ಪ್ರಧಾನ ಮಂತ್ರಿಯವರ ಕಛೇರಿ

ʻಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ʼ ಯೋಜನೆಯಡಿ ಪ್ರಯೋಜನಗಳನ್ನು ಬಿಡುಗಡೆ ಮಾಡಲು ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಭಾಷಾಂತರ

Posted On: 30 MAY 2022 12:59PM by PIB Bengaluru

ನಮಸ್ಕಾರ! ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಸ್ಮೃತಿ ಇರಾನಿ ಅವರೇ, ದೇಶದ ವಿವಿಧೆಡೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಕ್ಯಾಬಿನೆಟ್ ಸದಸ್ಯರೇ, ಅವರೊಂದಿಗೆ ಉಪಸ್ಥಿತರಿರುವ ಹಿರಿಯ ನಾಗರಿಕರೇ, ಮತ್ತು ವಿಶೇಷವಾಗಿ ಇಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿರುವ ಪ್ರೀತಿಯ ಮಕ್ಕಳೇ, ಎಲ್ಲಾ ಗೌರವಾನ್ವಿತ ಮುಖ್ಯಮಂತ್ರಿಗಳೇ, ಇತರ ಗಣ್ಯರು ಮತ್ತು ಪ್ರೀತಿಯ ದೇಶವಾಸಿಗಳೇ! 

ಇಂದು ನಾನು ನಿಮ್ಮೊಂದಿಗೆ ಒಬ್ಬ ಪ್ರಧಾನಿಯಾಗಿ ಮಾತನಾಡುತ್ತಿಲ್ಲ, ಬದಲಾಗಿ ನಿಮ್ಮ ಕುಟುಂಬದ ಸದಸ್ಯನಾಗಿ ಮಾತನಾಡುತ್ತಿದ್ದೇನೆ. ಇಂದು ಮಕ್ಕಳ ನಡುವೆ ಇರುವುದಕ್ಕಾಗಿ ನಾನು ತುಂಬಾ ನಿರಾಳನಾಗಿದ್ದೇನೆ. 

ಸ್ನೇಹಿತರೇ, 
ಜೀವನವು ಕೆಲವೊಮ್ಮೆ ನಮ್ಮನ್ನು ಅನಿರೀಕ್ಷಿತ ಸಂದರ್ಭಗಳಿಗೆ ಗುರಿ ಮಾಡುತ್ತದೆ. ಇದ್ದಕ್ಕಿದ್ದಂತೆ ಕತ್ತಲು ಕವಿಯುತ್ತದೆ ಮತ್ತು ಸಂತೋಷದಮಯವಾಗಿದ್ದ ಜೀವನದಲ್ಲಿ ಎಲ್ಲವೂ ಬದಲಾಗುತ್ತದೆ. ಕರೋನಾ ಅನೇಕ ಜನರು ಮತ್ತು ಕುಟುಂಬಗಳ ಜೀವನವನ್ನು ಇದೇ ರೀತಿಯ ಮಾಡಿದೆ. ಕೊರೊನಾದಿಂದಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಜೀವನದಲ್ಲಿ ಈ ಬದಲಾವಣೆ ಎಷ್ಟು ಕಷ್ಟ ಎಂದು ನನಗೆ ತಿಳಿದಿದೆ. ಪ್ರತಿ ದಿನದ ಹೋರಾಟಗಳು, ಕ್ಷಣಕ್ಷಣಕ್ಕೂ ಹೋರಾಟಗಳು, ಹೊಸ ಸವಾಲುಗಳು ಮತ್ತು ಪ್ರತಿದಿನದ ಕಷ್ಟಗಳು! ಇಂದು ನಮ್ಮೊಂದಿಗೆ ಇರುವಂಥಹ ಮತ್ತು ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿರುವ ಮಕ್ಕಳ ನೋವು ಪದಗಳಿಗೆ ನಿಲುಕದ್ದು. ನಮ್ಮಿಂದ ದೂರಾದವರ ಕೆಲವು ನೆನಪುಗಳು ಮಾತ್ರ ನಮಗೆ ಉಳಿದಿವೆ. ಆದರೆ ಬದುಕುಳಿದವರು ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಇಂತಹ ಸವಾಲಿನ ಸಮಯದಲ್ಲಿ, ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ  ಅಂತಹ ಮಕ್ಕಳ ತೊಂದರೆಗಳನ್ನು ಕಡಿಮೆ ಮಾಡುವ ಒಂದು ಸಣ್ಣ ಪ್ರಯತ್ನವೇ ʻಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ʼ ಯೋಜನೆ.

