ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪೋರ್ಚುಗೀಸ್ ಗಣರಾಜ್ಯದ ಪ್ರಧಾನಿ ಆಂಟೋನಿಯೊ ಲೂಯಿಸ್ ಸ್ಯಾಂಟೋಸ್ ಡ ಕೋಸ್ಟಾ ನಡುವೆ ದೂರವಾಣಿ ಮಾತುಕತೆ

Posted On: 16 MAR 2021 7:17PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಪೋರ್ಚುಗೀಸ್ ಗಣರಾಜ್ಯದ ಪ್ರಧಾನಿ ಆಂಟೋನಿಯೊ ಲೂಯಿಸ್ ಸ್ಯಾಂಟೊಸ್‌ ಡಾ ಕೋಸ್ಟಾ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.

ಉಭಯ ನಾಯಕರು ಪ್ರಸ್ತುತ ಎರಡೂ ದೇಶಗಳಲ್ಲಿರುವ ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯನ್ನು ಪರಸ್ಪರ ಪರಿಶೀಲಿಸಿದರು. ಸಾಂಕ್ರಾಮಿಕವನ್ನು ಕೊನೆಗೊಳಿಸಲು ಲಸಿಕೆಗಳನ್ನು ತ್ವರಿತ ಹಾಗೂ ನ್ಯಾಯಸಮ್ಮತವಾಗಿ ವಿತರಿಸುವ ಪ್ರಾಮುಖ್ಯದ ಬಗ್ಗೆ ಅವರು ಪ್ರಸ್ತಾಪಿಸಿದರು.

ಭಾರತದ ಲಸಿಕೆ ಅಭಿಯಾನ ಮತ್ತು ಇದುವರೆಗೆ 70ಕ್ಕೂ ಹೆಚ್ಚು ದೇಶಗಳಿಗೆ ಭಾರತ ನೀಡಿರುವ ಬೆಂಬಲದ ಬಗ್ಗೆ ಪ್ರಧಾನಿ ಮೋದಿ ಅವರು ಪಿಎಂ ಕೋಸ್ಟಾ ಅವರಿಗೆ ವಿವರಿಸಿದರು. ಭಾರತ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಇತರ ದೇಶಗಳ ಲಸಿಕೆಯ ಪ್ರಯತ್ನಗಳಿಗೆ ಬೆಂಬಲ ಮುಂದುವರಿಸಲಿದೆ ಎಂಬ ಭರವಸೆಯನ್ನು ಅವರು ನೀಡಿದರು.

ದ್ವಿಪಕ್ಷೀಯ ಸಂಬಂಧಗಳನ್ನು ಪರಾಮರ್ಶಿಸಿದ ಉಭಯ ನಾಯಕರು, ಕಳೆದ ಹಲವು ವರ್ಷಗಳಲ್ಲಿ ಭಾರತ-ಪೋರ್ಚುಗಲ್ ಪಾಲುದಾರಿಕೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

2021ರ ಮೇ ತಿಂಗಳಲ್ಲಿ ಪೋರ್ಟೊದಲ್ಲಿ ನಡೆಯಲಿರುವ ಮೊದಲ ಭಾರತ-ಇಯು ನಾಯಕರ ಸಭೆಯ ಸಿದ್ಧತೆಗಳನ್ನು ಅವರು ಪರಿಶೀಲಿಸಿದರು. ಐರೋಪ್ಯ ಒಕ್ಕೂಟಕ್ಕೆ (ಐಯು) ಪೋರ್ಚುಗೀಸ್ ಅಧ್ಯಕ್ಷತೆ ಸಂದರ್ಭದಲ್ಲಿ ನಡೆಯಲಿರುವ ಸಭೆ ಇದಾಗಿದೆ. ಭಾರತ-ಇಯು ವ್ಯೂಹಾತ್ಮಕ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಪ್ರಧಾನಿ ಕೋಸ್ಟಾ ವಹಿಸಿದ ಪಾತ್ರವನ್ನು ಮೋದಿ ಶ್ಲಾಘಿಸಿದರು. ಪೋರ್ಟೊದಲ್ಲಿ ಕೋಸ್ಟಾ ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿರುವುದಾಗಿ ಹೇಳಿದರು.

***


(Release ID: 1705384) Visitor Counter : 129