ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ರಾಜ್ಯಸಭೆಯಲ್ಲಿ ಉತ್ತರ ನೀಡಿದ ಪ್ರಧಾನಮಂತ್ರಿ
"100ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸುವಾಗ ರಾಷ್ಟ್ರವನ್ನು ಎಲ್ಲಿಗೆ ಕೊಂಡೊಯ್ಯಬೇಕು ಮತ್ತು ರಾಷ್ಟ್ರವನ್ನು ಹೇಗೆ ಮುಂದೆ ಕೊಂಡೊಯ್ಯಬೇಕು ಎಂದು ಯೋಚಿಸಲು ಇದು ಬಹು ಮುಖ್ಯವಾದ ಸಮಯವಾಗಿದೆ"
“ಭಾರತದ ಜನರು ಕೇವಲ ತಮ್ಮನ್ನು ರಕ್ಷಿಸಿಕೊಳ್ಳಲು ಮಾತ್ರವೇ ಅಲ್ಲದೆ ಇತರರನ್ನು ರಕ್ಷಿಸಲೂ ಲಸಿಕೆ ತೆಗೆದುಕೊಂಡಿದ್ದಾರೆ. ಹಲವಾರು ಜಾಗತಿಕ ಲಸಿಕೆ-ವಿರೋಧಿ ಚಳವಳಿಗಳ ನಡುವೆ ಇಂತಹ ನಡವಳಿಕೆ ಪ್ರಶಂಸನೀಯವಾಗಿದೆ”
"ಈ ಸಾಂಕ್ರಾಮಿಕ ಸಮಯದಲ್ಲಿ ಜನರು ಭಾರತದ ಪ್ರಗತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಲೇ ಇದ್ದರು ಆದರೆ ಭಾರತವು 80 ಕೋಟಿ ನಾಗರಿಕರಿಗೆ ಉಚಿತ ಪಡಿತರ ಲಭ್ಯತೆ ಖಚಿತಪಡಿಸಿದೆ"
“ನಾವು ಸದನದ ಯಾವ ಬದಿಯಲ್ಲಿದ್ದೇವೆ ಎಂಬುದನ್ನು ಲೆಕ್ಕಿಸದೆ ನಾವು ಜನರಿಗಾಗಿ ಕೆಲಸ ಮಾಡಬೇಕು. ವಿರೋಧ ಪಕ್ಷದಲ್ಲಿದ್ದೇವೆ ಎಂದು ಜನರ ಸಮಸ್ಯೆ ಬಗೆಹರಿಸುವ ಕೆಲಸ ಮಾಡುವುದನ್ನು ನಿಲ್ಲಿಸುವುದು ತಪ್ಪು”
"ಕೋವಿಡ್-19 ವಿರುದ್ಧದ ಹೋರಾಟವು ಬಲವಾದ ಮತ್ತು ಸೌಹಾರ್ದಯುತವಾದ ಒಕ್ಕೂಟ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿದೆ. ಈ ವಿಷಯದಲ್ಲಿ ಗೌರವಾನ್ವಿತ ಮುಖ್ಯಮಂತ್ರಿಗಳೊಂದಿಗೆ 23 ಸಭೆಗಳು ನಡೆದಿವೆ”
"ನಾವು ರಾಷ್ಟ್ರೀಯ ಪ್ರಗತಿ ಮತ್ತು ಪ್ರಾದೇಶಿಕ ಆಕಾಂಕ್ಷೆಗಳ ನಡುವೆ ಯಾವುದೇ ಸಂಘರ್ಷಗಳನ್ನು ಕಾಣುವುದಿಲ್ಲ"
Posted On:
08 FEB 2022 4:12PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿಂದು ಸಂಸತ್ತಿನಲ್ಲಿ ರಾಷ್ಟ್ರಪತಿಯವರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದರು. "100ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಾಗ ರಾಷ್ಟ್ರವನ್ನು ಎಲ್ಲಿಗೆ ಕರೆದೊಯ್ಯಬೇಕು ಮತ್ತು ರಾಷ್ಟ್ರವನ್ನು ಹೇಗೆ ಮುನ್ನಡೆಸಬೇಕು ಎಂಬುದನ್ನು ಯೋಚಿಸಲು ಇದು ಬಹಳ ಮುಖ್ಯವಾದ ಸಮಯವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಇದಕ್ಕಾಗಿ ಸಂಕಲ್ಪವನ್ನು ಪೂರ್ಣಗೊಳಿಸಲು ನಮಗೆ ಸಾಮೂಹಿಕ ಪಾಲುದಾರಿಕೆ ಮತ್ತು ಸಾಮೂಹಿಕ ಮಾಲೀಕತ್ವದ ಅಗತ್ಯವಿದೆ ಎಂದು ಭಾವಿಸುವುದಾಗಿ ಹೇಳಿದರು.
ವಿಶ್ವವು ಕೋವಿಡ್-19 ವಿರುದ್ಧ ಇನ್ನೂ ಹೋರಾಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ ನೂರು ವರ್ಷಗಳಲ್ಲಿ ಮಾನವೀಯತೆ ಈ ರೀತಿಯ ಯಾವುದೇ ಸವಾಲನ್ನು ಕಂಡಿಲ್ಲ. ಭಾರತದ ಜನರು ಲಸಿಕೆಯನ್ನು ತೆಗೆದುಕೊಂಡಿದ್ದಾರೆ. ಅವರು ಕೇವಲ ತಮ್ಮನ್ನು ರಕ್ಷಿಸಿಕೊಳ್ಳಲು ಮಾತ್ರವೇ ಲಸಿಕೆ ಪಡೆಯಲಿಲ್ಲ, ಇತರರನ್ನು ರಕ್ಷಿಸಲು ಇದನ್ನು ಮಾಡಿದ್ದಾರೆ. ಅನೇಕ ಜಾಗತಿಕ ಲಸಿಕೆ-ವಿರೋಧಿ ಚಳವಳಿಗಳ ನಡುವೆ ಅಂತಹ ನಡವಳಿಕೆ ಪ್ರಶಂಸನೀಯವಾಗಿದೆ.
ಸಾಂಕ್ರಾಮಿಕ ರೋಗದ ಈ ಸಮಯದಲ್ಲಿ ಭಾರತದ ಪ್ರಗತಿಯ ಬಗ್ಗೆ ಜನರು ಪ್ರಶ್ನೆಗಳನ್ನು ಎತ್ತುತ್ತಲೇ ಇದ್ದರು ಆದರೆ ಭಾರತವು 8೦ ಕೋಟಿ ನಾಗರಿಕರಿಗೆ ಉಚಿತ ಪಡಿತರವನ್ನು ಪಡೆಯುವುದನ್ನು ಖಚಿತಪಡಿಸಿತು ಎಂದು ಪ್ರಧಾನಮಂತ್ರಿ ಹೇಳಿದರು. ಬಡವರಿಗಾಗಿ ದಾಖಲೆಯ ಮನೆಗಳನ್ನು ನಿರ್ಮಿಸುವುದು ಮತ್ತು, ಈ ಮನೆಗಳು ನೀರಿನ ಸಂಪರ್ಕಗಳನ್ನು ಹೊಂದಿರುತ್ತವೆ ಎಂಬುದನ್ನು ಖಚಿತಪಡಿಸಿಕೊಂಡಿತು. ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ನಾವು 5 ಕೋಟಿ ಜನರಿಗೆ ಕೊಳಾಯಿಗಳ ಮೂಲಕ ನೀರನ್ನು ಒದಗಿಸಿದ್ದೇವೆ ಮತ್ತು ಹೊಸ ದಾಖಲೆಯನ್ನು ಸೃಷ್ಟಿಸಿದ್ದೇವೆ. ನಮ್ಮ ತರ್ಕಬದ್ಧ ನೀತಿಗಳ ಫಲವಾಗಿ ನಮ್ಮ ರೈತರು ಸಾಂಕ್ರಾಮಿಕ ರೋಗದ ಸಮಯದಲ್ಲೂ ಬಂಪರ್ ಬೆಳೆಯನ್ನು ಉತ್ಪಾದಿಸಿದರು. ಸಾಂಕ್ರಾಮಿಕ ರೋಗದ ಸಮಯದಲ್ಲಿ ನಾವು ಅನೇಕ ಮೂಲಸೌಕರ್ಯ ಸಂಬಂಧಿತ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ, ಏಕೆಂದರೆ ಅಂತಹ ಸವಾಲಿನ ಸಮಯದಲ್ಲಿ ಅವು ಉದ್ಯೋಗಗಳನ್ನು ಖಚಿತಪಡಿಸಬೇಕು ಎಂಬುದರಲ್ಲಿ ನಂಬಿಕೆ ಇಟ್ಟಿದ್ದೆವು. ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ, ನಮ್ಮ ಯುವಕರು ಕ್ರೀಡೆಯಲ್ಲಿ ದೊಡ್ಡ ದಾಪುಗಾಲು ಇಟ್ಟಿದ್ದಾರೆ ಮತ್ತು ದೇಶಕ್ಕೆ ಕೀರ್ತಿ ತಂದಿದ್ದಾರೆ. ಭಾರತೀಯ ಯುವಕರು ತಮ್ಮ ನವೋದ್ಯಮಗಳೊಂದಿಗೆ ಭಾರತವನ್ನು ವಿಶ್ವದ ಮೊದಲ ಮೂರು ನವೋದ್ಯಮಗಳ ತಾಮಗಳಲ್ಲಿ ಒಂದನ್ನಾಗಿ ಮಾಡಿದ್ದಾರೆ.
ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ಅದು ಕಾಪ್ 26 ಅಥವಾ ಜಿ20 ಸಂಬಂಧಿತ ವಿಷಯವಾಗಿರಲಿ ಅಥವಾ 150ಕ್ಕೂ ಹೆಚ್ಚು ದೇಶಗಳಲ್ಲಿ ಔಷಧ ರಫ್ತಿಗೆ ಸಂಬಂಧಿಸಿದ್ದೇ ಆಗಿರಲಿ, ಭಾರತವು ನಾಯಕತ್ವದ ಪಾತ್ರ ವಹಿಸಿದೆ ಮತ್ತು ಇಡೀ ವಿಶ್ವವೇ ಈ ಬಗ್ಗೆ ಚರ್ಚಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ನಾವು ಎಂಎಸ್.ಎಂಇ ವಲಯ ಮತ್ತು ಕೃಷಿ ವಲಯದ ಮೇಲೆ ಹೆಚ್ಚು ಗಮನ ಹರಿಸಿದ್ದೇವೆ ಎಂದೂ ಪ್ರಧಾನಮಂತ್ರಿ ಒತ್ತಿ ಹೇಳಿದರು.
ಉದ್ಯೋಗದ ದತ್ತಾಂಶವನ್ನು ನೀಡಿದ ಪ್ರಧಾನಮಂತ್ರಿಯವರು, 2021ರ ವರ್ಷದಲ್ಲಿ ಇಪಿಎಫ್.ಒ ಪೇರೋಲ್ ದತ್ತಾಂಶವು ಸುಮಾರು 1 ಕೋಟಿ 20 ಲಕ್ಷ ಹೊಸ ಜನರು ಇಪಿಎಫ್.ಒ ಪೋರ್ಟಲ್ ನಲ್ಲಿ ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ತೋರಿಸುತ್ತದೆ ಎಂದು ಹೇಳಿದರು. ಇವೆಲ್ಲವೂ ಔಪಚಾರಿಕ ಉದ್ಯೋಗಗಳಾಗಿವೆ ಮತ್ತು ಇವುಗಳಲ್ಲಿ ಸುಮಾರು 60 ರಿಂದ 65 ಲಕ್ಷ ಜನರು 18 ರಿಂದ 25 ವರ್ಷ ವಯಸ್ಸಿನವರು, ಇದರರ್ಥ ಇದು ಅವರ ಮೊದಲ ಕೆಲಸ ಎಂಬುದಾಗಿದೆ ಎಂದರು. ಹಣದುಬ್ಬರದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಹಣದುಬ್ಬರವನ್ನು ತಡೆಯಲು ನಾವು ಸಾಧ್ಯವಾದಷ್ಟು ಪ್ರಯತ್ನಿಸಿದ್ದೇವೆ ಮತ್ತು ಇದನ್ನು ಇತರ ಆರ್ಥಿಕತೆಗಳೊಂದಿಗೆ ಹೋಲಿಸಿದಾಗ, ಇಂದು ಭಾರತ ಮಧ್ಯಮ ಹಣದುಬ್ಬರದೊಂದಿಗೆ ಅತಿ ಹೆಚ್ಚಿನ ವೃದ್ಧಿಯನ್ನು ಅನುಭವಿಸುತ್ತಿರುವ ದೊಡ್ಡ ಆರ್ಥಿಕ ರಾಷ್ಟ್ರವಾಗಿದೆ ಎಂದು ನಾವು ಹೇಳಬಹುದು ಎಂದು ಹೇಳಿದರು.
ನಾವು ಯಾವುದೇ ಬದಿಯಲ್ಲಿದ್ದರೂ ಜನರಿಗಾಗಿ ಕೆಲಸ ಮಾಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ವಿರೋಧ ಪಕ್ಷದಲ್ಲಿರುವುದೆಂದರೆ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುವುದು ಎಂಬ ಮನಸ್ಥಿತಿ ತಪ್ಪು. ಭಾರತದ ಲಸಿಕೆ ಅಭಿಯಾನ ದೊಡ್ಡ ವಿಷಯವಲ್ಲ ಎಂದು ಕೆಲವು ಗೌರವಾನ್ವಿತ ಸದಸ್ಯರು ಹೇಳಿದಾಗ ತಾವು ಆಶ್ಚರ್ಯಚಕಿತರಾಗಿದ್ದಾಗಿ ಪ್ರಧಾನಮಂತ್ರಿ ಹೇಳಿದರು. ಸಾಂಕ್ರಾಮಿಕ ರೋಗದ ಆರಂಭದಿಂದಲೂ ಸರ್ಕಾರ ದೇಶ ಮತ್ತು ವಿಶ್ವದಲ್ಲಿ ಲಭ್ಯವಿರುವ ಪ್ರತಿಯೊಂದು ಸಂಪನ್ಮೂಲವನ್ನು ಕ್ರೋಢೀಕರಿಸಲು ಎಲ್ಲ ಪ್ರಯತ್ನಗಳನ್ನು ಮಾಡಿತು ಎಂದು ಹೇಳಿದರು. ಸಾಂಕ್ರಾಮಿಕ ರೋಗವು ಅಸ್ತಿತ್ವದಲ್ಲಿರುವವರೆಗೆ, ನಾವು ರಾಷ್ಟ್ರದ ಬಡವರನ್ನು ರಕ್ಷಿಸುತ್ತೇವೆ ಎಂದು ಅವರು ಎಲ್ಲರಿಗೂ ಭರವಸೆ ನೀಡಿದರು.
ಕೋವಿಡ್-19 ವಿರುದ್ಧ ಹೋರಾಡುವುದು ಕೂಡ ಸದೃಢವಾದ ಮತ್ತು ಸೌಹಾರ್ದಯುತ ಒಕ್ಕೂಟ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಬಗ್ಗೆ ಗೌರವಾನ್ವಿತ ಮುಖ್ಯಮಂತ್ರಿಗಳೊಂದಿಗೆ 23 ಸಭೆಗಳು ನಡೆದಿವೆ. ಕೋವಿಡ್-19 ವಿಷಯಕ್ಕೆ ಸಂಬಂಧಿಸಿದಂತೆ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಲು ವಿರೋಧ ಪಕ್ಷಗಳ ಬಹಿಷ್ಕಾರಕ್ಕೆ ಅವರು ದುಃಖ ವ್ಯಕ್ತಪಡಿಸಿದರು.
ಆಯುಷ್ಮಾನ್ ಭಾರತ್ ಅಡಿಯಲ್ಲಿ ಇಂದು ದೇಶದಲ್ಲಿ 80 ಸಾವಿರಕ್ಕೂ ಹೆಚ್ಚು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಕೇಂದ್ರಗಳು ಗ್ರಾಮ ಮತ್ತು ಮನೆಯ ಬಳಿ ಉಚಿತ ಪರೀಕ್ಷೆಗಳು ಸೇರಿದಂತೆ ಉತ್ತಮ ಪ್ರಾಥಮಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಿವೆ ಎಂದರು.
ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ, 1975ರಲ್ಲಿ ಪ್ರಜಾಪ್ರಭುತ್ವವನ್ನು ತುಳಿದವರಿಂದ ನಾವು ಎಂದಿಗೂ ಪ್ರಜಾಪ್ರಭುತ್ವದ ಪಾಠ ಕಲಿಯುವುದಿಲ್ಲ ಎಂದು ಹೇಳಿದರು. ನಮ್ಮ ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆ ವಂಶಪಾರಂಪರ್ಯ ಪಕ್ಷಗಳು. ಒಂದು ಕುಟುಂಬವು ರಾಜಕೀಯ ಪಕ್ಷದಲ್ಲಿ ತುಂಬಾ ಪ್ರಚಲಿತವಾದಾಗ, ರಾಜಕೀಯ ಪ್ರತಿಭೆಗಳು ಬಳಲುತ್ತವೆ ಎಂದು ಪ್ರಧಾನಮಂತ್ರಿ ಹೇಳಿದರು.
"ಕೆಲವು ಸದಸ್ಯರು ಕೇಳಿದರು- ಕಾಂಗ್ರೆಸ್ ಇಲ್ಲದಿದ್ದರೆ ಏನಾಗುತ್ತದೆ? ಎಂದು". "ನಾನು ಹೇಳ ಬಯಸುವುದೇನೆಂದರೆ, ಕಾಂಗ್ರೆಸ್ ಇಲ್ಲದಿದ್ದರೆ ತುರ್ತು ಪರಿಸ್ಥಿತಿ ಇರುತ್ತಿರಲಿಲ್ಲ, ಜಾತಿ ರಾಜಕೀಯ ಇರುತ್ತಿರಲಿಲ್ಲ, ಸಿಖ್ಖರನ್ನು ಎಂದಿಗೂ ಕಗ್ಗೊಲೆ ಮಾಡಲಾಗುತ್ತಿರಲಿಲ್ಲ, ಕಾಶ್ಮೀರಿ ಪಂಡಿತರ ಸಮಸ್ಯೆಗಳು ಸಂಭವಿಸುತ್ತಿರಲಿಲ್ಲ" ಎಂದು ಪ್ರಧಾನಮಂತ್ರಿ ಹೇಳಿದರು.
ರಾಷ್ಟ್ರೀಯ ಪ್ರಗತಿ ಮತ್ತು ಪ್ರಾದೇಶಿಕ ಆಕಾಂಕ್ಷೆಗಳ ನಡುವೆ ಯಾವುದೇ ಸಂಘರ್ಷಗಳನ್ನು ನಾವು ಕಾಣುತ್ತಿಲ್ಲ ಎಂದು ಪ್ರಧಾನಮಂತ್ರಿ ಪುನರುಚ್ಚರಿಸಿದರು. ದೇಶದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ ಆಕಾಂಕ್ಷೆಗಳನ್ನು ಪರಿಹರಿಸಿದಾಗ ಭಾರತದ ಪ್ರಗತಿ ಬಲವಾಗಿರುತ್ತದೆ. ನಮ್ಮ ರಾಜ್ಯಗಳು ಪ್ರಗತಿ ಸಾಧಿಸಿದಾಗ, ದೇಶವು ಪ್ರಗತಿ ಸಾಧಿಸುತ್ತದೆ ಎಂದು ಅವರು ಹೇಳಿದರು.
ನಾವು ವಿಭಿನ್ನತೆಯ ಸಂಪ್ರದಾಯವನ್ನು ಕೊನೆಗೊಳಿಸಬೇಕು ಮತ್ತು ಒಂದೇ ಮನೋಸ್ಥಿತಿಯೊಂದಿಗೆ ಒಟ್ಟಿಗೆ ನಡೆಯುವುದು ಸಮಯದ ಅಗತ್ಯವಾಗಿದೆ ಎಂದು ಹೇಳುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಇದು ಸುವರ್ಣ ಕಾಲ, ಇಡೀ ಜಗತ್ತು ಭಾರತದತ್ತ ಭರವಸೆಯಿಂದ ನೋಡುತ್ತಿದೆ ಮತ್ತು ನಾವು ಈ ಅವಕಾಶವನ್ನು ಕಳೆದುಕೊಳ್ಳಬಾರದು ಎಂದರು.
***
(Release ID: 1796526)
Visitor Counter : 178
Read this release in:
Malayalam
,
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu