ಪ್ರಧಾನ ಮಂತ್ರಿಯವರ ಕಛೇರಿ
ಜರ್ಮನಿಯ ಮ್ಯೂನಿಚ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ
Posted On:
26 JUN 2022 10:45PM by PIB Bengaluru
ನಮಸ್ಕಾರ!
ನೀವೆಲ್ಲರೂ ಹೇಗಿದ್ದೀರಿ?
ನಿಮ್ಮಲ್ಲಿ ಹಲವರು ಇಂದು ಇಲ್ಲಿಗೆ ಬರಲು ಬಹಳ ದೂರ ಪ್ರಯಾಣ ಮಾಡಿದ್ದೀರಿ. ನಾನು ನಿಮ್ಮೆಲ್ಲರಲ್ಲಿ ಭಾರತದ ಸಂಸ್ಕೃತಿ, ಏಕತೆ ಮತ್ತು ಭ್ರಾತೃತ್ವವನ್ನು ನೋಡುತ್ತಿದ್ದೇನೆ. ಈ ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. ನಿಮ್ಮ ಪ್ರೀತಿ, ಉತ್ಸಾಹ ಮತ್ತು ಉತ್ಸಾಹವನ್ನು ಸುದ್ದಿಗಳಲ್ಲಿ ನೋಡಿದ ನಂತರ ಭಾರತದ ಜನರು ತುಂಬಾ ಹೆಮ್ಮೆಪಡುತ್ತಾರೆ ಎಂದು ನನಗೆ ಖಾತ್ರಿಯಿದೆ.
ಸ್ನೇಹಿತರೇ,
ಈ ದಿನವು ಇನ್ನೊಂದು ಕಾರಣಕ್ಕಾಗಿಯೂ ಹೆಸರಾಗಿದೆ. 47 ವರ್ಷಗಳ ಹಿಂದೆ ಇದೇ ಜೂನ್ 26 ರಂದು ನಮ್ಮ ಹೆಮ್ಮೆಯ ಮತ್ತು ಪ್ರತಿಯೊಬ್ಬ ಭಾರತೀಯನ ಡಿಎನ್‌ಎಯಲ್ಲಿರುವ ಪ್ರಜಾಪ್ರಭುತ್ವವನ್ನು ಒತ್ತೆಯಾಳಾಗಿ ಇರಿಸಿಕೊಳ್ಳುವ ಮತ್ತು ಅದನ್ನು ಹತ್ತಿಕ್ಕುವ ಪ್ರಯತ್ನ ನಡೆದಿತ್ತು. ತುರ್ತು ಪರಿಸ್ಥಿತಿಯ ಅವಧಿಯು ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ ಇದ್ದಂತೆ. ಆದರೆ ಶತಮಾನಗಳಷ್ಟು ಹಳೆಯದಾದ ಪ್ರಜಾಪ್ರಭುತ್ವ ಪರಂಪರೆಯ ಪಾರಮ್ಯವು ಈ ಕಪ್ಪು ಚುಕ್ಕೆಯ ವಿರುದ್ಧ ಜಯಗಳಿಸಿತು ಮತ್ತು ಪ್ರಜಾಪ್ರಭುತ್ವ ಪರಂಪರೆಯು ಈ ವರ್ತನೆಗಳ ವಿರುದ್ಧ ಮೇಲುಗೈ ಸಾಧಿಸಿತು.
ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಎಲ್ಲಾ ಪಿತೂರಿಗಳಿಗೆ ಭಾರತದ ಜನರು ಪ್ರಜಾಸತ್ತಾತ್ಮಕ ರೀತಿಯಲ್ಲಿಯೇ ಉತ್ತರಿಸಿದ್ದಾರೆ. ನಾವು ಭಾರತೀಯರು, ಎಲ್ಲಿ ವಾಸಿಸುತ್ತಿದ್ದರೂ ನಮ್ಮ ಪ್ರಜಾಪ್ರಭುತ್ವದ ಬಗ್ಗೆ ಹೆಮ್ಮೆ ಪಡುತ್ತೇವೆ. ಭಾರತವು ಪ್ರಜಾಪ್ರಭುತ್ವದ ತಾಯಿ ಎಂದು ಪ್ರತಿಯೊಬ್ಬ ಭಾರತೀಯನು ಹೆಮ್ಮೆಯಿಂದ ಹೇಳಬಹುದು. ನಮ್ಮ ಸಾವಿರಾರು ವರ್ಷಗಳ ಪ್ರಜಾಪ್ರಭುತ್ವದ ಇತಿಹಾಸವು ಭಾರತದ ಮೂಲೆ ಮೂಲೆಗಳಲ್ಲೂ ಇನ್ನೂ ಜೀವಂತವಾಗಿದೆ. ಹಲವಾರು ಭಾಷೆಗಳು, ಉಪಭಾಷೆಗಳು ಮತ್ತು ವಿಭಿನ್ನ ಜೀವನಶೈಲಿಗಳೊಂದಿಗೆ, ಭಾರತದ ಪ್ರಜಾಪ್ರಭುತ್ವವು ರೋಮಾಂಚಕವಾಗಿದೆ. ಪ್ರತಿಯೊಬ್ಬ ಪ್ರಜೆಯೂ ತನ್ನ ಜೀವನವನ್ನು ಸಶಕ್ತಗೊಳಿಸುವ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಮತ್ತು ಭರವಸೆಯನ್ನು ಹೊಂದಿದ್ದಾನೆ.
ವಿಶಾಲವಾದ ಮತ್ತು ವೈವಿಧ್ಯಮಯವಾದ ದೇಶದಲ್ಲಿ ಪ್ರಜಾಪ್ರಭುತ್ವವು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಭಾರತ ಸಾಬೀತುಪಡಿಸಿದೆ. ಕೋಟ್ಯಂತರ ಭಾರತೀಯರು ಒಟ್ಟಾಗಿ ದೊಡ್ಡ ಗುರಿಗಳನ್ನು ಸಾಧಿಸಿದ ರೀತಿ ಅಭೂತಪೂರ್ವವಾಗಿದೆ. ಇಂದು ಭಾರತದ ಪ್ರತಿಯೊಂದು ಹಳ್ಳಿಯೂ ಬಯಲು ಶೌಚ ಮುಕ್ತವಾಗಿದೆ. ಇಂದು ಭಾರತದ ಪ್ರತಿಯೊಂದು ಹಳ್ಳಿಗೂ ವಿದ್ಯುತ್ ತಲುಪಿದೆ. ಇಂದು ಭಾರತದ ಪ್ರತಿಯೊಂದು ಹಳ್ಳಿಯು ರಸ್ತೆಯ ಸಂಪರ್ಕ ಹೊಂದಿದೆ. ಇಂದು ಭಾರತದಲ್ಲಿ ಶೇ.99 ಕ್ಕಿಂತ ಹೆಚ್ಚು ಜನರು ಅಡುಗೆಗಾಗಿ ಗ್ಯಾಸ್ ಸಂಪರ್ಕವನ್ನು ಹೊಂದಿದ್ದಾರೆ. ಇಂದು ಭಾರತದ ಪ್ರತಿಯೊಂದು ಕುಟುಂಬವೂ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿದೆ. ಇಂದು ಭಾರತದ ಪ್ರತಿಯೊಬ್ಬ ಬಡವರಿಗೂ ಐದು ಲಕ್ಷ ರೂಪಾಯಿಗಳ ಉಚಿತ ಚಿಕಿತ್ಸೆಯ ಸೌಲಭ್ಯ ಸಿಗುತ್ತಿದೆ.
ಕೊರೊನಾ ಸಾಂಕ್ರಾಮಿಕ ಆರಂಭವಾದ ಕಳೆದ ಎರಡು ವರ್ಷಗಳಿಂದ ಭಾರತವು 80 ಕೋಟಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಿದೆ. ಇದಲ್ಲದೆ, ಸ್ಟಾರ್ಟ್-ಅಪ್‌ಗಳ ಜಗತ್ತಿನಲ್ಲಿ ಭಾರತದಲ್ಲಿ ಸರಾಸರಿ ಪ್ರತಿ ಹತ್ತು ದಿನಗಳಿಗೊಮ್ಮೆ ಯುನಿಕಾರ್ನ್ ರೂಪುಗೊಳ್ಳುತ್ತಿದೆ. ಇಂದು ಭಾರತದಲ್ಲಿ ಪ್ರತಿ ತಿಂಗಳು ಸರಾಸರಿ 5,000 ಪೇಟೆಂಟ್‌ಗಳನ್ನು ಸಲ್ಲಿಸಲಾಗುತ್ತಿದೆ. ಇಂದು ಭಾರತವು ಪ್ರತಿ ತಿಂಗಳು ಸರಾಸರಿ 500 ಕ್ಕೂ ಹೆಚ್ಚು ಆಧುನಿಕ ರೈಲ್ವೇ ಕೋಚ್‌ಗಳನ್ನು ತಯಾರಿಸುತ್ತಿದೆ. ಇಂದು ಭಾರತವು ಪ್ರತಿ ತಿಂಗಳು ಸರಾಸರಿ 18 ಲಕ್ಷ ಮನೆಗಳಿಗೆ ಕೊಳವೆ ಮೂಲಕ ನೀರು ಸರಬರಾಜು ಮಾಡುತ್ತಿದೆ. ಭಾರತೀಯರ ಸಾಧನೆಗಳ ಪಟ್ಟಿ ಬಹಳ ದೊಡ್ಡದಿದೆ. ನಾನದನ್ನು ವಿವರವಾಗಿ ಹೇಳಲು ಹೊರಟರೆ ನಿಮಗೆ ಊಟದ ಸಮಯವಾಗುತ್ತದೆ.
ಸ್ನೇಹಿತರೇ,
ಒಂದು ದೇಶವು ಸರಿಯಾದ ಉದ್ದೇಶದಿಂದ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡರೆ ಮತ್ತು ಎಲ್ಲರನ್ನೂ ಜೊತೆಗೆ ಕರೆದೊಯ್ದರೆ, ಆಗ ಅದರ ತ್ವರಿತ ಅಭಿವೃದ್ಧಿ ಖಚಿತ. ಕಳೆದ ಶತಮಾನದಲ್ಲಿ ಜರ್ಮನಿ ಮತ್ತು ಇತರ ದೇಶಗಳು ಮೂರನೇ ಕೈಗಾರಿಕಾ ಕ್ರಾಂತಿಯಿಂದ ಎಷ್ಟು ಪ್ರಯೋಜನ ಪಡೆದಿವೆ ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ಆ ಸಮಯದಲ್ಲಿ ಭಾರತವು ಗುಲಾಮಗಿರಿಯಲ್ಲಿತ್ತು. ಇದರಿಂದಾಗಿ ಈ ಓಟದಲ್ಲಿ ತೀರಾ ಹಿಂದುಳಿದಿದೆ. ಆದರೆ ಇಂದು 21 ನೇ ಶತಮಾನದ ಭಾರತವು ನಾಲ್ಕನೇ ಕೈಗಾರಿಕಾ ಕ್ರಾಂತಿಯ ಇಂಡಸ್ಟ್ರಿ 4.0 ನಲ್ಲಿ ಹಿಂದುಳಿದಿಲ್ಲ, ಬದಲಿಗೆ ಮುಂಚೂಣಿ ದೇಶದವೊಂದಾಗಿದೆ.
