ಪ್ರಧಾನ ಮಂತ್ರಿಯವರ ಕಛೇರಿ

ವೈಶ್ವಿಕ್ ಭಾರತೀಯ ವೈಜ್ಞಾನಿಕ(ವೈಭವ್ )2020 ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣ ಪಠ್ಯ

Posted On: 02 OCT 2020 10:00PM by PIB Bengaluru

ನಮಸ್ಕಾರ

ನಿಮ್ಮೆಲ್ಲರಿಗೂ ಈ ಸಮಾಲೋಚನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಮೊದಲಿಗೆ ಶುಭಾಶಯಗಳು ಮತ್ತು ಕೃತಜ್ಞತೆಗಳು. ಈ ವೇದಿಕೆಯಲ್ಲಿ ಪ್ರವಾಸಿ ಮತ್ತು ಭಾರತೀಯ ಎರಡೂ ಕಡೆಯ ಅತ್ಯಂತ ಪ್ರತಿಭಾನ್ವಿತರ ಸಮಾಗಮವಾಗಿದೆ. ವೈಶ್ವಿಕ್ ಭಾರತೀಯ ವೈಜ್ಞಾನಿಕ(ವೈಭವ್) ಶೃಂಗಸಭೆ-2020 ಭಾರತ ಮತ್ತು ಜಗತ್ತಿನ ವಿಜ್ಞಾನ ಮತ್ತು ಆವಿಷ್ಕಾರದ ಸಂಭ್ರಮಾಚರಣೆಯಾಗಿದೆ. ನಾನು ಇದನ್ನು ನಿಜವಾದ ಸಂಗಮ ಅಥವಾ ಶ್ರೇಷ್ಠ ಬುದ್ಧಿಜೀವಿಗಳ ಸಮಾಗಮ ಎಂದು ಕರೆಯಲು ಬಯಸುತ್ತೇನೆ. ಇಲ್ಲಿ ನೆರೆದಿರುವವರಿಂದ ಭಾರತ ಮತ್ತು ನಮ್ಮ ಭೂಮಿಯನ್ನು ಸಬಲೀಕರಣಗೊಳಿಸಲು ದೀರ್ಘಾವಧಿಯ ಸಹಯೋಗವನ್ನು ಬಯಸುತ್ತೇನೆ.

ಮಿತ್ರರೇ,

ಇಂದು ತಮ್ಮ ಚಿಂತನೆಗಳು, ಸಲಹೆಗಳು ಮತ್ತು ವಿಶ್ಲೇಷಣೆಗಳನ್ನು ನೀಡುತ್ತಿರುವ ಎಲ್ಲಾ ವೈಜ್ಞಾನಿಕ ಸಮುದಾಯಕ್ಕೆ ನಾನು ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನಿಮ್ಮ ಮಧ್ಯಪ್ರವೇಶದಿಂದ ಹಲವು ವಿಷಯಗಳಲ್ಲಿ ಆಳವಾದ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದೀರಿ. ಬಹುತೇಕರು ಭಾರತೀಯ ಶೈಕ್ಷಣಿಕ ವಲಯ ಮತ್ತು ಸಂಶೋಧನಾ ವ್ಯವಸ್ಥೆ ಹಾಗೂ ವಿದೇಶಿ ಸಹವರ್ತಿಗಳೊಂದಿಗೆ ಹೆಚ್ಚಿನ ಸಹಭಾಗಿತ್ವದ ಅಗತ್ಯತೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದೀರಿ. ಇದು ಈ ಶೃಂಗಸಭೆಯ ಮೂಲಭೂತ ಗುರಿಯೂ ಆಗಿದೆ. ನೀವು ಸಮಾಜದ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ವೈಜ್ಞಾನಿಕ ಸಂಶೋಧನಾ ವಲಯವನ್ನು ಕೊಂಡೊಯ್ಯುವ ಅಗತ್ಯತೆ ಬಗ್ಗೆ ಸರಿಯಾದ ಅಂಶಗಳನ್ನು ಪ್ರಸ್ತಾಪಿಸಿದ್ದೀರಿ. ಅಲ್ಲದೆ ನೀವು ಭಾರತದಲ್ಲಿ ಸಂಶೋಧನೆಗೆ ಪೂರಕ ವ್ಯವಸ್ಥೆ ಸುಧಾರಣೆಗೆ ಕೆಲವು ಉತ್ತಮ ಸಲಹೆಗಳನ್ನು ನೀಡಿದ್ದೀರಿ. ನಿಮ್ಮ ಅನಿಸಿಕೆಗಳಿಗಾಗಿ ನಾನು ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನಿಮ್ಮ ಅಭಿಪ್ರಾಯಗಳನ್ನು ಆಲಿಸಿದ ನಂತರ ಈ ವೈಭವ್ ಶೃಂಗಸಭೆ ಫಲಪ್ರದವಾಗಲಿದೆ ಮತ್ತು ಉತ್ಪಾದನಾ ವಿನಿಮಯವಾಗುವುದು ಎಂಬುದನ್ನು ನಾನು ಕಾಣುತ್ತಿದ್ದೇನೆ.

ಮಿತ್ರರೇ,

          ವಿಜ್ಞಾನ ಮಾನವನ ಪ್ರಗತಿಯ ಹಾದಿಯಲ್ಲಿ ಅತ್ಯಂತ ಪ್ರಮುಖವಾದುದು. ನಾವು ಹಿಂದಿನದನ್ನು ನೋಡಿದರೆ ಮಾನವನ ಇರುವಿಕೆ ಶತಶತಮಾನಗಳಿಂದಲೂ ಇದ್ದು, ನಾವು ಈ ಅವಧಿಯನ್ನು ಹೇಗೆ ವಿಭಜಿಸುತ್ತೇವೆ ? ಶಿಲಾಯುಗ, ಕಂಚಿನ ಯುಗ, ಉಕ್ಕಿನ ಯುಗ, ಕೈಗಾರಿಕಾ ಯುಗ, ಬಾಹ್ಯಾಕಾಶ ಯುಗ ಮತ್ತು ಡಿಜಿಟಲ್ ಯುಗ ಎಂದು ಹೇಳುತ್ತೇವೆ. ಈ ಕೆಲವು ಪದಗಳನ್ನು ನಾವು ಬಳಕೆ ಮಾಡುತ್ತಿದ್ದೇವೆ. ಪ್ರತಿಯೊಂದು ಹಂತದಲ್ಲೂ ತಾಂತ್ರಿಕವಾಗಿ ಕೆಲವೊಂದು ಪ್ರಮುಖ ಆವಿಷ್ಕಾರಗಳ ಮೂಲಕ ಮುಂದುವರಿದಿರುವುದನ್ನು ನಾವು ಸ್ಪಷ್ಟವಾಗಿ ಕಾಣಬಹುದಾಗಿದೆ. ತಂತ್ರಜ್ಞಾನದಲ್ಲಿ ಆಗಿರುವ ಬದಲಾವಣೆಗಳು ನಮ್ಮ ಜೀವನಶೈಲಿಯಲ್ಲೂ ಸಹ ಬದಲಾವಣೆಗಳನ್ನು ತಂದಿದೆ. ಅಲ್ಲದೆ ಅದು ವೈಜ್ಞಾನಿಕ ಕುತೂಹಲವನ್ನೂ ಸಹ ಹೆಚ್ಚಿಸಿದೆ.

ಮಿತ್ರರೇ,

ಭಾರತ ಸರ್ಕಾರ ವಿಜ್ಞಾನ, ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಉತ್ತೇಜಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಸಾಮಾಜಿಕ ಆರ್ಥಿಕ ಬದಲಾವಣೆ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳಿಗೆ ವಿಜ್ಞಾನ ಅತ್ಯಂತ ಮುಖ್ಯವಾಗಿದೆ. ನಾವು ಅದರ ಮೂಲಕ ವ್ಯವಸ್ಥೆಯಲ್ಲಿನ ಜಡತ್ವವನ್ನು ಬೇಧಿಸಿದ್ದೇವೆ. 2014ರಲ್ಲಿ ನಾವು ಹೊಸ ನಾಲ್ಕು ಲಸಿಕೆಗಳನ್ನು ನಮ್ಮ ಲಸಿಕೆ ಕಾರ್ಯಕ್ರಮಕ್ಕೆ ಸೇರ್ಪಡೆಗೊಳಿಸಿದೆವು. ಇದರಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ರೋಟಾ ವೈರಸ್ ಲಸಿಕೆ ಕೂಡ ಸೇರಿದೆ. ನಾವು ದೇಶೀಯ ಲಸಿಕೆ ಉತ್ಪಾದನೆಯನ್ನು ಉತ್ತೇಜಿಸುತ್ತಿದ್ದೇವೆ. ಇತ್ತೀಚೆಗೆ ನಾವು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ನ್ಯುಮೋಕೊಕಲ್ ಲಸಿಕೆಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅಧಿಕೃತ ಅನುಮತಿ ನೀಡಲಾಗಿದೆ. ಈ ಲಸಿಕೆ ಕಾರ್ಯಕ್ರಮಗಳು ಮತ್ತು ನಮ್ಮ ಪೋಷಣ್ ಮಿಷನ್ , ನಮ್ಮ ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕಾಂಶದಲ್ಲಿ ಅಗತ್ಯವಿರುವ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ನಮ್ಮ  ಲಸಿಕೆ ಅಭಿವೃದ್ಧಿಕಾರರು ಅತ್ಯಂತ ಕ್ರಿಯಾಶೀಲವಾಗಿದ್ದು, ಈ ಸಾಂಕ್ರಾಮಿಕದ ಸಮಯದಲ್ಲಿ ಅವರು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿದ್ದಾರೆ. ನಾವು ಕಾಲ ಅತ್ಯಂತ ಮುಖ್ಯ ಎಂಬುದನ್ನು ಅರ್ಥಮಾಡಿಕೊಂಡಿದ್ದೇವೆ.

          2025ರ ವೇಳೆಗೆ ನಾವು ಭಾರತವನ್ನು ಕ್ಷಯರೋಗ ಮುಕ್ತಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಿದ್ದೇವೆ. ಇದು ಜಾಗತಿಕ ಗುರಿಗಿಂತ ಐದು ವರ್ಷಗಳ ಮುಂಚಿತವಾಗಿಯೇ ಗುರಿ ತಲುಪುವ ಉದ್ದೇಶ ಹೊಂದಲಾಗಿದೆ.

ಮಿತ್ರರೇ,

ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ನಾವು ಸೂಪರ್ ಕಂಪ್ಯೂಟಿಂಗ್ ಮತ್ತು ಸೈಬರ್ ಭೌತಿಕ ವ್ಯವಸ್ಥೆಗಳು ಕುರಿತಂತೆ ಪ್ರಮುಖ ಯೋಜನೆಗಳನ್ನು ಆರಂಭಿಸಿದ್ದೇವೆ. ಇವುಗಳು ಕೃತಕ ಬುದ್ಧಿಮತ್ತೆ, ರೋಬೊಟಿಕ್ಸ್, ಸೆನ್ಸಾರ್ ಮತ್ತು ಬಿಗ್ ಡಾಟಾ ಅನಾಲಿಟಿಕ್ಸ್ ಮತ್ತಿತರ ವಲಯಗಳಲ್ಲಿ ಮೂಲಭೂತ ಸಂಶೋಧನೆ ಮತ್ತು ಅಳವಡಿಕೆ ವ್ಯಾಪ್ತಿಯನ್ನು ವಿಸ್ತರಿಸಿವೆ. ಇವು ಭಾರತೀಯ ಉತ್ಪಾದನಾ ವಲಯಕ್ಕೆ ಭಾರೀ ಉತ್ತೇಜನವನ್ನು ತಂದುಕೊಡಲಿವೆ. ಇವುಗಳು ಕೌಶಲ್ಯ ಹೊಂದಿದ ಯುವ ಮಾನವ ಸಂಪನ್ಮೂಲ ಸೃಷ್ಟಿಗೆ ಸಹಕಾರಿಯಾಗಲಿದೆ. ನವೋದ್ಯಮ ವಲಯ ಏಳಿಗೆಯಾಗಲಿದೆ.  ಈ ಯೋಜನೆಯಡಿ ಈಗಾಗಲೇ 25 ತಾಂತ್ರಿಕ ಅನ್ವೇಷಣಾ ತಾಣಗಳನ್ನು ಆರಂಭಿಸಲಾಗಿದೆ.

ಮಿತ್ರರೇ,

ನಮ್ಮ ರೈತರಿಗೆ ಅನುಕೂಲವಾಗುವಂತಹ ವಿಶ್ವದರ್ಜೆಯ ವೈಜ್ಞಾನಿಕ ಸಂಶೋಧನೆಗಳು ನಡೆಯಬೇಕು ಎಂಬುದು ನಮ್ಮ ಬಯಕೆಯಾಗಿದೆ. ನಮ್ಮ ಬೇಳೆಕಾಳುಗಳ ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ನಮ್ಮ ಕೃಷಿ ವೈಜ್ಞಾನಿಕ ಸಮುದಾಯ ಸಾಕಷ್ಟು ಪರಿಶ್ರಮಪಟ್ಟಿದೆ. ಇಂದು ನಾವು ಕೇವಲ ಸಣ್ಣ ಪ್ರಮಾಣದಲ್ಲಿ ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಆಹಾರಧಾನ್ಯಗಳ ಉತ್ಪಾದನೆ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದೆ.

ಮಿತ್ರರೇ,

ಭಾರತ ಇತ್ತೀಚೆಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಮೂರು ದಶಕಗಳ ನಂತರ ಭಾರತದಲ್ಲಿ ನೀತಿ ಜಾರಿಗೊಳಿಸಲಾಗುತ್ತಿದೆ. ಹಲವು ತಿಂಗಳುಗಳ ಕಾಲ ವ್ಯಾಪಕ ಸಮಾಲೋಚನೆಗಳನ್ನು ನಡೆಸಿ, ಈ ನೀತಿಯನ್ನು ರೂಪಿಸಲಾಗಿದೆ. ಈ ರಾಷ್ಟ್ರೀಯ ಶಿಕ್ಷಣ ನೀತಿ ವಿಜ್ಞಾನದ ಬಗೆಗೆ ಕುತೂಹಲವನ್ನು ಹೆಚ್ಚಿಸುವ ಗುರಿ ಹೊಂದಿದೆ. ಅಲ್ಲದೆ ಇದು ತುಂಬಾ ಅಗತ್ಯವಿರುವ ಸಂಶೋಧನಾ ಮತ್ತು ಉತ್ತೇಜನಾ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡಲಿದೆ. ಬಹುಶಿಸ್ತೀಯ ಅಧ್ಯಯನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಬೇಕು ಎಂಬ ನಿಟ್ಟಿನಲ್ಲಿ ನಾವು ಅತ್ಯಂತ ಸಕಾರಾತ್ಮಕವಾಗಿ ನೋಡುತ್ತಿದ್ದೇವೆ. ಮುಕ್ತ ಹಾಗೂ ವಿಸ್ತಾರ ಆಧರಿತ ಶೈಕ್ಷಣಿಕ ವಾತಾವರಣ ಯುವ ಪ್ರತಿಭೆಗಳನ್ನು ಪೋಷಿಸಲು ನೆರವಾಗಲಿದೆ.

ಇಂದು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಹಲವು ವೈಜ್ಞಾನಿಕ ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯತ್ನಗಳಲ್ಲಿ ಭಾರತ ಅತ್ಯಂತ ಪ್ರಮುಖ ಕೊಡುಗೆದಾರ ಮತ್ತು ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಿದೆ. ಅವುಗಳಲ್ಲಿ ಕೆಲವುಗಳೆಂದರೆ ಲೇಸರ್ ಇನ್ ಫೆರೋಮೀಟರ್ ಗ್ರಾವಿಟೇಷನಲ್ ವೇವ್ ಅಬ್ಸರ್ ವೇಟರಿ(ಎಲ್ಐಜಿಒ) – ಇದನ್ನು 2016ರ ಫೆಬ್ರವರಿಯಲ್ಲಿ ಅನುಮೋದಿಸಲಾಯಿತು, ಯುರೋಪಿಯನ್ ಆರ್ಗನೈಜೇಷನ್ ಫಾರ್ ನ್ಯೂಕ್ಲಿಯರ್ ರಿಸರ್ಚ್(ಸಿಇಆರ್ ಎನ್) ಇದಕ್ಕೆ ಭಾರತ 2017ರ ಜನವರಿಯಿಂದ ಸಹಸದಸ್ಯ ರಾಷ್ಟ್ರವಾಗಿದೆ ಮತ್ತು ಅಂತಾರಾಷ್ಟ್ರೀಯ ಥರ್ಮೋ ನ್ಯೂಕ್ಲಿಯರ್ ಪ್ರಯೋಗಾತ್ಮಕ ರಿಯಾಕ್ಟರ್(ಐ-ಟಿಇಆರ್). ಇದಕ್ಕೆ ಬೆಂಬಲವಾಗಿ ಸಂಶೋಧನೆಯನ್ನು ನನ್ನ ತವರು ರಾಜ್ಯ ಗುಜರಾತ್ ನ ಪ್ಲಾಸ್ಮಾ ಸಂಶೋಧನಾ ಕೇಂದ್ರದಲ್ಲಿ ಕೈಗೊಳ್ಳಲಾಗುತ್ತಿದೆ.   

