ಪ್ರಧಾನ ಮಂತ್ರಿಯವರ ಕಛೇರಿ

ದೆಹಲಿಯ ಐಐಟಿ ಘಟಿಕೋತ್ಸವ: ಪ್ರಧಾನಮಂತ್ರಿ ಅವರ ಭಾಷಣ

Posted On: 07 NOV 2020 2:42PM by PIB Bengaluru

ನಮಸ್ತೆ,

        ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಜಿ, ಶ್ರೀ ಸಂಜಯ್ ಧೋತ್ರೆ ಜಿ, ಆಡಳಿತ ಮಂಡಳಿಯ ಮುಖ್ಯಸ್ಥರೇ, ಐಐಟಿ ದೆಹಲಿಯ ನಿರ್ದೇಶಕರಾದ ಡಾ. ಆರ್. ಚಿದಂಬರ ಜಿ, ಆಡಳಿತ ಮಂಡಳಿಯ ಸದಸ್ಯರಾದ ಪ್ರೊ|| ರಾಮಗೋಪಾಲ್ ರಾವ್ ಜಿ ಮತ್ತು ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರೇ, ಪೋಷಕರೇ, ಯುವ ಮಿತ್ರರೇ, ಮಹಿಳೆಯರೇ ಮತ್ತು ಮಹನಿಯರೇ.

          ತಾಂತ್ರಿಕ ಜಗತ್ತಿನಲ್ಲಿ ಇಂದು ಅತ್ಯಂತ ಪ್ರಮುಖ ದಿನವಾಗಿದೆ. ಇಂದು ಐಐಟಿ ದೆಹಲಿ ಮೂಲಕ ದೇಶಕ್ಕೆ 2,000ಕ್ಕೂ ಅಧಿಕ ತಂತ್ರಜ್ಞಾನ ಪರಿಣಿತರು ಲಭ್ಯವಾಗುತ್ತಿದ್ದಾರೆ. ಈ ಪ್ರಮುಖ ಸಂದರ್ಭದಲ್ಲಿ ನಾನು ಪದವಿ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿಗಳನ್ನು ಹಾಗೂ ವಿಶೇಷವಾಗಿ ಅವರಿಗೆ ಮಾರ್ಗದರ್ಶನ ನೀಡಿದ ಪೋಷಕರು ಮತ್ತು ಬೋಧನಾ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ.

          ದೆಹಲಿ ಐಐಟಿಯ 51ನೇ ಘಟಿಕೋತ್ಸವ ಇಂದು ನಡೆಯುತ್ತಿದೆ ಮತ್ತು ಈ ಶ್ರೇಷ್ಠ ಸಂಸ್ಥೆ ಇದೀಗ ವಜ್ರ ಮಹೋತ್ಸವ ಆಚರಿಸುತ್ತಿದೆ. ಐಐಟಿ ದೆಹಲಿ ಮುಂದಿನ ದಶಕಕ್ಕಾಗಿ ದೂರದೃಷ್ಟಿಯ ಮುನ್ನೋಟವನ್ನು ಸಿದ್ಧಪಡಿಸಿದೆ. ವಜ್ರ ಮಹೋತ್ಸವ ವರ್ಷಾಚರಣೆಗಾಗಿ ನಿಮ್ಮೆಲ್ಲರಿಗೂ ನಾನು ಶುಭಾಶಯಗಳನ್ನು ಕೋರುತ್ತೇನೆ ಮತ್ತು ಈ ದಶಕದ ನಿಮ್ಮ ಗುರಿಗಳ ಸಾಧನೆಗೆ ಭಾರತ ಸರ್ಕಾರ ಎಲ್ಲ ರೀತಿಯ ಸಂಪೂರ್ಣ ಬೆಂಬಲ ನೀಡಲಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ.

          ಇಂದು ಶ್ರೇಷ್ಠ ವಿಜ್ಞಾನಿ ಡಾ.ಸಿ.ವಿ.ರಾಮನ್ ಅವರ ಜನ್ಮದಿನ. ಅವರ ಪವಿತ್ರ ಜನ್ಮ ದಿನದಂದು ಘಟಿಕೋತ್ಸವ ಆಚರಿಸುತ್ತಿರುವುದು ಕಾಕತಾಳೀಯವಾಗಿದೆ. ನಾನು ಅತ್ಯಂತ ಗೌರವ ಪೂರ್ವಕವಾಗಿ ಅವರಿಗೆ ನಮಿಸುತ್ತೇನೆ. ಅವರ ಶ್ರೇಷ್ಠ ಕಾರ್ಯಗಳು, ಸದಾ ನಮಗೆ ವಿಶೇಷವಾಗಿ ನಮ್ಮ ಯುವ ವಿಜ್ಞಾನಿ ಮಿತ್ರರಿಗೆ ಸ್ಫೂರ್ತಿ ತುಂಬುವುದನ್ನು ಮುಂದುವರಿಸಲಿ.

ಮಿತ್ರರೇ,

ಈ ಕೊರೊನಾ ಬಿಕ್ಕಟ್ಟು ಜಗತ್ತಿನಲ್ಲಿ ಅತ್ಯಂತ ಪ್ರಮುಖ ಬದಲಾವಣೆಗಳನ್ನು ತಂದಿದೆ. ಕೋವಿಡ್ ನಂತರದ ಜಗತ್ತು ಅತ್ಯಂತ ವಿಭಿನ್ನವಾಗಿರಲಿದೆ ಮತ್ತು ತಂತ್ರಜ್ಞಾನ ಅತ್ಯಂತ ಮಹತ್ವದ ಪಾತ್ರವಹಿಸಲಿದೆ. ಒಂದು ವರ್ಷದ ಹಿಂದೆ ಸಭೆಗಳು, ಪರೀಕ್ಷೆಗಳು, ಸಂದರ್ಶನ ಅಥವಾ ಘಟಿಕೋತ್ಸವಗಳು ಈ ರೀತಿ ಬದಲಾಗುತ್ತವೆ ಎಂದು ಯಾರೊಬ್ಬರೂ ಊಹಿಸಿರಲಿಲ್ಲ. ವರ್ಚುವಲ್ ರಿಯಾಲಿಟಿ ಮತ್ತು ಆರ್ಗ್ಯುಮೆಂಟೆಡ್ ರಿಯಾಲಿಟಿ ಇಂದು ವಾಸ್ತವ ಕಾರ್ಯ ನಿರ್ವಹಣೆಯನ್ನು ಬದಲಾಯಿಸಿದೆ.

ನೀವು ಅಂದುಕೊಳ್ಳುತ್ತಿರಬಹುದು. ನಮ್ಮ ಬ್ಯಾಚ್ ಅದೃಷ್ಟದ್ದಲ್ಲ ಎಂಬ ಭಾವನೆ ನಿಮ್ಮಲ್ಲಿ ಇರಬಹುದು. ನನಗೆ ಖಂಡಿತ ಅನಿಸುತ್ತಿದೆ, ನೀವು ಈ ಪ್ರಶ್ನೆಯನ್ನು ನಿಮ್ಮನ್ನು ನೀವು ಕೇಳಿಕೊಂಡಿರುತ್ತೀರಾ. ಇದು ನಮ್ಮ ಪದವಿ ವರ್ಷವೇ ಘಟಿಸಬೇಕಿತ್ತೇ ? ಎಂದು ಆದರೆ ನೀವು ಇದನ್ನು ಬೇರೆ ರೀತಿಯಲ್ಲಿ ಯೋಚಿಸಿ, ನಿಮಗೆ ಮೊದಲ ಬದಲಾವಣೆಯ ಅನುಭವದ ಪ್ರಯೋಜನವಾಗುತ್ತದೆ. ದುಡಿಯುವ ಸ್ಥಳಗಳಲ್ಲಿ ಮತ್ತು ಹೊರಗೆ ಬದಲಾಗುತ್ತಿರುವ ನಿಯಮಗಳನ್ನು ಕಲಿಯಲು ಮತ್ತು ಅಳವಡಿಸಿಕೊಳ್ಳಲು ನಿಮಗೆ ಹೆಚ್ಚಿನ ಅವಕಾಶವಿದೆ. ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಿ ಮತ್ತು ಭವಿಷ್ಯದ ಪ್ರಕಾಶದ ಬಗ್ಗೆ ಯೋಚಿಸಿ. ನಿಮ್ಮ ಬ್ಯಾಚ್ ಕೂಡ ಅದೃಷ್ಟವಂತ ಬ್ಯಾಚ್. ನೀವು ಕೂಡ ನಿಮ್ಮ ಅಂತಿಮ ವರ್ಷವನ್ನು ಕ್ಯಾಂಪಸ್ ನಲ್ಲಿ ಅನುಭವಿಸಿದ್ದೀರಿ. ಕಳೆದ ಅಕ್ಟೋಬರ್ ನಿಂದ ಮತ್ತು ಈ ವರ್ಷದ ಅಕ್ಟೋಬರ್ ವರೆಗೆ ಹೇಗೆಲ್ಲಾ ಬದಲಾವಣೆಗಳು ಆಗಿವೆ ಎಂಬುದನ್ನು ನೀವು ಕಣ್ಣಾರೆ ಕಂಡಿದ್ದೀರಿ. ನೀವು ಅವುಗಳನ್ನು ಆಶ್ಚರ್ಯದಿಂದ ನೋಡಿ. ಪ್ರತಿ ರಾತ್ರಿ ಪರೀಕ್ಷೆಗೂ ಮುನ್ನ ಗ್ರಂಥಾಲಯಗಳು ಮತ್ತು ಓದುವ ಕೊಠಡಿಗಳನ್ನು ನೆನಪಿಸಿಕೊಳ್ಳಿ. ರಾತ್ರಿ ವೇಳೆ ಮೆಸ್ ಗಳಲ್ಲಿ ಪರೋಟಾ, ಕಾಫಿ ಮತ್ತು ಉಪನ್ಯಾಸಗಳ ನಡುವೆ ಮೊಫಿನ್ ನಲ್ಲಿ ಮುಳುಗಿರುತ್ತಿದ್ದೀರಿ. ಐಐಟಿ ದೆಹಲಿಯಲ್ಲಿ ಎರಡು ವರ್ಗದ ಮಿತ್ರರಿದ್ದಾರೆ ಎಂದು ನಾನು ಕೇಳಲ್ಪಟ್ಟಿದ್ದೇನೆ. ಕಾಲೇಜು ಸ್ನೇಹಿತರು, ಹಾಸ್ಟೆಲ್ ವಿಡಿಯೋ ಗೇಮ್ಸ್ ಸ್ನೇಹಿತರು,  ಖಂಡಿತಾ ಇಬ್ಬರ ಗೈರುಹಾಜರಿ ನಿಮ್ಮನ್ನು ಕಾಡುತ್ತದೆ.

ಮಿತ್ರರೇ,

ಇದಕ್ಕೂ ಮುನ್ನ ನನಗೆ ಐಐಟಿ ಮದ್ರಾಸ್, ಐಐಟಿ ಬಾಂಬೆ, ಐಐಟಿ ಗುವಾಹತಿ ಘಟಿಕೋತ್ಸವಗಳಲ್ಲಿ ಭಾಗವಹಿಸುವ ಅವಕಾಶ ಇದೇ ರೀತಿಯಲ್ಲಿ ಲಭಿಸಿತ್ತು ಮತ್ತು ಕೆಲವು ಕಡೆ ನನಗೆ ಸ್ವತಃ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಈ ಎಲ್ಲ ಸ್ಥಳಗಳಲ್ಲಿ ನಾನು ನೋಡಿದ ಒಂದೇ ಬಗೆಯ ಸ್ಥಿತಿ ಎಂದರೆ ಅಲ್ಲೆಲ್ಲಾ ಒಂದಲ್ಲಾ ಒಂದು ಆವಿಷ್ಕಾರಗಳು ನಡೆಯುತ್ತಿರುವುದನ್ನು, ಸ್ವಾವಲಂಬಿ ಭಾರತ ಅಭಿಯಾನ ಯಶಸ್ವಿ ನಿಟ್ಟಿನಲ್ಲಿ ಇದು ಶ್ರೇಷ್ಠ ಶಕ್ತಿಯಾಗಿದೆ. ಕೋವಿಡ್ ಜಗತ್ತಿಗೆ ಒಂದು ಸಂಗತಿಯನ್ನು ಕಲಿಸಿದೆ. ಜಾಗತೀಕರಣ ಮುಖ್ಯ, ಆದರೆ ಸ್ವಾವಲಂಬನೆಯೂ ಕೂಡ ಅಷ್ಟೇ ಮುಖ್ಯ ಎಂಬುದನ್ನು.

ಮಿತ್ರರೇ,

        ದೇಶದ ಯುವಜನತೆ ತಾಂತ್ರಿಕ ಪರಿಣಿತರು ಮತ್ತು ತಂತ್ರಜ್ಞಾನ ಆಧಾರಿತ ಉದ್ದಿಮೆಗಳ ನಾಯಕರಿಗೆ ಹಲವು ಹೊಸ ಅವಕಾಶಗಳನ್ನು ಒದಗಿಸುವಲ್ಲಿ ಸ್ವಾವಲಂಬಿ ಭಾರತ ಅಭಿಯಾನ ಅತ್ಯಂತ ಪ್ರಮುಖ ಯೋಜನೆಯಾಗಿದೆ. ಇಂದು ಅತ್ಯಂತ ಸೂಕ್ತ ವಾತಾವರಣವನ್ನು ನಿರ್ಮಿಸಲಾಗಿದ್ದು, ಯಾರು ಬೇಕಾದರು ಮುಕ್ತವಾಗಿ ತಮ್ಮ ಚಿಂತನೆಗಳು ಮತ್ತು ಆವಿಷ್ಕಾರಗಳನ್ನು ಮಾರುಕಟ್ಟೆ ಮಾಡಬಹುದು ಮತ್ತು ಜಾರಿಗೊಳಿಸಬಹುದು. ಭಾರತ ಇಂದು ತನ್ನ ಯುವಕರಿಗೆ ವ್ಯಾಪಾರ ಕೈಗೊಳ್ಳಲು ಪೂರಕ ಸಹಾಯವನ್ನು ನೀಡಲು ಬದ್ಧವಾಗಿದೆ. ಆ ಮೂಲಕ ಆ ಯುವಕರು ತಮ್ಮ ಆವಿಷ್ಕಾರಗಳಿಂದಾಗಿ ದೇಶದ ಕೋಟ್ಯಾಂತರ ಜನರ ಬದುಕಿನಲ್ಲಿ ಬದಲಾವಣೆಗಳನ್ನು ತರಲಿದ್ದಾರೆ. ವ್ಯಾಪಾರಕ್ಕೆ ಸುಗಮ ವಾತಾವರಣ ನಿರ್ಮಾಣ ಮತ್ತು ಎಲ್ಲ ವ್ಯವಸ್ಥೆಗಳನ್ನು ದೇಶದಲ್ಲಿ ಒದಗಿಸಲಾಗುತ್ತಿದೆ. ನಿಮ್ಮ ಬುದ್ಧಿವಂತಿಕೆ, ಪ್ರತಿಭೆ, ಅನುಭವ ಮತ್ತು ಆವಿಷ್ಕಾರದ ಮೂಲಕ ಬಡವರಲ್ಲಿ ಅತಿ ಕಡುಬಡವರಿಗೆ ಸರಳ ಮತ್ತು ಸುಗಮ ರೀತಿಯಲ್ಲಿ ಜೀವನ ನಡೆಸುವಂತಾಗಲು ನೀವು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

          ಇತ್ತೀಚೆಗೆ ಬಹುತೇಕ ಎಲ್ಲ ವಲಯಗಳಲ್ಲಿ ಇದೇ ಮನೋಭಾವವನ್ನು ಇಟ್ಟುಕೊಂಡು ಪ್ರಮುಖ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿ ಆವಿಷ್ಕಾರದಲ್ಲಿ ಲೆಕ್ಕವಿಲ್ಲದಷ್ಟು ಸಾಧ್ಯತೆಗಳು ತೆರೆದುಕೊಂಡಿವೆ ಮತ್ತು ಕೃಷಿ ವಲಯದಲ್ಲಿ ನವೋದ್ಯಮಗಳು ಆರಂಭವಾಗುತ್ತಿವೆ. ಇದೇ ಮೊದಲ ಬಾರಿಗೆ ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶಗಳು ತೆರೆದುಕೊಂಡಿವೆ. ಎರಡು ದಿನಗಳ ಹಿಂದೆಯಷ್ಟೇ ಬಿಪಿಒ ವಲಯದಲ್ಲಿ ಸುಗಮ ವಹಿವಾಟಿಗೆ ಮಹತ್ವದ ಸುಧಾರಣೆಗಳನ್ನು ತರಲಾಗಿದೆ. ಸರ್ಕಾರ ಇತರೆ ಸೇವಾ ಪೂರೈಕೆದಾರರ(ಒಎಸ್ ಪಿ) ಮಾರ್ಗಸೂಚಿಗಳಲ್ಲಿದ್ದ ಬಹುತೇಕ ನಿರ್ಬಂಧಗಳನ್ನು ತೆಗೆದು ಹಾಕಿ, ನಿಯಮಗಳನ್ನು ಸರಳೀಕರಣಗೊಳಿಸಿದೆ. ಒಂದು ರೀತಿಯಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪ ಇರುವುದಿಲ್ಲ. ಪ್ರತಿಯೊಬ್ಬರಲ್ಲೂ ವಿಶ್ವಾಸ ಮೂಡುತ್ತಿದೆ. ಇದರಿಂದಾಗಿ ಬಿಪಿಒ ಉದ್ಯಮದಲ್ಲಿ ನಾನಾ ನಿಬಂಧನೆಗಳು ಮತ್ತು ಷರತ್ತು ಪಾಲನೆಗಳ ಹೊರೆ ಭಾರೀ ಪ್ರಮಾಣದಲ್ಲಿ ತಗ್ಗಲಿದೆ. ಅಲ್ಲದೆ ಬ್ಯಾಂಕ್ ಖಾತ್ರಿ ಸೇರಿದಂತೆ ಹಲವು ಅಗತ್ಯತೆಗಳನ್ನು ಬಿಪಿಒ ಉದ್ಯಮಗಳಿಗಾಗಿ ತೆಗೆದು ಹಾಕಲಾಗಿದೆ. ಇದೊಂದೇ ಅಲ್ಲ, ತಂತ್ರಜ್ಞಾನ ಉದ್ಯಮ ಮನೆಯಿಂದ ಕಾರ್ಯನಿರ್ವಹಣೆಗೆ ಇದ್ದ ನಿರ್ಬಂಧಗಳು ಅಥವಾ ಎಲ್ಲಿಂದ ಬೇಕಾದರೂ ಕೆಲಸ ಮಾಡಲು ಇದ್ದ ಅಡೆತಡೆಗಳನ್ನು ತೆಗೆದು ಹಾಕಲಾಗಿದೆ. ಇದರಿಂದಾಗಿ ಮಾಹಿತಿ ತಂತ್ರಜ್ಞಾನ ವಲಯ ಜಾಗತಿಕವಾಗಿ ಸ್ಪರ್ಧಾತ್ಮಕಗೊಳ್ಳುವ ಜೊತೆಗೆ ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಲಿದೆ.

