ಪ್ರಧಾನ ಮಂತ್ರಿಯವರ ಕಛೇರಿ

ಪಿ.ಎಂ. ಕೇರ್ಸ್ ಅಡಿಯಲ್ಲಿ ಸ್ಥಾಪಿಸಲಾದ ಪಿ.ಎಸ್.ಎ. ಆಕ್ಸಿಜನ್ ಘಟಕಗಳ ಲೋಕಾರ್ಪಣೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ

Posted On: 07 OCT 2021 3:04PM by PIB Bengaluru

ಭಾರತ್ ಮಾತಾ ಕಿ ಜೈ,

ಭಾರತ್ ಮಾತಾ ಕಿ ಜೈ

ಉತ್ತರಾಖಂಡದ ಗವರ್ನರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮೀತ್ ಸಿಂಗ್ ಜೀ, ಯುವ, ಶಕ್ತಿಯುತ ಮತ್ತು ಉತ್ಸಾಹಿ ಮುಖ್ಯಮಂತ್ರಿ ಮತ್ತು ನನ್ನ ಸ್ನೇಹಿತ ಶ್ರೀ ಪುಷ್ಕರ್ ಸಿಂಗ್ ಧಾಮಿ ಜೀ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾದ ಶ್ರೀ ಮನ್ಸುಖ್ ಮಾಂಡವೀಯ ಜೀ ಮತ್ತು ಉತ್ತರಾಖಂಡ ವಿಧಾನಸಭಾ ಸ್ಪೀಕರ್ ಶ್ರೀ ಅಜಯ್ ಭಟ್ ಜೀ, ಶ್ರೀ ಪ್ರೇಮ್ ಚಂದ್ ಅಗರವಾಲ್ ಜೀ, ಉತ್ತರಾಖಂಡ್ ಸರ್ಕಾರದ ಸಚಿವ ಡಾ. ಧನ್ ಸಿಂಗ್ ರಾವತ್ ಜೀ ಮತ್ತು ಇಂದು ಅವರ ಜನ್ಮದಿನ, ಅವರ ಜನ್ಮದಿನದಂದು ಅವರಿಗೆ ಅಭಿನಂದನೆಗಳು, ಹಾಗೂ ದೇಶದ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್ಗಳು, ಮಂತ್ರಿಗಳು, ಸಂಸದರು ಮತ್ತು ಶಾಸಕರು ಮತ್ತು ನನ್ನ ಪ್ರಿಯ ಸಹೋದರ ಸಹೋದರಿಯರೇ !!

ಈ ದೇವಭೂಮಿ ಋಷಿಗಳ ತಪಸ್ಸಿನ ನೆಲವಾಗಿದೆ. ಯೋಗ ನಗರವಾಗಿ, ಇದು ಪ್ರಪಂಚದಾದ್ಯಂತದ ಜನರನ್ನು ಆಕರ್ಷಿಸುತ್ತಿದೆ. ನಾವೆಲ್ಲರೂ ಸಮೀಪದಲ್ಲಿ ಹರಿಯುತ್ತಿರುವ ಗಂಗಾಮಾತೆಯ ಆಶೀರ್ವಾದವನ್ನು ಪಡೆಯುತ್ತಿದ್ದೇವೆ. ನವರಾತ್ರಿಯ ಪವಿತ್ರ ಹಬ್ಬ ಕೂಡ ಇಂದಿನಿಂದ ಆರಂಭವಾಗುತ್ತಿದೆ. ಮಾತೆ ಶೈಲಪುತ್ರಿಯನ್ನು ಇಂದು ಮೊದಲ ದಿನ ಪೂಜಿಸಲಾಗುತ್ತದೆ. ಮಾತೆ ಶೈಲಪುತ್ರಿ ಹಿಮಾಲಯದ ಮಗಳು. ಈ ಮಣ್ಣಿಗೆ ನಮಸ್ಕರಿಸಲು ಮತ್ತು ಹಿಮಾಲಯದ ಭೂಮಿಗೆ ನಮಸ್ಕರಿಸಲು ನಾನು ಈ ದಿನ ಇಲ್ಲಿದ್ದೇನೆ ಎನ್ನುವುದಕ್ಕಿಂತ ದೊಡ್ಡ ಆಶೀರ್ವಾದ ಜೀವನದಲ್ಲಿ ಇನ್ನೇನು ಬೇಕು? ನಾನು ಇಂದು ಇಲ್ಲಿಗೆ ಬಂದಿರುವುದರಿಂದ, ಉತ್ತರಾಖಂಡವನ್ನು ವಿಶೇಷವಾಗಿ ಅಭಿನಂದಿಸಲು ಬಯಸುತ್ತೇನೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ಈ ದೇವಭೂಮಿ ನಮಗೆ ಹೆಮ್ಮೆ ತಂದಿದೆ ಮತ್ತು ಆದ್ದರಿಂದ, ನೀವೆಲ್ಲರೂ ಅಭಿನಂದನೆಗೆ ಅರ್ಹರು. ಉತ್ತರಾಖಂಡದ ಈ ದೈವಿಕ ಭೂಮಿ ನನ್ನಂತಹ ಅನೇಕ ಜನರ ಜೀವನದ ಹಾದಿಯನ್ನು ಬದಲಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ. ಅದಕ್ಕಾಗಿಯೇ ಈ ಭೂಮಿ ನನಗೆ ಮುಖ್ಯವಾಗಿದೆ. ಈ ಭೂಮಿಯೊಂದಿಗಿನ ನನ್ನ ಸಂಬಂಧವು 'ಮರ್ಮ' (ಹೃದಯ) ಮಾತ್ರವಲ್ಲ, 'ಕರ್ಮ' (ಕ್ರಿಯೆ), 'ಸತ್ವ' (ಸಾರ) ಮಾತ್ರವಲ್ಲ 'ತತ್ವ' (ಅಂಶ) ಕೂಡ ಆಗಿದೆ.

ಸ್ನೇಹಿತರೇ,

ಮುಖ್ಯಮಂತ್ರಿಯವರು ನನಗೆ ನೆನಪಿಸಿದಂತೆ, 20 ವರ್ಷಗಳ ಹಿಂದೆ ಇದೇ ದಿನ ಜನರ ಸೇವೆ ಮಾಡುವ ಹೊಸ ಜವಾಬ್ದಾರಿ ನನಗೆ ದೊರಕಿತು. ಜನರ ನಡುವೆ ವಾಸಿಸುವ ಮೂಲಕ ಅವರ ಸೇವೆ ಮಾಡುವ ನನ್ನ ಪಯಣ ಹಲವು ದಶಕಗಳಿಂದ ಮುಂದುವರಿದಿದೆ. ಆದರೆ 20 ವರ್ಷಗಳ ಹಿಂದೆ, ನನಗೆ ಗುಜರಾತ್ ಮುಖ್ಯಮಂತ್ರಿಯಾಗಿ ಹೊಸ ಜವಾಬ್ದಾರಿ ಸಿಕ್ಕಿತು. ಉತ್ತರಾಖಂಡವು 2000 ರಲ್ಲಿ ರೂಪುಗೊಂಡಿತು ಮತ್ತು ನನ್ನ ಪ್ರಯಾಣವು ಕೆಲವು ತಿಂಗಳುಗಳ ನಂತರ 2001 ರಲ್ಲಿ ಆರಂಭವಾಯಿತು ಎಂಬುದು ಕಾಕತಾಳೀಯವಾಗಿದೆ.

ಸ್ನೇಹಿತರೇ,

ನಾನು ಮೊದಲು ಮುಖ್ಯಮಂತ್ರಿಯಾಗಿ ಮತ್ತು ನಂತರ ಪ್ರಧಾನಮಂತ್ರಿಯಾಗಿ ದೇಶದ ಜನರ ಆಶೀರ್ವಾದದೊಂದಿಗೆ ಸರ್ಕಾರದ ಮುಖ್ಯಸ್ಥನಾಗುತ್ತೇನೆ ಎಂದು ಊಹಿಸಿರಲಿಲ್ಲ. 20 ವರ್ಷಗಳ ಈ ನಿರಂತರ ಪ್ರಯಾಣ ಇಂದು 21 ನೇ ವರ್ಷಕ್ಕೆ ಕಾಲಿಡುತ್ತಿದೆ. ಮತ್ತು ಅಂತಹ ಮಹತ್ವದ ವರ್ಷದ ಸಂದರ್ಭದಲ್ಲಿ, ಈ ದೇವ ಭೂಮಿಗೆ ಬರುವುದನ್ನು ನಾನು ಮಹಾನ್ ಸೌಭಾಗ್ಯ ಮತ್ತು ಅಪ್ಯಾಯಮಾನ ಎಂದು ಪರಿಗಣಿಸುತ್ತೇನೆ, ಅದು ನನಗೆ ಅದರ ಪ್ರೀತಿ ಮತ್ತು ಬಾಂಧವ್ಯವನ್ನು ನಿರಂತರವಾಗಿ ನೀಡಿದೆ. ಕಠಿಣತೆ ಮತ್ತು ತ್ಯಜಿಸುವ ಮಾರ್ಗವನ್ನು ತೋರಿಸುವ ಹಿಮಾಲಯದ ತಪ್ಪಲಿನ ಈ ಭೂಮಿಗೆ ಬರುವ ಮೂಲಕ, ದೇಶವಾಸಿಗಳ ಸೇವೆ ಮಾಡುವ ನನ್ನ ಸಂಕಲ್ಪ ಬಲವಾಗಿದೆ. ನಾನು ಇಲ್ಲಿಗೆ ಬಂದಾಗ ನನಗೆ ಹೊಸ ಶಕ್ತಿ ಸಿಗುತ್ತದೆ. 

ಸಹೋದರ ಸಹೋದರಿಯರೇ,

ಇಂದು, ಯೋಗ ಮತ್ತು ಆಯುರ್ವೇದದ ಶಕ್ತಿಯ ಮೂಲಕ ಆರೋಗ್ಯಕರ ಜೀವನಕ್ಕೆ ರಾಮಬಾಣವನ್ನು ನೀಡಿದ ಭೂಮಿಯಿಂದ ಆಮ್ಲಜನಕ ಘಟಕಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿರುವ ಈ ಆಮ್ಲಜನಕ ಘಟಕಗಳಿಗಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. 

ಸ್ನೇಹಿತರೇ,

ಭಾರತೀಯರಾದ ನಾವು ಕಳೆದ 100 ವರ್ಷಗಳ ಅತಿ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿರುವ ಧೈರ್ಯವನ್ನು ಜಗತ್ತು ಬಹಳ ಹತ್ತಿರದಿಂದ ನೋಡುತ್ತಿದೆ. ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತವು ಕಡಿಮೆ ಅವಧಿಯಲ್ಲಿ ಸಿದ್ಧಪಡಿಸಿದ ಸೌಲಭ್ಯಗಳು ನಮ್ಮ ದೇಶದ ಸಾಮರ್ಥ್ಯವನ್ನು ತೋರಿಸುತ್ತದೆ. ಕೇವಲ ಒಂದು ಪರೀಕ್ಷಾ ಪ್ರಯೋಗಾಲಯದಿಂದ ಸುಮಾರು 3,000 ಪರೀಕ್ಷಾ ಪ್ರಯೋಗಾಲಯಗಳ ನೆಟ್ವರ್ಕ್ ಗೆ, ಮುಖಗವಸುಗಳು ಮತ್ತು ಕಿಟ್ ಗಳ ಆಮದಿನಿಂದ ಹಿಡಿದು ರಫ್ತುದಾರನಾಗುವವರೆಗೆ ಭಾರತದ ಕ್ಷಿಪ್ರ ರೂಪಾಂತರವನ್ನು ಪ್ರತಿಬಿಂಬಿಸುತ್ತದೆ. ದೇಶದ ಅತಿದೊಡ್ಡ ಪ್ರದೇಶಗಳಲ್ಲೂ ಹೊಸ ವೆಂಟಿಲೇಟರ್ ಗಳ ಸೌಲಭ್ಯಗಳು, ವಿಶ್ವದ ಅತಿದೊಡ್ಡ ಮತ್ತು ವೇಗದ ಲಸಿಕೆ ಅಭಿಯಾನವಾದ ಮೇಡ್ ಇನ್ ಇಂಡಿಯಾ ಕರೋನಾ ಲಸಿಕೆಗಳ ತ್ವರಿತ ಮತ್ತು ದೊಡ್ಡ-ಪ್ರಮಾಣದ ತಯಾರಿಕೆ ಭಾರತದ ದೃಢಸಂಕಲ್ಪ, ಸೇವೆ ಮತ್ತು ಒಗ್ಗಟ್ಟನ್ನು ಪ್ರದರ್ಶಿಸುತ್ತದೆ.  

ಸಹೋದರ ಸಹೋದರಿಯರೇ,

ಕರೋನಾ ವಿರುದ್ಧ ಹೋರಾಡುವಾಗ, ಭಾರತಕ್ಕೆ ದೊಡ್ಡ ಸವಾಲು ನಮ್ಮ ಜನಸಂಖ್ಯೆ ಮಾತ್ರವಲ್ಲ, ದೇಶದ ವೈವಿಧ್ಯಮಯ ಭೌಗೋಳಿಕತೆಯೂ ಆಗಿತ್ತು. ದೇಶವು ಆಮ್ಲಜನಕ ಪೂರೈಕೆ ಮತ್ತು ಲಸಿಕೆಗಳ ಅವಳಿ ಸವಾಲುಗಳನ್ನು ಎದುರಿಸುತ್ತಲೇ ಇತ್ತು. ಆದರೆ ದೇಶವು ಈ ಸವಾಲುಗಳನ್ನು ಹೇಗೆ ಎದುರಿಸಿತು ಎಂಬುದನ್ನು ಪ್ರತಿಯೊಬ್ಬ ದೇಶವಾಸಿಗಳು ತಿಳಿದುಕೊಳ್ಳುವುದು ಬಹಳ ಮುಖ್ಯ.

ಸ್ನೇಹಿತರೇ,

ಸಾಮಾನ್ಯ ದಿನಗಳಲ್ಲಿ, ಭಾರತವು ದಿನಕ್ಕೆ 900 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಉತ್ಪಾದಿಸುತ್ತಿತ್ತು. ಬೇಡಿಕೆ ಉತ್ತುಂಗಕ್ಕೇರಿದಂತೆ, ಭಾರತವು ವೈದ್ಯಕೀಯ ಆಮ್ಲಜನಕದ ಉತ್ಪಾದನೆಯನ್ನು 10 ಪಟ್ಟು ಹೆಚ್ಚಿಸಿತು. ಇದು ವಿಶ್ವದ ಯಾವುದೇ ದೇಶಕ್ಕೆ ಊಹಿಸಲಾಗದ ಗುರಿಯಾಗಿತ್ತು, ಆದರೆ ಭಾರತವು ಅದನ್ನು ಸಾಧಿಸಿತು.

ಸ್ನೇಹಿತರೇ,

ಇಲ್ಲಿ ಉಪಸ್ಥಿತರಿರುವ ಅನೇಕ ಗಣ್ಯರಿಗೆ ಆಮ್ಲಜನಕದ ಉತ್ಪಾದನೆಯ ಜೊತೆಗೆ ಅದರ ಸಾಗಾಣಿಕೆಯೂ ಒಂದು ದೊಡ್ಡ ಸವಾಲಾಗಿದೆ ಎಂದು ತಿಳಿದಿದೆ. ಆಮ್ಲಜನಕವನ್ನು ಯಾವುದೇ ಟ್ಯಾಂಕರ್ ನಲ್ಲಿ ಸಾಗಿಸಲು ಸಾಧ್ಯವಿಲ್ಲ. ಇದಕ್ಕಾಗಿ ವಿಶೇಷ ಟ್ಯಾಂಕರ್ ಅಗತ್ಯವಿದೆ. ಆಮ್ಲಜನಕದ ಉತ್ಪಾದನೆಯು ಹೆಚ್ಚಾಗಿ ಪೂರ್ವ ಭಾರತದಲ್ಲಿ ನಡೆಯುತ್ತದೆ, ಆದರೆ ಸವಾಲು ಎಂದರೆ ಅದರ ಅಗತ್ಯ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ತೀವ್ರವಾಗಿ ಕಂಡಿತು.

ಸಹೋದರ ಸಹೋದರಿಯರೇ,

ಲಾಜಿಸ್ಟಿಕ್ಸ್ ನ ಹಲವು ಸವಾಲುಗಳನ್ನು ಎದುರಿಸುವಾಗ ದೇಶವು ಯುದ್ಧೋಪಾದಿಯಲ್ಲಿ ಏಕ ಗುರಿ ಆಧಾರದ ಮೇಲೆ ಕೆಲಸ ಮಾಡಿದೆ. ಆಮ್ಲಜನಕ ಘಟಕಗಳು ಮತ್ತು ಆಮ್ಲಜನಕದ ಟ್ಯಾಂಕರ್ ಗಳನ್ನು ದೇಶ ಮತ್ತು ವಿದೇಶಗಳಲ್ಲಿ ಎಲ್ಲಿಂದಲಾದರೂ ಲಭ್ಯಕಡೆಗಳಿಂದ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಆಮ್ಲಜನಕ ರೈಲುಗಳನ್ನು ಓಡಿಸಲಾಯಿತು ಮತ್ತು ಖಾಲಿ ಟ್ಯಾಂಕರ್ ಗಳನ್ನು ವೇಗವಾಗಿ ಚಲಿಸಲು ಏರ್ ಫೋರ್ಸ್ ವಿಮಾನಗಳನ್ನು ನಿಯೋಜಿಸಲಾಯಿತು. ಆಮ್ಲಜನಕದ ಉತ್ಪಾದನೆಯನ್ನು ಹೆಚ್ಚಿಸಲು ಡಿ.ಆರ್.ಡಿ.ಒ ತೇಜಸ್ ಫೈಟರ್ ಜೆಟ್ ನ ತಂತ್ರಜ್ಞಾನವನ್ನು ಬಳಸಿತು. ಪಿಎಂ ಕೇರ್ಸ್ ನಿಧಿಯು ದೇಶದಲ್ಲಿ ಪಿ.ಎಸ್.ಎ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುವ ಕಾರ್ಯವನ್ನು ವೇಗಗೊಳಿಸುವುದಲ್ಲದೆ, ಒಂದು ಲಕ್ಷಕ್ಕೂ ಹೆಚ್ಚು ಆಮ್ಲಜನಕದ ಸಾಂದ್ರತೆ ಕೇಂದ್ರಗಳಿಗೆ ಹಣವನ್ನು ನೀಡಲಾಗಿದೆ.

ಸ್ನೇಹಿತರೇ,

ಭವಿಷ್ಯದಲ್ಲಿ ಕೊರೊನಾ ವಿರುದ್ಧದ ನಮ್ಮ ಹೋರಾಟವನ್ನು ಬಲಪಡಿಸಲು ಪಿ.ಎಸ್.ಎ. ಆಕ್ಸಿಜನ್ ಘಟಕಗಳ ಜಾಲವನ್ನು ದೇಶಾದ್ಯಂತ ಸ್ಥಾಪಿಸಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಪಿಎಂ ಕೇರ್ಸ್ ನಿಧಿಯಿಂದ ಅನುಮೋದಿಸಲ್ಪಟ್ಟ 1,150 ಕ್ಕಿಂತ ಹೆಚ್ಚು ಆಮ್ಲಜನಕ ಘಟಕಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ಈಗ ದೇಶದ ಪ್ರತಿಯೊಂದು ಜಿಲ್ಲೆಯು ಪಿಎಂ ಕೇರ್ಸ್ ಅಡಿಯಲ್ಲಿ ನಿರ್ಮಿಸಲಾದ ಆಮ್ಲಜನಕ ಘಟಕಗಳಿಂದ ಆವೃತವಾಗಿದೆ. ನಾವು ಪಿಎಂ ಕೇರ್ಸ್ ಸಹಾಯದಿಂದ ತಯಾರಿಸಿದ ಈ ಆಮ್ಲಜನಕ ಘಟಕಗಳನ್ನು ಸೇರಿಸಿದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯೋಜಿತ ಪ್ರಯತ್ನದಿಂದಾಗಿ ದೇಶವು ಸುಮಾರು 4,000 ಹೊಸ ಆಮ್ಲಜನಕ ಘಟಕಗಳನ್ನು ಪಡೆಯಲಿದೆ. ಈಗ ದೇಶದ ಆಸ್ಪತ್ರೆಗಳು ಆಮ್ಲಜನಕದ ಕೊರತೆಯ ಸವಾಲನ್ನು ಎದುರಿಸಲು ಹಿಂದೆಂದಿಗಿಂತಲೂ ಹೆಚ್ಚು ಸಮರ್ಥವಾಗುತ್ತಿವೆ.  

ಸ್ನೇಹಿತರೇ,

ಭಾರತದಲ್ಲಿ 93 ಕೋಟಿ ಡೋಸ್ ಕೊರೊನಾ ಲಸಿಕೆಗಳನ್ನು ನೀಡಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ಅತಿ ಶೀಘ್ರದಲ್ಲಿ ನಾವು 100 ಕೋಟಿ ಗಡಿ ದಾಟಲು ಸಾಧ್ಯವಾಗುತ್ತದೆ. ಕೋವಿನ್ ಪ್ಲಾಟ್‌ಫಾರ್ಮ್ ಅನ್ನು ರಚಿಸುವ ಮೂಲಕ ಇಷ್ಟು ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನೇಷನ್ ಅನ್ನು ಹೇಗೆ ನಡೆಸಲಾಗುತ್ತದೆ ಎಂಬುದನ್ನು ಭಾರತವು ಇಡೀ ಜಗತ್ತಿಗೆ ತೋರಿಸಿದೆ. ಪರ್ವತಗಳು ಅಥವಾ ಮರುಭೂಮಿಗಳು, ಅರಣ್ಯಗಳು ಅಥವಾ ಸಮುದ್ರಗಳು, 10 ಮಂದಿಯಿರಲಿ ಅಥವಾ 10 ಲಕ್ಷ ಜನರಿರಲಿ, ಇಂದು ನಾವು ಸಂಪೂರ್ಣ ಸುರಕ್ಷತೆಯೊಂದಿಗೆ ಪ್ರತಿ ಪ್ರದೇಶಕ್ಕೂ ಲಸಿಕೆಗಳನ್ನು ಒದಗಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ದೇಶಾದ್ಯಂತ 1.30 ಲಕ್ಷಕ್ಕೂ ಹೆಚ್ಚು ಲಸಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿರುವ ರಾಜ್ಯ ಸರ್ಕಾರದ ಪರಿಣಾಮಕಾರಿ ನಿರ್ವಹಣೆಯಿಂದಾಗಿ, ಉತ್ತರಾಖಂಡವು ಕೂಡಾ ಶೀಘ್ರದಲ್ಲೇ 100 ಪ್ರತಿಶತದ ಮೊದಲ ಡೋಸ್ ಅನ್ನು ಪೂರ್ಣಗೊಳಿಸಲಿದೆ, ಮತ್ತು ಇದಕ್ಕಾಗಿ ನಾನು ಮುಖ್ಯಮಂತ್ರಿ, ಅವರ ಸಂಪೂರ್ಣ ತಂಡ ಮತ್ತು ಇಲ್ಲಿರುವ ಎಲ್ಲಾ ಸರ್ಕಾರಿ ಸಹೋದ್ಯೋಗಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಸಹೋದರ ಸಹೋದರಿಯರೇ,

ತೇರಾಯೈಯಂತಹ ಭೂಮಿಯಲ್ಲಿ, ಬಹುಶಃ ಈ ಕೆಲಸಗಳನ್ನು ಮಾಡುವುದು ಸುಲಭವಾಗಿದೆ. ನಾನು ಈ ಪ್ರದೇಶಕ್ಕೆ ಅನೇಕ ಬಾರಿ ಭೇಟಿ ನೀಡಿದ್ದೇನೆ ಮತ್ತು ಹಿಮಾಲಯದ ಪರ್ವತಗಳಾದ್ಯಂತ ಜನರನ್ನು ತಲುಪುವ ಮೂಲಕ ಲಸಿಕೆಗಳನ್ನು ಇಲ್ಲಿ ತಲುಪಿಸುವುದು ನಿಜವಾಗಿಯೂ ತುಂಬಾ ಕಷ್ಟ ಎಂದು ನಮಗೆ ಚೆನ್ನಾಗಿ ತಿಳಿದಿದೆ. ಎಲ್ಲಾ ಸವಾಲುಗಳ ನಡುವೆಯೂ ಇಷ್ಟು ದೊಡ್ಡ ಸಾಧನೆಯನ್ನು ಸಾಧಿಸಿದ್ದಕ್ಕಾಗಿ ನೀವೆಲ್ಲರೂ ಅಭಿನಂದನೆಗೆ ಅರ್ಹರು.

