ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
2021ರ ಏಪ್ರಿಲ್ 1ರಿಂದ 2026ರ ಮಾರ್ಚ್ 31ರವರೆಗೆ ಶಾಲಾ ಶಿಕ್ಷಣಕ್ಕಾಗಿ ಸಮಗ್ರ ಶಿಕ್ಷಣ ಯೋಜನೆ ಮುಂದುವರಿಸಲು ಸಂಪುಟದ ಅನುಮೋದನೆ
ಇದರಲ್ಲಿ ಕೇಂದ್ರದ ಪಾಲು 1,85,398.32 ಕೋಟಿ ರೂ. ಸೇರಿ 2,94,283.04 ಕೋಟಿ ರೂ. ಹಣಕಾಸು ಹಂಚಿಕೆ
1.16 ದಶಲಕ್ಷ ಶಾಲೆಗಳು, 156 ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 5.7 ದಶಲಕ್ಷ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಈ ಯೋಜನೆ ವ್ಯಾಪ್ತಿಯಲ್ಲಿ
Posted On:
04 AUG 2021 3:57PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆ, ಪರಿಷ್ಕೃತ ಸಮಗ್ರ ಶಿಕ್ಷಣ ಯೋಜನೆಯನ್ನು ಐದು ವರ್ಷಗಳ ಅವಧಿಗೆ ಅಂದರೆ 2021-22ರಿಂದ 2025-26ರವರೆಗೆ ಒಟ್ಟು 2,94,283.04 ಕೋಟಿ ರೂ.ಗಳ ಆರ್ಥಿಕ ಹಂಚಿಕೆಯೊಂದಿಗೆ ಮುಂದುವರಿಸಲು ತನ್ನ ಅನುಮೋದನೆ ನೀಡಿದೆ. ಇದರಲ್ಲಿ ಕೇಂದ್ರದ ಪಾಲು 1,85,398.32 ಕೋಟಿ ರೂ. ಆಗಿದೆ.
ಪ್ರಯೋಜನಗಳು:
ಈ ಯೋಜನೆಯು 1.16 ದಶಲಕ್ಷ ಶಾಲೆಗಳು, 156 ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 5.7 ದಶಲಕ್ಷ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರನ್ನು (ಪೂರ್ವ ಪ್ರಾಥಮಿಕಹಂತದಿಂದ ಹಿಡಿದು ಪದವಿಪೂರ್ವ (ಸೀನಿಯರ್ ಸೆಕೆಂಡರಿ) ಹಂತದವರೆಗೆ ಒಳಗೊಂಡಿದೆ.
ವಿವರಗಳು:
ಸಮಗ್ರ ಶಿಕ್ಷಣ ಯೋಜನೆಯು ಶಾಲಾ ಶಿಕ್ಷಣಕ್ಕಾಗಿ ಒಂದು ಸಮಗ್ರ ಯೋಜನೆಯಾಗಿದ್ದು, ಇದು ಪೂರ್ವ ಪ್ರಾಥಮಿಕ ಶಾಲೆಯಿಂದ ಹನ್ನೆರಡನೇ ತರಗತಿಯವರೆಗೆ ಸಂಪೂರ್ಣ ಶ್ರೇಣಿಯನ್ನು ಒಳಗೊಂಡಿದೆ. ಈ ಯೋಜನೆಯು ಶಾಲಾ ಶಿಕ್ಷಣವನ್ನು ನಿರಂತರವೆಂದು ಪರಿಗಣಿಸುತ್ತದೆ ಮತ್ತು ಶಿಕ್ಷಣದ ಸುಸ್ಥಿರ ಅಭಿವೃದ್ಧಿ ಗುರಿಗೆ (ಎಸ್.ಡಿಜಿ-4) ಅನುಗುಣವಾಗಿದೆ. ಈ ಯೋಜನೆಯು ಆರ್.ಟಿ.ಇ ಕಾಯ್ದೆಯ ಅನುಷ್ಠಾನಕ್ಕೆ ಬೆಂಬಲವನ್ನು ಒದಗಿಸುವುದಷ್ಟೇ ಅಲ್ಲದೆ, ಮಕ್ಕಳ ವೈವಿಧ್ಯಮಯ ಹಿನ್ನೆಲೆ, ಬಹುಭಾಷಾ ಅಗತ್ಯಗಳು, ವಿಭಿನ್ನ ಶೈಕ್ಷಣಿಕ ಸಾಮರ್ಥ್ಯಗಳನ್ನು ಕಾಳಜಿ ವಹಿಸಿ, ಅವರು ಕಲಿಕಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವ ಸಮಾನ ಮತ್ತು ಅಂತರ್ಗತ ತರಗತಿ ವಾತಾವರಣದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ಪಡೆಯುವುದನ್ನು ಖಾತ್ರಿಪಡಿಸಿಕೊಳ್ಳಲು ಎನ್.ಇ.ಪಿ 2020ರ ಶಿಫಾರಸುಗಳಿಗೆ ಪೂರಕವಾಗಿದೆ.
ಈ ಯೋಜನೆಯಡಿ ಪ್ರಸ್ತಾಪಿಸಲಾದ ಶಾಲಾ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಪ್ರಮುಖ ಮಧ್ಯಸ್ಥಿಕೆಗಳೆಂದರೆ: (1) ಮೂಲಸೌಕರ್ಯ ಅಭಿವೃದ್ಧಿ ಮತ್ತು ಶಾಲೆಯಲ್ಲಿ ಉಳಿಸಿಕೊಳ್ಳುವುದು ಸೇರಿದಂತೆ ಸಾರ್ವತ್ರಿಕ ಪ್ರವೇಶ; (2) ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ, (3) ಲಿಂಗ ಮತ್ತು ಸಮಾನತೆ; (4) ಸಮಗ್ರ ಶಿಕ್ಷಣ; (5) ಗುಣಮಟ್ಟ ಮತ್ತು ನಾವಿನ್ಯತೆ; (6) ಶಿಕ್ಷಕರ ವೇತನಕ್ಕೆ ಆರ್ಥಿಕ ಬೆಂಬಲ; (7) ಡಿಜಿಟಲ್ ಉಪಕ್ರಮಗಳು; (8) ಸಮವಸ್ತ್ರ, ಪಠ್ಯಪುಸ್ತಕಗಳು ಸೇರಿದಂತೆ ಆರ್. ಟಿ.ಇ ಅರ್ಹ ಹಕ್ಕುಗಳು; (9) ಇಸಿಸಿಇಗೆ ಬೆಂಬಲ; (10) ವೃತ್ತಿಪರ ಶಿಕ್ಷಣ; (11) ಕ್ರೀಡೆ ಮತ್ತು ದೈಹಿಕ ಶಿಕ್ಷಣ; (12) ಶಿಕ್ಷಕರ ತರಬೇತಿ ಮತ್ತು ಶಿಕ್ಷಣದ ಬಲವರ್ಧನೆ; (13) ಮೇಲ್ವಿಚಾರಣೆ; (14) ಕಾರ್ಯಕ್ರಮ ನಿರ್ವಹಣೆ; ಮತ್ತು (15) ರಾಷ್ಟ್ರೀಯ ಘಟಕ (ಕಾಂಪೋನೆಂಟ್).
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಶಿಫಾರಸುಗಳ ಆಧಾರದ ಮೇಲೆ ನವೀಕರಿಸಿದ ಸಮಗ್ರ ಶಿಕ್ಷಣದಲ್ಲಿ ಹೊಸ ಮಧ್ಯಸ್ಥಿಕೆಗಳನ್ನು ಸೇರಿಸಲಾಗಿದೆ:
• ಯೋಜನೆಯ ನೇರ ವ್ಯಾಪ್ತಿಯನ್ನು ಹೆಚ್ಚಿಸುವ ಸಲುವಾಗಿ, ಎಲ್ಲಾ ಮಕ್ಕಳ ಕೇಂದ್ರಿತ ಮಧ್ಯಸ್ಥಿಕೆಗಳನ್ನು ಕಾಲಾ ನಂತರದಲ್ಲಿ ಐಟಿ ಆಧಾರಿತ ವೇದಿಕೆ ಡಿಬಿಟಿ ವಿಧಾನದ ಮೂಲಕ ವಿದ್ಯಾರ್ಥಿಗಳಿಗೆ ನೇರವಾಗಿ ಒದಗಿಸಲಾಗುವುದು.
• ಈ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸಚಿವಾಲಯಗಳು/ ಅಭಿವೃದ್ಧಿ ಸಂಸ್ಥೆಗಳೊಂದಿಗೆ ಪರಿಣಾಮಕಾರಿ ಸಂಯೋಜನೆ ವಾಸ್ತುಶಿಲ್ಪವನ್ನು ಹೊಂದಿರುತ್ತದೆ. ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಮತ್ತು ಕೌಶಲ್ಯಗಳಿಗೆ ಧನಸಹಾಯ ಒದಗಿಸುವ ಇತರ ಸಚಿವಾಲಯಗಳೊಂದಿಗೆ ಒಗ್ಗೂಡಿ ವೃತ್ತಿಪರ ಶಿಕ್ಷಣದ ವಿಸ್ತರಣೆಯನ್ನು ಮಾಡಲಾಗುತ್ತದೆ. ಶಾಲೆಗಳು ಮತ್ತು ಐಟಿಐಗಳು ಮತ್ತು ಪಾಲಿಟೆಕ್ನಿಕ್ ಗಳ ಪ್ರಸ್ತುತ ಮೂಲಸೌಕರ್ಯವನ್ನು ಶಾಲೆಗೆ ಹೋಗುವ ಮಕ್ಕಳಿಗೆ ಮಾತ್ರವಲ್ಲದೆ ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಸೌಲಭ್ಯಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುವುದನ್ನು ಖಾತ್ರಿಪಡಿಸುತ್ತದೆ.
• ಅಂಗನವಾಡಿ ಕಾರ್ಯಕರ್ತೆಯರ ತರಬೇತಿಗಾಗಿ ನುರಿತ ತರಬೇತುದಾರರುಗಳಿಗೆ ತರಬೇತಿ ಮತ್ತು ಇಸಿಸಿಇ ಶಿಕ್ಷಕರಿಗೆ ಸೇವಾ ನಿರತ ಶಿಕ್ಷಕರ ತರಬೇತಿ ಒದಗಿಸುವುದು.
• ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ವಿಭಾಗಗಳಿಗೆ ಬೋಧನಾ ಕಲಿಕಾ ಸಾಮಗ್ರಿಗಳು (ಟಿಎಲ್ ಎಂ), ದೇಶೀಯ ಆಟಿಕೆಗಳು ಮತ್ತು ಆಟಗಳು, ಆಟ ಆಧಾರಿತ ಚಟುವಟಿಕೆಗಳಿಗೆ ಪ್ರತಿ ಮಗುವಿಗೆ 5೦೦ ರೂ.ಗಳವರೆಗೆ ಅವಕಾಶವಿರುತ್ತದೆ.
• ಪ್ರತಿ ಮಗುವು 5ನೇ ತರಗತಿಗೆ ಬದಲಾಗಿ, ಮೂರನೇ ತರಗತಿಯ ಅತ್ಯಂದ ವೇಳೆಗೆ ನಿರೀಕ್ಷಿತ ಮಟ್ಟದ ಓದುವಿಕೆ, ಬರವಣಿಗೆ ಮತ್ತು ಸಂಖ್ಯೆಗಳಲ್ಲಿ ಅಪೇಕ್ಷಿತ ಕಲಿಕಾ ಸಾಮರ್ಥ್ಯಗಳನ್ನು ಸಾಧಿಸುವುದನ್ನು ಖಾತ್ರಿಪಡಿಸಿಕೊಳ್ಳಲು ಪ್ರತಿ ಮಗುವಿಗೆ ಟಿ.ಎಲ್.ಎಂ, ಅಡಿ ವರ್ಷಕ್ಕೆ 500 ರೂ.ಗಳವರೆಗೆ, ಶಿಕ್ಷಕರ ಕೈಪಿಡಿಗಳು ಮತ್ತು ಸಂಪನ್ಮೂಲಗಳಿಗೆ ಪ್ರತಿ ಶಿಕ್ಷಕರಿಗೆ 150 ರೂ., ಮೌಲ್ಯಮಾಪನಕ್ಕೆ ಪ್ರತಿ ಜಿಲ್ಲೆಗೆ 10-20 ಲಕ್ಷ ರೂ. ಒಳಗೊಂಡಂತೆ ರಾಷ್ಟ್ರೀಯ ಅಭಿಯಾನವಾಗಿರುವ ನಿಪುಣ್ ಭಾರತವನ್ನು ಈ ಯೋಜನೆಯಡಿ ಪ್ರಾರಂಭಿಸಲಾಗಿದೆ.
• ಮಾಧ್ಯಮಿಕ ಶಿಕ್ಷಕರು ಮತ್ತು ಪ್ರಾಥಮಿಕ ಶಿಕ್ಷಕರಿಗೆ ತರಬೇತಿ ನೀಡಲು ಎನ್.ಸಿ.ಇ.ಆರ್.ಟಿಯಿಂದ ನಿಷ್ಠಾ ಅಡಿಯಲ್ಲಿ ನಿರ್ದಿಷ್ಟ ತರಬೇತಿ ವಿಧಾನಗಳು.
• ಪೂರ್ವ ಪ್ರಾಥಮಿಕದಿಂದ ಪದವಿಪೂರ್ವ (ಸೀನಿಯರ್ ಸೆಕೆಂಡರಿ) ಹಂತದವರೆಗೆ ಮೂಲಸೌಕರ್ಯವರ್ಧನೆ, ಈ ಹಿಂದೆ ಪೂರ್ವ ಪ್ರಾಥಮಿಕದವರೆಗೆ ಶಾಲೆಗಳನ್ನು ಹೊರಗಿಡಲಾಗಿತ್ತು.
• ಎಲ್ಲಾ ಬಾಲಕಿಯರ ವಸತಿ ನಿಲಯಗಳಲ್ಲಿ ದಹನಕಾರಿ ಮತ್ತು ಸ್ಯಾನಿಟರಿ ಪ್ಯಾಡ್ ಮಾರಾಟ ಯಂತ್ರಗಳು.
• ಅಸ್ತಿತ್ವದಲ್ಲಿರುವ ಹಿರಿಯ ಮಾಧ್ಯಮಿಕ ಶಾಲೆಗಳಲ್ಲಿ ಸ್ಟ್ರೀಮ್ ಬದಲಿಗೆ ಹೊಸ ವಿಷಯಗಳನ್ನು ಸೇರಿಸುವುದು.
• ಸಾರಿಗೆ ಸೌಲಭ್ಯವನ್ನು ವಾರ್ಷಿಕ 6೦೦೦ ರೂ. ದರದಲ್ಲಿ ಪ್ರೌಢ ಹಂತದವರೆಗೆ ವಿಸ್ತರಿಸವುದು
• 16 ರಿಂದ 19 ವರ್ಷ ವಯಸ್ಸಿನ ಶಾಲಾ ಮಕ್ಕಳ ಪೈಕಿ, ಎನ್.ಐ.ಒ.ಎಸ್/ಎಸ್.ಒ.ಎಸ್ ಮೂಲಕ ಪ್ರೌಢ/ಪದವಿ ಪೂರ್ವ ಹಂತಗಳನ್ನು ಪೂರ್ಣಗೊಳಿಸಲು ಎಸ್ಸಿ, ಎಸ್ಟಿ, ಅಂಗವಿಕಲ ಮಕ್ಕಳಿಗೆ ಪ್ರತಿ ಗ್ರೇಡ್ ಗೆ 2000 ರೂ.ಗಳವರೆಗೆ ಬೆಂಬಲ ನೀಡಲಾಗುವುದು.
• ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಸುರಕ್ಷತೆಗಾಗಿ ರಾಜ್ಯ ಆಯೋಗಗಳಿಗೆ ರಾಜ್ಯದಲ್ಲಿನ ಪ್ರತಿ ಪ್ರಾಥಮಿಕ ಶಾಲೆಗೆ ರೂ.50ರಂತೆ ಆರ್ಥಿಕ ಬೆಂಬಲ.
• ಸಮಗ್ರ, 360-ಡಿಗ್ರಿ, ಅರಿವಿನ, ಪರಿಣಾಮಾತ್ಮಕ ಮತ್ತು ಸೈಕೋಮೋಟರ್ (ಮಾನಸಿಕ ಶಕ್ತಿಗೆ ಸಂಬಂಧಿಸಿದ) ಡೊಮೇನ್ ಗಳಲ್ಲಿ ಪ್ರತಿಯೊಬ್ಬ ಕಲಿಯುವವರ ಪ್ರಗತಿ/ ವೈಶಿಷ್ಟ್ಯವನ್ನು ತೋರಿಸುವ ಬಹು ಆಯಾಮದ ವರದಿಯನ್ನು ಸಮಗ್ರ ಅಂಕಪಟ್ಟಿಯಲ್ಲಿ (ಎಚ್.ಪಿ.ಸಿ) ರೂಪದಲ್ಲಿ ಪರಿಚಯಿಸಲಾಗುವುದು.
• ರಾಷ್ಟ್ರೀಯ ಮೌಲ್ಯಮಾಪನ ಕೇಂದ್ರವಾದ ಪರಾಖ್ ನ ಚಟುವಟಿಕೆಗಳಿಗೆ ಬೆಂಬಲ (ಸಮಗ್ರ ಅಭಿವೃದ್ಧಿಗಾಗಿ ಜ್ಞಾನದ ಕಾರ್ಯಕ್ಷಮತೆ, ಮೌಲ್ಯಮಾಪನಗಳು, ವಿಮರ್ಶೆ ಮತ್ತು ವಿಶ್ಲೇಷಣೆ)
• ರಾಷ್ಟ್ರ ಮಟ್ಟದ ಖೇಲೋ ಇಂಡಿಯಾ ಶಾಲಾ ಕ್ರೀಡಾಕೂಟಗಳಲ್ಲಿ ಆ ಶಾಲೆಯ ಕನಿಷ್ಠ ಇಬ್ಬರು ವಿದ್ಯಾರ್ಥಿಗಳು ಪದಕ ಗೆದ್ದರೆ ಶಾಲೆಗಳಿಗೆ 25೦೦೦ ರೂ. ಗಳವರೆಗೆ ಹೆಚ್ಚುವರಿ ಕ್ರೀಡಾ ಅನುದಾನ.
• ಶಾಲಾ ಚೀಲ ರಹಿತ ದಿನಗಳು, ಶಾಲಾ ಸಂಕೀರ್ಣಗಳು, ಸ್ಥಳೀಯ ಕುಶಲಕರ್ಮಿಗಳೊಂದಿಗೆ ಇಂಟರ್ನ್ ಶಿಪ್, ಪಠ್ಯಕ್ರಮ ಮತ್ತು ಬೋಧನಾ ಸುಧಾರಣೆಗಳು ಇತ್ಯಾದಿಗಳನ್ನು ಒಳಗೊಂಡಿವೆ.
• ಭಾಷಾ ಶಿಕ್ಷಕರ ಹೊಸ ಘಟಕವನ್ನು ಈ ಯೋಜನೆಯಲ್ಲಿ ಸೇರಿಸಲಾಗಿದೆ- ಶಿಕ್ಷಕರ ತರಬೇತಿ ಮತ್ತು ದ್ವಿಭಾಷಾ ಪುಸ್ತಕಗಳು ಮತ್ತು ಬೋಧನಾ ಕಲಿಕಾ ಸಾಮಗ್ರಿಯ ಘಟಕಗಳು, ಜೊತೆಗೆ ಶಿಕ್ಷಕರ ವೇತನಕ್ಕೆ ಬೆಂಬಲ.
• ಎಲ್ಲಾ ಕೆಜಿಬಿವಿಗಳನ್ನು ಹನ್ನೆರಡನೇ ತರಗತಿವರೆಗೆ ಮೇಲ್ದರ್ಜೆಗೇರಿಸಲು ಅವಕಾಶ.