ಮಿತ್ರರೇ,

ಯುವ ಜನರಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಬೆಳೆಸುವುದಕ್ಕೆ ಇದು ಸಕಾಲ. ಅದಕ್ಕಾಗಿ ನಾವು ವಿಜ್ಞಾನದ ಇತಿಹಾಸ ಮತ್ತು ವಿಜ್ಞಾನದ ಐತಿಹ್ಯವನ್ನು ಚೆನ್ನಾಗಿ ತಿಳಿದುಕೊಳ್ಳುವ ಅಗತ್ಯವಿದೆ. ಕಳೆದ ಶತಮಾನದಲ್ಲಿ ವಿಜ್ಞಾನದ ನೆರವಿನಿಂದ ಹಲವು ಐತಿಹಾಸಿಕ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲಾಗಿದೆ. ವೈಜ್ಞಾನಿಕ ಪದ್ಧತಿಗಳ ಮೂಲಕ ನಾವು ಘಟನೆಗಳ ದಿನಾಂಕವನ್ನು ಖಚಿತಪಡಿಸಿಕೊಳ್ಳಲು ನೆರವಾಗಿದೆ ಮತ್ತು ಸಂಶೋಧನೆಗೂ ಸಹಕಾರಿಯಾಗಿದೆ.

ನಾವು ಅತ್ಯಂತ ಶ್ರೀಮಂತ ಭಾರತೀಯ ವಿಜ್ಞಾನವನ್ನು ಬಲವರ್ಧನೆ ಮಾಡಬೇಕಿದೆ. ನೋವಿನ ಸಂಗತಿ ಎಂದರೆ ದೀರ್ಘಕಾಲದಿಂದಲೂ ಹಲವು ಯುವಕರಿಗೆ  ಆಧುನಿಕತೆಗಿಂತಲೂ ಮುಂಚೆ ಇದ್ದಿದ್ದೆಲ್ಲವೂ ಮೂಢನಂಬಿಕೆ ಮತ್ತು ಹಿಂದಿನ ಕತ್ತಲೆಯುಗದ್ದು ಎಂಬ ಸುಳ್ಳುಗಳನ್ನೇ ತಿಳಿಸಿದ್ದೇವೆ. ಇಂದು ಕಂಪ್ಯೂಟರ್, ಪ್ರೋಗ್ರಾಮಿಂಗ್, ಮೊಬೈಲ್ ಮತ್ತು ಅವುಗಳ ಬಳಕೆಯ ಯುಗ. ಆದರೂ ಸಹ ಇದಕ್ಕೆಲ್ಲ ಮೂಲ ಯಾವುದು ಎಂದರೆ ಲೆಕ್ಕಾಚಾರ. ಇದು ಬೈನರಿ ಸಂಕತೇ, ಒಂದು ಮತ್ತು ಸೊನ್ನೆಯ ನಡುವೆ.

ಮಿತ್ರರೇ,

ನಾವು ಶೂನ್ಯದ ಬಗ್ಗೆ ಮಾತನಾಡುವಾಗ ಯಾರೊಬ್ಬರೂ ಭಾರತದ ಬಗ್ಗೆ ಮಾತನಾಡದಿರಲು ಸಾಧ್ಯವೇ ? ಶೂನ್ಯ ಗಣಿತಶಾಸ್ತ್ರ ಮತ್ತು ವಾಣಿಜ್ಯದಲ್ಲಿ ಎಲ್ಲ ಕಡೆ ಲಭ್ಯವಾಗುವಂತೆ ಆಗಿದೆ. ನಮ್ಮ ಯುವ ಜನಾಂಗ ಆ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ. ಬೌದ್ದಾಯನ, ಭಾಸ್ಕರ, ವರಾಹಮಿಹಿರ, ನಾಗಾರ್ಜುನ, ಶುಶೃತ ಮತ್ತು ಹಲವು ಇತರರು ಸತ್ಯೇಂದ್ರನಾಥ್ ಬೋಸ್ ಮತ್ತು ಸರ್ ಸಿವಿ ರಾಮನ್ ಅವರಂತಹ ಆಧುನಿಕ ಯುಗದ ಶ್ರೇಷ್ಠರನ್ನು ತಿಳಿದುಕೊಳ್ಳಬೇಕಾಗಿದೆ. ಈ ಪಟ್ಟಿ ಇನ್ನೂ ಉದ್ದಕ್ಕೆ ಬೆಳೆಯುತ್ತದೆ.