ಸಹೋದರ ಸಹೋದರಿಯರೇ,

21 ನೇ ಶತಮಾನದ ಭಾರತವು ಜನರ ಆಕಾಂಕ್ಷೆಗಳನ್ನು ಮತ್ತು ಅಗತ್ಯಗಳನ್ನು ಸಂಪೂರ್ಣವಾಗಿ ಪೂರೈಸುವ ಮೂಲಕ ಮಾತ್ರ ಮುಂದುವರಿಯುತ್ತದೆ. ಇಂದು ಸರ್ಕಾರವು ನಾಗರಿಕರು ತಮ್ಮ ಸಮಸ್ಯೆಗಳೊಂದಿಗೆ ಬರುವವರೆಗೆ ಕಾಯುವುದಿಲ್ಲ ಮತ್ತು ನಂತರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ - ನಾವು ಈ ತಪ್ಪು ಕಲ್ಪನೆಯನ್ನು, ಸರ್ಕಾರದ ಮನಸ್ಥಿತಿ ಮತ್ತು ವ್ಯವಸ್ಥೆಯಿಂದ ತೆಗೆದುಹಾಕುತ್ತಿದ್ದೇವೆ. ಈಗ ಸರ್ಕಾರವು ನಾಗರಿಕರ ಬಳಿಗೆ ಹೋಗುತ್ತದೆ. ಈ ಕಾರಣದಿಂದಲೇ ಸಾರ್ವಜನಿಕ ಹಿತಾಸಕ್ತಿಯ ಪ್ರತಿಯೊಂದು ಪ್ರಯೋಜನವೂ, ಅದು ಬಡವರಿಗೆ ಪಕ್ಕಾ ಮನೆ, ವಿದ್ಯುತ್, ನೀರು, ಶೌಚಾಲಯ ಮತ್ತು ಗ್ಯಾಸ್ ಸಂಪರ್ಕ, 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ರೇಶನ್, ರೈತರ ಬ್ಯಾಂಕ್ ಖಾತೆಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ನೇರ ವರ್ಗಾವಣೆ, ಪ್ರತಿಯೊಬ್ಬ ಭಾರತೀಯನಿಗೂ ಪಿಂಚಣಿ ಮತ್ತು ವಿಮಾ ಸೌಲಭ್ಯಗಳನ್ನು ಮಾಡುವ ಪ್ರಯತ್ನಗಳು ಸರಿಯಾದ ಫಲಾನುಭವಿಗರನ್ನು ತಲುಪಿದೆ

ಸ್ನೇಹಿತರೇ,

ಆರೋಗ್ಯ ಕ್ಷೇತ್ರದಲ್ಲೂ, ಭಾರತವು ಇದೇ ವಿಧಾನದೊಂದಿಗೆ ಮುಂದುವರಿಯುತ್ತಿದೆ. ಇದರ ಪರಿಣಾಮವಾಗಿ, ಬಡ ಮತ್ತು ಮಧ್ಯಮ ವರ್ಗದವರಿಗೆ ಉಳಿತಾಯವಿದೆ ಹಾಗು ಅವರು ಸೌಲಭ್ಯಗಳನ್ನು ಸಹ ಪಡೆಯುತ್ತಿದ್ದಾರೆ. ಈ ಹಿಂದೆ, ಯಾರಿಗಾದರೂ ಗಂಭೀರವಾದ ಅನಾರೋಗ್ಯವಿದ್ದಾಗ, ಅವರು ಹಣಕಾಸಿನ ಸಹಾಯಕ್ಕಾಗಿ ರಾಜಕಾರಣಿಗಳನ್ನು ಅಥವಾ ಸರ್ಕಾರಿ ಕಚೇರಿಗಳನ್ನು ಸುತ್ತುತ್ತಿದ್ದರು. ಆಯುಷ್ಮಾನ್ ಭಾರತ್ ಈ ಸಮಸ್ಯೆಯನ್ನು ಶಾಶ್ವತವಾಗಿ ಕೊನೆಗೊಳಿಸಿದೆ. ಆಸ್ಪತ್ರೆಗಳ ಹೊರಗಿನ ಉದ್ದದ ಸರತಿ ಸಾಲುಗಳು, ಚಿಕಿತ್ಸೆಯಲ್ಲಿ ವಿಳಂಬ ಮತ್ತು ವೈದ್ಯಕೀಯ ಇತಿಹಾಸದ ಕೊರತೆಯಿಂದಾಗಿ ಅನೇಕ ಜನರು ತೊಂದರೆ ಅನುಭವಿಸಬೇಕಾಯಿತು. ಈಗ ಮೊದಲ ಬಾರಿಗೆ, ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಗಳು ಆರಂಭವಾಗಿವೆ.

ಸ್ನೇಹಿತರೇ,

ಅನಾರೋಗ್ಯದ ಸಮಯದಲ್ಲಿ ದಿನನಿತ್ಯದ ತಪಾಸಣೆಗಾಗಿ ಮತ್ತು ಸಣ್ಣ ಪರಿಹಾರಗಳಿಗಾಗಿ ಹಲವು ಬಾರಿ ಪ್ರಯಾಣಿಸುವುದು ಬಹಳ ಕಷ್ಟದಾಯಕ ಎಂಬುದನ್ನು ಉತ್ತರಾಖಂಡದ ಜನರಿಗಿಂತ ಯಾರು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು. ಜನರ ಈ ಕಷ್ಟವನ್ನು ಹೋಗಲಾಡಿಸಲು, ಈಗ ಇ-ಸಂಜೀವನಿ ಆಪ್ ಸೌಲಭ್ಯವಿದೆ. ಈಗ ಹಳ್ಳಿಗಳಲ್ಲಿ ತಮ್ಮ ಮನೆಯಲ್ಲಿ ಕುಳಿತಿರುವ ರೋಗಿಗಳು ನಗರಗಳ ಆಸ್ಪತ್ರೆಗಳ ವೈದ್ಯರಿಂದ ಸಮಾಲೋಚನೆ ಪಡೆಯುತ್ತಿದ್ದಾರೆ. ಈಗ ಉತ್ತರಾಖಂಡದ ಜನರು ಕೂಡ ಇದರ ಲಾಭ ಪಡೆಯಲು ಆರಂಭಿಸಿದ್ದಾರೆ.

ಸಹೋದರ ಸಹೋದರಿಯರೇ,

ಆರೋಗ್ಯ ಸೌಲಭ್ಯಗಳನ್ನು ಎಲ್ಲರಿಗೂ ತಲುಪುವಂತೆ ಮಾಡಲು ಸರತಿಯ ಕೊನೆಯ ವ್ಯಕ್ತಿ ಯವರೆಗೆ ವಿತರಣೆಗೆ ಬಲವಾದ ಆರೋಗ್ಯ ಮೂಲಸೌಕರ್ಯ ಕೂಡ ಬಹಳ ಮುಖ್ಯವಾಗಿದೆ. 6-7 ವರ್ಷಗಳ ಹಿಂದೆ, ಕೆಲವು ರಾಜ್ಯಗಳಲ್ಲಿ ಮಾತ್ರ ಏಮ್ಸ್ ಆಸ್ಪತ್ರೆಯ ಸೌಲಭ್ಯವಿತ್ತು, ಇಂದು ಪ್ರತಿ ರಾಜ್ಯದಲ್ಲೂ ಏಮ್ಸ್ ಸ್ಥಾಪಿಸುವ ಕೆಲಸ ಪ್ರಗತಿಯಲ್ಲಿದೆ. ನಾವು 6 ಏಮ್ಸ್ ನಿಂದ 22 ಏಮ್ಸ್ ನ ಬಲವಾದ ನೆಟ್ವರ್ಕ್ ಅನ್ನು ನಿರ್ಮಿಸಲು ಇಂದು ವೇಗವಾಗಿ ಚಲಿಸುತ್ತಿದ್ದೇವೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಒಂದು ವೈದ್ಯಕೀಯ ಕಾಲೇಜನ್ನು ಹೊಂದುವ ಗುರಿಯನ್ನು ಸರ್ಕಾರ ಹೊಂದಿದೆ. ಕಳೆದ ಏಳು ವರ್ಷಗಳಲ್ಲಿ, ದೇಶದಲ್ಲಿ 170 ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದೆ. ಹತ್ತಾರು ಹೊಸ ವೈದ್ಯಕೀಯ ಕಾಲೇಜುಗಳ ಕೆಲಸ ಪ್ರಗತಿಯಲ್ಲಿದೆ. ಇಲ್ಲಿ, ಉತ್ತರಾಖಂಡದಲ್ಲಿ ಕೂಡ ರುದ್ರಪುರ, ಹರಿದ್ವಾರ ಮತ್ತು ಪಿಥೋರಗಡ್ ನಲ್ಲಿ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾ ಪನೆಯನ್ನು ಅನುಮೋದಿಸಲಾಗಿದೆ.

ಸ್ನೇಹಿತರೇ,  

ಉತ್ತರಾಖಂಡದ ಸೃಷ್ಟಿಯ ಕನಸನ್ನು ಅಟಲ್ ಜೀ ಈಡೇರಿಸಿದ್ದರು. ಸಂಪರ್ಕವು ಅಭಿವೃದ್ಧಿಗೆ ನೇರವಾಗಿ ಸಂಬಂಧಿಸಿದೆ ಎಂದು ಅಟಲ್ ಜೀ ನಂಬಿದ್ದರು. ಅವರ ಸ್ಫೂರ್ತಿಯಿಂದಾಗಿ, ಇಂದು ದೇಶದಲ್ಲಿ ಸಂಪರ್ಕ ಮೂಲಸೌಕರ್ಯಕ್ಕಾಗಿ ಅಭೂತಪೂರ್ವ ವೇಗದಲ್ಲಿ ಮತ್ತು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಲಾಗುತ್ತಿದೆ. ಉತ್ತರಾಖಂಡ ಸರ್ಕಾರ ಈ ದಿಶೆಯಲ್ಲಿ ಗಂಭೀರವಾಗಿ ಕೆಲಸ ಮಾಡುತ್ತಿರುವುದಕ್ಕೆ ನನಗೆ ತೃಪ್ತಿ ಇದೆ. ಬಾಬಾ ಕೇದಾರನ ಆಶೀರ್ವಾದದಿಂದ ಕೇದಾರಧಾಮದ ಭವ್ಯತೆಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತಿದೆ ಮತ್ತು ಭಕ್ತರಿಗಾಗಿ ಅಲ್ಲಿ ಹೊಸ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನಾನು ಈ ಯೋಜನೆಗಳ ಪ್ರಗತಿಯನ್ನು ಡ್ರೋನ್ ಕ್ಯಾಮರಾ ಮೂಲಕ ಹಲವು ಬಾರಿ ಪರಿಶೀಲಿಸುತ್ತಲೇ ಇದ್ದೇನೆ. ಚಾರ್ಧಾಮ್ ಅನ್ನು ಸಂಪರ್ಕಿಸುವ ಎಲ್ಲಾ ಹವಾಮಾನದ ಅನುಕೂಲ ರಸ್ತೆಯ ಕೆಲಸವು ಭರದಿಂದ ಸಾಗುತ್ತಿದೆ. ಚಾರ್ಧಾಮ್ ಯೋಜನೆಯು ದೇಶ ಮತ್ತು ವಿದೇಶಗಳಿಂದ ಬರುವ ಯಾತ್ರಾರ್ಥಿಗಳಿಗೆ ಒಂದು ದೊಡ್ಡ ಸೌಲಭ್ಯವನ್ನು ಸೃಷ್ಟಿಸುವುದಲ್ಲದೆ, ಇದು ಸವಾಲಿನ ಪ್ರದೇಶಗಳಾದ ಗರ್ವಾಲ್ ಮತ್ತು ಕುಮಾವಾನ್ ಅನ್ನು ಕೂಡ ಸಂಪರ್ಕಿಸುತ್ತಿದೆ. ಕುಮಾವಾನ್ ನ ಚಾರ್ಧಮ್ ರಸ್ತೆಯ ಸುಮಾರು 150 ಕಿಮೀ ವಿಸ್ತಾರವು ಈ ಪ್ರದೇಶಕ್ಕೆ ಹೊಸ ಆಯಾಮವನ್ನು ನೀಡಲಿದೆ. ಉತ್ತರಾಖಂಡದ ರೈಲು ಸಂಪರ್ಕವು ಋಷಿಕೇಶ್-ಕರ್ಣಪ್ರಯಾಗ್ ರೈಲು ಮಾರ್ಗದಿಂದ ಮತ್ತಷ್ಟು ವಿಸ್ತರಣೆಯನ್ನು ಪಡೆಯುತ್ತದೆ. ರಸ್ತೆ ಮತ್ತು ರೈಲಿನ ಹೊರತಾಗಿ, ಉತ್ತರಾಖಂಡವು ವಾಯು ಸಂಪರ್ಕಕ್ಕೆ ಸಂಬಂಧಿಸಿದ ಪ್ರಗತಿಯಿಂದ ಪ್ರಯೋಜನವನ್ನು ಪಡೆದುಕೊಂಡಿದೆ. ಡೆಹ್ರಾಡೂನ್ ವಿಮಾನ ನಿಲ್ದಾಣದ ಸಾಮರ್ಥ್ಯವನ್ನು 250 ಪ್ರಯಾಣಿಕರಿಂದ 1200 ಪ್ರಯಾಣಿಕರಿಗೆ ಹೆಚ್ಚಿಸಲಾಗಿದೆ. ಮುಖ್ಯಮಂತ್ರಿ ಧಾಮಿ ಜೀ ಅವರ ಉತ್ಸಾಹ ಮತ್ತು ಶಕ್ತಿಯುತ ನಾಯಕತ್ವದಲ್ಲಿ ಹೆಲಿಪೋರ್ಟ್ ಮೂಲಸೌಕರ್ಯವನ್ನು ಉತ್ತರಾಖಂಡದಲ್ಲಿ ಪ್ರಚಾರ ಮಾಡಲಾಗುತ್ತಿದೆ.

