ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರ ಜೊತೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಸಂವಾದ

Posted On: 04 NOV 2021 3:41PM by PIB Bengaluru

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಇಂದು ಪವಿತ್ರ ದೀಪಾವಳಿ ಹಬ್ಬ ಮತ್ತು ಪ್ರತಿಯೊಬ್ಬರೂ ತಮ್ಮ ಕುಟುಂಬದ ಸದಸ್ಯರ ಜೊತೆ ದೀಪಾವಳಿ ಆಚರಿಸಲು ಇಚ್ಛಿಸುತ್ತಾರೆ. ನಾನು ಕೂಡಾ ನನ್ನ ಕುಟುಂಬದ ಸದಸ್ಯರ ಜೊತೆ ದೀಪಾವಳಿ ಆಚರಿಸಬೇಕು ಎಂದು ಭಾವಿಸಿದ್ದರಿಂದ, ನೀವು ನನ್ನ ಕುಟುಂಬದ ಸದಸ್ಯರಾದುದರಿಂದ ಮತ್ತು ನಾನು ನಿಮ್ಮ ಕುಟುಂಬದ ಸದಸ್ಯನಾಗಿರುವುದರಿಂದ ಪ್ರತೀ ಬಾರಿಯೂ ನನ್ನ ಕುಟುಂಬದ ಸದಸ್ಯರೊಂದಿಗೆ ದೀಪಾವಳಿ ಹಬ್ಬ ಆಚರಿಸಲು ನಾನು ಬರುತ್ತಿದ್ದೇನೆ. ನಾನಿಲ್ಲಿ ಪ್ರಧಾನ ಮಂತ್ರಿಯಾಗಿ ಬಂದಿಲ್ಲ. ನಿಮ್ಮ ಕುಟುಂಬದ ಸದಸ್ಯನಾಗಿ ಬಂದಿದ್ದೇನೆ. ನಿಮ್ಮೊಂದಿಗೆ ಇದ್ದಾಗ ಮತ್ತು ನಾನು ನನ್ನ ಕುಟುಂಬದ ಜೊತೆ ಹೋದಾಗ ನನಗೆ ಒಂದೇ ರೀತಿಯ ಭಾವನೆ ಉಂಟಾಗುತ್ತದೆ. ನಾನು ಈ ಸಾಂವಿಧಾನಿಕ ಜವಾಬ್ದಾರಿಯನ್ನು ಕಳೆದ 20 ವರ್ಷಗಳಿಂದ ನಿಭಾಯಿಸುತ್ತಾ ಬಂದಿದ್ದೇನೆ. ಮತ್ತು ದೇಶವಾಸಿಗಳು ನನಗೆ ಬಹಳ ದೀರ್ಘ ಕಾಲದಿಂದ ಈ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಮೊದಲು ಗುಜರಾತಿನ ಜನತೆ ಮತ್ತು ಈಗ ದೇಶವಾಸಿಗಳು ಬಹಳ ದೀರ್ಘ ಕಾಲದಿಂದ ಈ ಅವಕಾಶವನ್ನು ಕೊಟ್ಟಿದ್ದಾರೆ. ನಾನು ಪ್ರತೀ ದೀಪಾವಳಿಯನ್ನೂ ನಿಮ್ಮ ಜೊತೆ ಮತ್ತು ದೇಶದ ಗಡಿಯಲ್ಲಿ ನಿಯುಕ್ತಿಗೊಳಿಸಿದ ನನ್ನ ಕುಟುಂಬದ ಸದಸ್ಯರ ಜೊತೆ ಆಚರಿಸಿದ್ದೇನೆ. ಇಂದು ನಾನು ಮತ್ತೆ ನಿಮ್ಮ ಜೊತೆ  ಬಂದಿದ್ದೇನೆ.  ನಾನು ಹೊಸ ಉತ್ಸಾಹ, ಶಕ್ತಿಯೊಂದಿಗೆ ಮತ್ತು ನಂಬಿಕೆಯೊದಿಗೆ ನಿಮ್ಮಿಂದ ಮರಳಿ ಹೋಗುತ್ತೇನೆ. ಆದರೆ ನಾನಿಲ್ಲಿಗೆ ಒಬ್ಬನೇ ಬಂದಿರುವುದಲ್ಲ. ನಾನು ನನ್ನೊಂದಿಗೆ 130 ಕೋಟಿ ದೇಶವಾಸಿಗಳ ಆಶೀರ್ವಾದಗಳನ್ನೂ, ಬಹಳ ಆಶೀರ್ವಾದಗಳನ್ನು ತಂದಿದ್ದೇನೆ. ಇಂದು ದೀಪಾವಳಿಯ ಅಂಗವಾಗಿ ಬೆಳಗುವ ಪ್ರತಿಯೊಂದು ದೀಪವೂ ನಿಮ್ಮ ಶೌರ್ಯ, ಧೈರ್ಯ, ತ್ಯಾಗ ಮತ್ತು ಸಂಯಮವನ್ನು ಪ್ರತಿನಿಧಿಸುತ್ತದೆ ಮತ್ತು ಭಾರತದ ಪ್ರತೀ ನಾಗರಿಕ ಬೆಳಗುವ ದೀಪದ ಬೆಳಕು ರಾಷ್ಟ್ರವನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿರುವ ನಿಮಗೆಲ್ಲರಿಗೂ  ನಿರಂತರ ಹಾರೈಕೆಯಾಗಿರುತ್ತದೆ. ಇಂದು ನಾನು ಖಚಿತವಿದೆ, ನೀವು ನಿಮ್ಮ ಮನೆಯಲ್ಲಿ ಕುಟುಂಬದ ಜೊತೆ ಮಾತನಾಡುತ್ತಿರುವಾಗ, ಚಿತ್ರಗಳನ್ನು ಕಳುಹಿಸುವಾಗ ನೀವು ಹೇಳುತ್ತೀರಿ, ಈ ವರ್ಷದ ದೀಪಾವಳಿ ವಿಶೇಷವಾಗಿತ್ತು ಎಂದು. ಅಲ್ಲವೇ?. ಯಾರೊಬ್ಬರೂ ನಿಮ್ಮನ್ನು ಗಮನಿಸುತ್ತಿಲ್ಲ, ಆರಾಮವಾಗಿರಿ, ಆದುದರಿಂದ ಚಿಂತೆ ಬೇಡ. ಒಳ್ಳೆಯದು, ನೀವು ನಿಮ್ಮ ಕುಟುಂಬಕ್ಕೆ ಬಹಳಷ್ಟು ಸಿಹಿ ತಿಂದೆವು ಎಂದೂ ಹೇಳುತ್ತೀರಲ್ಲವೇ?. 