ಮಿತ್ರರೇ,

        ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ಮತ್ತು ಭವಿಷ್ಯದ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ಇಂದು ಹಳೆಯ ನಿಯಮಗಳನ್ನು ಬದಲಾವಣೆ ಮಾಡಿ ಹೊಸ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ಶತಮಾನದ ನಿಯಮ ಮತ್ತು ನಿಬಂಧನೆಗಳು, ಮುಂದಿನ ಶತಮಾನದ ಭವಿಷ್ಯವನ್ನು ನಿರ್ಧರಿಸಬಾರದು ಎಂಬುದು ನನ್ನ ಆಲೋಚನೆಯಾಗಿದೆ. ಹೊಸ ಶತಮಾನ, ಹೊಸ ಸಂಕಲ್ಪ, ಹೊಸ ಕಾನೂನುಗಳು, ಹೊಸ ಸಂಪ್ರದಾಯಗಳು ಆರಂಭವಾಗಬೇಕು. ಇಂದು ಭಾರತ ಕಾರ್ಪೊರೇಟ್ ತೆರಿಗೆ ಕಡಿಮೆ ಇರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಸ್ಟಾರ್ಟ್ ಅಪ್ ಇಂಡಿಯಾ ಅಭಿಯಾನದ ನಂತರ 50 ಸಾವಿರಕ್ಕೂ ಅಧಿಕ ನವೋದ್ಯಮಗಳು ಆರಂಭವಾಗಿವೆ. ಸರ್ಕಾರದ ಪ್ರಯತ್ನಗಳ ಪರಿಣಾಮವಾಗಿ, ಇಂದು ದೇಶದಲ್ಲಿ ಪೇಟೆಂಟ್ ಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಟ್ರೇಡ್ ಮಾರ್ಕ್ ನೋಂದಣಿಯಲ್ಲಿ ಐದು ಪಟ್ಟು ಅಧಿಕವಾಗಿದೆ. ಹಣಕಾಸು ತಂತ್ರಜ್ಞಾನ, ನವೋದ್ಯಮದ ಜೊತೆ ಕೃಷಿ, ರಕ್ಷಣಾ ಮತ್ತು ವೈದ್ಯಕೀಯ ವಲಯಗಳು ಅತ್ಯಂತ ಕ್ಷಿಪ್ರವಾಗಿ ಬೆಳವಣಿಗೆ ಹೊಂದುತ್ತಿವೆ. ಕೆಲವು ವರ್ಷಗಳಿಂದೀಚೆಗೆ 20ಕ್ಕೂ ಅಧಿಕ ಯೂನಿಕಾರ್ನ್ ಗಳನ್ನು ಭಾರತೀಯರು ಸ್ಥಾಪಿಸಿದ್ದಾರೆ. ಈ ದೇಶ ಪ್ರಗತಿ ಸಾಧಿಸುತ್ತಿರುವುದನ್ನು ಗಮನಿಸಿದರೆ ಮುಂದಿನ ಒಂದು ಅಥವಾ ಎರಡು ವರ್ಷಗಳಲ್ಲಿ ಈ ಸಂಖ್ಯೆಗಳು ಮತ್ತಷ್ಟು ಹೆಚ್ಚಾಗಲಿವೆ ಹಾಗೂ ಇಂದು ತೇರ್ಗಡೆಯಾಗಿ ಹೊರ ಹೋಗುತ್ತಿರುವ ನಿಮ್ಮಂತಹ ಯುವಕರಿಗೆ ಹೊಸ ಆವೇಗ ಸಿಗುತ್ತಿದೆ.

 

ಮಿತ್ರರೇ,

        ಇಂದು ನವೋದ್ಯಮಗಳಿಗೆ ಸಂಪೋಷಣೆಯಿಂದ ಹಿಡಿದು ಆರ್ಥಿಕ ನೆರವು ನೀಡುವವರೆಗೆ ಹಲವು ಸೌಕರ್ಯಗಳನ್ನು ನೀಡಲಾಗುತ್ತಿದೆ. ಆರ್ಥಿಕ ನೆರವು ನೀಡುವ ಸಲುವಾಗಿಯೇ ಹತ್ತು ಸಾವಿರ ಕೋಟಿ ರೂ.ಮೌಲ್ಯದ ನಿಧಿ ಸ್ಥಾಪಿಸಲಾಗಿದೆ. ಮೂರು ವರ್ಷಗಳವರೆಗೆ ತೆರಿಗೆ ವಿನಾಯಿತಿ, ಸ್ವಯಂ ಪ್ರಮಾಣೀಕರಣ, ಸುಲಭ ನಿರ್ಗಮನ ಸೇರಿದಂತೆ ನವೋದ್ಯಮಗಳಿಗಾಗಿ ಹಲವು ಸೌಕರ್ಯಗಳನ್ನು ನೀಡಲಾಗುತ್ತಿದೆ. ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಯೋಜನೆ ಅಡಿ ನಾವು ಒಂದು ಲಕ್ಷ ಕೋಟಿಗೂ ಅಧಿಕ ಹಣವನ್ನು ಹೂಡಿಕೆ ಮಾಡಲು ಸಿದ್ಧವಾಗಿದ್ದೇವೆ. ಇದರಿಂದಾಗಿ ದೇಶದಲ್ಲಿ ಅತ್ಯಾಧುನಿಕ ಮೂಲಸೌಕರ್ಯ ಸೃಷ್ಟಿಸಲು ಸಹಕಾರಿಯಾಗುವುದಲ್ಲದೆ, ಸದ್ಯದ ಹಾಗೂ ಭವಿಷ್ಯದ ಅಗತ್ಯತೆಗಳನ್ನು ಪೂರೈಸಲಿದೆ.

ಮಿತ್ರರೇ,

ದೇಶ ಇಂದು ಪ್ರತಿಯೊಂದು ಪ್ರದೇಶದಲ್ಲೂ ಗರಿಷ್ಠ ಸಂಪನ್ಮೂಲವನ್ನು ಬಳಕೆ ಮಾಡಿಕೊಳ್ಳಲು ನಾನಾ ಮಾರ್ಗಗಳ ಮೂಲಕ ಕಾರ್ಯೋನ್ಮುಖವಾಗಿದೆ. ನೀವು ಇಲ್ಲಿಂದ ಹೊರಟು ಹೊಸ ಸ್ಥಳದಲ್ಲಿ ಕಾರ್ಯನಿರ್ವಹಿಸಬಹುದು. ಆಗ ನೀವು ಹೊಸ ಮಂತ್ರದೊಂದಿಗೆ ಕಾರ್ಯಾರಂಭಿಸಬೇಕಾಗುತ್ತದೆ. ಆ ಮಂತ್ರವೆಂದರೆ ಗುಣಮಟ್ಟಕ್ಕೆ ಆದ್ಯತೆ; ಯಾವುದೇ ರೀತಿ ರಾಜಿ ಮಾಡಿಕೊಳ್ಳದಿರುವುದು. ದೊಡ್ಡ ಪ್ರಮಾಣದಲ್ಲಿ ಆವಿಷ್ಕಾರಗಳನ್ನು ಮಾಡುವುದು ಮತ್ತು ವಿಶ್ವಾಸಾರ್ಹತೆ ಖಾತ್ರಿ ಮತ್ತು ಮಾರುಕಟ್ಟೆಯಲ್ಲಿ ದೀರ್ಘಾವಧಿಯ ವಿಶ್ವಾಸ ನಿರ್ಮಾಣ, ಹೊಸತನ ಅಳವಡಿಕೆ ಒಪ್ಪಿಕೊಳ್ಳುವುದು, ಬದಲಾವಣೆಗೆ ತೆರೆದುಕೊಳ್ಳುವುದು ಹಾಗೂ ಜೀವನದಲ್ಲಿ ಅನಿಶ್ಚಿತತೆಯನ್ನು ನಿರೀಕ್ಷಿಸುವುದು. ನಾವು ಈ ಮೂಲತತ್ವಗಳಡಿ ಕಾರ್ಯನಿರ್ವಹಿಸಿದರೆ ಅದು ನಿಮ್ಮ ಗುರುತಿಸುವಿಕೆಯಲ್ಲಿ ಹಾಗೂ ಬ್ರ್ಯಾಂಡ್ ಇಂಡಿಯಾದಲ್ಲಿ ಪ್ರತಿಫಲನಗೊಳ್ಳಲಿದೆ.  ನಾನು ಏಕೆ ಅದನ್ನು ಹೇಳುತ್ತಿದ್ದೇನೆ ಎಂದರೆ ನೀವೆಲ್ಲಾ ಬ್ರ್ಯಾಂಡ್ ಇಂಡಿಯಾದ ಅತಿದೊಡ್ಡ ಬ್ರ್ಯಾಂಡ್ ರಾಯಭಾರಿಗಳು. ನೀವು ಏನೇ ಮಾಡಿದರೂ ದೇಶದ ಉತ್ಪನ್ನಗಳಿಗೆ ಜಾಗತಿಕ ಅಸ್ಮಿತೆಯನ್ನು ತಂದುಕೊಡುವಿರಿ. ನೀವು ಏನೇ ಮಾಡಿದರೂ ದೇಶದ ಪ್ರಯತ್ನಗಳನ್ನು ಚುರುಕುಗೊಳಿಸುವಿರಿ. ಗ್ರಾಮಗಳಲ್ಲಿರುವ ಬಡಜನರಿಗಾಗಿ ನೀವು ಮಾಡುವ ಪ್ರಯತ್ನಗಳು ನಿಮ್ಮ ಬದ್ಧತೆ ಮತ್ತು ಆವಿಷ್ಕಾರದಿಂದ ಮಾತ್ರ ಅರ್ಥವಾಗುತ್ತದೆ.