ಸ್ನೇಹಿತರೇ, 
ʻಪಿಎಂ ಕೇರ್ಸ್‌ʼ ಯೋಜನೆಯು ಪ್ರತಿಯೊಬ್ಬ ದೇಶವಾಸಿಯೂ ಅತ್ಯಂತ ಸಂವೇದನಾಶೀಲತೆಯಿಂದ ನಿಮ್ಮೊಂದಿಗೆ ಇದ್ದಾರೆ ಎಂಬ ಅಂಶದ ಪ್ರತಿಬಿಂಬವಾಗಿದೆ. ಮಕ್ಕಳ ಸೂಕ್ತ ಮತ್ತು ಅಡೆತಡೆಯಿಲ್ಲದ ಶಿಕ್ಷಣಕ್ಕಾಗಿ ಅವರ ಮನೆಗಳ ಹತ್ತಿರದ ಸರಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ ಅವರಿಗೆ ಪ್ರವೇಶ ದೊರಕಿಸಿರುವುದು ನನಗೆ ತೃಪ್ತಿ ತಂದಿದೆ. ಅಂತಹ ಮಕ್ಕಳ ಪುಸ್ತಕಗಳು ಮತ್ತು ಸಮವಸ್ತ್ರಗಳ ವೆಚ್ಚವನ್ನು ʻಪಿಎಂ ಕೇರ್ಸ್ʼ ಮೂಲಕ ಭರಿಸಲಾಗುವುದು. ಯಾರಿಗಾದರೂ ವೃತ್ತಿಪರ ಕೋರ್ಸ್‌ಗಳಿಗೆ ಅಥವಾ ಉನ್ನತ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲದ ಅಗತ್ಯವಿದ್ದರೆ, ʻಪಿಎಂ ಕೇರ್ಸ್ʼ ಅದಕ್ಕೂ ಸಹಾಯ ಮಾಡುತ್ತದೆ. ಇತರ ಯೋಜನೆಗಳ ಮೂಲಕ ಮಕ್ಕಳ ಇತರ ದೈನಂದಿನ ಅಗತ್ಯಗಳಿಗಾಗಿ ಮಾಸಿಕ 4,000 ರೂ.ಗಳ ಸ್ಟೈಪೆಂಡ್‌ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. 

ಸ್ನೇಹಿತರೇ, 
ಅಂತಹ ಮಕ್ಕಳು ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದಾಗ, ಭವಿಷ್ಯದ ಕನಸುಗಳಿಗೆ ಹೆಚ್ಚಿನ ಹಣದ ಅಗತ್ಯವಿರುತ್ತದೆ. ಇದಕ್ಕಾಗಿ, 18 ರಿಂದ 23 ವರ್ಷದ ಯುವಕರಿಗೆ ಪ್ರತಿ ತಿಂಗಳು ಸ್ಟೈಫಂಡ್ ನೀಡಲಾಗುತ್ತದೆ. ಮತ್ತು ನೀವು 23 ವರ್ಷಗಳನ್ನು ಪೂರೈಸಿದಾಗ, ನೀವು 10 ಲಕ್ಷ ರೂಪಾಯಿಗಳನ್ನು ಸಹ ಪಡೆಯುತ್ತೀರಿ. 

ಸ್ನೇಹಿತರೇ, 
ಮತ್ತೊಂದು ಪ್ರಮುಖ ವಿಷಯವೆಂದರೆ, ಅದು ಆರೋಗ್ಯಕ್ಕೆ ಸಂಬಂಧಿಸಿದ್ದು. ಯಾವುದೇ ರೋಗದ ಚಿಕಿತ್ಸೆಗೆ ಹಣದ ಅಗತ್ಯವಿರುತ್ತದೆ. ಆದರೆ, ಯಾವುದೇ ಮಗು ಅಥವಾ ಆತನ/ಕೆಯ ಪೋಷಕರು ಈ ವಿಚಾರದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ʻಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ʼ ಮೂಲಕ ʻಆಯುಷ್ಮಾನ್ ಹೆಲ್ತ್ ಕಾರ್ಡ್ʼ ಅನ್ನು ಸಹ ನಿಮಗೆ ನೀಡಲಾಗುತ್ತಿದೆ. ಈ ಕಾರ್ಡ್‌ನೊಂದಿಗೆ, ನೀವು 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ಸಹ ಪಡೆಯುತ್ತೀರಿ. 
ಸ್ನೇಹಿತರೇ, 
ಈ ಎಲ್ಲಾ ಪ್ರಯತ್ನಗಳ ನಡುವೆ, ಕೆಲವೊಮ್ಮೆ ಮಕ್ಕಳಿಗೆ ಭಾವನಾತ್ಮಕ ಬೆಂಬಲ ಮತ್ತು ಮಾನಸಿಕ ಮಾರ್ಗದರ್ಶನವೂ ಬೇಕಾಗಬಹುದು ಎಂಬುದನ್ನು ನಾವು ಅರಿತುಕೊಳ್ಳುತ್ತೇವೆ. ಕುಟುಂಬದಲ್ಲಿ ಹಿರಿಯರಿದ್ದರೂ ಸಹ, ಸರಕಾರವು ಈ ನಿಟ್ಟಿನಲ್ಲೂ ಪ್ರಯತ್ನವನ್ನು ಮಾಡಿದೆ. ಈ ನಿಟ್ಟಿನಲ್ಲಿ ವಿಶೇಷ 'ಸಂವಾದ್' ಸೇವೆಯನ್ನು ಸಹ ಪ್ರಾರಂಭಿಸಲಾಗಿದೆ. 'ಸಂವಾದ ಸಹಾಯವಾಣಿ'ಯಲ್ಲಿ ಮಕ್ಕಳು ಮಾನಸಿಕ ವಿಷಯಗಳ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಿ ಚರ್ಚಿಸಬಹುದು. 

