ಪ್ರಧಾನ ಮಂತ್ರಿಯವರ ಕಛೇರಿ
ಆಚಾರ್ಯ ಶ್ರೀ ಮಹಾಪ್ರಗ್ಯಾ ಅವರಿಗೆ ಪ್ರಧಾನಿಯವರಿಂದ ಗೌರವ ನಮನ
Posted On:
19 JUN 2020 1:47PM by PIB Bengaluru
ಆಚಾರ್ಯ ಶ್ರೀ ಮಹಾಪ್ರಗ್ಯಾ ಅವರಿಗೆ ಪ್ರಧಾನಿಯವರಿಂದ ಗೌರವ ನಮನ
“ಸಮೃದ್ಧ ರಾಷ್ಟ್ರಕ್ಕಾಗಿ ಸಂತೋಷದ ಕುಟುಂಬವನ್ನು ನಿರ್ಮಿಸಿ” ಮಂತ್ರವನ್ನು ಕಾರ್ಯಗತಗೊಳಿಸುವಂತೆ ಜನತೆಗೆ ಕರೆ
ಆಚಾರ್ಯ ಶ್ರೀ ಮಹಾಪ್ರಗ್ಯಾ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಇಂದು ಅವರಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ಆಚಾರ್ಯ ಶ್ರೀ ಮಹಾಪ್ರಗ್ಯಾ ಅವರು ತಮ್ಮ ಇಡೀ ಜೀವನವನ್ನು ಮನುಕುಲ ಮತ್ತು ಸಮಾಜದ ಸೇವೆಗಾಗಿ ಅರ್ಪಿಸಿದ್ದರು ಎಂದು ಹೇಳಿದರು.
ಶ್ರೇಷ್ಠ ಸಂತನೊಂದಿಗಿನ ಹಲವಾರು ಮಾತುಕತೆಗಳನ್ನು ಸ್ಮರಿಸಿದ ಪ್ರಧಾನಿಯವರು, ಅಂತಹ ಮಾತುಕತೆಗಳನ್ನು ನಡೆಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಮತ್ತು ಸಂತರ ಜೀವನ ಪಯಣದಿಂದ ಸಾಕಷ್ಟು ಕಲಿತಿದ್ದೇನೆ ಎಂದು ಹೇಳಿದರು.
ಸಂತರ ಅಹಿಂಸಾ ಯಾತ್ರೆ ಮತ್ತು ಮಾನವೀಯ ಸೇವೆಯಲ್ಲಿ ಭಾಗವಹಿಸುವ ಅವಕಾಶವೂ ನನಗೆ ದೊರಕಿತ್ತು ಎಂದು ಶ್ರೀ ಮೋದಿ ಹೇಳಿದರು.
ಆಚಾರ್ಯ ಶ್ರೀ ಮಹಾಪ್ರಗ್ಯಾರಂತಹ ಯುಗ ಋಷಿಗಳು ತಮಗಾಗಿ ಏನನ್ನೂ ಸಂಪಾದಿಸುವುದಿಲ್ಲ. ಅವರ ಜೀವನ, ಆಲೋಚನೆಗಳು ಮತ್ತು ಕೆಲಸಗಳು ಮಾನವಕುಲದ ಸೇವೆಗೆ ಸಮರ್ಪಿತವಾಗಿರುತ್ತವೆ ಎಂದು ಅವರು ಹೇಳಿದರು.
“ನಾನು ಮತ್ತು ನನ್ನದು ಎಂಬುದನ್ನು ಬಿಟ್ಟರೆ, ಇಡೀ ಪ್ರಪಂಚವೇ ನಿಮ್ಮದಾಗುತ್ತದೆ”ಎಂಬ ಆಚಾರ್ಯರ ಮಾತುಗಳನ್ನು ಪ್ರಧಾನ ಮಂತ್ರಿ ಉಲ್ಲೇಖಿಸಿದರು.
ಸಂತರು ಇದನ್ನು ತಮ್ಮ ಜೀವನದ ಮಂತ್ರ ಮತ್ತು ತತ್ತ್ವವನ್ನಾಗಿ ಮಾಡಿಕೊಂಡಿದ್ದರು ಮತ್ತು ಅವರ ಪ್ರತಿಯೊಂದು ಕಾರ್ಯದಲ್ಲೂ ಅದನ್ನು ಅನುಷ್ಠಾನಗೊಳಿಸಿದರು ಎಂದು ಶ್ರೀ ಮೋದಿ ಹೇಳಿದರು.
ಸಂತರಿಗೆ ಇದ್ದವ ಏಕೈಕ ಅಸ್ತಿ ಎಂದರೆ ಪ್ರತಿಯೊಬ್ಬ ವ್ಯಕ್ತಿಯ ಮೇಲಿದ್ದ ಪ್ರೀತಿ. ಬೇರೇನೂ ಅಲ್ಲ ಎಂದು ಪ್ರಧಾನಿ ಹೇಳಿದರು.
ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರು ಆಚಾರ್ಯ ಮಹಾಪ್ರಗ್ಯಾರನ್ನು ಆಧುನಿಕ ವಿವೇಕಾನಂದ ಎಂದು ಕರೆಯುತ್ತಿದ್ದುದನ್ನು ಪ್ರಧಾನಿ ನೆನಪಿಸಿಕೊಂಡರು.
ಅದೇ ರೀತಿ, ದಿಗಂಬರ ಪಂಥದ ಶ್ರೇಷ್ಠ ಸಂತ ಆಚಾರ್ಯ ವಿದ್ಯಾನಂದರು ಆಚಾರ್ಯ ಮಹಾಪ್ರಗ್ಯಾ ರಚಿಸಿದ ಅದ್ಭುತ ಸಾಹಿತ್ಯದಿಂದಾಗಿ ಅವರನ್ನು ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರೊಂದಿಗೆ ಹೋಲಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.
ಸ್ವತಃ ಸಾಹಿತ್ಯ ಮತ್ತು ಜ್ಞಾನದ ಮಹಾನ್ ಆರಾಧಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು "ನಾನು ಆಚಾರ್ಯ ಮಹಾಪ್ರಗ್ಯಾ ಅವರ ಸಾಹಿತ್ಯ, ಅವರ ಸಾಹಿತ್ಯದ ಆಳ, ಅವರ ಜ್ಞಾನ ಮತ್ತು ಪದಗಳ ಮಹಾನ್ ಪ್ರೇಮಿ " ಎಂದು ಹೇಳುತ್ತಿದ್ದರು ಎಂದು ಪ್ರಧಾನಿ ಸ್ಮರಿಸಿದರು.
ಆಚಾರ್ಯರಿಗೆ ಶ್ರೇಷ್ಠ ಭಾಷಣ ಕಲೆ, ಮೋಡಿಯ ಧ್ವನಿ ಮತ್ತು ಉತ್ತಮ ಶಬ್ದಕೋಶಗಳು ದೈವದತ್ತವಾಗಿ ಬಂದವು ಎಂದು ಪ್ರಧಾನಿ ಬಣ್ಣಿಸಿದರು.
ಆಧ್ಯಾತ್ಮ, ತತ್ವಶಾಸ್ತ್ರ, ಮನೋವಿಜ್ಞಾನ ಮತ್ತು ಅರ್ಥಶಾಸ್ತ್ರದಂತಹ ವಿಷಯಗಳ ಕುರಿತು ಆಚಾರ್ಯರು ಸಂಸ್ಕೃತ, ಹಿಂದಿ, ಗುಜರಾತಿ, ಇಂಗ್ಲಿಷ್ ಭಾಷೆಗಳಲ್ಲಿ 300 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ ಎಂದು ಪ್ರಧಾನಿ ಹೇಳಿದರು.
ಡಾ. ಎಪಿಜೆ ಅಬ್ದುಲ್ ಕಲಾಂ ಅವರೊಂದಿಗೆ ಸೇರಿ ಮಹಾಪ್ರಗ್ಯಾ ಅವರು ಬರೆದ “ದಿ ಫ್ಯಾಮಿಲಿ ಅಂಡ್ ದಿ ನೇಷನ್”ಕೃತಿಯನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು.
" ಒಂದು ಕುಟುಂಬವು ಹೇಗೆ ಸಂತೋಷದ ಕುಟುಂಬವಾಗಬಹುದು, ಆ ಸಂತೋಷದ ಕುಟುಂಬವು ಸಮೃದ್ಧ ರಾಷ್ಟ್ರವನ್ನು ಹೇಗೆ ನಿರ್ಮಿಸಬಹುದು ಎಂಬುದನ್ನು ಈ ಇಬ್ಬರು ಮಹಾನ್ ಪುರುಷರು ತಿಳಿಸಿದ್ದಾರೆ" ಎಂದು ಅವರು ಹೇಳಿದರು.
"ಆಧ್ಯಾತ್ಮಿಕ ಗುರುವೊಬ್ಬ ವೈಜ್ಞಾನಿಕ ವಿಧಾನವನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾನೆ ಮತ್ತು ವಿಜ್ಞಾನಿಯೊಬ್ಬ ಆಧ್ಯಾತ್ಮವನ್ನು ಹೇಗೆ ವಿವರಿಸುತ್ತಾನೆ ಎಂಬುದನ್ನು ನಾನು ಅವರಿಂದ ಕಲಿತೆ" ಎಂದು ಇಬ್ಬರು ಮಹಾನ್ ವ್ಯಕ್ತಿಗಳ ಜೀವನವನ್ನು ಹೋಲಿಸಿ ಪ್ರಧಾನಿಯವರು ಹೇಳಿದರು. ಅವರಿಬ್ಬರೊಂದಿಗೂ ಮಾತುಕತೆ ನಡೆಸುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಭಾಗ್ಯ ಎಂದರು.
ಡಾ. ಕಲಾಂ ಅವರು ಮಹಾಪ್ರಗ್ಯಾರ ಬಗ್ಗೆ ಹೇಳುತ್ತಿದ್ದರು, ಅವರ ಜೀವನದ ಏಕ ಮಾತ್ರ ಉದ್ದೇಶವೆಂದರೆ - ನಡೆದಾಡು, ಗಳಿಸು ಮತ್ತು ನೀಡು. ಅಂದರೆ, ನಿರಂತರವಾಗಿ ಪ್ರಯಾಣಿಸು, ಜ್ಞಾನವನ್ನು ಸಂಪಾದಿಸು ಮತ್ತು ಸಮಾಜಕ್ಕೆ ನೀಡು.
ಮಹಾಪ್ರಗ್ಯಾ ಅವರು ತಮ್ಮ ಜೀವಿತಾವಧಿಯಲ್ಲಿ ಸಾವಿರಾರು ಕಿಲೋಮೀಟರ್ ಪ್ರಯಾಣಿಸಿದ್ದಾರೆ ಎಂದು ಪ್ರಧಾನಿ ಹೇಳಿದರು. ಅವರ ಸಾವಿಗೆ ಮುಂಚೆಯೇ, ಅವರು ಅಹಿಂಸೆಯ ಪಯಣದಲ್ಲಿದ್ದರು. 'ಆತ್ಮ ನನ್ನ ದೇವರು, ತ್ಯಾಗ ನನ್ನ ಪ್ರಾರ್ಥನೆ, ಸ್ನೇಹವೇ ನನ್ನ ಭಕ್ತಿ, ಮಿತವಾಗಿರುವುದು ನನ್ನ ಶಕ್ತಿ, ಮತ್ತು ಅಹಿಂಸೆ ನನ್ನ ಧರ್ಮ' ಎಂಬ ಆಚಾರ್ಯರ ಹೇಳಿಕೆಯನ್ನು ಪ್ರಧಾನಿ ನೆನಪಿಸಿಕೊಂಡರು. ಅವರು ಅದೇ ರೀತಿ ಬದುಕಿದರು ನಡೆಸಿದರು ಮತ್ತು ಲಕ್ಷಾಂತರ ಜನರಿಗೆ ಅದನ್ನೇ ಬೋಧಿಸಿದರು. ಯೋಗದ ಮೂಲಕ ಅವರು ಖಿನ್ನತೆ ಮುಕ್ತ ಜೀವನ ಕಲೆಯನ್ನು ಲಕ್ಷಾಂತರ ಜನರಿಗೆ ಕಲಿಸಿದರು ಎಂದು ಪ್ರಧಾನಿ ಹೇಳಿದರು. “ಇನ್ನೊಂದು ದಿನದ ನಂತರ ಬರುವ ಅಂತರರಾಷ್ಟ್ರೀಯ ಯೋಗ ದಿನವು ಕಾಕತಾಳೀಯವಾದುದು. 'ಸಂತೋಷದ ಕುಟುಂಬ ಮತ್ತು ಸಮೃದ್ಧ ರಾಷ್ಟ್ರ'ದ ಮಹಾಪ್ರಗ್ಯಾರ ಕನಸನ್ನು ನನಸಾಗಿಸಲು, ಅವರ ವಿಚಾರಗಳನ್ನು ಸಮಾಜಕ್ಕೆ ತಿಳಿಸಲು ನಾವೆಲ್ಲರೂ ಕೊಡುಗೆ ನೀಡಬೇಕಾದ ಸಂದರ್ಭ ಇದಾಗಿದೆ ” ಎಂದು ಅವರು ಹೇಳಿದರು.
ಆಚಾರ್ಯ ಮಹಾಪ್ರಗ್ಯಾರ ಮತ್ತೊಂದು ಮಂತ್ರವಾದ "ಆರೋಗ್ಯವಂತ ವ್ಯಕ್ತಿ, ಆರೋಗ್ಯಕರ ಸಮಾಜ, ಆರೋಗ್ಯಕರ ಆರ್ಥಿಕತೆ" ನಮ್ಮೆಲ್ಲರಿಗೂ ದೊಡ್ಡ ಪ್ರೇರಣೆಯಾಗಿದೆ ಎಂದು ಪ್ರಧಾನಿ ಹೇಳಿದರು.
ಇಂದು ದೇಶವು ಅದೇ ಮಂತ್ರದೊಂದಿಗೆ, ಆತ್ಮ ನಿರ್ಭರ ಭಾರತದ ಕಡೆಗೆ ಮುನ್ನಡೆಯುತ್ತಿದೆ ಎಂದರು.
“ನಮ್ಮ ಸಾಧು, ಸಂತರು ನಮಗೆ ನೀಡಿರುವ ಆದರ್ಶಗಳ ಸಂಕಲ್ಪವನ್ನು ನಮ್ಮ ಸಮಾಜ ಮತ್ತು ರಾಷ್ಟ್ರವು ಶೀಘ್ರದಲ್ಲೇ ಸಾಬೀತುಪಡಿಸುತ್ತದೆ ಎಂಬ ವಿಶ್ವಾಸ ನನಗಿದೆ. ನೀವೆಲ್ಲರೂ ಆ ಕನಸನ್ನು ನನಸಾಗಿಸುತ್ತೀರಿ ” ಎಂದು ಪ್ರಧಾನಿ ತಿಳಿಸಿದರು.
***
(Release ID: 1632639)
Visitor Counter : 252
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam