ಪ್ರಧಾನ ಮಂತ್ರಿಯವರ ಕಛೇರಿ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಸಬ್ ಮರಿನ್ (ಸಮುದ್ರದೊಳಗಿನ) ಕೇಬಲ್ ಸಂಪರ್ಕ ಉದ್ಘಾಟನೆ ವೇಳೆ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಪಠ್ಯ

Posted On: 10 AUG 2020 12:23PM by PIB Bengaluru

ಭಾರತದ ಸ್ವಾತಂತ್ರ್ಯ ಹೋರಾಟದ ಭೂಮಿ, ಅಂಡಮಾನ್ ಮತ್ತು ನಿಕೋಬಾರ್ ಜನತೆಗೆ ನನ್ನ ಶುಭಾಶಯಗಳು..!..!.

ಅಂಡಮಾನ್ ಮತ್ತು ನಿಕೋಬಾರ್ ನ ಡಜನ್ ಗಟ್ಟಲೆ ದ್ವೀಪಗಳಲ್ಲಿರುವ ಲಕ್ಷಾಂತರ ಮಿತ್ರರಿಗೆ ಮಾತ್ರ ಪ್ರಮುಖ ದಿನವಲ್ಲ, ಇಡೀ ದೇಶಕ್ಕೆ ಒಳ್ಳೆಯ ದಿನವಾಗಿದೆ.

ಮಿತ್ರರೇ,

ಕಳೆದ ಒಂದೂವರೆ ವರ್ಷದ ಹಿಂದೆ, ಸುಭಾಷ್ ಚಂದ್ರ ಬೋಸ್ ಅವರಿಗೆ ನಮಿಸುತ್ತಾ ಸಬ್ ಮರಿನ್ (ಸಮುದ್ರದಾಳದಲ್ಲಿ) ಆಪ್ಟಿಕಲ್ ಫೈಬರ್ ಕೇಬಲ್ ಸಂಪರ್ಕ ಕಾರ್ಯಕ್ಕೆ ಚಾಲನೆ ನೀಡುವ ಅವಕಾಶ ನನಗೆ ದೊರಕಿತ್ತು. ಇದೀಗ ಆ ಕಾರ್ಯ ಪೂರ್ಣಗೊಂಡಿರುವುದು ನನಗೆ ಸಂತೋಷ ತಂದಿದೆ ಮತ್ತು ಆ ಯೋಜನೆಯನ್ನು ಸಮರ್ಪಿಸುತ್ತಿರುವುದು ನನ್ನ ಪಾಲಿನ ಅದೃಷ್ಟವಾಗಿದೆ. ಇಂದಿನಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಬಹುದೊಡ್ಡ ಭಾಗದಲ್ಲಿರುವ ಚೆನ್ನೈನಿಂದ ಪೋರ್ಟ್ ಬ್ಲೇರ್, ಪೋರ್ಟ್ ಬ್ಲೇರ್ ನಿಂದ ಲಿಟ್ಲ್ ಅಂಡಮಾನ್ ಮತ್ತು ಪೋರ್ಟ್ ಬ್ಲೇರ್ ನಿಂದ ಸ್ವರಾಜ್ ದ್ವೀಪಗಳ ನಡುವೆ ಸೇವೆಗಳು ಆರಂಭವಾಗಲಿವೆ.

ಈ ಸೌಕರ್ಯ ಹೊಂದುತ್ತಿರುವುದಕ್ಕಾಗಿ ಮತ್ತು ಸಂಪರ್ಕದಿಂದಾಗಿ ಸಿಗಲಿರುವ ಸೀಮಾತೀತ ಅವಕಾಶಗಳಿಗಾಗಿ ನಾನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಜನರನ್ನು ಅಭಿನಂದಿಸುತ್ತೇನೆ, ನಿಮಗೆ ನನ್ನ ಶುಭಾಶಯಗಳು. ಸ್ವಾತಂತ್ರ್ಯ ದಿನ ಆಗಸ್ಟ್ 15ಕ್ಕೂ ಮುನ್ನ ಅಂಡಮಾನ್ ಜನತೆಗೆ ನೀಡುತ್ತಿರುವ ಪ್ರೀತಿಯ ಉಡುಗೊರೆ ಎಂದು ನಾನು ಭಾವಿಸುತ್ತಿದ್ದೇನೆ.

ಮಿತ್ರರೇ,

ಸುಮಾರು 2300 ಕಿಲೋಮೀಟರ್ ದೂರ ಸಮುದ್ರದಲ್ಲಿ ಕೇಬಲ್ ಅಳವಡಿಸುವ ಕಾಮಗಾರಿ ನಿಗದಿಗಿಂತ ಮುಂಚೆಯೇ ಪೂರ್ಣಗೊಂಡಿರುವುದು ಅತ್ಯಂತ ಶ್ಲಾಘನೀಯ ವಿಚಾರ. ಆಳದ ಸಮುದ್ರದಲ್ಲಿ ಸಮೀಕ್ಷೆ ನಡೆಸುವುದು ಸುಲಭದ ಕೆಲಸವಲ್ಲ. ಅಥವಾ ಕೇಬಲ್ ನ ಗುಣಮಟ್ಟ ಕಾಯ್ದುಕೊಳ್ಳುವುದು ಮತ್ತು ವಿಶೇಷ ಹಡಗುಗಳ ಮೂಲಕ ಕೇಬಲ್ ಅಳವಡಿಸುವುದು ಸುಲಭದ ಕೆಲಸವಾಗಿರಲಿಲ್ಲ. ಅವೆಲ್ಲಕ್ಕೂ ಮಿಗಿಲಾಗಿ ಎತ್ತರದ ಅಲೆಗಳು, ಬಿರುಗಾಳಿ ಮತ್ತು ಮುಂಗಾರು ಮಳೆಯ ಅಡೆತಡೆಗಳು ಬೇರೆ ಇದ್ದವು. ಈ ಯೋಜನೆಯಲ್ಲಿ ಸವಾಲುಗಳು ಅತ್ಯಂತ ಕ್ಲಿಷ್ಟಕರವಾಗಿದ್ದವು. ಅದೇ ಕಾರಣಕ್ಕೆ ಇಷ್ಟು ವರ್ಷಗಳ ಕಾಲ ಈ ಸೌಕರ್ಯ ಅತ್ಯಂತ ಅಗತ್ಯವಾಗಿದ್ದರೂ ಅದನ್ನು ಕೈಗೆತ್ತಿಕೊಳ್ಳಲಾಗಿರಲಿಲ್ಲ. ಆದರೆ ಈಗ ನನಗೆ ಆ ಎಲ್ಲ ಅಡೆತಡೆಗಳನ್ನು ಮೀರಿ ಆ ಕಾರ್ಯ ಪೂರ್ಣಗೊಳಿಸಿರುವುದು ಸಂತೋಷ ತಂದಿದೆ. ಕೊರೊನಾದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲವೂ ಸ್ಥಗಿತಗೊಂಡಿತ್ತು. ಆದರೆ ಈ ಯೋಜನೆ ಪೂರ್ಣಗೊಳ್ಳುವುದು ನಿಲ್ಲಲಿಲ್ಲ.

ಮಿತ್ರರೇ, 

ಈ ಜಾಗದ ಕಠಿಣ ಪರಿಶ್ರಮ ಪಡುವ ಜನರಿಗೆ ಆಧುನಿಕ ದೂರ ಸಂಪರ್ಕ ಒದಗಿಸುವುದು, ದೇಶದ ಹೊಣೆಗಾರಿಕೆಯಾಗಿದೆ ಮತ್ತು ಅದು ದೇಶದ ಭವಿಷ್ಯ ಮತ್ತು ಪ್ರಸ್ತುತತೆಯ ದೃಷ್ಟಿಯಿಂದಲೂ ಅತ್ಯಂತ ಪ್ರಮುಖವಾದುದು. ನಿರ್ದಿಷ್ಟ ಉತ್ಸಾಹಿ ತಂಡ ಮತ್ತು ತಂಡದ ಸ್ಪೂರ್ತಿ ದಶಕಗಳ ಕನಸನ್ನು ಪೂರ್ಣಗೊಳಿಸಿದೆ. ಹಾಗಾಗಿ ಯೋಜನೆಯ ಜೊತೆ ಸಂಬಂಧ ಹೊಂದಿರುವ ಎಲ್ಲ ವ್ಯಕ್ತಿಗಳನ್ನು ನಾನು ಅಭಿನಂದಿಸುತ್ತೇನೆ.

 ಮಿತ್ರರೇ,

ಸಂಪೂರ್ಣ ಬದ್ಧತೆ ಮತ್ತು ಪೂರ್ಣ ಸಾಮರ್ಥ್ಯದಿಂದ ಮಾತ್ರ ಇಂತಹ ಸವಾಲಿನ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯ. ನಾವು ದೆಹಲಿ ಮತ್ತು ಪ್ರತಿಯೊಬ್ಬ ವ್ಯಕ್ತಿ ಹಾಗೂ ದೇಶದ ಇತರೆ ಭಾಗದೊಂದಿಗೆ ಮಾನಸಿಕ ಹಾಗೂ ದೈಹಿಕ ಅಂತರವನ್ನು ದೂರ ಮಾಡಲು ನಿರಂತರವಾಗಿ ಶ್ರಮಿಸುತ್ತಿದ್ದೇವೆ. ದೇಶದಲ್ಲಿನ ಜನರ ಜೀವನವನ್ನು ಸುಗಮಗೊಳಿಸಲು ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರದೇಶಕ್ಕೂ ಆಧುನಿಕ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಅಲ್ಲದೆ ರಾಷ್ಟ್ರದ ಭದ್ರತೆಯನ್ನು ಗಮನದಲ್ಲಿರಿಸಿಕೊಂಡು, ಗಡಿ ಭಾಗದಲ್ಲಿ ಮತ್ತು ಸಮುದ್ರದ ಗಡಿ ಪ್ರದೇಶಗಳಿಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಕ್ಷಿಪ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದೇವೆ.

ಮಿತ್ರರೇ, 

ದೇಶದ ಇತರ ಭಾಗದೊಂದಿಗೆ ಹಾಗೂ ವಿಶ್ವದೊಂದಿಗೆ ಅಂಡಮಾನ್ ಮತ್ತು ನಿಕೋಬಾರ್ ಗೆ ಸಂಪರ್ಕ ಕಲ್ಪಿಸುವ ಈ ಆಪ್ಟಿಕಲ್ ಫೈಬರ್ ಯೋಜನೆ ಜನರ ಜೀವನವನ್ನು ಸುಗಮಗೊಳಿಸುವ ನಮ್ಮ ಬದ್ಧತೆಯ ಪ್ರತೀಕವಾಗಿದೆ. ಇದೀಗ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಜನತೆ ಭಾರತದ ಇತರೆ ಭಾಗದ ಜನರು ಹಾಗೂ ಇಡೀ ಜಗತ್ತಿನ ಜನರು ಪಡೆಯುತ್ತಿರುವಂತೆ ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಮೊಬೈಲ್ ಸಂಪರ್ಕ ಮತ್ತು ವೇಗದ ಅಂತರ್ಜಾಲ ಸಂಪರ್ಕ ಸೇವೆಗಳನ್ನು ಪಡೆಯಲು ಸಾಧ್ಯವಾಗಿದೆ. ಇದೀಗ ಅಂಡಮಾನ್ ಮತ್ತು ನಿಕೋಬಾರ್ ನ ಉದ್ಯಮಿಗಳು, ವರ್ತಕರು, ಯುವಜನರು, ಮಕ್ಕಳು, ಸಹೋದರಿಯರು ಮತ್ತು ಜನ, ದೇಶದ ಇತರೆ ಭಾಗದ ಜನರು ಪಡೆಯುತ್ತಿರುವಂತೆ ಡಿಜಿಟಲ್ ಇಂಡಿಯಾದ ಎಲ್ಲ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಅದು ಆನ್ ಲೈನ್ ನಲ್ಲಿ ಶಿಕ್ಷಣ ಪಡೆಯಬಹುದಾಗಿರಬಹುದು, ಪ್ರವಾಸೋದ್ಯಮ, ಬ್ಯಾಂಕಿಂಗ್, ಶಾಪಿಂಗ್ ಅಥವಾ ವೈದ್ಯಕೀಯ ಸೇವೆಗಳನ್ನು ಪಡೆಯಬಹುದಾಗಿರಬಹುದು. ಅಂಡಮಾನ್ ಮತ್ತು ನಿಕೋಬಾರ್ ನ ಸಾವಿರಾರು ಕುಟುಂಬಗಳು ಆನ್ ಲೈನ್ ಮೂಲಕ ಎಲ್ಲ ಸೇವೆಗಳನ್ನು ಪಡೆಯಬಹುದಾಗಿದೆ.

 ಮಿತ್ರರೇ,

ಅಂಡಮಾನ್ ಪಡೆದಿರುವ ಸೌಕರ್ಯದಿಂದ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೂ ಸಹ ಅನುಕೂಲವಾಗಲಿದೆ. ಇಂದು ಯಾವುದೇ ಪ್ರವಾಸಿ ತಾಣವನ್ನು ತೆಗೆದುಕೊಂಡರೂ ಅಲ್ಲಿ ಉತ್ತಮ ನೆಟ್ ಸಂಪರ್ಕ ಮೊದಲ ಆದ್ಯತೆಯಾಗಿದೆ. ಹಿಂದೆ ದೇಶದ ಹಾಗೂ ಜಗತ್ತಿನ ಪ್ರವಾಸಿಗರು ಮೊಬೈಲ್ ಮತ್ತು ಅಂತರ್ಜಾಲ ಸಂಪರ್ಕ ಸೇವೆ ಕೊರತೆಯಿಂದಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದರು. ಅವರು ನಿರಂತರವಾಗಿ ತಮ್ಮ ಕುಟುಂಬ ಮತ್ತು ಉದ್ಯಮದಿಂದ ದೂರ ಉಳಿಯಬೇಕಾಗಿತ್ತು. ಇದೀಗ ಆ ಸಮಸ್ಯೆ ದೂರವಾಗಲಿದೆ. ಈಗ ಅಂತರ್ಜಾಲ ಸಂಪರ್ಕ ಅತ್ಯುತ್ತಮವಾಗಿದ್ದು, ಜನರು ಈ ಸ್ಥಳಕ್ಕೆ ಬಂದು ದೀರ್ಘ ಕಾಲದವರೆಗೆ ಇರಲಿದ್ದಾರೆ ಎಂಬ ವಿಶ್ವಾಸ ನನಗಿದೆ. ಜನರು ದೀರ್ಘಾವಧಿಗೆ ಮನೆಯಿಂದ ಹೊರಗುಳಿದರೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಸಮುದ್ರ ಹಾಗೂ ಆಹಾರವನ್ನು ಆನಂದಿಸುತ್ತಾರೆ. ಇದು ಉದ್ಯೋಗಗಳ ಮೇಲೆ ಭಾರೀ ಪರಿಣಾಮ ಬೀರಲಿದೆ ಮತ್ತು ಹೊಸ ಬಗೆಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ.

ಮಿತ್ರರೇ,

ಅಂಡಮಾನ್ ಮತ್ತು ನಿಕೋಬಾರ್, ಭಾರತದ ಆರ್ಥಿಕ – ಕಾರ್ಯತಂತ್ರ ಸಹಕಾರ ಮತ್ತು ಸಮನ್ವಯದ ಪ್ರಮುಖ ಕೇಂದ್ರವಾಗಿದೆ.  ಹಿಂದೂ ಮಹಾಸಾಗರ ಸಾವಿರಾರು ವರ್ಷಗಳಿಂದ ಭಾರತದ ವ್ಯಾಪಾರ ಮತ್ತು ಕಾರ್ಯತಂತ್ರ ಶಕ್ತಿಯ ಕೇಂದ್ರವಾಗಿದೆ. ಭಾರತ ಇದೀಗ ಹೊಸ ನೀತಿಯನ್ನು ಅನುಸರಿಸಲಾಗುತ್ತಿದ್ದು, ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ ವ್ಯಾಪಾರ ಮತ್ತು ಸಹಕಾರ ಪಾಲಿಸುತ್ತಿರುವುದರಿಂದ ಅಂಡಮಾನ್ ಮತ್ತು ನಿಕೋಬಾರ್ ಸೇರಿದಂತೆ ನಮ್ಮ ದ್ವೀಪಗಳ ಪ್ರಾಮುಖ್ಯತೆ ಮತ್ತಷ್ಟು ಹೆಚ್ಚಾಗಿದೆ. ಪೂರ್ವ ಕ್ರಿಯಾ ನೀತಿ ಅಡಿ ಪೂರ್ವ ಏಷ್ಯಾ ರಾಷ್ಟ್ರಗಳು ಮತ್ತು ಇತರೆ ದೇಶಗಳೊಂದಿಗೆ ಭಾರತ ಬಲಿಷ್ಠ ಸಂಬಂಧಗಳನ್ನು ಅಭಿವೃದ್ಧಿಗೊಳಿಸಲು ಹೆಚ್ಚಿನ ಅವಕಾಶಗಳಿದ್ದು ಮತ್ತು ಅದು ಇನ್ನಷ್ಟು ವೃದ್ಧಿಯಾಗಲಿದೆ. ನವಭಾರತದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪಾತ್ರವನ್ನು ಬಲವರ್ಧನೆಗೊಳಿಸಲು ಮೂರು ವರ್ಷಗಳ ಹಿಂದೆ ದ್ವೀಪ ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಇಂದು ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಹಲವು ವರ್ಷಗಳಿಂದ ಪೂರ್ಣಗೊಳ್ಳದ ಯೋಜನೆಗಳು ಇದೀಗ ಕ್ಷಿಪ್ರವಾಗಿ ಪೂರ್ಣಗೊಳ್ಳುತ್ತಿರುವುದನ್ನು ನೀವು ಕಾಣಬಹುದು.

ಮಿತ್ರರೇ,

ಅಂಡಮಾನ್ ಮತ್ತು ನಿಕೋಬಾರ್ ನ 12 ದ್ವೀಪಗಳಲ್ಲಿ ಭಾರೀ ಪರಿಣಾಮ ಬೀರುವಂತಹ ಯೋಜನೆಗಳನ್ನು ವಿಸ್ತರಿಸಲಾಗಿದೆ. ಇಂದು ಮೊಬೈಲ್ ಮತ್ತು ಅಂತರ್ಜಾಲ ಸಂಪರ್ಕದ ಬಹುದೊಡ್ಡ ಸಮಸ್ಯೆ ನಿವಾರಣೆಯಾಗಿದೆ. ರಸ್ತೆ ಮತ್ತು ರೈಲು ಸಂಪರ್ಕ ಮಾತ್ರವಲ್ಲದೆ, ಜಲ ಸಂಪರ್ಕ ಬಲವರ್ಧನೆಗೊಳಿಸಿ ಭೌತಿಕ ಸಂಪರ್ಕಕ್ಕೆ ಆದ್ಯತೆ ನೀಡಲಾಗಿದೆ. ಉತ್ತರ ಮತ್ತು ಮದ್ಯ ಅಂಡಮಾನ್ ಅನ್ನು ರಸ್ತೆ ಮೂಲಕ ಸಂಪರ್ಕಿಸುವ ಎರಡು ಪ್ರಮುಖ ಸೇತುವೆಗಳು ಮತ್ತು ರಾಷ್ಟ್ರೀಯ ಹೆದ್ದಾರಿ-4 ವಿಸ್ತರಣೆ ಕಾರ್ಯ ಕ್ಷಿಪ್ರಗತಿಯಲ್ಲಿ ಸಾಗಿದೆ. ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದಲ್ಲಿ 1200 ಪ್ರಯಾಣಿಕರನ್ನು ನಿರ್ವಹಿಸಬಹುದಾದ ಸಾಮರ್ಥ್ಯ ಅಭಿವೃದ್ಧಿಪಡಿಸಲಾಗುತ್ತಿದ್ದು, ಇನ್ನು ಕೆಲವೇ ತಿಂಗಳಲ್ಲಿ ಅದು ಸಿದ್ಧವಾಗಲಿದೆ.

ಇದಲ್ಲದೆ, ದಿಗ್ಲಿಪುರ್, ಕಾರ್ ನಿಕೋಬಾರ್ ಮತ್ತು ಕ್ಯಾಂಪ್ ಬೆಲ್-ಬೇ ಗಳಲ್ಲಿ ವಿಮಾನ ನಿಲ್ದಾಣಗಳು ಕಾರ್ಯಾಚರಣೆಗೆ ಸಿದ್ಧವಾಗಿವೆ. ಸ್ವರಾಜ್ ದ್ವೀಪ, ಶಾಹಿದ್ ದ್ವೀಪ ಮತ್ತು ಲೋಂಗ್ ದ್ವೀಪಗಳಲ್ಲಿ ವಾಟರ್ ಏರೋಡ್ರಮ್ (ನೀರಿನ ಮೇಲೆ ವಿಮಾನ ನಿಲ್ದಾಣ) ಪ್ಯಾಸೆಂಜರ್ ಟರ್ಮಿನಲ್ (ಪ್ರಯಾಣಿಕರ ಟರ್ಮಿನಲ್ ) ಮತ್ತು ತೇಲುವ ಬಂದರು (ಪ್ಲೋಟಿಂಗ್ ಜಟ್ಟಿ)  ಮತ್ತಿತರ ಮೂಲಸೌಕರ್ಯಗಳು ಇನ್ನು ಕೆಲವೇ ತಿಂಗಳಲ್ಲಿ ಸಿದ್ಧವಾಗಲಿವೆ. ಆನಂತರ ಉಡಾನ್ ಯೋಜನೆ ಅಡಿ ಸಮುದ್ರ ವಿಮಾನ ಸೇವೆ ಆರಂಭವಾಗಲಿವೆ. ಇದು ಒಂದು ದ್ವೀಪದಿಂದ ಮತ್ತೊಂದು ದ್ವೀಪಕ್ಕೆ ಸಂಪರ್ಕ ಬಲವರ್ಧನೆ ಮಾಡುವುದಲ್ಲದೆ ಪ್ರಯಾಣದ ಸಮಯವನ್ನು ಕಡಿತಗೊಳಿಸಲಿದೆ.

ಮಿತ್ರರೇ,

ದ್ವೀಪಗಳು ಮತ್ತು ದೇಶದ ಇತರೆ ಭಾಗದ ನಡುವೆ ಜಲಸಂಪರ್ಕ ಸೌಕರ್ಯ ಹೆಚ್ಚಳಕ್ಕೆ ಕೊಚ್ಚಿ ಬಂದರಿನಲ್ಲಿ ನಾಲ್ಕು ಹಡಗುಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅವುಗಳನ್ನು ಮುಂದಿನ ಕೆಲ ತಿಂಗಳುಗಳಲ್ಲಿ ಸೇವೆಗೆ ಒದಗಿಸಲಾಗುವುದು. ಮುಂದಿನ ಒಂದು ವರ್ಷದಲ್ಲಿ ಅದೇ ದ್ವೀಪದಲ್ಲಿ ದೊಡ್ಡ ಹಡಗುಗಳ ದುರಸ್ಥಿ ಕಾರ್ಯವನ್ನೂ ಸಹ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ. ಇದರಿಂದ ನಿಮ್ಮ ಸಮಯ ಉಳಿತಾಯವಾಗುವುದಲ್ಲದೆ ವೆಚ್ಚ ಉಳಿತಾಯವಾಗಲಿದೆ ಮತ್ತು ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಅಲ್ಲದೆ ಇದು ಮೀನುಗಾರಿಕಾ ವಲಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ.

ಮಿತ್ರರೇ, 

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮುಂದಿನ ದಿನಗಳಲ್ಲಿ      ಬಂದರು ಆಧಾರಿತ ಅಭಿವೃದ್ಧಿ ತಾಣವಾಗಿ ರೂಪುಗೊಳ್ಳಲಿವೆ. ಅಂಡಮಾನ್ ಮತ್ತು ನಿಕೋಬಾರ್ ಜಗತ್ತಿನ ಹಲವು ಬಂದರುಗಳಿಗೆ ಅತ್ಯಂತ ಸ್ಪರ್ಧಾತ್ಮಕ ದೂರದಲ್ಲಿದೆ. ಇಂದು ಇಡೀ ವಿಶ್ವ 21ನೇ ಶತಮಾನದಲ್ಲಿ ಯಾವ ದೇಶ ಉತ್ತಮ ಬಂದರು ಜಾಲ ಮತ್ತು ಸಂಪರ್ಕವನ್ನು ಹೊಂದಿದೆಯೋ ಅಂತಹ ರಾಷ್ಟ್ರಗಳ ವ್ಯಾಪಾರ ವೃದ್ಧಿಯಾಗಲಿದೆ ಎಂಬುದನ್ನು ಅರ್ಥ ಮಾಡಿಕೊಂಡಿದೆ. ಅಂತಹ ಸಂದರ್ಭದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಿಂದಾಗಿ ಅಲ್ಲಿ ಅಭಿವೃದ್ಧಿ ಹೊಸ ಎತ್ತರಕ್ಕೆ ಏರಲಿದೆ.

ಮಿತ್ರರೇ,

ಇಂದು ಭಾರತ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ ಮತ್ತು ಅದು ಪ್ರಮುಖ ಜಾಗತಿಕ ಪೂರೈಕೆ ಮತ್ತು ಮೌಲ್ಯಸರಣಿಯ ಪಾಲುದಾರವಾಗಲು, ಜಾಗತಿಕ ಉತ್ಪಾದನಾ ತಾಣವಾಗಲು, ನಮ್ಮ ಜಲಮಾರ್ಗ ಮತ್ತು ಬಂದರು ಜಾಲವನ್ನು ಮತ್ತಷ್ಟು ಬಲವರ್ಧನೆಗೊಳಿಸುವುದು ತುಂಬಾ ಅಗತ್ಯವಾಗಿದೆ. ಕಳೆದ ಆರೇಳು ವರ್ಷಗಳಿಂದೀಚೆಗೆ ಕೈಗೊಂಡಿರುವ ಬಂದರು ಆಧಾರಿತ ಅಭಿವೃದ್ಧಿ ಕೆಲಸ ಕಾರ್ಯಗಳಿಂದ ದೇಶಕ್ಕೆ ಹೊಸ ಶಕ್ತಿ ಸೇರ್ಪಡೆಯಾಗಿದೆ.

 ಇಂದು ನಾವು ದೇಶದಲ್ಲಿ ಸಾಗರದಿಂದ ಸುತ್ತುವರಿದಿರುವ ರಾಜ್ಯಗಳಲ್ಲಿ ಬಂದರುಗಳು ಹಾಗೂ ಜಲ ಮಾರ್ಗಗಳ ಮೂಲಕ ಸಂಪರ್ಕ ಕಲ್ಪಿಸಲು ಕ್ರಮಗಳನ್ನು ಕೈಗೊಂಡಿದ್ದೇವೆ. ಈ ಬಂದರು ಮೂಲಸೌಕರ್ಯಗಳ ಅಭಿವೃದ್ಧಿಗೆ ಇರುವ ಕಾನೂನಿನ ಅಡೆತಡೆಗಳನ್ನು ನಿರಂತರವಾಗಿ ನಿವಾರಿಸಲಾಗುತ್ತಿದೆ. ಸರ್ಕಾರ ಸಾಗರದಲ್ಲಿ ಸಾಗಾಣೆ ನಿಯಮಗಳನ್ನು ಸರಳೀಕರಣಗೊಳಿಸಿ ಸಮುದ್ರ ಮಾರ್ಗದ ಮೂಲಕ ಸುಲಭವಾಗಿ ವಾಣಿಜ್ಯ ವಹಿವಾಟು ನಡೆಸುವುದನ್ನು ಉತ್ತೇಜಿಸುತ್ತಿದೆ. ವಿಶ್ವದ ಅತಿ ದೊಡ್ಡ ಏಕಗವಾಕ್ಷಿ ಪದ್ಧತಿಯನ್ನು ಅಭಿವೃದ್ಧಿಗೊಳಿಸುವ ಕೆಲಸವೂ ಕೂಡ ಪ್ರಗತಿಯಲ್ಲಿದೆ.

ಮಿತ್ರರೇ,

ಅಂತಹ ಹಲವು ಕ್ರಮಗಳಿಂದಾಗಿ ಇದೀಗ ದೇಶದ ಬಂದರು ಜಾಲದ ಸಾಮರ್ಥ್ಯ ಹಾಗೂ ಯೋಗ್ಯತೆ ವೃದ್ಧಿಯಾಗಿದೆ. ಮೂರು ದಶಕಗಳ ಸುದೀರ್ಘ ಕಾಯುವಿಕೆ ನಂತರ ಭಾರತದ ಮೊದಲ ಸಮುದ್ರದಾಳದಲ್ಲಿನ ಗ್ರೀನ್ ಫೀಲ್ಡ್ ಸಮುದ್ರ ಬಂದರು ಪಶ್ಚಿಮ ಕರಾವಳಿಯಲ್ಲಿ ತಲೆ ಎತ್ತಲಿದ್ದು, ಅದಕ್ಕೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಅದೇ ರೀತಿ ಪೂರ್ವ ಕರಾವಳಿಯಲ್ಲಿ ಆಳದ ಬಂದರು ನಿರ್ಮಾಣ ಕಾರ್ಯ ಕ್ಷಿಪ್ರಗತಿಯಲ್ಲಿ ಸಾಗಿದೆ.

ಸುಮಾರು 10ಸಾವಿರ ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಗ್ರೇಟರ್ ನಿಕೋಬಾರ್ ನಲ್ಲಿ ಟ್ರಾನ್ಸ್ ಶಿಪ್ ಮೆಂಟ್ ಪೋರ್ಟ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.ನಮ್ಮ ಗುರಿ ಮೊದಲ ಹಂತದ ಯೋಜನೆಯನ್ನು ಮುಂದಿನ 4-5 ವರ್ಷಗಳಲ್ಲಿ ಪೂರ್ಣಗೊಳಿಸಬೇಕು ಎಂಬುದಾಗಿದೆ. ಒಮ್ಮೆ ಈ ಬಂದರು ಸಿದ್ಧವಾದರೆ, ದೊಡ್ಡ ಹಡಗುಗಳು ಇಲ್ಲಿಂದಲೇ ಕಾರ್ಯನಿರ್ವಹಣೆ ಮಾಡಬಹುದಾಗಿದೆ. ಇದು ಸಾಗರ ವ್ಯಾಪಾರದಲ್ಲಿ ಭಾರತದ ಪಾಲು ಹೆಚ್ಚಳಕ್ಕೆ ಸಹಕಾರಿಯಾಗುವುದಲ್ಲದೆ, ನಮ್ಮ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ.

 ಮಿತ್ರರೇ,

ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಇಂದು ಅಭಿವೃದ್ಧಿಪಡಿಸಿರುವ ಆಧುನಿಕ ಮೂಲಸೌಕರ್ಯ ನೀತಿ ಆರ್ಥಿಕತೆಗೆ ಉತ್ತೇಜನ ನೀಡಲಿದೆ. ಮೀನುಗಾರಿಕೆ, ಮೀನು ಸಾಗಾಣಿಕೆ ಮತ್ತು ಮೀನು ಮರಿ ಉತ್ಪತ್ತಿ ನೀಲಿ ಆರ್ಥಿಕತೆಯ ಪ್ರಮುಖ ಭಾಗವಾಗಿದೆ. ಸಮುದ್ರದಲ್ಲಿ ಮೀನು ಸಾಗಾಣಿಕೆ ಬಗ್ಗೆ  ವಿಶ್ವದೆಲ್ಲೆಡೆ ಚರ್ಚೆ ನಡೆಯುತ್ತಿದೆ. ಹಲವು ರಾಷ್ಟ್ರಗಳ ಅದರ ಸಾಮರ್ಥ್ಯದ ಬಗ್ಗೆ ಅನ್ವೇಷಣೆಯಲ್ಲಿ ತೊಡಗಿವೆ. ಪೋರ್ಟ್ ಬ್ಲೇರ್ ನಲ್ಲಿ ಕೈಗೊಂಡ ಪ್ರಾಯೋಗಿಕ ಯೋಜನೆಗಳ ಫಲಿತಾಂಶ, ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಅವುಗಳನ್ನು ಕೈಗೊಳ್ಳಲು ಉತ್ತೇಜನಕಾರಿಯಾಗಿವೆ. ದ್ವೀಪಗಳಲ್ಲಿ ಅವುಗಳನ್ನು ಬಳೆಸುವ ಬಗ್ಗೆ ಇದೀಗ ಅಧ್ಯಯನಗಳು ಆರಂಭವಾಗಿದೆ. ಈ ಪ್ರಯೋಗಗಳು ದೊಡ್ಡ ಮಟ್ಟದಲ್ಲಿ ಯಶಸ್ವಿಯಾದರೆ, ನಂತರ ಅವುಗಳನ್ನು ದೇಶದ ಇತರೆ ಭಾಗಗಳಿಗೂ ವಿಸ್ತರಿಸಲಾಗುವುದು. ಇದು ನಮ್ಮ ಮೀನುಗಾರರಿಗೆ ವಿಶೇಷ ರೀತಿಯಲ್ಲಿ ಅನುಕೂಲವಾಗಲಿದೆ. ಈ ದಶಕದಲ್ಲಿ ನಮ್ಮ ಪ್ರಯತ್ನಗಳು ಅಂಡಮಾನ್-ನಿಕೋಬಾರ್ ನಲ್ಲಿ ಹೊಸ ಸೌಕರ್ಯಗಳನ್ನು ಒದಗಿಸುವುದಷ್ಟೇ ಅಲ್ಲದೆ, ಜಗತ್ತಿನ ಇತರೆ ಜನರಿಗೂ ನೆರವಾಗಲಿದೆ ಮತ್ತು ಜಾಹತಿಕ ಪ್ರವಾಸಿ ನಕ್ಷೆಯಲ್ಲಿ ಪ್ರಮುಖ ತಾಣವೊಂದು ಸ್ಥಾನ ಪಡೆಯಲಿದೆ.

ಆಧುನಿಕ ಮೊಬೈಲ್ ಫೋನ್ ಮತ್ತು ಅಂತರ್ಜಾಲ ಸಂಪರ್ಕ ಪಡೆಯುತ್ತಿರುವುದಕ್ಕಾಗಿ ಅಂಡಮಾನ್ ಮತ್ತು ನಿಕೋಬಾರ್ ಜನತೆಗೆ ನಾನು ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ. ಇದೀಗ ಕೊರೊನಾ ಸಾಂಕ್ರಾಮಿಕದ ನಡುವೆಯೇ, ನೀವು ಸುರಕ್ಷಿತವಾಗಿರಿ ಮತ್ತು ಆರೋಗ್ಯದಿಂದಿರಿ ಎಂದು ನಾನು ಪ್ರಾರ್ಥಿಸುತ್ತೇನೆ. ನಿಮ್ಮ ಕುಟುಂಬಗಳೂ ಕೂಡ ಸುರಕ್ಷಿತವಾಗಿರಲಿ ಎಂದು ನಾವು ಆಶಿಸುತ್ತೇನೆ. ಕೊರೊನಾದ ಈ ಕಾಲದಲ್ಲಿ ಸದಾ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಅಥವಾ ಎರಡು ಗಜ ಅಂತರ ಕಾಯ್ದುಕೊಳ್ಳಿ ಮತ್ತು ಮುನ್ನಡೆಯಿರಿ.

ಆಗಸ್ಟ್ 15ಕ್ಕೆ ಮುನ್ನ ಈ ಸ್ವಾತಂತ್ರ್ಯ ಹೋರಾಟದ ನೆಲದಿಂದ ನಿಮಗೆ ನಮಿಸುವ ಅವಕಾಶ ನನಗೆ ಲಭಿಸಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ನಡೆಯುತ್ತಿರುವ ಈ ಕಾರ್ಯಕ್ರಮದ ಸಂದರ್ಭದಲ್ಲಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ಉಜ್ವಲ ಭವಿಷ್ಯದೊಂದಿಗೆ ಮುನ್ನಡೆಯಿರಿ ಎಂದು ನಾನು ನಿಮಗೆ ಆಹ್ವಾನ ನೀಡುತ್ತೇನೆ.  

ತುಂಬಾ ಧನ್ಯವಾದಗಳು..! 

****



(Release ID: 1648220) Visitor Counter : 442