ಪ್ರಧಾನ ಮಂತ್ರಿಯವರ ಕಛೇರಿ

ರಾಜ್ಯಸಭೆಯ ನೂತನ ನಾಮನಿರ್ದೇಶಿತ ಸದಸ್ಯರನ್ನು ಅಭಿನಂದಿಸಿದ ಪ್ರಧಾನಿ ಮೋದಿ

Posted On: 06 JUL 2022 9:42PM by PIB Bengaluru

ರಾಜ್ಯಸಭೆಗೆ ಹೊಸದಾಗಿ ನಾಮನಿರ್ದೇಶನಗೊಂಡಿರುವ ವಿವಿಧ ಕ್ಷೇತ್ರಗಳ ಗಣ್ಯರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಅಥ್ಲೀಟ್ ಪಿ.ಟಿ. ಉಷಾ, ಸಂಗೀತ ಸಂಯೋಜಕ ಇಳಯರಾಜ, ಧರ್ಮಸ್ಥಳ ಮಂಜುನಾಥ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರ, ಶ್ರೀ ವಿ. ವಿಜಯೇಂದ್ರ ಪ್ರಸಾದ್ ಗಾರು ಅವರು ರಾಜ್ಯಸಭೆಗೆ ಹೊಸದಾಗಿ ನಾಮನಿರ್ದೇಶನಗೊಂಡಿರುವ ಸದಸ್ಯರಾಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;

"ಹೆಸರಾಂತ ಅಥ್ಲೀಟ್ ಪಿ.ಟಿ. ಉಷಾ ಅವರು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿಯಾಗಿದ್ದಾರೆ. ಕ್ರೀಡೆಯಲ್ಲಿ ಅವರ ಅದ್ಭುತ ಸಾಧನೆಗಳು ಎಲ್ಲರಿಗೂ ತಿಳಿದಿವೆ. ಕಳೆದ ಹಲವಾರು ವರ್ಷಗಳಿಂದ ಉದಯೋನ್ಮುಖ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡುವ ಅವರ ಕೆಲಸವು ಅಷ್ಟೇ ಶ್ಲಾಘನೀಯವಾಗಿದೆ. ರಾಜ್ಯಸಭೆಗೆ ನಾಮನಿರ್ದೇಶನ ವಾಗಿರುವ ಅವರಿಗೆ ಅಭಿನಂದನೆಗಳು. @PTUshaOfficial"

"ಜನಪ್ರಿಯ ಸಂಗೀತ ನಿರ್ದೇಶಕ, ಚಲನಚಿತ್ರ ಗೀತೆ ರಚನೆಕಾರ ಇಳಯರಾಜ ಅವರ ಸೃಜನಶೀಲ ಪ್ರತಿಭೆ ದೇಶ ವಿದೇಶಗಳ ಹಲವು ತಲೆಮಾರಿನ ಜನರನ್ನು ಆಕರ್ಷಿಸಿದೆ. ಅವರ ಸಂಗೀತ ಮತ್ತು ಗೀತೆಗಳು ಜನರ ಭಾವನೆಗಳಲ್ಲಿ ಅಚ್ಚಳಿಯದೆ ಸುಂದರವಾಗಿ ಪ್ರತಿಬಿಂಬಿಸಿದೆ. ಅವರ ಜೀವನ ಪಯಣದ ಸ್ಫೂರ್ತಿದಾಯಕ ವಿಶೇಷವೆಂದರೆ, ವಿನಮ್ರತೆ. ವಿನಮ್ರತೆಯ ಹಿನ್ನೆಲೆಯಿಂದಲೇ ಬೆಳೆದು ನಿಂತಿರುವ ಅವರು ಅಪಾರ ಸಾಧನೆ ಮಾಡಿದ್ದಾರೆ. ಇಳಯರಾಜ ಅವರು ರಾಜ್ಯಸಭೆಗೆ ನಾಮನಿರ್ದೇಶನವಾಗಿರುವುದು ತುಂಬಾ ಸಂತೋಷವಾಗಿದೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.

"ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಜೀ ಅವರು ಸಮಾಜ ಮತ್ತು ಸಮುದಾಯ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಧರ್ಮಸ್ಥಳದ ಮಂಜುನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ಮತ್ತು ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿಯಲ್ಲಿ ಅವರು ಮಾಡುತ್ತಿರುವ ಮಹತ್ತರ ಕಾರ್ಯಗಳನ್ನು ಕಣ್ಣಾರೆ ನೋಡಲು ವೀಕ್ಷಿಸಲು ನನಗೆ ಅವಕಾಶ ಸಿಕ್ಕಿತ್ತು. ಅವರು ಖಂಡಿತವಾಗಿಯೂ ಸಂಸತ್ತಿನ ಕಲಾಪಗಳನ್ನು ಶ್ರೀಮಂತಗೊಳಿಸುತ್ತಾರೆ" ಎಂದು ಪ್ರಧಾನಿ ತಿಳಿಸಿದ್ದಾರೆ.

"ಶ್ರೀ ವಿ. ವಿಜಯೇಂದ್ರ ಪ್ರಸಾದ್ ಗಾರು ಅವರು ದಶಕಗಳ ಕಾಲದಿಂದಲೂ ಸೃಜನಶೀಲ ಚಲನಚಿತ್ರ ಜಗತ್ತಿನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರ ಕಾರ್ಯಗಳು ಭಾರತದ ವೈಭವಯುತ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿವೆ, ಜಾಗತಿಕವಾಗಿ ಛಾಪು ಮೂಡಿಸಿವೆ. ರಾಜ್ಯಸಭೆಗೆ ನಾಮನಿರ್ದೇಶನ ಆಗಿರುವುದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ" ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ತಿಳಿಸಿದ್ದಾರೆ.

 

*********

 

 

 

 



(Release ID: 1839747) Visitor Counter : 585