ಪ್ರಧಾನ ಮಂತ್ರಿಯವರ ಕಛೇರಿ
ಪಾರದರ್ಶಕ ತೆರಿಗೆ ವ್ಯವಸ್ಥೆ- ಪ್ರಾಮಾಣಿಕರಿಗೆ ಗೌರವ ಸಲ್ಲಿಕೆ” ಕಾರ್ಯಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಇಂಗ್ಲೀಷ್ ಅವತರಣಿಕೆ.
Posted On:
13 AUG 2020 12:38PM by PIB Bengaluru
ದೇಶದಲ್ಲಿ ನಡೆಯುತ್ತಿರುವ ರಾಚನಿಕ ಸುಧಾರಣೆಗಳ ಪ್ರಕ್ರಿಯೆ ಇಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. 21 ನೇ ಶತಮಾನದ ಹೊಸ “ಪಾರದರ್ಶಕ ತೆರಿಗೆ ವ್ಯವಸ್ಥೆ- ಪ್ರಾಮಾಣಿಕರಿಗೆ ಗೌರವ ಸಲ್ಲಿಸುವಿಕೆ” ಯನ್ನು ಇಂದು ಕಾರ್ಯಾರಂಭ ಮಾಡಲಾಗಿದೆ.
ಈ ವೇದಿಕೆ ಪ್ರಮುಖ ಸುಧಾರಣೆಗಳಾದ ಮುಖರಹಿತ ಮೌಲ್ಯಮಾಪನ, ಮುಖರಹಿತ ಮೇಲ್ಮನವಿ ಮತ್ತು ತೆರಿಗೆದಾರರ ಸನ್ನದುಗಳನ್ನು ಒಳಗೊಂಡಿದೆ. ಮುಖರಹಿತ ಮೌಲ್ಯಮಾಪನ ಮತ್ತು ತೆರಿಗೆದಾರರ ಸನ್ನದುಗಳು ಇಂದಿನಿಂದ ಜಾರಿಗೆ ಬಂದಿವೆ. ಆದರೆ ಮುಖರಹಿತ ಮೇಲ್ಮನವಿ ಸೌಲಭ್ಯವು ದೀನ ದಯಾಳ ಉಪಾಧ್ಯಾಯ ಅವರ ಜನ್ಮ ವರ್ಷಾಚರಣೆ ದಿನವಾದ ಸೆಪ್ಟೆಂಬರ್ 25 ರಿಂದ ದೇಶಾದ್ಯಂತ ನಾಗರಿಕರಿಗೆ ಲಭ್ಯವಾಗಲಿದೆ. ಈಗ ತೆರಿಗೆ ವ್ಯವಸ್ಥೆಯು ಮುಖರಹಿತವಾಗುವ ಮೂಲಕ ಅದು ತೆರಿಗೆದಾರರಲ್ಲಿ ನ್ಯಾಯೋಚಿತ ಮತ್ತು ಭಯರಹಿತ ವ್ಯವಸ್ಥೆಯ ಬಗ್ಗೆ ವಿಶ್ವಾಸ ಮೂಡಿಸಿದೆ.
ನಾನು ಇದಕ್ಕಾಗಿ ಎಲ್ಲ ತೆರಿಗೆದಾರರನ್ನು ಅಭಿನಂದಿಸುತ್ತೇನೆ ಮತ್ತು ಆದಾಯ ತೆರಿಗೆ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ಕಳೆದ 6 ವರ್ಷಗಳಲ್ಲಿ , ಬ್ಯಾಂಕಿಂಗ್ ಸೌಲಭ್ಯ ಹೊಂದಿರದವರಿಗೆ ಬ್ಯಾಂಕಿಂಗ್ ಸವಲತ್ತು ಒದಗಿಸಿಕೊಡುವುದರತ್ತ ಮತ್ತು ನಿಧಿ ಒದಗಿಸಿಲ್ಲದವರಿಗೆ ನಿಧಿ ಪೂರೈಕೆ ಮಾಡುವತ್ತ ನಮ್ಮ ಗಮನ ಕೇಂದ್ರೀಕೃತವಾಗಿತ್ತು. ಇಂದು ನಾವು ಹೊಸ ಪ್ರಯಾಣವನ್ನು ಆರಂಭ ಮಾಡಿದ್ದೇವೆ, ಅಂದರೆ ಪ್ರಾಮಾಣಿಕರನ್ನು ಗೌರವಿಸುವುದು. ದೇಶದ ಪ್ರಾಮಾಣಿಕ ತೆರಿಗೆದಾರ ರಾಷ್ಟ್ರ ನಿರ್ಮಾಣದಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತಾನೆ. ದೇಶದ ಪ್ರಾಮಾಣಿಕ ತೆರಿಗೆದಾರರ ಬದುಕು ಸುಲಭವಾದಷ್ಟು , ಆತ ಮುನ್ನಡೆಯುತ್ತಾನೆ, ಆಗ ದೇಶವೂ ಅಭಿವೃದ್ದಿ ಹೊಂದುತ್ತದೆ. ಮತ್ತು ಮುನ್ನಡೆಯುತ್ತದೆ.
ಸ್ನೇಹಿತರೇ,
ಇಂದು ಆರಂಭಗೊಳ್ಳುತ್ತಿರುವ ಹೊಸ ವ್ಯವಸ್ಥೆಗಳು ಮತ್ತು ಸೌಲಭ್ಯಗಳು, “ಕನಿಷ್ಟ ಸರಕಾರ ಗರಿಷ್ಟ ಆಡಳಿತ” ಎಂಬ ನಮ್ಮ ಬದ್ದತೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿವೆ. ಇದು ದೇಶವಾಸಿಗಳ ಬದುಕಿನಲ್ಲಿ ಸರಕಾರದ ಮಧ್ಯಪ್ರವೇಶದ ಪಾತ್ರವನ್ನು ಕನಿಷ್ಟ ಪ್ರಮಾಣಕ್ಕೆ ಇಳಿಸುವ ದಿಕ್ಕಿನಲ್ಲಿ ಬಹಳ ದೊಡ್ಡ ಹೆಜ್ಜೆಯಾಗಿದೆ.
ಸ್ನೇಹಿತರೇ,
ಇಂದು, ಪ್ರತಿಯೊಂದು ಕಾನೂನು ಮತ್ತು ನೀತಿಯನ್ನು ಅಧಿಕಾರ ಕೇಂದ್ರಿತ ಧೋರಣೆಯಿಂದ ವಿರಹಿತಗೊಳಿಸಿ ಅದನ್ನು ಜನ ಕೇಂದ್ರಿತ ಮತ್ತು ಜನ ಸ್ನೇಹಿಯಾಗಿ ಕೈಗೊಳ್ಳಲಾಗುತ್ತಿದೆ. ಇದು ನವ ಭಾರತದ ಹೊಸ ಆಡಳಿತ ಮಾದರಿ ಮತ್ತು ಇದರಿಂದಾಗಿ ದೇಶವು ಅನುಕೂಲಕರವಾದ ಫಲಿತಾಂಶಗಳನ್ನು ಪಡೆಯುತ್ತಿದೆ. ಇಂದು ಪ್ರತಿಯೊಬ್ಬರೂ ಅಡ್ಡಹಾದಿಗಳು ಸರಿಯಾದುದಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ತಪ್ಪು ದಾರಿಗಳನ್ನು ಅನುಸರಿಸುವುದು ಸರಿಯಾದುದಲ್ಲ ಎಂಬುದನ್ನೂ ತಿಳಿದುಕೊಂಡಿದ್ದಾರೆ. ಆ ಶಕೆ ಮುಗಿದು ಹೋಗಿದೆ. ಈಗ ದೇಶದಲ್ಲಿ ವಾತಾವರಣ ಪ್ರತಿಯೊಂದನ್ನೂ ಕರ್ತವ್ಯವನ್ನು ಮುಂಚೂಣಿಯಲ್ಲಿಟ್ಟುಕೊಂಡು, ಅದಕ್ಕೆ ಗರಿಷ್ಟ ಆದ್ಯತೆ ನೀಡಿ ನಡೆಸಲಾಗುತ್ತಿದೆ.
ಈಗ ಪ್ರಶ್ನೆ ಏನೆಂದರೆ : ಈ ಬದಲಾವಣೆ ಹೇಗೆ ಆಗುತ್ತಿದೆ ?. ಇದು ಕಟ್ಟು ನಿಟ್ಟಿನಿಂದಾಗಿ ಆಗುತ್ತಿದೆಯೇ ?, ಅದು ಶಿಕ್ಷೆಯಿಂದಾಗಿ ಆಗುತ್ತಿದೆಯೇ ?. ಇಲ್ಲ; ಖಂಡಿತವಾಗಿಯೂ ಇಲ್ಲ. ಇದಕ್ಕೆ ನಾಲ್ಕು ಪ್ರಮುಖ ಕಾರಣಗಳಿವೆ.
ಮೊದಲನೆಯದಾಗಿ ನೀತಿ –ಚಾಲಿತ ಆಡಳಿತ. ನೀತಿ ಸ್ಪಷ್ಟವಾಗಿದ್ದರೆ ಮತ್ತು ಪಾರದರ್ಶಕವಾಗಿದ್ದರೆ, ಮಸುಕು (ಬೂದು ಪ್ರದೇಶಗಳು) ಪ್ರದೇಶಗಳು ಕನಿಷ್ಟ ಪ್ರಮಾಣಕ್ಕೆ ಇಳಿಯುತ್ತವೆ ಮತ್ತು ಅದರಿಂದಾಗಿ ವ್ಯಾಪಾರೋದ್ಯಮದಲ್ಲಿ ವಿವೇಚನಾಧಿಕಾರದ ವ್ಯಾಪ್ತಿಯೂ ಕಡಿಮೆಯಾಗುತ್ತದೆ.
ಎರಡನೆಯದಾಗಿ: ಸಾಮಾನ್ಯ ಮನುಷ್ಯರ ಪ್ರಾಮಾಣಿಕತೆಯಲ್ಲಿ ನಂಬಿಕೆ ಇಡುವಿಕೆ.
ಮೂರನೇಯದಾಗಿ: ವಿಸ್ತಾರ ವ್ಯಾಪ್ತಿಯಲ್ಲಿ ತಂತ್ರಜ್ಞಾನದ ಬಳಕೆಯಿಂದ ಸರಕಾರದ ವ್ಯವಸ್ಥೆಗಳಲ್ಲಿ ಮಾನವ ಮಧ್ಯಪ್ರವೇಶ ಕನಿಷ್ಟ ಪ್ರಮಾಣಕ್ಕೆ ಇಳಿದಿರುವುದು.
ಇಂದು , ತಂತ್ರಜ್ಞಾನ ಮಧ್ಯಪ್ರವೇಶವನ್ನು ಎಲ್ಲೆಡೆಯೂ ಬಳಸಲಾಗುತ್ತಿದೆ. ಅದು ಸರಕಾರಿ ಖರೀದಿ ಇರಲಿ, ಸರಕಾರದ ಟೆಂಡರ್ ಇರಲಿ ಅಥವಾ ಸರಕಾರಿ ಸೇವೆಗಳ ವಿತರಣೆ ಇರಲಿ, ಅಲ್ಲಿ ತಂತ್ರಜ್ಞಾನ ಬಳಕೆಯಾಗುತ್ತಿದೆ.
ಮತ್ತು ನಾಲ್ಕನೇಯದಾಗಿ : ದಕ್ಷತೆ , ಸಮಗ್ರತೆ ಮತ್ತು ಸಂವೇದನಾಶೀಲತೆಯ ಗುಣಗಳಿಗೆ ನಮ್ಮ ಸರಕಾರದ ಯಂತ್ರದಲ್ಲಿ ಮತ್ತು ಅಧಿಕಾರಶಾಹಿಯಲ್ಲಿ ಸೂಕ್ತ ಪ್ರತಿಫಲ ಸಿಗುತ್ತಿದೆ.
ಸ್ನೇಹಿತರೇ,
ಸುಧಾರಣೆಗಳ ಬಗ್ಗೆ ನಾವಿಲ್ಲಿ ಬಹಳಷ್ಟು ಮಾತನಾಡುತ್ತಿದ್ದ ಕಾಲವೊಂದಿತ್ತು. ಕೆಲವೊಮ್ಮೆ ಕೆಲವು ನಿರ್ಧಾರಗಳನ್ನು ಕಡ್ಡಾಯದ ಕಾರಣಕ್ಕೆ ತೆಗೆದುಕೊಳ್ಳಲಾಗುತ್ತಿತ್ತು. ಕೆಲವೊಮ್ಮೆ ನಿರ್ಧಾರಗಳನ್ನು ಒತ್ತಡದ ಕಾರಣದಿಂದ ಕೈಗೊಳ್ಳಲಾಗುತ್ತಿತ್ತು. ಮತ್ತು ಅವುಗಳನ್ನು ಸುಧಾರಣೆಗಳು ಎಂದು ಬಿಂಬಿಸಲಾಗುತ್ತಿತ್ತು. ಇದರ ಫಲಿತಾಂಶವಾಗಿ ನಮಗೆ ಉದ್ದೇಶಿತ ಫಲಿತಾಂಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಈ ರೀತಿಯ ಚಿಂತನೆ ಮತ್ತು ಧೋರಣೆ ಎರಡೂ ಬದಲಾಗಿವೆ.
ನಮಗೆ ಸುಧಾರಣೆಗಳೆಂದರೆ ಒಂದರ್ಧ ಊಟವಲ್ಲ, ಬದಲು ಅದು ನೀತಿ ಆಧಾರಿತವಾಗಿರುವಂತಹದ್ದು. ಮತ್ತು ಅದು ಸಮಗ್ರವಾಗಿರಬೇಕು ಹಾಗು ಒಂದು ಸುಧಾರಣೆ ಇನ್ನೊಂದು ಸುಧಾರಣೆಗೆ ತಳಹದಿಯಾಗಿರಬೇಕು ಅಥವಾ ಹೊಸ ಸುಧಾರಣೆಯೊಂದಕ್ಕೆ ಹಾದಿ ಮಾಡಿಕೊಡುವಂತಹದಾಗಿರಬೇಕು. ಮತ್ತು ಒಂದು ಸುಧಾರಣೆಯ ಬಳಿಕ ನಾವು ವಿರಮಿಸುವಂತಾಗಬಾರದು. ಅದು ನಿರಂತರ ಪ್ರಕ್ರಿಯೆ. ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ 1500 ಕ್ಕೂ ಅಧಿಕ ಹಳೆಯ ಕಾಯ್ದೆಗಳನ್ನು ತೆಗೆದುಹಾಕಲಾಗಿದೆ.
ಕೆಲವು ವರ್ಷಗಳ ಹಿಂದೆ ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣಗಳ ಪಟ್ಟಿಯಲ್ಲಿ ಭಾರತವು 134 ನೇ ಸ್ಥಾನದಲ್ಲಿತ್ತು. ಇಂದು ಭಾರತವು 63 ನೇ ಸ್ಥಾನದಲ್ಲಿದೆ. ಇಂತಹ ದೊಡ್ಡ ನೆಗೆತದ ಹಿಂದೆ ವಿವಿಧ ಸುಧಾರಣೆಗಳು, ಮತ್ತು ವಿವಿಧ ನಿಯಮಗಳು ಹಾಗು ಕಾನೂನುಗಳ ಬದಲಾವಣೆಯು ಕೆಲಸ ಮಾಡಿದೆ. ಸುಧಾರಣೆಗಳಿಗೆ ಸಂಬಂಧಿಸಿ ಭಾರತದ ಈ ಬದ್ಧತೆಯಿಂದಾಗಿ ಭಾರತದಲ್ಲಿ ಹೂಡಿಕೆ ಮಾಡುವ ವಿದೇಶೀಯರ ವಿಶ್ವಾಸವೂ ಸತತ ವೃದ್ದಿಯಾಗಿದೆ. ಕೊರೊನಾ ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲೂ ಭಾರತದೊಳಗೆ ದಾಖಲೆ ಪ್ರಮಾಣದ ಎಫ್.ಡಿ.ಐ. ಹರಿವು ಇದಕ್ಕೆ ಒಂದು ಉದಾಹರಣೆ.
ಸ್ನೇಹಿತರೇ,
- ತೆರಿಗೆ ವ್ಯವಸ್ಥೆಯಲ್ಲಿ ಮೂಲಭೂತ ಮತ್ತು ರಾಚನಿಕ ಸುಧಾರಣೆಗಳು ಅವಶ್ಯವಾಗಿದ್ದವು ಯಾಕೆಂದರೆ, ನಮ್ಮ ಹಾಲಿ ವ್ಯವಸ್ಥೆಯು ಬ್ರಿಟಿಷರ ಅವಧಿಯಲ್ಲಿ ರೂಪಿಸಲ್ಪಟ್ಟದ್ದು ಮತ್ತು ನಿಧಾನವಾಗಿ ಬೆಳೆದು ಬಂದಂತಹದ್ದು. ಸ್ವಾತಂತ್ರ್ಯದ ಬಳಿಕ ಅಲ್ಲಲ್ಲಿ ಬಹಳಷ್ಟು ಬದಲಾವಣೆಗಳಾದವು, ಆದರೆ ಇಡೀ ವ್ಯವಸ್ಥೆಯ ಗುಣ ಧರ್ಮ ಹಿಂದಿನಂತೆಯೇ ಉಳಿದು ಬಂದಿತ್ತು.
ಇದರ ಪರಿಣಾಮವಾಗಿ, ರಾಷ್ಟ್ರ ನಿರ್ಮಾಣದಲ್ಲಿಯ ಪ್ರಮುಖ ಆಧಾರಸ್ಥಂಭಗಳಲ್ಲಿ ಒಂದಾಗಿರುವ , ದೇಶವನ್ನು ಬಡತನ ರೇಖೆಯಿಂದ ಮೇಲೆತ್ತಲು ಕೊಡುಗೆ ನೀಡುತ್ತಿರುವ ತೆರಿಗೆದಾರರು ಸದಾ ಪ್ರಶ್ನಿಸಲ್ಪಡುತ್ತಿದ್ದರು. ಆದಾಯ ತೆರಿಗೆ ನೊಟೀಸುಗಳು ಡಿಕ್ರಿಗಳಂತಾಗಿದ್ದವು. ದೇಶಕ್ಕೆ ವಂಚಿಸಿದ ಹಲವಾರು ಮಂದಿಯನ್ನು ಗುರುತಿಸುವ ಕಾರಣಕ್ಕಾಗಿ ಇತರ ಹಲವಾರು ಮಂದಿ ಸಂಕಷ್ಟಕ್ಕೆ ಸಿಲುಕುತ್ತಿದ್ದರು. ತೆರಿಗೆ ಪಾವತಿದಾರರ ಸಂಖ್ಯೆ ಹೆಮ್ಮೆಯಿಂದ ಹೆಚ್ಚುತ್ತಿರಬೇಕಾದ ಸಮಯದಲ್ಲಿ ಸಂಘರ್ಷದ ಮತ್ತು ಮೌನಸಮ್ಮತಿಯ ವ್ಯವಸ್ಥೆಯೊಂದು ಉದಯಿಸಿತು.ಇಂತಹ ಇಕ್ಕಟ್ಟಿನಲ್ಲಿ ಕಪ್ಪು ಮತ್ತು ಬಿಳಿ ಹಣ ಉದ್ಯಮವೂ ಬೆಳೆಯಿತು. ಈ ವ್ಯವಸ್ಥೆಯು ಪ್ರಾಮಾಣಿಕ ವ್ಯಾಪಾರೋದ್ಯಮಿಗಳನ್ನು ,ಉದ್ಯೋಗದಾತರನ್ನು ಮತ್ತು ದೇಶದ ಯುವ ಶಕ್ತಿಯನ್ನು ಪ್ರಾಮಾಣಿಕ ವ್ಯಾಪಾರೋದ್ಯಮಕ್ಕೆ ಪ್ರೋತ್ಸಾಹಿಸುವುದಕ್ಕೆ ಬದಲಾಗಿ ಅದನ್ನು ಹೊಸಕಿ ಹಾಕಿತು.
ಸ್ನೇಹಿತರೇ,
ಸಂಕೀರ್ಣತೆ ಇದ್ದಲ್ಲಿ ನಿಯಮ ಪಾಲನೆ ಬಹಳ ಕಷ್ಟ. ನಿಯಮಗಳ ಸಂಖ್ಯೆ ಸಾಧ್ಯವಾದಷ್ಟೂ ಕಡಿಮೆ ಇರಬೇಕು. ಕಾನೂನು ಪಾರದರ್ಶಕವಾಗಿದ್ದಲ್ಲಿ , ಆಗ ತೆರಿಗೆ ಪಾವತಿದಾರರು ಮತ್ತು ದೇಶ ಸಂತೋಷದಿಂದಿರಲು ಸಾಧ್ಯವಾಗುತ್ತದೆ. ಈ ಕಾರ್ಯವನ್ನು ಕೆಲ ಕಾಲದಿಂದ ಮಾಡಲಾಗುತ್ತಿದೆ. ಜಿ.ಎಸ್.ಟಿ.ಯು ಡಜನ್ನಿನಷ್ಟು ತೆರಿಗೆಗಳನ್ನು ಸ್ಥಳಾಂತರಿಸಿದೆ. ರಿಟರ್ನ್ಸ್ ಸಲ್ಲಿಕೆ ಮತ್ತು ಮರುಪಾವತಿವರೆಗೆ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಆನ್ ಲೈನ್ ವ್ಯವಸ್ಥೆಗೆ ಒಳಪಡಿಸಲಾಗಿದೆ.
ಹೊಸ ತೆರಿಗೆ ಸ್ಲ್ಯಾಬ್ ವ್ಯವಸ್ಥೆಯು ಅನಗತ್ಯ ಕಾಗದ ಮತ್ತು ದಾಖಲೆಗಳ ಸಲ್ಲಿಕೆಯ ಕಡ್ಡಾಯ ನಿಯಮದಿಂದ ವಿಮುಕ್ತವಾಗಿದೆ. ಅದಕ್ಕಿಂತ ಹೆಚ್ಚಾಗಿ ಸರಕಾರವು 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವಿವಾದಗಳಿಗಾಗಿ ಹೈಕೋರ್ಟು ಮತ್ತು ಸುಪ್ರೀಂ ಕೋರ್ಟುಗಳ ಮೆಟ್ಟಲು ಹತ್ತುತ್ತಿತ್ತು. ಈಗ ಈ ಮಿತಿಯನ್ನು ಹೈಕೋರ್ಟಿಗಾದರೆ 1 ಕೋ.ರೂ. ಗಳಿಗೆ ಮತ್ತು ಸುಪ್ರೀಂ ಕೋರ್ಟಿಗಾದರೆ 2 ಕೋ. ರೂ. ಗಳಿಗೆ ಏರಿಸಲಾಗಿದೆ. ಹೆಚ್ಚಿನ ಪ್ರಕರಣಗಳನ್ನು ನ್ಯಾಯಾಲಯಗಳಿಂದ ಹೊರಗೆ “ವಿವಾದ್ ಸೇ ವಿಶ್ವಾಸ್ “ ನಂತಹ ಯೋಜನೆಗಳ ಮೂಲಕ ಬಗೆಹರಿಸಲು ಪ್ರಯತ್ನಗಳನ್ನು ನಡೆಸಲಾಗುತ್ತದೆ. ಇದರ ಪರಿಣಾಮವಾಗಿ ಸುಮಾರು 3 ಲಕ್ಷ ಪ್ರಕರಣಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಪರಿಹರಿಸಲ್ಪಟ್ಟಿವೆ.
