ಪ್ರಧಾನ ಮಂತ್ರಿಯವರ ಕಛೇರಿ

ಜಾಗತಿಕ ಪುನಶ್ಚೇತನದಲ್ಲಿ ಭಾರತದ ಪ್ರಮುಖ ಪಾತ್ರ

Posted On: 09 JUL 2020 3:17PM by PIB Bengaluru

ಜಾಗತಿಕ ಪುನಶ್ಚೇತನದಲ್ಲಿ ಭಾರತ ಪ್ರಮುಖ ಪಾತ್ರ

ಇಂಡಿಯಾ ಗ್ಲೋಬಲ್ ವೀಕ್‌ ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

 

ಇಂಡಿಯಾ ಗ್ಲೋಬಲ್ ವೀಕ್ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾತನಾಡಿ, ಸದ್ಯದ ಬಿಕ್ಕಟ್ಟಿನ ಸಂದರ್ಭವನ್ನು ಉಲ್ಲೇಖಿಸಿ ಪ್ರಧಾನಿ ಜಾಗತಿಕ ಪುನಶ್ಚೇತನದಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ, ಇದು ಎರಡು ಅಂಶಗಳೊಂದಿಗೆ ನಿಕಟ ಸಂಬಂಧ ಹೊಂದಿದೆ, ಮೊದಲನೆಯದು - ಭಾರತದ ಪ್ರತಿಭೆ ಮತ್ತು ಎರಡನೆಯದು ಸುಧಾರಣೆ ಮತ್ತು ತಾರುಣ್ಯಕ್ಕೆ ಮರಳುವ ಭಾರತದ ಸಾಮರ್ಥ್ಯ ಎಂದು ಅವರು ಹೇಳಿದರು. ಪ್ರಪಂಚದಾದ್ಯಂತ, ಭಾರತದ ಪ್ರತಿಭಾಶಕ್ತಿಯ ಕೊಡುಗೆಯು ಗುರುತಿಸಲ್ಪಟ್ಟಿದೆ ಎಂದ ಅವರು, ವಿಶೇಷವಾಗಿ ಭಾರತೀಯ ಟೆಕ್ ಉದ್ಯಮ ಮತ್ತು ಟೆಕ್ಕಿಗಳ ಕೊಡುಗೆಯನ್ನು ವಿವರಿಸಿದರು.
ಭಾರತವು ಕೊಡುಗೆ ನೀಡಲು ಉತ್ಸುಕವಾಗಿರುವ ಪ್ರತಿಭೆಯ ಶಕ್ತಿ ಕೇಂದ್ರವಾಗಿದೆ ಎಂದು ಅವರು ಬಣ್ಣಿಸಿದರು. ಭಾರತೀಯರು ಸ್ವಾಭಾವಿಕವಾಗಿಯೇ ಸುಧಾರಕರು. ಭಾರತವು ಪ್ರತಿ ಸವಾಲನ್ನು ಅದು ಸಾಮಾಜಿಕವಾಗಿರಲಿ ಅಥವಾ ಆರ್ಥಿಕವಾಗಿರಲಿ ಎಲ್ಲವನ್ನೂ ಜಯಿಸಿರುವುದನ್ನು ಇತಿಹಾಸವು ಹೇಳುತ್ತದೆ ಎಂದರು.

ಭಾರತವು ಪುನಶ್ಚೇತನದ ಬಗ್ಗೆ ಮಾತನಾಡುವಾಗ ಅದು: ಪರಿಸರ ಮತ್ತು ಆರ್ಥಿಕತೆ ಎರಡರಲ್ಲಿಯೂ ಎಚ್ಚರಿಕೆಯ ಪುನಶ್ಚೇತನ, ಸಹಾನುಭೂತಿಯ ಪುನಶ್ಚೇತನ, ಸುಸ್ಥಿರ ಪುನಶ್ಚೇತನವಾಗಿರುತ್ತದೆ ಎಂದರು.

ಕಳೆದ ಆರು ವರ್ಷಗಳಲ್ಲಿ ದೇಶವು ಗಳಿಸಿದ ಲಾಭಗಳನ್ನು ಪಟ್ಟಿ ಮಾಡಿದ ಪ್ರಧಾನಿಯವರು, ಎಲ್ಲರನ್ನೂ ಒಳಗೊಂಡ ಹಣಕಾಸು, ದಾಖಲೆಯ ವಸತಿ ಮತ್ತು ಮೂಲಸೌಕರ್ಯ ನಿರ್ಮಾಣ, ಸರಳ ವ್ಯವಹಾರ, ಜಿಎಸ್ಟಿ ಸೇರಿದಂತೆ ದಿಟ್ಟ ತೆರಿಗೆ ಸುಧಾರಣೆಗಳ ಬಗ್ಗೆ ಹೇಳಿದರು.

ಅದಮ್ಯ ಭಾರತೀಯ ಮನೋಭಾವದಿಂದಾಗಿ ಆರ್ಥಿಕತೆ ಚೇತರಿಕೆಯ ಚಿಗುರುಗಳು ಈಗಾಗಲೇ ಕಾಣುತ್ತಿವೆ ಎಂದು ಪ್ರಧಾನಿ ಹೇಳಿದರು.

ಉಚಿತ ಅಡುಗೆ ಅನಿಲ, ಬ್ಯಾಂಕ್ ಖಾತೆಗಳಿಗೆ ನಗದು, ಲಕ್ಷಾಂತರ ಜನರಿಗೆ ಉಚಿತ ಆಹಾರ ಧಾನ್ಯಗಳ ವಿತರಣೆ ಮುಂತಾದ ವಿಷಯಗಳಲ್ಲಿ ಫಲಾನುಭವಿಗಳಿಗೆ ನೇರವಾಗಿ ಪ್ರಯೋಜನ ತಲುಪಿಸಲು ಸರ್ಕಾರಕ್ಕೆ ತಂತ್ರಜ್ಞಾನವು ನೆರವಾಗಿದೆ ಎಂದು ಅವರು ಹೇಳಿದರು.

ಭಾರತವು ವಿಶ್ವದ ಅತ್ಯಂತ ಮುಕ್ತ ಆರ್ಥಿಕತೆಗಳಲ್ಲಿ ಒಂದಾಗಿದೆ ಮತ್ತು ತಮ್ಮ ವ್ಯವಹಾರವನ್ನು ಆರಂಭಿಸಲು ಎಲ್ಲಾ ಬಹುರಾಷ್ಟ್ರೀಯ ಕಂಪನಿಗಳನ್ನು ಭಾರತ ಆಹ್ವಾನಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಭಾರತವು ಅನೇಕ ಸಾಧ್ಯತೆಗಳು ಮತ್ತು ಅವಕಾಶಗಳ ನೆಲ ಎಂದು ಪ್ರಧಾನಿ ಬಣ್ಣಿಸಿದರು.

ಕೃಷಿ ಕ್ಷೇತ್ರದಲ್ಲಿ ಆರಂಭಿಸಲಾಗಿರುವ ವಿವಿಧ ಸುಧಾರಣೆಗಳನ್ನು ವಿವರಿಸಿದ ಅವರು, ಇದು ಜಾಗತಿಕ ಉದ್ಯಮಕ್ಕೆ ಆಕರ್ಷಕ ಹೂಡಿಕೆಯ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದರು. ಇತ್ತೀಚಿನ ಸುಧಾರಣೆಗಳು ಎಂಎಸ್ಎಂಇ ವಲಯಕ್ಕೆ ಉತ್ತೇಜನ ನೀಡುತ್ತಿವೆ ಮತ್ತು ಅವು ದೊಡ್ಡ ಉದ್ಯಮಗಳಿಗೆ ನೆರವಾಗಲಿವೆ ಎಂದು ಪ್ರಧಾನಿ ಹೇಳಿದರು.

ರಕ್ಷಣಾ ಕ್ಷೇತ್ರ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೂಡಿಕೆಯ ಅವಕಾಶಗಳಿವೆ ಎಂದು ಹೇಳಿದರು.

ಭಾರತದ ಔಷಧ ಉದ್ಯಮವು ಭಾರತಕ್ಕೆ ಮಾತ್ರವಲ್ಲದೇ ಇಡೀ ಜಗತ್ತಿಗೆ ಒಂದು ಆಸ್ತಿ ಎಂಬುದನ್ನು ಸಾಂಕ್ರಾಮಿಕ ರೋಗವು ಮತ್ತೊಮ್ಮೆ ತೋರಿಸಿದೆ ಎಂದು ಪ್ರಧಾನಿ ಹೇಳಿದರು. ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಔಷಧಿಗಳ ಬೆಲೆಯನ್ನು ಕಡಿಮೆ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ ಎಂದರು.

ಆತ್ಮ ನಿರ್ಭರ ಭಾರತ ಎಂದರೆ ಸ್ವಯಂ ನಿರ್ಬಂಧಿತ ಅಥವಾ ಜಗತ್ತಿಗೆ ಬಾಗಿಲು ಮುಚ್ಚುವುದಲ್ಲ, ಬದಲಿಗೆ ಸ್ವಾವಲಂಬಿ ಮತ್ತು ಸ್ವಯಂ-ಉತ್ಪಾದಕನಾಗುವುದು ಎಂದು ಅವರು ಹೇಳಿದರು.

ಇದು ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯ ಭಾರತ. ಇದು ಹೊಸ ಆರ್ಥಿಕ ಅವಕಾಶಗಳನ್ನು ನೀಡುವ ಭಾರತ. ಅಭಿವೃದ್ಧಿಗೆ ಮಾನವ ಕೇಂದ್ರಿತ ಮತ್ತು ಅಂತರ್ಗತ ವಿಧಾನವನ್ನು ಅನುಸರಿಸುತ್ತಿರುವ ಭಾರತ. ಭಾರತ ನಿಮ್ಮೆಲ್ಲರಿಗೂ ಕಾಯುತ್ತಿದೆ ಎಂದರು.

ಭಾರತೀಯ ಶಾಸ್ತ್ರೀಯ ಸಂಗೀತದ ಸೊಬಗನ್ನು ಜಗತ್ತಿಗೆ ಪಸರಿಸಿದ ಪಂಡಿತ್ ರವಿಶಂಕರ್ ಅವರ 100 ನೇ ಜನ್ಮಜಯಂತಿಯನ್ನು ವೇದಿಕೆಯು ಆಚರಿಸುತ್ತಿರುವ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು. ನಮಸ್ತೆ ಎನ್ನುವುದು ಜಾಗತಿಕ ಮಟ್ಟದಲ್ಲಿ ಶುಭಾಶಯದ ರೂಪವಾಗಿರುವ ಬಗ್ಗೆಯೂ ಅವರು ಹೇಳಿದರು. ಜಾಗತಿಕ ಒಳಿತು ಮತ್ತು ಸಮೃದ್ಧಿಗಾಗಿ ಭಾರತವು ಏನು ಬೇಕಾದರೂ ಮಾಡಲು ಸಿದ್ಧವಿದೆ ಎಂದು ಪ್ರಧಾನಿ ಹೇಳಿದರು.

***(Release ID: 1637574) Visitor Counter : 34