ಪ್ರಧಾನ ಮಂತ್ರಿಯವರ ಕಛೇರಿ

ಐಸಿಎಂಆರ್ ಪ್ರಯೋಗಾಲಯಗಳಲ್ಲಿನ ಅತ್ಯಾಧುನಿಕ ಸಮಗ್ರ ಕೋವಿಡ್-19 ಪರೀಕ್ಷಾ ಸೌಕರ್ಯಗಳ ಉದ್ಘಾಟನೆ ವೇಳೆ ಪ್ರಧಾನಿ ಅವರು ಮಾಡಿದ ಭಾಷಣದ ಪಠ್ಯ

Posted On: 27 JUL 2020 6:05PM by PIB Bengaluru

ನಮಸ್ಕಾರ,

ಕೊರೊನಾ ಸಾಂಕ್ರಾಮಿಕದ ವಿರುದ್ಧ ಕೋಟ್ಯಾಂತರ ಭಾರತೀಯ ಪ್ರಜೆಗಳು ಅತ್ಯಂತ ಧೈರ್ಯದಿಂದ ಹೋರಾಟ ನಡೆಸುತ್ತಿದ್ದಾರೆ.

ಇಂದು ಉದ್ಘಾಟಿಸಿರುವ ಅತ್ಯಾಧುನಿಕ ಸಮಗ್ರ ಪರೀಕ್ಷಾ ಸೌಕರ್ಯಗಳಿಂದಾಗಿ ಪಶ್ಚಿಮಬಂಗಾಳ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಕೊರೊನಾ ವಿರುದ್ಧದ ಹೋರಾಟ ಇನ್ನಷ್ಟು ಬಲವರ್ಧನೆಗೊಳ್ಳಲಿದೆ.

ಮಿತ್ರರೇ,

ದೆಹಲಿ-ಎನ್ ಸಿ ಆರ್, ಮುಂಬೈ ಮತ್ತು ಕೋಲ್ಕತ್ತಾ ಆರ್ಥಿಕ ಚಟುವಟಿಕೆಯ ಪ್ರಮುಖ ತಾಣಗಳಾಗಿವೆ. ಲಕ್ಷಾಂತರ ಯುವಕರು ತಮ್ಮ ಭವಿಷ್ಯ ಅರಸಿ ಮತ್ತು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ದೇಶದ ನಾನಾ ಭಾಗಗಳಿಂದ ನಗರಗಳಿಗೆ ಆರಂಭಿಸುತ್ತಾರೆ. ಆದರೆ ಇದೀಗ ಮೂರು ಜಾಗಗಳಲ್ಲಿ ಹಾಲಿ ಇರುವ ಪರೀಕ್ಷಾ ಸಾಮರ್ಥ್ಯದ ಜೊತೆ ಸುಮಾರು 10,000ಕ್ಕೂ ಅಧಿಕ ಪರೀಕ್ಷಾ ಸಾಮರ್ಥ್ಯ ಸೇರ್ಪಡೆಯಾಗಿದೆ.

ನಗರಗಳಲ್ಲಿ ಪರೀಕ್ಷೆಗಳನ್ನು ಇನ್ನಷ್ಟು ತ್ವರಿತವಾಗಿ ಮಾಡಬಹುದಾಗಿದೆ. ಇನ್ನೊಂದು ಒಳ್ಳೆಯ ಸಂಗತಿ ಎಂದರೆ ಅತ್ಯಾಧುನಿಕ ಪ್ರಯೋಗಾಲಯಗಳು ಕೇವಲ ಕೊರೊನಾ ಪರೀಕ್ಷೆಗೆ ಮಾತ್ರ ಸೀಮಿತವಾಗಿಲ್ಲ.

ಭವಿಷ್ಯದಲ್ಲಿ ಪ್ರಯೋಗಾಲಯಗಳಲ್ಲಿ ಹೆಪಟಿಟಿಸ್ ಬಿ ಮತ್ತು ಸಿ, ಎಚ್ಐವಿ ಮತ್ತು ಡೆಂಘಿ ಸೇರಿದಂತೆ ಇತರೆ ಕಾಯಿಲೆಗಳಿಗೆ ಪರೀಕ್ಷೆಗಳನ್ನು ನಡೆಸುವ ಸೌಕರ್ಯವೂ ಇದರಲ್ಲಿ ಇದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಮತ್ತು ಇತರೆ ಸಂಸ್ಥೆಗಳ ಸ್ನೇಹಿತರಿಗೆ ವ್ಯವಸ್ಥೆಗಳನ್ನು ಕಲ್ಪಿಸಿರುವುದಕ್ಕಾಗಿ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಮಿತ್ರರೇ,

ದೇಶದಲ್ಲಿ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಂಡ ಪರಿಣಾಮ ಇಂದು ಭಾರತದ ಸ್ಥಿತಿ ಇತರೆ ದೇಶಗಳಿಗೆ ಹೋಲಿಸಿದರೆ ಅತ್ಯಂತ ಸ್ಥಿರವಾಗಿದೆ. ಕೊರೊನಾದಿಂದಾಗಿ ಇಂದು ಸಂಭವಿಸುತ್ತಿರುವ ಸಾವುಗಳ ಪ್ರಮಾಣ ದೊಡ್ಡ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಅತಿ ಕಡಿಮೆ ಇದೆ. ಇದೇ ವೇಳೆ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚಿದೆ ಮತ್ತು ಅದು ಕ್ರಮೇಣ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ. ಇಂದು ಭಾರತದಲ್ಲಿ ಕೊರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಸುಮಾರು 10 ಲಕ್ಷದ ಸನಿಹದಲ್ಲಿದೆ.

ಮಿತ್ರರೇ,

ದೇಶದಲ್ಲಿ ಕೊರೊನಾಗೆ ನಿರ್ದಿಷ್ಟ ಆರೋಗ್ಯ ಮೂಲಸೌಕರ್ಯವೃದ್ಧಿ ಕೆಲಸ ಕ್ಷಿಪ್ರವಾಗಿ ನಡೆಯುತ್ತಿದ್ದು, ಇದು ಕೊರೊನಾ ವಿರುದ್ಧದ ದೀರ್ಘ ಹೋರಾಟಕ್ಕೆ ಅತ್ಯಂತ ಪ್ರಮುಖವಾಗಿದೆ. ಒಟ್ಟಾರೆ ಕಾರಣಕ್ಕಾಗಿ ಕೇಂದ್ರ ಸರ್ಕಾರ 15 ಸಾವಿರ ಕೋಟಿ ರೂಪಾಯಿಗಳ ಪ್ಯಾಕೇಜ್ ಅನ್ನು ಪ್ರಕಟಿಸಿತ್ತು.

ಐಸೋಲೇಷನ್ ಕೇಂದ್ರಗಳಲ್ಲಾಗಿರಬಹುದು, ಕೋವಿಡ್ ಆಸ್ಪತ್ರೆಗಳಲ್ಲಾಗಿರಬಹುದು ಸೋಂಕು ಪರೀಕ್ಷೆ ಪತ್ತೆ ಮತ್ತು ನಿಗಾ ಸೇರಿದಂತೆ ಎಲ್ಲ ಜಾಲಗಳಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ಅತ್ಯಂತ ಕ್ಷಿಪ್ರಗತಿಯಲ್ಲಿ ವಿಸ್ತರಣೆ ಮಾಡಿದೆ. ಇಂದು ಭಾರತದಲ್ಲಿ 11,000ಕ್ಕೂ ಅಧಿಕ ಕೋವಿಡ್ ಸೌಕರ್ಯಗಳಿದ್ದು, 11 ಲಕ್ಷಕ್ಕೂ ಅಧಿಕ ಐಸೋಲೇಷನ್ ಹಾಸಿಗೆಗಳಿವೆ.

ಮಿತ್ರರೇ,

ಜನವರಿಯಲ್ಲಿ ದೇಶದಲ್ಲಿ ಒಂದೇ ಒಂದು ಕೊರೊನಾ ಪರೀಕ್ಷಾ ಕೇಂದ್ರವಿತ್ತು. ಇಂದು ದೇಶಾದ್ಯಂತ 1300ಕ್ಕೂ ಅಧಿಕ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಭಾರತದಲ್ಲಿ ಇಂದು ಪ್ರತಿ ದಿನ 5 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮುಂದಿನ ವಾರಗಳಲ್ಲಿ ಪ್ರಮಾಣವನ್ನು ಪ್ರತಿ ದಿನ 10 ಲಕ್ಷಕ್ಕೆ ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮಿತ್ರರೇ,

ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಪ್ರತಿಯೊಬ್ಬರೂ ಒಂದೇ ಒಂದು ದೃಢ ನಿರ್ಣಯವನ್ನು ಕೈಗೊಂಡಿದ್ದಾರೆ. ಅದೆಂದರೆ ಪ್ರತಿಯೊಬ್ಬ ಭಾರತೀಯರನ್ನು ರಕ್ಷಿಸುವುದು. ನಿರ್ಣಯದಿಂದಾಗಿ ಭಾರತದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ನಾವು ಕಾಣುತ್ತಿದ್ದೇವೆ. ವಿಶೇಷವಾಗಿ ಪಿಪಿಇ, ಮಾಸ್ಕ್ ಮತ್ತು ಪರೀಕ್ಷಾ ಕಿಟ್ ಗಳ ಉತ್ಪಾದನೆಯಲ್ಲಿ ಭಾರತ ಬಹುದೊಡ್ಡ ಯಶೋಗಾಥೆಯನ್ನು ಸಾಧಿಸಿದೆ. ಒಂದು ಸಮಯದಲ್ಲಿ ಭಾರತದಲ್ಲಿ ಕನಿಷ್ಠ ಒಂದೇ ಒಂದು ಪಿಪಿಇ ಕಿಟ್ ಕೂಡ ಉತ್ಪಾದನೆಯಾಗುತ್ತಿರಲಿಲ್ಲ. ಆದರೆ ಇಂದು ಭಾರತ ಪಿಪಿಇ ಕಿಟ್ ಉತ್ಪಾದನೆಯಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ರಾಷ್ಟ್ರವಾಗಿದೆ.

ಕೇವಲ ಆರು ತಿಂಗಳ ಹಿಂದೆ ದೇಶದಲ್ಲಿ ಒಬ್ಬರೇ ಒಬ್ಬರು ಪಿಪಿಇ ಕಿಟ್ ಉತ್ಪಾದಕರೂ ಇರಲಿಲ್ಲ. ಆದರೆ ಇಂದು 1200ಕ್ಕೂ ಅಧಿಕ ಉತ್ಪಾದಕರು ಪ್ರತಿ ದಿನ 5 ಲಕ್ಷಕ್ಕೂ ಅಧಿಕ ಪಿಪಿಇ ಕಿಟ್ ಗಳನ್ನು ಉತ್ಪಾದಿಸುತ್ತಿದ್ದಾರೆ. ಒಂದು ಸಮಯದಲ್ಲಿ ಎನ್-95 ಮಾಸ್ಕ್ ಗಳನ್ನೂ ಕೂಡ ಭಾರತ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಇಂದು ಪ್ರತಿ ದಿನ ಭಾರತದಲ್ಲಿ ಮೂರು ಲಕ್ಷಕ್ಕೂ ಅಧಿಕ ಎನ್-95 ಮಾಸ್ಕ್ ಗಳನ್ನು ಉತ್ಪಾದಿಸಲಾಗುತ್ತಿದೆ.

ಭಾರತ ವೆಂಟಿಲೇಟರ್ ಗಳಿಗಾಗಿ ಇತರೆ ದೇಶಗಳ ಮೇಲೆ ಅವಲಂಬಿತವಾಗಿದ್ದ ಒಂದು ಕಾಲವಿತ್ತು. ಆದರೆ ಇಂದು ಪ್ರತಿ ವರ್ಷ ಭಾರತದಲ್ಲಿ ಮೂರು ಲಕ್ಷ ವೆಂಟಿಲೇಟರ್ ಗಳನ್ನು ಉತ್ಪಾದಿಸುವ ಸಾಮರ್ಥ್ಯ ವೃದ್ಧಿಯಾಗಿದೆ. ಸಮಯದಲ್ಲಿ ವೈದ್ಯಕೀಯ ಆಕ್ಸಿಜನ್ ಸಿಲಿಂಡರ್ ಉತ್ಪಾದನೆಯೂ ಸಹ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.

ಎಲ್ಲಾ ಸಂಘಟಿತ ಪ್ರಯತ್ನಗಳಿಂದಾಗಿ ಜನರ ಜೀವಗಳನ್ನು ಮಾತ್ರ ಉಳಿಸಲಾಗಿಲ್ಲ, ಯಾವುದನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದೇವೆಯೋ ಅವುಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದ್ದೇವೆ.

ಮಿತ್ರರೇ,

ಅತ್ಯಲ್ಪ ಅವಧಿಯಲ್ಲಿಯೇ ಭಾರೀ ಭೌತಿಕ ಮೂಲಸೌಕರ್ಯವನ್ನು ವೃದ್ಧಿಗೊಳಿಸಬೇಕಾದ ಬೃಹತ್ ಸವಾಲು ನಮ್ಮ ಮುಂದೆ ಇದ್ದಿದ್ದನ್ನು ನೀವೆಲ್ಲಾ ತಿಳಿದಿದ್ದೀರಿ. ಮತ್ತೊಂದು ಪ್ರಮುಖ ಸವಾಲು ಎಂದರೆ ಕೊರೊನಾ ವಿರುದ್ಧ ಹೋರಾಟಕ್ಕೆ ಮಾನವ ಸಂಪನ್ಮೂಲ ಅಭಿವೃದ್ಧಿಗೊಳಿಸುವುದಾಗಿತ್ತು. ಅತ್ಯಲ್ಪ ಅವಧಿಯಲ್ಲಿಯೇ ನಮ್ಮ ಅರೆ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಎಎನ್ಎಂ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಇತರೆ ಆರೋಗ್ಯ ಹಾಗೂ ನಾಗರಿಕ ಕಾರ್ಯಕರ್ತರಿಗೆ ಕ್ಷಿಪ್ರಗತಿಯಲ್ಲಿ ತರಬೇತಿ ನೀಡಿ, ಅವರನ್ನು ಸಜ್ಜುಗೊಳಿಸಲಾಗಿದೆ.

ಇಂದು ಇಡೀ ವಿಶ್ವ, ಭಾರತ ಕೊರೊನಾ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ಆಶ್ಚರ್ಯದಿಂದ ನೋಡುತ್ತಿದೆ ಮತ್ತು ಅವರುಗಳ ಅನಿಸಿಕೆ ಸುಳ್ಳಾಗಿವೆ ಮತ್ತು ಅದಕ್ಕೆ ಅತ್ಯಂತ ಪ್ರಮುಖ ಕಾರಣವೆಂದರೆ ನಮ್ಮ ಕೊರೊನಾ ಯೋಧರು.

ಮಿತ್ರರೇ,

ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಜಾಗೃತಿ ಮತ್ತು ವೈಜ್ಞಾನಿಕ ದತ್ತಾಂಶ ಕೊರತೆಯಿದ್ದಂತಹ ಸಮಯದಿಂದ ಇದೀಗ ಸಂಪನ್ಮೂಲಗಳನ್ನು ವಿಸ್ತರಿಸುವ ಹಂತಕ್ಕೆ ಬಂದಿದ್ದೇವೆ.

ನಾವು ರಾಜ್ಯಮಟ್ಟ, ಜಿಲ್ಲಾಮಟ್ಟ, ಬ್ಲಾಕ್ ಹಾಗೂ ಗ್ರಾಮಗಳ ಮಟ್ಟದವರೆಗೆ ಬೇಡಿಕೆ ಮತ್ತು ಪೂರೈಕೆಯನ್ನು ನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಬಲವರ್ಧನೆಗೊಳಿಸಬೇಕಾಗಿದೆ.

ಎಲ್ಲರೂ ಒಗ್ಗೂಡಿ ಇದೀಗ ಹೊಸ ಮೂಲಸೌಕರ್ಯ ಅಭಿವೃದ್ಧಿ ಜೊತೆಗೆ ಪ್ರತಿಯೊಂದು ಗ್ರಾಮ ಮಟ್ಟದಲ್ಲಿ ಸರ್ಕಾರಿ ಮತ್ತು ಖಾಸಗಿ ಡಿಸ್ಪೆನ್ಸರಿಗಳು ಮತ್ತು ಕ್ಲಿನಿಕ್ ಗಳನ್ನು ಬಲವರ್ಧನೆಗೊಳಿಸಬೇಕಾಗಿದೆ ಮತ್ತು ಅವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕಾಗಿದೆ. ಅದನ್ನು ನಾವು ಮಾಡುವ ಮೂಲಕ ಗ್ರಾಮಗಳಲ್ಲಿ ಕೊರೊನಾ ವಿರುದ್ಧ ಹೋರಾಟ ದುರ್ಬಲವಾಗದಂತೆ ನೋಡಿಕೊಳ್ಳಬೇಕಿದೆ. ಈವರೆಗೆ ಗ್ರಾಮಗಳ ಜನರು ವಲಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.

ಇದರಿಂದಾಗಿ ನಾವು ಕೊರೊನಾ ಯೋಧರು ಯಾವುದೇ ಬಗೆಯ ಆಮಿಷಗಳಿಗೆ ಒಳಗಾಗುವುದಿಲ್ಲ ಎಂಬುದನ್ನು ಖಾತ್ರಿಪಡಿಸಬೇಕಿದೆ. ನಮ್ಮ ಆರೋಗ್ಯ ವ್ಯವಸ್ಥೆಗೆ ಹೊಸ ಹಾಗೂ ನಿವೃತ್ತ ವೃತ್ತಿಪರರನ್ನು ಸೇರಿಸಲು ನಾವು ನಿರಂತರವಾಗಿ ಕಾರ್ಯೋನ್ಮುಖವಾಗಬೇಕಿದೆ.

ಮಿತ್ರರೇ,

ಮುಂದಿನ ದಿನಗಳಲ್ಲಿ ಸಾಲು ಸಾಲು ಹಲವು ಹಬ್ಬಗಳು ಬರಲಿವೆ. ಎಲ್ಲ ಆಚರಣೆಗಳು ಸಂತೋಷ ಮತ್ತು ಆನಂದವನ್ನು ಉಂಟುಮಾಡಲಿ. ಆದರೆ ನಾವು ಜನರಲ್ಲಿ ಸೋಂಕು ಹರಡುವುದನ್ನು ತಪ್ಪಿಸಲು ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹಬ್ಬಗಳ ಸಂದರ್ಭದಲ್ಲಿ ಬಡಕುಟುಂಬಗಳು ಯಾವುದೇ ರೀತಿಯ ಸಮಸ್ಯೆಗಳಿಗೆ ಎದುರಾಗದಂತೆ ನಾವು ನೋಡಿಕೊಳ್ಳಬೇಕಿದೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಪ್ರಯೋಜನ ಪ್ರತಿಯೊಂದು ಬಡ ಕುಟುಂಬಕ್ಕೂ ಸಕಾಲದಲ್ಲಿ ತಲುಪಿಸುವುದನ್ನು ನಾವು ಖಾತ್ರಿಪಡಿಸಬೇಕಾಗಿದೆ.

ಮಿತ್ರರೇ,

ನಮ್ಮ ದೇಶದ ಪ್ರತಿಭಾವಂತ ವಿಜ್ಞಾನಿಗಳು ಕೊರೊನಾಗೆ ಲಸಿಕೆ ಕಂಡುಹಿಡಿಯಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಆದರೆ ಪರಿಣಾಮಕಾರಿ ಔಷಧಿ ಅಥವಾ ಲಸಿಕೆ ಸಂಶೋಧನೆಯಾಗುವವರಗೆ ನಾವು ಮಾಸ್ಕ್ ಗಳನ್ನು ಧರಿಸಲೇಬೇಕು ಮತ್ತು ಸಾಮಾಜಿಕ ಅಂತರವನ್ನು ಅಥವಾ ಎರಡು ಗಜ ದೂರವನ್ನು ಹಾಗೂ ಕೈ ತೊಳೆಯುವುದನ್ನು ಪಾಲಿಸಲೇ ಬೇಕಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳುವುದರ ಜೊತೆಗೆ ಮನೆಗಳಲ್ಲಿರುವ ವೃದ್ಧರು, ಮಕ್ಕಳು ಹಾಗೂ ಇತರೆ ಕುಟುಂಬದ ಸದಸ್ಯರನ್ನು ರಕ್ಷಿಸಬೇಕಿದೆ.

ಕೊರೊನಾ ವಿರುದ್ಧದ ಹೋರಾಟ ದಲ್ಲಿ ನಾವೆಲ್ಲರೂ ಒಗ್ಗೂಡಿ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿದೆ. ಮತ್ತೊಮ್ಮೆ ಎಲ್ಲ ಆಧುನಿಕ ಸೌಕರ್ಯಗಳನ್ನು ಮಾಡಿರುವುದಕ್ಕಾಗಿ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ತುಂಬಾ ಧನ್ಯವಾದಗಳು.

***



(Release ID: 1641811) Visitor Counter : 195