ಸ್ನೇಹಿತರೇ,
ಪ್ರಕ್ರಿಯೆಗಳಲ್ಲಿ ಸಂಕೀರ್ಣತೆಯನ್ನು ಕಡಿಮೆ ಮಾಡುವುದಲ್ಲದೆ, ದೇಶದಲ್ಲಿ ತೆರಿಗೆಯನ್ನು ಕೂಡಾ ಕಡಿಮೆ ಮಾಡಲಾಗಿದೆ. 5 ಲಕ್ಷ ರೂಪಾಯಿ ಆದಾಯಕ್ಕೆ ತೆರಿಗೆ ಈಗ ಶೂನ್ಯದಲ್ಲಿದೆ. ಉಳಿದ ಹಂತಗಳಲ್ಲಿಯೂ ತೆರಿಗೆ ಕಡಿಮೆ ಮಾಡಲಾಗಿದೆ. ಸಾಂಸ್ಥಿಕ ತೆರಿಗೆಗೆ ಸಂಬಂಧಿಸಿ ವಿಶ್ವದಲ್ಲಿಯೇ ಅತ್ಯಂತ ಕಡಿಮೆ ತೆರಿಗೆ ವಿಧಿಸುತ್ತಿರುವ ರಾಷ್ಟ್ರ ನಮ್ಮದಾಗಿದೆ.
ಸ್ನೇಹಿತರೇ,
ನಮ್ಮ ತೆರಿಗೆ ವ್ಯವಸ್ಥೆ ಯಾವುದೇ ಅಡೆತಡೆಗಳಿಂದ , ಕಿರುಕುಳಗಳಿಂದ ಮುಕ್ತವಾಗಿರಬೇಕು , ಮುಖರಹಿತವಾಗಿರಬೇಕು ಮತ್ತು ಯಾತನಾರಹಿತವಾಗಿರಬೇಕು ಎಂಬುದನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಸಾಗಿವೆ. ತೊಂದರೆಗಳಿಲ್ಲದ, ಅಡ್ಡಿ ಆತಂಕಗಳಿಲ್ಲದ ಎಂದರೆ ತೆರಿಗೆ ಆಡಳಿತವು ಪ್ರತಿಯೊಬ್ಬ ತೆರಿಗೆದಾರನ ಸಮಸ್ಯೆಯನ್ನು ಸಂಕೀರ್ಣಗೊಳಿಸುವುದಕ್ಕೆ ಬದಲು ಅದನ್ನು ಪರಿಹರಿಸುವತ್ತ ಕೆಲಸ ಮಾಡಬೇಕು. ಯಾತನಾರಹಿತ ಎಂದರೆ ತಂತ್ರಜ್ಞಾನದಿಂದ ಹಿಡಿದು ನಿಯಮಗಳವರೆಗೆ ಎಲ್ಲವೂ ಸರಳೀಕರಣ. ಮುಖರಹಿತ ಎಂದರೆ ಯಾರು ತೆರಿಗೆ ಪಾವತಿದಾರ ಮತ್ತು ಯಾರು ತೆರಿಗೆ ಅಧಿಕಾರಿ ಎಂಬ ಬಗ್ಗೆ ಯಾರೊಬ್ಬರೂ ಆತಂಕ ಹೊಂದಿರದೇ ಇರುವಂತಹ ಸ್ಥಿತಿ. ಈ ಸುಧಾರಣೆಗಳು ಇಂದಿನಿಂದ ಜಾರಿಗೆ ಬರುತ್ತಿವೆ. ಮತ್ತು ಈ ಚಿಂತನಾಕ್ರಮವನ್ನು ಮುಂದಕ್ಕೆ ಕೊಂಡೊಯ್ಯಲಿವೆ.
ಸ್ನೇಹಿತರೇ,
ಇದುವರೆಗೆ , ನಾವು ವಾಸವಾಗಿರುವಂತಹ ನಗರದಲ್ಲಿಯ ತೆರಿಗೆ ಇಲಾಖೆಯು ತೆರಿಗೆಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ನಿಭಾಯಿಸುತ್ತಿತ್ತು. ಪರಿಶೀಲನೆ ಇರಲಿ, ನೋಟಿಸು, ಸಮೀಕ್ಷೆ ಅಥವಾ ವಶ ಪಡಿಸಿಕೊಳ್ಳುವಿಕೆ ಇರಲಿ, ಅದೇ ನಗರದ ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಅಧಿಕಾರಿಯ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿತ್ತು. ಅದು ಇನ್ನು ಕೊನೆಗೊಳ್ಳುತ್ತದೆ. ತಂತ್ರಜ್ಞಾನದ ಸಹಾಯದಿಂದ ಅದು ಬದಲಾಗಲಿದೆ.
ಪ್ರಕರಣಗಳ ಪರಿಶೀಲನೆ ದೇಶದ ಯಾವುದೇ ಭಾಗದಲ್ಲಿರುವ ಯಾವುದೇ ಅಧಿಕಾರಿಗೆ ಯಾದೃಚ್ಚಿಕವಾಗಿ ಹಂಚಿ ಹೋಗಲಿದೆ. ಉದಾಹರಣೆಗೆ , ಮುಂಬಯಿ ತೆರಿಗೆದಾರರ ರಿಟರ್ನ್ ಸಲ್ಲಿಕೆಯ ಪ್ರಕರಣ ಮುಂಬಯಿಯ ಅಧಿಕಾರಿಗೆ ಹೋಗುವುದಿಲ್ಲ, ಆದರೆ ಅದು ಚೆನ್ನೈಯ ಮುಖರಹಿತ ತಂಡಕ್ಕೆ ಹೋಗುವ ಸಾಧ್ಯತೆ ಇದೆ. ಮತ್ತು ಅಲ್ಲಿಂದ ಹೊರಡುವ ಆದೇಶ ಜೈಪುರ ಅಥವಾ ಬೆಂಗಳೂರಿನಂತಹ ನಗರಗಳ ತಂಡಗಳು ಪರಾಮರ್ಶಿಸುವ ಸಾಧ್ಯತೆಯೂ ಇದೆ. ಈಗ ಅದು ಮುಖ ರಹಿತ ತಂಡ. ಯಾರನ್ನೂ ಸೇರಿಸಿಕೊಳ್ಳಬೇಕು ಎಂಬುದನ್ನು ಯಾದೃಚ್ಚಿಕವಾಗಿ ನಿರ್ಧರಿಸಲಾಗುತ್ತದೆ !. ಮತ್ತು ಅದರಲ್ಲಿ ಪ್ರತೀ ವರ್ಷವೂ ಬದಲಾವಣೆಗಳಾಗುತ್ತವೆ.