ಭಾರತವು ಮಾಹಿತಿ ಮತ್ತು ಡಿಜಿಟಲ್ ತಂತ್ರಜ್ಞಾನದಲ್ಲಿ ಅಲೆಗಳನ್ನು ಸೃಷ್ಟಿಸುತ್ತಿದೆ. ವಿಶ್ವದ ನೈಜ ಸಮಯದ ಡಿಜಿಟಲ್ ಪಾವತಿ ವಹಿವಾಟಿನ ಶೇಕಡಾ 40 ರಷ್ಟನ್ನು ಭಾರತ ಹೊಂದಿದೆ. ಇಂದು ಭಾರತ ಡೇಟಾ ಬಳಕೆಯಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಡೇಟಾ ಅಗ್ಗವಾಗಿರುವ ದೇಶಗಳಲ್ಲಿ ಭಾರತವೂ ಒಂದು. 21 ನೇ ಶತಮಾನದ ನವ ಭಾರತದಲ್ಲಿ ಜನರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ ವೇಗವು ಯಾರನ್ನಾದರೂ ಚಕಿತಗೊಳಿಸುತ್ತದೆ.
ಸುಮಾರು 110 ಕೋಟಿ ಜನರು ಲಸಿಕೆಗಳು ಮತ್ತು ಲಸಿಕೆ ಪ್ರಮಾಣಪತ್ರಗಳಿಗಾಗಿ ಕೋವಿನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇಂದು, ಸುಮಾರು 22 ಕೋಟಿ ಭಾರತೀಯರು ಕೊರೊನಾ ಸೋಂಕಿನ ಪತ್ತೆಗಾಗಿ ರಚಿಸಲಾದ ವಿಶೇಷ ಅಪ್ಲಿಕೇಶನ್ ಆರೋಗ್ಯ ಸೇತುಗೆ ಸಂಪರ್ಕ ಹೊಂದಿದ್ದಾರೆ. ಸುಮಾರು 50 ಲಕ್ಷ ಮಾರಾಟಗಾರರು ಖರೀದಿಗಳನ್ನು ಮಾಡಲು ಸರ್ಕಾರದಿಂದ ರಚಿಸಲಾಗಿರುವ ಸರ್ಕಾರಿ ಇ-ಮಾರುಕಟ್ಟೆ ಸ್ಥಳ ಅಂದರೆ ಜಿಇಎಂನೊಂದಿಗೆ ಸಂಪರ್ಕ ಹೊಂದಿದ್ದಾರೆ, ಇಂದು 12-15 ಲಕ್ಷ ಭಾರತೀಯರು ರೈಲಿನಲ್ಲಿ ಪ್ರಯಾಣಿಸಲು ಪ್ರತಿದಿನ ಆನ್‌ಲೈನ್ ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ.
ಇಂದು ಭಾರತದಲ್ಲಿ ಡ್ರೋನ್ ತಂತ್ರಜ್ಞಾನವನ್ನು ಬಳಸುತ್ತಿರುವ ರೀತಿ ಅಭೂತಪೂರ್ವವಾಗಿದೆ. ದೇಶದ ಹಲವು ಪ್ರದೇಶಗಳಲ್ಲಿ ಡ್ರೋನ್‌ಗಳು ರಸಗೊಬ್ಬರಗಳನ್ನು ಸಿಂಪಡಿಸುತ್ತಿವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಸರ್ಕಾರವು ಸ್ವಾಮಿತ್ವ ಯೋಜನೆ ಆರಂಭಿಸಿದೆ. ಈ ಯೋಜನೆಯಡಿ, ಡ್ರೋನ್‌ಗಳು ದೇಶದ ಲಕ್ಷಾಂತರ ಹಳ್ಳಿಗಳಲ್ಲಿ ಭೂಮಿ ಮತ್ತು ಮನೆಗಳನ್ನು ನಕ್ಷೆ ಮಾಡುತ್ತಿವೆ. ಈ ಅಭಿಯಾನದ ಮೂಲಕ ಕೋಟ್ಯಂತರ ನಾಗರಿಕರಿಗೆ ಆಸ್ತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ನೈಸರ್ಗಿಕ ವಿಕೋಪಗಳು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿಯೂ ಡ್ರೋನ್ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದೆ.
ಸ್ನೇಹಿತರೇ,
ಇಂದಿನ ಭಾರತವು ಒಂದು ಕಾಲದಲ್ಲಿದ್ದ ‘ಚಲ್ತಾ ಹೈ’ ಮನೋಭಾವದಿಂದ ಹೊರಬಂದು ‘ಮಾಡಬೇಕು’ಮತ್ತು ‘ಸಮಯಕ್ಕೆ ಸರಿಯಾಗಿ ಮಾಡಬೇಕು’ಎಂಬ ಪ್ರತಿಜ್ಞೆಯನ್ನು ಮಾಡುವ ಹಾದಿಯಲ್ಲಿದೆ. ಭಾರತ ಈಗ ಮುನ್ನುಗ್ಗಲು ಸಿದ್ಧವಾಗಿದೆ ಮತ್ತು ಉತ್ಸುಕವಾಗಿದೆ. ಭಾರತವು ಪ್ರಗತಿ ಮತ್ತು ಅಭಿವೃದ್ಧಿಗಾಗಿ ಉತ್ಸುಕವಾಗಿದೆ, ಭಾರತವು ತನ್ನ ಕನಸುಗಳ ಬಗ್ಗೆ ಉತ್ಸುಕವಾಗಿದೆ, ಭಾರತವು ತನ್ನ ಕನಸುಗಳನ್ನು ಸಂಕಲ್ಪಗಳಾಗಿ ಪರಿವರ್ತಿಸಲು ಮತ್ತು ಅವುಗಳನ್ನು ಸಾಧಿಸಲು ುತ್ಸುಕವಾಗಿದೆ. ಭಾರತ ಇಂದು ತನ್ನ ಮೇಲೆ ಮತ್ತು ತನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದೆ.
ನಾವು ಹಳೆಯ ದಾಖಲೆಗಳನ್ನು ಮುರಿದು ಹೊಸ ಗುರಿಗಳನ್ನು ಸಾಧಿಸುತ್ತಿದ್ದೇವೆ. ಒಂದು ಉದಾಹರಣೆ ಕೊಡುತ್ತೇನೆ. 2030 ರ ವೇಳೆಗೆ ನಮ್ಮ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಶೇಕಡಾ 40 ರಷ್ಟು ಪಳೆಯುಳಿಕೆಯೇತರ ಇಂಧನದಿಂದ ಆಗಲಿದೆ ಎಂದು ಭಾರತ 2016 ರಲ್ಲಿ ನಿರ್ಧರಿಸಿತ್ತು. ನಾವು 2030 ಕ್ಕೆ ಇನ್ನೂ ಎಂಟು ವರ್ಷಗಳಷ್ಟು ದೂರವಿದ್ದರೂ ಭಾರತ ಈ ಗುರಿಯನ್ನು ಸಾಧಿಸಿದೆ. ನಾವು ಪೆಟ್ರೋಲ್ ನಲ್ಲಿ 10 ಪ್ರತಿಶತ ಎಥೆನಾಲ್ ಮಿಶ್ರಣದ ಗುರಿಯನ್ನು ಹೊಂದಿದ್ದೆವು. ಈ ಗುರಿಯನ್ನು ದೇಶವು ಗಡುವಿನ ಐದು ತಿಂಗಳ ಮೊದಲೇ ಸಾಧಿಸಿದೆ.
ಭಾರತದಲ್ಲಿ ಕೋವಿಡ್ ಲಸಿಕೆಗಳನ್ನು ನೀಡಿದ ವೇಗ ಮತ್ತು ಪ್ರಮಾಣದ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ. ಇಂದು, ಭಾರತದಲ್ಲಿ ಶೇ.90 ರಷ್ಟು ವಯಸ್ಕರು ಎರಡೂ ಡೋಸ್ ಲಸಿಕೆಗಳನ್ನು ಪಡೆದಿದ್ದಾರೆ. ಶೇ.95 ರಷ್ಟು ವಯಸ್ಕರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. 1.25 ಶತಕೋಟಿ ಜನಸಂಖ್ಯೆಗೆ ಲಸಿಕೆ ಹಾಕಲು 10-15 ವರ್ಷಗಳು ತೆಗೆದುಕೊಳ್ಳುತ್ತದೆ ಎಂದು ಕೆಲವರು ಹೇಳುತ್ತಿದ್ದ ಅದೇ ಭಾರತದಲ್ಲಿ. ಇಂದು, ನಾನು ನಿಮ್ಮೊಂದಿಗೆ ಮಾತನಾಡುತ್ತಿರುವಾಗ, ಭಾರತದಲ್ಲಿ ಲಸಿಕೆ ಡೋಸ್‌ಗಳ ಸಂಖ್ಯೆ 196 ಕೋಟಿಗಳನ್ನು ಅಂದರೆ 1.96 ಬಿಲಿಯನ್‌ಗಳನ್ನು ದಾಟಿದೆ. ‘ಮೇಡ್ ಇನ್ ಇಂಡಿಯಾ’ಲಸಿಕೆಗಳು ಭಾರತದಲ್ಲಿ ಹಾಗೂ ಜಗತ್ತಿನ ಕೋಟ್ಯಂತರ ಜನರ ಜೀವವನ್ನು ಕೊರೊನಾದಿಂದ ರಕ್ಷಿಸಿವೆ.
ಸ್ನೇಹಿತರೇ,
ನಾನು 2015 ರಲ್ಲಿ ಜರ್ಮನಿಗೆ ಬಂದಾಗ ಸ್ಟಾರ್ಟ್-ಅಪ್ ಇಂಡಿಯಾ ಅಭಿಯಾನವು ಒಂದು ಕಲ್ಪನೆ ಮಾತ್ರವಾಗಿತ್ತು ಎಂದು ನನಗೆ ನೆನಪಿದೆ. ಆಗ ಭಾರತವು ಸ್ಟಾರ್ಟ್-ಅಪ್‌ಗಳ ಕ್ಷೇತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಇಂದು ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಭಾರತವು ಸರಳವಾದ ಸ್ಮಾರ್ಟ್‌ಫೋನ್‌ಗಳನ್ನೂ ಹೊರಗಿನಿಂದ ಖರೀದಿಸುತ್ತಿದ್ದ ಕಾಲವೊಂದಿತ್ತು. ಇಂದು ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿದ್ದು, ಈಗ ಭಾರತದಲ್ಲಿ ತಯಾರಾದ ಮೊಬೈಲ್ ಫೋನ್‌ಗಳನ್ನು ರಫ್ತು ಮಾಡಲಾಗುತ್ತಿದೆ. ಸುಮಾರು ಏಳೆಂಟು ವರ್ಷಗಳ ಹಿಂದೆ ನಾನು ನಿಮ್ಮಂತಹ ಸಹೋದ್ಯೋಗಿಗಳೊಂದಿಗೆ ಚರ್ಚಿಸಿದಾಗ, ನಮ್ಮ ಜೈವಿಕ ತಂತ್ರಜ್ಞಾನದ ಆರ್ಥಿಕತೆಯು 10 ಬಿಲಿಯನ್ ಡಾಲರ್ ಅಂದರೆ 75,000 ಕೋಟಿ ರೂಪಾಯಿಗಳಷ್ಟಿತ್ತು. ಇಂದು ಅದು ಎಂಟು ಪಟ್ಟು ಹೆಚ್ಚಾಗಿ 80 ಬಿಲಿಯನ್ ಡಾಲರ್ ಅಂದರೆ ಆರು ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ.
ಸ್ನೇಹಿತರೇ,
ಭಾರತದ ಜನರ ಧೈರ್ಯವು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿಯೂ ನಮ್ಮ ದೊಡ್ಡ ಶಕ್ತಿಯಾಗಿದೆ. ಸ್ನೇಹಿತರೇ, ನಮ್ಮ ಕಳೆದ ವರ್ಷದ ರಫ್ತುಗಳು ಇದುವರೆಗಿನ ಅತ್ಯಧಿಕವಾಗಿವೆ. ಒಂದು ಕಡೆ ನಮ್ಮ ತಯಾರಕರು ಹೊಸ ಅವಕಾಶಗಳಿಗೆ ಸಿದ್ಧರಾಗಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ, ಹಾಗೆಯೇ ಜಗತ್ತು ನಮ್ಮನ್ನು ಭರವಸೆ ಮತ್ತು ವಿಶ್ವಾಸದಿಂದ ನೋಡುತ್ತಿದೆ. ಕಳೆದ ವರ್ಷ ಭಾರತವು 111 ಬಿಲಿಯನ್ ಡಾಲರ್ ಅಂದರೆ 8.30 ಲಕ್ಷ ಕೋಟಿ ರೂಪಾಯಿ ಮೌಲ್ಯದ ಎಂಜಿನಿಯರಿಂಗ್ ಸರಕುಗಳನ್ನು ರಫ್ತು ಮಾಡಿದೆ. ಭಾರತದ ಹತ್ತಿ ಮತ್ತು ಕೈಮಗ್ಗ ಉತ್ಪನ್ನಗಳ ರಫ್ತು ಕೂಡ ಶೇಕಡಾ 55 ರಷ್ಟು ಹೆಚ್ಚಾಗಿದೆ.
ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರವು ಸುಮಾರು 2 ಲಕ್ಷ ಕೋಟಿ ರೂಪಾಯಿ ಮೌಲ್ಯದ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಯನ್ನು ಪ್ರಾರಂಭಿಸಿದೆ. ಮುಂದಿನ ವರ್ಷ ನಮ್ಮ ರಫ್ತು ಗುರಿಯನ್ನು ಇನ್ನಷ್ಟು ಹೆಚ್ಚಿಸಲು ನಾವು ಬಯಸಿದ್ದೇವೆ ಮತ್ತು ಈ ನಿಟ್ಟಿನಲ್ಲಿ ನೀವು ಸಹ ಸಾಕಷ್ಟು ಸಹಾಯ ಮಾಡಬಹುದು. ಅದೇ ರೀತಿ, ಎಫ್‌ಡಿಐ ಒಳಹರಿವು ಕೂಡ ಹೊಸ ದಾಖಲೆಗಳನ್ನು ಸೃಷ್ಟಿಸಿದೆ
ಸ್ನೇಹಿತರೇ,
ಒಂದು ದೇಶದ ನಾಗರಿಕರು ‘ಸಬ್ಕಾ ಪ್ರಯಾಸ್’(ಎಲ್ಲರ ಪ್ರಯತ್ನ) ಮತ್ತು ಸಾರ್ವಜನಿಕ ಸಹಭಾಗಿತ್ವದೊಂದಿಗೆ ರಾಷ್ಟ್ರೀಯ ಸಂಕಲ್ಪಗಳನ್ನು ಈಡೇರಿಸಲು ತೊಡಗಿಸಿಕೊಂಡಾಗ, ಅವರು ವಿಶ್ವದ ದೊಡ್ಡ ಶಕ್ತಿಗಳ ಬೆಂಬಲವನ್ನು ಸಹ ಪಡೆಯುತ್ತಾರೆ. ಪ್ರಪಂಚದ ದೊಡ್ಡ ಶಕ್ತಿಗಳು ಭಾರತದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯಲು ಹೇಗೆ ಬಯಸುತ್ತಿವೆ ಎಂಬುದನ್ನು ನಾವು ಇಂದು ನೋಡಬಹುದು. ಇಂದು ಭಾರತ ತನ್ನ ದೇಶವಾಸಿಗಳ ಸಂಕಲ್ಪದೊಂದಿಗೆ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಜನರ ಸಂಕಲ್ಪ ಮತ್ತು ಸಹಭಾಗಿತ್ವದಿಂದ ಭಾರತದ ಪ್ರಯತ್ನಗಳು ಇಂದು ಜನಾಂದೋಲನವಾಗುತ್ತಿವೆ. ಇದು ದೇಶದ ಭವಿಷ್ಯದ ಬಗ್ಗೆ ನನಗೆ ಭರವಸೆ ಮತ್ತು ವಿಶ್ವಾಸವನ್ನು ನೀಡಿದೆ.