ಸ್ನೇಹಿತರೇ,

ಇಂದು, ಹೀರೋಗಳು ಮತ್ತು ದೇಶದ ವೀರ ಪುತ್ರಿಯರು ನನ್ನೆದುರು ಭಾರತ ಮಾತೆಗೆ ಮಾಡುತ್ತಿರುವ ಸೇವೆ ಅಮೋಘವಾದುದು ಮತ್ತು ಎಲ್ಲರಿಗೂ ಆ ಅದೃಷ್ಟ ಸಿಗದು. ಬರೇ ಕೆಲವರಿಗಷ್ಟೇ ಇಂತಹ ಉತ್ತಮ ಅದೃಷ್ಟ ಲಭಿಸುತ್ತದೆ. ಮತ್ತು ನಿಮಗೆ ಈ ಅದೃಷ್ಟ ದೊರೆತಿದೆ. ನಿಮ್ಮ ಮುಖದಲ್ಲಿ ನಾನು ಅದಮ್ಯವಾದ ಭಾವನೆಗಳನ್ನು ಕಾಣುತ್ತಿದ್ದೇನೆ. ನಿಮ್ಮಲ್ಲಿ ಸಂಪೂರ್ಣವಾದ ದೃಢ ನಿರ್ಧಾರವಿದೆ ಮತ್ತು ಈ ತೀರ್ಮಾನ ನಿಮ್ಮ ಶೌರ್ಯ, ವೀರತ್ವದ ತುತ್ತತುದಿ. ಮತ್ತು ಅದು ಭಾರತ ಮಾತೆಯ ಶಾಶ್ವತ ರಕ್ಷಣಾ ಕವಚ. ಅದು ಹಿಮಾಲಯವಿರಲಿ, ಮರುಭೂಮಿ ಇರಲಿ, ಹಿಮಾವೃತ ಶಿಖರಾಗ್ರಗಳಿರಲಿ, ಆಳವಾದ ಸಮುದ್ರವಿರಲಿ, ಅಥವಾ ನೀವು ಎಲ್ಲೇ ಇರಲಿ ಅದು ರಕ್ಷಣಾ ಕವಚವಿದ್ದಂತೆ. ನಿಮ್ಮಲ್ಲಿರುವ ಆಸಕ್ತಿ 130 ಕೋಟಿ ದೇಶವಾಸಿಗಳಿಗೆ ವಿಶ್ವಾಸವನ್ನು, ಧೈರ್ಯವನ್ನು ನೀಡುತ್ತದೆ. ಮತ್ತು ಅವರು ನೆಮ್ಮದಿಯ ನಿದ್ದೆ ಮಾಡಲು ಅವಕಾಶ ಮಾಡಿಕೊಡುತ್ತದೆ. ದೇಶವು ಭರವಸೆಯುಕ್ತ ಶಾಂತಿ, ಭದ್ರತೆ ಮತ್ತು ವಿಶ್ವಾಸದ ಭಾವನೆಯನ್ನು ಹೊಂದಿರುತ್ತದೆ, ಇದಕ್ಕೆ ಕಾರಣ ನೀವು. ನಿಮ್ಮ ವೀರತ್ವದ ಕಾರಣದಿಂದಾಗಿ ನಮ್ಮ ಹಬ್ಬಗಳಲ್ಲಿ ಸಂತೋಷ, ಸಂಭ್ರಮ ಇರುತ್ತದೆ. ದೀಪಾವಳಿ ಬಳಿಕ ಗೋವರ್ಧನ ಪೂಜೆ ಇರುತ್ತದೆ. ಭೈಯಾ  ದೂಜ್ ಮತ್ತು ಛತ್ ಹಬ್ಬಗಳಿರುತ್ತವೆ. ನಿಮ್ಮೊಂದಿಗೆ ನಾನು ದೇಶವಾಸಿಗಳಿಗೆ ಈ ಎಲ್ಲಾ ಹಬ್ಬಗಳಿಗೆ ನೌಶೇರಾದ ಈ ವೀರ ಭೂಮಿಯಿಂದ ನನ್ನ ಶುಭಾಶಯಗಳನ್ನು ಹೇಳುತ್ತೇನೆ. ನಮ್ಮ ದೇಶದ ಅನೇಕ ಭಾಗಗಳಲ್ಲಿ ಜನರು ದೀಪಾವಳಿಯ ಒಂದು ದಿನದ ಬಳಿಕ ಹೊಸ ವರ್ಷವನ್ನು ಆರಂಭ ಮಾಡುತ್ತಾರೆ. ದೀಪಾವಳಿಯಂದು ಲೆಕ್ಕಪತ್ರವನ್ನು ಪೂರ್ಣಗೊಳಿಸಲಾಗುತ್ತದೆ. ಮತ್ತು ದೀಪಾವಳಿಯ ಮರುದಿನ ಹೊಸ ಹಣಕಾಸು ವರ್ಷ ಆರಂಭವಾಗುತದೆ. ವಿಶೇಷವಾಗಿ ಗುಜರಾತಿನಲ್ಲಿ, ನಾಳೆ ಹೊಸ ವರ್ಷ. ಆದುದರಿಂದ ಇಂದು ಗುಜರಾತಿನ ಜನತೆಗೆ ಮತ್ತು ಎಲ್ಲೆಲ್ಲಿ ಹೊಸ ವರ್ಷವನ್ನಾಚರಿಸುತ್ತಾರೋ ಅವರಿಗೆ ನೌಶೇರಾದ ಈ ವೀರ ಭೂಮಿಯಿಂದ ನನ್ನ ಶುಭಾಶಯಗಳನ್ನು ಹೇಳುತ್ತೇನೆ. 

ಸ್ನೇಹಿತರೇ,

ನಾನು ಪವಿತ್ರ ಭೂಮಿ ನೌಶೇರಾದಲ್ಲಿ ಬಂದಿಳಿದಾಗ, ಈ ಮಣ್ಣನ್ನು ಮುಟ್ಟಿದಾಗ, ನನ್ನಲ್ಲಿ ವಿಶಿಷ್ಟವಾದ ಭಾವನೆಗಳು ಮೂಡಿದವು. ವಿಶೇಷ ರೋಮಾಂಚನದ ಅನುಭವವಾಯಿತು. ಈ ಭೂಮಿಯ ಇತಿಹಾಸ ಭಾರತೀಯ ಸೇನೆಯ ಶೌರ್ಯಕ್ಕೆ ನಮಿಸುತ್ತದೆ ಮತ್ತು ಅದನ್ನು ಪ್ರತೀ ಶಿಖರಾಗ್ರದಿಂದಲೂ ಕೇಳಬಹುದು. ಇಲ್ಲಿರುವ ನಿಮ್ಮಂತಹ ಧೈರ್ಯಶಾಲೀ ಸೈನಿಕರು ಶೌರ್ಯಕ್ಕೆ ಜೀವಂತ ಉದಾಹರಣೆ. ಧೈರ್ಯಕ್ಕೆ, ಸಾಹಸಕ್ಕೆ ಜೀವಂತ ಸಾಕ್ಷಿ ನನ್ನೆದುರು ಇದೆ. ಪ್ರತೀ ಯುದ್ದದಲ್ಲಿಯೂ, ಛಾಯಾ ಸಮರದಲ್ಲಿ ಮತ್ತು ಒಳಸಂಚಿನಲ್ಲಿ ನೌಶೇರಾವು ಸೂಕ್ತ ಉತ್ತರ ನೀಡುವ ಮೂಲಕ ಕಾಶ್ಮೀರ ಮತ್ತು ಶ್ರೀನಗರದ ಕಾವಲುಗಾರನಂತೆ ಕೆಲಸ ಮಾಡಿದೆ. ಸ್ವಾತಂತ್ರ್ಯದ ಬಳಿಕ ಇದರ ಮೇಲೆ ವೈರಿಗಳು ತಮ್ಮ ದುಷ್ಟ ದೃಷ್ಟಿಯನ್ನು ಇಟ್ಟಿದ್ದರು. ನೌಶೇರಾದ ಮೇಲೆ ದಾಳಿ ಮಾಡಲಾಯಿತು ಮತ್ತು ಮೇಲೆ ಎತ್ತರದ ಸ್ಥಳದಲ್ಲಿ ಕುಳಿತಿದ್ದ ವೈರಿಗಳು ಇದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರು. ಮತ್ತು ಈಗಷ್ಟೇ ವೀಡಿಯೋ ನೋಡಿದ ಬಳಿಕ ನನಗೆ ಪ್ರತಿಯೊಂದನ್ನೂ ಗ್ರಹಿಸುವ ಅವಕಾಶ ದೊರಕಿತು. ಮತ್ತು ಎಲ್ಲಾ ಒಳಸಂಚುಗಳು ನೌಶೇರಾದ ವೀರ ಜನರ ಶೌರ್ಯದ ಎದುರು ವಿಫಲವಾದುದಕ್ಕೆ ನಾನು ಸಂತೋಷಪಡುತ್ತೇನೆ.

ಸ್ನೇಹಿತರೇ,

ವೈರಿಗಳು ಈ ಮೊದಲೇ ಭಾರತೀಯ ಸೇನೆಯ ಬಲವನ್ನು ಅರಿತುಕೊಂಡಿದ್ದರು. ದೇಶದ ರಕ್ಷಣೆಗಾಗಿ ಸರ್ವೋಚ್ಚ ತ್ಯಾಗ ಮಾಡಿದ ನೌಶೇರಾದ ಸಿಂಹ ಬ್ರಿಗೆಡಿಯರ್ ಮೊಹಮ್ಮದ್ ಉಸ್ಮಾನ್ ಮತ್ತು ನಾಯಕ್ ಜಡುನಾಥ್ ಸಿಂಗ್ ಅವರಿಗೆ ನಾನು ಶಿರಬಾಗಿ ನಮಿಸುತ್ತೇನೆ. ಭಾರತೀಯ ಸೇನೆಯ ವಿಜಯಕ್ಕೆ ಹಾದಿ ರೂಪಿಸಿಕೊಟ್ಟ ಲೆಫ್ಟಿನೆಂಟ್ ಆರ್.ಅರ್. ರಾಣೆಯವರಿಗೆ ನಾನು ವಂದಿಸುತ್ತೇನೆ. ತಮ್ಮ ರಕ್ತ, ಶೌರ್ಯ, ಪ್ರಯತ್ನಗಳ ಮೂಲಕ  ಮತ್ತು ನೌಶೇರಾದ ಈ ಭೂಮಿಯಲ್ಲಿ ದೇಶಕ್ಕಾಗಿ ಬದುಕುವ ಅಥವಾ ಪ್ರಾಣಾರ್ಪಣೆ ಮಾಡುವ ದೃಢ ನಿರ್ಧಾರ ಮಾಡಿ ಹೆಮ್ಮೆಯ ಕಥನಗಳನ್ನು ಬರೆದ ಅನೇಕ ಹೀರೋಗಳಿದ್ದಾರೆ. ದೀಪಾವಳಿಯಂತಹ ಪವಿತ್ರ ಹಬ್ಬದಲ್ಲಿ ಅಂತಹ ಇಬ್ಬರು ದೊಡ್ಡ ವ್ಯಕ್ತಿಗಳಿಂದ ಆಶೀರ್ವಾದ ಪಡೆಯುವ ಅದೃಷ್ಟಶಾಲಿ ನಾನಾಗಿದ್ದೇನೆ. ಇದು ನನ್ನ ಬದುಕಿನ ಬೆಲೆ ಕಟ್ಟಲಾಗದ ಸಂದರ್ಭ. ತಮ್ಮ ಬಾಲ್ಯದಲ್ಲಿ ಭಾರತ ಮಾತೆಯನ್ನು ರಕ್ಷಿಸಲು ಸಂಪನ್ಮೂಲಗಳ ಕೊರತೆ ಇದ್ದಾಗಲೂ ಸೇನೆಯ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತ ಇಬ್ಬರು ಶ್ರೇಷ್ಟ ವ್ಯಕ್ತಿಗಳಾದ ಶ್ರೀ ಬಲದೇವ್ ಸಿಂಗ್ ಜೀ ಮತ್ತು ಶ್ರೀ ಬಸಂತ್ ಸಿಂಗ್ ಜೀ ಅವರಿಂದ ನಾನು ಆಶೀರ್ವಾದ ಪಡೆದಿದ್ದೇನೆ. ಮತ್ತು ನಾನವರನ್ನು ಆಲಿಸುತ್ತಿದ್ದಾಗ ಅವರು ಅದೇ ಉತ್ಸಾಹದಿಂದ ಮಾಹಿತಿ ನೀಡುತ್ತಿದ್ದರು. ಅವರು ತಾವು ಇಂದಷ್ಟೇ ಯುದ್ಧ ಬೂಮಿಯಿಂದ ಮರಳಿದೆವೋ ಎನ್ನುವಷ್ಟರ ಮಟ್ಟಿಗೆ ಅವರು ಖಚಿತ ರೀತಿಯಲ್ಲಿ ವಿವರಿಸುತ್ತಿದ್ದರು. ಸ್ವಾತಂತ್ರ್ಯೋತ್ತರ ಯುದ್ಧದಲ್ಲಿ  ಇಂತಹ ಹಲವು ಸ್ಥಳೀಯ ಹದಿಹರೆಯದವರು ಬ್ರಿಗೆಡಿಯರ್ ಮೊಹಮ್ಮದ್ ಉಸ್ಮಾನ್ ಮಾರ್ಗದರ್ಶನದಲ್ಲಿ ಬಾಲ ಸೈನಿಕರ ಪಾತ್ರವನ್ನು ವಹಿಸಿದ್ದರು. ಅವರು ಅವರ ಜೀವದ ಬಗ್ಗೆ ಹೆದರದೆ, ದೇಶದ ಸೇನೆಯ ಜೊತೆ ಕೆಲಸ ಮಾಡಿದರು. ಅಂತಹ ಕಿರಿ ವಯಸ್ಸಿನಲ್ಲಿ ಸೇನೆಗೆ ಸಹಾಯ ಮಾಡಿದರು. ನೌಶೇರಾದ ಈ ಶೌರ್ಯದ ಹರಿವು ಅಂದು ಆರಂಭಗೊಂಡದ್ದು, ಇಂದಿಗೂ ನಿಂತಿಲ್ಲ. ಅದು ಕಡಿಮೆಯಾಗಿಲ್ಲ ಮತ್ತು ಇದು ನೌಶೇರಾ ಏನು ಎಂಬುದಕ್ಕೆ ಸಾಕ್ಷಿ. ಸರ್ಜಿಕಲ್ ದಾಳಿಯಲ್ಲಿ ಈ ಬ್ರಿಗೇಡ್ ವಹಿಸಿದ ಪಾತ್ರ ಪ್ರತಿಯೊಬ್ಬ ದೇಶವಾಸಿಯಲ್ಲೂ ಹೆಮ್ಮೆಯನ್ನು ಮೂಡಿಸುತ್ತದೆ. ಆ ದಿನವನ್ನು ಸದಾ ನೆನಪಿಡುತ್ತೇನೆ, ಯಾಕೆಂದರೆ ಪ್ರತಿಯೊಬ್ಬರೂ ಸೂರ್ಯೋದಯದ ಒಳಗೆ ಮರಳಿ ಬರಬೇಕು ಎಂದು ನಾನು ನಿರ್ಧರಿಸಿದ್ದೆ. ಅವರ ಕೆಲಸ ಸಾಧಿಸಿದ ಬಳಿಕ ನಮ್ಮ ವೀರ ಸೈನಿಕರು ಸುರಕ್ಷಿತವಾಗಿ ಮರಳಿ ಬರುವ ಸುದ್ದಿಗಾಗಿ ನಾನು ದೂರವಾಣಿಯ ಬಳಿ ಕಾಯುತ್ತ ಕುಳಿತಿದ್ದೆ. ಇಲ್ಲಿ ಅಶಾಂತಿಯನ್ನು ಉಂಟು ಮಾಡಲು ದುರುದ್ದೇಶದ ಅಸಂಖ್ಯಾತ ಯತ್ನಗಳನ್ನು ನಡೆಸಲಾಗಿತ್ತು. ಮತ್ತು ಸರ್ಜಿಕಲ್ ದಾಳಿಯ ಬಳಿಕವೂ ಇಂದೂ ಕೂಡಾ ಅವು ನಡೆಯುತ್ತಿವೆ. ಆದರೆ ಪ್ರತೀ ಬಾರಿಯೂ ಭಯೋತ್ಪಾದನೆಗೆ ಸೂಕ್ತ ಉತ್ತರ ನೀಡಲಾಗುತ್ತಿದೆ. ಅನ್ಯಾಯ ಮತ್ತು ಸುಳ್ಳಿನ ವಿರುದ್ಧ ಈ ಭೂಮಿಯಲ್ಲಿ ಪ್ರಾಕೃತಿಕ ಪ್ರೇರೇಪಣೆಯೊಂದಿದೆ. ಇದರೊಳಗೇ ಇರುವ ಅತ್ಯಂತ ದೊಡ್ಡ ಪ್ರೇರಣೆ ಇದು ಎಂದು ನಾನು ಭಾವಿಸುತ್ತೇನೆ. ಪಾಂಡವರು ತಮ್ಮ ವನವಾಸದಲ್ಲಿ  ಕೆಲ ಕಾಲ ಈ ವಲಯದಲ್ಲಿ ಇದ್ದರು ಎಂಬ ನಂಬಿಕೆ ಇದೆ. ಇಂದು ನಿಮ್ಮೆಲ್ಲರ ನಡುವೆ ಇಲ್ಲಿ ಶಕ್ತಿಯೊಂದಕ್ಕೆ ನಾನು ಸಂಪರ್ಕಿಸಲ್ಪಟ್ಟಿದ್ದೇನೆ ಎಂಬ ಭಾವನೆ ನನಗೆ ಬರುತ್ತಿದೆ.

ಸ್ನೇಹಿತರೇ,

ಪ್ರಸ್ತುತ, ದೇಶವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು, ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ನಾವು ಈ ಸ್ವಾತಂತ್ರ್ಯವನ್ನು ಅಸಂಖ್ಯಾತ ತ್ಯಾಗಗಳ ಮೂಲಕ ಪಡೆದಿದ್ದೇವೆ. ಈ ಸ್ವಾತಂತ್ರ್ಯವನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ. ನಾವು ಹೊಸ ಗುರಿಗಳನ್ನು, ನಿರ್ಧಾರಗಳನ್ನು, ಮತ್ತು ಹೊಸ ಸವಾಲುಗಳನ್ನು ಸ್ವಾತಂತ್ರ್ಯದ ಈ ಪುಣ್ಯಕರ ಸಂದರ್ಭದಲ್ಲಿ ಹೊಂದಿದ್ದೇವೆ. ಇಂತಹ ಮಹತ್ವಪೂರ್ಣ ಕಾಲಘಟ್ಟದಲ್ಲಿ ಇಂದಿನ ಭಾರತ ತನ್ನ ಶಕ್ತಿ, ಅಧಿಕಾರಗಳ ಮತ್ತು ಅದರ ಸಂಪನ್ಮೂಲಗಳ ಬಗ್ಗೆ ಜಾಗೃತವಾಗಿದೆ. ದುರದೃಷ್ಟವಶಾತ್ ಈ ಮೊದಲು ಸೇನೆಯು ಹೊರದೇಶಗಳಿಂದಷ್ಟೇ ಸಂಪನ್ಮೂಲಗಳನ್ನು ಪಡೆಯುತ್ತದೆ ಎಂದು ನಂಬಲಾಗಿತ್ತು. ತಂತ್ರಜ್ಞಾನಕ್ಕೆ ಸಂಬಂಧಿಸಿ ಹೆಚ್ಚು ಹಣ ಖರ್ಚು ಮಾಡಬೇಕಾಗಿತ್ತು. ಹೊಸ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಪ್ರಕ್ರಿಯೆ ವರ್ಷಗಳಷ್ಟು ಕಾಲವನ್ನು ಕಬಳಿಸುತ್ತಿತ್ತು. ಓರ್ವ ಅಧಿಕಾರಿ ಕಡತವನ್ನು ಆರಂಭ ಮಾಡಿದರೆ, ಆ ನಿರ್ದಿಷ್ಟ ಸಲಕರಣೆ ಆತನ ನಿವೃತ್ತಿಯವರೆಗೂ ಬರುತ್ತಿರಲಿಲ್ಲ. ಅಂತಹ ಕಾಲ ಅದಾಗಿತ್ತು!. ಇದರ ಪರಿಣಾಮವಾಗಿ ಅವಶ್ಯಕತೆ ಇದ್ದಾಗ ಶಸ್ತ್ರಾಸ್ತ್ರಗಳನ್ನು ಅವಸರದಲ್ಲಿ ಖರೀದಿಸಲಾಗುತ್ತಿತ್ತು. ಬಿಡಿ ಭಾಗಗಳಿಗೆ ಕೂಡಾ ನಾವು ಇತರ ದೇಶಗಳನ್ನು ಅವಲಂಬಿಸಬೇಕಾಗುತ್ತಿತ್ತು.

ಸ್ನೇಹಿತರೇ,

ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಬೇಕು ಎಂಬ ಅಸಾಧಾರಣಾ ನಿರ್ಧಾರ, ಈ ಹಳೆಯ ಪರಿಸ್ಥಿತಿಯನ್ನು ಬದಲಾಯಿಸಲು ಅವಶ್ಯವಾಗಿತ್ತು. ಈಗ ಸುಮಾರು 65 % ನಷ್ಟು ರಕ್ಷಣಾ ಬಜೆಟನ್ನು ದೇಶದೊಳಗೇ ಖರೀದಿ ಮಾಡುವುದಕ್ಕಾಗಿ ಬಳಸಲಾಗುತ್ತದೆ. ನಮ್ಮ ದೇಶ ಇದೆಲ್ಲವನ್ನೂ ಮಾಡಬಲ್ಲದು. ಮತ್ತು ಅದು ಇದನ್ನು ಮಾಡಿ ತೋರಿಸಿದೆ ಕೂಡಾ. ಅಭೂತಪೂರ್ವ ಕ್ರಮವೊಂದರಲ್ಲಿ, ಭಾರತವು ಈಗ 200ಕ್ಕೂ ಅಧಿಕ ರಕ್ಷಣಾ ಸಂಬಂಧಿ ಸಲಕರಣೆಗಳನ್ನು ದೇಶದೊಳಗೇ ಖರೀದಿ ಮಾಡಲು ನಿರ್ಧರಿಸಿದೆ. ಇದು ಆತ್ಮ ನಿರ್ಭರ ಭಾರತದ ದೃಢ ನಿರ್ಧಾರ. ಮುಂದಿನ ಕೆಲವು ತಿಂಗಳುಗಳಲ್ಲಿ ಇನ್ನಷ್ಟು ಸಾಮಗ್ರಿಗಳನ್ನು ಈ ಪಟ್ಟಿಗೆ ಸೇರಿಸಲಾಗುವುದು. ಮತ್ತು ಇದು ಧನಾತ್ಮಕ ಪಟ್ಟಿ. ಇದು ದೇಶವನ್ನು ಸ್ವಾವಲಂಬಿಯಾಗಿಸುತ್ತದೆ. ಇದು ದೇಶದ ರಕ್ಷಣಾ ವಲಯವನ್ನು ಬಲಪಡಿಸುತ್ತದೆ ಮತ್ತು ಹೊಸ ಶಸ್ತ್ರಾಸ್ತ್ರಗಳು ಹಾಗು ಸಲಕರಣೆಗಳ ತಯಾರಿಕೆಗಾಗಿ ಹೂಡಿಕೆ ಕೂಡಾ ಹೆಚ್ಚುತ್ತದೆ.

ಸ್ನೇಹಿತರೇ,

ಇಂದು ಅರ್ಜುನ ಟ್ಯಾಂಕ್ ಗಳು ಮತ್ತು ಅತ್ಯಾಧುನಿಕ ಹಗುರ ಯುದ್ಧ ವಿಮಾನಗಳಾದಂತಹ ತೇಜಸ್ ಗಳನ್ನು ನಮ್ಮ ದೇಶದೊಳಗೇ ನಿರ್ಮಾಣ ಮಾಡಲಾಗುತ್ತಿದೆ. ಇತ್ತೀಚೆಗೆ ವಿಜಯದಶಮಿಯಂದು ಏಳು ಹೊಸ ರಕ್ಷಣಾ ಕಂಪೆನಿಗಳನ್ನು ದೇಶಕ್ಕೆ ಸಮರ್ಪಿಸಲಾಗಿದೆ. ನಾವು ಹೊಂದಿರುವ ಮದ್ದು ಗುಂಡುಗಳ ಕಾರ್ಖಾನೆಗಳು ಈಗ ವಿಶೇಷ ವಲಯಗಳಲ್ಲಿ ಆಧುನಿಕ ಸಲಕರಣೆಗಳನ್ನು ತಯಾರಿಸಬಲ್ಲವು. ಇಂದು ನಮ್ಮ ಖಾಸಗಿ ವಲಯ ಕೂಡಾ ನಮ್ಮ ದೇಶವನ್ನು ರಕ್ಷಿಸಲು ಈ ನಿರ್ಧಾರದಲ್ಲಿ ಕೈಜೋಡಿಸಿದೆ. ನಮ್ಮ ಹಲವು ರಕ್ಷಣಾ ನವೋದ್ಯಮಗಳು ತಮ್ಮದೇ ಛಾಪನ್ನು ಮೂಡಿಸುತ್ತಿವೆ.ನಮ್ಮ ಯುವ ಜನತೆ 20-22-25 ವರ್ಷದ ಹರೆಯದವರು ಹೊಸ ಅನ್ವೇಷಣೆಗಳೊಂದಿಗೆ ಮುಂದೆ ಬರುತ್ತಿದ್ದಾರೆ. ಇದು ಹೆಮ್ಮೆಯ ಸಂಗತಿ.

ಸ್ನೇಹಿತರೇ,

ಉತ್ತರ ಪ್ರದೇಶ ಮತ್ತು ತಮಿಳು ನಾಡುಗಳಲ್ಲಿ ರಕ್ಷಣಾ ಕಾರಿಡಾರುಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇವು ಈ ವೇಗವನ್ನು ಇನ್ನಷ್ಟು ಹೆಚ್ಚಿಸಲಿವೆ. ಇಂದು ನಾವು ಕೈಗೊಳ್ಳುತ್ತಿರುವ ಈ ಎಲ್ಲಾ ಕ್ರಮಗಳು ರಕ್ಷಣಾ ರಫ್ತುದಾರನಾಗಿ ನಮ್ಮ ಗುರುತಿಸುವಿಕೆಯನ್ನು ಮತ್ತು ಭಾರತದ ಸಾಮರ್ಥ್ಯವನ್ನು ಬಲಪಡಿಸಲಿವೆ.

ಸ್ನೇಹಿತರೇ,

ನಮ್ಮ ಪವಿತ್ರ ಗ್ರಂಥಗಳಲ್ಲಿ ಇದನ್ನು ಬರೆಯಲಾಗಿದೆ:

को अतिभारः समर्थानाम।

ಅಂದರೆ, ಸಾಮರ್ಥ್ಯ ಇರುವವನಿಗೆ ಹೆಚ್ಚಿನ ಹೊರೆ ಏನೂ ಕಷ್ಟವೆಂದೆನಿಸುವುದಿಲ್ಲ, ಆತ ಸುಲಭವಾಗಿ ಆತನ ದೃಢ ನಿರ್ಧಾರಗಳನ್ನು ಕಾರ್ಯಗತಗೊಳಿಸುತ್ತಾನೆ. ಆದುದರಿಂದ ನಾವು ಬದಲಾಗುತ್ತಿರುವ ವಿಶ್ವಕ್ಕೆ ಅನುಗುಣವಾಗಿ, ಬದಲಾಗುತ್ತಿರುವ ಯುದ್ಧದ ಸ್ವರೂಪದಿಂದಾಗಿ ನಮ್ಮ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಬೇಕಾದ ಅಗತ್ಯವಿದೆ. ಅವರಿಗೆ ಹೊಸ ಶಕ್ತಿಯನ್ನು ಒದಗಿಸಬೇಕಾಗಿದೆ. ಜಗತ್ತಿನಲ್ಲಿ ಆಗುತ್ತಿರುವ ತ್ವರಿತಗತಿಯ ಬದಲಾವಣೆಗಳ ಹಿನ್ನೆಲೆಯಲ್ಲಿ ಅದಕ್ಕನುಗುಣವಾಗಿ ನಾವು ನಮ್ಮ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಒಂದು ಕಾಲದಲ್ಲಿ ಯುದ್ಧಗಳನ್ನು ಆನೆಗಳು ಮತ್ತು ಕುದುರೆಗಳೊಂದಿಗೆ ನಡೆಸಲಾಗುತ್ತಿತ್ತು. ಈಗ ಸ್ವರೂಪವೇ ಬದಲಾಗಿರುವುದರಿಂದ ಯಾರೊಬ್ಬರೂ ಇದನ್ನು ಕಲ್ಪಿಸಿಕೊಳ್ಳಲಾರರು. ಈ ಮೊದಲು ಯುದ್ಧದ ಸ್ವರೂಪವನ್ನು ಬದಲಾಯಿಸಲು ದಶಕಗಳೇ ಅಥವಾ ಶತಮಾನಗಳೇ ಬೇಕಾಗುತ್ತಿರಬಹುದು. ಇಂದು ಹೋರಾಟದ ವಿಧಾನಗಳು ಬೆಳಗ್ಗೆಯಿಂದ ಸಂಜೆಯೊಳಗೆ ಬದಲಾಗುತ್ತವೆ. ಇದಕ್ಕೆ ಕಾರಣ ತ್ವರಿತವಾಗಿ ಬದಲಾಗುತ್ತಿರುವ ಮತ್ತು ಲಭ್ಯವಾಗುತ್ತಿರುವ ತಂತ್ರಜ್ಞಾನ. ಇಂದು ಯುದ್ಧ ಕಲೆ ಕಾರ್ಯಾಚರಣಾ ವಿಧಾನಗಳಿಗೆ ಸೀಮಿತವಾಗಿಲ್ಲ. ಇಂದು ವಿವಿಧ ಅಂಶಗಳ ಉತ್ತಮ ಸಮನ್ವಯ, ತಂತ್ರಜ್ಞಾನದ ಬಳಕೆ, ಮತ್ತು ಹೈಬ್ರಿಡ್ ತಂತ್ರಗಳು ಬಹಳ ದೊಡ್ಡ ಬದಲಾವಣೆಯನ್ನು ತರಬಲ್ಲವು.ಸಂಘಟಿತ ನಾಯಕತ್ವ ಮತ್ತು ಕಾರ್ಯಾಚರಣೆಯಲ್ಲಿ ಉತ್ತಮ ಸಮನ್ವಯ ಇಂದು ಬಹಳ ಮುಖ್ಯ. ಆದುದರಿಂದ ಕಳೆದ ಕೆಲವು ವರ್ಷಗಳಲ್ಲಿ ಪ್ರತೀ ಹಂತದಲ್ಲಿಯೂ ನಿರಂತರ ಸುಧಾರಣೆಗಳನ್ನು ಮಾಡಲಾಗುತ್ತಿದೆ. ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥರ ನೇಮಕಾತಿ ಇರಲಿ, ಮಿಲಿಟರಿ ವ್ಯವಹಾರಗಳ ಇಲಾಖೆಯ ರಚನೆ ಇರಲಿ, ಅವು ಬದಲಾಗುತ್ತಿರುವ ಕಾಲದಲ್ಲಿ ನಮ್ಮ ಮಿಲಿಟರಿ ಶಕ್ತಿಯನ್ನು ಸಶಕ್ತವನ್ನಾಗಿಡುವಲ್ಲಿ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತಿವೆ.

ಸ್ನೇಹಿತರೇ,

ಆಧುನಿಕ ಗಡಿ ಮೂಲಸೌಕರ್ಯ ಕೂಡ ನಮ್ಮ ಮಿಲಿಟರಿ ಶಕ್ತಿಯನ್ನು ಬಲಪಡಿಸಲಿದೆ. ಹಿಂದೆ ಗಡಿ ಪ್ರದೇಶಗಳಲ್ಲಿ ನಡೆಯುತ್ತಿದ್ದ ಸಂಪರ್ಕ ಕಾಮಗಾರಿಗಳ ಬಗ್ಗೆ ದೇಶದ ಜನತೆಗೆ ಬಹಳ ಚೆನ್ನಾಗಿ ಗೊತ್ತಿದೆ. ಈಗ ಆಧುನಿಕ ರಸ್ತೆಗಳು, ಬೃಹತ್ ಸುರಂಗಗಳು, ಸೇತುವೆಗಳು ಮತ್ತು ಆಪ್ಟಿಕಲ್ ಫೈಬರ್ ಜಾಲಗಳನ್ನು ಲಡಾಖ್ ನಿಂದ ಅರುಣಾಚಲ ಪ್ರದೇಶ, ಜೈಸಲ್ಮೇರ್ ನಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳವರೆಗೆ ಮತ್ತು ಸಾಮಾನ್ಯ ಸಂಪರ್ಕ ಕೂಡಾ ಇಲ್ಲದ ನಮ್ಮ ಗಡಿ ಭಾಗಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ನಮ್ಮ ನಿಯೋಜನಾ ಸಾಮರ್ಥ್ಯದಲ್ಲಿ ಅಭೂತಪೂರ್ವ ಸುಧಾರಣೆಯಾಗಿದೆ ಮಾತ್ರವಲ್ಲದೆ ಅದು ಸೈನಿಕರಿಗೆ ಬಹಳಷ್ಟು ಅನುಕೂಲತೆಗಳನ್ನು ಒದಗಿಸುತ್ತಿದೆ.

ಸ್ನೇಹಿತರೇ,

ಮಹಿಳಾ ಶಕ್ತಿಯನ್ನು ಸಮರ್ಥ ಭಾರತದ ಹೊಸ ಸಾಮರ್ಥ್ಯವಾಗಿಸಲು ಮತ್ತು ಅದರ ಅಂಗವಾಗಿಸಲು ಕಳೆದ ಏಳು ವರ್ಷಗಳಿಂದ ಎಲ್ಲಾ ರಂಗಗಳಲ್ಲಿಯೂ ಗಂಭೀರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಭಾರತದ ಹೆಣ್ಣು ಮಕ್ಕಳ ಭಾಗವಹಿಸುವಿಕೆ ಈಗ ರಕ್ಷಣಾ ಕ್ಷೇತ್ರದಲ್ಲಿಯೂ ಹೊಸ ಎತ್ತರಗಳನ್ನು ಸ್ಥಾಪಿಸಿದೆ. ನೌಕಾ ಮತ್ತು ವಾಯು ಪಡೆಗಳಲ್ಲಿ ಮಹಿಳೆಯರನ್ನು ಮುಂಚೂಣಿ ನೆಲೆಗಳಲ್ಲಿ ನಿಯೋಜಿಸುವ ಮೂಲಕ ಈಗ ಸೇನೆಯಲ್ಲಿ ಮಹಿಳೆಯರ ಪಾತ್ರ ವಿಸ್ತಾರವಾಗುತ್ತಿದೆ. ಮಿಲಿಟರಿ ಪೊಲೀಸ್ ಬಾಗಿಲುಗಳನ್ನು ನಮ್ಮ ಹೆಣ್ಣು ಮಕ್ಕಳಿಗೆ ತೆರೆದ ಬಳಿಕ ಮಹಿಳಾ ಅಧಿಕಾರಿಗಳಿಗೆ ಖಾಯಂ ಕಮಿಷನ್ (ನೇಮಕಾತಿ) ಯನ್ನು ಈ ಸಹಭಾಗಿತ್ವ ವಿಸ್ತರಣೆಯ ಭಾಗವಾಗಿ ನೀಡಲಾಗುತ್ತಿದೆ. ಈಗ ದೇಶದ ಪ್ರಮುಖ ಮಿಲಿಟರಿ ಸಂಸ್ಥೆಗಳಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ರಾಷ್ಟ್ರೀಯ ಮಿಲಿಟರಿ ಶಾಲೆ, ಮತ್ತು ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜ್ ಗಳು ಮಹಿಳೆಯರ ಪ್ರವೇಶಕ್ಕೆ ತೆರೆದುಕೊಂಡಿವೆ. ಈ ವರ್ಷದ ಆಗಸ್ಟ್ 15 ರಂದು ನಾನು ಕೆಂಪು ಕೋಟೆಯಿಂದ  ಮಾಡಿದ ಭಾಷಣದಲ್ಲಿ ಹೆಣ್ಣು ಮಕ್ಕಳಿಗೆ ದೇಶಾದ್ಯಂತ ಎಲ್ಲಾ ಸೈನಿಕ ಸ್ಕೂಲ್ ಗಳಲ್ಲಿ  ಅಧ್ಯಯನ ಅವಕಾಶ ನೀಡಲಾಗುವುದು ಎಂದು ಘೋಷಿಸಿದ್ದೆ. ಈ ನಿಟ್ಟಿನಲ್ಲಿಯೂ ಕೂಡಾ ಕೆಲಸ ಆರಂಭವಾಗಿದೆ.

ಸ್ನೇಹಿತರೇ,

ದೇಶವನ್ನು ರಕ್ಷಿಸುವ ನಿಮ್ಮಂತಹವರನ್ನು ನೋಡಿದಾಗ ಸಮವಸ್ತ್ರದಲ್ಲಿರುವ ಅಗಾಧವಾದ ಶಕ್ತಿಯನ್ನು ನಾನು ಕಾಣುವುದು ಮಾತ್ರವಲ್ಲ, ನಾನು ಪ್ರತಿರೋಧವಿಲ್ಲದ ಸೇವೆಯನ್ನೂ ಕಾಣುತ್ತೇನೆ. ಅಚಲ ದೃಢ ನಿರ್ಧಾರಗಳು ಮತ್ತು ಹೋಲಿಸಲಾಗದ ಸೂಕ್ಷ್ಮತ್ವವೂ ನನಗೆ ಗೋಚರಿಸುತ್ತದೆ. ಆದುದರಿಂದ ಭಾರತದ ಸೇನೆ ಜಗತ್ತಿನಲ್ಲಿರುವ ಇತರ ಯಾವುದೇ ಸೇನೆಗಿಂತ ಭಿನ್ನವಾಗಿದೆ. ಅದಕ್ಕೆ ಭಿನ್ನವಾದ ಗುರುತಿಸುವಿಕೆ ಇದೆ. ನೀವು ವಿಶ್ವದ ಅತ್ಯುತ್ತಮ ಸೇನೆಗಳಂತೆ ವೃತ್ತಿಪರ ಪಡೆಯಾಗಿದ್ದೀರಿ. ಆದರೆ ನಿಮ್ಮ ಮಾನವೀಯ ಮೌಲ್ಯಗಳು ಮತ್ತು ಭಾರತೀಯ ಸಂಸ್ಕೃತಿ ನಿಮ್ಮನ್ನು ಅಸಾಮಾನ್ಯ ವ್ಯಕ್ತಿತ್ವವುಳ್ಳವರನ್ನಾಗಿ ರೂಪಿಸಿದೆ. ಮತ್ತು ನೀವು ಇತರರಿಗಿಂತ ಭಿನ್ನವಾಗಿ ನಿಲ್ಲುವಂತೆ ಮಾಡಿದೆ. ಸೇನೆಗೆ ಸೇರುವುದು ಉದ್ಯೋಗಕ್ಕಲ್ಲ, ಅದು ಪ್ರತೀ ತಿಂಗಳ ಮೊದಲ ದಿನದಂದು  ವೇತನ ನೀಡುತ್ತದೆಯಾದರೂ ಅದು ಸೇನೆಗೆ ಸೇರುವ ನಿಮ್ಮ ಆಶಯ ಈಡೇರಿದ ಸಂದರ್ಭವಾಗಿರುತ್ತದೆ!. ಸಂತರು ಮತ್ತು ಸಾಧುಗಳು ತಪಸ್ಸು ಮಾಡುವಂತೆ ಅದು. ಅಂತಹ ಸಾಧಕರ ಆಶಯದ ಮಾದರಿಗಳನ್ನು ನಾನು ನಿಮ್ಮ ಪ್ರತಿಯೊಬ್ಬರಲ್ಲೂ ಕಾಣುತ್ತಿದ್ದೇನೆ. ಭಾರತ ಮಾತೆಯ ಬಗ್ಗೆ  ನಿಮ್ಮ ಭಕ್ತಿ ಇದು. 130 ಕೋಟಿ ದೇಶವಾಸಿಗಳ ಬದುಕನ್ನು ತಮ್ಮ ಬದುಕಿನೊಳಗೆ ತೆಗೆದುಕೊಂಡು  ಅದನ್ನು ಅತ್ಯುನ್ನತ ಎತ್ತರಕ್ಕೆ ಕೊಂಡೊಯ್ದವರು ನೀವು. ಇದು ಪ್ರಾಯಶ್ಚಿತ್ತದ ಪಥ ಮತ್ತು ನಾವು ನಮ್ಮ ಅತ್ಯುನ್ನತ ಆದರ್ಶಗಳನ್ನು ಭಗವಾನ್ ಶ್ರೀರಾಮನಲ್ಲಿ ಕಾಣುತ್ತೇವೆ. ಭಗವಾನ್ ರಾಮ ಲಂಕಾವನ್ನು ಗೆದ್ದು  ಅಯೋಧ್ಯೆಗೆ ಮರಳಿದಾಗ, ಅವರು ಘೋಷಿಸಿದ್ದರು:

