ಪ್ರಧಾನ ಮಂತ್ರಿಯವರ ಕಛೇರಿ

ಕರ್ನಾಟಕದ ಮೈಸೂರಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಪ್ರಧಾನಿ.


ಮೈಸೂರಿನ ನಾಗನಹಳ್ಳಿ ರೈಲು ನಿಲ್ದಾಣದಲ್ಲಿ ಉಪನಗರ ಸಂಚಾರಕ್ಕಾಗಿ ಕೋಚಿಂಗ್ ಟರ್ಮಿನಲ್‌ಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ

ಮೈಸೂರಿನ ಎ ಐ ಐ ಎಸ್‌ ಹೆಚ್‌ ನಲ್ಲಿ 'ಸಂವಹನ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳಿಗೆ ಶ್ರೇಷ್ಠತಾ ಕೇಂದ್ರ' ರಾಷ್ಟ್ರಕ್ಕೆ ಸಮರ್ಪಣೆ

"ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವ ಮೂಲಕ 21 ನೇ ಶತಮಾನದ ಸಂಕಲ್ಪಗಳನ್ನು ಸಾಕಾರಗೊಳಿಸುವುದು ಹೇಗೆ ಎಂಬುದಕ್ಕೆ ಕರ್ನಾಟಕವು ಒಂದು ಪರಿಪೂರ್ಣ ಉದಾಹರಣೆಯಾಗಿದೆ"

ಸಾಮಾನ್ಯ ಜನರನ್ನು ಮೂಲಭೂತ ಸೌಕರ್ಯಗಳು ಮತ್ತು ಘನತೆಯ ಬದುಕಿನೊಂದಿಗೆ ಸಂಪರ್ಕಿಸಲು 'ಡಬಲ್-ಎಂಜಿನ್' ಸರ್ಕಾರವು ತನ್ನ ಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡುತ್ತಿದೆ"

"ಕಳೆದ 8 ವರ್ಷಗಳಲ್ಲಿ, ಪರಿಣಾಮಕಾರಿಯಾಗಿ ಕೊನೆಯ ವ್ಯಕ್ತಿಗೂ ಸೌಲಭ್ಯ ವಿತರಿಸುವ ಮೂಲಕ ಸರ್ಕಾರವು ಸಾಮಾಜಿಕ ನ್ಯಾಯವನ್ನು ಬಲಪಡಿಸಿದೆ"

"ನಾವು ದಿವ್ಯಾಂಗರಿಗೆ ಘನತೆ ಮತ್ತು ಅವಕಾಶವನ್ನು ಖಾತ್ರಿಪಡಿಸುತ್ತಿದ್ದೇವೆ ಮತ್ತು ದಿವ್ಯಾಂಗ ಮಾನವ ಸಂಪನ್ಮೂಲವನ್ನು ರಾಷ್ಟ್ರದ ಪ್ರಗತಿಯ ಪ್ರಮುಖ ಭಾಗೀದಾರರಾಗಿಸಲು ಕೆಲಸ ಮಾಡುತ್ತಿದ್ದೇವೆ"

Posted On: 20 JUN 2022 8:45PM by PIB Bengaluru

ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಉಪನಗರ ಸಂಚಾರಕ್ಕಾಗಿ ನಾಗನಹಳ್ಳಿ ರೈಲು ನಿಲ್ದಾಣದಲ್ಲಿ 480 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಿರುವ ಕೋಚಿಂಗ್ ಟರ್ಮಿನಲ್‌ಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು. ಕೋಚಿಂಗ್ ಟರ್ಮಿನಲ್ ಮೆಮು ಶೆಡ್ ಅನ್ನು ಸಹ ಹೊಂದಿರುತ್ತದೆ. ಇದು ಅಸ್ತಿತ್ವದಲ್ಲಿರುವ ಮೈಸೂರು ಯಾರ್ಡ್ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ, ಹೆಚ್ಚಿನ ಮೆಮು ರೈಲು ಸೇವೆಗಳು ಮತ್ತು ಮೈಸೂರಿನಿಂದ ದೂರದ ರೈಲುಗಳ ಓಡಾಟವನ್ನು ಸುಗಮಗೊಳಿಸುತ್ತದೆ, ಈ ಪ್ರದೇಶದ ಸಂಪರ್ಕ ಮತ್ತು ಪ್ರವಾಸೋದ್ಯಮ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಇದರಿಂದ ದಿನನಿತ್ಯದ ಪ್ರಯಾಣಿಕರಿಗೆ ಹಾಗೂ ದೂರದ ಸ್ಥಳಗಳಿಗೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.
ಇದೇ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಎ ಐ ಐ ಎಸ್‌ ಹೆಚ್‌) ಯಲ್ಲಿ  ‘ಸಂವಹನ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳಿಗೆ ಶ್ರೇಷ್ಠತಾ ಕೇಂದ್ರʼವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ಅತ್ಯಾಧುನಿಕ ಪ್ರಯೋಗಾಲಯಗಳು ಮತ್ತು ಸಂವಹನ ಅಸ್ವಸ್ಥತೆಗಳಿರುವ ವ್ಯಕ್ತಿಗಳ ರೋಗನಿರ್ಣಯ, ಮೌಲ್ಯಮಾಪನ ಮತ್ತು ಪುನರ್ವಸತಿ ಸೌಲಭ್ಯಗಳನ್ನು ಹೊಂದಿದೆ.
ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ದೇಶದ ಆರ್ಥಿಕ ಮತ್ತು ಆಧ್ಯಾತ್ಮಿಕ ಸಮೃದ್ಧಿ ಎರಡನ್ನೂ ಒಟ್ಟಿಗೆ ನೋಡಬಹುದಾದ ರಾಜ್ಯ ಕರ್ನಾಟಕ. ನಮ್ಮ ಪುರಾತನ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವ ಮೂಲಕ 21ನೇ ಶತಮಾನದ ಸಂಕಲ್ಪಗಳನ್ನು ನಾವು ಹೇಗೆ ಸಾಕಾರಗೊಳಿಸಬಹುದು ಎಂಬುದಕ್ಕೆ ಕರ್ನಾಟಕ ಒಂದು ಪರಿಪೂರ್ಣ ಉದಾಹರಣೆಯಾಗಿದೆ ಎಂದು ಹೇಳಿದರು.
ಈ ನಾಡು ನಾಲ್ವಡಿ ಕೃಷ್ಣ ರಾಜಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ, ರಾಷ್ಟ್ರಕವಿ ಕುವೆಂಪು ಅವರಂತಹ ಮಹನೀಯರನ್ನು ದೇಶಕ್ಕೆ ನೀಡಿದೆ. ಇವರು ಭಾರತದ ಪರಂಪರೆ ಮತ್ತು ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಹೇಳಿದರು. ‘ಡಬಲ್ ಇಂಜಿನ್’ ಸರ್ಕಾರವು ಸಾಮಾನ್ಯ ಜನರನ್ನು ಮೂಲಭೂತ ಸೌಕರ್ಯಗಳು ಮತ್ತು ಘನತೆಯ ಜೀವನದೊಂದಿಗೆ ಸಂಪರ್ಕಿಸಲು ಸಂಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡುತ್ತಿದೆ ಮತ್ತು ಈ ಮಹಾನ್ ವ್ಯಕ್ತಿಗಳ ದೃಷ್ಟಿಕೋನವನ್ನು ಮುಂದುವರಿಸುತ್ತಿದೆ ಎಂದು ಅವರು ಹೇಳಿದರು.
ಜನರ ಕಲ್ಯಾಣಕ್ಕಾಗಿ ಹಿಂದಿನ ಪ್ರಯತ್ನಗಳು ಕೆಲವೇ ಆಯ್ದ ವರ್ಗಗಳಿಗೆ ಸೀಮಿತವಾಗಿದ್ದವು ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ 8 ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿದ ಯೋಜನೆಗಳಲ್ಲಿ, ಸೌಲಭ್ಯಗಳು ಸಮಾಜದ ಎಲ್ಲಾ ವರ್ಗಗಳನ್ನು ಮತ್ತು ಎಲ್ಲಾ ಕ್ಷೇತ್ರಗಳನ್ನು ಮುಟ್ಟಬೇಕು ಮತ್ತು ತಲುಪಬೇಕು ಎಂಬ ಮನೋಭಾವಕ್ಕೆ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು. ಒಂದೆಡೆ ಸ್ಟಾರ್ಟ್‌ಅಪ್ ನೀತಿಯಡಿ ಯುವಕರಿಗೆ ಪ್ರೋತ್ಸಾಹಧನ ನೀಡಿದ್ದೇವೆ, ಮತ್ತೊಂದೆಡೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಿಂದ ರೈತರಿಗೆ ಹಣ ನೀಡುತ್ತಿದ್ದೇವೆ (ಕರ್ನಾಟಕದ 56 ಲಕ್ಷ ಸಣ್ಣ ರೈತರು 10000 ಕೋಟಿ ರೂ.ಗೂ ಹೆಚ್ಚು ಹಣವನ್ನು ತಮ್ಮ ಖಾತೆಗಳಲ್ಲಿ ಪಡೆದಿದ್ದಾರೆ) ಎಂದು ಅವರು ಹೇಳಿದರು. ಒಂದು ರಾಷ್ಟ್ರ ಒಂದು ಪಡಿತರ ಚೀಟಿಯಂತಹ ಉಪಕ್ರಮಗಳಿಂದ, ಈ ಯೋಜನೆಗಳು ಈಗ ಭಾರತದಾದ್ಯಂತ ವ್ಯಾಪಿಸುತ್ತಿವೆ. ಕಳೆದ ಎರಡು ವರ್ಷಗಳಿಂದ ಕರ್ನಾಟಕದ 4.25 ಕೋಟಿಗೂ ಹೆಚ್ಚು ಬಡವರು ಉಚಿತ ಪಡಿತರವನ್ನು ಪಡೆಯುತ್ತಿದ್ದಾರೆ. ಆಯುಷ್ಮಾನ್ ಭಾರತ್ ಅಡಿಯಲ್ಲಿ ರಾಜ್ಯದ 29 ಲಕ್ಷಕ್ಕೂ ಹೆಚ್ಚು ಬಡ ರೋಗಿಗಳು ಉಚಿತ ಚಿಕಿತ್ಸೆ ಪಡೆದಿದ್ದಾರೆ ಎಂದರು. ಕಾರ್ಯಕ್ರಮಕ್ಕೂ ಮುನ್ನ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಸರ್ಕಾರದ ಪ್ರತಿ ಪೈಸೆಯೂ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಳೆದ 8 ವರ್ಷಗಳಲ್ಲಿ ಸರ್ಕಾರವು ಪರಿಣಾಮಕಾರಿಯಾಗಿ ಕೊನೆಯ ವ್ಯಕ್ತಿಗೂ ಸೌಲಭ್ಯಗಳನ್ನು ವಿತರಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಸಶಕ್ತಗೊಳಿಸಿದೆ ಎಂದು ಪ್ರಧಾನಿ ಹೇಳಿದರು. ಕಲ್ಯಾಣ ಯೋಜನೆಗಳಲ್ಲಿ ಸಂಪೂರ್ಣತೆಯನ್ನು ಸಾಧಿಸುವ  ಪ್ರಯತ್ನಗಳ ಮೂಲಕ, ತಾರತಮ್ಯ ಮತ್ತು ಸೋರಿಕೆ ಇಲ್ಲದೆ ಸೌಲಭ್ಯಗಳನ್ನು ಪಡೆಯುವ ನಂಬಿಕೆಯು ಭಾರತದ ಸಾಮಾನ್ಯ ನಾಗರಿಕರಲ್ಲಿ ಬಲಗೊಂಡಿದೆ ಎಂದು ಹೇಳಿದರು. ನಮ್ಮ ದಿವ್ಯಾಂಗರು ಇತರರ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಲು ತಮ್ಮ ಸರ್ಕಾರ ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದೆ. ಆದ್ದರಿಂದ ನಮ್ಮ ಕರೆನ್ಸಿಯಲ್ಲಿ, ನಾಣ್ಯಗಳಲ್ಲಿ ದಿವ್ಯಾಂಗರ ಅನುಕೂಲಕ್ಕಾಗಿ ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ವಿಶೇಷಚೇತನರ ಶಿಕ್ಷಣಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ದೇಶಾದ್ಯಂತ ಶ್ರೀಮಂತಗೊಳಿಸಲಾಗುತ್ತಿದೆ. ಸುಗಮ್ಯ ಭಾರತವು ಅವರಿಗೆ ಸಾರಿಗೆ ಮತ್ತು ಕಚೇರಿಗಳನ್ನು ಪ್ರವೇಶಿಸುವಂತೆ ಮಾಡುತ್ತಿದೆ ಎಂದರು. ದಿವ್ಯಾಂಗರ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವಂತೆ ಪ್ರಧಾನಿಯವರು ಸ್ಟಾರ್ಟಪ್ ಪರಿಸರ ವ್ಯವಸ್ಥೆಗೆ ಕರೆಕೊಟ್ಟರು. ದಿವ್ಯಾಂಗ ಮಾನವ ಸಂಪನ್ಮೂಲವನ್ನು ರಾಷ್ಟ್ರದ ಪ್ರಗತಿಯಲ್ಲಿ ಪ್ರಮುಖ ಭಾಗೀದಾರರನ್ನಾಗಿ ಮಾಡುವಲ್ಲಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಸಹಾಯ ಮಾಡಲು, 'ಸಂವಹನ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳಿಗೆ ಶ್ರೇಷ್ಠತಾ ಕೇಂದ್ರ'ವನ್ನು ಇಂದು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
ಕಳೆದ 8 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ 5000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳಿಗೆ ಸುಮಾರು 70 ಸಾವಿರ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ ಎಂದು ಪ್ರಧಾನಿ ಹೇಳಿದರು. ಇಂದು ಬೆಂಗಳೂರಿನಲ್ಲಿ 7,000 ಕೋಟಿ ರೂ.ಗೂ ಅಧಿಕ ಮೊತ್ತದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಡಬಲ್ ಇಂಜಿನ್ ಸರ್ಕಾರವು ಜನರ ಸುಗಮ ಜೀವನಕ್ಕಾಗಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಶ್ರಮಿಸುತ್ತಿದೆ ಎಂದು ಹೇಳಿದರು.
2014ಕ್ಕಿಂತ ಮೊದಲು ಕರ್ನಾಟಕದಲ್ಲಿ ರೈಲ್ವೆಗೆ ಹಂಚಿಕೆಯಾಗಿದ್ದ ಸರಾಸರಿ 800 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಈ ವರ್ಷ 7000 ಕೋಟಿ ರೂಪಾಯಿಗಳನ್ನು ಇದಕ್ಕಾಗಿ ಮೀಸಲಿಡಲಾಗಿದೆ ಮತ್ತು ರಾಜ್ಯದಲ್ಲಿ 34000 ಕೋಟಿ ರೂಪಾಯಿಗಳ ರೈಲ್ವೆ ಯೋಜನೆಗಳ ಕಾಮಗಾರಿ ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು. 2014 ರ ಹಿಂದಿನ 10 ವರ್ಷಗಳಲ್ಲಿ ಕೇವಲ 16 ಕಿಮೀ ರೈಲು ಮಾರ್ಗದ ವಿದ್ಯುದ್ದೀಕರಣಕ್ಕೆ ಹೋಲಿಸಿದರೆ, ಕಳೆದ 8 ವರ್ಷಗಳಲ್ಲಿ 1600 ಕಿಮೀ ರೈಲು ಮಾರ್ಗವನ್ನು ವಿದ್ಯುದ್ದೀಕರಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು. ಕರ್ನಾಟಕದ ಜನತೆಯ ಆಶೀರ್ವಾದವು ರಾಜ್ಯದ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುವಂತೆ ಡಬಲ್ ಇಂಜಿನ್ ಸರ್ಕಾರವನ್ನು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಹೇಳಿದರು.

 

 

******



(Release ID: 1835702) Visitor Counter : 227