ಸ್ನೇಹಿತರೇ, 
ಕರೋನಾ ಜಾಗತಿಕ ಸಾಂಕ್ರಾಮಿಕದ ತೀವ್ರತೆಯನ್ನು ಇಡೀ ಮನುಕುಲವು ಅನುಭವಿಸಿದೆ. ಈ ಶತಮಾನದ ಈ ಮಹಾನ್ ದುರಂತವು ಪ್ರಪಂಚದ ಯಾವ ಭಾಗವನ್ನೂ ಬಿಡದೆ ಎಲ್ಲೆಡೆ ಶಾಶ್ವತ ಗಾಯಗಳನ್ನು ಉಂಟು ಮಾಡಿದೆ! ಈ ಬಿಕ್ಕಟ್ಟನ್ನು ನೀವು ಧೈರ್ಯದಿಂದ ಎದುರಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ನಮಸ್ಕರಿಸುತ್ತೇನೆ. ನಿಮ್ಮ ಬಗ್ಗೆ ರಾಷ್ಟ್ರದ ಸಹಾನುಭೂತಿ, ಬೆಂಬಲ ಇದೆ. ಇದೇ ವೇಳೆ,  ನಿಮ್ಮ ಕನಸುಗಳನ್ನು ಈಡೇರಿಸಲು ಇಡೀ ರಾಷ್ಟ್ರವು ನಿಮ್ಮೊಂದಿಗೆ ಇದೆ. ನಾನು ಹೇಳಲು ಬಯಸುವು ಇನ್ನೊಂದು ವಿಷಯವೆಂದರೆ, ನಾವು ಎಷ್ಟೇ ಪ್ರಯತ್ನ ಅಥವಾ ಸಹಾಯ ಮಾಡಿದರೂ ಅದು  ನಿಮ್ಮ ಹೆತ್ತವರ ವಾತ್ಸಲ್ಯಕ್ಕೆ ಸಮನಾಗಿರಲು ಸಾಧ್ಯವಿಲ್ಲ. ಆದರೆ, ನಿಮ್ಮ ತಂದೆ ಮತ್ತು ತಾಯಿಯ ಅನುಪಸ್ಥಿತಿಯಲ್ಲಿ, ಈ ಬಿಕ್ಕಟ್ಟಿನ ಸಮಯದಲ್ಲಿ ಭಾರತ ಮಾತೆ ನಿಮ್ಮೆಲ್ಲರೊಂದಿಗೆ ಇದ್ದಾರೆ. ʻಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ʼ ಮೂಲಕ ದೇಶವು ಈ ಜವಾಬ್ದಾರಿಯನ್ನು ನಿರ್ವಹಿಸಲು ಪ್ರಯತ್ನಿಸುತ್ತಿದೆ. ಮತ್ತು, ಈ ಪ್ರಯತ್ನಗಳು ಕೇವಲ ಯಾವುದೇ ಒಬ್ಬ ವ್ಯಕ್ತಿ, ಸಂಸ್ಥೆ ಅಥವಾ ಸರ್ಕಾರದ ಪ್ರಯತ್ನಗಳಲ್ಲ. ನಮ್ಮ ಕೋಟ್ಯಂತರ ದೇಶವಾಸಿಗಳು ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ʻಪಿಎಂ ಕೇರ್ಸ್ʼನಲ್ಲಿ ಹಾಕಿದ್ದಾರೆ. ಸೇವೆ ಮತ್ತು ತ್ಯಾಗದ ಉದಾಹರಣೆಗಳನ್ನು ನೀವು ಸ್ಮರಿಸಬಹುದು! ಯಾರೋ ಒಬ್ಬರು ತಮ್ಮ ಇಡೀ ಜೀವನದ ಸಂಪಾದನೆಯನ್ನು ದಾನ ಮಾಡಿದರೆ, ಇನ್ನೊಬ್ಬರು ತಮ್ಮ ಸಂಪೂರ್ಣ ಉಳಿತಾಯವನ್ನು, ಅವರ ಕನಸುಗಳಿಗಾಗಿ ಮೀಸಲಿಟ್ಟ ಹಣವನ್ನು ಈ ನಿಧಿಯಲ್ಲಿ ತೊಡಗಿಸಿದರು. ಈ ನಿಧಿಯು ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲು, ವೆಂಟಿಲೇಟರ್‌ಗಳನ್ನು ಖರೀದಿಸಲು ಮತ್ತು ಕೊರೊನಾ ಅವಧಿಯಲ್ಲಿ ಆಮ್ಲಜನಕ ಘಟಕಗಳನ್ನು ಸ್ಥಾಪಿಸಲು ಸಾಕಷ್ಟು ಸಹಾಯ ಮಾಡಿತು. ಇದು ಅನೇಕ ಜೀವಗಳನ್ನು ಮತ್ತು ಅನೇಕ ಕುಟುಂಬಗಳ ಭವಿಷ್ಯವನ್ನು ಉಳಿಸಲು ಸಹಾಯ ಮಾಡಿತು. ಇಂದು ಈ ನಿಧಿಯನ್ನು ನಮ್ಮನ್ನು ಅಕಾಲಿಕವಾಗಿ ಅಗಲಿದ ಪೋಷಕರ ಎಲ್ಲರ ಮಕ್ಕಳಿಗಾಗಿ, ನಿಮ್ಮೆಲ್ಲರ ಭವಿಷ್ಯಕ್ಕಾಗಿ ಬಳಸಲಾಗುತ್ತಿದೆ. 