ಸ್ನೇಹಿತರೇ,

ಉತ್ತರಾಖಂಡದಲ್ಲಿ ನೀರಿನ ಸಂಪರ್ಕದ ಬಗ್ಗೆ ಶ್ಲಾಘನೀಯ ಕೆಲಸ ಮಾಡಲಾಗುತ್ತಿದೆ. ಇಲ್ಲಿನ ಮಹಿಳೆಯರು ಇದರ ದೊಡ್ಡ ಪ್ರಯೋಜನಗಳನ್ನು ಪಡೆಯಲು ಆರಂಭಿಸಿದ್ದಾರೆ, ಅವರ ಜೀವನ ಸುಲಭವಾಗುತ್ತಿದೆ. 2019 ರಲ್ಲಿ ಜಲ ಜೀವನ ಮಿಷನ್ ಪ್ರಾರಂಭವಾಗುವ ಮೊದಲು, ಉತ್ತರಾಖಂಡದಲ್ಲಿ ಕೇವಲ 1.30 ಲಕ್ಷ ಮನೆಗಳಿಗೆ ಮಾತ್ರ ಕೊಳವೆ ನಲ್ಲಿಯ ನೀರು ಲಭ್ಯವಿತ್ತು. ಇಂದು ಉತ್ತರಾಖಂಡದ 7.10 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ನಲ್ಲಿಯ ನೀರು ಲಭ್ಯವಿದೆ. ಅಂದರೆ, ರಾಜ್ಯದ ಸುಮಾರು ಆರು ಲಕ್ಷ ಮನೆಗಳು ಕೇವಲ ಎರಡು ವರ್ಷಗಳಲ್ಲಿ ನೀರಿನ ಸಂಪರ್ಕವನ್ನು ಪಡೆದಿವೆ. ಉಜ್ವಲ ಯೋಜನೆಯಡಿ ನೀಡಲಾದ ಗ್ಯಾಸ್ ಸಂಪರ್ಕವು ಮಹಿಳೆಯರಿಗೆ ಪರಿಹಾರ ನೀಡಿದಂತೆ, ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ನಿರ್ಮಿಸಲಾದ ಶೌಚಾಲಯಗಳು ಮಹಿಳೆಯರಿಗೆ ಅನುಕೂಲ, ಭದ್ರತೆ ಮತ್ತು ಗೌರವವನ್ನು ನೀಡಿವೆ, ಅಂತೆಯೇ ಜಲ ಜೀವನ ಮಿಷನ್ ನಿಂದ ನೀರಿನ ಸಂಪರ್ಕವು ಮಹಿಳೆಯರಿಗೆ ಸಾಕಷ್ಟು ಸೌಕರ್ಯ -ಪರಿಹಾರವನ್ನು ನೀಡುತ್ತಿದೆ..

ಸ್ನೇಹಿತರೇ,

ಉತ್ತರಾಖಂಡವು ರಾಷ್ಟ್ರದ ಭದ್ರತೆಯಲ್ಲಿ ದೊಡ್ಡ ಪಾತ್ರವನ್ನು ಹೊಂದಿದೆ. ಈ ಭೂಮಿಯ ಧೈರ್ಯಶಾಲಿ ಯುವಕರು ಮತ್ತು ಹೆಣ್ಣು ಮಕ್ಕಳು ಭಾರತೀಯ ಭದ್ರತಾ ಪಡೆಗಳ ಹೆಮ್ಮೆ. ನಮ್ಮ ಸರ್ಕಾರವು ಪ್ರತಿಯೊಬ್ಬ ಸೈನಿಕನ, ಪ್ರತಿಯೊಬ್ಬ ಮಾಜಿ ಸೈನಿಕನ ಹಿತಾಸಕ್ತಿಗಾಗಿ ತುಂಬಾ ಗಂಭೀರವಾಗಿ ಕೆಲಸ ಮಾಡುತ್ತಿದೆ. ಒನ್ ರ್ಯಾಂ ಕ್ ಒನ್ ಪಿಂಚಣಿ ಜಾರಿಗೆ ತರುವ ಮೂಲಕ ನಮ್ಮ ಮಿಲಿಟರಿ ಸಹೋದರರ 40 ವರ್ಷಗಳ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ. ಮತ್ತು ನಮ್ಮ ಧಾಮಿ ಜೀ ಸ್ವತಃ ಒಬ್ಬ ಸೈನಿಕನ ಮಗ. ಈ ನಿರ್ಧಾರವು ಸೈನಿಕರಿಗೆ ಎಷ್ಟು ಸಹಾಯ ಮಾಡಿದೆ ಎಂದು ಅವರು ನಮಗೆ ಹೇಳುತ್ತಿದ್ದರು.

ಸ್ನೇಹಿತರೇ, 

ದೇಶದ ವೀರ ಯೋಧರಿಗೆ ದೆಹಲಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ನಿರ್ಮಿಸುವ ಮೂಲಕ ನಮ್ಮ ಸರ್ಕಾರ ಗೌರವ ಸಲ್ಲಿಸಿದೆ. ನಮ್ಮ ಸರ್ಕಾರವು ಸೈನ್ಯ ಹಾಗೂ ನೌಕಾಪಡೆ ಮತ್ತು ವಾಯುಪಡೆಯ ಹುತಾತ್ಮರಿಗೆ ಯುದ್ಧ ಸಾವಿನ ಕಲ್ಯಾಣ ನಿಧಿಯ ಲಾಭವನ್ನು ಖಾತ್ರಿಪಡಿಸಿದೆ. ಜೆ.ಸಿ.ಒ ಮತ್ತು ಇತರ ಶ್ರೇಣಿಗಳ ಬಡ್ತಿಯ ನಾಲ್ಕು ದಶಕಗಳ ಹಳೆಯ ಸಮಸ್ಯೆಯನ್ನು ನಮ್ಮ ಸರ್ಕಾರವು ಪರಿಹರಿಸಿದೆ. ಮಾಜಿ ಸೈನಿಕರು ಪಿಂಚಣಿ ಸಂಬಂಧಿತ ಸಮಸ್ಯೆಗಳನ್ನು ಎದುರಿಸದಂತೆ ನಾವು ಡಿಜಿಟಲ್ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುತ್ತಿದ್ದೇವೆ.

ಸ್ನೇಹಿತರೇ,

ಯಾವಾಗ ಸೇನೆಯ ಧೈರ್ಯಶಾಲಿ ಸೈನಿಕರು ತಮ್ಮನ್ನು ರಕ್ಷಿಸಿಕೊಳ್ಳಲು ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳನ್ನು ಹೊಂದಿದ್ದಾರೋ ಆಗ ಅವರುಗಳಿಗೆ ಶತ್ರುಗಳೊಂದಿಗೆ ಸ್ಪರ್ಧಿಸಲು ಸಲುಭಸಾಧ್ಯವಾಗುತ್ತದೆ. ಹವಾಮಾನವು ಯಾವಾಗಲೂ ಕೆಟ್ಟದಾಗಿರುವ ಇಂತಹ ಸ್ಥಳಗಳಲ್ಲಿ, ಆಧುನಿಕ ಉಪಕರಣಗಳು ಅವರಿಗೆ ಬಹಳಷ್ಟು ಸಹಾಯ ಮಾಡುತ್ತವೆ. ನಮ್ಮ ಸರ್ಕಾರವು ರಕ್ಷಣಾ ವಲಯದಲ್ಲಿ ಆರಂಭಿಸಿದ ಸ್ವಾವಲಂಬನೆ ಅಭಿಯಾನವು ನಮ್ಮ ಸೇನಾ ಒಡನಾಡಿಗಳಿಗೆ ಸಹಕಾರಿಯಾಗಲಿದೆ. ಮತ್ತು ಖಂಡಿತವಾಗಿಯೂ ಸರ್ಕಾರದ ಈ ಎಲ್ಲಾ ಪ್ರಯತ್ನಗಳು ಉತ್ತರಾಖಂಡ ಮತ್ತು ಅದರ ಜನರಿಗೆ ಪ್ರಯೋಜನವನ್ನು ನೀಡುತ್ತದೆ.

ಸಹೋದರ ಸಹೋದರಿಯರೇ,

ದೇವಭೂಮಿಯ ದಶಕಗಳ ನಿರ್ಲಕ್ಷ್ಯವನ್ನು ಕೊನೆಗೊಳಿಸಲು ನಾವು ಅತ್ಯಂತ ಪ್ರಾಮಾಣಿಕ ಮತ್ತು ಶ್ರದ್ಧೆಯಿಂದ ಪ್ರಯತ್ನಿಸುತ್ತಿದ್ದೇವೆ. ಉತ್ತಮ ಮೂಲಸೌಕರ್ಯದೊಂದಿಗೆ, ನಿರ್ಜನ ಹಳ್ಳಿಗಳು ನವಜೀವನಕ್ಕೆ ಮರಳುತ್ತಿವೆ. ಕರೋನಾ ಅವಧಿಯಲ್ಲಿ, ನಾನು ಇಲ್ಲಿ ಅನೇಕ ಯುವಕರು ಮತ್ತು ರೈತರೊಂದಿಗೆ ಅನೇಕ ಸಂಭಾಷಣೆಗಳನ್ನು ನಡೆಸಿದ್ದೇನೆ. ಅವರ ಮನೆಯ ಹತ್ತಿರ ರಸ್ತೆ ನಿರ್ಮಿಸಲಾಗಿದೆ, ಅಥವಾ ಅವರು ಹೋಂ ಸ್ಟೇ ತೆರೆದಿದ್ದಾರೆ ಎಂದು ಅವರು ನೇರ ಸಂವಾದದಲ್ಲಿ ಹೇಳಿದಾಗ ಅದು ತೃಪ್ತಿಯ ವಿಷಯವಾಗಿದೆ. ಹೊಸ ಮೂಲಸೌಕರ್ಯವು ಯುವಜನರಿಗೆ ಕೃಷಿ, ಪ್ರವಾಸೋದ್ಯಮ, ತೀರ್ಥಯಾತ್ರೆ ಮತ್ತು ಕೈಗಾರಿಕೆಗಳಲ್ಲಿ ಅನೇಕ ಅವಕಾಶಗಳನ್ನು ತೆರೆಯಲಿದೆ 

ಸ್ನೇಹಿತರೇ,

ಉತ್ತರಾಖಂಡದಲ್ಲಿ ಯುವ ಶಕ್ತಿಯಿಂದ ತುಂಬಿದ ಉತ್ಸಾಹಿ ತಂಡವಿದೆ. ಮುಂದಿನ ಕೆಲವು ವರ್ಷಗಳಲ್ಲಿ, ಉತ್ತರಾಖಂಡವು ರಚನೆಯಾದ 25 ವರ್ಷಗಳ ಕಾಲಘಟ್ಟವನ್ನು ಪ್ರವೇಶಿಸುತ್ತದೆ. ಉತ್ತರಾಖಂಡವು ಅದರ ರಚನೆಯ 25 ವರ್ಷಗಳನ್ನು ಮುಂದಿನ ಕೆಲವೇ ವರ್ಷಗಳಲ್ಲಿ ಪೂರ್ಣಗೊಳಿಸಲಿದೆ. ಆದ್ದರಿಂದ, ಉತ್ತರಾಖಂಡದ ಸಾಧನೆಯ ಎತ್ತರವನ್ನು ನಿರ್ಧರಿಸಲು ಅದರಲ್ಲಿ ತೊಡಗಿಸಿಕೊಳ್ಳಲು ಇದು ಸರಿಯಾದ ಸಮಯ. ಉತ್ತರಾಖಂಡದ ಈ ಹೊಸ ತಂಡಕ್ಕೆ ಕೇಂದ್ರದಲ್ಲಿರುವ ಸರ್ಕಾರ ಸಂಪೂರ್ಣ ಸಹಾಯವನ್ನು ನೀಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಪ್ರಯತ್ನಗಳು ಇಲ್ಲಿನ ಜನರ ಕನಸುಗಳನ್ನು ಈಡೇರಿಸುವ ಆಧಾರವಾಗಿದೆ. ಅಭಿವೃದ್ಧಿಯ ಯಂತ್ರದ ಈ ಡಬಲ್ ಎಂಜಿನ್, ಉತ್ತರಾಖಂಡಕ್ಕೆ ಸಾಧನೆಯ ಹಾದಿಯಲ್ಲ್ಲಿ ಹೊಸ ಎತ್ತರವನ್ನು ನೀಡಲಿದೆ. ಬಾಬಾ ಕೇದಾರರ ಆಶೀರ್ವಾದದೊಂದಿಗೆ, ನಾವು ಪ್ರತಿ ನಿರ್ಣಯವನ್ನು ಪೂರೈಸೋಣ! ಈ ಹಾರೈಕೆಯೊಂದಿಗೆ, ಎಲ್ಲಾ ಶುಭಾಶಯಗಳು 

ಧನ್ಯವಾದಗಳು!

ಹಕ್ಕುತ್ಯಾಗ: ಇದು ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

***



(Release ID: 1762723) Visitor Counter : 203