ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವಜಲ ದಿನದ ಹಿನ್ನೆಲೆ “ ಜಲಶಕ್ತಿ ಅಭಿಯಾನ: ನೀರನ್ನು ಹಿಡಿಯಿರಿ” ಪ್ರಚಾರಾಂದೋಲನಕ್ಕೆ ಪ್ರಧಾನಮಂತ್ರಿ ಚಾಲನೆ


ಬೆಟ್ವಾ ಸಂಪರ್ಕಿತ ಯೋಜನೆಗೆ ಐತಿಹಾಸಿಕ ಎಂಎಒ ಅಂಕಿತ

ನೀರಿನ ಸಂಪರ್ಕ ಮತ್ತು ನೀರಿನ ಭದ್ರತೆ ಭಾರತದ ಅಭಿವೃದ್ಧಿ ಮತ್ತು ಸ್ವಾವಲಂಬನೆಯನ್ನು ಅವಲಂಬಿಸಿದೆ: ಪ್ರಧಾನಮಂತ್ರಿ

ನೀರಿನ ಪರೀಕ್ಷೆಯನ್ನು ಅತ್ಯಂತ ಗಂಭೀರತೆಯಿಂದ ತೆಗೆದುಕೊಳ್ಳಲಾಗಿದೆ : ಪ್ರಧಾನಮಂತ್ರಿ

Posted On: 22 MAR 2021 2:25PM by PIB Bengaluru

ವಿಶ್ವ ಜಲ ದಿನದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ “ ಜಲಶಕ್ತಿ ಅಭಿಯಾನ : ನೀರನ್ನು ಹಿಡಿಯಿರಿ” ಪ್ರಚಾರಾಂದೋಲನಕ್ಕೆ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದರು.

ಪ್ರಧಾನಮಂತ್ರಿ ಅವರ ಸಮ್ಮುಖದಲ್ಲಿ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಜಲ ಶಕ್ತಿ ಸಚಿವರ ನಡುವೆ ದೇಶದಲ್ಲಿಯೇ ಮೊದಲ ಬಾರಿಗೆ ಅಂತರ್ ನದಿಗಳನ್ನು ಒಗ್ಗೂಡಿಸುವ ಕೇನ್ ಬೆಟ್ವಾ ಸಂಪರ್ಕ ಯೋಜನೆಗೆ ಸಹಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಕರ್ನಾಟಕ, ರಾಜಸ್ತಾನ, ಉತ್ತರಾಖಂಡ, ಮಹಾರಾಷ್ಟ್ರ ಮತ್ತು ಗುಜರಾತ್ ನ ಸರಪಂಚ ಮತ್ತು ವಾರ್ಡ್ ಪಂಚ್ ಗಳ ಜತೆ ಸಂವಾದ ನಡೆಸಿದರು.

ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಅಂತಾರಾಷ್ಟ್ರೀಯ ಜಲ ದಿನದ ಹಿನ್ನೆಲೆಯಲ್ಲಿ ನೀರನ್ನು ಹಿಡಿಯಿರಿ ಪ್ರಚಾರಾಂದೋಲನ ಸಂದರ್ಭದಲ್ಲಿ ಕೇನ್ ಬೆಟ್ವಾ ಕಾಲುವೆಗಳನ್ನು ಸಂಪರ್ಕಿಸುವ ಕಾರ್ಯಕ್ರಮ ಸಹ ಪ್ರಮುಖ ಹೆಜ್ಜೆಯಾಗಿದೆ. ಈ ಒಡಂಬಡಿಕೆ ಅತ್ಯಂತ ಮಹತ್ವದ್ದಾಗಿದ್ದು, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದ ಲಕ್ಷಾಂತರ ಕುಟುಂಬಗಳ ಹಿತಾಸಕ್ತಿಯನ್ನು ಅರ್ಥಮಾಡಿಕೊಳ್ಳಲು ಈ ಒಪ್ಪಂದ ಅತ್ಯಂತ ಮಹತ್ವದ್ದಾಗಿದೆ. ಪರಿಣಾಮಕಾರಿ ಜಲ ನಿರ್ವಹಣೆ  ಮತ್ತು ಜಲ ಭದ್ರತೆ ಇಲ್ಲದಿದ್ದರೆ ತ್ವರಿತ ಅಭಿವೃದ್ಧಿ ಸಾಧ್ಯವಿಲ್ಲ. ಭಾರತದ ಅಭಿವೃದ್ಧಿ ಮತ್ತು ಭಾರತದ ಸ್ವಾವಲಂಬನೆಯ ದೃಷ್ಟಿಕೋನ ಜಲ ಮೂಲಗಳು ಮತ್ತು ಜಲ ಅಭಿವೃದ್ಧಿಯನ್ನು ಒಳಗೊಂಡಿದೆ ಎಂದು ಪ್ರಧಾನಮಂತ್ರಿ ಅವರು ಪ್ರತಿಪಾದಿಸಿದರು.

ಭಾರತದ ಅಭಿವೃದ್ಧಿಗೆ ಸರಿ ಸಮನಾಗಿ ನೀರಿನ ಬಿಕ್ಕಟ್ಟು ಸಹ ವೃದ್ಧಿಸುತ್ತಿದೆ. ಮುಂದಿನ ಪೀಳಿಗೆಗೆ ತನ್ನ ಜವಾಬ್ದಾರಿಯನ್ನು ಪೂರೈಸುವುದು ಇಂದಿನ ಪೀಳಿಗೆಯ ಕರ್ತವ್ಯವೂ ಆಗಿದೆ. ತನ್ನ ನೀತಿ ಮತ್ತು ತೀರ್ಮಾನಗಳಲ್ಲಿ ಜಲ ಆಡಳಿತ ಸರ್ಕಾರದ ಆದ್ಯತೆಯೂ ಆಗಿದೆ ಎಂದರು. ಪ್ರಧಾನಮಂತ್ರಿ ಅವರು ಕೃಷಿ ಸಿಂಚಾಯಿ ಯೋಜನೆ ಕುರಿತು ಪ್ರಸ್ತಾಪಿಸಿದರು.
“ ಪ್ರತಿಯೊಂದು ಭೂಮಿಗೂ ನೀರು. ಒಂದು ಹನಿ ಹೆಚ್ಚು ಬೆಳೆ” ಅಭಿಯಾನ, ನಮಾಮಿ ಗಂಗೆ ಅಭಿಯಾನ, ಜಲ ಜೀವನ್ ಅಭಿಯಾನ, ಅಟಲ್ ಭೂಜಲ್ ಯೋಜನೆ ಕುರಿತು ಬೆಳಕು ಚೆಲ್ಲಿದರು. ಈ ಯೋಜನೆಗಳ ಕೆಲಸ ಅತ್ಯಂತ ತ್ವರಿತವಾಗಿ
ಜಾರಿಗೊಳ್ಳುತ್ತಿವೆ ಎಂದು ಹೇಳಿದರು.

ಭಾರತ ಮಳೆ ನೀರನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದು, ಇದರಿಂದ ಅಂತರ್ಜಲ ಅವಲಂಬನೆ ಕಡಿಮೆಯಾಗಿದೆ. ಹೀಗಾಗಿ “ಮಳೆ ನೀರನ್ನು ಹಿಡಿಯಿರಿ” ಅಭಿಯಾನ ಅತ್ಯಂತ ಪ್ರಮುಖವಾಗಿದೆ.  ಜಲಶಕ್ತಿ ಅಭಿಯಾನದಲ್ಲಿ ನಗರ ಮತ್ತು ಗ್ರಾಮೀಣ ಭಾಗಗಳನ್ನು ಒಳಗೊಳ್ಳುವಂತೆ ಮಾಡಲಾಗಿದೆ.  ಮುಂಗಾರು ದಿನಗಳವರೆಗೆ ನೀರಿನ ಸಂರಕ್ಷಣೆಯ ಪ್ರಯತ್ನಗಳನ್ನು ಹೆಚ್ಚಿಸಲು ಆದ್ಯತೆ ನೀಡುವಂತೆ ಪ್ರಧಾನಮಂತ್ರಿ ಅವರು  ಕರೆ ನೀಡಿದರು.

ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತದ ಮುಖ್ಯಸ್ಥರು ಮತ್ತು ಸರಪಂಚರ ಪಾತ್ರ ಈ ನಿಟ್ಟಿನಲ್ಲಿ ಮುಖ್ಯವಾಗಿದ್ದು, ಈ ಅಭಿಯಾನ ತೀವ್ರಗೊಂಡಿದೆ. ಪ್ರತಿಯೊಬ್ಬರೂ ಜಲಶಪಥ ಮಾಡಬೇಕಿದ್ದು, ಇದು ಜನರ ಸ್ವಭಾವವಾಗಿರಬೇಕು. ನೀರಿಗೆ ಸಂಬಂಧಿಸಿದ ನಮ್ಮ ಧೋರಣೆ ಬದಲಾದಲ್ಲಿ ಪ್ರಕೃತಿಯೂ ಸಹ ನಮಗೆ ಬೆಂಬಲ ನೀಡುತ್ತದೆ ಎಂದು ಹೇಳಿದರು.

ಮಳೆ ನೀರು ಕೋಯ್ಲು ಮಾಡುವ ಹೊರತಾಗಿಯೂ ನಮ್ಮ ದೇಶದಲ್ಲಿ ನದಿ ನೀರಿನ ನಿರ್ವಹಣೆಯ ಬಗ್ಗೆ ದಶಕಗಳಿಂದಲೂ ಚರ್ಚೆಯಾಗುತ್ತಿದೆ. ದೇಶದಲ್ಲಿ ನೀರಿನ ಸಂಕಷ್ಟ ನಿವಾರಣೆಗೆ ಈ ದಿಕ್ಕಿನಲ್ಲಿ ವೇಗವಾಗಿ ಕೆಲಸ ಮಾಡುವುದು ಈಗಿನ ಅಗತ್ಯವಾಗಿದೆ. ಕೇನ್ – ಬೆಟ್ವಾ ಸಂಪರ್ಕಿತ ಯೋಜನೆ ಕೂಡ ಈ ದೃಷ್ಟಿಕೋನದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳು ಈ ಯೋಜನೆಯನ್ನು ಸಾಕಾರಗೊಳಿಸುತ್ತಿರುವುದು ಶ್ಲಾಘನೀಯ ಎಂದರು.

ದೇಶದ 19 ಕೋಟಿ ಗ್ರಾಮೀಣ ಕುಟುಂಬಗಳ ಪೈಕಿ ಒಂದೂವರೆ ವರ್ಷಗಳ ಹಿಂದೆ 3.5 ಕೋಟಿ ಕುಟುಂಬಗಳು ಕೊಳವೆ ಮಾರ್ಗದ ನೀರು ಪೂರೈಕೆಯಿಂದ ವಂಚಿತವಾಗಿತ್ತು. ಬಳಿಕ ಜಲ್ ಜೀವನ್ ಅಭಿಯಾನ ಆರಂಭವಾದ ತರುವಾಯ ಕಡಿಮೆ ಸಮಯದಲ್ಲಿ 4 ಕೋಟಿ ಕುಟುಂಬಗಳು ಕೊಳವೆ ಮೂಲಕ ನೀರು ಪಡೆಯುವ ಸೌಲಭ್ಯ ಪಡೆದುಕೊಂಡಿವೆ. ಸಾರ್ವಜನಿಕ ಪಾಲ್ಗೊಳ‍್ಳುವಿಕೆ ಮತ್ತು ಸ್ಥಳೀಯ ಆಡಳಿತದ ಮಾದರಿಗಳು ಜಲ್ ಜೀವನ್ ಅಭಿಯಾನದ ತಿರುಳಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯೋತ್ತರದಲ್ಲಿ ಇದೇ ಮೊದಲ ಬಾರಿಗೆ ನೀರಿನ ಪರೀಕ್ಷೆ ವಲಯದಲ್ಲಿ ಸರ್ಕಾರ ಗಂಭೀರವಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಭಾಗದ ಸಹೋದರಿಯರು ಮತ್ತು ಹೆಣ್ಣು ಮಕ್ಕಳು  ನೀರು ಪರೀಕ್ಷೆಯ ಅಭಿಯಾನದ ಪಾಲುದಾರಾಗಬೇಕು. ಕೊರೋನಾ ಸಂಕಷ್ಟ ಸಂದರ್ಭದಲ್ಲಿ 4.5 ಲಕ್ಷ ಮಹಿಳೆಯರಿಗೆ ನೀರು ಪರೀಕ್ಷೆ ವಲಯದಲ್ಲಿ ತರಬೇತಿ ನೀಡಲಾಗಿದೆ. ನೀರು ಪರೀಕ್ಷೆಯಲ್ಲಿ ಪ್ರತಿಯೊಂದು ಹಳ್ಳಿಯಲ್ಲಿ ಐದು ಮಂದಿ ಮಹಿಳೆಯರಿಗೆ ತರಬೇತಿ ನೀಡಲಾಗುವುದು. ಜಲ ಆಡಳಿತದಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯಿಂದ ಫಲಿತಾಂಶ ಉತ್ತಮಗೊಳ್ಳಲಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

 

***(Release ID: 1706646) Visitor Counter : 527