ಪ್ರಧಾನ ಮಂತ್ರಿಯವರ ಕಛೇರಿ

ಆಮ್ಲಜನಕ, ಔಷಧಗಳ ಲಭ್ಯತೆ ಮತ್ತು ಪೂರೈಕೆ ಸ್ಥಿತಿಗತಿ ಪರಾಮರ್ಶೆ ನಡೆಸಿದ ಪ್ರಧಾನ ಮಂತ್ರಿ


ಔಷಧಗಳ ಉತ್ಪಾದನೆ ಹೆಚ್ಚಳಕ್ಕೆ ತಯಾರಿಕಾ ಕಂಪನಿಗಳ ಜತೆ ನಿಯಮಿತ ಸಂಪರ್ಕ ಸಾಧಿಸಿದ ಕೇಂದ್ರ ಸರ್ಕಾರ; ಅಗತ್ಯ ನೆರವಿನ ಭರವಸೆ

ಕಳೆದ ಕೆಲವು ವಾರಗಳಿಂದ ರೆಮ್|ಡಿಸಿವಿರ್ ಸೇರಿದಂತೆ ಎಲ್ಲಾ ಔಷಧಗಳ ಉತ್ಪಾದನೆ ಗಣನೀಯ ಹೆಚ್ಚಳ

ಕೊರೊನಾ ಮೊದಲ ಅಲೆಯಲ್ಲಿ ಸೋಂಕು ಹೆಚ್ಚಳವಾದಾಗ ಪೂರೈಸುತ್ತಿದ್ದ ಆಮ್ಲಜನಕ ಪ್ರಮಾಣಕ್ಕಿಂತ ಇದೀಗ 3 ಪಟ್ಟು ಹೆಚ್ಚಳ

Posted On: 12 MAY 2021 9:14PM by PIB Bengaluru

ದೇಶದಲ್ಲಿರುವ ಆಮ್ಲಜನಕ ಮತ್ತು ಔಷಧಗಳ ಲಭ್ಯತೆ ಮತ್ತು ಪೂರೈಕೆ ಪರಿಸ್ಥಿತಿ ಕುರಿತು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯಲ್ಲಿಂದು ಉನ್ನತ ಮಟ್ಟದ ಸಭೆಯಲ್ಲಿ ಪರಾಮರ್ಶೆ ನಡೆಸಿದರು.

ಕೋವಿಡ್-19 ಮತ್ತು ಮ್ಯೂಕರ್|ಮೈಕೋಸಿಸ್ (ಶಿಲೀಂಧ್ರಗಳ ಸೋಂಕು) ಸೋಂಕುಗಳ ನಿಯಂತ್ರಣಕ್ಕೆ ಬಳಸಲಾಗುತ್ತಿರುವ ಔಷಧಗಳ ಪೂರೈಕೆ ಮೇಲೆ ಸರ್ಕಾರ ನಿರಂತರ ನಿಗಾ ಇಟ್ಟಿದ್ದು, ಸಮರ್ಪಕ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಸಭೆಯಲ್ಲಿ ಸಚಿವರು, ಪ್ರಧಾನ ಮಂತ್ರಿ ಅವರ ಗಮನಕ್ಕೆ ತಂದರು.

ಔಷಧಗಳ ಉತ್ಪಾದನೆ ಹೆಚ್ಚಿಸಲು ಔಷಧ ತಯಾರಿಕಾ ಕಂಪನಿಗಳ ಜತೆ ನಿರಂತರ ಸಂಪರ್ಕ ಸಾಧಿಸಲಾಗಿದೆ. ಅವರಿಗೆ ಅಗತ್ಯವಿರುವ ಎಲ್ಲಾ ನೆರವು ಮತ್ತು ಸಹಾಯ ನೀಡುವುದಾಗಿ ಭರವಸೆ ನೀಡಲಾಗಿದೆ ಎಂದು ಸಚಿವರು ಪ್ರಧಾನಿ ಅವರಿಗೆ ಮಾಹಿತಿ ನೀಡಿದರು. ಕೋವಿಡ್-19 ಮತ್ತು ಮ್ಯೂಕರ್|ಮೈಕೋಸಿಸ್ ಲಸಿಕೆ ತಯಾರಿಕೆಗೆ ಅಗತ್ಯವಾದ ಸಕ್ರಿಯ ಔಷಧ ಮಿಶ್ರಣ(ಎಪಿಐ)ಗಳ ಪ್ರಸ್ತುತ ಉತ್ಪಾದನೆ ಮತ್ತು ದಾಸ್ತಾನು ಕುರಿತು ಪ್ರಧಾನಿ ಅವರು ಮಾಹಿತಿ ಪಡೆದರು. ರಾಜ್ಯಗಳಿಗೆ ಅಧಿಕ ಪ್ರಮಾಣದಲ್ಲಿ ಔಷಧಗಳನ್ನು ಪೂರೈಸಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು. ಕಳೆದ ಕೆಲವು ವಾರಗಳಿಂದ ರೆಮ್|ಡಿಸಿವಿರ್ ಸೇರಿದಂತೆ ಎಲ್ಲ ಔಷಧಗಳ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ ಎಂಬ ವಿಷಯವನ್ನು ಪ್ರಧಾನಿ ಅವರ ಗಮನಕ್ಕೆ ತರಲಾಯಿತು.

ಭಾರತವು ಅತ್ಯಂತ ಕಂಪನಾಶೀಲ ಮತ್ತು ಸ್ಪಂದನಾಶೀಲ ಔಷಧ ವಲಯವನ್ನು ಹೊಂದಿದೆ. ಕೇಂದ್ರ ಸರ್ಕಾರ ಔಷಧ ತಯಾರಿಕಾ ಕಂಪನಿಗಳ ಜತೆ ಹೊಂದಿರುವ ನಿಕಟ ಸಂಪರ್ಕ ಮತ್ತು ಸಮನ್ವಯವು ಎಲ್ಲಾ ಔಷಧಗಳ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಲಿದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಭೆಯಲ್ಲಿ ತಿಳಿಸಿದರು.

ಅಲ್ಲದೆ, ಪ್ರಧಾನ ಮಂತ್ರಿ ಅವರು ದೇಶದಲ್ಲಿರುವ ಆಮ್ಲಜನಕ ಲಭ್ಯತೆ ಮತ್ತು ಪೂರೈಕೆ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು. ಕೋವಿಡ್ ಮೊದಲ ಅಲೆ ಕಾಣಿಸಿಕೊಂಡಾಗ ಸೋಂಕಿನ ಪ್ರಮಾಣ ಹೆಚ್ಚಾದ ಸಂದರ್ಭದಲ್ಲಿ ಸರ್ಕಾರ ಪೂರೈಸಿದ ಆಮ್ಲಜನಕ ಪ್ರಮಾಣಕ್ಕಿಂತ ಇದೀಗ 3 ಪಟ್ಟು ಹೆಚ್ಚಿನ ಆಮ್ಲಜನಕವನ್ನು ಪೂರೈಸಲಾಗಿದೆ ಎಂದು ಸಭೆಯಲ್ಲಿ ಸಮಾಲೋಚಿಸಲಾಯಿತು. ಆಕ್ಸಿಜನ್ ಎಕ್ಸ್|ಪ್ರೆಸ್ ರೈಲುಗಳ ಕಾರ್ಯಾಚರಣೆ, ಭಾರತೀಯ ವಾಯುಪಡೆ ವಿಮಾನಗಳ ಕಾರ್ಯಾಚರಣೆ ಕುರಿತು ಪ್ರಧಾನ ಮಂತ್ರಿ ಅವರಿಗೆ ವಿವರ ನೀಡಲಾಯಿತು. ಆಮ್ಲಜನಕ ಕಾನ್ಸಂಟ್ರೇಟರ್|ಗಳು ಮತ್ತು ಆಕ್ಸಿಜನ್ ಸಿಲಿಂಡರ್|ಗಳ ಖರೀದಿ ಸ್ಥಿತಿಗತಿ ಮತ್ತು ಪ್ರೆಷರ್ ಸ್ವಿಂಗ್ ಅಡ್ಸಾರ್ಪ್|ಷನ್ ಘಟಕಗಳ ಸ್ಥಾಪನೆಗೆ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳ ಕುರಿತು ಪ್ರಧಾನಿ ಅವರಿಗೆ ವಿವರ ನೀಡಲಾಯಿತು.

ವೆಂಟಿಲೇಟರ್‌ಗಳನ್ನು ಕಾಲಮಿತಿಯಲ್ಲಿ ಕಾರ್ಯಾಚರಣೆಗೊಳಿಸಲು ರಾಜ್ಯಗಳಿಗೆ ಸೂಚನೆ ನೀಡಬೇಕು. ಉತ್ಪಾದಕರ ಸಹಾಯದಿಂದ ತಾಂತ್ರಿಕ ಮತ್ತು ತರಬೇತಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ರಾಜ್ಯಗಳಿಗೆ ಸಲಹೆ ನೀಡಬೇಕು ಎಂದು ಪ್ರಧಾನ ಮಂತ್ರಿ ಅವರು ಸಭೆಯಲ್ಲಿ ಸೂಚನೆ ನೀಡಿದರು.

***


(Release ID: 1718173) Visitor Counter : 268