ಪ್ರಧಾನ ಮಂತ್ರಿಯವರ ಕಛೇರಿ

ಜೂನ್ 19,  2020 ರಂದು ನಡೆದ ಸರ್ವಪಕ್ಷ ಸಭೆ ಕುರಿತ ಹೇಳಿಕೆ

Posted On: 20 JUN 2020 1:40PM by PIB Bengaluru

ಜೂನ್ 19,  2020 ರಂದು ನಡೆದ ಸರ್ವಪಕ್ಷ ಸಭೆ ಕುರಿತ ಹೇಳಿಕೆ

 

ಜೂನ್ 19,  2020 ರಂದು ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಮಂತ್ರಿಯವರು ನೀಡಿದ ಹೇಳಿಕೆಗೆ ಕುಚೇಷ್ಟೆಯ ವ್ಯಾಖ್ಯಾನ ಮಾಡುವ ಕೆಲವು ಪ್ರಯತ್ನಗಳು ನಡೆಯುತ್ತಿವೆ.

ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್ಎಸಿ) ಉಲ್ಲಂಘಿಸುವ ಯಾವುದೇ ಪ್ರಯತ್ನಗಳಿಗೆ ಭಾರತವು ದಿಟ್ಟವಾಗಿ ಪ್ರತಿಕ್ರಿಯಿಸುತ್ತದೆ ಎಂದು ಪ್ರಧಾನಿಯವರು ಸ್ಪಷ್ಟಪಡಿಸಿದ್ದರು. ವಾಸ್ತವವಾಗಿ, ಹಿಂದೆ ಅಂತಹ ಸವಾಲುಗಳನ್ನು ನಿರ್ಲಕ್ಷಿಸಿರುವುದಕ್ಕೆ ವ್ಯತಿರಿಕ್ತವಾಗಿ, ಭಾರತೀಯ ಪಡೆಗಳು ಈಗ ಎಲ್ಎಸಿಯ ಯಾವುದೇ ಉಲ್ಲಂಘನೆಯನ್ನು ನಿರ್ಣಾಯಕವಾಗಿ ಎದುರಿಸುತ್ತವೆ ಎಂದು ಅವರು ಒತ್ತಿ ಹೇಳಿದ್ದಾರೆ.

ಈ ಬಾರಿ, ಚೀನಾದ ಪಡೆಗಳು ಎಲ್ಎಸಿಗೆ ಹೆಚ್ಚಿನ ಬಲದೊಂದಿಗೆ ಬಂದಿವೆ ಮತ್ತು ಅದಕ್ಕೆ ಭಾರತ ತಕ್ಕ ಪ್ರತಿಕ್ರಿಯೆ ನೀಡಿದೆ ಎಂದು ಸರ್ವಪಕ್ಷ ಸಭೆಗೆ ತಿಳಿಸಲಾಯಿತು. ಎಲ್ಎಸಿಯ ಉಲ್ಲಂಘನೆಗೆ ಸಂಬಂಧಿಸಿದಂತೆ, ಚೀನಾದವರು ಎಲ್ಎಸಿಯಾದ್ಯಂತ ನಿರ್ಮಾಣ ಕೆಲಸಗಳನ್ನು ನಡೆಸುತ್ತಿದ್ದರು ಮತ್ತು ನಿರ್ಮಾಣ ಕೆಲಸಗಳನ್ನು ನಿಲ್ಲಿಸಲು ನಿರಾಕರಿಸಿದರು. ಇದರಿಂದಾಗಿ ಜೂನ್ 15 ರಂದು ಗಾಲ್ವಾನ್ನಲ್ಲಿ ಹಿಂಸಾಚಾರವು ಹುಟ್ಟಿಕೊಂಡಿತು ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಸರ್ವಪಕ್ಸ ಸಭೆಯಲ್ಲಿ ನಡೆದ ಚರ್ಚೆಗಳಲ್ಲಿ ಪ್ರಧಾನಮಂತ್ರಿಯವರ ಹೇಳಿಕೆಯು ಜೂನ್ 15 ರಂದು 20 ಭಾರತೀಯ ಸೇನಾ ಸಿಬ್ಬಂದಿಯ ಪ್ರಾಣವನ್ನು ಬಲಿಪಡೆದ ಗಾಲ್ವಾನ್ಘಟನೆಗಳನ್ನು ಕೇಂದ್ರೀಕರಿಸಿತ್ತು. ಅಲ್ಲಿ ಚೀನಿಯರ ಯೋಜನೆಗಳನ್ನು ಹಿಮ್ಮೆಟ್ಟಿಸಿದ ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಮತ್ತು ದೇಶಭಕ್ತಿಗೆ ಪ್ರಧಾನಿಯವರು ಗೌರವ ಸಲ್ಲಿಸಿದರು. ನಮ್ಮ ಸಶಸ್ತ್ರ ಪಡೆಗಳ ಧೈರ್ಯದ ಪರಿಣಾಮವಾಗಿ ಎಲ್ಎಸಿಯ ನಮ್ಮ ಕಡೆಗೆ ಯಾವುದೇ ಚೀನೀಯರು ಬಂದಿರಲಿಲ್ಲ ಎಂಬುದು ಪ್ರಧಾನ ಮಂತ್ರಿಯವರ ಅಭಿಪ್ರಾಯವಾಗಿತ್ತು. ಅಂದು 16 ಬಿಹಾರ ರೆಜಿಮೆಂಟ್ನ ಸೈನಿಕರ ತ್ಯಾಗವು ಚೀನಾದ ಕಡೆಯವರ ನಿರ್ಮಾಣ ಪ್ರಯತ್ನವನ್ನು ವಿಫಲಗೊಳಿಸಿತು ಮತ್ತು ಎಲ್ಎಸಿಯ ಈ ಭಾಗದಲ್ಲಿ ಉಲ್ಲಂಘನೆಯ ಪ್ರಯತ್ನವನ್ನು ವಿಫಲಗೊಳಿಸಿತು.

"ನಮ್ಮ ಭೂಮಿಯನ್ನು ಅತಿಕ್ರಮಿಸಲು ಪ್ರಯತ್ನಿಸಿದವರಿಗೆ ನಮ್ಮ ಧೈರ್ಯಶಾಲಿ ಯೋಧರು ತಕ್ಕ ಪಾಠವನ್ನು ಕಲಿಸಿದರು" ಎಂಬ ಪ್ರಧಾನ ಮಂತ್ರಿಯವರ ಮಾತುಗಳು, ನಮ್ಮ ಸಶಸ್ತ್ರ ಪಡೆಗಳ ನೀತಿ ಮತ್ತು ಮೌಲ್ಯಗಳನ್ನು ಸಂಕ್ಷಿಪ್ತವಾಗಿ ಹೇಳುತ್ತವೆ. "ನಮ್ಮ ಗಡಿಗಳನ್ನು ರಕ್ಷಿಸಲು ನಮ್ಮ ಸಶಸ್ತ್ರ ಪಡೆಗಳು ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ" ಎಂದು ಪ್ರಧಾನಿ ಒತ್ತಿ ಹೇಳಿದರು.

ಭಾರತದ ಭೂಪ್ರದೇಶ ಯಾವುದು ಎಂಬುದು ಭಾರತದ ನಕ್ಷೆಯಿಂದ ಸ್ಪಷ್ಟವಾಗಿದೆ. ಈ ಸರ್ಕಾರ ದಿಟ್ಟ ಮತ್ತು ದೃಢ ನಿಶ್ಚಯದಿಂದ ಅದಕ್ಕೆ ಬದ್ಧವಾಗಿದೆ. ಅಲ್ಲಿ ಕೆಲವು ಅಕ್ರಮ ಒತ್ತುವರಿಗಳು ಇವೆ, ಕಳೆದ 60 ವರ್ಷಗಳಲ್ಲಿ, 43,000 ಚದರ ಕಿ.ಮೀ.ಗಿಂತ ಹೆಚ್ಚು ಪ್ರದೇಶವನ್ನು ಪರಿಸ್ಥಿತಿಗನುಗುಣವಾಗಿ ಹೇಗೆ ನೀಡಲಾಗಿದೆ ಎಂಬುದನ್ನು ಈ ದೇಶವು ಚೆನ್ನಾಗಿ ತಿಳಿದಿರುವ ಬಗ್ಗೆ ಸರ್ವ ಪಕ್ಷ ಸಭೆಗೆ ವಿವರವಾಗಿ ತಿಳಿಸಲಾಯಿತು. ಎಲ್ಎಸಿಯ ಯಾವುದೇ ಏಕಪಕ್ಷೀಯ ಬದಲಾವಣೆಗೆ ಈ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಯಿತು.

ನಮ್ಮ ಧೈರ್ಯಶಾಲಿ ಸೈನಿಕರು ನಮ್ಮ ಗಡಿಗಳನ್ನು ರಕ್ಷಿಸುತ್ತಿರುವ ಸಮಯದಲ್ಲಿ, ಅವರ ಸ್ಥೈರ್ಯವನ್ನು ತಗ್ಗಿಸಲು ಅನಗತ್ಯ ವಿವಾದ ಸೃಷ್ಟಿಯಾಗುತ್ತಿರುವುದು ದುರದೃಷ್ಟಕರ. ಆದಾಗ್ಯೂ, ಸರ್ವಪಕ್ಷ  ಸಭೆಯಲ್ಲಿ ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರ ಮತ್ತು ಸಶಸ್ತ್ರ ಪಡೆಗಳಿಗೆ ನಿಸ್ಸಂದಿಗ್ಧವಾದ ಬೆಂಬಲವನ್ನು ನೀಡುವ ಭಾವನೆ ವ್ಯಕ್ತವಾಯಿತು. ಅಪ್ರಚಾರದಿಂದ ಭಾರತೀಯರ ಐಕ್ಯತೆಯು ಹಾಳಾಗುವುದಿಲ್ಲ ಎಂಬ ವಿಶ್ವಾಸ ನಮಗಿದೆ.

***



(Release ID: 1632939) Visitor Counter : 250