ಪ್ರಧಾನ ಮಂತ್ರಿಯವರ ಕಛೇರಿ

ಬೃಹತ್ ಪ್ರಮಾಣದ ಈ ಲಸಿಕಾ ಅಭಿಯಾನ ಮನುಕುಲದ ಇತಿಹಾಸದಲ್ಲಿಯೇ ಅಸಾಧಾರಣವಾದುದು: ಪ್ರಧಾನಿ

ವಿಜ್ಞಾನಿಗಳು ಮತ್ತು ತಜ್ಞರಿಗೆ ಸುರಕ್ಷತೆ ಮತ್ತು ಪರಿಣಾಮದ ಬಗ್ಗೆ ಸಂಪೂರ್ಣ ಮನವರಿಕೆಯಾದ ನಂತರವೇ ಭಾರತದಲ್ಲಿ ತಯಾರಿಸಿದ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ

ಪ್ರಪಂಚದಾದ್ಯಂತ ಶೇಕಡಾ 60 ರಷ್ಟು ಮಕ್ಕಳು ಭಾರತದಲ್ಲಿ ತಯಾರಿಸಿದ ಜೀವ ಉಳಿಸುವ ಲಸಿಕೆಗಳನ್ನು ಪಡೆಯುತ್ತಿದ್ದಾರೆ: ಪ್ರಧಾನಿ

Posted On: 16 JAN 2021 1:46PM by PIB Bengaluru

ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕಾ ಅಭಿಯಾನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಇದು ದೇಶದ ಉದ್ದಗಲಕ್ಕೂ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಲಸಿಕಾ ಕಾರ್ಯಕ್ರಮವಾಗಿದೆ.

ಮೊದಲ ಸುತ್ತಿನಲ್ಲಿಯೇ ವಿಶ್ವದ ಕನಿಷ್ಠ 100 ದೇಶಗಳ ಜನಸಂಖ್ಯೆಗಿಂತ ಹೆಚ್ಚಿನ 3 ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸುವ ಮೂಲಕ ಪ್ರಧಾನ ಮಂತ್ರಿಯವರು ಲಸಿಕೆ ನೀಡಿಕೆಯ ಅಸಾಧಾರಣತೆಯನ್ನು ವಿವರಿಸಿದರು. ವೃದ್ಧರು ಮತ್ತು ಗಂಭೀರ ಸಹ-ಅಸ್ವಸ್ಥತೆ ಹೊಂದಿರುವ ಜನರಿಗೆ ಲಸಿಕೆ ಹಾಕುವ ಎರಡನೇ ಸುತ್ತಿನಲ್ಲಿ ಇದನ್ನು 30 ಕೋಟಿಯವರೆಗೆ ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಭಾರತ, ಅಮೆರಿಕಾ ಮತ್ತು ಚೀನಾ ಮಾತ್ರ 30 ಕೋಟಿಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶಗಳಾಗಿವೆ ಎಂದು ಅವರು ಹೇಳಿದರು. ಈ ಪ್ರಮಾಣದ ಲಸಿಕಾ ಅಭಿಯಾನದ ಪ್ರಯತ್ನವನ್ನು ಇತಿಹಾಸದಲ್ಲಿ ಎಂದಿಗೂ ಮಾಡಿರಲಿಲ್ಲ. ಇದು ಭಾರತದ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು.

ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮದ ಬಗ್ಗೆ ವಿಜ್ಞಾನಿಗಳು ಮತ್ತು ತಜ್ಞರಿಗೆ ಸಂಪೂರ್ಣ ಮನವರಿಕೆಯಾದ ನಂತರವೇ ಭಾರತದಲ್ಲಿ ತಯಾರಿಸಲಾದ ಈ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಆದ್ದರಿಂದ ಜನರು ಲಸಿಕೆಗಳ ಬಗೆಗಿನ ವದಂತಿಗಳು ಮತ್ತು ಅಪಪ್ರಚಾರದಿಂದ ನಂಬದಂತೆ ಪ್ರಧಾನಿ ಮನವಿ ಮಾಡಿದರು. ಈ ನಿಟ್ಟಿನಲ್ಲಿ ಭಾರತೀಯ ಲಸಿಕೆ ವಿಜ್ಞಾನಿಗಳು, ವೈದ್ಯಕೀಯ ವ್ಯವಸ್ಥೆ, ಭಾರತೀಯ ಪ್ರಕ್ರಿಯೆ ಮತ್ತು ಸಾಂಸ್ಥಿಕ ಕಾರ್ಯವಿಧಾನವು ಜಾಗತಿಕವಾಗಿ ವಿಶ್ವಾಸಾರ್ಹವಾಗಿದೆ ಮತ್ತು ಈ ವಿಶ್ವಾಸವನ್ನು ಸ್ಥಿರವಾದ ದಾಖಲೆಯೊಂದಿಗೆ ಗಳಿಸಲಾಗಿದೆ.

ಪ್ರಪಂಚದಾದ್ಯಂತದ ಶೇಕಡಾ 60 ರಷ್ಟು ಮಕ್ಕಳು ಕಠಿಣ ಭಾರತೀಯ ವೈಜ್ಞಾನಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ದಾಟಿದ, ಭಾರತದಲ್ಲಿ ತಯಾರಿಸಿದ ಜೀವ ಉಳಿಸುವ ಲಸಿಕೆಗಳನ್ನು ಪಡೆಯುತ್ತಿದ್ದಾರೆ ಎಂದು ಪ್ರಧಾನಿ ಗಮನಸೆಳೆದರು.
ಮೇಡ್ ಇನ್ ಇಂಡಿಯಾ ಕೊರೊನಾ ಲಸಿಕೆಯಿಂದ ಭಾರತೀಯ ಲಸಿಕೆ ಪರಿಣತಿ ಮತ್ತು ಭಾರತೀಯ ಲಸಿಕೆ ವಿಜ್ಞಾನಿಗಳ ಮೇಲಿನ ಈ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಪ್ರಧಾನಿ ಹೇಳಿದರು. ಭಾರತೀಯ ಲಸಿಕೆಗಳು ವಿದೇಶಿ ಲಸಿಕೆಗಳಿಗಿಂತ ಅಗ್ಗವಾಗಿವೆ ಹಾಗೂ ಅವುಗಳು ನಿರ್ವಹಣೆ ಸಹ ಸುಲಭವಾಗಿದೆ. ಕೆಲವು ವಿದೇಶಿ ಲಸಿಕೆಗಳ ಪ್ರತಿ ಡೋಸ್‌ಗೆ ಐದು ಸಾವಿರ ರೂಪಾಯಿಗಳವರೆಗೆ ಬೆಲೆ ನಿಗದಿಪಡಿಸಲಾಗಿದೆ ಮತ್ತು ಮೈನಸ್ 70 ಡಿಗ್ರಿ ತಾಪಮಾನದಲ್ಲಿ ಸಂಗ್ರಹಿಸಬೇಕಾಗುತ್ತದೆ. ಆದರೆ, ಭಾರತೀಯ ಲಸಿಕೆಗಳು ಭಾರತದಲ್ಲಿ ಹಲವು ವರ್ಷಗಳಿಂದ ಪ್ರಯತ್ನಿಸಲಾಗಿರುವ ಮತ್ತು ಪರೀಕ್ಷಿಸಲಾಗಿರುವ ತಂತ್ರಜ್ಞಾನವನ್ನು ಆಧರಿಸಿವೆ. ಸಾಗಣೆ, ಶೇಖರಣೆಗೆ ಸಂಬಂಧಿಸಿದಂತೆ ಈ ಲಸಿಕೆಗಳು ಭಾರತದ ಪರಿಸ್ಥಿತಿಗಳಿಗೆ ಸೂಕ್ತವಾಗಿವೆ ಮತ್ತು ಕೊರೊನಾ ವಿರುದ್ಧದ ನಮ್ಮ ಹೋರಾಟದಲ್ಲಿ ನಿರ್ಣಾಯಕ ಗೆಲುವು ಸಾಧಿಸಲು ಇವು ಸಹಾಯ ಮಾಡುತ್ತವೆ ಎಂದು ಪ್ರಧಾನಿ ಹೇಳಿದರು.

ಕೊರೊನಾಗೆ ಭಾರತೀಯ ಪ್ರತಿಕ್ರಿಯೆಯು ಆತ್ಮ ವಿಶ್ವಾಸ ಮತ್ತು ಸ್ವಾವಲಂಬನೆಯಾಗಿತ್ತು ಎಂದು ಶ್ರೀ ಮೋದಿ ಬಣ್ಣಿಸಿದರು. ಪ್ರತಿಯೊಬ್ಬ ಭಾರತೀಯನಲ್ಲೂ ವಿಶ್ವಾಸವು ಕುಂದಲಿಲ್ಲ ಎಂದು ಅವರು ಹೇಳಿದರು. ಕೊರೊನಾ ಪರೀಕ್ಷೆಯ  ಒಂದು ಲ್ಯಾಬ್‌ನಿಂದ 2300 ಲ್ಯಾಬ್‌ಗಳ ಬಲವಾದ ನೆಟ್‌ವರ್ಕ್‌ ವರೆಗೆ: ಮುಖಗವಸುಗಳು, ಪಿಪಿಇ ಮತ್ತು ವೆಂಟಿಲೇಟರ್‌ಗಳಲ್ಲಿನ ಅವಲಂಬನೆಯಿಂದ, ಸ್ವಾವಲಂಬನೆ ಹಾಗೂ ರಫ್ತು ಸಾಮರ್ಥ್ಯದವರೆಗಿನ ಪ್ರಯಾಣವನ್ನು ಅವರು ನೆನಪಿಸಿಕೊಂಡರು. ಲಸಿಕಾ ಅಭಿಯಾನದಲಕ್ಲಿಯೂ ಅದೇ ರೀತಿಯ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯನ್ನು ತೋರಿಸಬೇಕೆಂದು ಅವರು ಜನರಿಗೆ ಕರೆ ಕೊಟ್ಟರು.

***(Release ID: 1689074) Visitor Counter : 135