ಸ್ನೇಹಿತರೇ, 
ನಿಮ್ಮ ಜೀವನದಲ್ಲಿ ಒಂದು ಸುದೀರ್ಘ ಪ್ರಯಾಣವಿದೆ. ನೀವೆಲ್ಲರೂ ಜೀವನದಲ್ಲಿ ಈ ಪರಿಸ್ಥಿತಿಯನ್ನು ಬಹಳ ಧೈರ್ಯದಿಂದ ಎದುರಿಸುತ್ತಿದ್ದೀರಿ. ನಮ್ಮ ದೇಶದ ಅಥವಾ ಪ್ರಪಂಚದ ಎಲ್ಲಾ ಮಹಾನ್ ಜನರು ತಮ್ಮ ಜೀವನದ ಒಂದು ಹಂತದಲ್ಲಿ ಕಷ್ಟಗಳನ್ನು ಎದುರಿಸಿದ್ದಾರೆ. ಆದರೆ ಅವರು ಕೈ ಚೆಲ್ಲಲಿಲ್ಲ, ಹಾಗಾಗಿ ಯಶಸ್ಸಿನ ಉತ್ತುಂಗವನ್ನು ತಲುಪಿದರು. ಅವರು ಎಂದಿಗೂ ಸೋಲನ್ನು ಹತಾಶೆಯಾಗಿ ಬದಲಾಗಲು ಬಿಡಲಿಲ್ಲ. ವಿಜಯದ ಈ ಮಂತ್ರವು ನಿಮ್ಮ ಜೀವನದಲ್ಲಿ ನಿಮಗೆ ಸಾಕಷ್ಟು ಮಾರ್ಗದರ್ಶನ ನೀಡುತ್ತದೆ ಮತ್ತು ಸಹಾಯ ಮಾಡುತ್ತದೆ. ಹಾಗಾಗಿ  ನೀವು ಈ ವಿಷಯವನ್ನು ಎಂದಿಗೂ ಮರೆಯಬಾರದು. ಒಳ್ಳೆಯದು ಮತ್ತು ಕೆಟ್ಟದ್ದು, ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಹೇಳಲು ಈಗ ನಿಮ್ಮ ಪಾಲಿಗೆ ಇರುವುದು ಕುಟುಂಬ ಮತ್ತು ಶಿಕ್ಷಕರನ್ನು ಮಾತ್ರ. ಈ ವಿಷಯವನ್ನೂ ನೀವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಆದ್ದರಿಂದ, ಅವರ ಮಾತುಗಳನ್ನು ಆಲಿಸುವುದು ಮತ್ತು ಅವರನ್ನು ಅನುಸರಿಸುವುದು ನಿಮ್ಮ ಜವಾಬ್ದಾರಿಯಾಗಿದೆ. ಅಂತಹ ಬಿಕ್ಕಟ್ಟಿನ ಸಮಯದಲ್ಲಿ ಉತ್ತಮ ಪುಸ್ತಕಗಳು ನಿಮ್ಮ ವಿಶ್ವಾಸಾರ್ಹ ಸ್ನೇಹಿತರಾಗಬಹುದು. ಉತ್ತಮ ಪುಸ್ತಕಗಳು ಮನರಂಜನೆ ಮಾತ್ರವಲ್ಲದೆ ನಿಮಗೆ ಮಾರ್ಗದರ್ಶನ ನೀಡುತ್ತವೆ. ನಾನು ನಿಮಗೆ ಇನ್ನೂ ಒಂದು ಸಲಹೆಯನ್ನು ನೀಡುತ್ತೇನೆ. 

