ಪ್ರಧಾನ ಮಂತ್ರಿಯವರ ಕಛೇರಿ

ಭಾರತ-ಆಸ್ಟ್ರೇಲಿಯಾ ವರ್ಚುವಲ್ ಶೃಂಗಸಭೆಯ ಜಂಟಿ ಹೇಳಿಕೆ

Posted On: 21 MAR 2022 7:00PM by PIB Bengaluru

1.      ಭಾರತದ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಗೌರವಾನ್ವಿತ ಸ್ಕಾಟ್ ಮಾರಿಸನ್ ಅವರು 2022 ಮಾರ್ಚ್ 21ರಂದು ಭಾರತ-ಆಸ್ಟ್ರೇಲಿಯಾ ವರ್ಚುವಲ್ ಶೃಂಗಸಭೆ ನಡೆಸಿದರು.

2.      ಭಾರತ-ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರ ಪಾಲುದಾರಿಕೆ (ಸಿಎಸ್ ಪಿ) ಗೆ ತಮ್ಮ ಬದ್ಧತೆ ಮುಂದುವರಿಸುವುದನ್ನು ಉಭಯ ನಾಯಕರು ಪುನರುಚ್ಚರಿಸಿದರು. ಎರಡೂ ರಾಷ್ಟ್ರಗಳ ರಾಜಕೀಯ, ಆರ್ಥಿಕ, ಭದ್ರತೆ, ಸೈಬರ್, ತಂತ್ರಜ್ಞಾನ ಮತ್ತು ರಕ್ಷಣಾ ಸಹಕಾರವನ್ನು ಮತ್ತಷ್ಟು ದೀರ್ಘವಾಗಿಸುವಲ್ಲಿ ಗಣನೀಯ ಪ್ರಗತಿ ಸಾಧಿಸಿರುವುದನ್ನು ಅವರು ಮುಕ್ತಕಂಠದಿಂದ ಸ್ವಾಗತಿಸಿದರು. ದ್ವಿಪಕ್ಷೀಯ ಸಂಬಂಧವು ಪರಸ್ಪರ ನಂಬಿಕೆ, ತಿಳಿವಳಿಕೆ, ಸಾಮಾನ್ಯ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವದ ಹಂಚಿಕೆಯ ಮೌಲ್ಯಗಳು ಮತ್ತು ಕಾನೂನಿನ ಆಳ್ವಿಕೆಯ ಬಲವಾದ ಅಡಿಪಾಯಗಳ ಮೇಲೆ ಏಳಿಗೆಯಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಉಭಯ ರಾಷ್ಟ್ರಗಳ ನಿಕಟ ಸಹಕಾರವನ್ನು ಹೆಚ್ಚಿಸಲು ಅವರು ವಾರ್ಷಿಕ ಶೃಂಗಸಭೆಗಳನ್ನು ನಡೆಸಲು ಬದ್ಧರಾಗಿರುವುದಾಗಿ ಇಬ್ಬರೂ ನಾಯಕರು ಒಪ್ಪಿಗೆ ಸೂಚಿಸಿದರು.

3.      2023ರಲ್ಲಿ ಜರುಗಲಿರುವ ಜಿ-20 ಶೃಂಗಸಭೆಯ ಅಧ್ಯಕ್ಷ ಸ್ಥಾನವನ್ನು ಭಾರತ ಅಲಂಕರಿಸುವುದನ್ನು ಎದುರು ನೋಡುತ್ತಿರುವುದಾಗಿ ಹೇಳಿದ ನಾಯಕರು, ಜಾಗತಿಕ ಹಿತಾಸಕ್ತಿ ಮತ್ತು ಕಾಳಜಿಗಳ ಆರ್ಥಿಕ ವಿಷಯಗಳ ಬಗ್ಗೆ ನಿಕಟವಾಗಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

 

ಆರ್ಥಿಕ ಮತ್ತು ವ್ಯಾಪಾರ ಸಹಕಾರ

 

 

4.      ಆಸ್ಟ್ರೇಲಿಯಾ-ಇಂಡಿಯಾ ಉದ್ಯಮ ವ್ಯವಹಾರ ವಿನಿಮಯದ ಮೂಲಕ, ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಅಡಿ ಆರ್ಥಿಕ ಸಂಬಂಧವನ್ನು ಮತ್ತಷ್ಟು ಗಾಢವಾಗಿಸಲು ಬದ್ಧರಾಗಿರುವುದಾಗಿ ನಾಯಕರು ಒಪ್ಪಿಗೆ ಸೂಚಿಸಿದರು. ಆಸ್ಟ್ರೇಲಿಯಾ-ಇಂಡಿಯಾ ಮೂಲಸೌಕರ್ಯ ವೇದಿಕೆಯ ಆರಂಭ, ಬೆಂಗಳೂರಿನಲ್ಲಿ ಹೊಸ ರಾಯಭಾರಿ ಕಚೇರಿ (ಕಾನ್ಸುಲೇಟ್-ಜನರಲ್) ತೆರೆಯುವ ಆಸ್ಟ್ರೇಲಿಯಾದ ಉದ್ದೇಶ ಮತ್ತು ಮಾನದಂಡಗಳು, ಭವಿಷ್ಯದ ಕೌಶಲ್ಯಗಳ ಸಹಕಾರ ಸೇರಿದಂತೆ ದ್ವಿಪಕ್ಷೀಯ ವ್ಯಾಪಾರ ಮತ್ತು ಆಸ್ಟ್ರೇಲಿಯಾ-ಭಾರತ ನಾವೀನ್ಯತೆ ಜಾಲಗಳನ್ನು ಹೆಚ್ಚಿಸಲು ಹೊಸ ಉಪಕ್ರಮಗಳ ಘೋಷಣೆಯ ಉಲ್ಲೇಖಕ್ಕೆ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಮಾರಿಸನ್ ಸಂತಸ ವ್ಯಕ್ತಪಡಿಸಿದರು.

5.      ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (ಸಿಇಸಿಎ) ಸಂಧಾನಗಳಲ್ಲಿ ಆಗಿರುವ ಗಣನೀಯ ಪ್ರಗತಿಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಒಮ್ಮತದ ಅನೇಕ ಪ್ರಸ್ತಾವಗಳು ಅಥವಾ ಒಡಂಬಡಿಕೆಗಳು ಪೂರ್ಣವಾಗುವ ಅಂತಿಮ ಘಟ್ಟ  ತಲುಪಿರುವುದಕ್ಕೆ ಅವರು ತೃಪ್ತಿ ವ್ಯಕ್ತಪಡಿಸಿದರು. ಮಧ್ಯಂತರ ಸಿಇಸಿಎ ಶೀಘ್ರವೇ ಮುಕ್ತಾಯಗೊಳಿಸುವ ಬದ್ಧತೆ ಪುನರುಚ್ಚರಿಸಿದ ಅವರು, ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಹೆಚ್ಚಿಸಲು ಮತ್ತು ಸಿಎಸ್ ಪಿ ಯನ್ನು ಗಾಢವಾಗಿಸಲು, ವರ್ಷದ ಅಂತ್ಯದ ವೇಳೆಗೆ ಮಹತ್ವಾಕಾಂಕ್ಷೆಯ ಪೂರ್ಣ ಸಿಇಸಿಎಗಾಗಿ ಕೆಲಸ ಮುಂದುವರಿಸಲು ಒಪ್ಪಿಗೆ ಸೂಚಿಸಿದರು. ಪ್ರವಾಸೋದ್ಯಮ ಸಹಕಾರದ ಭಾರತ-ಆಸ್ಟ್ರೇಲಿಯಾ ತಿಳಿವಳಿಕೆ ಒಪ್ಪಂದದ ನವೀಕರಣ ಪ್ರಸ್ತಾವನೆಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.

6.      ಇಂಡಿಯಾ-ಆಸ್ಟ್ರೇಲಿಯಾ ದುಪ್ಪಟ್ಟು ತೆರಿಗೆ ನಿಯಂತ್ರಣ ಒಪ್ಪಂದದ (ಡಿಟಿಎಎ) ಅಡಿ, ಭಾರತೀಯ ಕಂಪನಿಗಳ ಸಾಗರೋತ್ತರ ಆದಾಯದ ತೆರಿಗೆ ಸಮಸ್ಯೆಗಳಿಗೆಆರಂಭದಲ್ಲೇ ಪರಿಹಾರ ಒದಗಿಸುವ ಪ್ರಾಮುಖ್ಯವನ್ನು ನಾಯಕರು ಒತ್ತಿ ಹೇಳಿದರು.

7.      ಮುಕ್ತ, ನ್ಯಾಯೋಚಿತ, ಎಲ್ಲರನ್ನೂ ಒಳಗೊಂಡ ಮತ್ತು ನಿಯಮ-ಆಧಾರಿತ ವ್ಯಾಪಾರ ಪರಿಸರ ಸೃಷ್ಟಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ಯೊಂದಿಗೆ ನಿಯಮಾಧಾರಿತ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ಎತ್ತಿಹಿಡಿಯುವ ಮತ್ತು ಬಲಪಡಿಸುವ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಜೂನ್‌ನಲ್ಲಿ ನಡೆಸಲು ಒಪ್ಪಿಗೆ ನೀಡಲಾದ ಎಂಸಿ12 ಶೃಂಗಸಭೆಗಾಗಿ ಎದುರು ನೋಡುತ್ತಿರುವುದಾಗಿ ತಿಳಿಸಿದ ಅವರು, ಪೂರೈಕೆ ಸರಪಳಿಗಳನ್ನು ನಿರ್ಮಿಸಲು, ಬಲಪಡಿಸಲು ಮತ್ತು ವೈವಿಧ್ಯಗೊಳಿಸಲು ಮತ್ತು ಪೂರೈಕೆ ಸರಪಳಿ ಅಡೆತಡೆಗಳನ್ನು ತಪ್ಪಿಸಲು ಒಟ್ಟಾಗಿ ಕೆಲಸ ಮಾಡುವ ಪ್ರಾಮುಖ್ಯ ಇದೆ ಎಂದು ಅವರು ಗಮನಿಸಿದರು.

 

ಹವಾಮಾನ ಬದಲಾವಣೆ, ಇಂಧನ, ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಸಹಕಾರ

8.      ಎರಡು ದೇಶಗಳ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರದ ಗಮನಾರ್ಹ ವಿಸ್ತಾರವನ್ನು ನಾಯಕರು ಗುರುತಿಸಿದರು.  ಆಸ್ಟ್ರೇಲಿಯಾ-ಇಂಡಿಯಾ ಕಾರ್ಯತಂತ್ರ ಸಂಶೋಧನಾ ನಿಧಿ(ಎಐಎಸ್ಆರ್ ಎಫ್) ವಿಸ್ತರಣೆಯನ್ನು ಸ್ವಾಗತಿಸಿದರು. ಇದು ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನೆಯ ಸಹಯೋಗದ ಆಧಾರ ಸ್ತಂಭವಾಗಿದೆ. ಇದರಿಂದ 2021ರ ಯಶಸ್ವೀ ಇಂಡಿಯಾ-ಆಸ್ಟ್ರೇಲಿಯಾ ವೃತ್ತಾಕಾರದ ಆರ್ಥಿಕತೆಯ ಹ್ಯಾಕಥಾನ್ ನಿರ್ಮಿಸುವ ಬದ್ಧತೆಯನ್ನು ಅವರು ಸ್ವಾಗತಿಸಿದರು.

9.      ಹವಾಮಾನ ಬದಲಾವಣೆ, ಇಂಧನ ಭದ್ರತೆ ಮತ್ತು ಉದ್ಯೋಗ ಸೃಷ್ಟಿ, ಕ್ವಾಡ್ ಶೃಂಗಸಭೆ, ಜಿ-20 ಶೃಂಗ, ಹವಾಮಾನ ಬದಲಾವಣೆಯ ಮಾರ್ಗಸೂಚಿ ಕುರಿತ ವಿಶ್ವಸಂಸ್ಥೆ ಸಮಾವೇಶ (ಯುಎನ್ಎಫ್ ಸಿಸಿಸಿ) ಮತ್ತು ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟದ ಮೂಲಕ ಅಂತಾರಾಷ್ಟ್ರೀಯ ಸಹಯೋಗ ಮುಂದುವರಿಸಲು, ಇಂಗಾಲ  ಹೊರಸೂಸುವಿಕೆ ಕಡಿಮೆ ಮಾಡಲು ರಾಷ್ಟ್ರೀಯ ಮಟ್ಟದ ಸೂಕ್ತ ಕ್ರಮಗಳನ್ನು ಉತ್ತೇಜಿಸಲು ನಾಯಕರು ತಮ್ಮ ಬದ್ಧತೆಯನ್ನು ಒತ್ತಿ ಹೇಳಿದರು. ಹವಾಮಾನ ಬದಲಾವಣೆಯನ್ನು ಎದುರಿಸಲು ಸಮರ್ಥನೀಯ ಬಳಕೆ ಮತ್ತು ಉತ್ಪಾದನೆ, ಮತ್ತು ಸಂಪನ್ಮೂಲ-ಸಮರ್ಥ, ವರ್ತುಲ ಆರ್ಥಿಕತೆಯ ಕೊಡುಗೆಗಳನ್ನು ಅವರು ಗಮನಿಸಿದರು. ಈ ಸಂದರ್ಭದಲ್ಲಿ, ನಾಯಕರು ಎಚ್ಚರಿಕೆಯ ಬಳಕೆ, ಹೆಚ್ಚು ಸುಸ್ಥಿರ ಜೀವನಶೈಲಿ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವ ಪ್ರಾಮುಖ್ಯವನ್ನು ಗಮನಿಸಿದರು. ಜಾಗರೂಕ ಬಳಕೆಯನ್ನು ಉತ್ತೇಜಿಸುವ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವ ಸುಸ್ಥಿರ ಜೀವನಶೈಲಿಗಾಗಿ ಜಾಗತಿಕ ಸಾಮೂಹಿಕ ಆಂದೋಲನದ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

10.    2022 ಫೆಬ್ರವರಿ 15ರಂದು ಸಚಿವ ಇಂಧನ ಸಚಿವ ಆರ್ ಕೆ ಸಿಂಗ್ ಮತ್ತು ಆಸ್ಟ್ರೇಲಿಯಾ ಇಂಧನ ಸಚಿವ ಟೇಲರ್ ನಡುವೆ ನಡೆದ 4ನೇ ಭಾರತ-ಆಸ್ಟ್ರೇಲಿಯಾ ಇಂಧನ ಭದ್ರತೆ ವ್ಯಾಪಕ ಇಂಧನ ಬಳಕೆ ಮತ್ತು ಸಂಪನ್ಮೂಲ ಸಹಯೋಗ ಕುರಿತ ಮಾತುಕತೆಯನ್ನು ನಾಯಕರು ಸ್ವಾಗತಿಸಿದರು. ಹೊಸ ಮತ್ತು ನವೀಕರಿಸಬಹುದಾದ ಇಂಧನ ತಂತ್ರಜ್ಞಾನದ ಕುರಿತು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಉದ್ದೇಶ ಪತ್ರವನ್ನು ಅವರು ಸ್ವಾಗತಿಸಿದರು, ಇದು ಕಡಿಮೆ ಮತ್ತು ಶೂನ್ಯ ಹೊರಸೂಸುವಿಕೆಯ ತಂತ್ರಜ್ಞಾನಗಳ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ, ಇದು ಇಂಗಾಲ ಹೊರಸೂಸುವ ಪರ್ಯಾಯಗಳೊಂದಿಗೆ ಸ್ಪರ್ಧಾತ್ಮಕವಾಗಿದೆ, ಸ್ವಚ್ಛ ತಂತ್ರಜ್ಞಾನಗಳ ಮೇಲೆ ಸಹಕಾರ ತೀವ್ರಗೊಳಿಸಲು ಬದ್ಧವಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಆವಿಷ್ಕಾರ ಕಾರ್ಯಕ್ರಮ ವೇದಿಕೆಗಳ ಮೂಲಕ ಸಹಕಾರ ಹೆಚ್ಚಿಸಲು ಪೂರಕವಾಗಿದೆ. 2022ರಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಇಂಧನ ಏಜೆನ್ಸಿ(ಐಇಎ)ಯ ಸಚಿವರ ಮಟ್ಟದ ಸಭೆಗೆ ಮೊದಲೇ ಬಹುಪಕ್ಷೀಯ ಇಂಧನ ಸಹಕಾರ ಹೊಂದುವುದನ್ನು ಉಭಯ ನಾಯಕರು ಸ್ವಾಗತಿಸಿದರು. ಐಇಎಯ ಸ್ವಚ್ಚ ಇಂಧನ ಪರಿವರ್ತನೆ ಕಾರ್ಯಕ್ರಮಕ್ಕೆ ಆಸ್ಟ್ರೇಲಿಯಾ ಸರ್ಕಾರ 2 ದಶಲಕ್ಷ ಡಾಲರ್ ನಿಧಿ ಕೊಡುಗೆ ಸೇರಿದಂತೆ, ಐಇಎಯ ಭಾರತದ ಚಟುವಟಿಕೆಗಳನ್ನು ಬೆಂಬಲಿಸಲು, ಭಾರತಕ್ಕೆ ಐಇಎ ಸದಸ್ಯತ್ವ ಹಾದಿಯನ್ನು ಮುನ್ನಡೆಸಲು ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. 2022 ಜುಲೈ ನಲ್ಲಿ ನಡೆಯಲಿರುವ ಇಂಡೋ-ಪೆಸಿಫಿಕ್‌ ವಲಯಕ್ಕೆ ಸ್ವಚ್ಛ ಇಂಧನ ಪೂರೈಸುವ ಸಿಡ್ನಿ ಇಂಧನ ವೇದಿಕೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು

ಪೂರೈಸುವ ಸಿಡ್ನಿ ಇಂಧನ ವೇದಿಕೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನಾಯಕರು ಎದುರು ನೋಡುತ್ತಿದ್ದಾರೆ.

11.    ಜಾಗತಿಕ ಕಡಿಮೆ ಇಂಗಾಲದ ಪರಿವರ್ತನೆಗೆ ಶುದ್ಧ ತಂತ್ರಜ್ಞಾನಗಳ ತ್ವರಿತ ಅಭಿವೃದ್ಧಿ ಮತ್ತು ನಿರ್ಣಾಯಕ ಖನಿಜಗಳಿಗೆ ಸಮಾನ ಲಭ್ಯತೆಯ ಅಗತ್ಯವಿರುವುದನ್ನು ಕೂಡ ಗುರುತಿಸಲಾಯಿತು. ನಿರ್ಣಾಯಕ ಖನಿಜಗಳ ಕುರಿತ ಸಹಕಾರ ಮತ್ತು ಸುರಕ್ಷಿತ, ಸಮರ್ಥನೀಯ ನಿರ್ಣಾಯಕ ಖನಿಜಗಳ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ನಾಯಕರು ತಮ್ಮ ಹಂಚಿಕೆಯ ಬದ್ಧತೆ ಪುನರುಚ್ಚರಿಸಿದರು. ಸಂಶೋಧನೆ ಮತ್ತು ವೈಜ್ಞಾನಿಕ ಸಂಸ್ಥೆಗಳ ನಡುವಿನ ತಾಂತ್ರಿಕ ವಿನಿಮಯ, ಮತ್ತು ದ್ವಿಪಕ್ಷೀಯ ವ್ಯವಹಾರ ಮತ್ತು ಹೂಡಿಕೆ ಸೇರಿದಂತೆ ಭಾರತ-ಆಸ್ಟ್ರೇಲಿಯಾ ಜಂಟಿ ಕಾರ್ಯಕಾರಿ ಗುಂಪಿನ ಅನುಷ್ಠಾನ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. ನಿರ್ಣಾಯಕ ಖನಿಜ ಯೋಜನೆಗಳ ಜಂಟಿ ಸಹಕಾರಕ್ಕಾಗಿ ಭಾರತದ ಖನೀಜ್ ಬಿಡೇಶ್ ಲಿಮಿಟೆಡ್(ಕೆಎಬಿಐಎಲ್) ಮತ್ತು ಆಸ್ಟ್ರೇಲಿಯಾದ ಕ್ರಿಟಿಕಲ್ ಮಿನರಲ್ಸ್ ಫೆಸಿಲಿಟೇಶನ್ ಆಫೀಸ್ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು.

12.    2022 ಫೆಬ್ರವರಿ 12ರಂದು ಸಚಿವರಾದ ಪೇನ್ ಮತ್ತು ಡಾ. ಎಸ್. ಜೈಶಂಕರ್ ನಡುವೆ ನಡೆದ ಭಾರತ-ಆಸ್ಟ್ರೇಲಿಯಾ ವಿದೇಶಾಂಗ ಸಚಿವರ ಸೈಬರ್ ಅಪರಾಧ ನಿಯಂತ್ರಣ ಮಾತುಕತೆಯನ್ನು  ನಾಯಕರು ಸ್ವಾಗತಿಸಿದರು. ಸೈಬರ್ ಆಡಳಿತ, ಸೈಬರ್ ಭದ್ರತೆ, ಸಾಮರ್ಥ್ಯ ವೃದ್ಧಿ, ಸೈಬರ್ ಅಪರಾಧ, ಡಿಜಿಟಲ್ ಆರ್ಥಿಕತೆ, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಸಹಕಾರವನ್ನು ಅವರು ಸ್ವಾಗತಿಸಿದರು. ನಮ್ಮ ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಮಾನವ ಹಕ್ಕುಗಳ ಗೌರವಕ್ಕೆ ಅನುಗುಣವಾಗಿ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಬೇಕು, ಅಭಿವೃದ್ಧಿಪಡಿಸಬೇಕು, ಆಡಳಿತ ಮಾಡಬೇಕು ಮತ್ತು ಬಳಸಬೇಕು ಎಂದು ಅವರು ಒತ್ತಿ ಹೇಳಿದರು. ಮುಕ್ತ, ಸುರಕ್ಷಿತ, ಉಚಿತ, ಸ್ಥಿರ, ಶಾಂತಿಯುತ ಮತ್ತು ಅಂತರ್-ಕಾರ್ಯಾಚರಣೆಯ ಸೈಬರ್ ಕ್ಷೇತ್ರ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಬದ್ಧವಾಗಿರುವ ತಂತ್ರಜ್ಞಾನಗಳಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಅಂತಾರಾಷ್ಟ್ರೀಯ ಶಾಂತಿ ಮತ್ತು ಸ್ಥಿರತೆ ಹಾಳು ಮಾಡಲು ಸೈಬರ್‌ ಕ್ಷೇತ್ರ ಮತ್ತು ಸೈಬರ್ ಶಕ್ತ ತಂತ್ರಜ್ಞಾನಗಳನ್ನು ಬಳಸುವ ಪ್ರಯತ್ನಗಳನ್ನು ಅವರು ಖಂಡಿಸಿದರು. ಸೈಬರ್‌ಸ್ಪೇಸ್‌ಗಾಗಿ ಅಂತಾರಾಷ್ಟ್ರೀಯ ಮಾನದಂಡಗಳು, ಆಚರಣೆಗಳು ಮತ್ತು ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವಲ್ಲಿ ವಿಶ್ವಸಂಸ್ಥೆ ಸೇರಿದಂತೆ ವಿವಿಧ ಬಹುಪಕ್ಷೀಯ ವೇದಿಕೆಗಳಲ್ಲಿ ಪರಸ್ಪರ ಸಹಕಾರ  ಬಲಪಡಿಸಲು, ಸಹಕಾರದಿಂದ ಕೆಲಸ ಮಾಡಲು ಬದ್ಧರಾಗಿರುವುದಾಗಿ ಅವರು ಒಪ್ಪಿಕೊಂಡರು.

13.    ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನದ ಮೇಲೆ, ವೈವಿಧ್ಯಮಯ ಮತ್ತು ವಿಶ್ವಾಸಾರ್ಹ ತಂತ್ರಜ್ಞಾನ ಪೂರೈಕೆ ಸರಪಳಿಗಳನ್ನು ಸ್ಥಾಪಿಸುವಲ್ಲಿ ನಿಕಟ ಸಹಕಾರದ ಪ್ರಾಮುಖ್ಯವನ್ನು ನಾಯಕರು ಗುರುತಿಸಿದರು. ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನ ನೀತಿಗಾಗಿ ಭಾರತ-ಆಸ್ಟ್ರೇಲಿಯಾ ಶ್ರೇಷ್ಠತಾ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸುವ ಒಪ್ಪಂದವನ್ನು ಅವರು ಸ್ವಾಗತಿಸಿದರು.

14.    ಭಾರತದ ಗಗನ್ ಯಾನ್ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಆಸ್ಟ್ರೇಲಿಯಾದ ನಿರಂತರ ಬೆಂಬಲ ಸೇರಿದಂತೆ ಭಾರತ ಮತ್ತು ಆಸ್ಟ್ರೇಲಿಯಾ ಬಾಹ್ಯಾಕಾಶ ಕ್ಷೇತ್ರದಲ್ಲಿ ಒಟ್ಟಾಗಿ ತೊಡಗಿಸಿಕೊಳ್ಳುವ ಪ್ರಾಮುಖ್ಯವನ್ನು ನಾಯಕರು ಒತ್ತಿ ಹೇಳಿದರು. ಭಾರತದ ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳಿಂದ ಉಂಟಾದ ದ್ವಿಪಕ್ಷೀಯ ಬಾಹ್ಯಾಕಾಶ ಸಹಕಾರ ವಿಸ್ತರಣೆಯನ್ನು ಉಭಯ ನಾಯಕರು ಪ್ರೋತ್ಸಾಹಿಸಿದರು. ಪ್ರಧಾನ ಮಂತ್ರಿ ಮಾರಿಸನ್ ಅವರು ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆಯ ಅಂತಾರಾಷ್ಟ್ರೀಯ ಬಾಹ್ಯಾಕಾಶ ಹೂಡಿಕೆ ಉಪಕ್ರಮದಲ್ಲಿ ಸಮರ್ಪಿತ ಭಾರತದ ಬಾಹ್ಯಾಕಾಶ ಸಂಸ್ಥೆ ಸೇರಿದೆ ಎಂದು ಘೋಷಿಸಿ, ಸಂತಸ ವ್ಯಕ್ತಪಡಿಸಿದರು.

 

 

ಜನರಿಂದ ಜನರ ಸಂಬಂಧಗಳು

15.    ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಲಿಷ್ಠವಾಗಿರುವ ಜನರ ನಡುವಿನ ಸಂಪರ್ಕವನ್ನು ನಾಯಕರು ಒಪ್ಪಿಕೊಂಡರು. ಪ್ರಧಾನ ಮಂತ್ರಿ ಮಾರಿಸನ್ ಅವರು ಹೊಸ ವಿದ್ಯಾರ್ಥಿವೇತನ ಮೈತ್ರಿ ಕಾರ್ಯಕ್ರಮ, ಮೈತ್ರಿ ಧನಸಹಾಯ ಮತ್ತು ಫೆಲೋಶಿಪ್ ಕಾರ್ಯಕ್ರಮ, ಆಸ್ಟ್ರೇಲಿಯಾ-ಇಂಡಿಯಾ ಮೈತ್ರಿ ಸಾಂಸ್ಕೃತಿಕ ಸಹಭಾಗಿತ್ವದ ಜತೆಗೆ ಆಸ್ಟ್ರೇಲಿಯಾದಲ್ಲಿ “ಸೆಂಟರ್ ಫಾರ್ ಆಸ್ಟ್ರೇಲಿಯಾ-ಇಂಡಿಯಾ ರಿಲೇಶನ್ಸ್” ಕೇಂದ್ರ ಸ್ಥಾಪಿಸುವುದಾಗಿ ಘೋಷಿಸಿದರು. ವಲಸೆ ಮತ್ತು ಚಲನಶೀಲತೆಯ ಮೇಲಿನ ಉದ್ದೇಶ ಪತ್ರವನ್ನು ಸ್ವಾಗತಿಸಿದರು. ವಲಸೆ ಮತ್ತು ಚಲನಶೀಲತೆಯ  ಪಾಲುದಾರಿಕೆ ಒಪ್ಪಂದದ ಆರಂಭಿಕ ತೀರ್ಮಾನಕ್ಕೆ ಕರೆ ನೀಡಿದರು, ಇದು ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಉಪಯುಕ್ತವಾಗಲಿದೆ. ಆಸ್ಟ್ರೇಲಿಯಾ ಸರ್ಕಾರವು 29 ಕಲಾಕೃತಿಗಳನ್ನು ಹಿಂದಿರುಗಿಸಿರುವುದನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ಭಾರತದ ಪ್ರಸಾರ ಭಾರತಿ ಮತ್ತು ಆಸ್ಟ್ರೇಲಿಯದ ಎಸ್ ಬಿ ಎಸ್ ನಡುವೆ ಪ್ರಸಾರ ರಂಗದಲ್ಲಿ ಸಹಕಾರ ಮತ್ತು ಸಹಯೋಗದ ತಿಳಿವಳಿಕೆ ಒಪ್ಪಂದವನ್ನು ಉಭಯ ನಾಯಕರು ಸ್ವಾಗತಿಸಿದರು.

16.    ಲಿಂಗ ಸಮಾನತೆ ಸಾಧಿಸಲು ಎರಡೂ ದೇಶಗಳು ಕೈಗೊಂಡಿರುವ ಕ್ರಮಗಳನ್ನು ಗುರುತಿಸಲಾಯಿತು. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ ಲಿಂಗ ತಾರತಮ್ಯ ಪರಿಹರಿಸುವ ಮೂಲಕ ಮಹಿಳೆಯರು ಮತ್ತು ಯುವತಿಯರ ಸಬಲೀಕರಣವನ್ನು ಸಾಧಿಸಲು ಮುಂದೆಯೂ ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡರು.

17.    ದೀರ್ಘಾವಧಿಯ ಭಾರತ-ಆಸ್ಟ್ರೇಲಿಯಾ ಶಿಕ್ಷಣ ಮತ್ತು ಕೌಶಲ್ಯ ಸಂಬಂಧ ವಿಸ್ತರಿಸುವ ಮತ್ತು ಉತ್ತಮಗೊಳಿಸುವ ದೃಷ್ಟಿಯಿಂದ ಉಭಯ ದೇಶಗಳಲ್ಲಿನ ವಿಭಿನ್ನ ವ್ಯವಸ್ಥೆಗಳನ್ನು ಅಂಗೀಕರಿಸುವ ಉದ್ದೇಶದಿಂದ, ಶಿಕ್ಷಣ ಅರ್ಹತೆಗಳ ಗುರುತಿಸುವಿಕೆ ಕಾರ್ಯಪಡೆ ಸ್ಥಾಪಿಸುವ ವ್ಯವಸ್ಥೆಯನ್ನು ನಾಯಕರು ಸ್ವಾಗತಿಸಿದರು. ಕಾರ್ಯಪಡೆ ಸ್ಥಾಪನೆಯಾದ 6 ತಿಂಗಳೊಳಗೆ, ಉನ್ನತ ಶಿಕ್ಷಣ  ಪ್ರವೇಶ ಅರ್ಹತೆಗಳ ಗುರುತಿಸುವಿಕೆಗಾಗಿ ವ್ಯವಸ್ಥೆಗಳನ್ನು ಸುಧಾರಿಸಲು ಮತ್ತು ಉದ್ಯೋಗಾವಕಾಶಗಳನ್ನು ಬೆಂಬಲಿಸಲು ಸಹಕಾರಿ ಕಾರ್ಯವಿಧಾನವನ್ನು ನೀಡುತ್ತದೆ.

 

ಕೋವಿಡ್-19 ಸಹಕಾರ

18.    ಕೋವಿಡ್-19 ಲಸಿಕೆ ಪ್ರಮಾಣಪತ್ರ ಪರಿಹಾರಗಳ ಜಾಗತಿಕ ಪರಸ್ಪರ ಕಾರ್ಯಸಾಧ್ಯತೆಯ ಪ್ರಾಮುಖ್ಯವನ್ನು ನಾಯಕರು ಒಪ್ಪಿಕೊಂಡರು. ಪ್ರಧಾನ ಮಂತ್ರಿ ಮಾರಿಸನ್ ಅವರು ಭಾರತದ ಲಸಿಕೆ ಮೈತ್ರಿ ಉಪಕ್ರಮ ಮತ್ತು ಜಾಗತಿಕ ಲಸಿಕೆ ಪ್ರಯತ್ನಗಳಲ್ಲಿ ಭಾರತ ನಡೆಸಿದ ಮಹತ್ವದ ಪಾತ್ರಗಳನ್ನು ಸ್ವಾಗತಿಸಿದರು.

19.    ಕ್ವಾಡ್ ಮತ್ತು ಕೊವ್ಯಾಕ್ಸ್ ಮೂಲಕ ತಮ್ಮ ಬಲವಾದ ಸಹಕಾರ ಗುರುತಿಸಿದ ನಾಯಕರು, ಜಾಗತಿಕವಾಗಿ ಗುಣಮಟ್ಟದ, ಸುರಕ್ಷಿತ, ಪರಿಣಾಮಕಾರಿ ಮತ್ತು ಕೈಗೆಟುಕುವ ಕೋವಿಡ್-19 ಲಸಿಕೆ, ಚಿಕಿತ್ಸೆಗಳು ಮತ್ತು ನಿರ್ಣಾಯಕ ವೈದ್ಯಕೀಯ ಸರಬರಾಜುಗಳಿಗೆ ನ್ಯಾಯಯುತ, ಸಮಯೋಚಿತ ಮತ್ತು ಸಮಾನ ಲಭ್ಯತೆ ಉತ್ತೇಜಿಸುವ ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದರು. ಇಂಡೋ-ಪೆಸಿಫಿಕ್ ಮತ್ತು ಜಾಗತಿಕ ಪಾಲುದಾರರಿಗೆ ಗುಣಮಟ್ಟದ ಲಸಿಕೆಗಳ ವಿತರಣೆ ಖಚಿತಪಡಿಸಲು ಅವರು ತಮ್ಮ ನಿರಂತರ ಸಹಕಾರಕ್ಕೆ ಒತ್ತು ನೀಡಿದರು.

 

ಭದ್ರತೆ ಮತ್ತು ರಕ್ಷಣಾ ಸಹಕಾರ

20.    ಭದ್ರತೆ ಮತ್ತು ರಕ್ಷಣಾ ಬೆದರಿಕೆಗಳ ಸವಾಲುಗಳನ್ನು ಎದುರಿಸಲು ಹಾಗು ಸಹಕಾರವನ್ನು ಮತ್ತಷ್ಟು ಗಾಢವಾಗಿಸಲು ಉಭಯ ನಾಯಕರು ಸಮ್ಮತಿಸಿದರು. ಜನರಲ್ ಬಿಪಿನ್ ರಾವತ್ ಅವರ ‘ಭಾರತ-ಆಸ್ಟ್ರೇಲಿಯಾ ಯುವ ರಕ್ಷಣಾ ಅಧಿಕಾರಿ ವಿನಿಮಯ ಕಾರ್ಯಕ್ರಮ’ ಸ್ಥಾಪನೆಯನ್ನು ಸ್ವಾಗತಿಸಿದರು. ಸಾಗರ ಭಾಗಗಳ ಮಾಹಿತಿ ವಿನಿಮಯ ಜಾಗೃತಿ ಉಪಕ್ರಮಗಳನ್ನು ಸ್ವಾಗತಿಸಿದರು. ಇಂಡೋ- ಪೆಸಿಫಿಕ್‌ ವಲಯದಲ್ಲಿ ಭದ್ರತೆಯನ್ನು ನಿಕಟವಾಗಿ ಸಂಘಟಿಸಲು ರಕ್ಷಣಾ ಮಾಹಿತಿ ಹಂಚಿಕೆ ವ್ಯವಸ್ಥೆಗಳ ನಿರ್ಮಾಣಕ್ಕೆ ತಮ್ಮ ಬದ್ಧತೆಯನ್ನು ದೃಢಪಡಿಸಿದರು. ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ಆಯೋಜಿಸಿರುವ ಇಂಡೋ-ಪೆಸಿಫಿಕ್ ಸಮರಭ್ಯಾಸದಲ್ಲಿ ಭಾರತದ ಭಾಗವಹಿಸುವಿಕೆಯನ್ನು ಎದುರು ನೋಡುತ್ತಿರುವುದಾಗಿ ಅವರು ತಿಳಿಸಿದರು.

21.    ದೀರ್ಘ ಕಾರ್ಯಾಚರಣೆಯ ರಕ್ಷಣಾ ಸಹಕಾರ ಸುಗಮಗೊಳಿಸುವಲ್ಲಿ ಪರಸ್ಪರ ಲಭ್ಯತೆ ವ್ಯವಸ್ಥೆಗಳ ಪ್ರಾಮುಖ್ಯವನ್ನು ಉಭಯ ನಾಯಕರು ಪ್ರತಿಪಾದಿಸಿದರು. ಮುಕ್ತ ಮತ್ತು ಮುಕ್ತ ನಿರ್ಣಾಯಕ ಪ್ರಾದೇಶಿಕ ಸಾಗರ ಕಾರಿಡಾರ್‌ಗಳಿಗೆ ಅದರ ಕೊಡುಗೆ ಅಪಾರವಿರುವುದಕ್ಕೆ ಒತ್ತು ನೀಡಿದ ಅವರು, ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಮತ್ತಷ್ಟು ರಕ್ಷಣಾ ಸಹಕಾರದ ಅವಕಾಶಗಳನ್ನು ಅನುಸರಿಸುವುದನ್ನು ಪುನರುಚ್ಚರಿಸಿದರು.

22.    ಭಯೋತ್ಪಾದನೆಯು ನಮ್ಮ ಪ್ರದೇಶದ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆಯಾಗಿ ಉಳಿದಿದೆ. ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳನ್ನು ಬಲವಾಗಿ ಖಂಡಿಸಲಾಯಿತು. ಗಡಿಯಾಚೆಗಿನ ಭಯೋತ್ಪಾದನೆಗಾಗಿ ಭಯೋತ್ಪಾದಕರು ಅಡಗುತಾಣಗಳನ್ನು ಬಳಸುತ್ತಾರೆ. ತಮ್ಮ ನಿಯಂತ್ರಣದಲ್ಲಿರುವ ಯಾವುದೇ ಪ್ರದೇಶವನ್ನು ಭಯೋತ್ಪಾದಕ ದಾಳಿಗಳಿಗೆ ಬಳಸದಂತೆ ಖಚಿತಪಡಿಸಿಕೊಳ್ಳಲು ಮತ್ತು ಅಂತಹ ದಾಳಿಯ ಅಪರಾಧಿಗಳನ್ನು ತ್ವರಿತವಾಗಿ ನ್ಯಾಯಾಂಗದ ಕಟಕಟೆಗೆ ತರಲು ಎಲ್ಲಾ ದೇಶಗಳು ತಕ್ಷಣದ, ನಿರಂತರ, ಪರಿಶೀಲಿಸಬಹುದಾದ ಮತ್ತು ಬದಲಾಯಿಸಲಾಗದ ಕ್ರಮಗಳನ್ನು ತೆಗೆದುಕೊಳ್ಳುವ ತುರ್ತು ಅಗತ್ಯವಿದೆ ಎಂದು ಪುನರುಚ್ಚರಿಸಲಾಯಿತು. ದ್ವಿಪಕ್ಷೀಯವಾಗಿ ಮತ್ತು ಕ್ವಾಡ್ ಸಮಾಲೋಚನೆಗಳಲ್ಲಿ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಮಾಹಿತಿ ಹಂಚಿಕೊಳ್ಳಲು ಮತ್ತು ಭಯೋತ್ಪಾದನಾ ನಿಗ್ರಹ ಪ್ರಯತ್ನಗಳ ಮೇಲೆ ಸಮನ್ವಯ ಮುಂದುವರಿಸಲು ಅವರು ಒಪ್ಪಿಗೆ ಸೂಚಿಸಿದರು.

 

ಪ್ರಾದೇಶಿಕ ಮತ್ತು ಬಹುಪಕ್ಷೀಯ ಸಹಕಾರ

23.    ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ ಸಂಘರ್ಷ ಮತ್ತು ಮಾನವೀಯ ಬಿಕ್ಕಟ್ಟಿನ ಬಗ್ಗೆ ಉಭಯ ನಾಯಕರು ತಮ್ಮ ಗಂಭೀರ ಕಾಳಜಿ ವ್ಯಕ್ತಪಡಿಸಿದರು. ಯುದ್ಧವನ್ನು ತಕ್ಷಣವೇ ನಿಲ್ಲಿಸುವ ಅಗತ್ಯವನ್ನು ಅವರು ಪುನರುಚ್ಚರಿಸಿದರು. ಸಮಕಾಲೀನ ಜಾಗತಿಕ ಕ್ರಮವನ್ನು ವಿಶ್ವಸಂಸ್ಥೆಯ ನಾಗರಿಕ ಸನ್ನದು, ಅಂತಾರಾಷ್ಟ್ರೀಯ ಕಾನೂನು ಮತ್ತು ಸಾರ್ವಭೌಮತ್ವ ಮತ್ತು ರಾಜ್ಯಗಳ ಪ್ರಾದೇಶಿಕ ಸಮಗ್ರತೆಯ ಗೌರವದ ಮೇಲೆ ನಿರ್ಮಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. ಇಂಡೋ-ಪೆಸಿಫಿಕ್‌ ವಲಯಕ್ಕೆ  ಈ ಸಮಸ್ಯೆ ಮತ್ತು ಅದರ ವ್ಯಾಪಕ ಪರಿಣಾಮಗಳನ್ನು ಹತ್ತಿಕ್ಕಲು ನಿಕಟವಾಗಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಒಪ್ಪಿಕೊಂಡರು.

24.    ದೃಢವಾದ ಪ್ರಾದೇಶಿಕ ವಾಸ್ತುಶಿಲ್ಪದಿಂದ ಬೆಂಬಲಿತವಾಗಿರುವ ಇಂಡೋ-ಪೆಸಿಫಿಕ್‌ ವಲಯದ ಅಭಿವೃದ್ಧಿಗೆ ನಾಯಕರು ಮುಕ್ತ ಮತ್ತು ನಿಯಮ ಆಧರಿತ ತಮ್ಮ ಹಂಚಿಕೆಯ ಬದ್ಧತೆಯನ್ನು ವ್ಯಕ್ತಪಡಿಸಿದರು. ಆಸಿಯಾನ್ ಅದರ ಕೇಂದ್ರದಲ್ಲಿದೆ. ಎಲ್ಲಾ ರಾಜ್ಯಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ದೇಶಗಳು ಮಿಲಿಟರಿ, ಆರ್ಥಿಕ ಮತ್ತು ರಾಜಕೀಯ ಬಲಾತ್ಕಾರದಿಂದ ಮುಕ್ತವಾಗಿರಬೇಕು. ಈ ಪ್ರದೇಶದ ಸಮಗ್ರ ಮತ್ತು ಸಮೃದ್ಧ ಅಭಿವೃದ್ಧಿಗೆ ಬದ್ಧತೆ ತೋರಬೇಕು ಎಂದರು.

25.    ಪ್ರಾದೇಶಿಕ ಸ್ಥಿರತೆ ಮತ್ತು ಸಮೃದ್ಧಿ ಉತ್ತೇಜಿಸಲು ಕ್ವಾಡ್‌ನ ಸಕಾರಾತ್ಮಕ ಮತ್ತು ಮಹತ್ವಾಕಾಂಕ್ಷೆಯ ಕಾರ್ಯಸೂಚಿ ಮುನ್ನಡೆಸುವಲ್ಲಿ ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕ ನಡುವಿನ ಸಹಕಾರಕ್ಕೆ ನಾಯಕರು ತಮ್ಮ ಬದ್ಧತೆಯನ್ನು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ನಡೆದ 2022 ಮಾರ್ಚ್ ಕ್ವಾಡ್ ನಾಯಕರ ವರ್ಚುವಲ್ ಸಭೆಯನ್ನು ಸ್ವಾಗತಿಸಿದರು. ಮುಂಬರುವ ತಿಂಗಳುಗಳಲ್ಲಿ ನಡೆಯಲಿರುವ ವೈಯಕ್ತಿಕ ನಾಯಕರ ಸಭೆಯನ್ನು ಎದುರು ನೋಡುತ್ತಿರುವುದಾಗಿ ಅವರು ತಿಳಿಸಿದರು. ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಿಕಟ ಸಹಕಾರವನ್ನು ಅವರು ಸ್ವಾಗತಿಸಿದರು.

26.    ಆಸ್ಟ್ರೇಲಿಯಾ-ಯುನೈಟೆಡ್ ಕಿಂಗ್ ಡಂ-ಅಮೆರಿಕ ಪಾಲುದಾರಿಕೆಯ ಕುರಿತು ಪ್ರಧಾನ ಮಂತ್ರಿ ಮಾರಿಸನ್ ಅವರ ವಿವರಣೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸದಿರಲು ಮತ್ತು ನಿಶಸ್ತ್ರೀಕರಣದ ಉನ್ನತ ಗುಣಮಟ್ಟ ಎತ್ತಿಹಿಡಿಯುವ ಆಸ್ಟ್ರೇಲಿಯಾ ಬದ್ಧತೆಯನ್ನು ಗುರುತಿಸಲಾಯಿತು.

27.    ಹಿಂದೂ ಮಹಾಸಾಗರ ಪ್ರದೇಶದಲ್ಲಿ ಮತ್ತು ಹಿಂದೂ ಮಹಾಸಾಗರ ಭಾಗದ ಇತರ ದೇಶಗಳೊಂದಿಗೆ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಾಯಕರು ತಮ್ಮ ಬದ್ಧತೆ ದೃಢಪಡಿಸಿದರು. ಇದರಲ್ಲಿ ಹಿಂದೂ ಮಹಾಸಾಗರದ ರಿಮ್ ಸಂಘಟನೆಗೆ ನೀಡುವ ಬೆಂಬಲವೂ ಸೇರಿದೆ. ಸಮುದ್ರ ಮತ್ತು ವಿಪತ್ತು ನಿರ್ವಹಣಾ ಸಿದ್ಧತೆ, ವ್ಯಾಪಾರ, ಹೂಡಿಕೆ ಮತ್ತು ಸಂಪರ್ಕದಲ್ಲಿ ಹಿಂದೂ ಮಹಾಸಾಗರದಲ್ಲಿ ಆಸ್ಟ್ರೇಲಿಯಾದ ಹೆಚ್ಚಿನ ತೊಡಗಿಸಿಕೊಳ್ಳುವಿಕೆ ನಿರ್ಧಾರವನ್ನು ಪ್ರಧಾನಿ ಮೋದಿ ಸ್ವಾಗತಿಸಿದರು.

28.    ಪೆಸಿಫಿಕ್‌ ವಲಯದ ಚೇತರಿಕೆಗೆ ಬೆಂಬಲ ನೀಡಲು ನಡೆಯುತ್ತಿರುವ ಸಹಕಾರ ಕುರಿತು ಚರ್ಚಿಸಿದರು. ಹಂಗಾ ಟೋಂಗಾ-ಹಂಗಾಹಾ'ಪೈ ಜ್ವಾಲಾಮುಖಿ ಸ್ಫೋಟ, ಸುನಾಮಿ ಮತ್ತು ಕೋವಿಡ್-19 ಕಾಣಿಸಿಕೊಂಡಾಗ ಭಾರತ ನೀಡಿದ  ಸಹಾಯವನ್ನು ಪ್ರಧಾನ ಮಂತ್ರಿ ಮಾರಿಸನ್ ಸ್ವಾಗತಿಸಿದರು. ಈ ಪೆಸಿಫಿಕ್ ಪಾಲುದಾರರಿಗೆ ಭಾರತದ ಮಾನವೀಯ ನೆರವು ಮತ್ತು ವಿಕೋಪ ಪರಿಹಾರ ವಿತರಣೆ ಬೆಂಬಲಿಸುವಲ್ಲಿ ಆಸ್ಟ್ರೇಲಿಯಾ ನಿರ್ವಹಿಸಿದ ಪಾತ್ರವನ್ನು ಪ್ರಧಾನಿ ಮೋದಿ ಒಪ್ಪಿಕೊಂಡರು.

29.    ಇಂಡೋ-ಪೆಸಿಫಿಕ್ ಪ್ರದೇಶದ ಎಲ್ಲಾ ಸಾಗರಗಳಲ್ಲಿ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಚಲಾಯಿಸಲು ಸಾಧ್ಯವಾಗುವ ಪ್ರಮುಖತೆಗೆ ನಾಯಕರು ಒತ್ತು ನೀಡಿದರು. ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ, ವಿಶೇಷವಾಗಿ ಸಾಗರ ಕಾನೂನಿನ ಮೇಲಿನ ವಿಶ್ವಸಂಸ್ಥೆಯ ಒಡಂಬಡಿಕೆ, ನೌಕಾಯಾನ ಸ್ವಾತಂತ್ರ್ಯ ಸೇರಿದಂತೆ ನಾನಾ ಬೆದರಿಕೆ ಅಥವಾ ಬಲದ ಬಳಕೆಯಿಲ್ಲದೆ ಅಥವಾ ಏಕಪಕ್ಷೀಯವಾಗಿ ಯಥಾಸ್ಥಿತಿ ಬದಲಾಯಿಸುವ ಯಾವುದೇ ಪ್ರಯತ್ನವಿಲ್ಲದೆ ಅಂತರರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಶಾಂತಿಯುತ ವಿಧಾನಗಳ ಮೂಲಕ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಜಟಿಲಗೊಳಿಸುವ ಅಥವಾ ಉಲ್ಬಣಗೊಳ್ಳುವ ಚಟುವಟಿಕೆಗಳ ನಡೆವಳಿಕೆಯಲ್ಲಿ ದೇಶಗಳು ಸ್ವಯಂ-ಸಂಯಮ ಪ್ರದರ್ಶಿಸಬೇಕು ಎಂದು ಅವರು ಒತ್ತಿ ಹೇಳಿದರು. ಶಾಂತಿ ಮತ್ತು ಸ್ಥಿರತೆಯ ಮೇಲೆ ಪರಿಣಾಮ ಬೀರುವ ವಿವಾದಗಳು, ದಕ್ಷಿಣ ಚೀನಾ ಸಾಗರ ಭಾಗದ ಕಡಲ ನಿಯಮಗಳು ಸೇರಿದಂತೆ  ಅಂತಾರಾಷ್ಟ್ರೀಯ ಕಾನೂನಿಗೆ ಬದ್ಧತೆಯ ಪ್ರಾಮುಖ್ಯವನ್ನು ಪುನರುಚ್ಚರಿಸಿದರು. ದಕ್ಷಿಣ ಚೀನಾ ಸಾಗರ ಭಾಗದಲ್ಲಿ ಯಾವುದೇ ನೀತಿ ಸಂಹಿತೆ ಪರಿಣಾಮಕಾರಿ, ವಸ್ತುನಿಷ್ಠ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಸಂಪೂರ್ಣವಾಗಿ ಹೊಂದಿಕೆಯಾಗಬೇಕು ಎಂದು ಕರೆ ನೀಡಿದರು. ಈ ಮಾತುಕತೆಗಳಿಗೆ ಯಾವುದೇ ರಾಷ್ಟ್ರದ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳ ಪೂರ್ವಗ್ರಹ ಇರಬಾರದು. ಅಂತಾರಾಷ್ಟ್ರೀಯ ಕಾನೂನಿನ ಅಡಿ ಮತ್ತು ಅಸ್ತಿತ್ವದಲ್ಲಿರುವ ಜಾಗತಿಕ ನಿಯಮಗಳನ್ನು ಬೆಂಬಲಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

30.    ಮ್ಯಾನ್ಮಾರ್‌ನಲ್ಲಿ ನಾಗರಿಕ ಜನರ ವಿರುದ್ಧದ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಲು ನಾಯಕರು ಕರೆ ನೀಡಿದರು, ವಿದೇಶಿಯರು ಸೇರಿದಂತೆ ಬಂಧಿತರಾಗಿರುವ ಎಲ್ಲರನ್ನು ಬಿಡುಗಡೆ ಮಾಡಲು ಅಡೆತಡೆಯಿಲ್ಲದ ಮಾನವೀಯ ಪ್ರವೇಶ ಅಗತ್ಯ ಎಂದು ಅವರು ಪ್ರತಿಪಾದಿಸಿದರು. ಆಸಿಯಾನ್‌ನ ಪಂಚಸೂತ್ರಗಳನ್ನು ಜಾರಿಗೆ ತರಲು ಮ್ಯಾನ್ಮಾರ್‌ಗೆ ಒತ್ತಾಯಿಸಿದರು. ಹಿಂಸಾಚಾರಕ್ಕೆ ಅಂತ್ಯ ಹಾಡಲು ಅಂತಾರಾಷ್ಟ್ರೀಯ ಸಮುದಾಯ ಒಟ್ಟಾಗಿ ಕೆಲಸ ಮಾಡಬೇಕು. ಇದಕ್ಕೆ ಪ್ರೋತ್ಸಾಹ ನೀಡಲು ಉಭಯ ನಾಯಕರು ಸಮ್ಮತಿಸಿದರು.

31.    ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಯ ದೃಷ್ಟಿಯಿಂದ ಆಫ್ಘನ್ ಜನರಿಗೆ ಮಾನವೀಯ ನೆರವು ನೀಡಲು ತಮ್ಮ ದೃಢವಾದ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 2593ರ ಪ್ರಕಾರ, ಆಫ್ಘಾನಿಸ್ತಾನದಾದ್ಯಂತ ಭಯೋತ್ಪಾದನೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ತಡೆಯಲು  ಅಧಿಕಾರದ ಸ್ಥಾನದಲ್ಲಿರುವವರು ಕ್ರಮಕ್ಕೆ ಮುಂದಾಗಬೇಕು ಎಂದು ಪ್ರತಿಪಾದಿಸಿದರು. ಮಹಿಳೆಯರು ಮತ್ತು ಬಾಲಕಿಯರ ಹಕ್ಕುಗಳ ರಕ್ಷಣೆ ಮತ್ತು ಸಾರ್ವಜನಿಕ ಜೀವನದಲ್ಲಿ ಅವರ ಸಂಪೂರ್ಣ ಭಾಗವಹಿಸುವಿಕೆಗಾಗಿ ಕ್ರಮ ಜರುಗಿಸಬೇಕು. ಆಫ್ಘಾನಿಸ್ತಾನದಲ್ಲಿ ದೀರ್ಘಾವಧಿಯ ಶಾಂತಿ ಮತ್ತು ಸ್ಥಿರತೆಗಾಗಿ ವಿಶಾಲ ದೃಷ್ಟಿಕೋನದ ಮತ್ತು ಎಲ್ಲರನ್ನೂ ಒಳಗೊಂಡ ಸರ್ಕಾರ ಅಗತ್ಯ ಎಂದು ಅವರು ಒಪ್ಪಿಕೊಂಡರು.

32.    ಈ ಸಭೆಯು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಗಾಢ ಮತ್ತು ನಿಕಟ ಬಾಂಧವ್ಯವನ್ನು ಬಲಪಡಿಸಿತು. ಉಭಯನಾಯಕರು ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

***



(Release ID: 1808717) Visitor Counter : 183