ಪ್ರಧಾನ ಮಂತ್ರಿಯವರ ಕಛೇರಿ

ಐಐಟಿ -2020 ಜಾಗತಿಕ ಶೃಂಗಸಭೆ: ಪ್ರಧಾನಿ ನರೇಂದ್ರ ಮೋದಿ ಭಾಷಣ


ಕೋವಿಡ್-19 ರ ನಂತರದ ಜಗತ್ತು ಮರು-ಕಲಿಕೆ, ಮರು-ಚಿಂತನೆ, ಮರು-ನಾವೀನ್ಯತೆ ಮತ್ತು ಮರು-ಆವಿಷ್ಕಾರ ಆಗಿರುತ್ತದೆ: ಪ್ರಧಾನಿ

Posted On: 04 DEC 2020 10:56PM by PIB Bengaluru

ಪ್ಯಾನ್ಐಐಟಿ ಯುಎಸ್ಎ ಆಯೋಜಿಸಿದ್ದ ಐಐಟಿ -2020 ಜಾಗತಿಕ ಶೃಂಗಸಭೆಯಲ್ಲಿ ಇಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಭಾಷಣ ಮಾಡಿದರು.

"ಸುಧಾರಣೆ, ಸಾಧನೆ, ಪರಿವರ್ತನೆ" ತತ್ವಕ್ಕೆ ತಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಪ್ರಧಾನಿ ಹೇಳಿದರು. ಯಾವುದೇ ಕ್ಷೇತ್ರವನ್ನೂ ಸುಧಾರಣೆಗಳಿಂದ ಹೊರಗಿಡುವುದಿಲ್ಲ ಎಂದು ಅವರು ಒತ್ತಿ ಹೇಳಿದರು. 44 ಕೇಂದ್ರೀಯ ಕಾರ್ಮಿಕ ಕಾನೂನುಗಳನ್ನು ಕೇವಲ 4 ಸಂಹಿತೆಗಳಾಗಿ ಒಂದುಗೂಡಿಸಿರುವುದು, ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಕಾರ್ಪೊರೇಟ್ ತೆರಿಗೆ ದರವನ್ನು ಹೊಂದಿರುವುದು, ರಫ್ತು ಹಾಗೂ ಉತ್ಪಾದನೆ ಹೆಚ್ಚಳಕ್ಕೆ ಹತ್ತು ಪ್ರಮುಖ ಕ್ಷೇತ್ರಗಳಲ್ಲಿ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರದ ಅನೇಕ ಸುಧಾರಣೆಗಳನ್ನು ಪ್ರಧಾನಿ ಪಟ್ಟಿ ಮಾಡಿದರು. ಕೋವಿಡ್-19 ಸಂಕಷ್ಟದ ಸಮಯದಲ್ಲೂ ಭಾರತಕ್ಕೆ ದಾಖಲೆಯ ಹೂಡಿಕೆ ಬಂದಿದೆ ಮತ್ತು ಹೂಡಿಕೆಯ ಬಹುಪಾಲು ತಂತ್ರಜ್ಞಾನ ಕ್ಷೇತ್ರಕ್ಕೆ ಬಂದಿದೆ ಎಂದು ಅವರು ತಿಳಿಸಿದರು.

ಇಂದಿನ ನಮ್ಮ ಕೆಲಸಗಳು ನಮ್ಮ ಗ್ರಹದ ನಾಳೆಯನ್ನು ರೂಪಿಸುತ್ತವೆ ಎಂದು ಪ್ರಧಾನಿ ಹೇಳಿದರು. ಕೋವಿಡ್ -19 ನಂತರದ ಜಗತ್ತು ಮರು-ಕಲಿಕೆ, ಮರು-ಚಿಂತನೆ, ಮರು-ನಾವೀನ್ಯತೆ ಮತ್ತು ಮರು-ಆವಿಷ್ಕಾರವಾಗಿರುತ್ತದೆ. ಇದು ಪ್ರತಿಯೊಂದು ಕ್ಷೇತ್ರದಲ್ಲೂ ಆರ್ಥಿಕ ಸುಧಾರಣೆಗಳೊಂದಿಗೆ ನಮ್ಮ ಗ್ರಹವನ್ನು ಪುನಃ ಚೈತನ್ಯಗೊಳಿಸುತ್ತದೆ. ಇದು 'ಸುಲಭ ಜೀವನ' ವನ್ನು ಖಚಿತಪಡಿಸುತ್ತದೆ ಮತ್ತು ಬಡವರು ಹಾಗೂ ನಿರ್ಗತಿಕರ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. ಉದ್ಯಮ ಮತ್ತು ಶೈಕ್ಷಣಿಕ ಜಗತ್ತಿನ ಸಹಯೋಗದಿಂದ ಸಾಂಕ್ರಾಮಿಕದ ಸಂದರ್ಭದಲ್ಲಿ ಹಲವಾರು ಆವಿಷ್ಕಾರಗಳು ಹೊರಹೊಮ್ಮಿದವು ಎಂದು ಅವರು ಹೇಳಿದರು. ಇಂದು ಜಗತ್ತು ನವ ವಾಸ್ತವಕ್ಕೆ ಹೊಂದಿಕೊಳ್ಳಲು ಅಗತ್ಯವಾದ ಪರಿಹಾರಗಳು ಬೇಕಾಗುತ್ತವೆ ಎಂದು ಅವರು ಹೇಳಿದರು.

ಪ್ಯಾನ್ಐಐಟಿ ಆಂದೋಲನದ ಸಾಮೂಹಿಕ ಶಕ್ತಿಯು ಆತ್ಮನಿರ್ಭರ ಭಾರತ ಅಥವಾ ಸ್ವಾವಲಂಬಿ ಭಾರತದ ಕನಸಿಗೆ ವೇಗವನ್ನು ಒದಗಿಸುತ್ತದೆ ಪ್ರಧಾನಿ ಹೇಳಿದರು. ವಿದೇಶಗಳಲ್ಲಿರುವ ಭಾರತೀಯ ಸಮುದಾಯವೇ ದೇಶದ ರಾಯಭಾರಿಗಳು ಎಂದು ಅವರು ಕರೆದರು, ಭಾರತದ ದೃಷ್ಟಿಕೋನಗಳನ್ನು ಸೂಕ್ತವಾಗಿ ಅರ್ಥೈಸಿಕೊಳ್ಳಲು  ಇವರ ಧ್ವನಿ ನಿರ್ಣಾಯಕವಾಗಿದೆ ಎಂದು ಪ್ರಧಾನಿ ಹೇಳಿದರು.

2022 ರಲ್ಲಿ ಭಾರತವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ಕುರಿತು ಮಾತನಾಡಿದ ಶ್ರೀ ಮೋದಿ, "ಭಾರತಕ್ಕೆ ಹಿಂತಿರುಗಿಸಿ" ಎಂಬ ಬಗ್ಗೆ ಇನ್ನೂ ಹೆಚ್ಚಿನ ಮಾನದಂಡವನ್ನು ನಿಗದಿಪಡಿಸುವಂತೆ ಪ್ಯಾನ್ಐಐಟಿಯನ್ನು ಒತ್ತಾಯಿಸಿದರು. 75 ವರ್ಷಗಳ ಸ್ವಾತಂತ್ರ್ಯವನ್ನು ನಾವು ಹೇಗೆ ಆಚರಿಸಬಹುದು ಎಂಬ ಬಗ್ಗೆ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಅವರು ಮನವಿ ಮಾಡಿದರು. "ನಿಮ್ಮ ಅಭಿಪ್ರಾಯಗಳನ್ನು MyGov ಅಥವಾ ನೇರವಾಗಿ ನರೇಂದ್ರ ಮೋದಿ ಆ್ಯಪ್ನಲ್ಲಿ ಹಂಚಿಕೊಳ್ಳಬಹುದು" ಎಂದು ಅವರು ಹೇಳಿದರು.

ಇತ್ತೀಚಿಗೆ ಭಾರತದಲ್ಲಿ ಹ್ಯಾಕಥಾನ್ಸಂಸ್ಕೃತಿ ಬೆಳೆಯುತ್ತಿದೆ ಮತ್ತು ಹ್ಯಾಕಥಾನ್ಗಳಲ್ಲಿ ಯುವಜನರು ರಾಷ್ಟ್ರೀಯ ಮತ್ತು ಜಾಗತಿಕ ಸಮಸ್ಯೆಗಳಿಗೆ ಉತ್ತಮ ಪರಿಹಾರಗಳನ್ನು ನೀಡುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ನಮ್ಮ ಯುವಕರು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಜಾಗತಿಕವಾದ ಉತ್ತಮ ಅಭ್ಯಾಸಗಳ ಕಲಿಕೆಗೆ ಅಂತರರಾಷ್ಟ್ರೀಯ ವೇದಿಕೆಯನ್ನು ಪಡೆಯಲು ಸರ್ಕಾರವು ಆಗ್ನೇಯ ಏಷ್ಯಾ ಮತ್ತು ಯುರೋಪಿನ ಅನೇಕ ದೇಶಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ವಿಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಉನ್ನತ-ಗುಣಮಟ್ಟದ ಪ್ರತಿಭೆಗಳನ್ನು ಒಟ್ಟುಗೂಡಿಸುವ ವೈಭವ್ ಶೃಂಗಸಭೆಯನ್ನು ಭಾರತ ಆಯೋಜಿಸಿತ್ತು ಎಂದು ಅವರು ಹೇಳಿದರು. ಶೃಂಗಸಭೆಯು ವಿಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಭವಿಷ್ಯದ ಸಹಯೋಗಕ್ಕೆ ನಾಂದಿ ಹಾಡಿದೆ ಎಂದು ಅವರು ಹೇಳಿದರು.

ಭಾರತವು ಕಾರ್ಯನಿರ್ವಹಿಸುವ ರೀತಿಯಿಂದಾಗಿ ದೇಶವು ಅಪಾರ ಬದಲಾವಣೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಹೇಳಿದರು. ಐಐಟಿಗಳಿಂದ ಏರೋ-ಸ್ಪೇಸ್ ಎಂಜಿನಿಯರ್ಗಳು ಹೊರಬಂದಾಗ, ಅವರನ್ನು ನೇಮಿಸಿಕೊಳ್ಳಲು ಬಲವಾದ ದೇಶೀಯ ಕೈಗಾರಿಕಾ ಪರಿಸರ ವ್ಯವಸ್ಥೆ ಇರಲಿಲ್ಲ ಎಂದು ಅವರು ಹೇಳಿದರು. ಇಂದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಸುಧಾರಣೆಗಳಿಂದಾಗಿ ಕ್ಷೇತ್ರವು ಭಾರತೀಯ ಪ್ರತಿಭೆಗಳಿಗೆ ತೆರೆದುಕೊಂಡಿದೆ. ಅದಕ್ಕಾಗಿಯೇ ಭಾರತದಲ್ಲಿ ಪ್ರತಿದಿನ ಹೊಸ ಬಾಹ್ಯಾಕಾಶ ತಂತ್ರಜ್ಞಾನದ ಉದ್ಯಮಗಳು ಬರುತ್ತಿವೆ. ಇಲ್ಲಿರುವ ಪ್ರೇಕ್ಷಕರಲ್ಲಿ ಕೆಲವರಾದರೂ ಇದುವರೆಗೆ ಯಾರೂ ತುಳಿಯದ ಹಾದಿಯಲ್ಲಿ ಸಾಗಲು ಧೈರ್ಯ ತೋರುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಭಾರತದ ಹಲವಾರು ಕ್ಷೇತ್ರಗಳಲ್ಲಿ ಅತ್ಯಾಧುನಿಕ ಮತ್ತು ನಾವೀನ್ಯತೆಯ ಕೆಲಸಗಳು ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದರು.

ಇಂದು, ಐಐಟಿಯ ಬಹುತೇಕ ಹಳೆಯ ವಿದ್ಯಾರ್ಥಿಗಳು ಉದ್ಯಮ, ಶಿಕ್ಷಣ, ಕಲೆ, ಸರ್ಕಾರಗಳಲ್ಲಿ ಜಾಗತಿಕ ನಾಯಕತ್ವದ ಸ್ಥಾನಗಳಲ್ಲಿದ್ದಾರೆ. ಆದ್ದರಿಂದ ಹಳೆಯ ವಿದ್ಯಾರ್ಥಿ ಸಮೂಹವು ಹೊಸ ಜಾಗತಿಕ ತಂತ್ರಜ್ಞಾನ ಕ್ರಮಾಂಕದಲ್ಲಿ ಆಲೋಚಿಸಲು, ಚರ್ಚಿಸಲು ಮತ್ತು ಪರಿಹಾರ ಕಂಡುಹಿಡಿಯಲು ಕೊಡುಗೆ ನೀಡುವಂತೆ ಅವರು ಆಗ್ರಹಿಸಿದರು.

***


(Release ID: 1678522) Visitor Counter : 270