ಮಿತ್ರರೇ,

ನಮ್ಮ ಹಿಂದಿನ ವೈಭವದಿಂದ ಸ್ಫೂರ್ತಿಯನ್ನು ಪಡೆದು ಮತ್ತು ಪ್ರಸ್ತುತ ಸಾಧನೆಗಳಿಂದ ಶಕ್ತಿಯನ್ನು ಪಡೆದು, ನಾವು ಭಾರೀ ಭರವಸೆಯೊಂದಿಗೆ ಮುನ್ನಡೆಯುತ್ತಿದ್ದೇವೆ. ನಾವು ಮುಂದಿನ ತಲೆಮಾರಿನ ಜನಾಂಗಕ್ಕೆ ಸಮೃದ್ಧ ಮತ್ತು ಸುರಕ್ಷಿತೆ ನಿರ್ಮಾಣದ ಗುರಿ ಹೊಂದಿದ್ದೇವೆ. ಭಾರತ ಆತ್ಮನಿರ್ಭರ ಭಾರತ, ಸ್ವಾವಲಂಬಿ ಭಾರತಕ್ಕೆ ಸ್ಪಷ್ಟ ಕರೆಯನ್ನು ನೀಡಿದ್ದು, ಇದರಲ್ಲಿ ಜಾಗತಿಕ ಕಲ್ಯಾಣದ ದೂರದೃಷ್ಟಿಯೂ ಇದೆ. ಈ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾನು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ ಮತ್ತು ನಿಮ್ಮೆಲ್ಲರ ಬೆಂಬಲ ಕೋರುತ್ತೇನೆ. ಇತ್ತೀಚೆಗಷ್ಟೇ ಭಾರತ ಬಾಹ್ಯಾಕಾಶ ವಲಯದಲ್ಲಿ ಗಮನಾರ್ಹ ಸುಧಾರಣೆಗಳನ್ನು ಪರಿಚಯಿಸಿದೆ. ಈ ಸುಧಾರಣೆಗಳು ಉದ್ಯಮ ಮತ್ತು ಶೈಕ್ಷಣಿಕ ವಲಯ ಎರಡಕ್ಕೂ ಭಾರೀ ಅವಕಾಶಗಳನ್ನು ಸೃಷ್ಟಿಸಲಿದೆ. ಭಾರತದ ಕ್ರಿಯಾಶೀಲ ನವೋದ್ಯಮ ಪೂರಕ ವ್ಯವಸ್ಥೆಯ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ನಮ್ಮ ವಿಜ್ಞಾನಿಗಳು, ಆವಿಷ್ಕಾರಿಗಳು ಮತ್ತು ಶೈಕ್ಷಣಿಕ ವಲಯದ ತಜ್ಞರ ಕ್ಷೇತ್ರಕಾರ್ಯವಿಲ್ಲದೆ, ಈ ಎಲ್ಲ ಬೆಳವಣಿಗೆಗಳನ್ನು ಪೂರ್ಣಗೊಳಿಸಲಾಗದು. ನಿಮ್ಮ ಮಾರ್ಗದರ್ಶನದಲ್ಲಿ ನಮ್ಮ ನವೋದ್ಯಮ ವ್ಯವಸ್ಥೆಗೆ ಹೆಚ್ಚಿನ ಲಾಭವಾಗಲಿದೆ.

ಮಿತ್ರರೇ,

          ಜಾಗತಿಕ ವೇದಿಕೆಯಲ್ಲಿ ಅನಿವಾಸಿ ಭಾರತೀಯರು ಭಾರತದ ಅತ್ಯಂತ ಶ್ರೇಷ್ಠ ರಾಯಭಾರಿಗಳಾಗಿದ್ದಾರೆ. ಎಲ್ಲೆಲ್ಲಿ ಅವರುಗಳು ಹೋಗಿದ್ದಾರೋ ಅವರು ಭಾರತೀಯ ಪುರಾಣ ಗಾಥೆಗಳನ್ನು ಕೊಂಡೊಯ್ದಿದ್ದಾರೆ. ಅವರು ತಮ್ಮ ಹೊಸ ಮನೆಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಬೆಳೆಸಿದ್ದಾರೆ. ಅನಿವಾಸಿ ಭಾರತೀಯರು ಹಲವು ವಲಯಗಳಲ್ಲಿ ಯಶಸ್ವಿಯಾಗಿದ್ದಾರೆ. ಶೈಕ್ಷಣಿಕ ವಲಯ ಅದಕ್ಕೊಂದು ಅತ್ಯುತ್ತಮ ಉದಾಹರಣೆಯಾಗಿದೆ. ಬಹುತೇಕ ಅಗ್ರಸ್ಥಾನದಲ್ಲಿರುವ ಜಾಗತಿಕ ವಿಶ್ವವಿದ್ಯಾಲಯಗಳು ಮತ್ತು ಜಗತ್ತಿನ ಬಹುತೇಕ ಅಗ್ರಸ್ಥಾನದಲ್ಲಿರುವ ತಂತ್ರಜ್ಞಾನ ಸಂಸ್ಥೆಗಳು ಭಾರತೀಯ ಪ್ರತಿಭೆಯ ಉಪಸ್ಥಿತಿಯಿಂದಾಗಿ ಹೆಚ್ಚಿನ ಲಾಭವನ್ನು ಮಾಡಿಕೊಂಡಿವೆ.

ಈ ವೈಭವ್ ಮೂಲಕ ನಾವು ನಿಮಗೆ ಶ್ರೇಷ್ಠ ಅವಕಾಶವನ್ನು ಒದಗಿಸಿ ಕೊಡುತ್ತಿದ್ದೇವೆ. ಸಂಪರ್ಕ ಮತ್ತು ಕೊಡುಗೆಗೆ ಉತ್ತಮ ಅವಕಾಶವನ್ನು ನೀಡುತ್ತಿದ್ದೇವೆ. ನಿಮ್ಮ ಪ್ರಯತ್ನಗಳಿಂದ ಭಾರತ ಮತ್ತು ಜಗತ್ತಿಗೆ ಹೆಚ್ಚಿನ ನೆರವಾಗಲಿದೆ. ಭಾರತ ಏಳಿಗೆಯಾದರೆ ವಿಶ್ವವೂ ಕೂಡ ಅದರಿಂದ ಅಭಿವೃದ್ಧಿಯಾಗುತ್ತದೆ. ಇಂತಹ ವಿನಿಮಯಗಳು ಖಂಡಿತವಾಗಿಯೂ ಅತ್ಯಂತ ಉಪಯುಕ್ತವಾಗಲಿವೆ. ಆದರ್ಶ ಸಂಶೋಧನಾ ಪೂರಕ ವ್ಯವಸ್ಥೆ ನಿರ್ಮಾಣಕ್ಕೆ ನಿಮ್ಮ ಪ್ರಯತ್ನಗಳು ಸಹಕಾರಿಯಾಗಲಿವೆ. ಇವು ಸಂಪ್ರದಾಯವನ್ನು ಆಧುನಿಕತೆಯ ಜೊತೆ ಬೆಸೆಯುತ್ತವೆ. ಇವು ನಾವು ಎದುರಿಸುತ್ತಿರುವ ಸವಾಲುಗಳಿಗೆ ಸ್ಥಳೀಯವಾಗಿ ಹಲವು ಪರಿಹಾರಗಳನ್ನು ಒದಗಿಸಿ ಕೊಡಲಿವೆ. ಇತರರಿಗೂ ಕೂಡ ಹಲವು ಏಳಿಗೆಗಳನ್ನು ಒದಗಿಸಿ ಕೊಡಲಿವೆ. ಇದು ಭಾರತದಲ್ಲಿ ಮಹತ್ವದ ತಂತ್ರಜ್ಞಾನಗಳ ಸೃಷ್ಟಿಗೆ ನೆರವಾಗಲಿದೆ.

ಮಿತ್ರರೇ,

ನಾವು ಮಹಾತ್ಮ ಗಾಂಧೀಜಿ ಅವರ ಜನ್ಮದಿನದಂದು ಭೇಟಿ ಮಾಡುತ್ತಿದ್ದೇವೆ. ಬಹುತೇಕ ನೂರು ವರ್ಷಗಳ ಹಿಂದೆ ಅಂದರೆ 1925ರಲ್ಲಿ ಗಾಂಧೀಜಿ ಅವರು ತಿರುವನಂತಪುರದ ಮಹಾರಾಜ ಕಾಲೇಜಿನಲ್ಲಿ ಭಾಷಣ ಮಾಡುತ್ತಿದ್ದಾಗ ಹೇಳಿದ ವಿಷಯ ನನಗೆ ನೆನಪಾಗುತ್ತಿದೆ. ಅವರು ವೈಜ್ಞಾನಿಕ ಪ್ರಗತಿಯ ಫಲ ಬಹುತೇಕ ನಮ್ಮ ಜನರು ವಾಸಿಸುತ್ತಿರುವ ಗ್ರಾಮೀಣ ಭಾರತಕ್ಕೆ ತಲುಪಬೇಕು ಎಂದು ಬಯಸಿದ್ದರು. ಬಾಪು ಅವರು ಅತ್ಯಂತ ವಿಸ್ತಾರವಾದ ವಿಜ್ಞಾನದಲ್ಲಿ ನಂಬಿಕೆಯನ್ನು ಹೊಂದಿದ್ದರು. 1929ರಲ್ಲಿ ಅವರು ವಿಭಿನ್ನ ಪ್ರಯತ್ನ ನಡೆಸಿದ್ದರು. ಅವರು ಜನಸಮುದಾಯದಿಂದ ಹಣ ಸಂಗ್ರಹಣೆಗೆ ಯತ್ನಿಸಿದ್ದರು. ಕಡಿಮೆ ತೂಕದ ಚರಕ ವಿನ್ಯಾಸಗೊಳಿಸುವ ಮಾರ್ಗೋಪಾಯಗಳನ್ನು ಅವರು ಬಯಸಿದ್ದರು. ಅವರು ಗ್ರಾಮಗಳ ಬಗ್ಗೆ ಅಲ್ಲಿನ ಯುವಜನರು, ಬಡವರ ಬಗ್ಗೆ ಕಾಳಜಿ ಹೊಂದಿದ್ದರು ಹಾಗೂ ವಿಜ್ಞಾನದೊಂದಿಗೆ ಹೆಚ್ಚಿನ ಸಾರ್ವಜನಿಕರನ್ನು ಬೆಸೆಯುವ ದೂರದೃಷ್ಟಿ ನಮಗೆ ಸ್ಫೂರ್ತಿದಾಯಕವಾಗಿದೆ. ಇಂದು ಭಾರತದ ಮತ್ತೊಬ್ಬ ಹೆಮ್ಮೆಯ ಪುತ್ರನ ಜಯಂತಿಯೂ ಆಗಿದ್ದು, ಅವರನ್ನು ನಾವು ಸ್ಮರಿಸುತ್ತಿದ್ದೇವೆ. ನಮ್ಮ ಮಾಜಿ ಪ್ರಧಾನಮಂತ್ರಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಅವರ ಜನ್ಮದಿನವಾಗಿದೆ. ಅವರ ವಿನಯ, ಸರಳತೆ ಮತ್ತು ಶ್ರೇಷ್ಠ ನಾಯಕತ್ವ ನಮಗೆ ನೆನಪಾಗುತ್ತದೆ.

ಮಿತ್ರರೇ,

ನಿಮ್ಮ ಎಲ್ಲಾ ಚರ್ಚೆಗಳಿಗೂ ಒಳ್ಳೆಯದಾಗಲಿ ಎಂದು ಶುಭ ಕೋರುತ್ತೇನೆ ಮತ್ತು ನಾವು ವೈಭವ್ ಅನ್ನು ಮತ್ತು ಅದರಿಂದ ಹೊರಬರುವ ವಿಷಯಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂಬ ಭರವಸೆಯನ್ನು ನೀಡುತ್ತೇನೆ. ಈ ಶೃಂಗಸಭೆ ಯಶಸ್ವಿಯಾಗಲಿ. ಕೊನೆಯಲ್ಲಿ ನೀವೆಲ್ಲರೂ ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿವಹಿಸಿ, ಎಲ್ಲ ಅಗತ್ಯ ಮುಂಜಾಗ್ರತೆಗಳನ್ನು ಕೈಗೊಳ್ಳಿ ಮತ್ತು ಅತ್ಯಂತ ಸುರಕ್ಷಿತವಾಗಿರಿ ಎಂದು ಸಲಹೆ ನೀಡಲು ಬಯಸುತ್ತೇನೆ.

ಧನ್ಯವಾದಗಳು, ತುಂಬಾ ತುಂಬಾ ಧನ್ಯವಾದಗಳು

 

*******


(Release ID: 1661617) Visitor Counter : 290