ಸ್ನೇಹಿತರೇ,
ಈ ವ್ಯವಸ್ಥೆಯೊಂದಿಗೆ , ತೆರಿಗೆಪಾವತಿದಾರರು ಮತ್ತು ಆದಾಯ ತೆರಿಗೆ ಇಲಾಖೆ/ ಕಚೇರಿಗಳು ಪ್ರಭಾವಕ್ಕೆ ಒಳಗಾಗುವಂತಹ ಯಾವುದೇ ಸಾಧ್ಯತೆ ಇಲ್ಲ. ಎಲ್ಲರೂ ಅವರವರ ಬಾಧ್ಯತೆಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಾರೆ.ಇಲಾಖೆಗೆ ಇರುವ ಪ್ರಯೋಜನ ಎಂದರೆ ಅಲ್ಲಿ ಅನಗತ್ಯ ವಿವಾದಗಳು ಇರಲಾರವು. ವರ್ಗಾವಣೆಯ ಮೇಲೆ ಅನಗತ್ಯ ಶಕ್ತಿ ವ್ಯಯ ಇರಲಾರದು ಮತ್ತು ಅದನ್ನು ತಪ್ಪಿಸಬಹುದು. ಅದೇ ರೀತಿ ತೆರಿಗೆ ಸಂಬಂಧಿ ವಿಷಯಗಳ ತನಿಖೆ, ಮೇಲ್ಮನವಿ ಕೂಡಾ ಈಗ ಮುಖರಹಿತ.
ಸ್ನೇಹಿತರೇ,
ತೆರಿಗೆದಾರರ ಸನ್ನದು ಕೂಡಾ ದೇಶದ ಅಭಿವೃದ್ದಿ ಪ್ರಯಾಣದಲ್ಲಿಯ ಪ್ರಮುಖ ಹೆಜ್ಜೆ. ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ತೆರಿಗೆದಾರರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಸಂಹಿತೆಯಾಗಿಸಲಾಗಿದೆ. ತೆರಿಗೆದಾರರಿಗೆ ಈ ಪರಿಯ ಗೌರವ ಮತ್ತು ರಕ್ಷಣೆ ನೀಡಿದ ಕೆಲವೇ ಕೆಲವು ರಾಷ್ಟ್ರಗಳ ಸಾಲಿಗೆ ಭಾರತವೂ ಸೇರಿದೆ.
ತೆರಿಗೆದಾರರಿಗೆ ಈಗ ನ್ಯಾಯೋಚಿತ ಮತ್ತು ಸೌಜನ್ಯಶೀಲ ವರ್ತನೆಯ ಭರವಸೆ ನೀಡಲಾಗಿದೆ. ಅಂದರೆ ಆದಾಯ ತೆರಿಗೆ ಇಲಾಖೆಯು ಈಗ ತೆರಿಗೆದಾರರ ಗೌರವ ಮತ್ತು ಸೂಕ್ಷ್ಮತ್ವದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಈಗ ಇಲಾಖೆಯು ತೆರಿಗೆ ಪಾವತಿದಾರರ ಮೇಲೆ ನಂಬಿಕೆ ಇಡಬೇಕಾಗಿದೆ, ಇಲಾಖೆಯು ಆತನ ಮೇಲೆ ಅನಗತ್ಯವಾಗಿ ಅಥವಾ ಆಧಾರರಹಿತವಾಗಿ ಸಂಶಯಪಡುವಂತಿಲ್ಲ. ಅಲ್ಲೇನಾದರೂ ಸಂಶಯಗಳಿದ್ದಲ್ಲಿ , ತೆರಿಗೆದಾರರಿಗೆ ಮೇಲ್ಮನವಿ ಸಲ್ಲಿಕೆಗೆ ಮತ್ತು ಪರಿಷ್ಕರಣೆಗೆ ಕೋರಿಕೆ ಸಲ್ಲಿಸುವುದಕ್ಕೆ ಅವಕಾಶ ಇದೆ.
ಸ್ನೇಹಿತರೇ,
ಹಕ್ಕುಗಳು ಯಾವಾಗಲೂ ಬದ್ಧತೆಗಳೊಂದಿಗೆ ಮತ್ತು ಕರ್ತವ್ಯಗಳೊಂದಿಗೆ ಬರುತ್ತವೆ. ಈ ಸನ್ನದು ಕೂಡಾ ಕೆಲವು ಅವಶ್ಯಕತೆಗಳನ್ನು ತೆರಿಗೆ ಪಾವತಿದಾರರಿಂದ ನಿರೀಕ್ಷಿಸುತ್ತದೆ. ತೆರಿಗೆದಾರ ತೆರಿಗೆ ಪಾವತಿಸುವುದು ಅಥವಾ ಸರಕಾರ ತೆರಿಗೆ ವಿಧಿಸುವುದು ಹಕ್ಕಿನ ವಿಷಯ ಅಲ್ಲ. ಅದು ಉಭಯ ಕಡೆಯವರ ಜವಾಬ್ದಾರಿ. ತೆರಿಗೆದಾರರು ತೆರಿಗೆ ಪಾವತಿಸಬೇಕು ಯಾಕೆಂದರೆ ವ್ಯವಸ್ಥೆ ಅದರಿಂದಾಗಿ ನಡೆಯುತ್ತದೆ ಮತ್ತು ದೇಶವು ಮಿಲಿಯಾಂತರ ಜನರ ಒಳಿತಿನ ಕರ್ತವ್ಯವನ್ನು ಅದರಿಂದಾಗಿ ನಿಭಾಯಿಸಬಹುದಾಗಿದೆ.