ಸ್ನೇಹಿತರೇ, 
ಅನಾರೋಗ್ಯ ಬಂದಾಗ ಚಿಕಿತ್ಸೆಯ ಅಗತ್ಯವಿರುತ್ತದೆ. ಆದರೆ ಜೀವನವು ಆರೋಗ್ಯಕ್ಕೆ ಸಂಬಂಧಿಸಿದ್ದಾಗಿರಬೇಕೇ ಹೊರತು ಚಿಕಿತ್ಸೆಯ ಕುರಿತದ್ದಲ್ಲ. ಇಂದು ದೇಶದಲ್ಲಿ ಮಕ್ಕಳಿಗಾಗಿ ʻಫಿಟ್ ಇಂಡಿಯಾʼ ಮತ್ತು ʻಖೇಲೋ ಇಂಡಿಯಾʼ ಅಭಿಯಾನಗಳು ನಡೆಯುತ್ತಿವೆ. ನೀವು ಈ ಎಲ್ಲಾ ಅಭಿಯಾನಗಳನ್ನು ಸೇರಬೇಕು ಮತ್ತು ಮುನ್ನಡೆಸಬೇಕು. ಕೆಲವು ದಿನಗಳ ನಂತರ ʻಯೋಗ ದಿನʼವನ್ನು ಸಹ ಆಚರಿಸಲಾಗುತ್ತದೆ. ನಿಮ್ಮ ಅಧ್ಯಯನದ ಜೊತೆಗೆ ಯೋಗವು ನಿಮ್ಮ ಜೀವನದ ಒಂದು ಭಾಗವಾಗಿರಬೇಕು ಎಂಬುದು ಬಹಳ ಮುಖ್ಯ. 