ಉದಾಹರಣೆಗೆ, ಸಾವಯವ ಕೃಷಿಯು ವಿಶ್ವದಲ್ಲಿ ಚರ್ಚೆಯ ವಿಷಯವಾಗಿಯೇ ಉಳಿದಿದೆ, ಆದರೆ ಭಾರತದ ರೈತರೇ ಮುಂದೆ ಬಂದು ಅದನ್ನು ಕಾರ್ಯಗತಗೊಳಿಸುತ್ತಿದ್ದಾರೆ. ಅಂತೆಯೇ, ಹವಾಮಾನ ಬದಲಾವಣೆಯು ಇಂದು ಭಾರತದಲ್ಲಿ ಸರ್ಕಾರದ ನೀತಿಗಳ ಸಮಸ್ಯೆಯಲ್ಲ. ಭಾರತದ ಯುವಕರು ಇವಿಗಳು ಮತ್ತಿತರ ಪರಿಸರಸ್ನೇಹಿ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಸುಸ್ಥಿರ ಹವಾಮಾನ ಪದ್ಧತಿಗಳು ಇಂದು ಭಾರತದಲ್ಲಿ ಶ್ರೀಸಾಮಾನ್ಯನ ಜೀವನದ ಭಾಗವಾಗುತ್ತಿವೆ.
2014 ರವರೆಗೂ ಭಾರತದಲ್ಲಿ ಬಯಲು ಶೌಚವು ಪ್ರಮುಖ ಸಮಸ್ಯೆಯಾಗಿತ್ತು. ಆದರೆ ನಾವು ದೇಶದಲ್ಲಿ 10 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಇಂದು ಭಾರತದಲ್ಲಿ ಸ್ವಚ್ಛತೆ ಜೀವನಶೈಲಿಯಾಗುತ್ತಿದೆ. ಭಾರತದ ಜನರು ಮತ್ತು ಯುವಕರು ದೇಶವನ್ನು ಸ್ವಚ್ಛವಾಗಿಡುವುದು ತಮ್ಮ ಕರ್ತವ್ಯವೆಂದು ಪರಿಗಣಿಸುತ್ತಿದ್ದಾರೆ. ಇಂದು, ಭಾರತದ ಜನರು ತಮ್ಮ ಹಣವನ್ನು ದೇಶಕ್ಕಾಗಿ ಪ್ರಾಮಾಣಿಕವಾಗಿ ಖರ್ಚು ಮಾಡಲಾಗುತ್ತಿದೆ ಮತ್ತು ಭ್ರಷ್ಟಾಚಾರಕ್ಕೆ ಬಲಿಯಾಗುತ್ತಿಲ್ಲ ಎಂಬ ವಿಶ್ವಾಸ ಹೊಂದಿದ್ದಾರೆ. ಪರಿಣಾಮವಾಗಿ, ನಗದು ಅನುಸರಣೆ ಹೆಚ್ಚುತ್ತಿದೆ ಮತ್ತು ಇದು ಯಾವುದೇ ಕಾನೂನು ಪ್ರಕ್ರಿಯೆಯಿಂದಲ್ಲ, ಬದಲಿಗೆ ಇದು ಸ್ವಯಂಪ್ರೇರಿತವಾಗಿ ನಡೆಯುತ್ತಿದೆ.
ಸ್ನೇಹಿರೇ,
ನಾವೆಲ್ಲರೂ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ, ಈ ವರ್ಷ ನಮ್ಮ ಸ್ವಾತಂತ್ರ್ಯಕ್ಕೆ 75 ವರ್ಷಗಳು. ಸ್ವಾತಂತ್ರ್ಯದ 75 ನೇ ವರ್ಷದಲ್ಲಿ, ಭಾರತವು ಅಭೂತಪೂರ್ವ ಒಳಗೊಳ್ಳುವಿಕೆಗೆ ಸಾಕ್ಷಿಯಾಗಿದೆ ಮತ್ತು ಲಕ್ಷಾಂತರ ಆಕಾಂಕ್ಷೆಗಳು ಅದರಿಂದ ಪ್ರಭಾವಿತವಾಗಿವೆ. ಭಾರತ ಇಂದು ಅಭೂತಪೂರ್ವ ಸಾಧ್ಯತೆಗಳಿಂದ ತುಂಬಿದೆ. ಬಲಿಷ್ಠ, ಸ್ಥಿರ ಮತ್ತು ನಿರ್ಣಾಯಕ ಸರ್ಕಾರದ ನಾಯಕತ್ವದಲ್ಲಿ ಭಾರತವು ಹೊಸ ಕನಸುಗಳನ್ನು ಕಾಣುತ್ತಿದೆ, ಹೊಸ ಸಂಕಲ್ಪಗಳನ್ನು ಮಾಡುತ್ತಿದೆ ಮತ್ತು ಆ ಸಂಕಲ್ಪಗಳನ್ನು ಸಾಕಾರಗೊಳಿಸಲು ಶ್ರಮಿಸುತ್ತಿದೆ. ನಮ್ಮ ನೀತಿ ಸ್ಪಷ್ಟವಾಗಿದೆ ಮತ್ತು ಸುಧಾರಣೆಗಳ ವಿಷಯದಲ್ಲಿ ಬಲವಾದ ಬದ್ಧತೆ ಇದೆ. ಐದು ವರ್ಷಗಳ ನಂತರ ನಾವು ಎಲ್ಲಿಗೆ ತಲುಪಬೇಕು ಎಂಬುದನ್ನೂ ನಿರ್ಧರಿಸಲಾಗಿದೆ ಮತ್ತು ದೇಶವು ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವ ಮುಂದಿನ 25 ವರ್ಷಗಳ ಸ್ವಾವಲಂಬನೆಯ ಮಾರ್ಗಸೂಚಿಯೂ ಸಿದ್ಧವಾಗಿದೆ.
ಸ್ನೇಹಿತರೇ,
ಜಗತ್ತಿನಲ್ಲಿ ಏನಾದರೂ ಸಂಭವಿಸಿದರೆ ನಾವು ಸಮಸ್ಯೆಗಳನ್ನು ಎದುರಿಸುತ್ತಿದ್ದ ದಿನಗಳು ಮಗಿದಿವೆ. ಇಂದು ಭಾರತವು ಜಾಗತಿಕ ಸವಾಲುಗಳನ್ನು ಎದುರಿಸುತ್ತಿರುವ ದೇಶವಲ್ಲ, ಆದರೆ ಅದು ಈ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುತ್ತಿದೆ. ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳ ಒಕ್ಕೂಟದ (ಸಿ ಡಿ ಆರ್ ಐ) ಮೂಲಕ ವಿಪತ್ತುಗಳ ವಿರುದ್ಧ ಹೋರಾಡಲು ಇಡೀ ಜಗತ್ತನ್ನು ಸಕ್ರಿಯಗೊಳಿಸಲು ನಾವು ಬಯಸುತ್ತೇವೆ. ಇಂದು, ನಾವು ಅಂತರರಾಷ್ಟ್ರೀಯ ಸೌರ ಒಕ್ಕೂಟದ ಮೂಲಕ ಜಗತ್ತಿನ ದೇಶಗಳನ್ನು ಒಂದೇ ವೇದಿಕೆಯಲ್ಲಿ ತರುತ್ತಿದ್ದೇವೆ. ಇದರಿಂದ ಕೈಗೆಟುಕುವ ಮತ್ತು ಪರಿಸರ ಸ್ನೇಹಿ ಇಂಧನದ ಪ್ರಯೋಜನಗಳನ್ನು ಜಗತ್ತಿಗೆ ತಲುಪಿಸಬಹುದು. ‘ಒನ್ ಸನ್-ಒನ್ ವರ್ಲ್ಡ್-ಒನ್ ಗ್ರಿಡ್’ಕನಸನ್ನು ಜಗತ್ತಿನ ಮುಂದೆ ಮಂಡಿಸಿದ್ದೇವೆ. ಕಳೆದ ಎಂಟು ವರ್ಷಗಳಲ್ಲಿ ಭಾರತವೇ ಅದರ ಲಾಭವನ್ನು ಅನುಭವಿಸಿದೆ. ಭಾರತದಲ್ಲಿ ಸೌರ ಶಕ್ತಿಯ ದಾಖಲೆಯ ಸಾಮರ್ಥ್ಯವಿದೆ ಮತ್ತು ಇದು ಪ್ರತಿ ಯೂನಿಟ್‌ಗೆ 2 ಅಥವಾ 2.5 ರೂಪಾಯಿಗಳಲ್ಲಿ ಲಭ್ಯವಿದೆ.
ಭಾರತವು ಹಸಿರು ಹೈಡ್ರೋಜನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ ಮತ್ತು ಜರ್ಮನಿಯಂತಹ ಸ್ನೇಹಪರ ರಾಷ್ಟ್ರಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ ಎಂಬುದು ಮನುಕುಲದ ಹಿತಾಸಕ್ತಿಯಾಗಿದೆ. ಭಾರತದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ಔಷಧ ಪದ್ಧತಿ ಕೇಂದ್ರದ ಸ್ಥಾಪನೆಯೊಂದಿಗೆ, ಭಾರತವು ಪ್ರಪಂಚದ ಪ್ರಾಚೀನ ಔಷಧ ವ್ಯವಸ್ಥೆಗಳ ಜಾಗತಿಕ ಕೇಂದ್ರವಾಗುತ್ತಿದೆ.
ಸ್ನೇಹಿತರೇ,
ಯೋಗದ ಶಕ್ತಿಯ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ. ಇದು ಇಡೀ ಜಗತ್ತನ್ನು ಆವರಿಸಿದೆ.
ಸ್ನೇಹಿತರೇ,
ಇಂದಿನ ನವ ಭಾರತವು ಮುಂದಿನ ಪೀಳಿಗೆಗೆ ಹೊಸ ಪರಂಪರೆಯನ್ನು ಸೃಷ್ಟಿಸುತ್ತಿದೆ. ಹೊಸ ಪರಂಪರೆಯನ್ನು ಸೃಷ್ಟಿಸುವ ಈ ಅಭಿಯಾನದ ದೊಡ್ಡ ಶಕ್ತಿ ನಮ್ಮ ಯುವಜನರು. ಭಾರತದ ಯುವಜನರನ್ನು ಸಬಲೀಕರಣಗೊಳಿಸಲು ನಾವು 21 ನೇ ಶತಮಾನದ ಮೊದಲ ಶಿಕ್ಷಣ ನೀತಿಯನ್ನು ತಂದಿದ್ದೇವೆ. ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಅನ್ನು ಮಾತೃಭಾಷೆಯಲ್ಲಿ ಕಲಿಯುವ ಆಯ್ಕೆಯನ್ನು ಒದಗಿಸಲಾಗಿದೆ.
ಜರ್ಮನಿಯಲ್ಲಿರುವ ನಿಮಗೆಲ್ಲರಿಗೂ ಮಾತೃಭಾಷೆಯಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಅಧ್ಯಯನದ ಪ್ರಯೋಜನಗಳು ತಿಳಿದಿವೆ. ಈಗ ಭಾರತದ ಯುವಕರಿಗೂ ಅದೇ ಲಾಭ ಸಿಗಲಿದೆ. ಹೊಸ ಶಿಕ್ಷಣ ನೀತಿಯು ಉನ್ನತ ಶಿಕ್ಷಣ ಮತ್ತು ಸಂಶೋಧನೆಗಾಗಿ ಜಾಗತಿಕ ಪಾಲುದಾರಿಕೆಗಳ ಮೇಲೆ ಬಲವಾದ ಗಮನವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಜರ್ಮನಿಯ ಸಂಸ್ಥೆಗಳಿಗೆ ಹಲವು ಅವಕಾಶಗಳಿರುವುದರಿಂದ ಇಂದು ಇದನ್ನು ಪ್ರಸ್ತಾಪಿಸುತ್ತಿದ್ದೇನೆ.
ಸ್ನೇಹಿತರೇ,
ಕಳೆದ ಕೆಲವು ದಶಕಗಳಲ್ಲಿ ನಿಮ್ಮ ಕಠಿಣ ಪರಿಶ್ರಮದ ಮೂಲಕ ನೀವು ಇಲ್ಲಿ ಭಾರತದ ಬಗ್ಗೆ ಬಲವಾದ ಚಿತ್ರಣವನ್ನು ಸೃಷ್ಟಿಸಿದ್ದೀರಿ. ಮುಂದಿನ 25 ವರ್ಷಗಳಲ್ಲಿ ಸ್ವಾತಂತ್ರ್ಯದ ‘ಅಮೃತ ಕಾಲ’ ದಲ್ಲಿ ನಿಮ್ಮಿಂದ ನಿರೀಕ್ಷೆಗಳು ಇನ್ನಷ್ಟು ಹೆಚ್ಚಿವೆ. ನೀವು ಭಾರತದ ಯಶಸ್ಸಿನ ಕಥೆ ಮತ್ತು ಭಾರತದ ಯಶಸ್ಸಿನ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದೀರಿ. ಆದ್ದರಿಂದ, ಪ್ರಪಂಚದಾದ್ಯಂತ ಇರುವ ನನ್ನ ಭಾರತೀಯ ಸಹೋದರ ಸಹೋದರಿಯರಿಗೆ ಅವರು ರಾಷ್ಟ್ರೀಯ ರಾಯಭಾರಿಗಳು ಎಂದು ನಾನು ಯಾವಾಗಲೂ ಹೇಳುತ್ತೇನೆ. ಸರ್ಕಾರಿ ವ್ಯವಸ್ಥೆಯಲ್ಲಿ ಕೆಲವು ರಾಯಭಾರಿಗಳಿರುತ್ತಾರೆ, ಆದರೆ ನನ್ನ ದೇಶವನ್ನು ಮುನ್ನಡೆಸುವ ಕೋಟ್ಯಂತರ ರಾಯಭಾರಿಗಳಿದ್ದಾರೆ.
ಸ್ನೇಹಿತರೇ,
ನಿಮ್ಮೆಲ್ಲರ ಪ್ರೀತಿ, ಹಾರೈಕೆ ಮತ್ತು ಇಂತಹ ಅದ್ಭುತ ಕಾರ್ಯಕ್ರಮವನ್ನು ಉತ್ಸಾಹದಿಂದ ಆಯೋಜಿಸಿದ್ದಕ್ಕಾಗಿ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನನಗೂ ನಿಮ್ಮನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಎಲ್ಲರೂ ಸುರಕ್ಷಿತವಾಗಿರಿ ಮತ್ತು ಸಂತೋಷವಾಗಿರಿ.
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ತುಂಬಾ ಧನ್ಯವಾದಗಳು!
ಸೂಚನೆ: ಇದು ಪ್ರಧಾನಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣ ಹಿಂದಿಯಲ್ಲಿತ್ತು.
******
(Release ID: 1838079)
Visitor Counter : 292
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam