ಪ್ರಧಾನ ಮಂತ್ರಿಯವರ ಕಛೇರಿ

ಥಾಣೆ ಮತ್ತು ದಿವಾ ನಡುವೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ


ಮುಂಬೈ ಉಪನಗರ ರೈಲ್ವೆಯ ಎರಡು ರೈಲುಗಳಿಗೆ ಹಸಿರು ನಿಶಾನೆ

ನಾಳೆ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನದ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸಿ ತಮ್ಮ ಭಾಷಣ ಆರಂಭಿಸಿದ ಪ್ರಧಾನಮಂತ್ರಿ 

“ಮೆಟ್ರೋ ಪಾಲಿಟಿನ್ ನಗರವಾದ ಮುಂಬೈ ನಿವಾಸಿಗಳಿಗೆ ಇದರಿಂದ ಜೀವನವನ್ನು ಸುಗಮಗೊಳಿಸಿದಂತಾಗುತ್ತದೆ”

“ಆತ್ಮ ನಿರ್ಭರ್ ಭಾರತದ ಕೊಡುಗೆಗೆ ಸಂಬಂಧಿಸಿದಂತೆ ಮುಂಬೈನ ಸಾಮರ್ಥ್ಯವನ್ನು ಬಹುಪಟ್ಟು ಹೆಚ್ಚಿಸುವ ಪ್ರಯತ್ನ ಇದಾಗಿದೆ”

“ಮುಂಬೈಗೆ 21 ನೇ ಶತಮಾನದ ಮೂಲ ಸೌಕರ್ಯ ಸೃಷ್ಟಿಸುವುದರತ್ತ ನಮ್ಮ ಗಮನ ಕೇಂದ್ರೀಕೃತವಾಗಿದೆ”

“ಭಾರತೀಯ ರೈಲ್ವೆಯನ್ನು ಹೆಚ್ಚು ಸುರಕ್ಷಿತ, ಅನುಕೂಲಕರ ಮತ್ತು ಆಧುನೀಕರಣಗೊಳಿಸುವ ಸರ್ಕಾರದ ಬದ್ಧತೆಯನ್ನು ಕೊರೋನಾ ಸಾಂಕ್ರಾಮಿಕದಿಂದಲೂ ಸಹ ಅಲುಗಾಡಿಸಲು ಸಾಧ್ಯವಾಗಲಿಲ್ಲ”  

“ಬಡ ಮತ್ತು ಮಧ್ಯಮ ವರ್ಗದವರು ಬಳಸುವ ಸಂಪನ್ಮೂಲಗಳಲ್ಲಿ ಸಾಕಷ್ಟು ಹೂಡಿಕೆ ಮಾಡದ ಕಾರಣ ಈ ಹಿಂದೆ ದೇಶದಲ್ಲಿ ಸಾರ್ವಜನಿಕ ಸಾರಿಗೆ ಪ್ರಜ್ವಲಿಸಲು ಸಾಧ್ಯವಾಗಲಿಲ್ಲ”

ಸುಮಾರು 620 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೆಚ್ಚುವರಿ ರೈಲ್ವೆ ಮಾರ್ಗಗಳು ಉಪನಗರ ರೈಲುಗಳ ಸಂಚಾರದೊಂದಿಗೆ ದೂರದ ರೈಲುಗಳ ಅಡಚಣೆಯನ್ನು ಗಮನಾರ್ಹವಾಗಿ ತೊಡೆದುಹಾಕುತ್ತವೆ

Posted On: 18 FEB 2022 6:43PM by PIB Bengaluru

ಥಾಣೆ ಮತ್ತು ದಿವಾ ನಡುವೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶಕ್ಕೆ ಸಮರ್ಪಿಸಿದರು. ಮುಂಬೈ ಉಪನಗರ ರೈಲ್ವೆಯ ಎರಡು ರೈಲುಗಳಿಗೆ ಹಸಿರು ನಿಶಾನೆ ತೋರಿದರು. ರೈಲ್ವೆ ಸಚಿವರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ನಾಳೆ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನದ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸಿ ಪ್ರಧಾನಮಂತ್ರಿ ಅವರು ತಮ್ಮ ಭಾಷಣ ಆರಂಭಿಸಿದರು. ಶಿವಾಜಿ ಮಹಾರಾಜ್ ಅವರು ಭಾರತದ ಹೆಮ್ಮೆ, ಗುರುತು ಮತ್ತು ಭಾರತದ ಸಂಸ್ಕೃತಿಯ ರಕ್ಷಕ ಎಂದು ವರ್ಣಿಸಿದರು.

ಥಾಣೆ ಮತ್ತು ದಿವಾ ನಡುವೆ ಐದು ಮತ್ತು ಆರನೇ ರೈಲ್ವೆ ಸಂಪರ್ಕ ಪಡೆದ ಮುಂಬೈ ಜನತೆಯನ್ನು ಅಭಿನಂದಿಸಿದ ಅವರು, ಇದರಿಂದ ಮುಂಬೈ ಮೆಟ್ರೋಪಾಲಿಟಿನ್ ನಗರದ ಸಂಚಾರದಲ್ಲಿ ಸುಗಮ ಜೀವನಕ್ಕೆ ಸಹಕಾರಿಯಾಗಲಿದೆ. ಈ ಎರಡು ರೈಲು ಮಾರ್ಗಗಳಿಂದ ನಾಲ್ಕು ನೇರವಾದ ಲಾಭಗಳಿವೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಮೊದಲಿಗೆ ಸ್ಥಳೀಯ ಮತ್ತು ಎಕ್ಸ್ ಪ್ರೆಸ್ ರೈಲುಗಳಿಗೆ ಪ್ರತ್ಯೇಕ ಮಾರ್ಗಗಳನ್ನು ನಿರ್ಮಿಸಲಾಗಿದೆ. ಎರಡನೆಯದಾಗಿ ಇತರೆ ರಾಜ್ಯಗಳಿಂದ ರೈಲುಗಳು ಬರುವಾಗ ಸ್ಥಳೀಯ ರೈಲುಗಳು ಕಾಯುವ ಅಗತ್ಯವಿಲ್ಲ. ಮೂರನೆಯದಾಗಿ ಕಲ್ಯಾಣ್ ಮತ್ತು ಕುರ್ಲಾ ವಿಭಾಗದಲ್ಲಿ ಮೇಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳು ಹೆಚ್ಚು ಅಡೆತಡೆಗಳಿಲ್ಲದೇ ಸಂಚರಿಸಲಿವೆ  ಮತ್ತು ಕೊನೆಯದಾಗಿ ಕಲ್ವಾ – ಮುಂಬ್ರಾ ನಡುವೆ ಪ್ರಯಾಣಿಕರು ಪ್ರತಿ ಭಾನುವಾರ ತೊಂದರೆ ಅನುಭವಿಸುವುದಿಲ್ಲ ಎಂದರು.  ಸ್ಥಳೀಯ ರೈಲುಗಳ ಸೌಲಭ್ಯ  ವಿಸ್ತರಿಸುವ ಮತ್ತು ಆಧುನೀಕರಣಗೊಳಿಸುವ ಕೇಂದ್ರ ಸರ್ಕಾರದ ಬದ್ಧತೆಯ ಭಾಗವಾಗಿರುವ ಈ ಮಾರ್ಗಗಳು ಮತ್ತು 36 ಹೊಸ ಸ್ಥಳೀಯ ರೈಲುಗಳು ಹೆಚ್ಚಾಗಿ ಸುವಿಹಾರಿ ಸೌಲಭ್ಯ ಹೊಂದಲಿವೆ ಎಂದು ಹೇಳಿದರು.

ಸ್ವಾತಂತ್ರ್ಯೋತ್ತರದಲ್ಲಿ ಭಾರತದ ಬೆಳವಣಿಗೆಗೆ ಮೊಟ್ರೋಪಾಲಿಟಿನ್ ನಗರ ಮುಂಬೈ ಕೊಡುಗೆಯನ್ನು ಸ್ಮರಿಸಿದ ಅವರು, ಇದೀಗ ಆತ್ಮ ನಿರ್ಭರ ಭಾರತ ಮೂಲಕ ಮುಂಬೈ ನಗರದ ಸಾಮರ್ಥ್ಯ ಹಲವು ಪಟ್ಟು ಹೆಚ್ಚಾಗಿದೆ. “ಅದಕ್ಕಾಗಿ ಮುಂಬೈಗೆ 21 ನೇ ಶತಮಾನದ ಮೂಲ ಸೌಕರ್ಯಗಳನ್ನು ಕಲ್ಪಿಸಲು ಗಮನ ಕೇಂದ್ರೀಕರಿಸಲಾಗಿದೆ”, ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಮುಂಬೈ ಮತ್ತು ಮುಂಬೈ ಉಪನಗರ ರೈಲ್ವೆ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಮತ್ತು ರೈಲ್ವೆ ಸಂಪರ್ಕಕ್ಕಾಗಿ ಸಹಸ್ರಾರು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಮುಂಬೈ ಉಪನಗರ ವಲಯದಲ್ಲಿ ಹೆಚ್ಚುವರಿಯಾಗಿ 400 ಕಿಲೋಮೀಟರ್ ರೈಲ್ವೆ ಮಾರ್ಗವನ್ನು ವಿಸ್ತರಿಸಲು ಪ್ರಯತ್ನ ನಡೆಸಲಾಗುತ್ತಿದೆ ಮತ್ತು 19 ನಿಲ್ದಾಣಗಳನ್ನು ಸಿಬಿಟಿಸಿ ಸಂಕೇತ ವ್ಯವಸ್ಥೆಯಂತಹ ಆಧುನಿಕ ಸೌಲಭ್ಯಗಳೊಂದಿಗೆ ಸಂಪರ್ಕಿಸಲು ಯೋಜಿಸಲಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಅಹ್ಮದಾಬಾದ್ – ಮುಂಬೈ ನಡುವೆ ಹೈ ಸ್ಪೀಡ್ ರೈಲು ದೇಶಕ್ಕೆ ಅಗತ್ಯವಾಗಿದೆ ಮತ್ತು ಇದು ಕನಸಿನ ನಗರಿ ಮುಂಬೈನ ಕನಸುಗಳ ಅಸ್ಮಿತೆಯನ್ನು ಬಲಗೊಳಿಸಲಿದೆ. ತ್ವರಿತವಾಗಿ ಈ ಯೋಜನೆಯನ್ನು ಪೂರ್ಣಗೊಳಿಸುವುದು ನಮ್ಮ ಆದ್ಯತೆಯಾಗಿದೆ ಎಂದರು. 

“ಭಾರತೀಯ ರೈಲ್ವೆಯನ್ನು ಹೆಚ್ಚು ಸುರಕ್ಷಿತ, ಅನುಕೂಲಕರ ಮತ್ತು ಆಧುನೀಕರಣಗೊಳಿಸುವ ಸರ್ಕಾರದ ಬದ್ಧತೆಯನ್ನು ಕೊರೋನಾ ಸಾಂಕ್ರಾಮಿಕದಿಂದಲೂ ಸಹ ಅಲುಗಾಡಿಸಲು ಸಾಧ್ಯವಾಗಲಿಲ್ಲ”. ಕಳೆದ ಎರಡು ವರ್ಷಗಳಲ್ಲಿ ಸರಕು ಸಾಗಣೆಯಲ್ಲಿ ರೈಲ್ವೆ  ಹೊಸ ದಾಖಲೆಯನ್ನು ಬರೆದಿದೆ. ಈ ಅವಧಿಯಲ್ಲಿ 8 ಸಾವಿರ ಕಿಲೋಮೀಟರ್ ರೈಲ್ವೆ ಮಾರ್ಗವನ್ನು ವಿದ್ಯುದೀಕರಣಗೊಳಿಸಲಾಗಿದೆ ಮತ್ತು 4.5 ಸಾವಿರ ಕಿಲೋಮೀಟರ್ ಮಾರ್ಗವನ್ನು ದ್ವಿಪಥವಾಗಿ ಪರಿವರ್ತಿಸಲಾಗಿದೆ. ಕೊರೋನಾ ಸಮಯದಲ್ಲಿ ಕಿಸಾನ್ ರೈಲುಗಳ ಮೂಲಕ ದೇಶಾದ್ಯಂತ ವಿಸ್ತೃತವಾಗಿ ರೈತರು ಮಾರುಕಟ್ಟೆಗಳನ್ನು ತಲುಪಲು ಸಹಕಾರಿಯಾಯಿತು ಎಂದು ಹೇಳಿದರು.

ಮೂಲ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸುವ ಸಂಬಂಧ ನವಭಾರತದ ಬದಲಾದ ವಿಧಾನದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ಹಿಂದಿನ ಯೋಜನೆಗಳು ಯೋಜನೆಯಿಂದ ಅನುಷ್ಠಾನದ ಹಂತದವರೆಗೆ ಸಮನ್ವಯದ ಕೊರೆತೆಯಿಂದ ವಿಳಂಬವಾಗಿದ್ದವು ಎಂದು ತಿಳಿಸಿದರು. ಇದರಿಂದ 21 ನೇ ಶತಮಾನದ ಆಧುನಿಕ ಮೂಲ ಸೌಕರ್ಯ ಕಲ್ಪಿಸುವುದು ಅಸಾಧ್ಯವಾಗಿದ್ದು, ಅದಕ್ಕಾಗಿಯೇ ಪ್ರಧಾನಮಂತ್ರಿ ಗತಿಶಕ್ತಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಇದಕ್ಕಾಗಿ ಕೇಂದ್ರ ಸರ್ಕಾರದ ಪ್ರತಿಯೊಂದು ಇಲಾಖೆಗಳು, ರಾಜ್ಯ ಸರ್ಕಾರಗಳ ಸ್ಥಳೀಯ ಸಂಸ್ಥೆಗಳು ಮತ್ತು ಖಾಸಗಿ ವಲಯವನ್ನು ಒಂದೇ ವೇದಿಕೆಗೆ ತರಲಾಗಿದೆ. ಸೂಕ್ತ ಯೋಜನೆ ರೂಪಿಸಲು ಮತ್ತು ಸಮನ್ವಯತೆ ಸಾಧಿಸಲು ಇದರಿಂದ ಎಲ್ಲಾ ಪಾಲುದಾರರಿಗೆ ಅಗತ್ಯ ವೇದಿಕೆ ಒದಗಿಸಲು ಸಾಧ್ಯವಾಗಲಿದೆ ಎಂದು ಹೇಳಿದರು. ಬಡವರು ಮತ್ತು ಮಧ್ಯಮವರ್ಗದವರು ಬಳಸುವ ಸಂಪನ್ಮೂಲಗಳಲ್ಲಿ ಸಾಕಷ್ಟು ಪ್ರಮಾಣದ ಹೂಡಿಕೆಯನ್ನು ತಡೆಯುವ ಚಿಂತನೆಯ ಬಗ್ಗೆ ಶ್ರೀ ನರೇಂದ್ರ ಮೋದಿ ಅವರು ವಿಷಾದಿಸಿದರು. ಇದರಿಂದಾಗಿ ದೇಶದ ಸಾರ್ವಜನಿಕ ಸಾರಿಗೆ ಪ್ರಜ್ವಲಿಸಲು ಸಾಧ್ಯವಾಗಲಿಲ್ಲ. “ಇದೀಗ ಭಾರತ ಮುಂದೆ ಸಾಗುತ್ತಿದೆ. ಈ ರೀತಿಯ ಆಲೋಚನೆಗಳನ್ನು ಹಿಂದೆ ಬಿಡುತ್ತಿದೆ” ಎಂದು ಹೇಳಿದರು.

ಭಾರತೀಯ ರೈಲ್ವೆಗೆ ಹೊಸ ಮುಖ ನೀಡುವ ಕ್ರಮಗಳನ್ನು ಪ್ರಧಾನಮಂತ್ರಿ ಅವರು ಪಟ್ಟಿ ಮಾಡಿದ್ದಾರೆ. ಗಾಂಧಿನಗರ ಮತ್ತು ಭೋಪಾಲ್ ನಂತಹ ಆಧುನಿಕ ರೈಲ್ವೆ ನಿಲ್ದಾಣಗಳು ವೇಗವಾಗಿ ಭಾರತೀಯ ರೈಲ್ವೆಯ ಹೆಗ್ಗುರುತಾಗುತ್ತಿವೆ ಮತ್ತು 6000 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳು ವೈಫೈ ಸೌಲಭ್ಯದೊಂದಿಗೆ ಸಂಪರ್ಕ ಹೊಂದಿವೆ ಎಂದರು. ದೇಶದ ರೈಲ್ವೆಯಲ್ಲಿ ವಂದೇ ಭಾರತ್ ರೈಲುಗಳು ಭಾರತದ ರೈಲ್ವೆಗೆ ಹೊಸ ವೇಗ ಮತ್ತು ಆಧುನಿಕ ಸೌಲಭ್ಯಗಳನ್ನು ಕಲ್ಪಿಸುತ್ತಿವೆ. ದೇಶ ಸೇವೆಗಾಗಿ ಮುಂಬರುವ ದಿನಗಳಲ್ಲಿ 400 ಕ್ಕೂ ಹೆಚ್ಚು ವಂದೇ ಭಾರತ್ ರೈಲುಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಕೇಂದ್ರೀಯ ರೈಲ್ವೆಯಲ್ಲಿ ಕಲ್ಯಾಣ್ ಪ್ರಮುಖ ವಿಭಾಗವಾಗಿವೆ. ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳಿಂದ ಸಂಚಾರಿ ಒತ್ತಡ ಬರುತ್ತಿದೆ ಮತ್ತು ಇದು ಸಿಎಸ್ ಎಂಟಿ [ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್] ನತ್ತ ಸಾಗುತ್ತಿದೆ.  ಕಲ್ಯಾಣ್ ಮತ್ತು ಸಿ.ಎಸ್.ಟಿ.ಎಂ ಭಾಗದಲ್ಲಿ ನಾಲ್ಕು ಹಳಿಗಳಿವೆ ಮತ್ತು ಎರಡು ಹಳಿಗಳನ್ನು ಸ್ಥಳೀಯ ರೈಲುಗಳಿಗಾಗಿ ಮತ್ತು ಎರಡು ಹಳಿಗಳನ್ನು ಸ್ಥಳೀಯ ವೇಗದ ರೈಲುಗಳಿಗಾಗಿ ಅಂದರೆ ಮೇಲ್ ಎಕ್ಸ್ ಪ್ರೆಸ್ ಹಾಗೂ ಸರಕು ಸಾಗಣೆ ರೈಲುಗಳಿಗಾಗಿ ಮೀಸಲಿರಿಸಲಾಗಿದೆ. ಪ್ರತ್ಯೇಕ ಉಪನಗರ ರೈಲು ಮತ್ತು ದೂರದ ರೈಲುಗಳಿಗಾಗಿ ಹೆಚ್ಚುವರಿಯಾಗಿ ಎರಡು ಹಳಿಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಥಾಣೆ ಮತ್ತು ದಿವಾ ನಡುವೆ ಎರಡು ಹೆಚ್ಚುವರಿ ರೈಲ್ವೆ ಹಳಿಗಳನ್ನು ನಿರ್ಮಿಸಲು ಅಂದಾಜು 620 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು ಮತ್ತು ಭವಿಷ್ಯದಲ್ಲಿ 1.4 ಕಿಲೋಮೀಟರ್ ದೂರದ ರೈಲ್ವೆ ಮೇಲ್ಸೇತುವೆ, 3 ಪ್ರಮುಖ ಸೇತುವೆಗಳು, 21 ಸಣ್ಣ ಸೇತುವೆಗಳನ್ನು ನಿರ್ಮಿಸಲಾಗುವುದು. ಈ ಹಳಿಗಳು ಮುಂಬೈನಲ್ಲಿನ ಉಪನಗರ ರೈಲುಗಳ ಸಂಚಾರದೊಂದಿಗೆ ದೂರದ ರೈಲುಗಳ ಅಡಚಣೆಯನ್ನು ಗಮನಾರ್ಹವಾಗಿ ತೊಡೆದುಹಾಕುತ್ತವೆ. ಈ ಮಾರ್ಗಗಳು ನಗರದಲ್ಲಿ 36 ಹೊಸ ಉಪನಗರ ರೈಲುಗಳನ್ನು ಪರಿಚಯಿಸಲು ಅನುಕೂಲ ಮಾಡಿಕೊಡಲಿದೆ ಎಂದು ಹೇಳಿದರು.

***(Release ID: 1799573) Visitor Counter : 163