ಪ್ರಧಾನ ಮಂತ್ರಿಯವರ ಕಛೇರಿ

ಭಾರತ - ಲಕ್ಸೆಂಬರ್ಗ್ ವರ್ಚುಯಲ್ ಸಮಾವೇಶದ ಜಂಟಿ ಹೇಳಿಕೆ

Posted On: 19 NOV 2020 8:24PM by PIB Bengaluru
  1. ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು  ಗ್ರ್ಯಾಂಡ್ ಡಚಿ ಲಕ್ಸೆಂಬರ್ಗ್ ಪ್ರಧಾನ ಮಂತ್ರಿ ಶ್ರೀ ಜೇವಿಯರ್ ಬೆಟೆಲ್ ಅವರು 19 ನವೆಂಬರ್ 2020ರಂದು ಉಭಯ ರಾಷ್ಟ್ರಗಳ ನಡುವೆ ಚೊಚ್ಚಲ ವರ್ಚುವಲ್ ಸಮಾವೇಶ ನಡೆಸಿದರು.
  2. ಪ್ರಜಾಸತ್ತೆಯ ಮೌಲ್ಯ, ತತ್ವಗಳು, ಸ್ವಾತಂತ್ರ್ಯ, ಕಾನೂನು ಮತ್ತು ಮಾನವ ಹಕ್ಕುಗಳನ್ನು ಗೌರವಿಸುವ ಹಂಚಿತ ವಿಷಯಗಳನ್ನು ಆಧರಿಸಿ  ಭಾರತ ಮತ್ತು ಲಕ್ಸೆಂಬರ್ಗ್ ಹೊಂದಿರೆವ ಶ್ರೇಷ್ಠ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲು ಇಬ್ಬರು ಪ್ರಧಾನ ಮಂತ್ರಿಗಳು ವಿಶೇಷ ಒತ್ತು ನೀಡಿದರು.
  3. 1948ರಲ್ಲಿ ರಾಜತಾಂತ್ರಿಸ ಸಂಬಂಧ ಸ್ಥಾಪನೆಯಾದ ತರುವಾಯ ಏಳು ದಶಕಗಳಿಗಿಂತ ಹೆಚ್ಚಿನ ಕಾಲದಿಂದ ಉಭಯ ರಾಷ್ಟ್ರಗಳ ನಡುವೆ ಸೌಹಾರ್ದಯುತ ಮತ್ತು ಸ್ನೇಹಮಯಿ ಸಂಬಂಧ ಬೆಳೆದಿರುವುದಕ್ಕೆ ಇಬ್ಬರೂ ನಾಯಕರು, ಸಂತೃಪ್ತಿ ವ್ಯಕ್ತಪಡಿಸಿದರು. ಈ ಅವಧಿಯಲ್ಲಿ ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಗಣನೀಯವಾಗಿ ವಿಸ್ತರಣೆ ಆಗಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರ, ಹಣಕಾಸು, ಉಕ್ಕು, ಬಾಹ್ಯಾಕಾಶ, ಹೈಸಿಟಿ, ಅನುಶೋಧನೆ, ತಯಾರಿಕೆ, ಆಟೊಮೋಟಿವ್, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ ವಲಯಗಳಲ್ಲಿ ಸಹಕಾರ ಹೆಚ್ಚಿಸಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದರು.
  4. ಭಾರತ-ಲಕ್ಸೆಂಬರ್ಗ್ ನಡುವೆ ಉನ್ನತ ಮಟ್ಟದ ತೊಡಗಿಸಿಕೊಳ್ಳುವಿಕೆ ಸಂತೃಪ್ತಿ ತಂದಿದೆ. ಈ ನಿಟ್ಟಿನಲ್ಲಿ ಗ್ರ್ಯಾಂಡ್ ಡ್ಯೂಕ್ ಮುಖ್ಯಸ್ಥರು ಭಾರತಕ್ಕೆ ಭೇಟಿ ನೀಡುವುದನ್ನು ಎದುರು ನೋಡಲಾಗುತ್ತಿದೆ. ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲಕ್ಸೆಂಬರ್ಗ್ ಪ್ರಧಾನ ಮಂತ್ರಿ ಅವರ ಭಾರತ ಭೇಟಿ ಕಾರ್ಯಕ್ರಮ ಮುಂದೂಡಲಾಗಿದೆ. ಉಭಯ ನಾಯಕರಿಗೆ ಸರಿಹೋಂದುವ ದಿನಾಂಕಕ್ಕೆ ಭಾರತ ಭೇಟಿ ಕಾರ್ಯಕ್ರಮ ನಿಗದಿಪಡಿಸಲು ಒಪ್ಪಿಗೆ ಸೂಚಿಸಿದರು.
  5. ಪರಸ್ಪರ  ಹಿತಾಸಕ್ತಿಯ ವಿಷಯಗಳಲ್ಲಿ ಎರಡೂ ರಾಷ್ಟ್ರಗಳ ನಡುವೆ ಒಮ್ಮತಾಭಿಪ್ರಾಯ ಮತ್ತು ದೀರ್ಘ ತಿಳಿವಳಿಕೆ ಹೆಚ್ಚುತ್ತಿರುವುದನ್ನು ಒಪ್ಪಿಕೊಂಡ ನಾಯಕರು, ಈ ವಿಷಯದಲ್ಲಿ ಮತ್ತಷ್ಟು ಸಹಕಾರ ಹೊಂದಲು ಒಪ್ಪಿಗೆ ಸೂಚಿಸಿದರು. ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವಾಲಯ ಮಟ್ಟದಲ್ಲಿ ನಿಯಮಿತ ದ್ವಿಪಕ್ಷೀಯ ಸಮಾಲೋಚನೆ ನಡೆಯುತ್ತಿರುವುದನ್ನು ಸ್ವಾಗತಿಸಿದರು.