ಸ್ನೇಹಿತರೇ, 
ಹತಾಶೆಯ ವಾತಾವರಣದ ನಡುವೆಯೂ ನಾವು ನಮ್ಮನ್ನು ನಂಬಿದರೆ, ಬೆಳಕಿನ ಕಿರಣವು ಖಂಡಿತವಾಗಿಯೂ ಗೋಚರಿಸುತ್ತದೆ. ನಮ್ಮ ದೇಶವೇ ಇದಕ್ಕೆ ದೊಡ್ಡ ಉದಾಹರಣೆಯಾಗಿದೆ. ನಾವು ಪ್ರಸ್ತುತ ನಮ್ಮ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ನೂರಾರು ವರ್ಷಗಳ ಗುಲಾಮಗಿರಿಯಲ್ಲಿ, ಸ್ವಾತಂತ್ರ್ಯಕ್ಕಾಗಿ ನಮ್ಮ ಸುದೀರ್ಘ ಹೋರಾಟದಲ್ಲಿ ನಮ್ಮ ದೊಡ್ಡ ಶಕ್ತಿ ಯಾವುದು? ಎಂದಿಗೂ ಛಲ ಬಿಡದ ನಮ್ಮ ಗುಣವೇ ನಮ್ಮ ಶಕ್ತಿಯಾಗಿತ್ತು! ನಮ್ಮ ಪಟ್ಟಭದ್ರ ಹಿತಾಸಕ್ತಿಗಳನ್ನು ಮೀರಿ, ದೇಶ ಮತ್ತು ಮಾನವೀಯತೆಗಾಗಿ ಯೋಚಿಸುವ ಮತ್ತು ಬದುಕುವ ನಮ್ಮ ಮೌಲ್ಯಗಳು ನಮ್ಮ ಶಕ್ತಿಯಾಗಿತ್ತು! ಪ್ರಸ್ತುತ ನಡೆಯುತ್ತಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ನಾವು ಈ ಸ್ಫೂರ್ತಿಯೊಂದಿಗೆ ಮುಂದುವರಿಯುತ್ತಿದ್ದೇವೆ. ಈ ಮನೋಭಾವವು ಕರೋನಾ ವಿರುದ್ಧದ ಅಂತಹ ದೊಡ್ಡ ಹೋರಾಟದಲ್ಲಿ ದೇಶಕ್ಕೆ ಸಹಾಯ ಮಾಡಿದೆ ಮತ್ತು ವಿಶ್ವಕ್ಕೇ ಮಾದರಿ ಎನಿಸಿದೆ. ಎರಡೂವರೆ ವರ್ಷಗಳ ಹಿಂದೆ ಕೊರೊನಾ ವೈರಸ್ ಬಗ್ಗೆ ವಿಶ್ವದ ಯಾರಿಗೂ ಸರಿಯಾಗಿ ತಿಳಿದಿರಲಿಲ್ಲ. ಪ್ರತಿಯೊಬ್ಬರೂ ವಿಶ್ವದ ಪ್ರಮುಖ ದೇಶಗಳತ್ತ ಎದುರು ನೋಡುತ್ತಿದ್ದರು. ಭಾರತದ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಲು ಯಾರೂ ಸಿದ್ಧರಿರಲಿಲ್ಲ. ಬದಲಾಗಿ, ಅಂತಹ ಸಂದರ್ಭಗಳಲ್ಲಿ ವಿನಾಶದ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಜನರು ಭಾರತವನ್ನು ಬಹಳ ಆತಂಕದಿಂದ ನೋಡುತ್ತಿದ್ದರು. ಆದರೆ ನಕಾರಾತ್ಮಕ ವಾತಾವರಣದ ನಡುವೆಯೂ ಭಾರತವು ತನ್ನ ಶಕ್ತಿಯ ಮೇಲೆ ಅವಲಂಬಿತವಾಗಿತ್ತು.  ನಾವು ನಮ್ಮ ವಿಜ್ಞಾನಿಗಳು, ವೈದ್ಯರು ಮತ್ತು ಯುವಕರನ್ನು ನಂಬಿದ್ದೇವೆ. ನಾವು ಭರವಸೆಯ ಕಿರಣವಾಗಿ ಹೊರಹೊಮ್ಮಿದೆವೇ ಹೊರತು ಹೊರತು ಪ್ರಪಂಚಕ್ಕೆ ಒಂದು ಕಳವಳವಾಗಿ ಉಳಿಯಲಿಲ್ಲ. ನಾವು ಸಮಸ್ಯೆಯಾಗಲಿಲ್ಲ, ಬದಲಿಗೆ ನಾವು ಪರಿಹಾರಗಳನ್ನು ಒದಗಿಸಿದೆವು. ನಾವು ವಿಶ್ವದಾದ್ಯಂತದ ದೇಶಗಳಿಗೆ ಔಷಧಗಳು ಮತ್ತು ಲಸಿಕೆಗಳನ್ನು ಕಳುಹಿಸಿದ್ದೇವೆ. ಇಷ್ಟು ದೊಡ್ಡ ದೇಶದಲ್ಲಿಯೂ ನಾವು ಪ್ರತಿಯೊಬ್ಬ ನಾಗರಿಕನಿಗೂ ಲಸಿಕೆಗಳನ್ನು ಒದಗಿಸಿದ್ದೇವೆ. ಇಂದು, ದೇಶದಲ್ಲಿ ಸುಮಾರು 200 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಈ ವಿಪತ್ತಿನ ನಡುವೆ, ನಾವು 'ಆತ್ಮನಿರ್ಭರ ಭಾರತ'ದ ಸಂಕಲ್ಪವನ್ನು ಸಹ ಪ್ರಾರಂಭಿಸಿದ್ದೇವೆ. ಇಂದು ಈ ಸಂಕಲ್ಪವು ತ್ವರಿತ ಗತಿಯಲ್ಲಿ  ಸಾಕಾರತೆಯತ್ತ ಸಾಗುತ್ತಿದೆ. ಇಂದು ನಾವು ಕರೋನದ ದುಷ್ಪರಿಣಾಮಗಳಿಂದ ಹೊರಬಂದ ನಂತರ, ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಆರ್ಥಿಕತೆಗಳಲ್ಲಿ ಒಂದೆನಿಸಿದ್ದೇವೆ. ಜಗತ್ತು ಇಂದು ನಮ್ಮನ್ನು ಹೊಸ ಭರವಸೆ ಮತ್ತು ವಿಶ್ವಾಸದಿಂದ ನೋಡುತ್ತಿದೆ. 

ಸ್ನೇಹಿತರೇ, 
ನಮ್ಮ ಸರಕಾರ ತನ್ನ ಎಂಟು ವರ್ಷಗಳನ್ನು ಪೂರೈಸುತ್ತಿರುವ ಈ ಸಮಯದಲ್ಲಿ, ದೇಶ ಮತ್ತು ದೇಶವಾಸಿಗಳು ತಮ್ಮ ಮೇಲೆ ಹೊಂದಿರುವ ವಿಶ್ವಾಸವೂ ಅಭೂತಪೂರ್ವವಾಗಿದೆ. ಭ್ರಷ್ಟಾಚಾರ, ಸಾವಿರಾರು ಕೋಟಿ ರೂ.ಗಳ ಹಗರಣಗಳು, ಸ್ವಜನ ಪಕ್ಷಪಾತ, ದೇಶಾದ್ಯಂತ ಹರಡುತ್ತಿರುವ ಭಯೋತ್ಪಾದಕ ಸಂಘಟನೆಗಳು ಮತ್ತು 2014ಕ್ಕಿಂತ ಮೊದಲು ಪ್ರಾದೇಶಿಕ ತಾರತಮ್ಯದ ವಿಷವರ್ತುಲದಲ್ಲಿ ಸಿಲುಕಿದ್ದ ದೇಶವು ಈಗ ಅದರಿಂದ ಮುಕ್ತವಾಗಿ ಹೊರಹೊಮ್ಮುತ್ತಿದೆ. ಕಠಿಣ ದಿನಗಳು ಸಹ ಶಾಶ್ವತವಲ್ಲ, ಅವು ಹಾದು ಹೋಗುತ್ತವೆ ಎಂವಬುದಕ್ಕೆ ಎಲ್ಲಾ ಮಕ್ಕಳಿಗೂ ಇದು ಒಂದು ಉದಾಹರಣೆಯಾಗಿದೆ. 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್‌ʼ; ʻಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್' ಎಂಬ ಮಂತ್ರವನ್ನು ಅನುಸರಿಸಿ ಭಾರತವು ಈಗ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ʻಸ್ವಚ್ಛ ಭಾರತ ಮಿಷನ್ʼ, ʻಜನ್ ಧನ್ ಯೋಜನೆʼ, ʻಉಜ್ವಲ ಯೋಜನೆʼ ಅಥವಾ ʻಹರ್ ಘರ್ ಜಲ ಅಭಿಯಾನʼ ಹೀಗೆ ಹಲವು ಉಪಕ್ರಮಗಳ ಮೂಲಕ ಕಳೆದ ಎಂಟು ವರ್ಷಗಳನ್ನು ಬಡವರ ಸೇವೆ ಮತ್ತು ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ. ಒಂದು ಕುಟುಂಬದ ಸದಸ್ಯನಾಗಿ, ನಾವು ಬಡವರ ಸಮಸ್ಯೆಗಳನ್ನು ನಿವಾರಿಸಲು ಮತ್ತು ಅವರ ಜೀವನವನ್ನು ಸುಲಭಗೊಳಿಸಲು ಪ್ರಯತ್ನಿಸಿದ್ದೇವೆ. ದೇಶವಾಸಿಗಳಿಗೆ ಕ್ರಿಯಾತ್ಮಕವಾಗಿ ಏನೆಲ್ಲಾ ಮಾಡಬಹುದೆಂಬ ವಿಚಾರದಲ್ಲಿ ಎಲ್ಲಾ ಗರಿಷ್ಠ ಪ್ರಯತ್ನಗಳನ್ನು ಮಾಡಲಾಗಿದೆ. ಹಿಂದಿನ ಸರಕಾರಗಳು ತಂತ್ರಜ್ಞಾನವನ್ನು ಬಳಸುವಲ್ಲಿ ಹಿಂಜರಿಕೆ ಹೊಂದಿದ್ದವು. ಮತ್ತು ಜನರು ಸಹ ಅದನ್ನು ಬಳಸುತ್ತಿರಲಿಲ್ಲ. ಆದರೆ, ನಮ್ಮ ಸರಕಾರವು ಅದೇ ತಂತ್ರಜ್ಞಾನವನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಬಡವರ ಹಕ್ಕುಗಳನ್ನು ಖಾತರಿಪಡಿಸಿದೆ. ಈಗ ಕಡುಬಡವರು ಸರಕಾರದ ಯೋಜನೆಗಳ ಲಾಭವನ್ನು ಪಡೆಯುವುದನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸವಿದೆ. ನಮ್ಮ ಸರಕಾರವು ಈಗ ಈ ವಿಶ್ವಾಸವನ್ನು ಮೂಡಿಸಲು 100 ಪ್ರತಿಶತದಷ್ಟು ಸಬಲೀಕರಣದ ಅಭಿಯಾನವನ್ನು ನಡೆಸುತ್ತಿದೆ. ಯಾವುದೇ ಬಡವರನ್ನು ಸರಕಾಋದ ಯೋಜನೆಗಳ ಪ್ರಯೋಜನಗಳಿಂದ ಹೊರಗಿಡಬಾರದು ಮತ್ತು ಪ್ರತಿಯೊಬ್ಬ ಬಡವರು ತಮ್ಮ ಹಕ್ಕುಗಳನ್ನು ಪಡೆಯಬೇಕು ಎಂಬುದು ನಮ್ಮ ಸರಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ.

ಕಳೆದ ಎಂಟು ವರ್ಷಗಳಲ್ಲಿ ಭಾರತವು ಸಾಧಿಸಿದ ಘನತೆಯನ್ನು ಯಾರೂ ಮೊದಲೇ ಊಹಿಸಲು ಸಾಧ್ಯವಾಗಿರಲಿಲ್ಲ. ಇಂದು, ವಿಶ್ವದಲ್ಲಿ ಭಾರತದ ಗೌರವ ಸುಧಾರಿಸಿದೆ ಮತ್ತು ಜಾಗತಿಕ ವೇದಿಕೆಗಳಲ್ಲಿ ಅದರ ಶಕ್ತಿ ಹೆಚ್ಚಾಗಿದೆ. ಜೊತೆಗೆ ಯುವ ಶಕ್ತಿಯು ಭಾರತದ ಈ ಪ್ರಯಾಣವನ್ನು ಮುನ್ನಡೆಸುತ್ತಿರುವ ವಿಚಾರ ನನಗೆ ಸಂತಸ ಮೂಡಿಸಿದೆ. ನೀವೆಲ್ಲರೂ, ನಮ್ಮ ಮಕ್ಕಳು ಮತ್ತು ಯುವಕರು, ಈ ಧೈರ್ಯ ಮತ್ತು ಮಾನವೀಯ ಸಂವೇದನೆಯಿಂದ ದೇಶ ಮತ್ತು ಜಗತ್ತಿಗೆ ದಾರಿ ತೋರುತ್ತೀರಿ ಎಂಬ ಖಾತರಿ ನನಗಿದೆ. ಇದೇ ಸಂಕಲ್ಪದೊಂದಿಗೆ ಮುಂದುವರಿಯಿರಿ, ಸಂಕಲ್ಪಕ್ಕೆ ಜೀವನವನ್ನು ಸಮರ್ಪಿಸಲು ಸಿದ್ಧರಾಗಿರಿ ಮತ್ತು ನಿಮ್ಮ ಕನಸುಗಳು ಖಂಡಿತವಾಗಿಯೂ ನನಸಾಗುತ್ತವೆ. ನೀವು ಎಲ್ಲಿಗೆ ತಲುಪಲು ಬಯಸುತ್ತೀರೋ ಅಲ್ಲಿಗೆ ತಲುಪುವಿರಿ, ಪ್ರಪಂಚದ ಯಾವುದೇ ಶಕ್ತಿಯು ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ನಿಮ್ಮಲ್ಲಿ ಉತ್ಸಾಹ, ದೃಢನಿಶ್ಚಯ ಮತ್ತು ನಿರ್ಣಯವನ್ನು ಪೂರೈಸುವ ಸಾಮರ್ಥ್ಯವಿದ್ದರೆ, ನೀವು ಎಂದಿಗೂ ನಿಲ್ಲಬೇಕಾದ ಅಗತ್ಯವಿಲ್ಲ. ನಾನು ಆರಂಭದಲ್ಲಿ ಹೇಳಿದಂತೆ, ನಾನು ನಿಮ್ಮೊಂದಿಗೆ ನಿಮ್ಮ ಕುಟುಂಬದ ಒಬ್ಬ ಸದಸ್ಯನಾಗಿ ಮಾತನಾಡುತ್ತಿದ್ದೇನೆ. ಇಂದು, ನಾನು ನಿಮ್ಮನ್ನು ಕುಟುಂಬದ ಸದಸ್ಯನಾಗಿ ಆಶೀರ್ವದಿಸಲು ಬಯಸುತ್ತೇನೆ. ಆಶೀರ್ವಾದಗಳನ್ನು ನೀಡಲು ನನಗೆ ಹಕ್ಕಿದೆಯೇ ಅಥವಾ ಇಲ್ಲವೇ ಎಂದು ನನಗೆ ಗೊತ್ತಿಲ್ಲ, ಆದರೆ ನಿಮ್ಮಲ್ಲಿರುವ ಸಾಮರ್ಥ್ಯವನ್ನು ನಾನು ನೋಡಬಲ್ಲೆ. ಹಾಗಾಗಿ, ಅದೇ ಭರವಸೆಯ ಮೇಲೆ ನಾನು ಆಶೀರ್ವದಿಸುತ್ತಿದ್ದೇನೆ. ನೀವು ಪ್ರಯಾಣ ಸುದೀರ್ಘ ಮತ್ತು ಎತ್ತರೆತ್ತರಕ್ಕೆ ಸಾಗಲಿ, ನಿಮಗೆ ಶುಭವಾಗಲಿ. ಧನ್ಯವಾದಗಳು! 
  
ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು

***



(Release ID: 1829778) Visitor Counter : 173