ಪ್ರಧಾನ ಮಂತ್ರಿಯವರ ಕಛೇರಿ

ತ್ರಿಪುರಾದ 1.47 ಲಕ್ಷಕ್ಕೂ ಅಧಿಕ ಪಿಎಂಎವೈ-ಜಿ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ವರ್ಗಾಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


“ಇಂದು ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೊದಲ ಕಂತು ಬಿಡುಗಡೆ ಮಾಡಿರುವುದು ತ್ರಿಪುರಾದ ಕನಸಿಗೆ ಹೊಸ ಚೈತನ್ಯ ತುಂಬಿದೆ’’

 “ಡಬಲ್ ಎಂಜಿನ್ ಸರ್ಕಾರ ಪೂರ್ಣ ಶಕ್ತಿ ಮತ್ತು ಪ್ರಾಮಾಣಿಕತೆಯಿಂದ ತ್ರಿಪುರಾದ ಅಭಿವೃದ್ಧಿಯಲ್ಲಿ ತೊಡಗಿದೆ’’

“ಅನಗತ್ಯ ನಿಯಮಗಳು ಜನರ ಕಲ್ಯಾಣಕ್ಕೆ ಅಡ್ಡಿಯಾಗಬಾರದು’’

 “ಮೊದಲು ನಮ್ಮ ನದಿಗಳು ದೇಶದ ಉತ್ತರ ಮತ್ತು ಪಶ್ಚಿಮ ಭಾಗದಿಂದ ಪೂರ್ವಕ್ಕೆ ಹರಿಯುತ್ತಿದ್ದವು, ಆದರೆ ಅದು ಇಲ್ಲಿಗೆ ತಲುಪುವ ಮೊದಲೇ ಅಭಿವೃದ್ಧಿಯ ಗಂಗೆ ನಿಲ್ಲುತ್ತಿತ್ತು’’

“ಇಂದು ದೇಶದ ಅಭಿವೃದ್ಧಿಯನ್ನು ‘ಏಕ್ ಭಾರತ್-ಶ್ರೇಷ್ಠ ಭಾರತ್’ ಮನೋಭಾವದಿಂದ ನೋಡಲಾಗುತ್ತಿದೆ. ಅಭಿವೃದ್ಧಿಯನ್ನು ಈಗ ಏಕತೆ-ಸಮಗ್ರತೆಗೆ ಸಮಾನಾರ್ಥಕವೆಂದು ನೋಡಲಾಗುತ್ತಿದೆ’’

“ದೇಶವು ಈಗ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಪ್ರತಿವರ್ಷ ನವೆಂಬರ್ 15ರಂದು ಜನ್ ಜಾತಿಯಾ ದಿನವನ್ನಾಗಿ ಆಚರಿಸುತ್ತಿದೆ. ಈ ದಿನವು ಕೇವಲ ಆದಿವಾಸಿ ಸಮಾಜದ ಕೊಡುಗೆಗೆ ಗೌರವ ಸಲ್ಲಿಸುವ ದಿನವಾಗದೆ ಸಾಮರಸ್ಯ ಸಮಾಜದ ಸಂಕೇತವಾಗಿ ಹೊರಹೊಮ್ಮಲಿದೆ’’

Posted On: 14 NOV 2021 2:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತ್ರಿಪುರಾದ 1.47 ಲಕ್ಷ ಪ್ರಧಾನಮಂತ್ರಿ ಆವಾಸ್ ಯೋಜನಾ(ಪಿಎಂಎವೈ-ಜಿ) ಫಲಾನುಭವಿಗಳಿಗೆ ಮೊದಲ ಕಂತಿನ ಹಣವನ್ನು ವರ್ಗಾವಣೆ ಮಾಡಿದರು. ಇದೇ ವೇಳೆ 700 ಕೋಟಿ ರೂಪಾಯಿಗೂ ಅಧಿಕ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಯಿತು. 

ಪ್ರಧಾನಮಂತ್ರಿ ಅವರ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ತ್ರಿಪುರಾದ ವಿಭಿನ್ನ ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿಯನ್ನು ಮನಗಂಡು, ವಿಶೇಷವಾಗಿ ರಾಜ್ಯದಲ್ಲಿ ‘ಕಚ್ಚಾ’ ಮನೆಗಳ ವ್ಯಾಖ್ಯಾನವನ್ನು ಬದಲಿಸಲಾಗಿದೆ. ದೊಡ್ಡ ಸಂಖ್ಯೆಯ ಫಲಾನುಭವಿಗಳು ‘ಕಚ್ಚಾ’ ಮನೆಗಳಲ್ಲಿ ವಾಸಿಸುತ್ತಿದ್ದರು. ಅವರು ‘ಪಕ್ಕಾ’ ಮನೆಗಳ ನಿರ್ಮಾಣಕ್ಕೆ ಆರ್ಥಿಕ ನೆರವು ಪಡೆಯುವರು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಮತ್ತು ತ್ರಿಪುರಾದ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಧಾನಮಂತ್ರಿ ಅವರು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.  

ತ್ರಿಪುರಾದ ಧಲೈನ ಅನಿಕಾ ಕುಕಿ ದೆಬ್ಬರ್ಮಾ ಅವರೊಂದಿಗೆ ಪ್ರಧಾನಮಂತ್ರಿ, ಅವರ ಮತ್ತು ಅವರ ಜೀವನೋಪಾಯದ ಕುರಿತು ಮಾತನಾಡಿದರು ಮತ್ತು ಆದಷ್ಟು ಶೀಘ್ರ ಬಲಿಷ್ಠ ಮತ್ತು ನೆನಪಿನಲ್ಲಿಡಬಹುದಾದಂತಹ ಮನೆಯನ್ನು ಕಟ್ಟಿಕೊಳ್ಳುವಂತೆ  ಹೇಳಿದರು. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಡ ಮತ್ತು ಬುಡಕಟ್ಟು ಆದಿವಾಸಿಗಳ ಕಲ್ಯಾಣಕ್ಕೆ ಅಗ್ರ ಆದ್ಯತೆ ನೀಡಲಾಗಿದೆ  ಎಂದು ಪ್ರಧಾನಮಂತ್ರಿ ಹೇಳಿದರು. ಏಕಲವ್ಯ ಶಾಲೆಗಳು, ವನ ಉತ್ಪನ್ನ ಸಂಬಂಧಿ ಯೋಜನೆಗಳಂತಹ ಹಲವು ಯೋಜನೆಗಳನ್ನು ರೂಪಿಸಿ, ತಳಮಟ್ಟದಲ್ಲಿ ಅವುಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಫಲಾನುಭವಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಕರೆ  ನೀಡಿದರು.

ಸಿಪಾಹಿಜಿಲಾದ ಶ್ರೀಮತಿ ಸೋಮಾ ಮಜುಮ್ದಾರ್ ಅವರೊಂದಿಗೆ ಈ ಯೋಜನೆಯ ಲಾಭ ಪಡೆಯುತ್ತಿರುವ ಅನುಭವದ ಬಗ್ಗೆ ಪ್ರಧಾನಮಂತ್ರಿ ಕೇಳಿದರು. ಹೊಸ ಪಕ್ಕಾ ಮನೆ ಪಡೆದ ನಂತರ ನಿಮ್ಮ ಜೀವನ ಹೇಗೆ ಸುಧಾರಿಸಲಿದೆ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಆಕೆ, ಪಕ್ಕಾ ಮನೆ ಪಡೆಯುವ ತನ್ನ ಕನಸು ಈ ಯೋಜನೆಯಿಂದ ನನಸಾಗುತ್ತಿದೆ. ಮುಂಗಾರು ಮಳೆ ವೇಳೆ ಇದು ಅತ್ಯಂತ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು. ಯೋಜನೆಯ ಕಂತಿನ ಹಣವನ್ನು ಕೇವಲ ಮನೆಯ ನಿರ್ಮಾಣಕ್ಕಷ್ಟೇ ಬಳಸುವಂತೆ ಪ್ರಧಾನಮಂತ್ರಿ ಕರೆ ನೀಡಿದರು. ಯಾವುದೇ ಮಧ್ಯವರ್ತಿ ಅಥವಾ ಅಡತಡೆ ಇಲ್ಲದೇ, ಫಲಾನುಭವಿಗಳು ನೇರ ಯೋಜನೆಯ ಪ್ರಯೋಜನ ಪಡೆಯಬೇಕೆಂಬುದು ಸರ್ಕಾರದ ಗುರಿಯಾಗಿದೆ ಎಂದರು.

ಉತ್ತರ ತ್ರಿಪುರಾದ ಶ್ರೀ ಸಮಿರಾನ್ ನಾಥ್ ಅವರ ಬಳಿ ತಾವು ಮನೆಯನ್ನು ನಿರ್ಮಿಸಿಕೊಳ್ಳಲು ಪಿಎಂಎವೈ-ಜಿ ಅಡಿಯಲ್ಲಿ ಪಡೆಯಲಿರುವ ಕಂತಿನ ಹಣ ಮತ್ತು ಪ್ರಯೋಜನದ ಬಗ್ಗೆ ತಿಳಿದಿದೆಯೇ ಎಂದು ಪ್ರಧಾನಿ ಪ್ರಶ್ನಿಸಿದರು. ಅಲ್ಲದೆ ಪ್ರಧಾನಮಂತ್ರಿ, ಅವರು ಮನೆಗಳ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಭೂಸಮೀಕ್ಷೆ ಸೇರಿದಂತೆ ಇತರ ಚಟುವಟಿಕೆಗಳ ಕುರಿತು ಅವರ ಅನುಭವವನ್ನು ಆಲಿಸಿದರು. ಅಲ್ಲದೆ ಯೋಜನೆಯ ಲಾಭ ಪಡೆಯಲು ಅಥವಾ ಪ್ರಯೋಜನ ಪಡೆಯಲು ಯಾರಿಗಾದರು ಲಂಚ ನೀಡಲಾಗಿದೆಯೇ ಎಂದು ಅವರು ಪ್ರಶ್ನಿಸಿದರು. ಪ್ರಧಾನಮಂತ್ರಿ ಅವರು, ಹಿಂದೆ ಲಂಚ ನೀಡದೆ ಯಾವುದೇ ಸವಲತ್ತುಗಳು ಫಲಾನುಭವಿಗಳಿಗೆ ದೊರಕದಂತಹ ವ್ಯವಸ್ಥೆ ಇತ್ತು ಎಂದು ಟೀಕಿಸಿದರು.

ದಕ್ಷಿಣ ತ್ರಿಪುರಾದ ಶ್ರೀಮತಿ ಕಾದರ್ ಬಿಯಾ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ, ಯೋಜನೆಯಡಿ ಕಂತಿನಲ್ಲಿ ಎಷ್ಟು ಹಣ ಸಿಗಲಿದೆ ಎಂಬುದು ನಿಮಗೆ ತಿಳಿದಿದೆಯೇ ಎಂದು ಪ್ರಶ್ನಿಸಿದರು. ಅಲ್ಲದೆ ತಾವು ಬಯಸಿದಂತೆ ಮತ್ತು ತಮ್ಮ ಇಷ್ಟದಂತೆ ಮನೆಯನ್ನು ನಿರ್ಮಿಸಿಕೊಳ್ಳಲು ಸರ್ಕಾರ ಆರ್ಥಿಕ ನೆರವು ನೀಡಲಿದೆಯೆಂದು ಎಂದಾದರು ಕನಸು ಕಂಡಿದ್ದೀರಾ ಎಂದು ಪ್ರಧಾನಮಂತ್ರಿ ಕೇಳಿದರು. ಪಕ್ಕಾ ಮನೆ ಫಲಾನುಭವಿಗಳ ಜೀವನದಲ್ಲಿ ಸಂತೋಷವನ್ನುಂಟು ಮಾಡಲಿದೆ ಎಂದು ಪ್ರಧಾನಮಂತ್ರಿ ಭರವಸೆ ವ್ಯಕ್ತಪಡಿಸಿದರು. ಸರ್ಕಾರ ಯಾವುದೇ ತಾರತಮ್ಯ ಮತ್ತು ಮಧ್ಯವರ್ತಿಗಳಿಲ್ಲದೆ  ಪ್ರಯೋಜನ ಲಭಿಸುತ್ತಿದೆ ಎಂಬುದಕ್ಕೆ ಶ್ರೀಮತಿ ಬಿಯಾ ಅವರಂತಹ ಫಲಾನುಭವಿಗಳೇ ಸಾಕ್ಷಿಯಾಗಿದ್ದಾರೆ ಎಂದು ಅವರು ಹೇಳಿದರು.  ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಅಧಿಕಾರಿಗಳ ವರ್ತನೆ ಬದಲಾವಣೆಗೆ ಕಾರ್ಯೋನ್ಮುಖವಾಗಿದೆ ಎಂದರು. ಅಲ್ಲದೆ ಪ್ರಧಾನಮಂತ್ರಿ ಅವರು, ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುತ್ತಿರುವುದಕ್ಕೆ ಮುಖ್ಯಮಂತ್ರಿ ಮತ್ತು ಅವರ ತಂಡದ ಕಾರ್ಯವನ್ನು ಶ್ಲಾಘಿಸಿದರು ಹಾಗೂ ಅದು ಬಿಪ್ಲಬ್ ಕುಮಾರ್ ದೇಬ್ ಜಿ ಅವರ ಸರ್ಕಾರವಾಗಿರಬಹುದು ಅಥವಾ ಮೋದಿ ಸರ್ಕಾರವಾಗಿರಬಹುದು. ಪ್ರಜೆಗಳ ಕಲ್ಯಾಣಕ್ಕೆ ನಿಯಮಗಳು ಎಂದಿಗೂ ಅಡ್ಡಿಯಾಗಲು ಬಿಡಬಾರದು ಎಂದು ಹೇಳಿದರು. ಪಿಎಂಎವೈ ಯೋಜನೆಯಡಿ ಸಾಧ್ಯವಾದಷ್ಟು ಮಹಿಳೆಯರ ಹೆಸರಿನಲ್ಲೇ ಮನೆಗಳನ್ನು ನೀಡುತ್ತಿರುವುದಕ್ಕೆ ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇಂದಿನ ಕಾರ್ಯಕ್ರಮ ತ್ರಿಪುರಾದಲ್ಲಿ ಮುಂದಿನ ದಿನಗಳ ಹೊಸ ಆಶಾಭಾವನೆಯ ಸಂಕೇತವಾಗಿದೆ ಎಂದರು. ರಾಜ್ಯದಲ್ಲಿನ ಬಿಪ್ಲಬ್ ದೇಬ್ ಜಿ ಸರ್ಕಾರ ಮತ್ತು ಕೇಂದ್ರದಲ್ಲಿನ ಸರ್ಕಾರ, ರಾಜ್ಯವನ್ನು ಪ್ರಗತಿ ಪಥದತ್ತ ಕೊಂಡೊಯ್ಯಲು ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. “ಇಂದು ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆ ಮಾಡಿರುವುದು ತ್ರಿಪುರಾದ ಕನಸಿಗೆ ಹೊಸ ಚೈತನ್ಯ ತುಂಬಿದೆ. ಅದಕ್ಕಾಗಿ ನಾನು ತ್ರಿಪುರಾದ ಎಲ್ಲ ಜನರನ್ನು ಮತ್ತು ಯೋಜನೆಯ ಮೊದಲ ಕಂತಿನಲ್ಲಿ ಪ್ರಯೋಜನ ಪಡೆಯುತ್ತಿರುವ ಸುಮಾರು ಒಂದೂವರೆ ಲಕ್ಷ ಕುಟುಂಬಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. 

ತ್ರಿಪುರಾ ರಾಜ್ಯವನ್ನು ಬಡ ರಾಜ್ಯವನ್ನಾಗಿ ಮಾಡುವ, ಅದನ್ನು ಮೂಲಸೌಕರ್ಯಗಳಿಂದ ವಂಚಿಸುವ  ಆಲೋಚನೆಗೆ ಇಂದು ತ್ರಿಪುರಾದಲ್ಲಿ ಜಾಗವಿಲ್ಲ. ಇಂದು ಡಬಲ್ ಇಂಜಿನ್ ಸರ್ಕಾರ ಪೂರ್ಣ ಶಕ್ತಿ ಮತ್ತು ಪ್ರಾಮಾಣಿಕತೆಯೊಂದಿಗೆ ರಾಜ್ಯದ ಅಭಿವೃದ್ಧಿಯಲ್ಲಿ ತೊಡಗಿದೆ ಎಂದರು.

ಈ ಪ್ರದೇಶವನ್ನು ಬಹು ವರ್ಷಗಳಿಂದ ನಿರ್ಲಕ್ಷಿಸಿರುವ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಮೊದಲು ನಮ್ಮ ನದಿಗಳು ದೇಶದ ಉತ್ತರ ಮತ್ತು ಪಶ್ಚಿಮ ಭಾಗದಿಂದ ಪೂರ್ವದ ಕಡೆಗೆ ಹರಿಯುತ್ತಿದ್ದವು. ಆದರೆ ಅವು ಇಲ್ಲಿಗೆ ತಲುಪುವ ವೇಳೆಗೆ ಅಭಿವೃದ್ಧಿಯ ಗಂಗೆ ನಿಂತು ಹೋಗುತ್ತಿತ್ತು ಎಂದು ಹೇಳಿದರು. “ಒಟ್ಟಾರೆ ದೇಶದ ಸಮಗ್ರ ಅಭಿವೃದ್ಧಿಯನ್ನು ತುಂಡು ತುಂಡಾಗಿ ಹಾಗೂ ರಾಜಕೀಯ ಮಸೂರದಿಂದ ನೋಡಲಾಗುತ್ತಿತ್ತು, ಆದ್ದರಿಂದ ನಮ್ಮ ಈಶಾನ್ಯ ಭಾಗ ತೀವ್ರ ನಿರ್ಲಕ್ಷ್ಯಕ್ಕೆ ತುತ್ತಾಯಿತು” ಎಂದರು. ಅವರು “ಆದರೆ ಇಂದು ದೇಶದ ಅಭಿವೃದ್ಧಿಯನ್ನು ‘ಏಕ ಭಾರತ್’ ಶ್ರೇಷ್ಠ ಭಾರತ್’ ಮನೋಭಾವದೊಂದಿಗೆ ನೋಡಲಾಗುತ್ತಿದೆ. ದೇಶದ ಏಕತೆ ಮತ್ತು ಸಮಗ್ರತೆಗೆ ಅಭಿವೃದ್ಧಿ ಸಮಾನಾರ್ಥಕ ಎಂದು ಪರಿಗಣಿಸಲಾಗುತ್ತಿದೆ” ಎಂದು ಅವರು ಹೇಳಿದರು. 

ಭಾರತದ ಆತ್ಮವಿಶ್ವಾಸದ ನಾರಿ ಶಕ್ತಿ ದೇಶದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಪೂರ್ಣ ವಿಶ್ವಾಸದ ಈ ನಾರಿಶಕ್ತಿಯ ಪ್ರಮುಖ ಸಂಕೇತವಾಗಿ ನಾವು ಮಹಿಳಾ ಸ್ವಸಹಾಯ ಗುಂಪುಗಳನ್ನು ಹೊಂದಿದ್ದೇವೆ. ಈ ಸ್ವಸಹಾಯ ಗುಂಪುಗಳು ಜನ್ ಧನ್ ಖಾತೆಯೊಂದಿಗೆ ಸಂಯೋಜನೆಗೊಂಡಿವೆ. ಈ ಗುಂಪುಗಳಿಗೆ ನೀಡುತ್ತಿದ್ದ ಖಾತ್ರಿರಹಿತ ಸಾಲದ ಮಿತಿಯನ್ನು 20 ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಿ, ದುಪ್ಪಟ್ಟುಗೊಳಿಸಲಾಗಿದೆ ಎಂದರು.

ಸುಗಮ ಜೀವನಕ್ಕೆ ಸೌಕರ್ಯ ಹೆಚ್ಚಾಗುತ್ತಿರುವ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಮೊದಲು ಸಾಮಾನ್ಯ ಜನರು ಪ್ರತಿಯೊಂದು ಕೆಲಸ ಕಾರ್ಯಕ್ಕೂ ಸರ್ಕಾರಿ ಕಚೇರಿಗಳಿಗೆ ಅಲೆಯ ಬೇಕಾಗಿತ್ತು. ಆದರೆ ಈಗ ಸರ್ಕಾರವೇ ಎಲ್ಲ ಸೇವೆಗಳು ಮತ್ತು ಸೌಕರ್ಯಗಳನ್ನು ಒದಗಿಸಲು ಜನರ ಬಳಿ ಬಂದಿದೆ ಎಂದು ಹೇಳಿದರು. “ಮೊದಲು ಸರ್ಕಾರಿ ನೌಕರರು ಸಕಾಲಕ್ಕೆ ವೇತನವಾಗುತ್ತದೆಯೇ ಎಂದು ಚಿಂತಿಸುತ್ತಿದ್ದರು. ಇದೀಗ 7ನೇ ವೇತನ ಆಯೋಗದ ಲಾಭವನ್ನು ಪಡೆಯುತ್ತಿದ್ದಾರೆ” ಎಂದು ಪ್ರಧಾನಮಂತ್ರಿ ಹೇಳಿದರು.

ಆಜಾ಼ದಿಯ ಇತಿಹಾಸದ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಈಶಾನ್ಯ ಭಾಗ ಮತ್ತು ದೇಶದ ಇತರ ಭಾಗದ ನಮ್ಮ ಬುಡಕಟ್ಟು ಹೋರಾಟಗಾರರು ದೇಶಕ್ಕಾಗಿ ತಮ್ಮ ಪ್ರಾಣಗಳನ್ನು ಬಲಿದಾನ ನೀಡಿದ್ದಾರೆ ಎಂದರು. ಈ ಪರಂಪರೆಯನ್ನು ಗೌರವಿಸಿ, ಗತ ವೈಭವವನ್ನು ಮುಂದುವರಿಸಿಕೊಂಡು ಹೋಗಲು ದೇಶ ಅವಿರತವಾಗಿ ಶ್ರಮಿಸುತ್ತಿದೆ. ಈ ಸರಣಿಯಲ್ಲಿ ಅಮೃತ ಮಹೋತ್ಸವದ ಈ ವೇಳೆ ದೇಶ ಮತ್ತೊಂದು ದೊಡ್ಡ ನಿರ್ಧಾರವನ್ನು ಕೈಗೊಂಡಿದೆ ಎಂದರು. ದೇಶ ಇದೀಗ ಪ್ರತಿ ವರ್ಷ ನವೆಂಬರ್ 15ರ ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯನ್ನು ಬುಡಕಟ್ಟು ಗೌರವ ದಿನವನ್ನಾಗಿ ಆಚರಿಸುತ್ತಿದೆ. ಈ ದಿನ ಅಕ್ಟೋಬರ್ 2ರ ಅಹಿಂಸಾ ದಿನ, ಅಕ್ಟೋಬರ್ 31ರ ಏಕತಾ ದಿನ, ಜನವರಿ 26ರ ಗಣತಂತ್ರ ದಿನ, ರಾಮನವಮಿ, ಕೃಷ್ಣಾಷ್ಠಮಿ ಇತ್ಯಾದಿ ದಿನಗಳಂತೆ ನವೆಂಬರ್ 15 ಕೂಡ ಸಮಾನ ರಾಷ್ಟ್ರೀಯ ಪ್ರಾಮುಖ್ಯವನ್ನು ಪಡೆಯಲಿದೆ. ಈ ದಿನ ಕೇವಲ ಆದಿವಾಸಿ ಸಮಾಜದ ಕೊಡುಗೆಗೆ ಗೌರವ ಸಲ್ಲಿಸುವ ದಿನ ಮಾತ್ರವಲ್ಲ, ಅದು ಸೌಹಾರ್ದ ಸಮಾಜದ ಸಂಕೇತವಾಗಿ ಹೊರಹೊಮ್ಮಬೇಕು ಎಂದರು.

ಆಧುನಿಕ ಮೂಲಸೌಕರ್ಯವನ್ನು ಸೃಷ್ಟಿಸುವ ಮತ್ತು ಸಂಪರ್ಕ ಸುಧಾರಿಸುವ ಮೂಲಕ  ಈ ಪ್ರದೇಶದ ವಿಪುಲ ಸಾಮರ್ಥ್ಯವನ್ನು ಬಳಸಿಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಭಾಗದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಂದ ದೇಶ ಪ್ರಗತಿಯಲ್ಲಿ ಹೊಸ ಎತ್ತರಕ್ಕೆ ಏರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

***



(Release ID: 1771707) Visitor Counter : 223