ಆರ್ಥಿಕ ಸಂಬಂಧ

  1. ಉಭಯ ದೇಶಗಳ ನಡುವೆ ಆರ್ಥಿಕ ಸಂಬಂಧ ಹೆಚ್ಚುತ್ತಿರುವುದನ್ನು ಸ್ವಾಗತಿಸಿದ ನಾಯಕರು, ಎರಡೂ ರಾಷ್ಟ್ರಗಳ ಕಂಪನಿಗಳು ತಮ್ಮ ನೆಲೆಗಳನ್ನು ವಿಸ್ತರಿಸುತ್ತಿರುವುದು ತೃಪ್ತಿ ತಂದಿದೆ. ಈ ನಿಟ್ಟಿನಲ್ಲಿ ವ್ಯಾಪಾರ ವಹಿವಾಟು ಸಹಕಾರದಲ್ಲಿ ಹೊಸ ಅವಕಾಶಗಳನ್ನು ನೋಡಬೇಕಿದೆ ಎಂದರು. ಎರಡೂ ರಾಷ್ಟ್ರಗಳ ಕಂಪನಿಗಳ ನಡುವೆ ಏರ್ಪಟ್ಟಿರುವ ಉದ್ಯಮ ಸಹಕಾರ ಒಪ್ಪಂದವನ್ನು ಸ್ವಾಗತಿಸಿದರು.
  2. ಉಭಯ ರಾಷ್ಟ್ರಗಳ ನಡುವೆ ಉಕ್ಕು ವಲಯದಲ್ಲಿ ಇರುವ ದೀರ್ಘ ಕಾಲದ ಸಹಕಾರವನ್ನು ಮೆಲುಕು ಹಾಕಿದ ನಾಯಕರು, ಈ ವಲಯದಲ್ಲಿ ಇರುವ ವಿಫುಲ ಅವಕಾಶಗಳನ್ನು ಅನ್ವೇಷಿಸಲು ಮತ್ತು ಬಳಸಿಕೊಳ್ಳಲು ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಮತ್ತು ನವೋದ್ಯಮಗಳು ಮುಂದಡಿ ಇಡುವಂತೆ ಕರೆ ನೀಡಿ, ಈ ಮೂಲಕ ಎರಡೂ ದೇಶಗಳ ಆರ್ಥಿಕ ಸಂಬಂಧ ವಿಸ್ತರಣೆಯ ಒಲವು ವ್ಯಕ್ತಪಡಿಸಿದರು. ಲಕ್ಸೆಂಬರ್ಗ್ ಕಂಪನಿಗಳು ಭಾರತದ ಪರಿಸರ, ಸ್ವಚ್ಛ ಇಂಧನ ಮತ್ತು ಸ್ವಚ್ಛ ಗಂಗಾ ಯೋನೆಯಂತಹ ಸುಸ್ಥಿರ ತಂತ್ರಜ್ಞಾನಗಳ ಉಪಕ್ರಮಗಳಲ್ಲಿ ಹೂಡಿಕೆ ಮಾಡಲು ಆಸಕ್ತ ಹೆಚ್ಚಿಸುತ್ತಿರುವುದನ್ನು ನಾಯಕರು ಪ್ರಸ್ತಾಪಿಸಿದರು.
  3. ಭಾರತ-ಬೆಲ್ಜಿಯಂ-ಲಕ್ಸೆಂಬರ್ಗ್  ನಡುವಿನ 17ನೇ ಜಂಟಿ ಆರ್ಥಿಕ ಆಯೋಗದ ಸಮಾವೇಶದಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿರುವುದಾಗಿ ಹಾಗೂ ಆರ್ಥಿಕ-ವ್ಯಾಪಾರ ಸಂಬಂಧ ಹೆಚ್ಚಿಸಲು ಕಾತುರರಾಗಿರುವುದಾಗಿ ಅವರು ತಿಳಿಸಿದರು.
  4. ಉಭಯ ರಾಷ್ಟ್ರಗಳ ನಡುವಿನ ಪೂರೈಕೆ ಸರಪಳಿಯನ್ನು ಹೆಚ್ಚಿಸಲು ನಡೆಯುತ್ತಿರುವ ನಿರಂತರ ಪ್ರಯತ್ನಗಳ ಬಗ್ಗೆ ಚರ್ಚಿಸಿದ ಅವರು, ಸುಸ್ಥಿರವಾಗಿ, ವೈವಿಧ್ಯಮಯವಾಗಿ, ಜವಾಬ್ದಾರಿಯುತವಾಗಿ ಮತ್ತು ಸರಾಗವಾಗಿ ಪೂರೈಕೆ ಸರಪಳಿ ಬಲವರ್ಧನೆ ಕುರಿತು ಚರ್ಚೆ ನಡೆಸಿದರು. ಜಾಗತಿಕ ಮೌಲ್ಯ ಸರಪಳಿಯಲ್ಲಿ ಎದುರಾಗಿರುವ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಇಬ್ಬರೈ ನಾಯಕರು ಒಪ್ಪಿಗೆ ಸೂಚಿಸಿದರು.

ಹಣಕಾಸು

  1. ಬ್ಯಾಂಕಿಂಗ್, ವಿಮೆ, ಹೂಡಿಕೆ ಮತ್ತಿತರ ಮೂಲಗಳಿಂದ ಹಣಕಾಸು ಹರಿವು ಹೆಚ್ಚಿಸುವ ಸಹಕಾರ ಒಪ್ಪಂದಗಳಿಗೆ ಸಹಿ ಹಾಕಿರುವುದನ್ನು ಸ್ವಾಗತಿಸಿದ ಅವರು, ಲಕ್ಸ್ಂಬರ್ಗ್ ಷೇರು ಮಾರುಕಟ್ಟೆ ಮತ್ತು ಭಾರತೀಯ ಸ್ಟೇಟ್  ಬ್ಯಾಂಕ್ ಮತ್ತು ಇಂಡಿಯಾ ಇಂಟರ್’ನ್ಯಾಷನಲ್ ಸ್ಟಾಕ್ ಎಕ್ಸ್’ಚೇಂಜ್ ನಡುವೆ ಏರ್ಪಟ್ಟ ಸಹಕಾರ ಒಪ್ಪಂದ ಹಣಕಾಸು ಹರಿವಿಗೆ ಪೂರಕವಾಗಿದೆ ಎಂದರು. ಭಾರತದ ಸೆಬಿ ಮತ್ತು ಲಕ್ಸೆಂಬರ್ಗ್’ನ ಮಾರುಕಟ್ಟೆ ನಿಯಂತ್ರಣ ಸಂಸ್ಥೆ ‘ಸಿಎಸ್ಎಸ್ಎಫ್’ ನಡುವಿನ ಉದ್ದೇಶಿತ ಒಪ್ಪಂದವು ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದರು. ಯೂರೋಪ್ ಒಕ್ಕೂಟದಲ್ಲಿ ಮುಂಚೂಣಿ ಅಂತಾರಾಷ್ಟ್ರೀಯ ಹಣಕಾಸು ಕೇಂದ್ರವಾಗಿರುವ ಲಕ್ಸೆಂಬರ್ಗ್, ಭಾರತದ ಹಣಕಾಸು ಸೇವೆಗಳ ಉದ್ಯಮಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳು ಮತ್ತು ಯೂರೋಪ್ ಮತ್ತು ಜಾಗತಿಕ ಹೂಡಿಕೆದಾರರಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಲಕ್ಸೆಂಬರ್ಗ್ ಪ್ರಧಾನಿ ಬೆಟೆಲ್ ಭರವಸೆ ನೀಡಿದರು.
  2. ಹಣಕಾಸು ಉದ್ಯಮವದ ಪಾತ್ರವು ಸುಸ್ಥಿರ ಆರ್ಥಕತೆ ಮೂಲಕ ಜಾಗತಿಕ ಪರಿವರ್ತನೆಗೆ ಬೆಂಬಲ ನೀಡಲಿದೆ. ಈ ನಿಟ್ಟಿನಲ್ಲಿ ಸುಸ್ಥಿರ ಆರ್ಥಿಕತೆ ಅಭಿವೃದ್ಧಿಪಡಿಸುವ ಜಂಟಿ ಉಪಕ್ರಮಗಳನ್ನು ಕೈಗೊಳ್ಳಲು, ಹಣಕಾಸು ವಲಯದ ಡಿಜಿಟಲೀಕರಣ, ತಂತ್ರಜ್ಞಾನ ಅಳವಡಿಕೆ ಮತ್ತು ನವೋದ್ಯಮಗಳ ಉತ್ತೇಜನಕ್ಕೆ ಉಭಯ ನಾಯಕರು ಒಪ್ಪಿಗೆ ಸೂಚಿಸಿದರು.

ಬಾಹ್ಯಾಕಾಶ ಮತ್ತು ಡಿಜಿಟಲ್ ಸಹಕಾರ

  1. ಭಾರತ-ಲಕ್ಸೆಂಬರ್ಗ್ ನಡುವೆ ನಡೆಯುತ್ತಿರುವ ಬಾಹ್ಯಾಕಾಶ ಸಹಕಾರ, ಉಪಗ್ರಹ ಪ್ರಸಾರ ಮತ್ತು ಸಂಪರ್ಕ ಸಹಕಾರ ಪ್ರಯತ್ನ ಸಕಾರಾತ್ಮಕ ಬೆಳವಣಿಗೆ. ಲಕ್ಸೆಂಬರ್ಗ್ ಬಾಹ್ಯಾಕಾಶ ಕಂಪನಿಗಳು ಭಾರತದ ಉಪಗ್ರಹ ಸೇವೆಗಳನ್ನು ಬಳಸುತ್ತಿರುವುದು ತೃಪ್ತಿ ನೀಡಿದೆ ಎಂದು ಪ್ರದಾನಿ ನರೇಂದ್ರ ಮೋದಿ ತಿಳಿಸಿದರು. ನವೆಂಬರ್ 7ರಂದು ಭಾರತದ ಇಸ್ರೋ ಸಂಸ್ಥೆ ಪಿಎಸ್ಎಲ್’ವಿ-ಸಿ49 ರಾಕೆಟ್ ಯಶಸ್ವೀ ಉಡಾವಣೆ ನಡೆಸಿರುವುದನ್ನು ಬೆಟೆಲ್ ಸ್ವಾಗತಿಸಿದರು. ಶಾಮತುಯುತ ಬಳಕೆ ಉದ್ದೇಶದ ಉಪಗ್ರಹಗಳ ಬಳಕೆಗೆ ನಡೆಯುತ್ತಿರುವ ಒಪ್ಪಂದ ಸಹಕಾರ ಮಾತುಕತೆ ಆದಷ್ಟು ಬೇಗ ಅಂತಿಮಗೊಳ್ಳಲಿ ಎಂದು ಉಭಯ ನಾಯಕರು ಆಶಿಸಿದರು.
  2.  ಕೋವಿಡ್-19 ಪರಿಸ್ಥಿತಿ ಡಿಜಿಟಲೀಕರಣ ಪ್ರಕ್ರಿಯೆಗೆ ವೇಗ ನೀಡಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ವಲಯದ ಮತ್ತು ಉದಯೋನ್ಮುಖ ತಂತ್ರಜ್ಞಾನ ವಲಯದ ಸಹಕಾರ ಹೆಚ್ಚಿಸಲು ಒಪ್ಪಿಗೆ ಸೂಚಿಸಿದರು.

