ಪ್ರಧಾನ ಮಂತ್ರಿಯವರ ಕಛೇರಿ
ಭುಜ್ ನಲ್ಲಿ ಕೆ.ಕೆ. ಪಟೇಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ
“ಭೂಕಂಪನದಿಂದ ಉಂಟಾದ ವಿನಾಶವನ್ನು ದಾಟಿ ಭುಜ್ ಮತ್ತು ಕಚ್ ಜನತೆ ಕಠಿಣ ಪರಿಶ್ರಮದಿಂದ ಈ ಪ್ರದೇಶದಲ್ಲಿ ಹೊಸ ಹಣೆ ಬರಹ ಬರೆಯುತ್ತಿದ್ದಾರೆ”
“ಉತ್ತಮ ಆರೋಗ್ಯ ಸೌಲಭ್ಯದಿಂದ ರೋಗಗಳಿಗೆ ಕೇವಲ ಉತ್ತಮ ಚಿಕಿತ್ಸೆ ನೀಡುವುದಷ್ಟೇ ಅಲ್ಲದೇ ಅವರಿಗೆ ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವ ಉದ್ದೇಶ ಹೊಂದಲಾಗಿದೆ”
“ಬಡವರಿಗೆ ಸುಲಭ ದರದ ಮತ್ತು ಉತ್ತಮ ಚಿಕಿತ್ಸೆ ಲಭ್ಯವಾದರೆ ವ್ಯವಸ್ಥೆ ಬಗ್ಗೆ ಅವರ ನಂಬಿಕೆ ಬಲಗೊಳ್ಳುತ್ತದೆ: ಚಿಕಿತ್ಸಾ ವೆಚ್ಚದ ಆತಂಕದಿಂದ ಮುಕ್ತರಾದಲ್ಲಿ ಬಡತನದಿಂದ ಹೊರ ಬರಲು ಅವರು ಹೆಚ್ಚು ದೃಢ ನಿಶ್ಚಯದಿಂದ ಕಾರ್ಯನಿರ್ವಹಿಸಲು ಸಹಕಾರಿಯಾಗುತ್ತದೆ:
Posted On:
15 APR 2022 2:04PM by PIB Bengaluru
ಗುಜರಾತ್ ನ ಭುಜ್ ನಲ್ಲಿ ಕೆ.ಕೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಲೋಕಾರ್ಪಣೆ ಮಾಡಿದರು. ಭುಜ್ ನ ಶ್ರೀ ಕುಟ್ಚಿ ಲೆವ ಪಟೇಲ್ ಸಮಾಜ ಈ ಆಸ್ಪತ್ರೆಯನ್ನು ನಿರ್ಮಿಸಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಭೂಕಂಪನದಿಂದ ಉಂಟಾದ ವಿನಾಶವನ್ನು ದಾಟಿ ಭುಜ್ ಮತ್ತು ಕಚ್ ಜನತೆ ಕಠಿಣ ಪರಿಶ್ರಮದಿಂದ ಈ ಪ್ರದೇಶಕ್ಕೆ ಹೊಸ ಹಣೆ ಬರಹ ಬರೆಯುತ್ತಿದ್ದಾರೆ. “ಈ ಪ್ರದೇಶದಲ್ಲಿ ಇಂದು ಹೊಸ ಆಧುನಿಕ ವೈದ್ಯಕೀಯ ಸೇವೆಗಳು ಲಭ್ಯವಿದೆ. ಈ ನಿಟ್ಟಿನಲ್ಲಿ ಭುಜ್ ಇಂದು ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪಡೆಯುತ್ತಿದೆ” ಎಂದರು. ಈ ವಲಯದಲ್ಲಿ ಇದು ಮೊದಲ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ಕುಚ್ ನ ಲಕ್ಷಾಂತರ ಸೇನಾ ಯೋಧರು, ಅರೆ ಮಿಲಿಟರಿ ಪಡೆ ಸಿಬ್ಬಂದಿ ಮತ್ತು ವ್ಯಾಪಾರಿಗಳು ಒಳಗೊಂಡಂತೆ ಬಡವರಿಗೆ ಇದರಿಂದ ಗುಣಮಟ್ಟದ ಚಿಕಿತ್ಸೆಯ ಖಾತರಿ ದೊರೆತಿದೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು.
ಉತ್ತಮ ಆರೋಗ್ಯ ಸೌಲಭ್ಯಗಳಿಂದ ರೋಗಗಳಿಗೆ ಕೇವಲ ಉತ್ತಮ ಚಿಕಿತ್ಸೆ ನೀಡುವುದಷ್ಟೇ ಅಲ್ಲದೇ ಅವರಿಗೆ ಸಾಮಾಜಿಕ ನ್ಯಾಯವನ್ನು ಉತ್ತೇಜಿಸಿದಂತಾಗುತ್ತದೆ. “ ಬಡವರಿಗೆ ಸುಲಭ ದರದ ಮತ್ತು ಉತ್ತಮ ಚಿಕಿತ್ಸೆ ಲಭ್ಯವಾದರೆ ವ್ಯವಸ್ಥೆ ಬಗ್ಗೆ ಅವರ ನಂಬಿಕೆ ಬಲಗೊಳ್ಳುತ್ತದೆ: ಚಿಕಿತ್ಸಾ ವೆಚ್ಚದ ಆತಂಕದಿಂದ ಅವರು ಮುಕ್ತರಾದಲ್ಲಿ ಬಡತನದಿಂದ ಹೊರ ಬರಲು ಮತ್ತು ಹೆಚ್ಚು ದೃಢ ನಿಶ್ಚಯದಿಂದ ಕಾರ್ಯನಿರ್ವಹಿಸಲು ಸಹಕಾರಿಯಾಗುತ್ತದೆ: ಹಿಂದಿನ ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದ ಎಲ್ಲಾ ಯೋಜನೆಗಳನ್ನು ಈ ಚಿಂತನೆಯಿಂದಲೇ ಜಾರಿಗೊಳಿಸಲಾಗಿದೆ ಎಂದು ಪ್ರಧಾನಮಂತ್ರಿ ಅವರು ವಿವರಿಸಿದರು.
ಪ್ರತಿವರ್ಷ ಬಡವರು ಮತ್ತು ಮಧ್ಯಮವರ್ಗದವರ ಚಿಕಿತ್ಸೆಗಾಗಿ ಜನೌಷಧಿ ಯೋಜನೆಯನ್ನು ಆಯುಷ್ಮಾನ್ ಭಾರತ್ ನೊಂದಿಗೆ ಜಾರಿಗೊಳಿಸಿದ ಪರಿಣಾಮ ಲಕ್ಷಾಂತರ ಕೋಟಿ ರೂಪಾಯಿ ಚಿಕಿತ್ಸಾ ವೆಚ್ಚವನ್ನು ಉಳಿತಾಯ ಮಾಡಲು ಸಾಧ್ಯವಾಗಿದೆ. ಪ್ರತಿಯೊಬ್ಬರಿಗೂ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡಲು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಹಾಗೂ ಆಯುಷ್ಮಾನ್ ಭಾರತ್ ಯೋಜನೆಯ ಆರೋಗ್ಯ ಮೂಲ ಸೌಕರ್ಯಗಳು ನೆರವಾಗಿವೆ.
ಆಯುಷ್ಮಾನ್ ಭಾರತ್ ಡಿಜಿಟಲ್ ಆರೋಗ್ಯ ಅಭಿಯಾನ ರೋಗಿಗಳಿಗೆ ಸೌಲಭ್ಯವನ್ನು ವಿಸ್ತರಿಸುತ್ತಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಮೂಲ ಸೌಕರ್ಯ ಅಭಿಯಾನದ ಮೂಲಕ ಜಿಲ್ಲಾ ಮಟ್ಟದಲ್ಲಿ ಆಧುನಿಕ ಆರೋಗ್ಯ ಮೂಲ ಸೌಕರ್ಯ ಒದಗಿಸುತ್ತಿದ್ದು, ಇದನ್ನು ಬ್ಲಾಕ್ ಹಂತಕ್ಕೆ ಕೊಂಡೊಯ್ಯಲಾಗುತ್ತಿದೆ. ಪ್ರತಿಯೊಂದು ಜಿಲ್ಲೆಯಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ. ಇದೇ ರೀತಿ ಏಮ್ಸ್ ಆಸ್ಪತ್ರೆಗಳನ್ನು ಸ್ಥಾಪಿಸಲಾಗುತ್ತಿದೆ. ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಮೂಲಕ ವೈದ್ಯಕೀಯ ಶಿಕ್ಷಣವನ್ನು ವಿಸ್ತರಿಸಲಾಗುತ್ತಿದೆ ಮತ್ತು ಮುಂದಿನ ಹತ್ತು ವರ್ಷಗಳಲ್ಲಿ ದಾಖಲೆ ಪ್ರಮಾಣದಲ್ಲಿ ದೇಶ ವೈದ್ಯರ ಸಂಖ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವ ನಿರೀಕ್ಷೆ ಇದೆ ಎಂದರು.
ಗುಜರಾತ್ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, “ನಾನು ಕಚ್ ತೊರೆದರೂ, ಕಚ್ ನನ್ನನ್ನು ಬಿಡುತ್ತಿಲ್ಲ” ಎಂದರು. ಗುಜರಾತ್ ನಲ್ಲಿ ಇತ್ತೀಚೆಗೆ ವೈದ್ಯಕೀಯ ಮೂಲ ಸೌಕರ್ಯ ಮತ್ತು ಶಿಕ್ಷಣ ವಿಸ್ತರಣೆಯಾಗಿದೆ. ಇಂದು 9 ಏಮ್ಸ್ ಗಳು, ಮೂರು ಡಜನ್ ಗೂ ಹೆಚ್ಚು ವೈದ್ಯಕೀಯ ಕಾಲೇಜುಗಳಿದ್ದು, ಈ ಮುನ್ನ 9 ವೈದ್ಯಕೀಯ ಕಾಲೇಜುಗಳಿದ್ದವು. ವೈದ್ಯಕೀಯ ಸೀಟುಗಳ ಸಂಖ್ಯೆ 1100 ರಿಂದ 6000 ಕ್ಕೆ ಹೆಚ್ಚಳವಾಗಿವೆ. ರಾಜ್ ಕೋಟ್ ಏಮ್ಸ್ ಕಾರ್ಯಾಚರಣೆ ಮಾಡಿದೆ ಮತ್ತು ಅಹಮದಾಬಾದ್ ನಲ್ಲಿ ತಾಯಿ ಮತ್ತು ಶಿಶುವಿನ ಆರೋಗ್ಯಕ್ಕಾಗಿ 1500 ಹಾಸಿಗೆಗಳ ಆರೋಗ್ಯ ಸೌಕರ್ಯ ಕಲ್ಪಿಸಲಾಗಿದೆ. ಹೃದ್ರೋಗ ಮತ್ತು ಡಯಾಲಿಸಸ್ ಸೌಲಭ್ಯ ಹಲವು ಪಟ್ಟು ಹೆಚ್ಚಾಗಿದೆ.
ಆರೋಗ್ಯ ವಲಯದಲ್ಲಿ ರೋಗ ಬಾರದಂತೆ ತಡೆಯುವ ಚಿಕಿತ್ಸಾ ವಿಧಾನ ಕುರಿತು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು ಮತ್ತು ಶುಚಿತ್ವ ಕಾಪಾಡಿಕೊಳ್ಳುವ, ವ್ಯಾಯಾಮ ಮತ್ತು ಯೋಗಕ್ಕೆ ಹೆಚ್ಚು ಒತ್ತು ನೀಡುವಂತೆ ಸಲಹೆ ಮಾಡಿದರು. ಉತ್ತಮ ಆಹಾರ, ಶುದ್ಧ ನೀರು ಮತ್ತು ಪೌಷ್ಟಿಕಾಂಶದ ಮಹತ್ವ ಕುರಿತು ಒತ್ತಿ ಹೇಳಿದರು. ಕಚ್ ನಲ್ಲಿ ಯೋಗ ದಿನವನ್ನು ದೊಡ್ಡ ಮಟ್ಟದಲ್ಲಿ ಆಚರಿಸಲಾಗುತ್ತದೆ. ಇನ್ನು ಮುಂದೆ ಕಚ್ ಹಬ್ಬವನ್ನು ಪಟೇಲ್ ಸಮುದಾಯ ವಿದೇಶಗಳಲ್ಲೂ ಉತ್ತೇಜಿಸಬೇಕು ಮತ್ತು ಇದರಲ್ಲಿ ವಿದೇಶಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ 75 ನೇ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ಆಚರಿಸುವಂತೆ ಕರೆ ನೀಡಿದರು.
***
(Release ID: 1817148)
Visitor Counter : 210
Read this release in:
Odia
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam