ಪ್ರಧಾನ ಮಂತ್ರಿಯವರ ಕಛೇರಿ

ಐಸಿಸಿಆರ್ ಆಯೋಜಿಸಿದ್ದ ಜವಳಿ ಸಂಪ್ರದಾಯ ಕುರಿತ ಅಂತಾರಾಷ್ಟ್ರೀಯ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ಈ ವೆಬಿನಾರ್‌ ನಲ್ಲಿ ವಿನಿಮಯವಾಗುವ ವಿಚಾರಗಳು ಮತ್ತು ಉತ್ತಮ ರೂಢಿಗಳ ಹಂಚಿಕೆ ಸಹಯೋಗಕ್ಕಾಗಿ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತವೆ: ಪ್ರಧಾನಮಂತ್ರಿ

Posted On: 03 OCT 2020 6:59PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಐಸಿಸಿಆರ್ ಇಂದು ಆಯೋಜಿಸಿದ್ದ ಜವಳಿ ಸಂಪ್ರದಾಯ ಕುರಿತ ಅಂತಾರಾಷ್ಟ್ರೀಯ ವೆಬಿನಾರ್ ಉದ್ದೇಶಿಸಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ,"ಜವಳಿ ಸಂಪ್ರದಾಯಗಳು: ಬಾಂಧವ್ಯದ ನೇಯ್ಗೆ" ಎಂಬ ವಿಷಯದ ಕುರಿತು ವೆಬಿನಾರ್‌ ನಲ್ಲಿ ಭಾಗವಹಿಸಲು ವಿವಿಧ ದೇಶಗಳ ಜನರನ್ನು ಕರೆಸಿರುವ ಪ್ರಯತ್ನಕ್ಕಾಗಿ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಮತ್ತು ಉತ್ತರ ಪ್ರದೇಶದ ವಿನ್ಯಾಸ ಸಂಸ್ಥೆಯನ್ನು ಪ್ರಧಾನಿ ಶ್ಲಾಘಿಸಿದರು. ಜವಳಿ ಕ್ಷೇತ್ರದಲ್ಲಿ ನಮ್ಮ ಇತಿಹಾಸ, ವೈವಿಧ್ಯತೆ ಮತ್ತು ಅಪಾರ ಅವಕಾಶವನ್ನು ನೋಡಬಹುದು ಎಂದು ಅವರು ಹೇಳಿದರು.
ಪ್ರಧಾನಮಂತ್ರಿಯವರು ಭಾರತದ ಜವಳಿ ಸಂಪ್ರದಾಯಗಳಲ್ಲಿನ ಗತಅನುಭವದ ಬಗ್ಗೆ ಮಾತನಾಡಿದರು. ನೈಸರ್ಗಿಕ ಬಣ್ಣದ ಹತ್ತಿ ಮತ್ತು ರೇಷ್ಮೆ ಭಾರತದಲ್ಲಿ ದೀರ್ಘ ಮತ್ತು ಅದ್ಭುತ ಇತಿಹಾಸವನ್ನು ಹೊಂದಿದೆ ಎಂದು ಅವರು ಹೇಳಿದರು. ನಮ್ಮ ಜವಳಿಗಳಲ್ಲಿನ ವೈವಿಧ್ಯತೆಯು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ತೋರಿಸುತ್ತದೆ. ಪ್ರತಿ ಸಮುದಾಯ, ಪ್ರತಿ ಹಳ್ಳಿ ಮತ್ತು ಪ್ರತಿ ರಾಜ್ಯಗಳಲ್ಲಿ ಜವಳಿ ಸಂಪ್ರದಾಯಗಳ ಬಗ್ಗೆ ಏನಾದರೂ ವಿಶಿಷ್ಟತೆ ಇರುತ್ತದೆ ಎಂದು ಅವರು ಹೇಳಿದರು. ನಮ್ಮ ಬುಡಕಟ್ಟು ಸಮುದಾಯಗಳ ಶ್ರೀಮಂತ ಜವಳಿ ಸಂಪ್ರದಾಯಗಳನ್ನು ಅವರು ಎತ್ತಿ ತೋರಿಸಿದರು. ಭಾರತದ ಎಲ್ಲಾ ಜವಳಿ ಸಂಪ್ರದಾಯಗಳಲ್ಲಿ: ಬಣ್ಣ, ವೈಭವ ಮತ್ತು ವಿವರಗಳ ದೃಷ್ಟಿ ಇರುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ನಮ್ಮ ಜವಳಿ ವಲಯ ಸದಾ ಅಕಾಶಗಳನ್ನು ತಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದಲ್ಲಿ ದೇಶೀಯವಾಗಿ ಅತಿ ಹೆಚ್ಚು ಉದ್ಯೋಗ ನೀಡುವ ಕ್ಷೇತ್ರವಾಗಿದೆ. ಅಂತಾರಾಷ್ಟ್ರೀಯವಾಗಿ, ಜವಳಿ ವಿಶ್ವದೊಂದಿಗೆ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಬೆಸೆಯಲು ನೆರವಾಯಿತು. ಜಾಗತಿಕವಾಗಿ ಭಾರತೀಯ ಜವಳಿ ಹೆಚ್ಚಿನ ಮೌಲ್ಯ ಪಡೆದಿದೆ ಮತ್ತು ಸಂಪ್ರದಾಯ, ಕರಕುಶಲ ವಸ್ತುಗಳು, ಉತ್ಪನ್ನಗಳು ಮತ್ತು ಇತರ ಸಂಸ್ಕೃತಿಗಳ ತಂತ್ರಗಳಿಂದ ಇದು ಸಮೃದ್ಧವಾಗಿದೆ ಎಂದು ಹೇಳಿದರು. 
ಈ ಕಾರ್ಯಕ್ರಮವನ್ನು ಗಾಂಧೀಜಿ ಅವರ 150ನೇ ಜಯಂತಿ ಆಚರಣೆ ಅಂಗವಾಗಿ ಆಯೋಜಿಸಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಮಹಾತ್ಮಾ ಗಾಂಧಿ ಅವರು ಜವಳಿ ವಲಯ ಮತ್ತು ಸಾಮಾಜಿಕ ಸಬಲೀಕರಣದ ನಡುವೆ ನಿಕಟ ಸಂಪರ್ಕ ಕಂಡುಕೊಂಡಿದ್ದರು ಮತ್ತು ಸರಳ ಚರಕವನ್ನು ಭಾರತದ ಸ್ವಾತಂತ್ರ್ಯ ಚಳವಳಿಯ ಸಂಕೇತವಾಗಿ ಪರಿವರ್ತಿಸಿದರು ಎಂದರು. ಚರಕ ನಮ್ಮನ್ನು ಒಂದು ರಾಷ್ಟ್ರವಾಗಿ ಒಗ್ಗೂಡಿಸಿತು ಎಂದರು. 
ಜವಳಿ ವಲಯ ಪ್ರಮುಖ ವಲಯವಾಗಿದ್ದು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ನೆರವಾಗುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಸರ್ಕಾರ ನಿರ್ದಿಷ್ಟವಾಗಿ: ಕೌಶಲ್ಯ ಮೇಲ್ದರ್ಜೀಕರಣ, ಆರ್ಥಿಕ ನೆರವು ಮತ್ತು ಇತ್ತೀಚಿನ ತಂತ್ರಜ್ಞಾನದೊಂದಿಗೆ ವಲಯವನ್ನು ಕ್ರೋಡೀಕರಿಸುವ ಬಗ್ಗೆ ಗಮನ ಹರಿಸಿದೆ. ವಿಶ್ವದರ್ಜೆಯ ಉತ್ಪನ್ನಗಳನ್ನು ನಿರಂತರವಾಗಿ ತಯಾರಿಸಲು ನಮ್ಮ ನೇಕಾರರಿಗೆ ನೆರವಾಗಲು, ನಾವು ಜಗತ್ತಿನ ಉತ್ತಮ ರೂಢಿಗಳನ್ನು ಮತ್ತು ನಮ್ಮ ಉತ್ತಮ ಪದ್ಧತಿಗಳನ್ನು ಕಲಿಯಬೇಕು ಎಂದರು. ಈ ವೆಬಿನಾರ್ ನಲ್ಲಿನ ಉತ್ತಮ ಕಲ್ಪನೆಗಳು ಮತ್ತು ರೂಢಿಗಳ ಹಂಚಿಕೆ ಸಹಯೋಗಕ್ಕೆ ಹೊಸ ದಾರಿ ತೋರಲಿದೆ ಎಂದರು.  
ಪ್ರಪಂಚದಾದ್ಯಂತ, ಜವಳಿ ಕ್ಷೇತ್ರದಲ್ಲಿ ಅನೇಕ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಹೀಗಾಗಿ, ಚೈತನ್ಯಶೀಲ ಜವಳಿ ವಲಯವು ಮಹಿಳಾ ಸಬಲೀಕರಣದ ಪ್ರಯತ್ನಗಳಿಗೆ ಬಲವನ್ನು ನೀಡುತ್ತದೆ. ಸವಾಲಿನ ಸಮಯದಲ್ಲಿ ನಮ್ಮ ಭವಿಷ್ಯಕ್ಕಾಗಿ ನಾವು ತಯಾರಿ ಮಾಡಬೇಕಾಗಿದೆ ಎಂದು ಅವರು ಹೇಳಿದರು. ನಮ್ಮ ಜವಳಿ ಸಂಪ್ರದಾಯಗಳು ವೈವಿಧ್ಯತೆ ಮತ್ತು ಹೊಂದಾಣಿಕೆ, ಸ್ವಾವಲಂಬನೆ, ಕೌಶಲ್ಯ ಮತ್ತು ನಾವೀನ್ಯತೆಯಂತಹ ಪ್ರಬಲ ವಿಚಾರಗಳು ಮತ್ತು ತತ್ವಗಳನ್ನು ಪ್ರದರ್ಶಿಸಿವೆ ಎಂದು ಅವರು ಹೇಳಿದರು. ಈ ತತ್ವಗಳು ಈಗ ಮತ್ತಷ್ಟು ಪ್ರಸ್ತುತವಾಗಿವೆ. ಈ ಆಲೋಚನೆಗಳನ್ನು ಮತ್ತಷ್ಟು ಬಲಪಡಿಸಲು ವೆಬಿನಾರ್ ಕೊಡುಗೆ ನೀಡುತ್ತದೆ ಮತ್ತು ಹೆಚ್ಚು ಚೈತನ್ಯಶಾಲಿ ಜವಳಿ ಕ್ಷೇತ್ರಕ್ಕೆ ಸಹಕಾರಿಯಾಗಲಿ ಎಂದು ಅವರು ಹಾರೈಸಿದರು.


***



(Release ID: 1661422) Visitor Counter : 232