ಪ್ರಧಾನ ಮಂತ್ರಿಯವರ ಕಛೇರಿ

ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಸಮುದಾಯ ಸ್ವಾಗತ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ

Posted On: 02 MAY 2022 11:59PM by PIB Bengaluru

ಭಾರತ್‌ ಮಾತಾ ಕೀ ಜೈ! ನಮಸ್ಕಾರ!

ಇಂದು ಜರ್ಮನಿಯಲ್ಲಿ ಭಾರತ ಮಾತೆಯ ಮಕ್ಕಳನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಸೌಭಾಗ್ಯ. ನಿಮ್ಮನ್ನು ಭೇಟಿಯಾಗಲು ತುಂಬಾ ಸಂತೋಷವಾಗುತ್ತದೆ. ನಿಮ್ಮಲ್ಲಿ ಅನೇಕರು ಇಂದು ಜರ್ಮನಿಯ ವಿವಿಧ ನಗರಗಳಿಂದ ಬರ್ಲಿನ್‌ಗೆ ಬಂದಿದ್ದೀರಿ. ಮುಂಜಾನೆ 4.30 ಕ್ಕೆ ಚಳಿಯಲ್ಲಿ ಅನೇಕ ಸಣ್ಣ ಮಕ್ಕಳು ಹೊರಗೆ ಹೋಗುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು.  ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳು ನನ್ನ ದೊಡ್ಡ ಶಕ್ತಿ. ನಾನು ಈ ಹಿಂದೆ ಜರ್ಮನಿಗೆ ಭೇಟಿ ನೀಡಿದ್ದಾಗ ನಿಮ್ಮಲ್ಲಿ ಅನೇಕರನ್ನು ಭೇಟಿಯಾಗಿದ್ದೇನೆ. ನಿಮ್ಮ ಭಾರತ ಭೇಟಿಯ ಸಮಯದಲ್ಲಿ ನಿಮ್ಮಲ್ಲಿ ಕೆಲವರನ್ನು ಭೇಟಿಯಾಗುವ ಅವಕಾಶವೂ ನನಗೆ ಸಿಕ್ಕಿತು. ಯುವ ಪೀಳಿಗೆಯ ಹೆಚ್ಚಿನ ಸಂಖ್ಯೆಯ ಜನರು ತುಂಬಾ ಉತ್ಸಾಹಿಗಳಾಗಿರುವುದನ್ನು ನಾನು ನೋಡಬಲ್ಲೆ. ನೀವು ಇಲ್ಲಿಗೆ ಬರಲು ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ಸಮಯವನ್ನು ತೆಗೆದುಕೊಂಡಿದ್ದಕ್ಕಾಗಿ ನಾನು ನಿಮಗೆ ನನ್ನ ಹೃದಯದಿಂದ ತುಂಬಾ ಆಭಾರಿಯಾಗಿದ್ದೇನೆ. ನಮ್ಮ ರಾಯಭಾರಿ ಜರ್ಮನಿಯಲ್ಲಿ ಭಾರತೀಯರ ಸಂಖ್ಯೆ ಕಡಿಮೆ ಇದೆ ಎಂದು ಹೇಳುತ್ತಿದ್ದರು. ಆದರೆ ನಿಮ್ಮ ಪ್ರೀತಿ ಮತ್ತು ಉತ್ಸಾಹಕ್ಕೆ ಯಾವುದೇ ಕೊರತೆಯಿಲ್ಲ ಮತ್ತು ಭಾರತದ ಜನರು ಇದನ್ನು ನೋಡಿದಾಗ ಅವರು ಸಹ ಹೆಮ್ಮೆ ಪಡುತ್ತಾರೆ.

ಸ್ನೇಹಿತರೇ,
ಇಂದು ನಾನು ಇಲ್ಲಿಗೆ ಬಂದಿರುವುದು ನನ್ನ ಬಗ್ಗೆಯಾಗಲಿ ಅಥವಾ ನರೇಂದ್ರ ಮೋದಿ ಸರ್ಕಾರದ ಬಗ್ಗೆ ಮಾತನಾಡಲು ಅಲ್ಲ, ಆದರೆ ನಾನು ಕೋಟ್ಯಂತರ ಭಾರತೀಯರ ಸಾಮರ್ಥ್ಯ‌ಗಳ ಬಗ್ಗೆ ಮಾತನಾಡಲು ಮತ್ತು ಅವರನ್ನು ಹಾಡಿ ಹೊಗಳಲು ಬಯಸುತ್ತೇನೆ. ನಾನು ಕೋಟ್ಯಂತರ ಭಾರತೀಯರ ಬಗ್ಗೆ ಮಾತನಾಡುವಾಗ, ಅದು ಭಾರತದಲ್ಲಿ ವಾಸಿಸುವ ಜನರನ್ನು ಮಾತ್ರವಲ್ಲ, ಇಲ್ಲಿ ವಾಸಿಸುತ್ತಿರುವ ಭಾರತಿಯರನ್ನು ಸಹ ಒಳಗೊಂಡಿದೆ. ಇದು ಪ್ರಪಂಚದ ಮೂಲೆಮೂಲೆಗಳಲ್ಲಿ ವಾಸಿಸುವ ಭಾರತ ಮಾತೆಯ ಎಲ್ಲಾ ಮಕ್ಕಳ ಬಗ್ಗೆ. ಮೊದಲನೆಯದಾಗಿ, ಜರ್ಮನಿಯಲ್ಲಿ ಯಶಸ್ವಿಯಾಗಿದ್ದಕ್ಕಾಗಿ ನಾನು ಎಲ್ಲಾ ಭಾರತೀಯರನ್ನು ಅಭಿನಂದಿಸುತ್ತೇನೆ. ನಾನು ನಿಮಗೆ ಶುಭ ಹಾರೈಸುತ್ತೇನೆ.

ಸ್ನೇಹಿತರೇ,
21 ನೇ ಶತಮಾನದ ಈ ಅವಧಿಯು ಭಾರತಕ್ಕೆ ಭಾರತೀಯರಿಗೆ ಮತ್ತು ವಿಶೇಷವಾಗಿ ನಮ್ಮ ಯುವಕರಿಗೆ ಬಹಳ ಮುಖ್ಯವಾಗಿದೆ. ಇಂದು ಭಾರತವು ಮನಸ್ಸು ಮಾಡಿದೆ ಮತ್ತು ದೃಢಸಂಕಲ್ಪದೊಂದಿಗೆ ಮುಂದುವರಿಯುತ್ತಿದೆ. ಇಂದು ಭಾರತಕ್ಕೆ ತಾನು ಎಲ್ಲಿಗೆ, ಹೇಗೆ ಮತ್ತು ಎಷ್ಟು ದೂರ ಹೋಗಬೇಕೆಂದು ತಿಳಿದಿದೆ. ಮತ್ತು ಒಂದು ದೇಶಾದನ್ನು ನಿರ್ಧರಿಸಿದಾಗ, ಅದು ಹೊಸ ಮಾರ್ಗಗಳನ್ನು ಆಯ್ಕೆ ಮಾಡುತ್ತದೆ ಮತ್ತು ತನ್ನ ಗಮ್ಯವನ್ನು ಸಾಧಿಸುತ್ತದೆ ಎಂದು ನಿಮಗೆ ತಿಳಿದಿದೆ. ಇಂದಿನ ಮಹತ್ವಾಕಾಂಕ್ಷೆಯ ಭಾರತ ಮತ್ತು ಯುವಕರು ದೇಶದ ತ್ವರಿತ ಅಭಿವೃದ್ಧಿಯನ್ನು ಬಯಸುತ್ತಾರೆ. ರಾಜಕೀಯ ಸ್ಥಿರತೆ ಮತ್ತು ಬಲವಾದ ಇಚ್ಛಾಶಕ್ತಿ ಬಹಳ ಅವಶ್ಯಕ ಎಂದು ಅವರಿಗೆ ತಿಳಿದಿದೆ. ಇಂದಿನ ಭಾರತ ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದೆ. ಭಾರತದ ಜನರು ಗುಂಡಿಯನ್ನು ಒತ್ತುವ ಮೂಲಕ ಕಳೆದ ಮೂರು ದಶಕಗಳ ಅಸ್ಥಿರ ರಾಜಕೀಯ ವಾತಾವರಣವನ್ನು ಕೊನೆಗೊಳಿಸಿದರು. ಕಳೆದ ಏಳೆಂಟು ವರ್ಷಗಳಲ್ಲಿ ಭಾರತದ ಮತದಾರನು ತನ್ನ ಮತದ ಶಕ್ತಿಯನ್ನು ಮತ್ತು ಆ ಒಂದು ಮತವು ಭಾರತವನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ಅರಿತುಕೊಳ್ಳಲು ಪ್ರಾರಂಭಿಸಿದ್ದಾರೆ. ಸಕಾರಾತ್ಮಕ ಬದಲಾವಣೆ ಮತ್ತು ಕ್ಷಿಪ್ರ ಅಭಿವೃದ್ಧಿಯ ಬಯಕೆಯಿಂದಾಗಿ ಭಾರತದ ಜನರು 2014 ರಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ಆಯ್ಕೆ ಮಾಡಿದರು ಮತ್ತು ಇದು 30 ವರ್ಷಗಳ ನಂತರ ಸಂಭವಿಸಿದೆ.
ಇದು 2019 ರಲ್ಲಿ ದೇಶದ ಸರ್ಕಾರವನ್ನು ಮೊದಲಿಗಿಂತ ಹೆಚ್ಚು ಬಲಪಡಿಸಿತು ಎಂಬುದು ಭಾರತದ ಮಹಾನ್‌ ಜನರ ದೃಷ್ಟಿಕೋನವಾಗಿದೆ. ಭಾರತವನ್ನು ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆಸಲು ಅಗತ್ಯವಾದ ನಿರ್ಣಾಯಕ ಸರ್ಕಾರಕ್ಕೆ ಭಾರತದ ಜನರು ಅಧಿಕಾರವನ್ನು ಹಸ್ತಾಂತರಿಸಿದರು. ಸ್ನೇಹಿತರೇ, ನಮ್ಮೊಂದಿಗೆ, ನನ್ನೊಂದಿಗೆ ಅನೇಕ ನಿರೀಕ್ಷೆಗಳು ಅಂಟಿಕೊಂಡಿವೆ ಎಂದು ನನಗೆ ತಿಳಿದಿದೆ, ಆದರೆ ಭಾರತವು ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಮತ್ತು ಕೋಟ್ಯಂತರ ಭಾರತೀಯರ ಬೆಂಬಲ ಮತ್ತು ನಾಯಕತ್ವದಿಂದ ಹೊಸ ಎತ್ತರವನ್ನು ತಲುಪಬಹುದು ಎಂದು ನನಗೆ ತಿಳಿದಿದೆ. ಭಾರತವು ಈಗ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಪ್ರಸ್ತುತ ಅವಧಿಯ ಮಹತ್ವ, ಅದರ ಸಾಮರ್ಥ್ಯ‌ ಮತ್ತು ಈ ಅವಧಿಯಲ್ಲಿ ಏನನ್ನು ಸಾಧಿಸಬೇಕು ಎಂಬುದನ್ನು ಭಾರತವು ಅರಿತುಕೊಂಡಿದೆ.

ಸ್ನೇಹಿತರೇ,
ನಾವು ಈ ವರ್ಷ ನಮ್ಮ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿದ್ದೇವೆ. ಸ್ವತಂತ್ರ ಭಾರತದಲ್ಲಿ ಜನಿಸಿದ ದೇಶದ ಮೊದಲ ಪ್ರಧಾನಿ ನಾನು. 25 ವರ್ಷಗಳ ನಂತರ ಭಾರತವು ತನ್ನ ಸ್ವಾತಂತ್ರ್ಯದ 100 ನೇ ವರ್ಷವನ್ನು ಆಚರಿಸುವ ಆ ಸಮಯದಲ್ಲಿ ಭಾರತವು ಯಾವ ಉತ್ತುಂಗದಲ್ಲಿರುತ್ತದೆಯೋ, ಆ ಸಮಯಕ್ಕಾಗಿ ಅದು ದೃಢವಾಗಿ ಹೆಜ್ಜೆ ಹಾಕುತ್ತಿದೆ ಮತ್ತು ಆ ಗುರಿಯತ್ತ ವೇಗವಾಗಿ ಸಾಗುತ್ತಿದೆ.

ಸ್ನೇಹಿತರೇ,
ಭಾರತದಲ್ಲಿ ಎಂದಿಗೂ ಸಂಪನ್ಮೂಲಗಳ ಕೊರತೆ ಉಂಟಾಗಿಲ್ಲ. ಸ್ವಾತಂತ್ರ್ಯ ನಂತರ ದೇಶವು ಒಂದು ಮಾರ್ಗ ಮತ್ತು ದಿಕ್ಕನ್ನು ಆರಿಸಿಕೊಂಡಿತು. ಆದಾಗ್ಯೂ, ಒಂದಲ್ಲ ಒಂದು ಕಾರಣದಿಂದ ಕಾಲಾನಂತರದಲ್ಲಿ ಸಂಭವಿಸಬೇಕಾಗಿದ್ದ ಅನೇಕ ವ್ಯಾಪಕ ಮತ್ತು ಕ್ಷಿಪ್ರ ಬದಲಾವಣೆಗಳನ್ನು ಮಾಡುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಭಾರತೀಯರ ಆತ್ಮ ವಿಶ್ವಾಸ ವರ್ಷಗಳ ಕಾಲ ವಿದೇಶಿ ಆಳ್ವಿಕೆಯಲ್ಲಿ ನಜ್ಜುಗುಜ್ಜಾಯಿತು. ಭಾರತದ ಜನರಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಗೌರವವನ್ನು ತುಂಬುವುದು ಬಹಳ ಮುಖ್ಯವಾಗಿತ್ತು. ಅದಕ್ಕಾಗಿ ಸರ್ಕಾರದ ಮೇಲೆ ಜನರ ವಿಶ್ವಾಸವನ್ನು ಹೊಂದಿರುವುದು ಬಹಳ ಮುಖ್ಯವಾಗಿತ್ತು. ಬ್ರಿಟಿಷ್‌ ಪರಂಪರೆಯ ಕಾರಣದಿಂದಾಗಿ ಸರ್ಕಾರ ಮತ್ತು ಜನರ ನಡುವೆ ಭಾರಿ ನಂಬಿಕೆಯ ಅಂತರವಿತ್ತು. ಅನುಮಾನದ ಕಾರ್ಮೋಡಗಳು ದೊಡ್ಡದಿದ್ದವು. ಬ್ರಿಟಿಷ್‌ ಆಳ್ವಿಕೆಯ ನಂತರ ಅಗತ್ಯವಾದ ಬದಲಾವಣೆಗಳಲ್ಲಿ ವೇಗದ ಕೊರತೆ ಇತ್ತು. ಆದ್ದರಿಂದ, ಶ್ರೀಸಾಮಾನ್ಯರ ಜೀವನದಲ್ಲಿ ಸರ್ಕಾರ ಕಡಿಮೆ ಇರಬೇಕು. ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಇರಬೇಕು ಎಂಬುದು ಇಂದಿನ ಅಗತ್ಯವಾಗಿದೆ. ಅಗತ್ಯವಿದ್ದಲ್ಲಿ ಸರ್ಕಾರದ ಅನುಪಸ್ಥಿತಿ ಇರಬಾರದು, ಆದರೆ ಅಗತ್ಯವಿಲ್ಲದ ಕಡೆಗಳಲ್ಲಿ ಸರ್ಕಾರದ ಪ್ರಭಾವ ಇರಬಾರದು.

ಸ್ನೇಹಿತರೇ,
ದೇಶದ ಜನರೇ ಅದರ ಅಭಿವೃದ್ಧಿಯನ್ನು ಮುನ್ನಡೆಸಿದಾಗ ದೇಶವು ಪ್ರಗತಿ ಹೊಂದುತ್ತದೆ. ದೇಶದ ಜನರು ಮುಂದೆ ಬಂದು ಅದರ ದಿಕ್ಕನ್ನು ನಿರ್ಧರಿಸಿದಾಗ ದೇಶವು ಪ್ರಗತಿ ಹೊಂದುತ್ತದೆ. ಇಂದಿನ ಭಾರತದಲ್ಲಿ,  ಸರ್ಕಾರವಾಗಲಿ ಅಥವಾ ನರೇಂದ್ರ ಮೋದಿಯವರಾಗಲಿ ಅಲ್ಲ, ಕೋಟ್ಯಂತರ ಜನರೇ ಪ್ರೇರಕ ಶಕ್ತಿಯಾಗಿದ್ದಾರೆ. ಅದಕ್ಕಾಗಿಯೇ ನಾವು ದೇಶದ ಜನರ ಜೀವನದಿಂದ ಸರ್ಕಾರದ ಅನಗತ್ಯ ಹಸ್ತಕ್ಷೇಪವನ್ನು ಕೊನೆಗೊಳಿಸುತ್ತಿದ್ದೇವೆ. ಸುಧಾರಣೆಗಳ ಮೂಲಕ ನಾವು ದೇಶವನ್ನು ಪರಿವರ್ತಿಸುತ್ತಿದ್ದೇವೆ. ಸುಧಾರಣೆಗೆ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದ. ಕಾರ್ಯನಿರ್ವಹಣೆಗೆ ಸರ್ಕಾರಿ ಯಂತ್ರದ ಸ್ಥಾಪನೆಯ ಅಗತ್ಯವಿದೆ ಮತ್ತು ಪರಿವರ್ತನೆಗೆ ಸಾರ್ವಜನಿಕ ಸಹಭಾಗಿತ್ವದ ಅಗತ್ಯವಿದೆ ಎಂದು ನಾನು ಸದಾ ಹೇಳುತ್ತೇನೆ. ಆಗ ಮಾತ್ರ ಸುಧಾರಣೆ, ಕಾರ್ಯನಿರ್ವಹಣೆ ಮತ್ತು ಪರಿವರ್ತನೆಯ ವಾಹನವು ಮುಂದೆ ಚಲಿಸುತ್ತದೆ. ಇಂದು ಭಾರತವು ಸುಗಮ ಜೀವನ, ಜೀವನ ಗುಣಮಟ್ಟ, ಉದ್ಯೋಗ, ಶಿಕ್ಷಣದ ಗುಣಮಟ್ಟ, ಸುಲಭ ಚಲನಶೀಲತೆ, ಪ್ರಯಾಣದ ಗುಣಮಟ್ಟ,  ಸುಲಭ ವ್ಯಾಪಾರ, ಸೇವೆಗಳ ಗುಣಮಟ್ಟ ಮತ್ತು ಉತ್ಪನ್ನಗಳ ಗುಣಮಟ್ಟದಲ್ಲಿ ಹೊಸ ಆಯಾಮಗಳನ್ನು ಸ್ಥಾಪಿಸುತ್ತಿದೆ ಮತ್ತು ವೇಗವಾಗಿ ಕೆಲಸ ಮಾಡುತ್ತಿದೆ. ನೀವು ಹಿಂದೆ ಬಿಟ್ಟು ಇಲ್ಲಿಗೆ ಬಂದದ್ದು ಅದೇ ದೇಶ. ಅಧಿಕಾರಶಾಹಿ, ಸರ್ಕಾರಿ ಕಚೇರಿಗಳು ಮತ್ತು ಸರ್ಕಾರಿ ಯಂತ್ರಗಳು ಒಂದೇ ಆಗಿವೆ. ಆದರೆ ಈಗ ನಾವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿದ್ದೇವೆ.

ಸ್ನೇಹಿತರೇ,
2014 ಕ್ಕಿಂತ ಮೊದಲು, ನಾನು ನಿಮ್ಮಂತಹ ಸ್ನೇಹಿತರೊಂದಿಗೆ ಮಾತನಾಡುವಾಗಲೆಲ್ಲಾ ದೊಡ್ಡ ದೂರು ಇರುತ್ತಿತ್ತು. ‘ ಪ್ರಗತಿಯಲ್ಲಿರುವ ಕೆಲಸ’ ಸರ್ವವ್ಯಾಪಿಯಾಗಿದ್ದ ಆ ದಿನಗಳನ್ನು ನೀವು ನೆನಪಿಸಿಕೊಳ್ಳುತ್ತೀರಿ. ನಾನು ಯಾರನ್ನೂ ಟೀಕಿಸುತ್ತಿಲ್ಲ. ಆದರೆ  ರಸ್ತೆಯನ್ನು ನಿರ್ಮಿಸಿದ ಕೂಡಲೇ ವಿದ್ಯುತ್ ತಂತಗಳ ಅಳವಡಿಕೆಗಾಗಿ ಅದನ್ನು ಅಗೆಯುವುದು ನಮ್ಮ ದೇಶದಲ್ಲಿ ರೂಢಿಯಾಗಿತ್ತು. ಆಗ ಜಲ ಇಲಾಖೆಯ ಜನರು ನೀರಿನ ಮಾರ್ಗಗಳಿಗಾಗಿ ಅಲ್ಲಿಗೆ ಹೋಗುತ್ತಿದ್ದರು. ನಮತರ ಟೆಲಿಫೋನ್‌ ಇಲಾಖೆಯ ಸರದಿ. ಒಂದು ರಸ್ತೆಯಲ್ಲಿ ಎಷ್ಟೊಂದು ಹಣವನ್ನು ಖರ್ಚು ಮಾಡಲಾಗುತ್ತಿತ್ತು. ಆದರೆ ಕೆಲಸವು ಇನ್ನೂ ಮುಗಿದಿಲ್ಲ. ನಾನು ನಿಮಗೆ ಒಂದೇ ಒಂದು ಉದಾಹರಣೆಯನ್ನು ನೀಡಿದ್ದೇನೆ. ಏಕೆಂದರೆ ನೀವು ಈ ಎಲ್ಲ ವಿಷಯಗಳನ್ನು ನೀವೆ ಕಣ್ಣಾರೆ ನೋಡಿದ್ದೀರಿ ಹಾಗು ಅನುಭವಿಸಿದ್ದೀರಿ. ಸರ್ಕಾರಿ ಇಲಾಖೆಗಳ ನಡುವೆ ಯಾವುದೇ ಸಮನ್ವಯವಿಲ್ಲದ ಕಾರಣ ಅಥವಾ ಮಾಹಿತಿಯ ಕೊರತೆಯಿಂದ ಇದು ಸಂಭವಿಸುತ್ತದೆ. ಪ್ರತಿಯೊಬ್ಬರೂ ತಮ್ಮದೇ ಆದ ಲೋಕವನ್ನು ಸೃಷ್ಟಿಸಿಕೊಂಡಿದ್ದಾರೆ ಮತ್ತು ಅದರಲ್ಲಿ ಮುಳುಗಿದ್ದಾರೆ. ಅನೇಕ ರಸ್ತೆಗಳನ್ನು ನಿರ್ಮಿಸುವ, ಅನೇಕ ತಂತಿಗಳು ಮತ್ತು ಪೈಪ್‌ ಗಳನ್ನು ಹಾಕುವ ರಿಪೋರ್ಟ್‌ ಕಾರ್ಡ್‌ ಪ್ರತಿಯೊಬ್ಬರ ಬಳಿಯೂ ಇದೆ. ಆದರೆ ಅದರ ಫಲಿತಾಂಶವು ಮಾತ್ರ ‘ಕಾರ್ಯ ಪ್ರಗತಿಯಲ್ಲಿದೆ ’!.

ಈಗ ನಾವು ಈ  ದ್ವೀಪಗಳಂತೆ ಪ್ರತ್ಯೇಕವಾಗಿ ಕೆಲಸ ಮಾಡುವುದನ್ನು ಒಡೆಯಲು ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ ಅನ್ನು ಸಿದ್ಧಪಡಿಸಿದ್ದೇವೆ. ಇದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಪ್ರತಿಯೊಂದು ಮೂಲಸೌಕರ್ಯ ಯೋಜನೆಯಲ್ಲಿನ ಎಲ್ಲಾ ಸಹಭಾಗಿಗಳನ್ನು ಒಂದೇ ವೇದಿಕೆಯಡಿ ತಂದು ಪ್ರತಿ ಇಲಾಖೆಯ ಪ್ರತ್ಯೇಕತೆಯನ್ನು ಕೊನೆಗೊಳಿಸಿದ್ದೇವೆ. ಅಂದರೆ ಇಲಾಖೆಗಳ ನಡುವೆ ಸಮನ್ವಯತೆಯಿಂದಾಗಿ ಈಗ ಸರ್ಕಾರದ ಎಲ್ಲಾ ಇಲಾಖೆಗಳು ತಮ್ಮ ತಮ್ಮ ಕೆಲಸವನ್ನು ಮುಂಚಿತವಾಗಿ ಯೋಜಿಸುತ್ತಿವೆ. ಈ ಹೊಸ ವಿಧಾನವು ಅಭಿವೃದ್ಧಿ ಯೋಜನೆಗಳ ವೇಗ ಮತ್ತು ಪ್ರಮಾಣವನ್ನು ಹೆಚ್ಚಿಸಿದೆ.

 ಇಂದು ಭಾರತದ ಅತಿದೊಡ್ಡ ಶಕ್ತಿಯೆಂದರೆ ವ್ಯಾಪ್ತಿ, ವೇಗ ಮತ್ತು ಪ್ರಮಾಣ. ಇಂದು ಭಾರತವು ಸಾಮಾಜಿಕ ಮತ್ತು ಭೌತಿಕ ಮೂಲಸೌಕರ್ಯಗಳಲ್ಲಿ ಅಭೂತಪೂರ್ವ ಹೂಡಿಕೆಗೆ ಸಾಕ್ಷಿಯಾಗುತ್ತಿದೆ. ಹೊಸ ಶಿಕ್ಷ ಣ ನೀತಿಯನ್ನು ಜಾರಿಗೆ ತರಲು ಒಮ್ಮತದ ವಾತಾವರಣವನ್ನು ಸೃಷ್ಟಿಸಲಾಗಿದೆ. ಮತ್ತೊಂದೆಡೆ, ಹೊಸ ಆರೋಗ್ಯ ನೀತಿಯನ್ನು ಜಾರಿಗೆ ತರುವ ಕೆಲಸ ನಡೆಯುತ್ತಿದೆ. ಇಂದು ಭಾರತದಲ್ಲಿ ದಾಖಲೆಯ ಸಂಖ್ಯೆಯ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಇದು ಸಣ್ಣ ನಗರಗಳನ್ನು ವಾಯು ಮಾರ್ಗಗಳೊಂದಿಗೆ ಸಂಪರ್ಕಿಸುತ್ತದೆ. ಇಂದು ಭಾರತದಲ್ಲಿ ಮೆಟ್ರೋ ಸಂಪರ್ಕದಲ್ಲಿ ಮಾಡಲಾಗುತ್ತಿರುವ ಕೆಲಸದ ಪ್ರಮಾಣವನ್ನು ಹಿಂದೆಂದೂ ಮಾಡಲಾಗಿಲ್ಲ. ಭಾರತದಲ್ಲಿ ಇಂದು ದಾಖಲೆಯ ಸಂಖ್ಯೆಯ ಹೊಸ ಮೊಬೈಲ್‌ ಟವರ್‌ಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು 5 ಜಿ ಭಾರತದ ಬಾಗಿಲು ತಟ್ಟುತ್ತಿದೆ. ಭಾರತದಲ್ಲಿ ಇಂದು ದಾಖಲೆಯ ಸಂಖ್ಯೆಯ ಗ್ರಾಮಗಳನ್ನು ಆಪ್ಟಿಕಲ್‌ ಫೈಬರ್‌ನೊಂದಿಗೆ ಸಂಪರ್ಕಿಸಲಾಗುತ್ತಿದೆ. ಲಕ್ಷಾಂತರ ಹಳ್ಳಿಗಳು ಆಪ್ಟಿಕಲ್‌ ಫೈಬರ್‌ ಜಾಲದಿಂದ ಆವೃತವಾಗುತ್ತವೆ ಮತ್ತು ಭಾರತದ ಗ್ರಾಮಗಳು ವಿಶ್ವದೊಂದಿಗೆ ಸಂಪರ್ಕ ಹೊಂದುತ್ತವೆ ಎಂದು ನೀವು ಊಹಿಸಬಹುದು. ಭಾರತ ಮತ್ತು ಜರ್ಮನಿಯ ಜನರು ಭಾರತದಲ್ಲಿ ತ್ವರಿತ ಇಂಟರ್ನೆಟ್‌ ಸಂಪರ್ಕವನ್ನು ಪಡೆಯಲು ಸಾಧ್ಯವಾಗುತ್ತದೆ. ಮತ್ತು ಭಾರತದಲ್ಲಿಲಭ್ಯವಿರುವ ಅಗ್ಗದ ದತ್ತಾಂಶವು ಅನೇಕ ದೇಶಗಳಿಗೆ ಊಹೆಗೂ ನಿಲುಕದ್ದು ಎಂದು ನೀವು ಶ್ಲಾಘಿಸುತ್ತೀರಿ. ಈಗ ಭಾರತವು ಸಣ್ಣದಾಗಿ ಯೋಚಿಸುವುದಿಲ್ಲ. ಜಾಗತಿಕವಾಗಿ ನೈಜ ಸಮಯದ ಡಿಜಿಟಲ್‌ ಪಾವತಿಗಳಲ್ಲಿಭಾರತದ ಪಾಲು ಶೇ.40ರಷ್ಟಿದೆ.

ಸ್ನೇಹಿತರೇ,
ನಾನು ನಿಮಗೆ ಇನ್ನೂ ಒಂದು ವಿಷಯವನ್ನು ಹೇಳುತ್ತೇನೆ ಮತ್ತು ನೀವು ಅದನ್ನು ಖಂಡಿತವಾಗಿಯೂ ಇಷ್ಟಪಡುತ್ತೀರಿ. ಭಾರತದಲ್ಲಿ ಪ್ರಯಾಣಿಸುವಾಗ ಒಬ್ಬರು ಹಣವನ್ನು ಒಯ್ಯುವ ಅಗತ್ಯವಿಲ್ಲ. ದೂರದ ಹಳ್ಳಿಗಳಲ್ಲಿಯೂ ಸಹ ಮೊಬೈಲ್‌ ಫೋನ್‌ಗಳ ಮೂಲಕ ಎಲ್ಲಾ ರೀತಿಯ ಪಾವತಿಗಳನ್ನು ಮಾಡಲಾಗುತ್ತಿದೆ.

ಸ್ನೇಹಿತರೇ,
ಇಂದು ಭಾರತದ ಆಡಳಿತದಲ್ಲಿ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿರುವ ರೀತಿ ನವ ಭಾರತದ ಹೊಸ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತದೆ ಮತ್ತು ಪ್ರಜಾಪ್ರಭುತ್ವದ ವಿತರಣಾ ಸಾಮರ್ಥ್ಯ‌ಕ್ಕೆ ಸಾಕ್ಷಿಯಾಗಿದೆ. ಈ ಅಂಕಿಅಂಶವು ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಇಂದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸ್ವ-ಸರ್ಕಾರಗಳ ಸುಮಾರು 10,000 ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಅದು ಸರ್ಕಾರದ ಸಹಾಯ, ವಿದ್ಯಾರ್ಥಿವೇತನ ಅಥವಾ ರೈತನ ಬೆಳೆಯ ಬೆಲೆ ಯಾವುದೇ ಆಗಿರಲಿ, ಎಲ್ಲವನ್ನೂ ಈಗ ನೇರವಾಗಿ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗುತ್ತಿದೆ. ನಾನು ದೆಹಲಿಯಿಂದ ಒಂದು ರೂಪಾಯಿ ಕಳುಹಿಸುತ್ತೇನೆ ಮತ್ತು ಹದಿನೈದು ಪೈಸೆ ಜನರನ್ನು ತಲುಪುತ್ತದೆ ಎಂದು ಈಗ ಯಾವ ಪ್ರಧಾನಿಯೂ ಹೇಳಬೇಕಾಗಿಲ್ಲ. 85 ಪೈಸೆ ಹಿಂಪಡೆದ ಕೈ ಯಾವುದು?

ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ಅಂಕಿ ಅಂಶಗಳನ್ನು ಸಹ ನೀವು ತಿಳಿದುಕೊಳ್ಳಲು ಬಯಸುತ್ತೀರಿ. ಈ ಅಂಕಿ ಅಂಶಗಳು ನಿಮಗೆ ನೆನಪಾಗುತ್ತವೆಯೇ? ಭಯಪಡಬೇಡಿ. ಇದು ನಿಮ್ಮ ಪ್ರಯತ್ನ. ಕಳೆದ ಏಳೆಂಟು ವರ್ಷಗಳಲ್ಲಿ, ಭಾರತ ಸರ್ಕಾರವು ಡಿಬಿಟಿ (ನೇರ ಲಾಭ ವರ್ಗಾವಣೆ) ಮೂಲಕ ಒಂದೇ ಕ್ಲಿಕ್‌ನಲ್ಲಿ ಫಲಾನುಭವಿಗಳ ಖಾತೆಗಳಿಗೆ ಹಣವನ್ನು ಕಳುಹಿಸಿದೆ. ನಾವು ಡಿಬಿಟಿ ಮೂಲಕ ಕಳುಹಿಸಿದ ಮೊತ್ತವು 22 ಲಕ್ಷ  ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ. ಈಗ ನೀವು ಜರ್ಮನಿಯಲ್ಲಿದ್ದೀರಿ. ಅದು 300 ಶತಕೋಟಿ ಡಾಲರ್‌ ಗಿಂತಲೂ ಹೆಚ್ಚಾಗಿದೆ ಎಂದು ನಾನು ನಿಮಗೆ ಹೇಳುತ್ತೇನೆ. ಅಲ್ಲಿ ಮಧ್ಯವರ್ತಿಯೂ ಇಲ್ಲ, ಕಮಿಷನ್‌ ಕೂಡ ಇಲ್ಲ. ಇದು ವ್ಯವಸ್ಥೆಯಲ್ಲಿ ಪಾರದರ್ಶಕತೆಗೆ ಕಾರಣವಾಗಿದೆ ಮತ್ತು ಇದರ ಪರಿಣಾಮವಾಗಿ ಈ ನೀತಿಗಳು, ಉದ್ದೇಶ ಮತ್ತು ತಂತ್ರಜ್ಞಾನವು ಆ ನಂಬಿಕೆಯ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ.

ಸ್ನೇಹಿತರೇ,
ಅಂತಹ ಉಪಕರಣಗಳು ಲಭ್ಯವಿದ್ದಾಗ ಸಾಮಾನ್ಯ ನಾಗರಿಕನು ಸಶಕ್ತನಾಗುತ್ತಾನೆ. ಆದ್ದರಿಂದ, ಅವನು ಆತ್ಮವಿಶ್ವಾಸವನ್ನು ಹೊಂದುವುದು ತುಂಬಾ ಸ್ವಾಭಾವಿಕ ಮತ್ತು ಅವನು ಸ್ವತಃ ನಿರ್ಣಯವನ್ನು ಮಾಡಲು ಪ್ರಾರಂಭಿಸುತ್ತಾನೆ ಮತ್ತು ಕಠಿಣ ಪರಿಶ್ರಮದ ಮೂಲಕ ಅದನ್ನು ಅರಿತುಕೊಳ್ಳುತ್ತಾನೆ. ಆಗ ಮಾತ್ರ ದೇಶ ಮುಂದೆ ಸಾಗುತ್ತದೆ ಸ್ನೇಹಿತರೇ. ನವ ಭಾರತವು ಕೇವಲ ಸುರಕ್ಷಿತ ಭವಿಷ್ಯದ ಬಗ್ಗೆ ಯೋಚಿಸುವುದಿಲ್ಲ, ಆದರೆ ಅದು ಅಪಾಯಗಳನ್ನು ತೆಗೆದುಕೊಳ್ಳಲು, ಆವಿಷ್ಕಾರ ಮಾಡಲು ಮತ್ತು ಕಾವು ನೀಡಲು ಸಿದ್ಧವಾಗಿದೆ. 2014 ರ ಸುಮಾರಿಗೆ ದೇಶದಲ್ಲಿ ಕೇವಲ 200-400 ನವೋದ್ಯಮಗಳು ಮಾತ್ರ ಇದ್ದವು ಎಂದು ನನಗೆ ನೆನಪಿದೆ. ಇಂದು 68,000 ಕ್ಕೂ ಹೆಚ್ಚು ನವೋದ್ಯಮಗಳಿವೆ. 400 ರಿಂದ 68,000 ರವರೆಗೆ! ಇದನ್ನು ಕೇಳಿದ ನಂತರ ನಿಮ್ಮ ಎದೆಯು ಹೆಮ್ಮೆಯಿಂದ ಉಬ್ಬಿಕೊಳ್ಳಲಿಲ್ಲವೇ ಮತ್ತು ನಿಮ್ಮ ತಲೆಯನ್ನು ಮೇಲಕ್ಕೆತ್ತಿಲ್ಲವೇ? ಇಷ್ಟೇ ಅಲ್ಲ, ವಿಶ್ವದ ನಿಯತಾಕಾಲಿಕೆಗಳ ಪ್ರಕಾರ ಡಜನ್‌ ಗಟ್ಟಲೆ ನವೋದ್ಯಮಗಳು ಯುನಿಕಾರ್ನ್‌ಗಳಾಗಿ ಮಾರ್ಪಟ್ಟವು. ಇದು ಕೇವಲ ಯುನಿಕಾರ್ನ್‌ ಗಳಿಗೆ ಮಾತ್ರ ಸೀಮಿತವಾಗಿಲ್ಲ. ಅನೇಕ ಯುನಿಕಾರ್ನ್‌ ಗಳಿವೆ, ಅವು ಯಾವುದೇ ಸಮಯದಲ್ಲಿ10 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚು ಮೌಲ್ಯದ ಡೆಕಾಕಾರ್ನ್‌ ಗಳಾಗಿ ಮಾರ್ಪಟ್ಟಿವೆ. ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರಿಗಳನ್ನು ಅವರ ಮಕ್ಕಳ ಬಗ್ಗೆ ಕೇಳುತ್ತಿದ್ದೆ ಎಂದು ನನಗೆ ನೆನಪಿದೆ. ತಮ್ಮ ಮಕ್ಕಳು ಐಎಎಸ್‌ ಗಾಗಿ ತಯಾರಿ ನಡೆಸುತ್ತಿದ್ದಾರೆ ಎಂದು ಅವರು ಹೇಳುತ್ತಿದ್ದರು. ಈಗ ನಾನು ಅವರಿಗೆ ಅದೇ ಪ್ರಶ್ನೆಯನ್ನು ಕೇಳಿದರೆ, ಅವರು ತಮ್ಮ ಮಕ್ಕಳು ನವೋದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳುತ್ತಾರೆ. ಸ್ನೇಹಿತರೇ, ಇದು ಸಣ್ಣ ಬದಲಾವಣೆಯಲ್ಲ.

ಸ್ನೇಹಿತರೇ,
ಮೂಲ ಸಮಸ್ಯೆ ಏನು? ಇಂದು ಸರ್ಕಾರವು ಆವಿಷ್ಕಾರಿಗಳನ್ನು ಪ್ರೋತ್ಸಾಹಿಸುತ್ತಿದೆ ಮತ್ತು ಅವರನ್ನು ಬಂಧಿಸುತ್ತಿಲ್ಲ. ನೀವು ಜಿಯೋಸ್ಪೇಷಿಯಲ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ಆವಿಷ್ಕಾರಗಳನ್ನು ಮಾಡಲು, ಹೊಸ ಡ್ರೋನ್‌ಗಳನ್ನು ತಯಾರಿಸಲು ಅಥವಾ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಉಪಗ್ರಹಗಳನ್ನು ಅಥವಾ ರಾಕೆಟ್‌ಗಳನ್ನು ತಯಾರಿಸಲು ಬಯಸಿದರೆ ಸರ್ಕಾರವು ಪೋಷಿಸುವ ವಾತಾವರಣವನ್ನು ಒದಗಿಸುತ್ತಿದೆ. ಒಂದು ನಿರ್ದಿಷ್ಟ ಕಾಗದವನ್ನು ಲಗತ್ತಿಸಲು ವಿಫಲವಾದರೆ ಕಂಪನಿಯನ್ನು ನೋಂದಾಯಿಸಲು ತಿಂಗಳುಗಳನ್ನು ತೆಗೆದುಕೊಳ್ಳುತ್ತಿದ್ದ ಕಾಲವೊಂದಿತ್ತು. ಸರ್ಕಾರದ ಮೇಲೆ ನಾಗರಿಕರ ವಿಶ್ವಾಸ ಹೆಚ್ಚಾದಾಗ, ಅಪನಂಬಿಕೆಯ ಅಂತರವು ಕೊನೆಗೊಳ್ಳುತ್ತದೆ. ಸ್ನೇಹಿತರೇ, ಇಂದು ಒಂದು ಕಂಪನಿಯನ್ನು ನೋಂದಾಯಿಸಲು 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಒಂದೇ ರೀತಿಯ ದಾಖಲೆಗಳನ್ನು ಹಲವಾರು ಬಾರಿ ಕೇಳುವುದು ಸಾಮಾನ್ಯವಾಗಿತ್ತು. ಒಂದು ಕಚೇರಿಯಲ್ಲಿ ಆರು ಜನರಿದ್ದರೆ, ಅವರು ಪ್ರತ್ಯೇಕವಾಗಿ ಒಂದೇ ದಾಖಲೆಯನ್ನು ಕೇಳುತ್ತಾರೆ. ಅನೇಕ ಅನುಸರಣಾ ಮಾರ್ಗದರ್ಶಿ ಸೂತ್ರಗಳು ಇದ್ದವು.
ಸ್ನೇಹಿತರೇ,
ನಾವು 25,000 ಕ್ಕೂ ಹೆಚ್ಚು ಅನುಸರಣೆಗಳನ್ನು ರದ್ದುಗೊಳಿಸಿದ್ದೇವೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಈಗ ನಾನು ಈ ಕೆಲಸವನ್ನು ಸಹ ಮಾಡಬೇಕಾಗಿದೆ. ನನ್ನ ಪಕ್ಷ ವು ನನ್ನನ್ನು ಪ್ರಧಾನಿ ಅಭ್ಯರ್ಥಿಗೆ ನಾಮನಿರ್ದೇಶನ ಮಾಡಿದ ನಂತರ ನಾನು 2013 ರ ಚುನಾವಣೆಗೆ ತಯಾರಿ ನಡೆಸುತ್ತಿದ್ದೆ. ಒಂದು ದಿನ, ದೆಹಲಿಯ ಉದ್ಯಮಿಗಳು ನನ್ನನ್ನು ವ್ಯವಹಾರ ಶೃಂಗಸಭೆಗೆ ಕರೆದರು. ಒಬ್ಬ ಸಭ್ಯ ವ್ಯಕ್ತಿ ಅನೇಕ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ವಿವರಿಸುತ್ತಿದ್ದರು. ಸಾಮಾನ್ಯವಾಗಿ, ಜನರು ಚುನಾವಣಾ ಪ್ರಚಾರದ ಸಮಯದಲ್ಲಿ ದೊಡ್ಡ ಭರವಸೆಗಳನ್ನು ನೀಡುತ್ತಾರೆ. ಆದರೆ Pm, ನಾನು ವಿಭಿನ್ನ ಮಣ್ಣಿನಿಂದ ಹೊರಹೊಮ್ಮಿದ್ದೇನೆ. ನಾನು ಮಾತನಾಡಲು ಎದ್ದಾಗ, ನೀವು ಹೊಸ ಕಾನೂನುಗಳ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ನಾನು ಹೇಳಿದೆ, ಆದರೆ ನನಗೆ ಬೇರೆಯದೇ ಆದ ಉದ್ದೇಶವಿದೆ. ನನ್ನ ಉದ್ದೇಶದ ಬಗ್ಗೆ ನಾನು ನಿಮಗೆ ಹೇಳಿದರೆ ನೀವು ನನಗೆ ಮತ ಹಾಕುತ್ತೀರಾ ಎಂದು ನನಗೆ ತಿಳಿದಿಲ್ಲ. ನಾನು ಚುನಾಯಿತನಾದರೆ ಪ್ರತಿದಿನ ಒಂದು ಕಾನೂನನ್ನು ರದ್ದುಗೊಳಿಸುವ ಭರವಸೆ ನೀಡುತ್ತೇನೆ ಎಂದು ನಾನು ಅವರಿಗೆ ಹೇಳಿದೆ. ಈ ವ್ಯಕ್ತಿಗೆ ಆಡಳಿತದ ಬಗ್ಗೆ ತಿಳಿವಳಿಕೆ ಇಲ್ಲ ಎಂದು ಅನೇಕ ಜನರು ಆಶ್ಚರ್ಯಪಟ್ಟರು. ಆದರೆ ಇಂದು ಸ್ನೇಹಿತರೇ, ನಾನು ನಿಮಗೆ ನನ್ನ ಖಾತೆಯನ್ನು ನೀಡುತ್ತಿದ್ದೇನೆ. ಸ್ನೇಹಿತರೇ, ನನ್ನ ಸರ್ಕಾರದ ಮೊದಲ 5 ವರ್ಷಗಳಲ್ಲಿನಾನು 1,500 ಕಾನೂನುಗಳನ್ನು ರದ್ದುಗೊಳಿಸಿದ್ದೇನೆ. ಈ ಕಾನೂನುಗಳ ಜಾಲದ ಹೊರೆಯು ನಾಗರಿಕರ ಮೇಲೆ ಏಕೆ ಇರಬೇಕು?

ಭಾರತವು ಒಂದು ಸ್ವತಂತ್ರ ದೇಶವಾಗಿದೆ. ಈ ದೇಶವು ನರೇಂದ್ರ ಮೋದಿಗೆ ಸೇರಿದ್ದಲ್ಲ. ಆದರೆ 130 ಕೋಟಿ ನಾಗರಿಕರಿಗೆ ಸೇರಿದೆ. ನಮ್ಮ ದೇಶದ ವಿಶೇಷತೆಗಳನ್ನು ನೋಡಿ. ಒಂದು ದೇಶವಿತ್ತು. ಆದರೆ ಎರಡು ಸಂವಿಧಾನಗಳು ಇದ್ದವು. ಅದಕ್ಕೆ ಇಷ್ಟೊಂದು ಸಮಯ ಏಕೆ ಬೇಕಾಯಿತು? ’ಟ್ಯೂಬ್ಲೈಟ್‌’ ಎಂಬ ಪದವನ್ನು ರಚಿಸಲಾಯಿತು. ದೇಶಾದ್ಯಂತ ಒಂದು ಸಂವಿಧಾನವನ್ನು ಜಾರಿಗೆ ತರಲು ಏಳು ದಶಕಗಳು ಬೇಕಾಯಿತು. ಅಂತೆಯೇ, ಒಬ್ಬ ಬಡ ವ್ಯಕ್ತಿಯು ಜಬಲ್ಪುರದಲ್ಲಿ ವಾಸಿಸುತ್ತಿದ್ದರೆ ಮತ್ತು ಅಲ್ಲಿ ಅವರು ಪಡಿತರ ಚೀಟಿಯನ್ನು ಹೊಂದಿದ್ದರೆ, ಜೀವನೋಪಾಯಕ್ಕಾಗಿ ಜೈಪುರಕ್ಕೆ ಬರುವಂತೆ ಒತ್ತಾಯಿಸಿದರೆ ಅದೇ ಪಡಿತರ ಚೀಟಿಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅಲ್ಲಿ ಒಂದು ದೇಶವಿತ್ತು. ಆದರೆ ಪ್ರತ್ಯೇಕ ಪಡಿತರ ಚೀಟಿಗಳು ಇದ್ದವು. ಇಂದು, ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಇದೆ. ಈ ಹಿಂದೆ, ಯಾರಾದರೂ ದೇಶದಲ್ಲಿ ಹೂಡಿಕೆ ಮಾಡಲು ಬಯಸಿದರೆ, ಅವರು ಗುಜರಾತ್‌, ಮಹಾರಾಷ್ಟ್ರ ಮತ್ತು ಬಂಗಾಳದಲ್ಲಿಮೂರು ಕಂಪನಿಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲು ಬಯಸಿದರೆ ವಿಭಿನ್ನ ತೆರಿಗೆ ನಿಯಮಗಳು ಇರುತ್ತಿದ್ದವು. ವಿವಿಧ ಕಾನೂನುಗಳಿದ್ದುದರಿಂದ ಅವರು ಈ ಮೂರೂ ಸ್ಥಳಗಳಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ ಅನ್ನು ನೇಮಿಸಿಕೊಳ್ಳಬೇಕಾಯಿತು. ಇಂದು, ಒಂದು ತೆರಿಗೆ ವ್ಯವಸ್ಥೆ ಇದೆ. ನಮ್ಮ ಹಣಕಾಸು ಸಚಿವೆ ನಿರ್ಮಲಾ ಜೀ ಇಲ್ಲಿ ಕುಳಿತಿದ್ದಾರೆ. ಏಪ್ರಿಲ್‌ ನಲ್ಲಿ ಏನಾಯಿತು ಎಂದು ನಿಮಗೆ ತಿಳಿದಿದೆ. ದಾಖಲೆಯ 1.68 ಲಕ್ಷ  ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ. ಇದು ಒಂದು ರಾಷ್ಟ್ರ, ಒಂದು ತೆರಿಗೆಯ ದಿಕ್ಕಿನಲ್ಲಿ ದೃಢವಾಗಿ ಸಂಭವಿಸಲಿಲ್ಲವೇ?
ಸ್ನೇಹಿತರೇ,
ಮೇಕ್‌ ಇನ್‌ ಇಂಡಿಯಾ ಆತ್ಮನಿರ್ಭರ ಭಾರತ್‌ ಅಭಿಯಾನದ ಪ್ರೇರಕ ಶಕ್ತಿಯಾಗುತ್ತಿದೆ. ಇಂದು ಆತ್ಮವಿಶ್ವಾಸದ ಭಾರತವು ಈ ಪ್ರಕ್ರಿಯೆಯನ್ನು ಸರಾಗಗೊಳಿಸುವುದಲ್ಲದೆ, ಉತ್ಪಾದನೆ-ಸಂಬಂಧಿತ ಪ್ರೋತ್ಸಾಹಕಗಳೊಂದಿಗೆ ಹೂಡಿಕೆಗಳನ್ನು ಬೆಂಬಲಿಸುತ್ತಿದೆ. ಇದರ ಪರಿಣಾಮವು ಭಾರತದಿಂದ ರಫ್ತಿನ ಮೇಲೂ ಗೋಚರಿಸುತ್ತದೆ. ಕೆಲವು ದಿನಗಳ ಹಿಂದೆ, ನಾವು 400 ಶತಕೋಟಿ ಡಾಲರ್‌ ರಫ್ತುಗಳ ದಾಖಲೆಯನ್ನು ಮುರಿದಿದ್ದೇವೆ. ನಾವು ಸರಕು ಮತ್ತು ಸೇವೆಗಳನ್ನು ನೋಡಿದರೆ, ಭಾರತದ ರಫ್ತು 670 ಶತಕೋಟಿ ಡಾಲರ್‌ ಅಂದರೆ ಕಳೆದ ವರ್ಷ ಸುಮಾರು 50 ಲಕ್ಷ  ಕೋಟಿ ರೂಪಾಯಿಗಳಷ್ಟಿತ್ತು. ಈ ಸಂಖ್ಯೆಯ ನಂತರ ಚಪ್ಪಾಳೆಗಾಗಿ ನಿಮ್ಮ ಕೈಗಳು ಹೆಪ್ಪುಗಟ್ಟಿವೆಯೇ? ಭಾರತದ ಅನೇಕ ಹೊಸ ಜಿಲ್ಲೆಗಳು ಹೊಸ ದೇಶಗಳಿಗೆ ರಫ್ತಿಗಾಗಿ ತಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತಿವೆ. ಇಂದು ತಯಾರಾಗುತ್ತಿರುವುದು ‘ಶೂನ್ಯ ದೋಷ, ಶೂನ್ಯ ಪರಿಣಾಮ’. ಈ ಮಂತ್ರದೊಂದಿಗೆ, ದೇಶವು ಉತ್ಪಾದನೆಯ ದಿಕ್ಕಿನಲ್ಲಿ ಸಾಗುತ್ತಿದೆ. ಅಲ್ಲಿಯಾವುದೇ ಗುಣಮಟ್ಟದ ದೋಷವಿಲ್ಲ ಮತ್ತು ಉತ್ಪಾದನೆಯಿಂದಾಗಿ ಪರಿಸರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಸ್ನೇಹಿತರೇ,
21 ನೇ ಶತಮಾನದ ಈ ಮೂರನೇ ದಶಕದ ಅತಿದೊಡ್ಡ ಸತ್ಯವೆಂದರೆ ಇಂದು ಭಾರತವು ಜಾಗತಿಕವಾಗಿ ಮುನ್ನುಗ್ಗುತ್ತಿದೆ. ಕೊರೋನಾ ಅವಧಿಯಲ್ಲಿ, ಭಾರತವು 150 ಕ್ಕೂ ಹೆಚ್ಚು ದೇಶಗಳಿಗೆ ಅಗತ್ಯ ಔಷಧಿಗಳನ್ನು ಕಳುಹಿಸುವ ಮೂಲಕ ಅನೇಕ ಜೀವಗಳನ್ನು ಉಳಿಸಲು ಸಹಾಯ ಮಾಡಿತು. ಭಾರತವು ಕೋವಿಡ್‌ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದಾಗ ನಾವು ನಮ್ಮ ಲಸಿಕೆಗಳೊಂದಿಗೆ ಸುಮಾರು 100 ದೇಶಗಳಿಗೆ ಸಹಾಯ ಮಾಡಿದೆವು ಸ್ನೇಹಿತರೇ.

ಸ್ನೇಹಿತರೇ,
ಇಂದಿನ ಬ್ರೇಕಿಂಗ್‌ ನ್ಯೂಸ್‌, ಅಡಚಣೆಗೆ ಕ್ಷಮಿಸಿ. ಇಂದು ಜಗತ್ತು ಗೋಧಿಯ ಕೊರತೆಯನ್ನು ಎದುರಿಸುತ್ತಿದೆ. ವಿಶ್ವದ ಪ್ರಮುಖ ದೇಶಗಳು ಆಹಾರ ಭದ್ರತೆಯ ಬಗ್ಗೆ ಚಿಂತಕ್ರಾಂತವಾಗಿವೆ. ಅಂತಹ ಸಮಯದಲ್ಲಿ, ಭಾರತದ ರೈತರು ಜಗತ್ತಿಗೆ ಆಹಾರವನ್ನು ನೀಡಲು ಮುಂದೆ ಬರುತ್ತಿದ್ದಾರೆ ಸ್ನೇಹಿತರೇ.
ಸ್ನೇಹಿತರೇ,
ಮಾನವೀಯತೆ ಯಾವುದೇ ಬಿಕ್ಕಟ್ಟನ್ನು ಎದುರಿಸಿದಾಗಲೆಲ್ಲಾ, ಭಾರತವು ಪರಿಹಾರದೊಂದಿಗೆ ಬರುತ್ತದೆ. ಬಿಕ್ಕಟ್ಟನ್ನು ತರುವವರಿಗೆ ಅಭಿನಂದನೆಗಳು, ನಾವು ಪರಿಹಾರದೊಂದಿಗೆ ಬರುತ್ತೇವೆ ಮತ್ತು ಜಗತ್ತು ಹರ್ಷೋದ್ಗಾರ ಮಾಡುತ್ತದೆ ಸ್ನೇಹಿತರೇ. ಇದು ನವ ಭಾರತ; ಇದು ನವ ಭಾರತದ ಸಾಮರ್ಥ್ಯ‌ವಾಗಿದೆ. ವರ್ಷಗಳಿಂದ ಭಾರತಕ್ಕೆ ಹೋಗದವರಿಗೆ ಮುಜುಗರವಾಗಬಾರದು. ಆದರೆ ಇದು ಹೇಗೆ ಸಂಭವಿಸಿತು ಎಂದು ಅವರು ಆಶ್ಚರ್ಯ ಪಡುತ್ತಿರಬಹುದು? ಅಂತಹ ದೊಡ್ಡ ಬದಲಾವಣೆ ಹೇಗೆ ಬಂತು? ಸ್ನೇಹಿತರೇ ಇಲ್ಲ, ನಿಮ್ಮ ಉತ್ತರ ತಪ್ಪಾಗಿದೆ. ನರೇಂದ್ರ ಮೋದಿಯವರು ಏನನ್ನೂ ಮಾಡಿಲ್ಲ, 130 ಕೋಟಿ ದೇಶವಾಸಿಗಳು ಅದನ್ನು ಮಾಡಿದ್ದಾರೆ.

ಸ್ನೇಹಿತರೇ,
ಭಾರತ ಜಾಗತಿಕವಾಗಲು ನಿಮ್ಮ ಕೊಡುಗೆಯೂ ಮಹತ್ವದ್ದಾಗಿದೆ. ಇಂದು ಭಾರತದಲ್ಲಿ ಸ್ಥಳೀಯ ಉತ್ಪನ್ನಗಳ ಬಗ್ಗೆ ಉದ್ಭವಿಸಿದ ಕ್ರೇಜ್‌ ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ದೇಶೀಯ ಸರಕುಗಳಿಗೆ ಇರುವ ಕ್ರೇಜ್‌ ಅನ್ನು ಹೋಲುತ್ತದೆ. ದೀರ್ಘಕಾಲದವರೆಗೆ, ವಿದೇಶಿ ಉತ್ಪನ್ನಗಳನ್ನು ಖರೀದಿಸುವ ಬಗ್ಗೆ ಜನರು ಬಡಾಯಿ ಕೊಚ್ಚಿಕೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ ಇಂದು ಭಾರತದ ಜನರು ತಮ್ಮ ಸ್ಥಳೀಯ ಉತ್ಪನ್ನಗಳ ಬಗ್ಗೆ ಹೆಮ್ಮೆಯ ಹೊಸ ಭಾವನೆಯನ್ನು ಹೊಂದಿದ್ದಾರೆ. 10-20 ವರ್ಷಗಳ ಹಿಂದೆ, ನಿಮಗೆ ತಿಳಿದಿರಬಹುದು, ನಿಮ್ಮ ಭೇಟಿಯ ದಿನಾಂಕದ ಬಗ್ಗೆ ನಿಮ್ಮ ಕುಟುಂಬಕ್ಕೆ ತಿಳಿಸುವ ಪತ್ರವನ್ನು ನೀವು ಬರೆಯುತ್ತಿದ್ದಾಗ, ನೀವು ಮನೆಗೆ ಹಿಂದಿರುಗುವಾಗ ಒಂದು ನಿರ್ದಿಷ್ಟ ಉತ್ಪನ್ನವನ್ನು ತರುವಂತೆ ನಿಮಗೆ ತಿಳಿಸಲಾಗುತ್ತಿತು. ಈಗ ನೀವು ನಿಮ್ಮ ಮನೆಗೆ ಭೇಟಿ ನೀಡಬೇಕಾದಾಗ, ಇಲ್ಲಿ ಎಲ್ಲವೂ ಲಭ್ಯವಿರುವುದರಿಂದ ಏನನ್ನೂ ತರಬೇಡಿ ಎಂದು ನಿಮಗೆ ಹೇಳಲಾಗುತ್ತದೆ. ಅದು ಸರಿಯೇ ಅಥವಾ ಅಲ್ಲವೇ? ಸ್ನೇಹಿತರೇ, ಇದು ಶಕ್ತಿ ಮತ್ತು ಅದಕ್ಕಾಗಿಯೇ ನಾನು ‘ವೋಕಲ್‌ ಫಾರ್‌ ಲೋಕಲ್‌’ ಅನ್ನು ಪುನರುಚ್ಚರಿಸುತ್ತೇನೆ. ಆದರೆ ಇಲ್ಲಿ(ಜರ್ಮನಿಯಲ್ಲಿ)ನ ಸ್ಥಳೀಯ ಉತ್ಪನ್ನಗಳಿಗೆ ಅಲ್ಲ. ಸ್ಥಳೀಯ ಉತ್ಪನ್ನವು ಭಾರತೀಯನ ಕಠಿಣ ಪರಿಶ್ರಮವನ್ನು ಒಳಗೊಂಡಿದೆ. ಇದು ಭಾರತೀಯನ ಬೆವರಿನ ವಾಸನೆಯನ್ನು ಹೊಂದಿದೆ ಮತ್ತು ಅದು ಆ ಮಣ್ಣಿನ ಪರಿಮಳವನ್ನು ಹೊಂದಿದೆ. ಸ್ನೇಹಿತರೇ, ಭಾರತದಲ್ಲಿ ತಯಾರಾದ ಮತ್ತು ಭಾರತದ ಯುವಜನರ ಬೆವರನ್ನು ಹೊಂದಿರುವ ಉತ್ಪನ್ನಗಳು ನಮ್ಮ ಫ್ಯಾಷನ್‌ ಸ್ಟೇಟ್‌ ಮೆಂಟ್‌ ಆಗಿರಬೇಕು. ಒಮ್ಮೆ ನೀವು ಈ ಭಾವನೆಯನ್ನು ಅನುಭವಿಸಿದರೆ, ಕಂಪನವು ಹರಡುವುದನ್ನು ನೀವು ಅನುಭವಿಸುತ್ತೀರಿ. ಮುಂದಿನ ಬಾರಿ ನೀವು 10 ದಿನಗಳ ಕಾಲ ಭಾರತಕ್ಕೆ ಹೋದಾಗ, ಇಲ್ಲಿಂದ ಜನರು ನಿಮಗೆ ಪತ್ರ ಬರೆಯುತ್ತಾರೆ ಮತ್ತು ಭಾರತದಿಂದ ಏನನ್ನಾದರೂ ತರುವಂತೆ ಕೇಳುತ್ತಾರೆ. ನೀವು ಇದನ್ನು ಮಾಡಬಾರದೇ?

ಸ್ನೇಹಿತರೇ, ಖಾದಿಯ ಒಂದು ಉತ್ತಮ ಉದಾಹರಣೆಯನ್ನು ನಾನು ನಿಮಗೆ ಹೇಳುತ್ತೇನೆ. ನಿಮಗೆಲ್ಲರಿಗೂ ಖಾದಿ ಗೊತ್ತು. ಖಾದಿ ಮತ್ತು ರಾಜಕಾರಣಿಯ ನಡುವೆ ಒಂದು ಸಂಬಂಧವಿತ್ತು. ರಾಜಕಾರಣಿ ಮತ್ತು ಖಾದಿ ಅವಿನಾಭಾವವಾಗಿದ್ದವು. ಖಾದಿ ಎಂದರೆ ರಾಜಕಾರಣಿ ಮತ್ತು ರಾಜಕಾರಣಿ ಎಂದರೆ ಖಾದಿ ಎಂದರ್ಥ. ದುರದೃಷ್ಟವಶಾತ್‌, ಮಹಾತ್ಮಾ ಗಾಂಧಿಯವರು ವಾಸಿಸುತ್ತಿದ್ದ ಭಾರತದಲ್ಲಿ ಖಾದಿ, ಸ್ವಾತಂತ್ರ್ಯ ಚಳವಳಿಗೆ ಶಕ್ತಿ ನೀಡಿದ ಖಾದಿ, ಸ್ವಾತಂತ್ರ್ಯದ ನಂತರದ ಸ್ವಾತಂತ್ರ್ಯ ಪ್ರೇಮಿಗಳ ಕನಸುಗಳಂತೆಯೇ ಅದನ್ನು ಪರಿಗಣಿಸಲಾಯಿತು. ಇದು ದೇಶದ ಜವಾಬ್ದಾರಿಯಲ್ಲವೇ? ಬಡ ತಾಯಿಯ ಜೀವನೋಪಾಯ ಮತ್ತು ವಿಧವೆ ತಾಯಿಗೆ ತನ್ನ ಮಕ್ಕಳನ್ನು ಬೆಳೆಸಲು ಬೆಂಬಲ ನೀಡುವ ಖಾದಿಯನ್ನು ಅದರ ಹಣೆಬರಹಕ್ಕೆ ಬಿಡಲಾಯಿತು ಮತ್ತು ಒಂದು ರೀತಿಯಲ್ಲಿ ಅಳಿವಿನ ಅಂಚಿನಲ್ಲಿತ್ತು. ನಾನು ಮುಖ್ಯಮಂತ್ರಿಯಾದಾಗ ಈ ಉಪಕ್ರಮವನ್ನು ತೆಗೆದುಕೊಂಡೆ. ನಿಮ್ಮ ಬಳಿ ಈ ಫ್ಯಾಬ್ರಿಕ್‌, ಸೀರೆ ಅಥವಾ ಕುರ್ತಾ ಇದೆ ಎಂದು ನೀವು ಹೆಮ್ಮೆಯಿಂದ ಹೇಳಿಕೊಳ್ಳುತ್ತೀರಿ. ನೀವು ಮಾಡುತ್ತೀರೋ ಇಲ್ಲವೋ? ನಾನು ಅವರಿಗೆ ಖಾದಿಯನ್ನೂ ಇಟ್ಟುಕೊಳ್ಳಲು ಹೇಳುತ್ತಿದ್ದೆ.
ಸ್ನೇಹಿತರೇ,
ಇದು ಒಂದು ಸಣ್ಣ ವಿಷಯವಾಗಿತ್ತು. ಆದರೆ ಇಂದು ನಾನು ಖಾದಿಯನ್ನು ಸ್ವೀಕರಿಸಿದ್ದಕ್ಕಾಗಿ ದೇಶದ ಮುಂದೆ ತಲೆಬಾಗುತ್ತೇನೆ. ಸ್ವಾತಂತ್ರ್ಯದ 75 ವರ್ಷಗಳ ನಂತರ ಮೊದಲ ಬಾರಿಗೆ, ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ಖಾದಿಯ ವಹಿವಾಟು ಈ ವರ್ಷ 1 ಲಕ್ಷ  ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ತಿಳಿದು ನಿಮಗೆ ಸಂತೋಷವಾಗುತ್ತದೆ. ಎಷ್ಟು ಬಡ ವಿಧವೆ ತಾಯಂದಿರು ಜೀವನೋಪಾಯವನ್ನು ಪಡೆಯುತ್ತಿದ್ದರು? ಕಳೆದ 8 ವರ್ಷಗಳಲ್ಲಿ ಖಾದಿ ಉತ್ಪಾದನೆ ಶೇ.175ರಷ್ಟು ಹೆಚ್ಚಾಗಿದೆ. ನವೋದ್ಯಮಗಳ ಬಗ್ಗೆ ನಾನು ಯಾವ ಉತ್ಸಾಹದಿಂದ ಮಾತನಾಡುತ್ತೇನೋ ಅದೇ ಉತ್ಸಾಹದಿಂದ ಖಾದಿಯ ಬಗ್ಗೆ ಮಾತನಾಡುತ್ತೇನೆ. ನಾನು ಉಪಗ್ರಹಗಳ ಬಗ್ಗೆ ಮಾತನಾಡುವ ಉತ್ಸಾಹ, ನಾನು ಅದೇ ಉತ್ಸಾಹದಲ್ಲಿಮಣ್ಣಿನ ಬಗ್ಗೆ ಮಾತನಾಡುತ್ತೇನೆ.
--
ಸ್ನೇಹಿತರೇ,
ಇಂದು ನಾನು ನಿಮ್ಮೆಲ್ಲರನ್ನೂ ಭಾರತದ ಸ್ಥಳೀಯ ಉತ್ಪನ್ನಗಳನ್ನು ಜಾಗತಿಕವಾಗಿಸಲು ನನ್ನೊಂದಿಗೆ ಕೈಜೋಡಿಸುವಂತೆ ವಿನಂತಿಸುತ್ತೇನೆ. ಭಾರತದ ಸ್ಥಳೀಯ ಉತ್ಪನ್ನಗಳ ವೈವಿಧ್ಯತೆ, ಶಕ್ತಿ ಮತ್ತು ಸೌಂದರ್ಯವನ್ನು ನೀವು ಇಲ್ಲಿನ ಜನರಿಗೆ ಸುಲಭವಾಗಿ ಪರಿಚಯಿಸಬಹುದು. ಭಾರತೀಯ ವಲಸಿಗರು ವಿಶ್ವದ ಪ್ರತಿಯೊಂದು ದೇಶದಲ್ಲೂ ಹರಡಿದ್ದಾರೆ ಮತ್ತು ಭಾರತೀಯ ವಲಸಿಗರ ವಿಶೇಷತೆಯೆಂದರೆ ಅದು ಹಾಲಿನಲ್ಲಿ ಸಕ್ಕರೆಯಂತೆ (ಸ್ಥಳೀಯರೊಂದಿಗೆ) ವಿಲೀನಗೊಳ್ಳುತ್ತದೆ. ಮತ್ತು ಯಾವುದೇ ಸಮಯದಲ್ಲಿ, ಇದು ಮೌಲ್ಯವನ್ನು ಹೆಚ್ಚಿಸುತ್ತದೆ ಮತ್ತು ಹಾಲನ್ನು ಸಿಹಿಯನ್ನಾಗಿ ಮಾಡುತ್ತದೆ. ಈ ಸಾಮರ್ಥ್ಯ‌ಗಳನ್ನು ಹೊಂದಿರುವವರು ಜರ್ಮನಿಯಲ್ಲಿ ಭಾರತದ ಸ್ಥಳೀಯ (ಉತ್ಪನ್ನಗಳನ್ನು) ಸುಲಭವಾಗಿ ಜಾಗತಿಕಗೊಳಿಸಬಹುದು. ನೀವು ಅದನ್ನು ಮಾಡುವಿರಾ? ನಿಮ್ಮ ಧ್ವನಿಯನ್ನು ಏಕೆ ನಿಗ್ರಹಿಸಲಾಗುತ್ತದೆ? ಸ್ನೇಹಿತರೇ, ನಾನು ನಿಮ್ಮನ್ನು ನಂಬುತ್ತೇನೆ ಮತ್ತು ನೀವು ಅದನ್ನು ಮಾಡುತ್ತೀರಿ.

ನಾನು ನಿಮಗೆ ಇನ್ನೂ ಒಂದು ವಿಷಯವನ್ನು ನೆನಪಿಸಲು ಬಯಸುತ್ತೇನೆ, ಇಂದು ಯೋಗ, ಆಯುರ್ವೇದ ಮತ್ತು ನಮ್ಮ ಸಾಂಪ್ರದಾಯಿಕ ಔಷಧದ ಉತ್ಪನ್ನಗಳಲ್ಲಿ ನೀವು ಊಹಿಸಲಾಗದಷ್ಟು ಸಾಮರ್ಥ್ಯ‌ವಿದೆ. ನೀವು ಭಾರತದವರು ಎಂದು ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವಾಗ, ಇನ್ನೊಬ್ಬ ವ್ಯಕ್ತಿಯು ನಿಮ್ಮನ್ನು ಯೋಗದ ಬಗ್ಗೆ ಕೇಳುವುದಿಲ್ಲವೇ? ಯೋಗದ ಬಗ್ಗೆ ನಿಮಗೆ ಏನೂ ಗೊತ್ತಿಲ್ಲದಿದ್ದರೂ, ನೀವು ನಿಮ್ಮ ಮೂಗನ್ನು (ಯೋಗಾಸನದಲ್ಲಿ) ಸ್ಪರ್ಶಿಸಿದರೆ, ಅವರು ನಿಮ್ಮನ್ನು ಪರಿಣತರೆಂದು ಪರಿಗಣಿಸುತ್ತಾರೆ. ಭಾರತದ ಋುಷಿಮುನಿಗಳ ತಪಸ್ಸಿನ ಖ್ಯಾತಿ ಎಷ್ಟಿದೆಯೆಂದರೆ, ನೀವು ಬೋರ್ಡ್‌ ಹಾಕಿದರೆ, ಆನ್‌ಲೈನ್‌ ಪ್ಲಾಟ್‌ ಫಾರ್ಮ್‌ ಅನ್ನು ರಚಿಸಿದರೂ ಮತ್ತು ಅವರ ಮೂಗನ್ನು ಹೇಗೆ ಮುಟ್ಟಬೇಕು ಎಂದು ಕಲಿಸಿದರೂ (ಯೋಗಾಸನದ ಮೂಲಕ) ಜನರು ನಿಮಗೆ ಡಾಲರ್‌ಗಳಲ್ಲಿ ಶುಲ್ಕವನ್ನು ಪಾವತಿಸಲು ಸಿದ್ಧರಿದ್ದಾರೆ. ಸಾವಿರಾರು ವರ್ಷಗಳ ಹಿಂದೆ ಋುಷಿಮುನಿಗಳು ಬಿಟ್ಟುಹೋದದ್ದನ್ನು ಈಗ ಪ್ರಪಂಚದ ಮುಂದೆ ಮರು ಶೋಧಿಸಲಾಗಿದೆ. ಆದರೆ ನೀವು ಅದರೊಂದಿಗೆ ಸಂಬಂಧ ಹೊಂದಿದ್ದೀರಾ? ಜೂನ್‌ 21 ರಂದು ಅಂತಾರಾಷ್ಟ್ರೀಯ ಯೋಗ ದಿನವು ದೂರವಿಲ್ಲ. ಆದ್ದರಿಂದ, ನಾನು ನಿಮ್ಮನ್ನು ತಂಡಗಳನ್ನಾಗಿ ಮಾಡಿಕೊಂಡು ಮತ್ತು ಯೋಗದ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ಕಲಿಸಲು ಒತ್ತಾಯಿಸುತ್ತೇನೆ.

ಸ್ನೇಹಿತರೇ,
ಇಂದು ನಾನು ನಿಮ್ಮೊಂದಿಗೆ ಮತ್ತೊಂದು ವಿಷಯವನ್ನು ಚರ್ಚಿಸಲು ಬಯಸುತ್ತೇನೆ ಮತ್ತು ಅದು ಹವಾಮಾನ ಕ್ರಿಯೆ. ಭಾರತದಲ್ಲಿ ಹವಾಮಾನದ ಸವಾಲನ್ನು ಎದುರಿಸಲು ನಾವು ಜನರ  ಟೆಕ್‌ ಶಕ್ತಿಯವರೆಗೆ ಪ್ರತಿಯೊಂದು ಪರಿಹಾರಕ್ಕೂ ಕೆಲಸ ಮಾಡುತ್ತಿದ್ದೇವೆ. ಕಳೆದ ಎಂಟು ವರ್ಷಗಳಲ್ಲಿ, ನಾವು ಭಾರತದಲ್ಲಿಎಲ್ಪಿಜಿ ವ್ಯಾಪ್ತಿಯನ್ನು ಶೇಕಡ 50 ರಿಂದ ಸುಮಾರು 100 ಕ್ಕೆ ಹೆಚ್ಚಿಸಿದ್ದೇವೆ. ಭಾರತದ ಬಹುತೇಕ ಪ್ರತಿಯೊಂದು ಮನೆಯೂ ಈಗ ಎಲ್‌ಇಡಿ ಬಲ್ಬ್ ಗಳನ್ನು ಬಳಸುತ್ತಿದೆ. ಉಜಾಲಾ ಯೋಜನೆಯಡಿ, ನಾವು ದೇಶದಲ್ಲಿಸುಮಾರು 37 ಕೋಟಿ ಎಲ್‌ಇಡಿ ಬಲ್ಬ್ ಗಳನ್ನು ವಿತರಿಸಿದ್ದೇವೆ ಮತ್ತು ಇಂಧನವನ್ನು ಉಳಿಸಲು ಎಲ್‌ಇಡಿ ಬಲ್ಬ್ ಗಳನ್ನು ಬಳಸುತ್ತೇವೆ. ಭಾರತದಲ್ಲಿನ ಒಂದು ಸಣ್ಣ ಬದಲಾವಣೆಯು ಸುಮಾರು 48,000 ದಶಲಕ್ಷ  ಕಿಲೋವ್ಯಾಟ್‌ ವಿದ್ಯುತ್‌ ಉಳಿತಾಯಕ್ಕೆ ಹೇಗೆ ಕಾರಣವಾಯಿತು ಎಂಬುದನ್ನು ನೀವು ಜರ್ಮನಿಯ ಜನರಿಗೆ ಹೆಮ್ಮೆಯಿಂದ ಹೇಳಬಹುದು. ಇದು ವಾರ್ಷಿಕವಾಗಿ ಸುಮಾರು 40 ದಶಲಕ್ಷ  ಟನ್‌ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಕಾರಣವಾಗಿದೆ. ಈ ಒಂದು ಯೋಜನೆಯು ಪರಿಸರವನ್ನು ಎಷ್ಟು ರಕ್ಷಿಸಿದೆ ಎಂದು ನೀವು ಊಹಿಸಬಹುದು.

ಸ್ನೇಹಿತರೇ, ಇಂತಹ ಪ್ರಯತ್ನಗಳಿಂದಾಗಿ ಭಾರತವು ಅಭೂತಪೂರ್ವ ಮಟ್ಟದಲ್ಲಿಹಸಿರು ಉದ್ಯೋಗಗಳಲ್ಲಿಹೊಸ ಮಾರ್ಗವನ್ನು ತೆರೆಯುತ್ತಿದೆ. ಭಾರತ ಮತ್ತು ಜರ್ಮನಿ ಕೂಡ ಇಂಧನ ಪಾಲುದಾರಿಕೆಯತ್ತ ಒಂದು ಹೆಜ್ಜೆ ಇಟ್ಟಿವೆ ಎಂದು ನನಗೆ ಸಂತೋಷವಾಗಿದೆ. ಸ್ನೇಹಿತರೇ, ಸ್ವಾತಂತ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿಹವಾಮಾನದ ಜವಾಬ್ದಾರಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಾವು ನಿರ್ಧರಿಸಿದ್ದೇವೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ75 ಹೊಸ ಅಮೃತ್‌ ಸರೋವರಗಳನ್ನು (ಕೊಳಗಳು) ನಿರ್ಮಿಸಲು ಭಾರತೀಯರು ನಿರ್ಧರಿಸಿದ್ದಾರೆ ಎಂಬುದಕ್ಕೆ ನಾನು ನಿಮಗೆ ಒಂದು ಉದಾಹರಣೆಯನ್ನು ನೀಡುತ್ತೇನೆ. ಮುಂಬರುವ 500 ದಿನಗಳಲ್ಲಿ, ದೇಶದಲ್ಲಿ 50,000 ಹೊಸ ಜಲಮೂಲಗಳನ್ನು ನಿರ್ಮಿಸಲಾಗುವುದು ಮತ್ತು ಹಳೆಯ ಕೊಳಗಳನ್ನು ಪುನರುಜ್ಜೀವನಗೊಳಿಸಲಾಗುವುದು. ನೀರು ಎಂದರೆ ಜೀವ. ನೀರಿದ್ದರೆ, ಭವಿಷ್ಯವಿದೆ, ಆದರೆ ನೀರಿಗಾಗಿ ಸಹ ಬೆವರು ಹರಿಸಬೇಕಾಗುತ್ತದೆ, ಸ್ನೇಹಿತರೇ. ನೀವು ಈ ಅಭಿಯಾನಕ್ಕೆ ಸೇರಬಹುದೇ? ನೀವು ಎಲ್ಲಿಂದ ಬಂದಿರೋ ಅಲ್ಲಿಯೇ ಹಳ್ಳಿಯಲ್ಲಿಕೊಳವನ್ನು ನಿರ್ಮಿಸಲು ನೀವು ಸಹಕರಿಸಬೇಕು. ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅಮೃತ್‌ ಸರೋವರಗಳಿಗೆ ಕೊಡುಗೆ ನೀಡಿದ್ದಕ್ಕಾಗಿ ಪ್ರಪಂಚದಾದ್ಯಂತ ಹರಡಿರುವ ಎಲ್ಲಾ ಭಾರತೀಯರಿಗೆ ಇದು ಎಷ್ಟು ಸಂತೋಷವನ್ನು ನೀಡುತ್ತದೆ ಎಂದು ನೀವು ಊಹಿಸಬಹುದು.
ಸ್ನೇಹಿತರೇ,
ಪ್ರಸಿದ್ಧ ಜರ್ಮನ್‌ ವಿದ್ವಾಂಸ ಮ್ಯಾಕ್ಸ್‌ ಮುಲ್ಲರ್‌, ಭಾರತದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿದ್ದರು. ಇಂಡೋ-ಯುರೋಪಿಯನ್‌ ಪ್ರಪಂಚದ ಹಂಚಿಕೆಯ ಭವಿಷ್ಯದ ಬಗ್ಗೆ ಮಾತನಾಡಿದ್ದರು. ಇಲ್ಲಿನೀವೆಲ್ಲರೂ ದಿನಕ್ಕೆ 10 ಬಾರಿ ಅವರನ್ನು ಉಲ್ಲೇಖಿಸುತ್ತಿರಬೇಕು. 21 ನೇ ಶತಮಾನದಲ್ಲಿಇದನ್ನು ಜಾರಿಗೆ ತರಲು ಇದು ಅತ್ಯುತ್ತಮ ಸಮಯವಾಗಿದೆ. ಭಾರತ ಮತ್ತು ಯೂರೋಪಿನ ಬಲವಾದ ಪಾಲುದಾರಿಕೆಯು ಜಗತ್ತಿನಲ್ಲಿಶಾಂತಿ ಮತ್ತು ಸಮೃದ್ಧಿಯನ್ನು ಖಾತ್ರಿಪಡಿಸುತ್ತದೆ. ಈ ಪಾಲುದಾರಿಕೆಯು ಬೆಳೆಯುತ್ತಲೇ ಇರಲಿ ಮತ್ತು ನೀವು ಭಾರತದ ಮಾನವೀಯತೆ ಮತ್ತು ಕಲ್ಯಾಣಕ್ಕಾಗಿ ಅದೇ ಉತ್ಸಾಹದಿಂದ ಕೊಡುಗೆ ನೀಡುತ್ತಲೇ ಇರಲಿ ಏಕೆಂದರೆ ನಾವು ವಸುದೇವ ಕುಟುಂಬಕಂ (ಜಗತ್ತು ಒಂದು ಕುಟುಂಬ) ಅನ್ನು ನಂಬುತ್ತೇವೆ. ಸ್ನೇಹಿತರೇ, ನೀವು ಎಲ್ಲೇ ಇರಲಿ, ಮುಂದುವರಿಯಿರಿ, ಪ್ರವರ್ಧಮಾನಕ್ಕೆ ಬರಲಿ, ನಿಮ್ಮ ಎಲ್ಲಾ ಕನಸುಗಳು ನನಸಾಗಲಿ, ಇವು ನಿಮಗೆ ನನ್ನ ಶುಭ ಹಾರೈಕೆಗಳು ಮತ್ತು 130 ಕೋಟಿ ದೇಶವಾಸಿಗಳ ಶುಭ ಹಾರೈಕೆಗಳು ನಿಮ್ಮೊಂದಿಗೆ ಇವೆ. ಸಂತೋಷವಾಗಿರಿ, ಆರೋಗ್ಯವಾಗಿರಿ ! ತುಂಬಾ ಧನ್ಯವಾದಗಳು ! 

ಹಕ್ಕು ನಿರಾಕರಣೆ: ಇದು ಪ್ರಧಾನ ಮಂತ್ರಿ ಅವರ ಹೇಳಿಕೆಗಳ ಅಂದಾಜು ಅನುವಾದವಾಗಿದೆ. ಮೂಲ ಟಿಪ್ಪಣಿಗಳನ್ನು ಹಿಂದಿಯಲ್ಲಿ ನೀಡಲಾಗಿದೆ.

***

 

 



(Release ID: 1823129) Visitor Counter : 206