अपि स्वर्ण मयी लंका, न मे लक्ष्मण रोचते। जननी जन्म भूमिश्च स्वर्गादपि गरीयसी॥

ಅಂದರೆ, ನಾವು ಚಿನ್ನದಿಂದ ಶ್ರೀಮಂತವಾಗಿದ್ದ ಮತ್ತು ಸಮೃದ್ಧಿಯನ್ನು ಹೊಂದಿದ್ದ ಶ್ರೀಲಂಕಾವನ್ನು ಖಚಿತವಾಗಿ ಗೆದ್ದಿದ್ದೆವು, ಆದರೆ ನಮ್ಮ ಹೋರಾಟ ನಮ್ಮ ತತ್ವಾದರ್ಶಗಳನ್ನು ಮತ್ತು ಮಾನವತೆಯನ್ನು  ರಕ್ಷಿಸುವುದಾಗಿತ್ತು. ನಮಗೆ, ನಮ್ಮ ತಾಯ್ನಾಡು ನಮ್ಮದು, ನಾವಿಲ್ಲಿಗೆ ಮರಳಿ ಬರಬೇಕು ಮತ್ತು ಅದಕ್ಕಾಗಿ ಬದುಕಬೇಕು. ಆದುದರಿಂದ ಭಗವಾನ್ ರಾಮ ಮರಳಿ ಬಂದಾಗ ಇಡೀ ಅಯೋಧ್ಯೆ ಅವರನ್ನು ತಾಯಿಯಂತೆ ಸ್ವಾಗತಿಸಿತು. ಅಯೋಧ್ಯೆಯ ಪ್ರತೀ ವ್ಯಕ್ತಿಯೂ ಮತ್ತು ಇಡೀ ದೇಶ ದೀಪಾವಳಿಯನ್ನು ಆಯೋಜಿಸಿತು. ಈ ಚಿಂತನೆ ನಮ್ಮನ್ನು ಇತರರಿಗಿಂತ ಭಿನ್ನವಾಗಿಸುತ್ತದೆ. ನಮ್ಮ ಅತ್ಯುನ್ನತ ಉತ್ಸಾಹ ನಮ್ಮನ್ನು ಮಾನವ ಮೌಲ್ಯಗಳ ಅಮರ ಶಿಖರದಲ್ಲಿರಿಸುತ್ತದೆ.  ಸಮಯದ ತುಮುಲ ಮತ್ತು ಗಡಿಬಿಡಿಯಲ್ಲಿಯೂ ಸಹ ಅದು ನಿರಂತರವಾಗಿರುತ್ತದೆ, ಅಚಲವಾಗಿರುತ್ತದೆ. ಚರಿತ್ರೆಯನ್ನು ನಿರ್ಮಾಣಮಾಡಲಾಗುತ್ತದೆ ಮತ್ತು ಅದನ್ನು ನಾಶಮಾಡಲಾಗುತ್ತದೆ. ಅಧಿಕಾರ ಬರುತ್ತದೆ ಮತ್ತು ಹೋಗುತ್ತದೆ. ಸಾಮ್ರಾಜ್ಯಗಳು ಬೆಳೆಯುತ್ತವೆ ಮತ್ತು ಕುಸಿಯುತ್ತವೆ. ಆದರೆ ಭಾರತವು ಸಾವಿರಾರು ವರ್ಷಗಳ ಹಿಂದಿನಿಂದಲೂ ಶಾಶ್ವತವಾಗಿದೆ. ಮತ್ತು ಇಂದಿಗೂ ಅದು ಅಚಲವಾಗಿ ಉಳಿದಿದೆ. ಹಾಗು ಸಾವಿರಾರು ವರ್ಷಗಳ ಬಳಿಕವೂ ಅದು ಶಾಶ್ವತವಾಗಿ ಉಳಿಯುತ್ತದೆ. ನಾವು ರಾಷ್ಟ್ರವನ್ನು ಆಡಳಿತದ, ಅಧಿಕಾರದ, ಮತ್ತು ಸಾಮ್ರಾಜ್ಯದ  ರೂಪದಲ್ಲಿ ನೋಡುವುದಿಲ್ಲ. ನಮಗದು ಜೀವಂತ ಆತ್ಮ. ಅದರ ರಕ್ಷಣೆ ಅದರ ಭೌಗೋಳಿಕ ಗಡಿಗಳನ್ನು ರಕ್ಷಿಸುವುದಕ್ಕೆ ಮಾತ್ರ ಸೀಮಿತವಾದುದಲ್ಲ. ನಮಗೆ ದೇಶದ ರಕ್ಷಣೆ ಎಂದರೆ ರಾಷ್ಟ್ರೀಯ ಹುರುಪು, ರಾಷ್ಟ್ರೀಯ ಏಕತೆ, ಮತ್ತು ರಾಷ್ಟ್ರೀಯ ಸಮಗ್ರತೆಯ ರಕ್ಷಣೆ!. ನಮ್ಮ ಸೇನೆಗಳು ವೀರತ್ವದಿಂದ ತುಂಬಿವೆ ಮತ್ತು ಅದರೊದಿಗೆ ಅವರ ಹೃದಯದಲ್ಲಿ ಮಾನವತೆ ಹಾಗು ಅನುಭೂತಿ ಇದೆ. ಆದುದರಿಂದ ನಮ್ಮ ಸೇನೆಗಳು ಗಡಿಯಲ್ಲಿ ಶೌರ್ಯವನ್ನು ಮಾತ್ರ ತೋರಿಸುವುದಲ್ಲ. ದೇಶವು ಅವರನ್ನು ಅಪೇಕ್ಷಿಸಿದಾಗೆಲ್ಲ ಸೇನೆಯು ಅಲ್ಲಿರುತ್ತದೆ. ಪ್ರಾಕೃತಿಕ ವಿಕೋಪ, ದುರಂತಗಳು, ರೋಗಗಳು ಮತ್ತು ಸಾಂಕ್ರಾಮಿಕಗಳು ಬಂದಾಗ ಸೇನೆ ನೆರವಿಗೆ ಬರುತ್ತದೆ. ಭಾರತದ ಸೇನೆಗಳು ಯಾರೂ ತಲುಪದ ಸ್ಥಳಗಳನ್ನು ತಲುಪುತ್ತವೆ ಎಂಬ ನಂಬಿಕೆ ಇಂದು ದೇಶದಲ್ಲಿದೆ. ಪ್ರತೀ ಭಾರತೀಯರ ಮನಸ್ಸಿನಲ್ಲಿ ಭಾರತೀಯ ಸೇನೆಯನ್ನು ನೋಡಿದಾಗ ಇನ್ನು ಚಿಂತೆ ಅಗತ್ಯವಿಲ್ಲ ಎಂಬ ಭಾವನೆ ಮೂಡುತ್ತದೆ. ಇದು ಸಣ್ಣ ಸಂಗತಿಯೇನಲ್ಲ. ನೀವು ಸಮಗ್ರತೆಯ ಕಾವಲುಗಾರರು ಮತ್ತು ದೇಶದ ವಿಶ್ವಾತ್ಮಕತೆ; ನೀವು “ಏಕ ಭಾರತ್ ಶ್ರೇಷ್ಠ ಭಾರತ್” ನ ಕಾವಲುಗಾರರು.. ನಿಮ್ಮ ವೀರತ್ವದ, ಶೌರ್ಯದ ಪ್ರೇರಣೆಯಿಂದ ನಾವು ನಮ್ಮ ಭಾರತವನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯುತ್ತೇವೆ.

ಸ್ನೇಹಿತರೇ,

ನಿಮಗೆಲ್ಲರಿಗೂ ದೀಪಾವಳಿ ಸಂತೋಷ ತರಲಿ!. ನಿಮ್ಮ ಕುಟುಂಬ ಸದಸ್ಯರಿಗೆ ಶುಭಾಶಯಗಳು ಮತ್ತು ನಿಮ್ಮಂತಹ ವೀರ ಪುತ್ರರಿಗೆ  ಮತ್ತು ಪುತ್ರಿಯರಿಗೆ ಜನ್ಮ ನೀಡಿದ ಆ ತಾಯಂದಿರಿಗೆ ನಾನು ನಮಿಸುತ್ತೇನೆ. ಮತ್ತೊಮೆ ನಿಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳು. ನನ್ನೊಂದಿಗೆ ಮನಃಪೂರ್ವಕವಾಗಿ ಭಾರತ್ ಮಾತಾ ಕೀ ಜೈ ಎಂದು ಹೇಳಿ. ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ!

ದನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***


(Release ID: 1769750) Visitor Counter : 217