ಮಿತ್ರರೇ,

ತಂತ್ರಜ್ಞಾನದ ಮೂಲಕ ಹೇಗೆ ಬಡವರಲ್ಲಿ ಅತಿ ಕಡುಬಡವರನ್ನು ತಲುಪಬಹುದು ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ. ದೇಶ ಹಲವು ವರ್ಷಗಳಿಂದ ಇದನ್ನು ಮಾಡಿ ತೋರಿಸಿದೆ. ವಸತಿ, ವಿದ್ಯುಚ್ಛಕ್ತಿ, ಶೌಚಾಲಯ, ಅನಿಲ ಸಂಪರ್ಕ ಅಥವಾ ನೀರಿನ ಸಂಪರ್ಕ ಸೇರಿದಂತೆ ಎಲ್ಲ ಸೌಕರ್ಯಗಳನ್ನು ದತ್ತಾಂಶ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಒದಗಿಸಲಾಗುತ್ತಿದೆ. ಇಂದು ಜನನ ಪ್ರಮಾಣಪತ್ರ ಮತ್ತು ಜೀವಂತ ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಒದಗಿಸಲಾಗುತ್ತಿದೆ. ಡಿಜಿಟಲ್ ಲಾಕರ್ ಗಳು ಮತ್ತು ಡಿಜಿಟಲ್ ಆರೋಗ್ಯ ಕಾರ್ಡ್ ಗಳನ್ನು ಒದಗಿಸುವ ನಿಟ್ಟಿನಲ್ಲಿ ದೇಶ ಭಾರೀ ದೊಡ್ಡ ಯಶಸ್ಸುಗಳಿಸಿದೆ. ಇವುಗಳಿಂದಾಗಿ ಜನ್ ಧನ್-ಆಧಾರ್-ಮೊಬೈಲ್(ಜೆಎಎಂ) ಮೂಲಕ ಸಾಮಾನ್ಯ ಜನರ ಜೀವನ ಸುಲಭವಾಗಿದೆ. ತಂತ್ರಜ್ಞಾನ ಕೊನೆಯ ಮೈಲಿವರೆಗೆ ಪರಿಣಾಮಕಾರಿಯಾಗಿ ತಲುಪುತ್ತಿದೆ ಮತ್ತು ಭ್ರಷ್ಟಾಚಾರಕ್ಕೆ ಅವಕಾಶವನ್ನು ತಗ್ಗಿಸಿದೆ. ಡಿಜಿಟಲ್ ವಹಿವಾಟಿಗೆ ಸಂಬಂಧಿಸಿದಂತೆ ಭಾರತ ಹಲವು ದೇಶಗಳಿಗಿಂತ ಮುಂಚೂಣಿಯಲ್ಲಿದೆ. ವಿಶ್ವದ ಹಲವು ದೇಶಗಳು ಭಾರತದ ಯುಪಿಐನಂತಹ ವೇದಿಕೆಗಳನ್ನು ಅಳವಡಿಸಿಕೊಳ್ಳಲು ಬಯಸುತ್ತಿದೆ.

ಮಿತ್ರರೇ,

ಇತ್ತೀಚೆಗೆ ಸರ್ಕಾರ ಹೊಸ ಯೋಜನೆಯೊಂದನ್ನು ಆರಂಭಿಸಿದ್ದು, ಅದರಲ್ಲಿ ತಂತ್ರಜ್ಞಾನ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಅದು ಸ್ವಾಮಿತ್ವ ಯೋಜನೆ. ಅದರಡಿ ಇದೇ ಮೊದಲ ಬಾರಿಗೆ ಗ್ರಾಮಗಳ ಭೂಮಿ ಮತ್ತು ವಸತಿ ಆಸ್ತಿಗಳನ್ನು ಗುರುತಿಸಲಾಗುತ್ತಿದೆ. ಇದಕ್ಕೂ ಮುನ್ನ ಆ ಕೆಲಸವನ್ನು ಜನರೇ ಭೌತಿಕವಾಗಿ ಮಾಡುತ್ತಿದ್ದರು. ಆದ್ದರಿಂದ ಸಂದೇಹಗಳು ಮತ್ತು ಭಾಗಶಃ ಆತಂಕಗಳು ಸ್ವಾಭಾವಿಕವಾಗಿದ್ದವು. ಇದೀಗ ನಿಮಗೆ ಸಂತೋಷವಾಗುತ್ತದೆ. ಏಕೆಂದರೆ ತಂತ್ರಜ್ಞಾನದ ಸಹಾಯದಿಂದ ಅದನ್ನು ನೀವು ಗುರುತಿಸಬಹುದು ಮತ್ತು ಡ್ರೋಣ್ ತಂತ್ರಜ್ಞಾನದ ಮೂಲಕ ಅದನ್ನು ಮಾಡಬಹುದಾಗಿದೆ. ಗ್ರಾಮಸ್ಥರು ಸಂಪೂರ್ಣವಾಗಿ ಇದಕ್ಕೆ ತೃಪ್ತಿ ವ್ಯಕ್ತಪಡಿಸಿದ್ದು, ಅವರ ನೆರವಿನಿಂದ ಇದನ್ನು ಜಾರಿಗೊಳಿಸಲಾಗುವುದು. ಇದು ಭಾರತದ ಸಾಮಾನ್ಯ ಜನರು ತಂತ್ರಜ್ಞಾನದ ಮೇಲೆ ಇಟ್ಟಿರುವ ವಿಶ್ವಾಸವನ್ನು ತೋರುತ್ತದೆ.

ಮಿತ್ರರೇ,

ತಂತ್ರಜ್ಞಾನದ ಅಗತ್ಯತೆಗಳು ಮತ್ತು ಭಾರತೀಯರ ವಿಶ್ವಾಸದಲ್ಲಿ ನಿಮ್ಮ ಭವಿಷ್ಯದ ಬೆಳಕನ್ನು  ಕಾಣಿರಿ. ದೇಶದಲ್ಲಿ ನಿಮಗೆ ವಿಫುಲ ಅವಕಾಶಗಳಿವೆ ಮತ್ತು ನೀವು ಕೆಲವು ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಬೇಕಾಗಿದೆ. ಕೆಲವು ವಲಯಗಳಿದ್ದು, ಅವುಗಳಲ್ಲಿ ಹೆಚ್ಚಿನ ಕೆಲಸ ಮಾಡಲು ಅವಕಾಶಗಳಿವೆ. ಅದು ಪ್ರವಾಹ ಮತ್ತು ಚಂಡಮಾರುತದ ನಂತರ ವಿಪತ್ತು ನಿರ್ವಹಣೆ ನಂತರದ ಅವಕಾಶಗಳು, ಅಂತರ್ಜಲವನ್ನು ಕಾಯ್ದುಕೊಳ್ಳಲು ಪರಿಣಾಮಕಾರಿ ತಂತ್ರಜ್ಞಾನ ಅಳವಡಿಸುವುದು, ಸೌರಶಕ್ತಿ ಉತ್ಪತ್ತಿ ಮತ್ತು ತಂತ್ರಜ್ಞಾನ ಆಧಾರಿತ ಬ್ಯಾಟರಿ, ಟೆಲಿಮೆಡಿಸನ್ ಮತ್ತು ರಿಮೋಟ್ ಸರ್ಜರಿ ತಂತ್ರಜ್ಞಾನ ಬಿಗ್ ಡಾಟಾ ಅನಾಲಿಟಿಕ್ಸ್ ಇತ್ಯಾದಿ.