• ವಾರ್ಷಿಕ 40 ಲಕ್ಷ ರೂ.ಗಳವರೆಗಿನ (ಈ ಹಿಂದೆ ವಾರ್ಷಿಕ 25 ಲಕ್ಷ ರೂ.) 9 ರಿಂದ 12 ನೇ ತರಗತಿಗಳಿಗೆ (ಕೆಜಿಬಿವಿ ವಿಧ 4) ಅಸ್ತಿತ್ವದಲ್ಲಿರುವ ಬಾಲಕಿಯರ ವಸತಿ ನಿಲಯಗಳಿಗೆ ಹೆಚ್ಚಿನ ಆರ್ಥಿಕ ಬೆಂಬಲ.
• 'ರಾಣಿ ಲಕ್ಷ್ಮಿಬಾಯಿ ಆತ್ಮ ರಕ್ಷಣೆ ಪ್ರಶಿಕ್ಷಣ' ಅಡಿಯಲ್ಲಿ ಸ್ವಯಂ ರಕ್ಷಣಾ ಕೌಶಲ್ಯಗಳನ್ನು ಬೆಳೆಸಲು 3 ತಿಂಗಳ ತರಬೇತಿ ಮತ್ತು ಇದರ ಮೊತ್ತವನ್ನು ತಿಂಗಳಿಗೆ ರೂ 3000 ರಿಂದ ರೂ 5000 ಕ್ಕೆ ಹೆಚ್ಚಿಸಲಾಗಿದೆ.
• ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ಹಂತದವರೆಗೆ ವಿದ್ಯಾರ್ಥಿ ಅಂಶವನ್ನು ಹೆಚ್ಚುವರಿಯಾಗಿ ಸಿ.ಡಬ್ಲ್ಯೂ.ಎಸ್.ಎನ್. ಬಾಲಕಿಯರಿಗೆ ಶಿಷ್ಯವೇತನವನ್ನು ಪ್ರತ್ಯೇಕವಾಗಿ 10 ತಿಂಗಳವರೆಗೆ ಮಾಸಿಕ 200 ರೂ.ನಂತೆ ಅವಕಾಶ.
• ವಿಭಾಗ ಮಟ್ಟದಲ್ಲಿ ಸಿಡಬ್ಲ್ಯೂಎಸ್ಎನ್ ಗೆ ವಾರ್ಷಿಕ ಐಡೆಂಟಿಫಿಕೇಷನ್ ಶಿಬಿರಗಳಿಗೆ ಅವಕಾಶ, ಪ್ರತಿ ಶಿಬಿರಕ್ಕೆ ಮತ್ತು ಸಿಡಬ್ಲ್ಯೂಎಸ್ಎನ್ ನ ಪುನರ್ವಸತಿ ಮತ್ತು ವಿಶೇಷ ತರಬೇತಿಗಾಗಿ ವಿಭಾಗೀಯ ಸಂಪನ್ಮೂಲ ಕೇಂದ್ರಗಳನ್ನು ಸಜ್ಜುಗೊಳಿಸುವುದಕ್ಕಾಗಿ 10000ರೂ.
• ಹೊಸ ಎಸ್.ಸಿಇಆರ್.ಟಿ ಸ್ಥಾಪನೆಗೆ ಅವಕಾಶವನ್ನು ಸೇರಿಸಲಾಗಿದೆ ಮತ್ತು 2020ರ ಮಾರ್ಚ್ 31 ರವರೆಗೆ ಜಿಲ್ಲೆಗಳಲ್ಲಿ ಹೊಸ ಡಯಟ್ ಗಳನ್ನು ರಚಿಸಲಾಗಿದೆ.
• ವಿವಿಧ ಸಾಧನೆ ಸಮೀಕ್ಷೆಗಳನ್ನು ನಡೆಸಲು, ಪರೀಕ್ಷಾ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಲು ಮತ್ತು ಐಟಂ ಬ್ಯಾಂಕ್ ಗಳನ್ನು ಅಭಿವೃದ್ಧಿಪಡಿಸಲು, ವಿವಿಧ ಬಾಧ್ಯಸ್ಥರ ತರಬೇತಿ ಮತ್ತು ಪರೀಕ್ಷಾ ಆಡಳಿತ, ದತ್ತಾಂಶ ಸಂಗ್ರಹಣೆ ವಿಶ್ಲೇಷಣೆ ಮತ್ತು ವರದಿ ಉತ್ಪಾದನೆ ಇತ್ಯಾದಿಗಳಿಗಾಗಿ ಎಸ್.ಸಿ.ಇ.ಆರ್.ಟಿಯಲ್ಲಿ ಮೌಲ್ಯಮಾಪನ ಕೋಶವನ್ನು ಸ್ಥಾಪಿಸುವುದು.
• ಬಿ.ಆರ್.ಸಿಗಳು ಮತ್ತು ಸಿ.ಆರ್.ಸಿಗಳ ಶೈಕ್ಷಣಿಕ ಬೆಂಬಲವನ್ನು ಪೂರ್ವ ಪ್ರಾಥಮಿಕ ಮತ್ತು ಪದವಿ ಪೂರ್ವ ಮಟ್ಟಕ್ಕೂ ವಿಸ್ತರಿಸಲಾಗಿದೆ.
• ಸರ್ಕಾರಿ ಶಾಲೆಗಳ ಜೊತೆಗೆ ಸರ್ಕಾರಿ ಅನುದಾನಿತ ಶಾಲೆಗಳಿಗೂ ವೃತ್ತಿಪರ ಶಿಕ್ಷಣದ ಅಡಿಯಲ್ಲಿ ಬೆಂಬಲವನ್ನು ವಿಸ್ತರಿಸಲಾಗಿದ್ದು, ದಾಖಲಾತಿ ಮತ್ತು ಬೇಡಿಕೆಯನ್ನು ಅನುದಾನ/ಉದ್ಯೋಗದ ವಿಧಗಳ ಸಂಖ್ಯೆ /ವಿಭಾಗಗಳಿಗೆ ಸಂಪರ್ಕಿಸಲಾಗಿದೆ.
• ನೆರೆಹೊರೆಯ ಇತರ ಶಾಲೆಗಳಿಗೆ ತಾಣವಾಗಿ ಸೇವೆ ಸಲ್ಲಿಸುತ್ತಿರುವ ಶಾಲೆಗಳಲ್ಲಿ ವೃತ್ತಿಪರ ಶಿಕ್ಷಣಕ್ಕಾಗಿ ತರಗತಿ ಮತ್ತು ಕಾರ್ಯಾಗಾರಕ್ಕೆ ಅವಕಾಶ. ಸ್ಪೋಕ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವ ಶಾಲೆಗಳಿಗೆ ಸಾರಿಗೆ ಮತ್ತು ಮೌಲ್ಯಮಾಪನ ವೆಚ್ಚದ ಅವಕಾಶ.
• ಡಿಜಿಟಲ್ ಬೋರ್ಡ್ ಗಳು, ಸ್ಮಾರ್ಟ್ ಕ್ಲಾಸ್ ರೂಮ್ ಗಳು, ವರ್ಚುವಲ್ ಕ್ಲಾಸ್ ರೂಮ್ ಗಳು ಮತ್ತು ಡಿಟಿಎಚ್ ಚಾನೆಲ್ ಗಳಿಗೆ ಬೆಂಬಲ ಸೇರಿದಂತೆ ಐಸಿಟಿ ಲ್ಯಾಬ್ ಗಳು, ಸ್ಮಾರ್ಟ್ ಕ್ಲಾಸ್ ರೂಮ್ ಗಳ ಅವಕಾಶ.
• ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಮಕ್ಕಳ ಪತ್ತೆ ಅವಕಾಶವನ್ನು ಸೇರಿಸಲಾಗಿದೆ
• ವರ್ಷಕ್ಕೆ ಶೇ.20 ಶಾಲೆಗಳನ್ನು ಒಳಗೊಂಡ ಸಾಮಾಜಿಕ ಲೆಕ್ಕಪರಿಶೋಧನೆಗೆ ಬೆಂಬಲ, ಇದರಿಂದ ಎಲ್ಲಾ ಶಾಲೆಗಳು ಐದು ವರ್ಷಗಳ ಅವಧಿಯಲ್ಲಿ ಈ ವ್ಯಾಪ್ತಿಯಲ್ಲಿರುತ್ತವೆ.
ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿಗಳು:
ಈ ಯೋಜನೆಯನ್ನು ರಾಜ್ಯ ಮಟ್ಟದಲ್ಲಿ ಏಕ ರಾಜ್ಯ ಅನುಷ್ಠಾನ ಸೊಸೈಟಿ (ಎಸ್ಐಎಸ್) ಮೂಲಕ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಜಾರಿಗೆ ತರಲಾಗಿದೆ. ರಾಷ್ಟ್ರ ಮಟ್ಟದಲ್ಲಿ, ಶಿಕ್ಷಣ ಸಚಿವರ ನೇತೃತ್ವದ ಆಡಳಿತ ಮಂಡಳಿ/ಕಾಯ, ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕಾರ್ಯದರ್ಶಿ ನೇತೃತ್ವದ ಯೋಜನಾ ಅನುಮೋದನೆ ಮಂಡಳಿ (ಪಿಎಬಿ) ಇರುತ್ತದೆ. ಹಣಕಾಸು ಮತ್ತು ಕಾರ್ಯಕ್ರಮಾತ್ಮಕ ನಿಯಮಗಳನ್ನು ಮಾರ್ಪಡಿಸಲು ಮತ್ತು ಯೋಜನೆಯ ಒಟ್ಟಾರೆ ಚೌಕಟ್ಟಿನೊಳಗೆ ಅನುಷ್ಠಾನಕ್ಕಾಗಿ ವಿವರವಾದ ಮಾರ್ಗಸೂಚಿಗಳನ್ನು ಅನುಮೋದಿಸಲು ಆಡಳಿತ ಮಂಡಳಿ/ಕಾಯಕ್ಕೆ ಅಧಿಕಾರ ನೀಡಲಾಗುವುದು. ಅಂತಹ ಮಾರ್ಪಾಡುಗಳು ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ನಾವಿನ್ಯತೆ ಮತ್ತು ಮಧ್ಯಸ್ಥಿಕೆಗಳನ್ನು ಒಳಗೊಂಡಿರುತ್ತವೆ.
ಯೋಜನೆಯ ನೇರ ವ್ಯಾಪ್ತಿಯನ್ನು ಹೆಚ್ಚಿಸುವ ಸಲುವಾಗಿ, ಎಲ್ಲಾ ಮಕ್ಕಳ ಕೇಂದ್ರಿತ ಮಧ್ಯಸ್ಥಿಕೆಗಳನ್ನು ಕಾಲಾನಂತರದಲ್ಲಿ ಐಟಿ ಆಧಾರಿತ ವೇದಿಕೆಯಲ್ಲಿ ಡಿಬಿಟಿ ವಿಧಾನದ ಮೂಲಕ ವಿದ್ಯಾರ್ಥಿಗಳಿಗೆ ನೇರವಾಗಿ ಒದಗಿಸಲಾಗುವುದು.
ಈ ಯೋಜನೆಯು 1.16 ದಶಲಕ್ಷ ಶಾಲೆಗಳು, 156 ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 5.7 ದಶಲಕ್ಷ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು (ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ಹಂತದವರೆಗೆ) ಶಾಲಾ ಪರಿಸರ ವ್ಯವಸ್ಥೆಯ ಎಲ್ಲಾ ಬಾಧ್ಯಸ್ಥರನ್ನು ಅಂದರೆ ಶಿಕ್ಷಕರು, ಶಿಕ್ಷಕರ ತರಬೇತಿದಾರರು, ವಿದ್ಯಾರ್ಥಿಗಳು, ಪೋಷಕರು, ಸಮುದಾಯ, ಶಾಲಾ ನಿರ್ವಹಣಾ ಸಮಿತಿಗಳು, ಎಸ್.ಇ.ಇ.ಆರ್.ಟಿ.ಗಳು, ಡಯೆಟ್ ಗಳು, ಬಿಐಟಿಇಗಳು, ವಿಭಾಗ ಸಂಪನ್ಮೂಲ ವ್ಯಕ್ತಿಗಳು, ಗುಚ್ಛ ಸಂಪನ್ಮೂಲ ವ್ಯಕ್ತಿಗಳು, ಗುಣಮಟ್ಟದ, ಸಮಗ್ರ ಮತ್ತು ಸಮಾನ ಶಿಕ್ಷಣವನ್ನು ಒದಗಿಸುವ ಸ್ವಯಂಸೇವಕರನ್ನು ಒಳಗೊಂಡಿರುತ್ತದೆ. ಇದಲ್ಲದೆ, ಈ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸಚಿವಾಲಯಗಳು/ ಅಭಿವೃದ್ಧಿ ಸಂಸ್ಥೆಗಳೊಂದಿಗೆ ಪರಿಣಾಮಕಾರಿ ಸಂಯೋಜನೆ ವಾಸ್ತುಶಿಲ್ಪವನ್ನು ಹೊಂದಿರುತ್ತದೆ. ಎನ್.ಇ.ಪಿ 2020 ರಲ್ಲಿ ರೂಪಿಸಿರುವಂತೆ, ವಿದ್ಯಾರ್ಥಿಗಳಲ್ಲಿ ಕೌಶಲ್ಯಗಳನ್ನು ನೀಡುವತ್ತ ಹೆಚ್ಚಿನ ಗಮನ ಹರಿಸಲಾಗುವುದು. ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಮತ್ತು ಕೌಶಲ್ಯಗಳಿಗೆ ಧನಸಹಾಯ ಒದಗಿಸುವ ಇತರ ಸಚಿವಾಲಯಗಳೊಂದಿಗೆ ಒಗ್ಗೂಡಿ ವೃತ್ತಿಪರ ಶಿಕ್ಷಣದ ವಿಸ್ತರಣೆ ಮಾಡುವುದು. ಶಾಲೆಗಳು ಮತ್ತು ಐಟಿಐಗಳು ಮತ್ತು ಪಾಲಿಟೆಕ್ನಿಕ್ ಗಳ ಪ್ರಸ್ತುತ ಮೂಲಸೌಕರ್ಯವನ್ನು ಶಾಲೆಗೆ ಹೋಗುವ ಮಕ್ಕಳಿಗೆ ಮಾತ್ರವಲ್ಲದೆ ಶಾಲೆಯಿಂದ ಹೊರಗಿರುವ ಮಕ್ಕಳಿಗೂ ಈ ಸೌಲಭ್ಯಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲಾಗುವುದು.
ಪ್ರಮುಖ ಪರಿಣಾಮಗಳು:
ಈ ಯೋಜನೆಯು ಶಾಲಾ ಶಿಕ್ಷಣದ ಪ್ರವೇಶವನ್ನು ಸಾರ್ವತ್ರಿಕಗೊಳಿಸುವ ಗುರಿಯನ್ನು ಹೊಂದಿದೆ; ಅನನುಕೂಲಕರ ಗುಂಪುಗಳು ಮತ್ತು ದುರ್ಬಲ ವರ್ಗಗಳನ್ನು ಸೇರಿಸುವ ಮೂಲಕ ಸಮಾನತೆಯನ್ನು ಉತ್ತೇಜಿಸುವುದು ಮತ್ತು ಶಾಲಾ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುತ್ತದೆ. ಈ ಯೋಜನೆಯ ಪ್ರಮುಖ ಉದ್ದೇಶಗಳೆಂದರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಈ ಕೆಳಗಿನವುಗಳಲ್ಲಿ ಬೆಂಬಲಿಸುವುದಾಗಿದೆ:
i. ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್.ಇಪಿ 2020) ಶಿಫಾರಸುಗಳನ್ನು ಅನುಷ್ಠಾನಗೊಳಿಸಲು;
ii. ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು (ಆರ್.ಟಿ.ಇ) ಕಾಯ್ದೆ, 2009 ರ ಅನುಷ್ಠಾನ;
iii. ಬಾಲ್ಯದ ಆರೈಕೆ ಮತ್ತು ಶಿಕ್ಷಣ;
iv. ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾತ್ಮಕತೆಗೆ ಒತ್ತು;
v. ವಿದ್ಯಾರ್ಥಿಗಳಲ್ಲಿ 21ನೇ ಶತಮಾನದ ಕೌಶಲ್ಯಗಳನ್ನು ತುಂಬಲು ಸಮಗ್ರ, ಏಕೀಕೃತ, ಅಂತರ್ಗತ ಮತ್ತು ಚಟುವಟಿಕೆ ಆಧಾರಿತ ಪಠ್ಯಕ್ರಮ ಮತ್ತು ಬೋಧನಾ ವಿಧಾನಕ್ಕೆ ಒತ್ತು ನೀಡುವುದು;
vi. ಗುಣಮಟ್ಟದ ಶಿಕ್ಷಣ ಒದಗಿಸುವುದು ಮತ್ತು ವಿದ್ಯಾರ್ಥಿಗಳ ಕಲಿಕೆಯ ಫಲಶ್ರುತಿಗಳನ್ನು ಹೆಚ್ಚಿಸುವುದು;
vii. ಶಾಲಾ ಶಿಕ್ಷಣದಲ್ಲಿ ಸಾಮಾಜಿಕ ಮತ್ತು ಲಿಂಗಾನುಪಾತದ ಅಂತರಗಳನ್ನು ಕಡಿಮೆ ಮಾಡುವುದು;
viii. ಶಾಲಾ ಶಿಕ್ಷಣದ ಎಲ್ಲಾ ಹಂತಗಳಲ್ಲಿ ನ್ಯಾಯ ಮತ್ತು ಸಮಗ್ರತೆಯನ್ನು ಖಚಿತಪಡಿಸುವುದು;
ix. ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಗಾಗಿ ರಾಜ್ಯ ಮಂಡಳಿಗಳನ್ನು (ಎಸ್.ಸಿ.ಇ.ಆರ್. ಟಿಗಳು)/ರಾಜ್ಯ ಶಿಕ್ಷಣ ಸಂಸ್ಥೆಗಳು ಮತ್ತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು (ಡಿಇಟಿ) ಶಿಕ್ಷಕರ ತರಬೇತಿಗಾಗಿ ನೋಡಲ್ ಏಜೆನ್ಸಿಯಾಗಿ ಬಲಪಡಿಸುವುದು ಮತ್ತು ಉನ್ನತೀಕರಿಸುವುದು;
x. ಸುರಕ್ಷಿತ, ಸುಭದ್ರ ಮತ್ತು ಅನುಕೂಲಕರ ಕಲಿಕೆಯ ವಾತಾವರಣವನ್ನು ಖಾತ್ರಿಪಡಿಸುವುದು ಮತ್ತು ಶಾಲಾ ಮಾನದಂಡಗಳ ನಿರ್ವಹಣೆಗೆ ಅವಕಾಶ ಕಲ್ಪಿಸುವುದು.
xi. ವೃತ್ತಿ ಶಿಕ್ಷಣವನ್ನು ಉತ್ತೇಜಿಸುವುದು.
ಆತ್ಮನಿರ್ಭರ ಭಾರತ:
ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಮೂಲಭೂತ ಕೌಶಲ್ಯದ ನಿರ್ಣಾಯಕ ಪಾತ್ರವನ್ನು ಗುರುತಿಸಿ, 2026-27 ರ ವೇಳೆಗೆ ದೇಶದ ಪ್ರತಿಯೊಂದು ಮಗುವು 3ನೇ ತರಗತಿಯಿಂದ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾತ್ಮಕತೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾತ್ಮಕ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು 'ಆತ್ಮನಿರ್ಭರ ಭಾರತ್' ಅಭಿಯಾನದ ಅಡಿಯಲ್ಲಿ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಸಮಗ್ರ ಶಿಕ್ಷಣದ ಅಡಿಯಲ್ಲಿ "ಗ್ರಹಿಕೆ ಮತ್ತು ಸಂಖ್ಯಾತ್ಮಕತೆ"ಯೊಂದಿಗೆ ಓದುವಲ್ಲಿ ಪ್ರಾವೀಣ್ಯಕ್ಕಾಗಿ ರಾಷ್ಟ್ರೀಯ ಉಪಕ್ರಮ (ನಿಪುಣ್ ಭಾರತ್)ವನ್ನು 5 ನೇ ಜುಲೈ 2021 ರಂದು ಪ್ರಾರಂಭಿಸಲಾಗಿದೆ.
ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಯ ವಿವರಗಳು ಮತ್ತು ಪ್ರಗತಿ:
ದೇಶಾದ್ಯಂತ ಶಾಲಾ ಶಿಕ್ಷಣದ ಪ್ರವೇಶವನ್ನು ಸಾರ್ವತ್ರಿಕಗೊಳಿಸಲು ಮತ್ತು ಗುಣಮಟ್ಟವನ್ನು ಸುಧಾರಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬೆಂಬಲ ನೀಡಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಜಾರಿಗೆ ತರಲಾಗುತ್ತಿದೆ. ಸಮಗ್ರ ಶಿಕ್ಷಣದ ಸಾಧನೆಗಳು ಈ ಕೆಳಗಿನಂತಿವೆ:
• 2018-2019 ರಿಂದ 2020-2021 ರ ಅವಧಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಹಂತದ 1160 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ, 54 ಹೊಸ ವಸತಿ ಶಾಲೆಗಳು/ ವಸತಿ ನಿಲಯಗಳನ್ನು ತೆರೆಯಲಾಗಿದೆ, 41180 ಶಾಲೆಗಳನ್ನು ಬಲವರ್ಧಿಸಲಾಗಿದೆ (ಹೆಚ್ಚುವರಿ ತರಗತಿ ಕೊಠಡಿಗಳು ಸೇರಿದಂತೆ), 13.51 ಲಕ್ಷ ಶಾಲೆಗಳಿಗೆ ಗ್ರಂಥಾಲಯ ಸೌಲಭ್ಯಗಳನ್ನು ಒದಗಿಸಲಾಗಿದೆ, 13.14 ಲಕ್ಷ ಶಾಲೆಗಳಿಗೆ ಕ್ರೀಡಾ ಸಲಕರಣೆಗಳ ಸೌಲಭ್ಯ ಒದಗಿಸಲಾಗಿದೆ, 12633 ಶಾಲೆಗಳನ್ನು ಐಸಿಟಿ ಮತ್ತು ಡಿಜಿಟಲ್ ಉಪಕ್ರಮಗಳ ಅಡಿಯಲ್ಲಿ ತರಲಾಗಿದೆ, 5579 ಶಾಲೆಗಳು ವೃತ್ತಿಪರ ಶಿಕ್ಷಣದ ವ್ಯಾಪ್ತಿಗೆ ಒಳಪಟ್ಟಿವೆ, 783 ಕೆಜಿಬಿವಿಗಳನ್ನು 8 ನೇ ತರಗತಿಯಿಂದ ಹತ್ತನೇ ತರಗತಿವರೆಗೆ ಮೇಲ್ದರ್ಜೆಗೇರಿಸಲಾಗಿದೆ, 925 ಕೆಜಿಬಿವಿಗಳನ್ನು ಎಂಟನೇ ತರಗತಿಯಿಂದ 12ನೇ ತರಗತಿಗೆ ಮೇಲ್ದರ್ಜೆಗೇರಿಸಲಾಗಿದೆ ಮತ್ತು 11562 ಪ್ರತ್ಯೇಕ ಬಾಲಕಿಯರ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
• ಇದರ ಜೊತೆಗೆ 2018-2019ನೇ ಸಾಲಿನಲ್ಲಿ, ಶಾಲಾ ಮಕ್ಕಳಲ್ಲಿ 4.78 ಲಕ್ಷ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ವಿಶೇಷ ತರಬೇತಿ, 4.24 ಲಕ್ಷ ಮಕ್ಕಳಿಗೆ ಸಾರಿಗೆ ಮತ್ತು ಬೆಂಗಾವಲು ಸೌಲಭ್ಯ, 16.76 ಲಕ್ಷ ಮಕ್ಕಳಿಗೆ ಆರ್.ಟಿ.ಇ ಕಾಯ್ದೆಯ ಸೆಕ್ಷನ್ 12(ಎಲ್)(ಸಿ) ಅಡಿಯಲ್ಲಿ ತರಲಾಗಿದ್ದು, 6.96 ಕೋಟಿ ಮಕ್ಕಳಿಗೆ ಉಚಿತ ಸಮವಸ್ತ್ರ, 8.72 ಕೋಟಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಉಚಿತ ಪಠ್ಯಪುಸ್ತಕಗಳನ್ನು ಒದಗಿಸಲಾಗಿದೆ, 0.74 ಕೋಟಿ ಮಕ್ಕಳಿಗೆ ರೆಮಿಡಿಯಲ್ ಬೋಧನೆ, 14.58 ಲಕ್ಷ ಶಿಕ್ಷಕರಿಗೆ ತರಬೇತಿ, 69173 ಶಾಲೆಗಳಲ್ಲಿ ಬಾಲಕಿಯರಿಗೆ ಸ್ವಯಂ ರಕ್ಷಣಾ ತರಬೇತಿ, 3.79 ಲಕ್ಷ ಸಿಡಬ್ಲ್ಯೂಎಸ್ಎನ್ ಬಾಲಕಿಯರಿಗೆ ಸ್ಟೈಫೆಂಡ್ ನೀಡಲಾಗಿದೆ ಮತ್ತು 23183 ವಿಶೇಷ ಶಿಕ್ಷಕರುಗಳಿಗೆ ಆರ್ಥಿಕ ನೆರವು ನೀಡಲಾಗಿದೆ.
• 2019-2020ನೇ ಸಾಲಿನಲ್ಲಿ 5.07 ಲಕ್ಷ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಶಾಲಾ ಮಕ್ಕಳಿಗೆ ವಿಶೇಷ ತರಬೇತಿ ಒದಗಿಸಲಾಗಿದೆ, 6.78 ಲಕ್ಷ ಮಕ್ಕಳಿಗೆ ಸಾರಿಗೆ ಮತ್ತು ಬೆಂಗಾವಲು ಸೌಲಭ್ಯ, 21.58 ಲಕ್ಷ ಮಕ್ಕಳಿಗೆ ಆರ್.ಟಿಇ ಕಾಯ್ದೆಯ ಸೆಕ್ಷನ್ 12(ಎಲ್)(ಸಿ) ವ್ಯಾಪ್ತಿಗೆ ತರಲಾಗಿದೆ, 6.89 ಕೋಟಿ ಮಕ್ಕಳಿಗೆ ಉಚಿತ ಸಮವಸ್ತ್ರ, 8.78 ಕೋಟಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಉಚಿತ ಪಠ್ಯಪುಸ್ತಕಗಳನ್ನು ಒದಗಿಸಲಾಗಿದೆ. 1.76 ಕೋಟಿ ಮಕ್ಕಳಿಗೆ ರೆಮಿಡಿಯಲ್ ಬೋಧನೆ, 28.84 ಲಕ್ಷ ಶಿಕ್ಷಕರಿಗೆ ತರಬೇತಿ, 166528 ಶಾಲೆಗಳಲ್ಲಿ ಬಾಲಕಿಯರಿಗೆ ಸ್ವಯಂ ರಕ್ಷಣಾ ತರಬೇತಿ, 3.22 ಲಕ್ಷ ಸಿಡಬ್ಲ್ಯೂಎಸ್ಎನ್ ಬಾಲಕಿಯರಿಗೆ ಸ್ಟೈಪೆಂಡ್ ನೀಡಲಾಗಿದೆ ಮತ್ತು 24030 ವಿಶೇಷ ಶಿಕ್ಷಕರುಗಳಿಗೆ ಆರ್ಥಿಕ ನೆರವು ನೀಡಲಾಗಿದೆ.
•ಅಂತೆಯೇ 2020-2021ರ ಅವಧಿಯಲ್ಲೂ 3.23 ಲಕ್ಷ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ವಿಶೇಷ ತರಬೇತಿ, 2.41 ಲಕ್ಷ ಮಕ್ಕಳಿಗೆ ಸಾರಿಗೆ ಮತ್ತು ಬೆಂಗಾವಲು ಸೌಲಭ್ಯ, 32.67 ಲಕ್ಷ ಮಕ್ಕಳನ್ನು ಆರ್.ಟಿಇ ಕಾಯ್ದೆಯ ಸೆಕ್ಷನ್ 12(ಎಲ್)(ಸಿ) ವ್ಯಾಪ್ತಿಗೆ ತರಲಾಗಿದೆ, 6.57 ಕೋಟಿ ಮಕ್ಕಳಿಗೆ ಉಚಿತ ಸಮವಸ್ತ್ರ, 8.84 ಕೋಟಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಉಚಿತ ಪಠ್ಯಪುಸ್ತಕಗಳನ್ನು ಒದಗಿಸಲಾಗಿದೆ, 1.44 ಕೋಟಿ ಮಕ್ಕಳಿಗೆ ರೆಮಿಡಿಯಲ್ ಬೋಧನೆ, 14.32 ಲಕ್ಷ ಶಿಕ್ಷಕರಿಗೆ ತರಬೇತಿ, 81288 ಶಾಲೆಗಳಲ್ಲಿ ಬಾಲಕಿಯರಿಗೆ ಸ್ವಯಂ ರಕ್ಷಣಾ ತರಬೇತಿ, 3.52 ಲಕ್ಷ ಸಿಡಬ್ಲ್ಯೂಎಸ್ಎನ್ ಬಾಲಕಿಯರಿಗೆ ಸ್ಟೈಪೆಂಡ್ ನೀಡಲಾಗಿದೆ ಮತ್ತು 22990 ವಿಶೇಷ ಶಿಕ್ಷಕರುಗಳಿಗೆ ಆರ್ಥಿಕ ನೆರವು ನೀಡಲಾಗಿದೆ.
ಹಿನ್ನೆಲೆ:
ಕೇಂದ್ರ ಬಜೆಟ್, 2018-19ರಲ್ಲಿ ಶಾಲಾ ಶಿಕ್ಷಣವನ್ನು ಪೂರ್ವ ಪ್ರಾಥಮಿಕದಿಂದ ಹನ್ನೆರಡನೇ ತರಗತಿಯವರೆಗೆ ವಿಭಾಗೀಕರಣವಿಲ್ಲದೆ ಸಮಗ್ರವಾಗಿ ಮತ್ತು ವಿಭಾಗರಹಿತವಾಗಿ ಪರಿಗಣಿಸಲಾಗುವುದು ಎಂದು ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಇಲಾಖೆಯು 2018 ರಲ್ಲಿ ಇದಕ್ಕಾಗಿ, ಹಿಂದಿನ ಕೇಂದ್ರ ಪ್ರಾಯೋಜಿತ ಸರ್ವ ಶಿಕ್ಷಣ ಅಭಿಯಾನ (ಎಸ್ಎಸ್ಎ), ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್.ಎಂ.ಎಸ್.ಎ) ಮತ್ತು ಬೋಧಕ ಶಿಕ್ಷಣ (ಟಿಇ) ಯೋಜನೆಗಳನ್ನು ಒಗ್ಗೂಡಿಸುವ ಮೂಲಕ ಶಾಲಾ ಶಿಕ್ಷಣಕ್ಕಾಗಿ, ಸಮಗ್ರ ಶಿಕ್ಷಣ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯು ಶಾಲಾ ಶಿಕ್ಷಣವನ್ನು ನಿರಂತರವೆಂದು ಪರಿಗಣಿಸುತ್ತದೆ ಮತ್ತು ಶಿಕ್ಷಣಕ್ಕಾಗಿ ಸುಸ್ಥಿರ ಅಭಿವೃದ್ಧಿ ಗುರಿಗೆ (ಎಸ್.ಡಿಜಿ-4) ಅನುಗುಣವಾಗಿದೆ. ಈ ಯೋಜನೆಯು ಆರ್.ಟಿ.ಇ ಕಾಯ್ದೆಯ ಅನುಷ್ಠಾನಕ್ಕೆ ಬೆಂಬಲವನ್ನು ಒದಗಿಸುವುದಷ್ಟೇ ಅಲ್ಲದೆ, ಮಕ್ಕಳ ವೈವಿಧ್ಯಮಯ ಹಿನ್ನೆಲೆ, ಬಹುಭಾಷಾ ಅಗತ್ಯಗಳು, ವಿಭಿನ್ನ ಶೈಕ್ಷಣಿಕ ಸಾಮರ್ಥ್ಯಗಳನ್ನು ಕಾಳಜಿ ವಹಿಸಿ, ಅವರು ಕಲಿಕಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವ ಸಮಾನ ಮತ್ತು ಅಂತರ್ಗತ ತರಗತಿ ವಾತಾವರಣದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ಪಡೆಯುವುದನ್ನು ಖಾತ್ರಿಪಡಿಸಿಕೊಳ್ಳಲು ಎನ್.ಇಪಿ 2020ರ ಶಿಫಾರಸುಗಳಿಗೆ ಪೂರಕವಾಗಿದೆ.
***
(Release ID: 1742482)
Visitor Counter : 2947
Read this release in:
Hindi
,
Odia
,
English
,
Urdu
,
Marathi
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu
,
Malayalam