ಉನ್ನತ ಶಿಕ್ಷಣ ಮತ್ತು ಸಂಶೋಧನೆ

  1. ಉಭಯ ರಾಷ್ಟ್ರಗಳ ನಡುವಿನ ಉನ್ನತ ಶಿಕ್ಷಣ ಮತ್ತು ಸಂಶೋಧನೆ ಸಹಕಾರ ತೃಪ್ತಿ ನೀಡಿದೆ. ನರರೋಗಗಳ ನಿಯಂತ್ರಣಕ್ಕಾಗಿ ಭಾರತದ ರಾಷ್ಟ್ರೀಯ ಮೆದುಳು ಸಂಶೋಧನಾ ಕೇಂದ್ರವು ಲಕ್ಸೆಂಬರ್ಗ್ ಆರೋಗ್ಯ ಸಂಸ್ಥೆ ಮತ್ತು ಲಕ್ಸೆಂಬರ್ಗ್ ಬಯೋಮೆಡಿಸಿನ್ ಕೇಂದ್ರದ ಸಹಭಾಗಗಿತ್ವದಲ್ಲಿ ನಡೆಸುತ್ತಿರುವ ಸಂಶೋಧನಾ ಚಟುವಟಿಕೆಗಳು ತೃಪ್ತಿ ತಂದಿವೆ. ಜತೆಗೆ, ಭಾರತದ ಐಐಟಿ-ಬಾಂಬೆ, ಕಾನ್ಪುರ, ಮದ್ರಾಸ್ ಮತ್ತು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಜತೆ ಲಕ್ಸೆಂಬರ್ಗ್ ವಿಶ್ವವಿದ್ಯಾಲಯಸ ಸಹಭಾಗಿತ್ವದ ಶೈಕ್ಷಣಿಕ ಚಟುವಟಿಕೆಗಳು ಮುಂದುವರಿದಿವೆ. ಈ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ನಡುವೆ ಉನ್ನತ ಶಿಕ್ಷಣ ಸಂಸ್ಥೆಗಳ ಸಹಕಾರ ಹೆಚ್ಚಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಸಂಸ್ಕೃತಿ ಮತ್ತು ಜನರ ನಡುವೆ ಸಂಬಂಧ

  1.  ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ, ಭಾರತ ಮತ್ತು ಲಕ್ಸೆಂಬರ್ಗ್ ಅಹಿಂಸೆಯ ನೀತಿಯನ್ನು ಹಂಚಿಕೊಂಡಿವೆ. ಈ ನಿಟ್ಟಿನಲ್ಲಿ ಲಕ್ಸೆಂಬರ್ಗ್ 2019ರಲ್ಲಿ ಮಹಾತ್ಮ ಗಾಂಧಿ 150ನೇ ಜಯಂತಿಯ ಸ್ಮರಣಾರ್ಥ ಶಾಂತಿಧೂತನ ಅಂಚೆ ಚೀಟಿ ಹೊರತಂದಿರುವುದನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ಲಕ್ಸೆಂಬರ್ಗ್ ನಗರದ ಮುನಿಸಿಪಲ್ ಪಾರ್ಕ್’ನಲ್ಲಿ ಸ್ಥಾಪಿಸಿರುವ ಗಾಂಧೀಜಿ ಅವರ ಕಂಚಿನ ಪುತ್ಥಳಿಯ ವಿನ್ಯಾಸವನ್ನು ಅಂಚೆಚೀಟಿಗೆ ಬಳಸಿಕೊಳ್ಳಲಾಗಿದೆ ಎಂದು ಪ್ರಧಾನಿ ಬೆಟೆಲ್ ತಿಳಿಸಿದರು. ಭಾರತದ ಶಿಲ್ಪ ಕಲಾವಿದ ಅಮರ್’ನಾಥ್ ಸೆಹಗಲ್(1922-2007) ಈ ಪುತ್ಥಳಿ ಕೆತ್ತಿದ್ದರು.
  2. ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಉಭಯ ರಾಷ್ಟ್ರಗಳ ಜನರ ನಡುವಿನ ಸಂಬಂಧ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಲಕ್ಸೆಂಬರ್ಗ್’ನಲ್ಲಿ ಭಾರತೀಯರ ಸಂಖ್ಯೆ ಹೆಚ್ಚುತ್ತಿರುವುದು, ಕೊಡುಗೆ ನೀಡುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ಇದು ಮತ್ತಷ್ಟು ಹೆಚ್ಚಿಸಲು ವಲಸೆ ಮತ್ತು ಚಲನಶೀಲತೆಯ ಒಪ್ಪಂದ ಸರಳಿಕರಣಕ್ಕೆ ಉಭಯ ನಾಯಕರು ಒಪ್ಪಿದರು.

ಕೋವಿಡ್-19 ಸಾಂಕ್ರಾಮಿಕ

  1. ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ತರಲು ಜೊತೆಗುಡಿ ಕೆಲಸ ಮಾಡಲು ಸಂಕಲ್ಪ ಮಾಡಿದ ಅವರು, ಈ ಸಾಂಕ್ರಾಮಿಕ ಸೋಂಕನ್ನು ನಿರ್ನಾಮ ಮಾಡಲು ಇಡೀ ಜಗತ್ತು ಒಗ್ಗಟ್ಟು ತೋರಬೇಕು. ಸುಸ್ಥಿರ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗೆ ಎಲ್ಲರೂ ಕೈಜೋಡಿಸಬೇಕು. ವಿಶ್ವ ಆರೋಗ್ಯ ಸಂಘಟನೆ ಮೂಲಕ ಅಂತಾರಾಷ್ಟ್ರೀಯ ಸ್ಪಂದನೆ ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು.

ಐರೋಪ್ಯ ಒಕ್ಕೂಟ-ಭಾರತ ಸಂಬಂಧ

  1. ಪ್ರಜಾಸತ್ತೆಯ ಹಂಚಿತ ಮೌಲ್ಯಗಳು ಮತ್ತು ತತ್ವಗಳ ಅಡಿಯಲ್ಲಿ ಅಡಗಿರುವ ಭಾರತ ಮತ್ತು ಐರೋಪ್ಯ ಒಕ್ಕೂಟ ನಡುವಿನ  ಕಾರ್ಯತಂತ್ರ ಪಾಲುದಾರಿಕೆ ಬಲವರ್ಧನೆ ಮಹತ್ವಪೂರ್ಣ. ಸ್ಥಿರ ಮತ್ತು ಸುರಕ್ಷಿತ ವಿಶ್ವಕ್ಕೆ ಕೊಡುಗೆ ನೀಡಲು ಇದು ಅತ್ಯಗತ್ಯ. ಈ ವಿಷಯ ಕುರಿತು 2020 ಜುಲೈ 15ರಂದು ನಡೆದ ಇಂಡಿಯಾ-ಐರೋಪ್ಯ ಒಕ್ಕೂಟ ನಡುವಿನ ವರ್ಚುವಲ್ ಸಮಾವೇಶದಲ್ಲಿ ನಾನಾ ದೇಶಗಳಿಂದ ಸಂತೃಪ್ತಿ ವ್ಯಕ್ತವಾಗಿದೆ, ಜತೆಗೆ, ಇಂಡೋ-ಪೆಸಿಫಿಕ್ ವಲಯದಲ್ಲಿ ಸಾಮಾನ್ಯ ಹಿತಾಸಕ್ತಿ ಕ್ಷೇತ್ರಗಳಲ್ಲಿ ಸಂಬಂಧ ಬಲವರ್ಧನೆಗೆ ಬೆಂಬಲ ಮುಂದುವರಿಸುವ ಭರವಸೆಯನ್ನೂ ನೀಡಿದ್ದಾರೆ. ಐರೋಪ್ಯ ಒಕ್ಕೂಟದ ಸಂಸ್ಥಾಪನಾ ಸದಸ್ಯ ರಾಷ್ಟ್ರವೂ ಆಗಿರುವ ಲಕ್ಸೆಂಬರ್ಗ್, ಭಾರತ-ಐರೋಪ್ಯ ಒಕ್ಕೂಟ ಸಂಬಂಧ ಬಲವರ್ಧನೆಗೆ ದಶಕಗಳ ಕಾಲದಿಂದ ರಚನಾತ್ಮಕ ಪಾತ್ರ ವಹಿಸುತ್ತಾ ಬಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬೆಟೆಲ್, ಭಾರತ-ಐರೋಪ್ಯ ಒಕ್ಕೂಟ ನಡುವಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲು ಲಕ್ಸೆಂಬರ್ಗ್ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಭರವಸೆ ನೀಡಿದರು.
  2. ಭಾರತ-ಐರೋಪ್ಯ ಒಕ್ಕೂಟ ನಡುವೆ ಆರ್ಥಿಕ ಸಂಬಂಧ ಅಭಿವೃದ್ಧಿ ಪಡಿಸಲು, ಮುಕ್ತ ವ್ಯಾಪಾರ ಮತ್ತು ಹೂಡಿಕೆ ಸಹಕಾರ ಹೆಚ್ಚಿಸಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದರು.

ಬಹುಪಕ್ಷೀಯ ಸಹಕಾರ

  1. ನಿಯಮಾಧರಿತ ಬಹುಪಕ್ಷೀಯ ಆದೇಶಗಳು ಹಾಗೂ ಪರಿಣಾಮಕಾರಿಯಾದ ಮತ್ತು ಸುಧಾರಿತ ಬಹುಪಕ್ಷೀಯ ಸಹಕಾರಗಳನ್ನು ವಿಶ್ವ ಸಂಸ್ಥೆ ಮತ್ತು ವಿಶ್ವ ವ್ಯಾಪಾರ ಸಂಘಟನೆಯ ಜತೆಗೂಡಿ ಉತ್ತೇಜಿಸಲು ಇಬ್ಬರೂ ನಾಯಕರು ದೃಢ ನಿಶ್ಚಯ ಮಾಡಿದರು. ಜತೆಗೆ, ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿ ಅಳವಡಿಸಿಕೊಳ್ಳಲು ಸಹಕಾರ ನೀಡುವ ಬದ್ಧತೆ ಪ್ರದರ್ಶಿಸಿದರು. ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆ ಪ್ರತಿಕೂಲಗಳ ವಿರುದ್ಧ ಹೋರಾಡುವ ಸಂಕಲ್ಪ ಮಾಡಿದರು.
  2. ಹವಾಮಾನ ಬದಲಾವಣೆ ಕುರಿತ ಪ್ಯಾರಿಸ್ ಒಪ್ಪಂದ ಜಾರಿ, ಅಂತಾರಾಷ್ಟ್ರೀಯ ಸೌರಶಕ್ತಿ ಒಕ್ಕೂಟಕ್ಕೆ ಸಹಕಾರ, ಸೌರಶಕ್ತಿ ಬಳಕೆಗೆ ಉತ್ತೇಜನಕ್ಕೆ ಬದ್ಧತೆ ತೋರಿದ್ದಾರೆ. ಅಂತಾರಾಷ್ಟ್ರೀಯ ಸೌರಶಕ್ತಿ ಒಕ್ಕೂಟಕ್ಕೆ ಸೇರ್ಪಡೆ ಆಗುವುದಾಗಿ ಪ್ರಧಾನಿ ಬೆಟೆಲ್  ಪ್ರಕಟಿಸಿದರು.
  3. ಪ್ರಕೃತಿ ವಿಕೋಪ ನಿಯಂತ್ರಣದ ಸೆಂಡಾಯ್ ಮಾರ್ಗಸೂಚಿಗಳ ಜಾರಿಗೆ ಸಹಕಾರ ನೀಡಲು ಸಿದ್ಧರಿರುವುದಾಗಿ ಅವರು ಸ್ಪಷ್ಟಪಡಿಸಿದರು.
  4. 2021-2022ರ ಅವಧಿಗೆ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ (ಕಾಯಂ ಅಲ್ಲದ) ಸ್ಥಾನಕ್ಕೆ ಆಯ್ಕೆ ಆಗಿರುವುದನ್ನು ಸ್ವಾಗತಿಸಿದ ಬೆಟೆಲ್, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸುಧಾರಣೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು. ವಿಶ್ವಸಂಸ್ಥೆಯಲ್ಲಿ ಭಾರತ ಕಾಯಂ ಸದಸ್ಯತ್ವ ಪಡೆಯಲು ನಡೆಸುತ್ತಿರುವ ಪ್ರಯತ್ನಗಳಿಗೆ ಬೆಂಬಲ ನೀಡುವುದಾಗಿ ಅವರು ಪುನರುಚ್ಚರಿಸಿದರು. ಭಾರತವು ವಿಶ್ವಸಂಸ್ಥೆ, ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ(ಎಂಟಿಸಿಆರ್), ಪರಮಾಣು ಪೂರೈಕೆ ಗುಂಪು(ಎನ್ಎಸ್’ಜಿ) ಸೇರಿದಂತೆ ವಿವಿಧ ಪ್ರಾತಿನಿಧಿಕ ಸಂಸ್ಥೆಗಳಲ್ಲಿ ಸ್ಥಾನ ಗಳಿಸಲು ನಡೆಸುತ್ತಿರುವ ಪ್ರಯತ್ನಗಳಿಗೆ ಲಕ್ಸೆಂಬರ್ಗ್ ನಿರಂತರ ಬೆಂಬಲ ನೀಡುತ್ತಾ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಮರಿಸಿದರು.
  5.  ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ತೀವ್ರ ಕಳವಳ ವ್ಯಕ್ತಪಡಿಸಿದ ನಾಯಕರು, ಭಾರತ ಮತ್ತು ಲಕ್ಸೆಂಬರ್ಗ್ ನಡುವಿನ ಭಯೋತ್ಪಾದನೆ ನಿಗ್ರಹ ಸಹಕಾರ ಮುಂದುವರಿಸುವ ಜತೆಗೆ,  ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನೆ ನಿಗ್ರಹದ ಅಂತಾರಾಷ್ಟ್ರೀಯ ಪ್ರಯತ್ನಗಳಿಗೆ ಬೆಂಬಲ ಮುಂದುವರಿಸಲು ಒಪ್ಪಿಗೆ ಸೂಚಿಸಿದರು.

ಸಮಾಪನ

  1.  ಭಾರತ ಮತ್ತು ಲಕ್ಸೆಂಬರ್ಗ್ ನಡುವಿನ ಮೊದಲ ಸಮಾವೇಶವು ಉಭಯ ರಾಷ್ಟ್ರಗಳ ನಡುವೆ ಹೊಸ ಹಂತದ ದ್ವಿಪಕ್ಷೀಯ ಸಂಬಂಧಕ್ಕೆ ನಾಂದಿ ಹಾಡಿದೆ. ದ್ವೀಪಕ್ಷೀಯ ಸಂಬಂಧವನ್ನು ವಿಸ್ತರಿಸುವ ಮತ್ತು ಆಳಗೊಳಿಸುವ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಪರಸ್ಪರ ಮತ್ತು ಜಾಗತಿಕ ಹಿತಾಸಕ್ತಿಯ ವಿಷಯಗಳನ್ನು ಪ್ರಾದೇಶಿಕ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಸಮಾಲೋಚನೆ ಮತ್ತು ಸಮನ್ವಯಗಳನ್ನು ಹೆಚ್ಚಿಸಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಲಕ್ಸೆಂಬರ್ಗ್’ಗೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಜೇವಿಯರ್ ಬೆಟೆಲ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದರು.

***


(Release ID: 1674534) Visitor Counter : 255