ಮಿತ್ರರೇ,

        ನಾನು ದೇಶದ ಹಲವು ಅಗತ್ಯತೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಈ ಅಗತ್ಯತೆಗಳನ್ನು ಹೊಸ ಆವಿಷ್ಕಾರಗಳು, ನಿಮ್ಮ ಚಿಂತನೆಗಳು, ಶಕ್ತಿ ಮತ್ತು ಪ್ರಯತ್ನಗಳ ಮೂಲಕ ಈಡೇರಿಸಬಹುದು. ಆದ್ದರಿಂದ ನಾನು ದೇಶದ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಿ ಎಂದು ವಿಶೇಷ ಮನವಿ ಮಾಡುತ್ತಿದ್ದೇನೆ. ತಳಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳ ಜೊತೆ ಬೆಸೆಯಿರಿ ಮತ್ತು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಸಾಮಾನ್ಯ ಜನರ ಆಶೋತ್ತರಗಳನ್ನು ಅರ್ಥಮಾಡಿಕೊಳ್ಳಿರಿ ಎಂದು ಮನವಿ ಮಾಡುತ್ತೇನೆ. ಇದಕ್ಕೆ ನಿಮ್ಮ ಹಳೆಯ ವಿದ್ಯಾರ್ಥಿಗಳ (ಅಲ್ಯೂಮಿನಿ) ಜಾಲ ಅತ್ಯಂತ ಉಪಯುಕ್ತವಾಗುತ್ತದೆ.

ಮಿತ್ರರೇ,

ಹಳೆಯ ವಿದ್ಯಾರ್ಥಿಗಳ ಸಭೆಗಳನ್ನು ಆಯೋಜಿಸುವುದು ಅತ್ಯಂತ ಸುಲಭವಾಗಿದೆ. ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಭಾಗವಹಿಸಲು ಇತರೆ ಕಾಲೇಜುಗಳ ವಿದ್ಯಾರ್ಥಿಗಳು ಸುದೀರ್ಘ ಪಯಣ ಮಾಡಬೇಕಾಗುತ್ತದೆ. ಆದರೆ ನಿಮಗೆ ಅಲ್ಯೂಮ್ನಿ ಮೀಟ್ ನಡೆಸಲು ಸುಲಭ ಆಯ್ಕೆ ಇದೆ. ಅತ್ಯಲ್ಪ ಅವಧಿಯಲ್ಲಿಯೇ ವಾರಾಂತ್ಯದಲ್ಲಿ ನೀವು ಹಳೆಯ ವಿದ್ಯಾರ್ಥಿಗಳ ಸಭೆಯನ್ನು ಸಿಲಿಕಾನ್ ವ್ಯಾಲಿ, ವಾಲ್ ಸ್ಟ್ರೀಟ್ ಅಥವಾ ಯಾವುದೇ ಸರ್ಕಾರಿ ಸಚಿವಾಲಯದಲ್ಲಿ ಆಯೋಜಿಸಬಹುದು. ಕಾರಣ ನೀವು ಎಲ್ಲೆಡೆ ಉಪಸ್ಥಿತರಿರುವುದು. ನೀವು ಬಹುಸಂಖ್ಯೆಯಲ್ಲಿದ್ದೀರಿ. ಭಾರತದ ನವೋದ್ಯಮ ರಾಜಧಾನಿಗಳಾದ ಮುಂಬೈ, ಪುಣೆ ಅಥವಾ ಬೆಂಗಳೂರುಗಳಲ್ಲಿ ಐಐಟಿ ಪದವೀಧರರ ಬಲಿಷ್ಠ ಜಾಲವನ್ನು ನಾವು ಕಾಣುತ್ತೇವೆ. ಇದಕ್ಕೆ ನಿಮ್ಮ ಯಶಸ್ಸು ಮತ್ತು ನಿಮ್ಮ ಪ್ರಭಾವ ಕಾರಣವಾಗಿದೆ.

ಮಿತ್ರರೇ,

          ನೀವೆಲ್ಲೆ ಅಸಾಮಾನ್ಯ ಸಾಮರ್ಥ್ಯಗಳನ್ನು ಹೊಂದಿರುವ ವಿದ್ಯಾರ್ಥಿಗಳು. ನೀವೆಲ್ಲಾ 17-18ನೇ ವಯಸ್ಸಿಗೆ ಅತ್ಯಂತ ಕಠಿಣ ಜೆ-ಇ-ಇ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೀರಿ ಮತ್ತು ಐಐಟಿಗೆ ಬಂದಿದ್ದೀರಿ. ಆದರೆ ಎರಡು ಸಂಗತಿಗಳು ನಿಮ್ಮ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಒಂದು ಸರಳತೆ ಮತ್ತು ಮತ್ತೊಂದು ಮಾನವೀಯತೆ. ಸರಳತೆಯ ಮೂಲಕ ನಾನು ಎದ್ದು ನಿಂತು ಸದೃಢರಾಗಿ, ಬಿನ್ನರಾಗಿರಿ ಎಂದು ಹೇಳುತ್ತೇನೆ. ಯಾವುದೇ ಸಮಯದಲ್ಲೂ ನಿಮ್ಮ ಜೀವನದಲ್ಲಿ ನೀವು ನಿಮ್ಮ ಗುರುತಿಸುವಿಕೆಯನ್ನು ಕಳೆದುಕೊಳ್ಳಬೇಡಿ. ಯಾವುದೇ ಕಾರಣಕ್ಕೂ ಯಾವುದೇ ವಿಷಯವನ್ನು ಹಗುರವಾಗಿ ಪರಿಗಣಿಸಬೇಡಿ. ಸದಾ ಮೂಲ ಆವೃತ್ತಿಯಂತೆ ಇರಿ. ನೀವು ನಂಬಿರುವ ಮೌಲ್ಯಗಳನ್ನು ಮುಂದುವರಿಸಿಕೊಂಡು ಹೋಗಿ. ಅದೇ ವೇಳೆ ತಂಡದಲ್ಲಿ ಸೇರ್ಪಡೆಯಾಗಲು ಯಾವುದೇ ಹಿಂಜರಿಕೆ ಬೇಡ. ವೈಯಕ್ತಿಕ ಪ್ರಯತ್ನಗಳಿಗೆ ತನ್ನದೇ ಆದ ಮಿತಿಗಳಿರುತ್ತವೆ. ತಂಡದ ಕಾರ್ಯಗಳಲ್ಲಿ ಮುನ್ನಡೆಗಳಿಸುವ ಮಾರ್ಗಗಳಿರುತ್ತವೆ. ತಂಡ ಕಾರ್ಯ ಸಮಗ್ರತೆಯನ್ನು ತರುತ್ತದೆ. ಎರಡನೇ ಅಂಶ ಮಾನವೀಯತೆ, ನೀವು ನಿಮ್ಮ ಯಶಸ್ಸು, ಸಾಧನೆಗಳ ಬಗ್ಗೆ ಸಂಪೂರ್ಣ ಹೆಮ್ಮೆಯಿಂದಿರಿ. ನೀವು ಮಾಡಿರುವುದನ್ನು ಕೆಲವೇ ಕೆಲವರು ಸಾಧಿಸಿರುತ್ತಾರೆ. ಇದು ನಿಮ್ಮನ್ನು ಇನ್ನಷ್ಟು ಸಾದಾ ಸೀದಾ ಇರುವಂತೆ ಮಾಡಬೇಕು.

ಮಿತ್ರರೇ,

ಪ್ರತಿಯೊಬ್ಬರೂ ಸದಾ ತಮ್ಮೊಳಗೆ ಸ್ಪರ್ಧೆ ಮಾಡುತ್ತಿರಬೇಕು ಮತ್ತು ಪ್ರತಿ ದಿನವೂ ಕಲಿಕೆ ಮಾಡಬೇಕು. ನೀವು ನಿಮ್ಮನ್ನು ಜೀವನವಡಿ ವಿದ್ಯಾರ್ಥಿ ಎಂದು ಪರಿಗಣಿಸಿಕೊಳ್ಳುವುದು ಅತಿ ಮುಖ್ಯ. ತಾನು ಕಲಿತಿರುವುದು ಸಾಕು ಎಂಬ ಯೋಚನೆ ಎಂದಿಗೂ ಮಾಡಬೇಡಿ.

ನಮ್ಮ ಧರ್ಮಗ್ರಂಥಗಳಲ್ಲಿ ಹೀಗೆ ಹೇಳಲಾಗುತ್ತದೆ - सत्यं ज्ञानं अनन्तं ब्रह्म। ಅದರ ಅರ್ಥ ಜ್ಞಾನ ಮತ್ತು ವಾಸ್ತವ ಬ್ರಹ್ಮನಷ್ಟೇ ಸತ್ಯ ಹಾಗೂ ಅನಂತ ಎಂದು. ನೀವು ಅಭಿವೃದ್ಧಿಪಡಿಸಲಿರುವ ಹೊಸ ಆವಿಷ್ಕಾರಗಳು ವಾಸ್ತವತೆ ಮತ್ತು ಜ್ಞಾನದ ವಿಸ್ತರಣೆಯಾಗಿವೆ. ಆದ್ದರಿಂದ ದೇಶಕ್ಕಾಗಿ, ದೇಶದ ಜನರಿಗಾಗಿ ಗ್ರಾಮಗಳಲ್ಲಿರುವ ಬಡಜನರಿಗಾಗಿ ಮತ್ತು ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ನೀವು ಮಾಡಲಿರುವ ಆವಿಷ್ಕಾರಗಳಿಗೆ ಭಾರೀ ಸಾಮರ್ಥ್ಯ ಇರಲಿದೆ.

ನಾನು ಮತ್ತೊಮ್ಮೆ ನಿಮ್ಮ ಜ್ಞಾನ, ಅನುಭವ ಮತ್ತು ಸಾಮರ್ಥ್ಯ ದೇಶಕ್ಕೆ ಸಹಕಾರಿಯಾಗಲಿದೆ ಎಂಬ ನಂಬಿಕೆಯೊಂದಿಗೆ ನಿಮ್ಮೆಲ್ಲರಿಗೂ ಶುಭಾಶಯಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮ ಪೋಷಕರ ಆಶೋತ್ತರಗಳಂತೆ ನಿಮ್ಮ ಜೀವನದ ಪಯಣ ಆರಂಭವಾಗಲಿ ಮತ್ತು ನಿಮ್ಮ ಶಿಕ್ಷಕರು ನೀಡಿರುವ ಶಿಕ್ಷಣ ನಿಮ್ಮ ಯಶಸ್ವಿ ಜೀವನದ ಪ್ರತಿಯೊಂದು ಹಂತದಲ್ಲೂ ಸಹಾಯಕವಾಗಲಿ. ಭಾರತ ಸರ್ಕಾರಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ತನ್ನ ಜನಸಂಖ್ಯೆಯ ಬಗ್ಗೆ ಹೆಮ್ಮೆ ಇದೆ ಮತ್ತು ನಮ್ಮ ಜನಸಂಖ್ಯೆ, ಐಐಟಿ ಪದವೀಧರರಿಂದ ತುಂಬಿದ್ದರೆ ಅದಕ್ಕೆ ಜಗತ್ತಿನಲ್ಲಿ ಹೆಚ್ಚಿನ ಮೌಲ್ಯವಿದೆ. ಈ ಸಾಮರ್ಥ್ಯದೊಂದಿಗೆ ಹೊಸ ಪಯಣ ಆರಂಭಿಸುತ್ತಿರುವ ನಿಮಗೆ ನಿಮ್ಮ ಕುಟುಂಬಗಳಿಗೆ ಮತ್ತು ನಿಮ್ಮ ಶಿಕ್ಷಕರಿಗೆ ಹಲವು ಕೃತಜ್ಞತೆಗಳ ಮೂಲಕ ನನ್ನ ಭಾಷಣವನ್ನು ಪರಿಸಮಾಪ್ತಿಗೊಳಿಸುತ್ತಿದ್ದೇನೆ.

ನನ್ನ ಶುಭಾಶಯಗಳು.

 

 

 

***(Release ID: 1671674) Visitor Counter : 10