ಈ ತೆರಿಗೆಯಿಂದಾಗಿಯೇ , ತೆರಿಗೆದಾರರು ಉತ್ತಮ ಸೌಲಭ್ಯಗಳನ್ನು ಮತ್ತು ಪ್ರಗತಿಗಾಗಿ ಉತ್ತಮ ಮೂಲಸೌಕರ್ಯಗಳನ್ನು ಪಡೆಯುತ್ತಾರೆ. ಇದೇ ವೇಳೆ ತೆರಿಗೆದಾರರು ಪಾವತಿಸಿದ ತೆರಿಗೆಯ ಪ್ರತೀ ರೂಪಾಯಿಯನ್ನು ಸೂಕ್ತ ರೀತಿಯಲ್ಲಿ ವಿನಿಯೋಗಿಸುವುದು ಸರಕಾರದ ಜವಾಬ್ದಾರಿ. ಇಂತಹ ಸ್ಥಿತಿಯಲ್ಲಿ, ತೆರಿಗೆದಾರರು ಅನುಕೂಲತೆ ಮತ್ತು ಭದ್ರತೆಗಳನ್ನು ಪಡೆಯುವಾಗ , ದೇಶ ಕೂಡಾ ಪ್ರತೀ ತೆರಿಗೆದಾರರು ಅವರ ಬಾಧ್ಯತೆಗಳ ಬಗ್ಗೆ, ಕರ್ತವ್ಯದ ಬಗ್ಗೆ ಹೆಚ್ಚು ಜಾಗೃತಿ ಹೊಂದಿರಬೇಕು ಎಂದು ಬಯಸುತ್ತದೆ.
ಸ್ನೇಹಿತರೇ,
ದೇಶವಾಸಿಗಳ ನಂಬಿಕೆಯ ಪರಿಣಾಮ ಏನು ಎಂಬುದನ್ನು ತಿಳಿದುಕೊಳ್ಳುವುದೂ ಅವಶ್ಯ. ಅದು ತಳಮಟ್ಟದಲ್ಲಿ ಕಾಣಸಿಗುತ್ತಿದೆ. 2012-13 ರಲ್ಲಿ ಸಲ್ಲಿಕೆಯಾದ ಎಲ್ಲಾ ತೆರಿಗೆ ರಿಟರ್ನ್ ಗಳಲ್ಲಿ ಪರಿಶೀಲನೆ ಪ್ರಮಾಣ 0.94 % ಇದ್ದಿತ್ತು. 2018-19 ರಲ್ಲಿ ಈ ಪ್ರಮಾಣ 0.26 % ಗೆ ಇಳಿಕೆಯಾಗಿದೆ. ಅಂದರೆ ಪ್ರಕರಣಗಳ ಪರಿಶೀಲನೆ , ತನಿಖೆ ನಾಲ್ಕು ಪಟ್ಟು ಇಳಿಕೆಯಾಗಿದೆ ಮತ್ತು ಅದು ಬದಲಾವಣೆ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ತೋರಿಸುತ್ತದೆ.
ಸ್ನೇಹಿತರೇ,
ಕಳೆದ 6 ವರ್ಷಗಳಲ್ಲಿ , ಭಾರತವು, ತೆರಿಗೆ ಆಡಳಿತದಲ್ಲಿ ಹೊಸ ಆಡಳಿತ ಮಾದರಿಯನ್ನು ಸಾಕ್ಷೀಕರಿಸುತ್ತಿದೆ. ನಾವು ಸಂಕೀರ್ಣತೆಯನ್ನು ಕಡಿಮೆ ಮಾಡಿದ್ದೇವೆ, ತೆರಿಗೆಗಳನ್ನು ಇಳಿಸಿದ್ದೇವೆ. , ವಿವಾದಗಳನ್ನು ಕಡಿಮೆ ಮಾಡಿದ್ದೇವೆ. ಪಾರದರ್ಶಕತೆಯನ್ನು ಹೆಚ್ಚಿಸಿದ್ದೇವೆ. ತೆರಿಗೆ ಬದ್ದತೆಯನ್ನು, ಅನುಸರಣೆಯನ್ನು ಹೆಚ್ಚಿಸಿದ್ದೇವೆ. ತೆರಿಗೆ ಪಾವತಿದಾರರ ವಿಶ್ವಾಸವನ್ನು ಹೆಚ್ಚಿಸಿದ್ದೇವೆ.
ಸ್ನೇಹಿತರೇ,
ಈ ಎಲ್ಲಾ ಪ್ರಯತ್ನಗಳ ನಡುವೆ ಕಳೆದ 6-7 ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಜನರ ಸಂಖ್ಯೆಯಲ್ಲಿ ಸುಮಾರು 2.5 ಕೋಟಿಯಷ್ಟು ಹೆಚ್ಚಳವಾಗಿದೆ. ಮತು 130 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಇದು ಬಹಳ ಕಡಿಮೆ ಪ್ರಮಾಣ ಎಂಬುದೂ ಅಷ್ಟೇ ಸತ್ಯವಾದ ಸಂಗತಿಯಾಗಿದೆ. ನಾನು ನನ್ನ ದೇಶವಾಸಿಗಳಲ್ಲಿ ಮನವಿ ಮಾಡುತ್ತೇನೆ ಏನೆಂದರೆ ತೆರಿಗೆ ಪಾವತಿ ಮಾಡಲು ಶಕ್ತರಿರುವವರು ಮತ್ತು ವಿವಿಧ ಕೈಗಾರಿಕಾ ಸಂಘಟನೆಗಳನ್ನು ನಡೆಸುತ್ತಿರುವವರು ಈ ಬಗ್ಗೆ ಯೋಚಿಸಿ ಎಂಬುದಾಗಿ. ಈ ವಿಷಯದ ಬಗ್ಗೆ ದೇಶವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಸ್ವಾವಲಂಬಿ ಭಾರತಕ್ಕೆ ಆತ್ಮ ವಿಮರ್ಶೆ ಅತ್ಯಂತ ಅವಶ್ಯ ಮತ್ತು ಅನಿವಾರ್ಯ. ಮತ್ತು ಈ ಜವಾಬ್ದಾರಿ ಬರೇ ತೆರಿಗೆ ಇಲಾಖೆಯದ್ದು ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯನದ್ದು. ಇದುವರೆಗೆ ತೆರಿಗೆ ಜಾಲದಲ್ಲಿ ಇರದ, ಆದರೆ ತೆರಿಗೆ ಪಾವತಿಸಲು ಶಕ್ತರಿರುವವರೆಲ್ಲ, ಸ್ವಯಂಪ್ರೇರಣೆಯಿಂದ ಮುಂದೆ ಬರಬೇಕು . ಆಗಸ್ಟ್ 15 ಕ್ಕೆ ಇನ್ನೆರಡು ದಿನಗಳಷ್ಟೇ ಇವೆ. ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರನ್ನು ಸ್ಮರಿಸಿಕೊಳ್ಳೋಣ. ನೀವು ಕೂಡಾ ಕೊಡುಗೆ ನೀಡಿದ ಭಾವನೆ ಅನುಭವಿಸಲಿದ್ದೀರಿ.
ಬನ್ನಿ , ನವ ಭಾರತದ ನಮ್ಮ ಆಶಯವನ್ನು, ಸ್ವಾವಲಂಬಿ ಭಾರತದ ಕನಸನ್ನು ಈಡೇರಿಸೋಣ. ಈ ನಂಬಿಕೆಯ , ಹಕ್ಕುಗಳ ಮತ್ತು ಕರ್ತವ್ಯಗಳ ವೇದಿಕೆಯ ಸ್ಪೂರ್ತಿಯನ್ನು ಗೌರವಿಸೋಣ. ದೇಶದ ಈಗಿನ ಮತ್ತು ಭವಿಷ್ಯದ ತೆರಿಗೆ ಪಾವತಿದಾರರಿಗೆ ಮಗದೊಮ್ಮೆ ಅಭಿನಂದನೆಗಳು. ನಾನವರಿಗೆ ಶುಭವನ್ನು ಹಾರೈಸುತ್ತೇನೆ ಮತ್ತು ಇದೊಂದು ಪ್ರಮುಖ ನಿರ್ಧಾರ !. ನಾನು ಆದಾಯ ತೆರಿಗೆ ಅಧಿಕಾರಿಗಳಿಗೆ ಸಾಕಷ್ಟು ಧನ್ಯವಾದಗಳನ್ನು ಹೇಳಲಾರೆ.ಪ್ರತಿಯೊಬ್ಬ ತೆರಿಗೆದಾರನೂ ಆದಾಯ ತೆರಿಗೆ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಹೇಳಬೇಕು ಯಾಕೆಂದರೆ ಅವರು ಅವರನ್ನು ನಿಯಂತ್ರಿಸಿಕೊಂಡಿರುವ ರೀತಿಗಾಗಿ. ಅವರು ಅವರದೇ ಶಕ್ತಿ ಮತ್ತು ಹಕ್ಕುಗಳನ್ನು ಕತ್ತರಿಸಿಕೊಂಡಿದ್ದಾರೆ. ಈ ರೀತಿಯಲ್ಲಿ ಮುಂದೆ ಬರುವ ಆದಾಯ ತೆರಿಗೆ ಅಧಿಕಾರಿಗಳ ಬಗ್ಗೆ ಯಾರು ತಾನೆ ಹೆಮ್ಮೆ ಪಡದಿರಲು ಸಾಧ್ಯ !. ಪ್ರತಿಯೊಬ್ಬ ದೇಶವಾಸಿಯೂ ಈ ಬಗ್ಗೆ ಹೆಮ್ಮೆ ಹೊಂದಿರಬೇಕು. ಮತ್ತು ಈ ಹಿಂದೆ ವ್ಯವಸ್ಥೆಯ ಕಾರಣದಿಂದಾಗಿ ಜನರು ತೆರಿಗೆ ಪಾವತಿಯ ಪಥವನ್ನು ಅನುಸರಿಸಲು ಇಷ್ಟಪಡದೇ ಇದ್ದಿರಬಹುದು. ಈಗ ತೆರಿಗೆ ಪಾವತಿಯನ್ನು ಆಕರ್ಷಕ ಮಾಡುವ ಪಥವನ್ನು ರೂಪಿಸಲಾಗಿದೆ ಮತ್ತು ನಾವು ಈ ವ್ಯವಸ್ಥೆಯ ಲಾಭವನ್ನು ಪಡೆದುಕೊಳ್ಳೋಣ. ಭವ್ಯ ಭಾರತವನ್ನು ನಿರ್ಮಾಣ ಮಾಡೋಣ ಮತ್ತು ಈ ವ್ಯವಸ್ಥೆಯಲ್ಲಿ ಸೇರಲು ಮುಂದೆ ಬನ್ನಿ. ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ ಮತ್ತು ಶುಭವನ್ನು ಕೋರುತ್ತೇನೆ. ದೇಶಕ್ಕೆ ಉಜ್ವಲ ಭವಿಷ್ಯವನ್ನು ರೂಪಿಸುವುದಕ್ಕಾಗಿ ಬಹಳ ಧೀರ್ಘ ಪರಿಣಾಮ ಬೀರಬಲ್ಲಂತಹ, ಹಲವು ಧನಾತ್ಮಕ ನಿರ್ಧಾರಗಳನ್ನು ಕೈಗೊಂಡುದಕ್ಕಾಗಿ ನಾನು ನಿರ್ಮಲಾ ಜೀ ಮತ್ತು ಅವರ ಇಡೀಯ ತಂಡಕ್ಕೆ ಮತ್ತೊಮ್ಮೆ ಧನ್ಯವಾದಗಳನ್ನು ಹೇಳುತ್ತೇನೆ. ಮತ್ತೊಮ್ಮೆ ನಾನು ಎಲ್ಲರನ್ನೂ ಅಭಿನಂದಿಸುತ್ತೇನೆ , ಎಲ್ಲರಿಗೂ ಧನ್ಯವಾದಗಳು
ಬಹಳ ಬಹಳ ಧನ್ಯವಾದಗಳು.
****
(Release ID: 1648206)
Visitor Counter : 280
Read this release in:
Marathi
,
Hindi
,
Manipuri
,
Bengali
,
Punjabi
,
Odia
,
Telugu
,
Urdu
,
Gujarati
,
English
,
Assamese
,
Tamil
,
Malayalam