ಪ್ರಧಾನ ಮಂತ್ರಿಯವರ ಕಛೇರಿ

ಭಾರತ-ಯುಎಇ ವರ್ಚುವಲ್ ಶೃಂಗಸಭೆ

Posted On: 16 FEB 2022 7:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಬುಧಾಬಿಯ ಯುವರಾಜ ಮತ್ತು ಯುಎಇ ಸಶಸ್ತ್ರ ಪಡೆಗಳ ಉಪ ಸರ್ವೋಚ್ಚ ಕಮಾಂಡರ್ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಫೆಬ್ರವರಿ 18, 2022 ರಂದು ವರ್ಚುವಲ್ ಶೃಂಗಸಭೆ ನಡೆಸಲಿದ್ದಾರೆ.

ಭಾರತವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ʻಆಜಾದಿ ಕಾ ಅಮೃತ್ ಮಹೋತ್ಸವʼವಾಗಿ ಆಚರಿಸುತ್ತಿರುವ ಮತ್ತು ಯುಎಇ ತನ್ನ ಸಂಸ್ಥಾಪನೆಯ 50ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ, ಎರಡೂ ದೇಶಗಳ ನಡುವಿನ ಐತಿಹಾಸಿಕ ಮತ್ತು ಸ್ನೇಹಪರ ಸಂಬಂಧಗಳ ಬಗ್ಗೆ ಉಭಯ ನಾಯಕರು ತಮ್ಮ ದೃಷ್ಟಿಕೋನವನ್ನು ರೂಪಿಸುವ ನಿರೀಕ್ಷೆಯಿದೆ. ಉಭಯ ನಾಯಕರು ದ್ವಿಪಕ್ಷೀಯ ಸಹಕಾರದ ಬಗ್ಗೆ ಚರ್ಚಿಸಲಿದ್ದಾರೆ ಹಾಗೂ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ, ಭಾರತ ಮತ್ತು ಯುಎಇ ನಡುವಿನ ದ್ವಿಪಕ್ಷೀಯ ಸಂಬಂಧಗಳು ಎಲ್ಲಾ ಕ್ಷೇತ್ರಗಳಲ್ಲಿ ಬಲಗೊಂಡಿವೆ ಮತ್ತು ಎರಡೂ ದೇಶಗಳ ಕಡೆಯಿಂದ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆ ಆರಂಭವಾಗಿದೆ. ಪ್ರಧಾನಮಂತ್ರಿಯವರು 2015, 2018 ಮತ್ತು 2019ರಲ್ಲಿ ಯುಎಇಗೆ ಭೇಟಿ ನೀಡಿದ್ದರು, ಅಬುಧಾಬಿಯ ಯುವರಾಜ 2016 ಮತ್ತು 2017ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವರ ಮೂರು ಭೇಟಿಗಳು ಮತ್ತು 2021ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರ ಯುಎಇ ಭೇಟಿ ಸೇರಿದಂತೆ ಎರಡೂ ಕಡೆಗಳ ನಡುವಿನ ಸಚಿವರ ಭೇಟಿಯೂ ಮುಂದುವರಿದಿದೆ.

ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಉಭಯ ದೇಶಗಳು ಆರೋಗ್ಯ ರಕ್ಷಣೆ ಮತ್ತು ಆಹಾರ ಭದ್ರತೆಯ ನಿರ್ಣಾಯಕ ಕ್ಷೇತ್ರಗಳಲ್ಲಿ ನಿಕಟವಾಗಿ ಸಹಕರಿಸಿವೆ. ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಮತ್ತು ಇಂಧನ ಸಂಬಂಧಗಳು ಸುದೃಢವಾಗಿವೆ. ನವೀಕರಿಸಬಹುದಾದ ಇಂಧನ, ನವೋದ್ಯಮಗಳು, ಫಿನ್‌ಟೆಕ್ ಮುಂತಾದ ಹೊಸ ಕ್ಷೇತ್ರಗಳಲ್ಲಿ ಎರಡೂ ಕಡೆಯವರು ತಮ್ಮ ಸಹಕಾರವನ್ನು ಬಲಪಡಿಸುತ್ತಿದ್ದಾರೆ. ʻದುಬೈ ಎಕ್ಸ್‌ಪೋ2020ʼನಲ್ಲಿ ಭಾರತವು ಅತಿದೊಡ್ಡ ಪ್ರದರ್ಶಕರಲ್ಲಿ ಒಂದಾಗಿ ಭಾಗವಹಿಸಿದೆ. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಮುಖ ಉಪಕ್ರಮವೆಂದರೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ). ʻಸಿಇಪಿಎʼಗಾಗಿ ಸೆಪ್ಟೆಂಬರ್‌ 2021ರಲ್ಲಿ ಮಾತುಕತೆಗಳನ್ನು ಪ್ರಾರಂಭಿಸಲಾಯಿತು ಮತ್ತು ಅದೀಗ ಪೂರ್ಣಗೊಂಡಿದೆ. ಒಪ್ಪಂದವು ಭಾರತ-ಯುಎಇ ನಡುವೆ ಆರ್ಥಿಕ ಮತ್ತು ವಾಣಿಜ್ಯ ಒಪ್ಪಂದವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ. ಯುಎಇ ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ, ಮತ್ತು ಎರಡೂ ದೇಶಗಳ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳು ಗಮನಾರ್ಹವಾಗಿ ಬೆಳವಣಿಗೆಯಾಗುವ ನಿರೀಕ್ಷೆಯಿದೆ.

ಸುಮಾರು 3.5 ದಶಲಕ್ಷದಷ್ಟು ದೊಡ್ಡ ಭಾರತೀಯ ಸಮುದಾಯವನ್ನು ಯುಎಇ ಹೊಂದಿದೆ. ಸಾಂಕ್ರಾಮಿಕದ ಸಮಯದಲ್ಲಿ ಭಾರತೀಯ ಸಮುದಾಯವನ್ನು ಬೆಂಬಲಿಸಿದ್ದಕ್ಕಾಗಿ ಪ್ರಧಾನಿ ಅವರು ಯುಎಇ ನಾಯಕತ್ವಕ್ಕೆ ಭಾರತದ ಮೆಚ್ಚುಗೆ ಪ್ರಧಾನಿ ವ್ಯಕ್ತಪಡಿಸಿದ್ದಾರೆ. ಯುಎಇ ನಾಯಕತ್ವವು ತನ್ನ ಅಭಿವೃದ್ಧಿಯಲ್ಲಿ ಭಾರತೀಯ ಸಮುದಾಯದ ಕೊಡುಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಕೋವಿಡ್-19 ಒಡ್ಡಿದ್ದ ಸವಾಲುಗಳ ಹೊರತಾಗಿಯೂ ಸಾಂಕ್ರಾಮಿಕ ರೋಗದ ಸಮಯದಲ್ಲಿ ಎರಡು ದೇಶಗಳ ನಡುವೆ ಜನರ ಸಂಚಾರಕ್ಕೆ ಅನುವು ಮಾಡಿಕೊಡಲು ʻಏರ್ ಬಬಲ್ʼ ವ್ಯವಸ್ಥೆಗೆ 2020ರಲ್ಲಿ ಉಭಯ ದೇಶಗಳು ಸಮ್ಮತಿಸಿದ್ದವು.

***



(Release ID: 1799224) Visitor Counter : 102