ಪ್ರಧಾನ ಮಂತ್ರಿಯವರ ಕಛೇರಿ
ಮೊದಲ ಲೆಕ್ಕಪರಿಶೋಧನೆ ದಿನದ (ಆಡಿಟ್ ದಿವಸ) ಆಚರಣೆಯ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
Posted On:
16 NOV 2021 1:40PM by PIB Bengaluru
ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಇರುವ ದೇಶದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್, ಶ್ರೀ ಜಿ.ಸಿ. ಮುರ್ಮು ಜಿ, ಡೆಪ್ಯುಟಿ ಸಿಎಜಿ ಶ್ರೀಮತಿ ಪರ್ವೀನ್ ಮೆಹ್ತಾ ಜಿ, ಮತ್ತು ಈ ಪ್ರಮುಖ ಸಂಸ್ಥೆಯ ಮೂಲಕ ರಾಷ್ಟ್ರದ ಸೇವೆಗೆ ಬದ್ಧರಾಗಿರುವ ಎಲ್ಲಾ ಸದಸ್ಯರೇ, ಮಹನೀಯರೇ ಮತ್ತು ಮಹಿಳೆಯರೇ ನಿಮಗೆಲ್ಲರಿಗೂ ಲೆಕ್ಕ ಪರಿಶೋಧನೆ ದಿನದಂದು ನನ್ನ ಶುಭಾಶಯಗಳು.
ಸಿಎಜಿ, ಒಂದು ಸಂಸ್ಥೆಯಾಗಿ, ದೇಶದ ಖಾತೆಗಳನ್ನು ಪರಿಶೀಲಿಸುವುದಲ್ಲದೆ, ಉತ್ಪಾದಕತೆ ಮತ್ತು ದಕ್ಷತೆಯಲ್ಲಿ 'ಮೌಲ್ಯವರ್ಧನೆ' ಕೂಡ ಮಾಡುತ್ತದೆ. ಆದ್ದರಿಂದ, ಆಡಿಟ್ ಡೇ ಮತ್ತು ಅದರ ಸಂಬಂಧಿತ ಕಾರ್ಯಕ್ರಮಗಳು ಮತ್ತು ಈ ಸಂದರ್ಭದಲ್ಲಿ ಚಿಂತನೆಯನ್ನು ಮಾಡುವುದು ನಮ್ಮ ಸುಧಾರಣೆ ಮತ್ತು ಸುಧಾರಣೆಯ ಪ್ರಮುಖ ಭಾಗವಾಗಿದೆ. ಸಿಎಜಿಯ ಪ್ರಸ್ತುತತೆ ಮತ್ತು ಘನತೆಯನ್ನು ನಿರಂತರವಾಗಿ ಮರುರೂಪಿಸುತ್ತಿರುವ ನಿಮ್ಮ ನಿಷ್ಠೆಗೆ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ಸಮಯ ಕಳೆದಂತೆ ಕೆಲವೇ ಕೆಲವು ಸಂಸ್ಥೆಗಳು ಬಲಿಷ್ಠಗೊಳ್ಳುತ್ತವೆ, ಪ್ರಬುದ್ಧವಾಗುತ್ತವೆ ಮತ್ತು ಹೆಚ್ಚು ಉಪಯುಕ್ತವಾಗುತ್ತವೆ. ಇಲ್ಲದಿದ್ದರೆ, ಬದಲಾಗುತ್ತಿರುವ ಸನ್ನಿವೇಶಗಳಿಂದಾಗಿ ರಚನೆಯಾದ ಮೂರರಿಂದ ಐದು ದಶಕಗಳಲ್ಲಿ ಹೆಚ್ಚಿನ ಸಂಸ್ಥೆಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತವೆ. ಆದರೆ ಲೆಕ್ಕಪತ್ರ ಪರಿಶೋಧನಾ ಸಂಸ್ಥೆ (ಸಿಎಜಿ)ಗೆ ಸಂಬಂಧಿಸಿದಂತೆ, ಈ ಸಂಸ್ಥೆಯು ಹಲವು ವರ್ಷಗಳ ನಂತರವೂ ಸ್ವತಃ ಒಂದು ದೊಡ್ಡ ಪರಂಪರೆಯಾಗಿದೆ ಎಂದು ನಾವು ಹೇಳಬಹುದು. ಪ್ರತಿ ಪೀಳಿಗೆಗೆ ಅದನ್ನು ಸಂರಕ್ಷಿಸುವುದು, ನೋಡಿಕೊಳ್ಳುವುದು, ಶ್ರೀಮಂತಗೊಳಿಸುವುದು ಮತ್ತು ಮುಂದಿನ ಪೀಳಿಗಗೆಗೆ ಹೆಚ್ಚು ಸಮಂಜಸವಾದ ಮತ್ತು ಉತ್ತೇಜಕವಾಗಿಸುವ ದೊಡ್ಡ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ.
ಸ್ನೇಹಿತರೇ,
ಕಳೆದ ಬಾರಿ ನಾನು ಇಲ್ಲಿಗೆ ಬಂದು ನಿಮ್ಮನ್ನು ಭೇಟಿ ಮಾಡಿದಾಗ ನಾವು ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯನ್ನು ಆಚರಿಸುತ್ತಿದ್ದೆವು. ಕಾರ್ಯಕ್ರಮದಲ್ಲಿ ಬಾಪು ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಮತ್ತು ಇಂದು ಲೆಕ್ಕಪರಿಶೋಧನೆ ದಿನದ ಈ ಮಹತ್ವದ ಕಾರ್ಯಕ್ರಮವನ್ನು ನಡೆಸುತ್ತಿರುವಾಗ, ದೇಶವು ಸ್ವಾತಂತ್ರ್ಯದ 75 ವರ್ಷಗಳ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಇಂದು ದೇಶದ ಅಖಂಡತೆಯ ವೀರ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಸೌಭಾಗ್ಯ ನಮಗೆ ಸಿಕ್ಕಿದೆ. ಗಾಂಧೀಜಿ, ಸರ್ದಾರ್ ಪಟೇಲ್ ಅಥವಾ ಬಾಬಾಸಾಹೇಬ್ ಅಂಬೇಡ್ಕರ್ ರಾಷ್ಟ್ರ ನಿರ್ಮಾಣದಲ್ಲಿ ಅವರೆಲ್ಲರ ಕೊಡುಗೆಯು ಸಿಎಜಿಗೆ, ನಮಗೆಲ್ಲರಿಗೂ, ದೇಶವಾಸಿಗಳಿಗೂ ದೊಡ್ಡ ಸ್ಫೂರ್ತಿಯಾಗಿದೆ. ಈ ಮಹಾನ್ ವ್ಯಕ್ತಿಗಳು ದೇಶಕ್ಕಾಗಿ ದೊಡ್ಡ ಗುರಿಗಳನ್ನು ಹೊಂದಿಸುವುದು, ಅವುಗಳನ್ನು ಸಾಧಿಸುವುದು ಮತ್ತು ವ್ಯವಸ್ಥೆಗಳಲ್ಲಿ ಬದಲಾವಣೆಗಳನ್ನು ತರುವುದು ಹೇಗೆ ಎಂಬುದರ ಕುರಿತು ನಮಗೆ ಬಹಳಷ್ಟು ಕಲಿಸುತ್ತಾರೆ.
ಸ್ನೇಹಿತರೇ,
ದೇಶದಲ್ಲಿ ಲೆಕ್ಕ ಪರಿಶೋಧನೆಗಳನ್ನು ಸಂಶಯದಿಂದ ನೋಡುತ್ತಿದ್ದ ಕಾಲವೊಂದಿತ್ತು. 'ಸಿಎಜಿ Vs ಸರ್ಕಾರ', ಎನ್ನುವಂತೆ ನಮ್ಮ ವ್ಯವಸ್ಥೆಯನ್ನು ಕಾಣಲಾಗುತ್ತಿತ್ತು. ಬಾಬುಗಳು ಮಾತ್ರ ಹೀಗೆಯೇ ಎಂದು ಜನರು ಭಾವಿಸಿದ್ದರು ಮತ್ತು ಸಿಎಜಿಯ ಜನರು ಎಲ್ಲದರಲ್ಲೂ ತಪ್ಪುಗಳನ್ನು ಮಾತ್ರ ಕಾಣುತ್ತಾರೆ ಎಂದು ಬಾಬುಗಳು ಭಾವಿಸಿದರು. ಪ್ರತಿಯೊಬ್ಬರೂ ತಮ್ಮದೇ ಆದ ದೃಷ್ಟಿಕೋನವನ್ನು ಹೊಂದಿದ್ದರು. ಈಗ ಈ ಮನಸ್ಥಿತಿ ಬದಲಾಗಿದೆ. ಇಂದು ಲೆಕ್ಕಪರಿಶೋಧನೆಯು ಮೌಲ್ಯವರ್ಧನೆಯ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ.
ಸಿಎಜಿಯು ಸರ್ಕಾರದ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವಾಗ ಹೊರಗೆ ನಿಂತು ನೋಡುವ ದೃಷ್ಟಿಕೋನದ ಪ್ರಯೋಜನವನ್ನು ಹೊಂದಿದೆ . ನೀವು ನಮಗೆ ಏನೇ ಸಲಹೆ ನೀಡಿದರೂ, ನಾವು ವ್ಯವಸ್ಥಿತ ಸುಧಾರಣೆಗಳನ್ನು ಮಾಡುತ್ತೇವೆ ಮತ್ತು ನಾವು ಅದನ್ನು ನಿಮ್ಮ ಬೆಂಬಲವೆಂದು ಪರಿಗಣಿಸುತ್ತೇವೆ.
ನಾನು ದೀರ್ಘಕಾಲದಿಂದ ಸರ್ಕಾರಗಳನ್ನು ನಡೆಸುವ ಭಾಗ್ಯವನ್ನು ಹೊಂದಿದ್ದೇನೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನನ್ನ ಅಧಿಕಾರಿಗಳಿಗೆ ಹೇಳುತ್ತಿದ್ದೆ ಮತ್ತು ಸಿಎಜಿ ಕೇಳುವ ಎಲ್ಲಾ ದಾಖಲೆಗಳು ಮತ್ತು ದತ್ತಾಂಶವನ್ನು ನೀವು ನೀಡಬೇಕು ಎಂದು ನಾನು ಇಂದಿಗೂ ಹೇಳುತ್ತಿದ್ದೇನೆ. ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಇತರ ಫೈಲ್‌ಗಳನ್ನು ಸಹ ಅವರಿಗೆ ನೀಡಿ. ಇದು ನಮಗೆ ಉತ್ತಮ ಕೆಲಸ ಮಾಡಲು ಅವಕಾಶವನ್ನು ಸೃಷ್ಟಿಸುತ್ತದೆ. ನಮ್ಮ ಸ್ವಯಂ ಮೌಲ್ಯಮಾಪನ ಕೆಲಸ ಸುಲಭವಾಗುತ್ತದೆ.
ಸ್ನೇಹಿತರೇ,
ಪ್ರಾಮಾಣಿಕತೆ ಮತ್ತು ಪಾರದರ್ಶಕತೆ, ಅದು ನಮ್ಮ ವೈಯಕ್ತಿಕ ಜೀವನದಲ್ಲಿ ಅಥವಾ ಸರ್ಕಾರದಲ್ಲಿ, ನಮಗೆ ದೊಡ್ಡ ನೈತಿಕಸ್ಥೈರ್ಯವಾಗಿದೆ. ಉದಾಹರಣೆಗೆ, ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪಾರದರ್ಶಕತೆಯ ಕೊರತೆಯಿಂದಾಗಿ ಹಿಂದೆ ಅಸಮಂಜಸ ಅಭ್ಯಾಸಗಳನ್ನು ಅನುಸರಿಸಲಾಯಿತು. ಇದರಿಂದಾಗಿ ಬ್ಯಾಂಕ್‌ಗಳ ಎನ್‌ಪಿಎ ಹೆಚ್ಚುತ್ತಲೇ ಇತ್ತು. ಈ ಹಿಂದೆ ಎನ್‌ಪಿಎಗಳನ್ನು ಹೇಗೆ ಮುಚ್ಚಿಡಲಾಗುತ್ತಿತ್ತು ಎಂಬುದು ನನಗಿಂತ ನಿಮಗೆ ಚೆನ್ನಾಗಿ ತಿಳಿದಿದೆ. ಆದರೆ ನಾವು ಹಿಂದಿನ ಸರ್ಕಾರಗಳ ಸತ್ಯ ಮತ್ತು ವಾಸ್ತವಿಕ ನಿಲುವನ್ನು ಸಂಪೂರ್ಣ ಪ್ರಾಮಾಣಿಕತೆಯಿಂದ ದೇಶದ ಮುಂದೆ ಇಡುತ್ತೇವೆ. ನಾವು ಸಮಸ್ಯೆಗಳನ್ನು ಗುರುತಿಸಿದರೆ ಮಾತ್ರ ನಾವು ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ಅದೇ ರೀತಿ, ವಿತ್ತೀಯ ಕೊರತೆ ಮತ್ತು ಸರ್ಕಾರದ ವೆಚ್ಚದ ಬಗ್ಗೆ ನಿಮ್ಮ ಕಡೆಯಿಂದ ನಿರಂತರ ಎಚ್ಚರಿಕೆಗಳು ಇದ್ದವು. ನಾವು ನಿಮ್ಮ ಕಾಳಜಿಗಳನ್ನು ಸಕಾರಾತ್ಮಕ ರೀತಿಯಲ್ಲಿ ಸ್ವೀಕರಿಸಿದೆವು ಮತ್ತು ಬಳಸದ ಮತ್ತು ಕಡಿಮೆ ಬಳಕೆಗೆ ಒಡ್ಡಿಕೊಂಡಿರುವ ಮೂಲಗಳನ್ನು ಮೌಲ್ಯೀಕರಣಗೊಳಿಸುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡೆವು. ಈ ನಿರ್ಧಾರಗಳ ಫಲಿತಾಂಶದವೇ ಆರ್ಥಿಕತೆಯು ಮತ್ತೆ ವೇಗ ಪಡೆಯುತ್ತಿದೆ ಮತ್ತು ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದೆ ಮತ್ತು ಸ್ವಾಗತಿಸಲಾಗುತ್ತಿದೆ. ಸಿಎಜಿ ಸಮಗ್ರ ಮೌಲ್ಯಮಾಪನವನ್ನು ಮಾಡಿದಾಗ, ಈ ನಿರ್ಧಾರಗಳ ಹಲವು ಅಂಶಗಳು ಕೆಲವೊಮ್ಮೆ ತಜ್ಞರಿಂದಲೂ ಬಿಟ್ಟು ಹೋಗಿರುತ್ತವೆ ಎಂದು ನಾನು ಭಾವಿಸುತ್ತೇನೆ.
ಸ್ನೇಹಿತರೇ,
ʼಸರ್ಕಾರಸರ್ವಂ, ಸರ್ಕಾರಾಜಾನಾಂ ಸರ್ಕಾರಾಗ್ರಹಣಂ’ ಎಂಬ ಹಳೆಯ ಚಿಂತನೆಗಳನ್ನು ಬದಲಾಯಿಸುವ ಇಂತಹ ವ್ಯವಸ್ಥೆಯನ್ನು ಇಂದು ನಾವು ಅಭಿವೃದ್ಧಿಪಡಿಸುತ್ತಿದ್ದೇವೆ. ಇದರಿಂದ ಸರ್ಕಾರದ ಹಸ್ತಕ್ಷೇಪವೂ ಕಡಿಮೆಯಾಗುತ್ತಿದ್ದು, ನಿಮ್ಮ ಕೆಲಸವೂ ಸುಲಭವಾಗುತ್ತಿದೆ. 'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ'ದ ಭಾಗವಾಗಿ, ಸಂಪರ್ಕರಹಿತ ಪದ್ಧತಿಗಳು, ಸ್ವಯಂಚಾಲಿತ ನವೀಕರಣಗಳು, ಮುಖರಹಿತ ಮೌಲ್ಯಮಾಪನಗಳು ಮತ್ತು ಸೇವಾ ವಿತರಣೆಗಾಗಿ ಆನ್‌ಲೈನ್ ಅಪ್ಲಿಕೇಶನ್‌ಗಳಂತಹ ಸುಧಾರಣೆಗಳು ಸರ್ಕಾರದ ಅನಗತ್ಯ ಹಸ್ತಕ್ಷೇಪವನ್ನು ಕೊನೆಗೊಳಿಸಿದೆ.
ವ್ಯವಸ್ಥೆಯಲ್ಲಿ ಪಾರದರ್ಶಕತೆ ಇದ್ದಾಗ ಫಲಿತಾಂಶವೂ ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇಂದು ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್-ಅಪ್ ನವೋದ್ಯಮ ಪರಿಸರ ವ್ಯವಸ್ಥೆಯಾಗಿದೆ. ಇಂದು 50ಕ್ಕೂ ಹೆಚ್ಚು ಭಾರತೀಯ ಯುನಿಕಾರ್ನ್ ನವೋದ್ಯಮಗಳಿವೆ. ನಮ್ಮ ಐಐಟಿಗಳು ಯುನಿಕಾರ್ನ್‌ಗಳ ನಾಲ್ಕನೇ ಅತಿದೊಡ್ಡ ಸೃಷ್ಟಿಕರ್ತರಾಗಿ ಹೊರಹೊಮ್ಮಿವೆ. ನೀವೆಲ್ಲರೂ, ದೇಶದ ಪ್ರತಿಯೊಂದು ಸಂಸ್ಥೆಯು ಈ 'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ' ಅಭಿಯಾನದಲ್ಲಿ ಭಾಗಿಗಳಾಗಬೇಕು, ಮಾಲೀಕತ್ವವನ್ನು ಪಡೆದುಕೊಳ್ಳಬೇಕು ಮತ್ತು ಸಹ ಪ್ರಯಾಣಿಕರಾಗಿ ಜೊತೆಯಾಗಿರಬೇಕು. ಈ ಅಮೃತಘಳಿಗೆಯಲ್ಲಿ ನಮ್ಮ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಗಳಿಗೆ ಈ ಸಂಕಲ್ಪವು 2047ರಲ್ಲಿ ಭಾರತವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ದೇಶವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಉಪಯುಕ್ತ ಶಕ್ತಿಯಾಗಿದೆ.
ಸ್ನೇಹಿತರೇ,
ದಶಕಗಳಿಂದ, ನಮ್ಮ ದೇಶದಲ್ಲಿ ಸಿಎಜಿಯ ಕೆಲಸವು ಸರ್ಕಾರಿ ಕಡತಗಳು ಮತ್ತು ಪುಸ್ತಕಗಳಿಗೆ ಅನವಶ್ಯಕ ಮೂಗು ತೂರಿಸುವುದಾಗಿದೆ ಎಂದು ಸಿಎಜಿಗೆ ಸಂಬಂಧಿಸಿದ ಜನರ ಚಿತ್ರಣವಾಗಿತ್ತು. 2019ರಲ್ಲಿ ನಾನು ನಿಮ್ಮ ನಡುವೆ ಬಂದಾಗಲೂ ಇದನ್ನು ಪ್ರಸ್ತಾಪಿಸಿದ್ದೆ. ನೀವು ಬದಲಾವಣೆಗಳನ್ನು ತ್ವರಿತವಾಗಿ ಹೊರತರುತ್ತಿರುವಿರಿ ಮತ್ತು ಪ್ರಕ್ರಿಯೆಗಳನ್ನು ಆಧುನೀಕರಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಇಂದು ನೀವು ಸುಧಾರಿತ ವಿಶ್ಲೇಷಣಾ ಸಾಧನಗಳು, ಜಿಯೋ-ಸ್ಪೇಶಿಯಲ್ ಡೇಟಾ ಮತ್ತು ಉಪಗ್ರಹ ಚಿತ್ರಣವನ್ನು ಬಳಸುತ್ತಿರುವಿರಿ. ಈ ನಾವೀನ್ಯತೆಗಳು ನಮ್ಮ ಸಂಪನ್ಮೂಲಗಳಲ್ಲಿ ಮತ್ತು ನಮ್ಮ ಕೆಲಸದ ಶೈಲಿಯಲ್ಲಿಯೂ ಇರಬೇಕು.
ಕ್ಷೇತ್ರ ಲೆಕ್ಕಪರಿಶೋಧನೆಯ ಮೊದಲು ನೀವು ಈಗಾಗಲೇ ಪ್ರಾಥಮಿಕ ಸಂಶೋಧನೆಗಳನ್ನು ಇಲಾಖೆಗಳೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದ್ದೀರಿ ಎಂದು ನನಗೆ ತಿಳಿಸಲಾಗಿದೆ. ಇದೊಂದು ಆರೋಗ್ಯಕರ ಅಭ್ಯಾಸ. ಈ ಪ್ರಾಥಮಿಕ ಸಂಶೋಧನೆಗಳನ್ನು ನಿಮ್ಮ ಕ್ಷೇತ್ರ ಅಧ್ಯಯನದೊಂದಿಗೆ ಸಂಯೋಜಿಸಿದಾಗ ಫಲಿತಾಂಶಗಳು ಉತ್ತಮವಾಗಿರುತ್ತವೆ. ಅದೇ ರೀತಿ, ನೀವು ಕಚೇರಿಯಿಂದ ಹೊರಗೆ ಹೋಗಿ ಲೆಕ್ಕ ಪರಿಶೋಧಕರು ಮತ್ತು ಮಧ್ಯಸ್ಥಗಾರರನ್ನು ಭೇಟಿಯಾಗುವಂತೆ ಸೂಚಿಸಿದ್ದೆ. ನೀವು ಈ ಸಲಹೆಯನ್ನು ಸ್ವೀಕರಿಸಿರುವಿರಿ. ಕಳೆದ ವರ್ಷ ಫೆಬ್ರವರಿಯಲ್ಲಿ ಸಿಎಜಿಯ ಹಿರಿಯ ಅಧಿಕಾರಿಗಳು ಮತ್ತು ಸಚಿವಾಲಯಗಳ ಕಾರ್ಯದರ್ಶಿಗಳು ವಿಚಾರಸಂಕಿರಣ ಕೂಡ ನಡೆಸಿದ್ದರು. ನಾನು ಈ ಪ್ರಯತ್ನಗಳನ್ನು ಪ್ರಶಂಸಿಸುತ್ತೇನೆ ಮತ್ತು ಈ ಕಾರ್ಯಗಳು ವಿಚಾರಸಂಕಿರಣಕ್ಕೆ ನಿಲ್ಲದೆ ಮುಂದುವರೆಯುತ್ತದೆ ಎಂದು ಭಾವಿಸುತ್ತೇನೆ.
ಇದು ಸಿಎಜಿ ಮತ್ತು ಇಲಾಖೆಗಳ ಸಹಭಾಗಿತ್ವದಲ್ಲಿ ಪ್ರಗತಿಗೆ ಮಾದ್ಯಮವಾಗಲಿದೆ. ಈ ಪ್ರಕ್ರಿಯೆಯಲ್ಲಿ ನೀವು ಗ್ರಾಮ ಪಂಚಾಯಿತಿಯ ಮಹಿಳಾ ಮುಖ್ಯಸ್ಥರನ್ನು ಸೇರಿಸಿದ್ದೀರಿ ಎಂದು ನಾನು ಕೇಳಿದಾಗ, ಇಂದು ನಮ್ಮ ಸಂಸ್ಥೆಗಳು ತಳಮಟ್ಟದಲ್ಲಿ ಇಂತಹ ಮುಕ್ತ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಈ ವಿಕಸನ ಮತ್ತು ಅನುಭವವು ಸಿಎಜಿ ಹಾಗೂ ನಮ್ಮ ಲೇಕ್ಕಪರಿಶೋಧನೆಯ ಕಾರ್ಯವಿಧಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ನಮ್ಮ ಲೆಕ್ಕಪರಿಶೋಧನೆಯು ಎಷ್ಟು ಪ್ರಬಲ ಮತ್ತು ವೈಜ್ಞಾನಿಕವಾಗಿದೆಯೋ ಅಷ್ಟು ನಮ್ಮ ವ್ಯವಸ್ಥೆಗಳು ಹೆಚ್ಚು ಪಾರದರ್ಶಕ ಮತ್ತು ಬಲವಾಗಿರುತ್ತವೆ.
ಸ್ನೇಹಿತರೇ,
ಕೊರೊನದ ಸಂಕಷ್ಟದ ಸಮಯದಲ್ಲಿಯೂ ಸಿಎಜಿ ಎಷ್ಟು ಶ್ರದ್ಧೆಯಿಂದ ಕೆಲಸ ಮಾಡಿದೆ ಮತ್ತು ಮುರ್ಮು ಜಿ ಅವರಿಂದ ಆ ವಿಷಯಗಳ ಬಗ್ಗೆ ಮಾಹಿತಿಯನ್ನು ನಾನು ಪಡೆಯುತ್ತಿದ್ದೇನೆ. ವಿಶ್ವದ ಇತರ ಪ್ರಮುಖ ದೇಶಗಳ ಮೂಲಕ ಕೊರೊನಾ ಅಲೆ ಇಲ್ಲಿಗೆ ತಲುಪಿದೆ, ನಮ್ಮ ಮುಂದೆ ಇಷ್ಟು ದೊಡ್ಡ ಜನಸಂಖ್ಯೆಯನ್ನು ನಿಭಾಯಿಸುವ ಸವಾಲು ಇತ್ತು, ಸೀಮಿತ ಸಂಪನ್ಮೂಲಗಳ ಒತ್ತಡ ನಮ್ಮ ಆರೋಗ್ಯ ಕಾರ್ಯಕರ್ತರ ಮೇಲಿತ್ತು, ಆದರೆ ದೇಶವು ಪ್ರತಿ ರಂಗದಲ್ಲೂ ಚಿಕಿತ್ಸೆಯಿಂದ ಹಿಡಿದು ರಕ್ಷಣೆಯವರೆಗೆ ಯುದ್ದೋಪಾದಿಯಲ್ಲಿ ಕೆಲಸ ಮಾಡಿದೆ. ಅಭಿವೃದ್ಧಿ ಹೊಂದಿದ ದೇಶಗಳು ಅಪಾರ ಸಂಪನ್ಮೂಲಗಳನ್ನು ಹೊಂದಿದ್ದರೆ, ನಾವು ಸರಿಸಾಟಿಯಿಲ್ಲದ ಸಾಮಾಜಿಕ ಶಕ್ತಿಯನ್ನು ಹೊಂದಿದ್ದೇವೆ.
ಲಸಿಕೆ ನೀಡುವಿಕೆಯಲ್ಲಿ ಸಾಮಾನ್ಯ ಜನರಿಗೆ ಸಿಎಜಿ ತನ್ನ ಜವಾಬ್ದಾರಿಗಳಿಗಿಂತಲೂ ಮೀರಿ ಹೆಚ್ಚಿನ ಸಹಾಯ ಮಾಡದೆ ಎಂದು ನನಗೆ ತಿಳಿಸಲಾಗಿದೆ. ದೇಶದ ಪ್ರತಿಯೊಂದು ಸಂಸ್ಥೆಗಳು, ಪ್ರತಿ ದೇಶವಾಸಿಗಳು ಈ ಮನೋಭಾವದಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುವಲ್ಲಿ ನಿರತರಾಗಿದ್ದರು. ನಮ್ಮ ಕೆಲಸ ಏನು ಎಂದು ನಾವು ನೋಡಲಿಲ್ಲ, ನಾವು ಏನು ಮಾಡಬಹುದು ಎಂದು ನಾವು ನೋಡಿದ್ದೇವೆ! ಈ ಶತಮಾನದ ಅತಿದೊಡ್ಡ ಸಾಂಕ್ರಾಮಿಕ ರೋಗವು ಎಷ್ಟು ಸವಾಲಿನದ್ದಾಗಿದೆಯೋ, ಅದರ ವಿರುದ್ಧ ದೇಶದ ಹೋರಾಟವೂ ಅಷ್ಟೇ ಅಸಾಧಾರಣವಾಗಿದೆ.
ಇಂದು ನಾವು ವಿಶ್ವದ ಅತಿದೊಡ್ಡ ಲಸಿಕೆ ಕಾರ್ಯಕ್ರಮವನ್ನು ಸಹ ನಡೆಸುತ್ತಿದ್ದೇವೆ. ಕೆಲವೇ ವಾರಗಳ ಹಿಂದೆ, ದೇಶವು 100 ಕೋಟಿ ಲಸಿಕೆ ಡೋಸ್ ಮೈಲಿಗಲ್ಲನ್ನು ದಾಟಿದೆ. ಸಿಎಜಿ ತನ್ನ ದಿನನಿತ್ಯದ ಕೆಲಸದ ಜೊತೆಗೆ ಸಾಂಕ್ರಾಮಿಕ ರೋಗದ ವಿರುದ್ಧ ದೇಶದ ಹೋರಾಟದ ಸಮಯದಲ್ಲಿ ಅಭಿವೃದ್ಧಿಪಡಿಸಿದ ಉತ್ತಮ ಅಭ್ಯಾಸಗಳನ್ನು ಅಧ್ಯಯನ ಮಾಡಬೇಕೆಂದು ನಾನು ಬಯಸುತ್ತೇನೆ. ವ್ಯವಸ್ಥಿತ ಕಲಿಕೆ, ದೇಶವು ಕಲಿತ ಮತ್ತು ಅಳವಡಿಸಿಕೊಂಡ ಹೊಸ ವಿಷಯಗಳು ಭವಿಷ್ಯದಲ್ಲಿ ಜಾಗತಿಕ ಉತ್ತಮ ಅಭ್ಯಾಸಗಳಾಗಲು ಸಹಾಯ ಮಾಡುತ್ತದೆ ಮತ್ತು ಭವಿಷ್ಯದ ಸಾಂಕ್ರಾಮಿಕ ರೋಗಗಳ ವಿರುದ್ಧ ದೃಢವಾಗಿ ಹೋರಾಡಲು ಜಗತ್ತನ್ನು ಸಿದ್ಧಪಡಿಸುತ್ತದೆ.
ಸ್ನೇಹಿತರೇ,
ಪ್ರಾಚೀನ ಕಾಲದಲ್ಲಿ, ಮಾಹಿತಿಯನ್ನು ಕಥೆಗಳ ಮೂಲಕ ರವಾನಿಸಲಾಗುತ್ತಿತ್ತು. ಇತಿಹಾಸವನ್ನು ಕಥೆಗಳ ಮೂಲಕ ಬರೆಯಲಾಗಿದೆ. ಆದರೆ ಇಂದು 21 ನೇ ಶತಮಾನದಲ್ಲಿ, ದತ್ತಾಂಶವು ಮಾಹಿತಿಯಾಗಿದೆ ಮತ್ತು ಮುಂಬರುವ ದಿನಗಳಲ್ಲಿ ನಮ್ಮ ಇತಿಹಾಸವನ್ನು ದತ್ತಾಂಶದ ಮೂಲಕ ನೋಡಲಾಗುತ್ತದೆ ಮತ್ತು ಅರ್ಥಮಾಡಿಕೊಳ್ಳಲಾಗುತ್ತದೆ. ಭವಿಷ್ಯದಲ್ಲಿ, ದತ್ತಾಂಶವು ಇತಿಹಾಸವನ್ನು ನಿರೂಪಿಸಲಿದೆ! ಮತ್ತು, ದತ್ತಾಂಶ ಮತ್ತು ಅದರ ಮೌಲ್ಯಮಾಪನಕ್ಕೆ ಬಂದಾಗ, ನಿಮಗಿಂತ ಉತ್ತಮ ಪರಿಣಿತರು ಇಲ್ಲ. ಆದ್ದರಿಂದ, ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ದೇಶವು ಮಾಡುತ್ತಿರುವ ಪ್ರಯತ್ನಗಳು, ಅದು ಯಾವ ಗುರಿಗಳಿಗಾಗಿ ಮುನ್ನಡೆಯುತ್ತಿದೆ ಮತ್ತು ಈ ಪ್ರಯತ್ನಗಳು ಮತ್ತು ಈ ಅವಧಿಯನ್ನು ಭವಿಷ್ಯದಲ್ಲಿ ಮೌಲ್ಯಮಾಪನ ಮಾಡಿದಾಗ, ನಿಮ್ಮ ಕೆಲಸ, ನಿಮ್ಮ ದಾಖಲೆಗಳು ಅಧಿಕೃತ ಆಧಾರವಾಗುತ್ತವೆ. ಇದು. ನಾವು ಇಂದು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಇತಿಹಾಸವನ್ನು ನೋಡುತ್ತೇವೆ ಮತ್ತು ಅದರಿಂದ ಸ್ಫೂರ್ತಿ ಪಡೆಯುತ್ತೇವೆ, ಅದೇ ರೀತಿ ದೇಶವು ಸ್ವಾತಂತ್ರ್ಯದ ನೂರು ವರ್ಷಗಳನ್ನು ಪೂರೈಸಿದಾಗ, ನಿಮ್ಮ ಪ್ರಸ್ತುತ ಅಧ್ಯಯನ ವರದಿಗಳು ಭಾರತಕ್ಕೆ ಅದರ ಇತಿಹಾಸವನ್ನು ನೋಡಲು ಮತ್ತು ಅದರಿಂದ ಕಲಿಯಲು ಪ್ರಮುಖ ಸಾಧನವಾಗಬಹುದು.
ಸ್ನೇಹಿತರೇ,
ಇಂದು, ದೇಶವು ತನ್ನಲ್ಲಿಯೇ ಅನಿರೀಕ್ಷಿತ ಮತ್ತು ಅಭೂತಪೂರ್ವವಾದ ಅನೇಕ ಕೆಲಸಗಳನ್ನು ಮಾಡುತ್ತಿದೆ. ಇದೀಗ ನಾನು ನಿಮಗೆ ಉದಾಹರಣೆಯಾಗಿ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವನ್ನು ಪ್ರಸ್ತಾಪಿಸಿದಾಗ, ಅದೇ ರೀತಿ, ಅನೇಕ ನಿರ್ಣಯಗಳಲ್ಲಿ ತೊಡಗಿರುವ ದೇಶವಾಸಿಗಳ ಪ್ರಯತ್ನಗಳನ್ನು ನೀವು ನೋಡಬಹುದು. ಕೆಲವು ವರ್ಷಗಳ ಹಿಂದೆ, ನಾವು ಲಕ್ಷ ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಖಾತೆಗಳ ಹಣಕಾಸು ವಿವರವನ್ನು ಇಡುತ್ತಿದ್ದೆವು, ಆದರೆ ದೇಶದ ಕೋಟಿಗಟ್ಟಲೆ ನಾಗರಿಕರಿಗೆ ಸ್ವಂತ ಬ್ಯಾಂಕ್ ಖಾತೆಗಳಿಲ್ಲ ಎಂಬುದು ಸತ್ಯ. ವಾಸಕ್ಕೆ ಸ್ವಂತ ಮನೆ ಇಲ್ಲದ, ಕಾಂಕ್ರಿಟ್ ಸೂರು ಇಲ್ಲದ ಎಷ್ಟೋ ಕುಟುಂಬಗಳಿದ್ದವು. ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್ ಸಂಪರ್ಕ, ಮನೆಯಲ್ಲಿ ಶೌಚಾಲಯ, ಬಡವರಲ್ಲಿ ಬಡವರಿಗೆ ಚಿಕಿತ್ಸೆ ಸೌಲಭ್ಯಗಳಂತಹ ಮೂಲಭೂತ ಅವಶ್ಯಕತೆಗಳು ನಮ್ಮದೇ ದೇಶದಲ್ಲಿ ಕೋಟಿಗಟ್ಟಲೆ ಜನರಿಗೆ ಐಷಾರಾಮಿಯಾಗಿದ್ದವು. ಆದರೆ ಇಂದು ಈ ಪರಿಸ್ಥಿತಿ ಬದಲಾಗಿದೆ ಮತ್ತು ವೇಗವಾಗಿ ಬದಲಾಗುತ್ತಿದೆ.
ದೇಶ ಈ ಹಂತಕ್ಕೆ ತಲುಪಿದ್ದರೆ, ಅದರ ಹಿಂದೆ ಹಲವಾರು ದೇಶವಾಸಿಗಳ ಶ್ರಮವಿದೆ. ಅವರೆಲ್ಲರೂ, ನಮ್ಮ ಆರೋಗ್ಯ ಕ್ಷೇತ್ರ, ಬ್ಯಾಂಕಿಂಗ್ ವಲಯ, ಸರ್ಕಾರಿ ಇಲಾಖೆಗಳು ಮತ್ತು ಆಡಳಿತ, ಅಥವಾ ನಮ್ಮ ಖಾಸಗಿ ವಲಯದ ಜನರು ಅಭೂತಪೂರ್ವ ಸಾಮರಸ್ಯದಿಂದ ಅಸಾಮಾನ್ಯ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ಹಾಗಾಗಿಯೇ ಬಡವರ ಹಕ್ಕುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ಸಾಧ್ಯವಾಗಿದೆ, ಹಾಗಾಗಿಯೇ ದೇಶದ ಅಭಿವೃದ್ಧಿ ಈ ವೇಗವನ್ನು ಪಡೆದುಕೊಂಡಿದೆ.
ಸ್ನೇಹಿತರೇ,
ಸಮಾಜದಲ್ಲಿ ಈ ನಿರ್ಧಾರಗಳ ಪ್ರಭಾವವು ಎಷ್ಟು ಸಮಗ್ರವಾಗಿದೆ ಎಂದರೆ ಈ ದಿಕ್ಕಿನಲ್ಲಿ ಕೇಂದ್ರೀಕೃತ ಅಧ್ಯಯನಗಳು ನಡೆದಾಗ ಮಾತ್ರ ನಾವು ಅವುಗಳನ್ನು ಅರ್ಥಮಾಡಿಕೊಳ್ಳಬಹುದು! ದೇಶದ ಈ ಪ್ರಯತ್ನಗಳು ಮತ್ತು ಫಲಿತಾಂಶಗಳನ್ನು ಸಿಎಜಿ ಮೌಲ್ಯಮಾಪನ ಮಾಡಬೇಕು. ಈ ವಿವರಗಳು ದೇಶದ ಸಾಮೂಹಿಕ ಪ್ರಯತ್ನಗಳ ದ್ಯೋತಕವಾಗಿರುತ್ತದೆ, ದೇಶದ ಸಾಮರ್ಥ್ಯ ಮತ್ತು ಅದರ ವಿಶ್ವಾಸದ ಜೀವಂತ ದಾಖಲೆಯಾಗಿದೆ. ಅದೇ ಸಮಯದಲ್ಲಿ, ಮುಂದೆ ಬರುವ ಸರ್ಕಾರಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ನಿಮ್ಮ ದಾಖಲೆಗಳು ಸಹಾಯಕವಾಗುತ್ತವೆ.
ದೇಶಕ್ಕೆ ನಿಮ್ಮ ಕೊಡುಗೆ ನಿರಂತರವಾಗಿ ಮುಂದುವರಿಯುತ್ತದೆ ಮತ್ತು ದೇಶದ ಅಭಿವೃದ್ಧಿಗೆ ಹೊಸ ಚೈತನ್ಯವನ್ನು ನೀಡುತ್ತದೆ ಎಂದು ನನಗೆ ಖಾತ್ರಿಯಿದೆ.
ಈ ನಂಬಿಕೆಯೊಂದಿಗೆ, ಎಲ್ಲರಿಗೂ ತುಂಬಾ ಧನ್ಯವಾದಗಳು! ಮತ್ತು ನಿಮ್ಮೆಲ್ಲರಿಗೂ ಅನೇಕ ಶುಭಾಶಯಗಳು.
ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.
***
(Release ID: 1773321)
Visitor Counter : 290
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam