ್ಷಕ್ಕೆ ಸಿದ್ಧರಾಗಬೇಕು. ಬರಲಿರುವ ವರ್ಷಕ್ಕೆ ನೀವು ಸಿದ್ಧರಿದ್ದರೆ, ನೀವು ಮುಂದಿನ 100 ವರ್ಷಗಳಿಗೆ ಸಂಸ್ಥೆಯನ್ನು ಸಿದ್ಧಪಡಿಸಬೇಕು. ಆಗ ಮಾತ್ರ ನೀವು ಈ ಕಾರ್ಯವನ್ನು ಸಾಧಿಸಬಹುದು. ಈ ಉತ್ಸಾಹ, ಸ್ಪೂರ್ತಿಯೊಂದಿಗೆ ನೀವು ಕಾಶಿಯ ಈ ಪವಿತ್ರ ಭೂಮಿಯಲ್ಲಿ ಮತ್ತು ಗಂಗಾ ಮಾತೆಯ ದಡದಲ್ಲಿ ಇದ್ದೀರಿ.

ಸಾಂಸ್ಕೃತಿಕ ಪರಂಪರೆಯು ನಮಗೆ ಹೊಸ ಪ್ರಜ್ಞೆ ಮತ್ತು ಸ್ಫೂರ್ತಿಯನ್ನು ನೀಡುತ್ತದೆ. ಆ ಪರಂಪರೆಯ ಕೆಲವು ಅಮೃತ ಬಿಂದುಗಳು ನಿಮ್ಮ ಅದೃಷ್ಟದಲ್ಲಿಯೂ ಬರುತ್ತವೆ, ಅವುಗಳು ನಿಮ್ಮ ವಿಶ್ವವಿದ್ಯಾಲಯಗಳ ಯುವ ಹುಡುಗರು ಮತ್ತು ಹುಡುಗಿಯರಿಗೆ 'ಅಮೃತ್ ಕಾಲ’ದಲ್ಲಿ ಭಾರತದ ಉಜ್ವಲ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುತ್ತವೆ. ಈ ಕಾರ್ಯಕ್ರಮಕ್ಕಾಗಿ ನಾನು ಮತ್ತೊಮ್ಮೆ ಇಲಾಖೆಗೆ ಧನ್ಯವಾದ ಅರ್ಪಿಸುತ್ತೇನೆ. ನೀವೆಲ್ಲರೂ ಉತ್ಸಾಹದಿಂದ ಇದರಲ್ಲಿ ಭಾಗವಹಿಸಿದ್ದೀರಿ. ಮುಂದಿನ ಮೂರು ದಿನಗಳಲ್ಲಿ ನಿಮಗೆ ದಣಿವಾಗದು ಎಂಬ ಬಗ್ಗೆ ನನಗೆ ಖಾತ್ರಿಯಿದೆ. ನಾನು ಕುಳಿತಿದ್ದಾಗ ಕಾರ್ಯಕ್ರಮವನ್ನು ನೋಡುತ್ತಿದ್ದೆ. ಮೂರು ದಿನಗಳ ನಂತರ ನಿಮಗೆ ಏನಾಗುತ್ತದೆ ಎಂಬುದು ನನಗೆ ತಿಳಿದಿಲ್ಲ. ಆದರೆ ನೀವು ಶೈಕ್ಷಣಿಕ ಜಗತ್ತಿಗೆ ಸೇರಿದವರಾಗಿರುವುದರಿಂದ, ನೀವು ಖಂಡಿತವಾಗಿಯೂ ಅದನ್ನು ಮುಂದಕ್ಕೆ ಕೊಂಡೊಯ್ಯುತ್ತೀರಿ. ನಾನು ನಿಮಗೆ ಶುಭ ಹಾರೈಸುತ್ತೇನೆ.

ಬಹಳ ಧನ್ಯವಾದಗಳು!

ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

**********

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 


(ಪ್ರಕಟಣೆ ಐ.ಡಿ.: 1840488) ವಿಸಿಟರ್ ಕೌಂಟರ್ : 190