ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19: ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಂವಾದದ ಪ್ರಾಸ್ತಾವಿಕ ನುಡಿ

Posted On: 16 JUN 2020 4:33PM by PIB Bengaluru

ಕೋವಿಡ್-19ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಂವಾದದ ಪ್ರಾಸ್ತಾವಿಕ ನುಡಿ

 

ಸ್ನೇಹಿತರೆ ನಮಸ್ಕಾರ!

ಲಾಕ್ ಡೌನ್ ತೆರವಾಗಿ ಎರಡು ವಾರಗಳಾಗಿವೆ. ಈ ಅವಧಿಯಲ್ಲಿನ ಅನುಭವ ಮತ್ತು ಮುಂಚೂಣಿಗೆ ಬಂದ ಸಮಸ್ಯೆಗಳ ಪರಾಮರ್ಶೆ ನಡೆಸುವುದು ಅವಶ್ಯಕ. ಇಂದಿನ ಚರ್ಚೆಯಲ್ಲಿ, ನಿಮ್ಮಿಂದ ಬಹಳಷ್ಟು ಕಲಿಯಲು ಮತ್ತು ಅರ್ಥಮಾಡಿಕೊಳ್ಳಲು ನನಗೆ ಅವಕಾಶ ಸಿಗುತ್ತದೆ. ಇಂದಿನ ಚರ್ಚೆಯಿಂದ ಹೊರಬರುವ ಪ್ರಮುಖ ಅಂಶಗಳು ಮತ್ತು ನಿಮ್ಮ ಸಲಹೆಗಳು ದೇಶಕ್ಕೆ ಮುಂದಿನ ಯೋಜನೆ ರೂಪಿಸಲು ಸಹಾಯ ಮಾಡುತ್ತದೆ.

ಸ್ನೇಹಿತರೆ,

ಯಾವುದೇ ಬಿಕ್ಕಟ್ಟಿನ ನಿರ್ವಹಣೆಯಲ್ಲಿ ಸಮಯ ಮಹತ್ವದ ಪಾತ್ರ ವಹಿಸುತ್ತದೆ. ಸೂಕ್ತ ಸಮಯದಲ್ಲಿ ಕೈಗೊಂಡ ನಿರ್ಧಾರಗಳು ದೇಶದಲ್ಲಿ ಕೊರೊನಾ ವೈರಾಣು ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸಲು ಅಪಾರ ಸಹಾಯ ಮಾಡಿವೆ.

ಕೊರೊನಾ ವೈರಾಣು ವಿರುದ್ಧದ ಭಾರತದ ಹೋರಾಟದ ಬಗ್ಗೆ ಭವಿಷ್ಯದಲ್ಲಿ ಅಧ್ಯಯನ ನಡೆದಾಗಲೆಲ್ಲಾ, ನಾವೆಲ್ಲರೂ ಒಗ್ಗೂಡಿ  ಸಮಯದಲ್ಲಿ ಹೋರಾಡಿದ ಕಾಲ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ.

ಸ್ನೇಹಿತರೆ,

ಕೊರೊನಾ ವೈರಾಣು ಇತರ ಹಲವು ರಾಷ್ಟ್ರಗಳಲ್ಲಿ ಚರ್ಚೆಯ ವಿಷಯವೂ ಆಗದೆ ಇದ್ದ ಸಂದರ್ಭದಲ್ಲಿ, ಭಾರತ ನಿರ್ಧಾರಗಳನ್ನು ಕೈಗೊಂಡು ಅದನ್ನು ನಿಗ್ರಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿತ್ತು. ನಾವು ಪ್ರತಿಯೊಬ್ಬ ಭಾರತೀಯರ ಪ್ರಾಣ ರಕ್ಷಿಸಲು ದಿನವಿಡೀ ಶ್ರಮಿಸಿದ್ದೇವೆ.

ಸಾವಿರಾರು ಭಾರತೀಯರು ವಿದೇಶಗಳಿಂದ ಮರಳಿದರು ಮತ್ತು ಲಕ್ಷಾಂತರ ವಲಸೆ ಕಾರ್ಮಿಕರು ಕಳೆದ ಕೆಲವು ವಾರಗಳಲ್ಲಿ ತಮ್ಮ ಗ್ರಾಮಗಳಿಗೆ ಹಿಂತಿರುಗಿದರು. ಇದಕ್ಕಾಗಿ ರೈಲು, ರಸ್ತೆ, ವಿಮಾನ, ಸಮುದ್ರ ಮಾರ್ಗವನ್ನೆಲ್ಲಾ ತೆರೆಯಲಾಗಿದೆ.

ಹೆಚ್ಚು ಜನಸಂಖ್ಯೆಯಿರುವ ರಾಷ್ಟ್ರವಾಗಿದ್ದರೂ, ಭಾರತದಲ್ಲಿ ಕೊರೊನಾ ವೈರಾಣು ಇತರ ದೇಶಗಳಲ್ಲಿರುವಂತೆ ವಿನಾಶಕಾರಿಯಾಗಿಲ್ಲ. ಭಾರತದಲ್ಲಿ ವಿಧಿಸಲಾದ ಲಾಕ್‌ ಡೌನ್ ಮತ್ತು ಇಂದು ಭಾರತದ ಜನರು ತೋರಿಸಿರುವ ಶಿಸ್ತಿನ ಬಗ್ಗೆ ವಿಶ್ವದಾದ್ಯಂತ ಹಲವಾರು ತಜ್ಞರು ಮತ್ತು ಆರೋಗ್ಯ ತಜ್ಞರು ಚರ್ಚಿಸುತ್ತಿದ್ದಾರೆ.

ಇಂದು ಭಾರತದಲ್ಲಿ ಚೇತರಿಕೆ ಪ್ರಮಾಣ ಶೇ.50ಕ್ಕಿಂತ ಹೆಚ್ಚಿದೆ.  ಭಾರತ ಇಂದು ವಿಶ್ವದಲ್ಲಿ ಕೋವಿಡ್ -19 ರೋಗಿಗಳಲ್ಲಿ ಅತಿ ಹೆಚ್ಚು ಗುಣಮುಖ ದರ ಹೊಂದಿರುವ ಪ್ರಮುಖ ರಾಷ್ಟ್ರವಾಗಿದೆ. ಕೊರೊನಾ ವೈರಾಣುವಿನಿಂದ ದೇಶದಲ್ಲಿ ಒಬ್ಬನೇ ಒಬ್ಬ ಭಾರತೀಯ ಮೃತಪಟ್ಟರೂ ಅದು ದುರಂತ ಮತ್ತು ದುರ್ದೈವ. ಆದರೆ ಇಂದು ಭಾರತ ಕೋವಿಡ್ -19 ಸಾವಿನ ಸಂಖ್ಯೆ ಅತಿ ಕಡಿಮೆ ಇರುವ ರಾಷ್ಟ್ರಗಳಲ್ಲಿ ಒಂದಾಗಿದೆ ಎಂಬುದು ಅಷ್ಟೇ ಸತ್ಯ.

ಇಂದು ಹಲವು ರಾಜ್ಯಗಳ ಅನುಭವ ಕೊರೊನಾ ವೈರಾಣು ಬಿಕ್ಕಟ್ಟಿನ ನಡುವೆಯೂ ಭಾರತ ನಷ್ಟವನ್ನು ಸೀಮಿತಗೊಳಿಸಿ ಮುಂದೆ ಸಾಗುತ್ತದೆ ಮತ್ತು ತನ್ನ ಆರ್ಥಿಕತೆಯನ್ನು ಹೆಚ್ಚು ತ್ವರತಿಗತಿಯಲ್ಲಿ ಮರಳಿ ಹಳಿಗೆ ತರುತ್ತದೆ ಎಂಬ ವಿಶ್ವಾಸ ಮೂಡಿಸಿದೆ.

ಸ್ನೇಹಿತರೆ,

ಅನ್ ಲಾಕ್ 1ರ ಕಳೆದ ಎರಡು ವಾರಗಳು ನಮಗೆ  ನಾವು ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿದರೆ ಮತ್ತು ನಿಯಮಗಳಿಗೆ ಬದ್ಧರಾಗಿದ್ದರೆ ನಾವು ಆಗ ನಮ್ಮ ದೇಶವನ್ನು   ಮಾರಕ ಕೊರೊನಾ ಬಿಕ್ಕಟ್ಟಿನಿಂದ ಪಾರು ಮಾಡಬಹುದು ಎಂಬುದನ್ನು ಕಲಿಸಿದೆ.

ಹೀಗಾಗಿ, ಮಾಸ್ಕ್ ಅಥವಾ ಮುಖ ಕವಚ ಧಾರಣೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ನಾವು ಮುಖ ಕವಚ ಅಥವಾ ಮಾಸ್ಕ್ ಇಲ್ಲದೆ ಮನೆಯಿಂದ ಹೊರಗೆ ಹೋಗಬಾರದು. ಇದು  ವ್ಯಕ್ತಿಗೆ ವೈಯಕ್ತಿಕವಾಗಿ ಮತ್ತು ಅವನ ಸುತ್ತಲೂ ಇರುವವರಿಗೂ ಅಪಾಯಕಾರಿ.

ಹೀಗಾಗಿ, ನಾವು ಎರಡು ಗಜ ದೂರ ಎಂಬ ನಮ್ಮ ಮಂತ್ರವನ್ನು ಪಾಲಿಸಬೇಕು; ದಿನದಲ್ಲಿ ಹಲವು ಬಾರಿ ಕೈಗಳನ್ನು ಸಾಬೂನಿನಿಂದ 20 ಸೆಕೆಂಡುಗಳ ಕಾಲ ತೊಳೆದುಕೊಳ್ಳಬೇಕು ಮತ್ತು ಕೈಗಳನ್ನು ನೈರ್ಮಲ್ಯೀಕರಣ ಮಾಡಿಕೊಳ್ಳಬೇಕು. ಈ ಕ್ರಮಗಳನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕು. ಇದು ಒಬ್ಬ ವ್ಯಕ್ತಿಯ, ಆತನ ಕುಟುಂಬದ ಸುರಕ್ಷತೆಗೆ ಅದರಲ್ಲೂ ಮನೆಯಲ್ಲಿರುವ ಮಕ್ಕಳು ಮತ್ತು ಹಿರಿಯ ನಾಗರಿಕರ ಸುರಕ್ಷತೆಗೆ ಅತ್ಯಂತ ಮುಖ್ಯ.

ಈಗ ಬಹುತೇಕ ಎಲ್ಲ ಕಚೇರಿಗಳೂ ತೆರೆದಿವೆ. ಖಾಸಗಿ ವಲಯದಲ್ಲಿಯೂ ಕಚೇರಿಗಳು ಕಾರ್ಯಾರಂಭ ಮಾಡಿವೆ. ಜನರು ಕಚೇರಿಗೆ, ಮಾರುಕಟ್ಟೆಗೆ ಹೋಗಿ ಬರುತ್ತಿದ್ದಾರೆ ಮತ್ತು ರಸ್ತೆಗಳು ಜನರಿಂದ ತುಂಬುತ್ತಿವೆ. ಇಂಥ ಸನ್ನಿವೇಶದಲ್ಲಿ, ಈ ಎಲ್ಲ ಕ್ರಮಗಳೂ ಕೊರೊನಾ ವೈರಾಣು ವೇಗವಾಗಿ ಪಸರಿಸುವುದನ್ನು ತಡೆಯಲು ನೆರವಾಗುತ್ತದೆ. ಕೊಂಚ ನಿರ್ಲಕ್ಷ್ಯ, ನಿಷ್ಕಾಳಜಿ ಅಥವಾ ಶಿಸ್ತಿನ ಕೊರತೆ ಕೊರೊನಾ ವೈರಾಣು ವಿರುದ್ಧದ ನಮ್ಮ ಹೋರಾಟವನ್ನು ದುರ್ಬಲಗೊಳಿಸುತ್ತದೆ.

ವೈರಾಣು ಹರಡುವುದನ್ನು ತಡೆಯಲು ನಾವು ಉತ್ತಮವಾಗಿ ಸಮರ್ಥರಾಗಿದ್ದೇವೆ, ನಮ್ಮ ಆರ್ಥಿಕತೆಯು ಹೆಚ್ಚು ಮುಕ್ತವಾಗುತ್ತಿದೆ, ನಮ್ಮ ಕಚೇರಿಗಳು ಬಾಗಿಲು ತೆರೆಯುತ್ತಿವೆ, ಮಾರುಕಟ್ಟೆಗಳು ತೆರೆಯುತ್ತಿವೆ, ಸಾರಿಗೆ ಆರಂಭವಾಗಿದೆ ಮತ್ತು ಅಂತಿಮವಾಗಿ ಹೊಸ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ ಎಂಬುದನ್ನು ನಾವು ಯಾವಾಗಲೂ ನೆನಪಿನಲ್ಲಿಡಬೇಕು.

ಸ್ನೇಹಿತರೇ,

ಮುಂಬರುವ ದಿನಗಳಲ್ಲಿ, ಹಲವಾರು ರಾಜ್ಯಗಳಲ್ಲಿ ಆರ್ಥಿಕ ಚಟುವಟಿಕೆಗಳು ವಿಸ್ತರಿಸುವ ವಿಧಾನದಿಂದ ಪಡೆದ ಅನುಭವಗಳು ಇತರ ರಾಜ್ಯಗಳಿಗೂ ಪ್ರಯೋಜನವಾಗುತ್ತವೆ. ಕಳೆದ ಕೆಲವು ವಾರಗಳಲ್ಲಿ, ನಮ್ಮ ಆರ್ಥಿಕತೆಯಲ್ಲಿ ಹೊಸ ಚಿಗುರು ಕಾಣಿಸಿಕೊಳ್ಳಲಾರಂಭಿಸಿವೆ. ಈ ಹಿಂದೆ ಕಡಿಮೆಯಾಗುತ್ತಿದ್ದ ವಿದ್ಯುತ್ ಬಳಕೆ ಈಗ ಹೆಚ್ಚಾಗಲು ಪ್ರಾರಂಭಿಸಿದೆ. ಕಳೆದ ವರ್ಷ ಮೇ ತಿಂಗಳಿಗೆ ಹೋಲಿಸಿದರೆ  ವರ್ಷದ ಮೇ ತಿಂಗಳಲ್ಲಿ ರಸಗೊಬ್ಬರ ಮಾರಾಟ ದ್ವಿಗುಣಗೊಂಡಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಮುಂಗಾರು ಬಿತ್ತನೆ ಶೇ.12-13ರಷ್ಟು ಹೆಚ್ಚಾಗಿದೆ. ದ್ವಿಚಕ್ರ ವಾಹನ ಉತ್ಪಾದನೆ ಲಾಕ್ ಡೌನ್ ಪೂರ್ವ ಅವಧಿಯ ಶೇ.70ರ ಮಟ್ಟ ತಲುಪಿದೆ. ಚಿಲ್ಲರೆ ಮಾರಾಟದಲ್ಲಿ ಡಿಜಿಟಲ್ ಪಾವತಿ ಕೂಡ ಲಾಕ್ ಡೌನ್ ಪೂರ್ವ ಮಟ್ಟಕ್ಕೆ ತಲುಪಿದೆ.

ಮಿಗಿಲಾಗಿ, ಮೇ ತಿಂಗಳಲ್ಲಿನ ಟೋಲ್ ಸಂಗ್ರಹಣೆ  ಆರ್ಥಿಕ ಚಟುವಟಿಕೆ ಹೆಚ್ಚಳವನ್ನು ಬಿಂಬಿಸುತ್ತದೆ. ಸತತ ಮೂರು ತಿಂಗಳು ರಫ್ತು ಇಳಿಮುಖದ ಬಳಿಕ, ಜೂನ್ ತಿಂಗಳಲ್ಲಿ ರಫ್ತು ಮರಳಿ ಚೇತರಿಸಿಕೊಂಡಿದ್ದು ಕೋವಿಡ್ ಪೂರ್ವ ಅವಧಿಯ ಕಳೆದ ವರ್ಷದ ಮಟ್ಟ ಮುಟ್ಟಿದೆ. ಈ ಎಲ್ಲ ಸಂಕೇತಗಳೂ ನಾವು ಮುಂದಡಿ ಇಡಲು ಪ್ರೋತ್ಸಾಹಿಸುತ್ತವೆ.

ಸ್ನೇಹಿತರೆ,

ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಎಂ.ಎಸ್.ಎಂ.ಇ.ಗಳ ಪಾಲು ಹಲವು ರಾಜ್ಯಗಳಲ್ಲಿ ತುಂಬಾ ಹೆಚ್ಚಾಗಿದೆ. ಆತ್ಮ ನಿರ್ಭರ ಭಾರತ ಅಭಿಯಾನದಡಿಯಲ್ಲಿ ಕಳೆದ ಕೆಲವು ದಿನಗಳಲ್ಲಿ ಹಲವು  ವಲಯಕ್ಕೆ ಹಲವು ಅವಕಾಶ ಕಲ್ಪಿಸಲಾಗಿದೆ.

ಎಂ.ಎಸ್.ಎಂ.ಇಗಳಿಗೆ ಬೆಂಬಲ ನೀಡಲು ಇತ್ತೀಚೆಗೆ ಹಲವು ನಿರ್ಧಾರ ಕೈಗೊಳ್ಳಲಾಗಿದೆ. ಈ ಎಂ.ಎಸ್.ಎಂ.ಇ.ಗಳಿಗೆ ಬ್ಯಾಂಕ್ ಗಳಿಂದ ಸಾಲ ಕಾಲಮಿತಿಯೊಳಗೆ ದೊರಕುವುದನ್ನು ಖಾತ್ರಿಪಡಿಸಲು ಪ್ರಯತ್ನ ನಡೆದಿದೆ.  100 ಕೋಟಿ ವಹಿವಾಟು ಹೊಂದಿರುವ ಕೈಗಾರಿಕೆಗಳಿಗೆ ಶೇ.20ರಷ್ಟು ಹೆಚ್ಚುವರಿ ಸಾಲ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಬ್ಯಾಂಕ್ ಸಮಿತಿಗಳ ಮೂಲಕ ನಾವು ಕೈಗಾರಿಕೆಗಳು ತ್ವರಿತವಾಗಿ ಸಾಲ ಪಡೆಯುವುದನ್ನು ಖಾತ್ರಿ ಪಡಿಸಬಹುದು, ಆಗ ಅವರು ತಮ್ಮ ಕೆಲಸವನ್ನು ಎಷ್ಟು ಬೇಗ ಆಗುತ್ತದೆ ಅಷ್ಟು ಶೀಘ್ರ ಆರಂಭಿಸಲು ಸಾಧ್ಯವಾಗುತ್ತದೆ ಮತ್ತು ಜನರಿಗೆ ಉದ್ಯೋಗ ಲಭಿಸುತ್ತದೆ.

ಸ್ನೇಹಿತರೆ,

ಸಣ್ಣ ಕಾರ್ಖಾನೆಗಳಿಗೆ ನಾವು ಮಾರ್ಗದರ್ಶನ ಮಾಡುವ ಮತ್ತು ಕೈ ಹಿಡಿಯುವ ಅಗತ್ಯವಿದೆ; ನಿಮ್ಮ ನಾಯಕತ್ವದಲ್ಲಿ  ನಿಟ್ಟಿನಲ್ಲಿ ಸಾಕಷ್ಟು ಕಾರ್ಯ ಮಾಡಲಾಗುತ್ತಿದೆ ಎಂದು ನನಗೆ ತಿಳಿದಿದೆ. ವ್ಯಾಪಾರ ಮತ್ತು ಕೈಗಾರಿಕೆಗಳು ತಮ್ಮ ಹಳೆಯ ವೇಗವನ್ನು ಮರಳಿ ಪಡೆಯಲು ನಾವು ಮೌಲ್ಯ ಸರಪಳಿಗಳಲ್ಲಿ ಒಟ್ಟಾಗಿ ಕೆಲಸ ಮಾಡಬೇಕು. ರಾಜ್ಯಗಳ ನಿರ್ದಿಷ್ಟ ಆರ್ಥಿಕ ಚಟುವಟಿಕೆಯ ಅಂಶಗಳು ಹಗಲಿರುಳು ಕೆಲಸ ಮಾಡಿದರೆ, ಸರಕುಗಳ ಲೋಡ್ ಮಾಡುವಿಕೆ - ಇಳಿಸುವಿಕೆಯನ್ನು ತ್ವರಿತವಾಗಿ ಮಾಡಿದರೆ ಮತ್ತು ಒಂದು ನಗರದಿಂದ ಇನ್ನೊಂದಕ್ಕೆ ಸರಕುಗಳ ಸಾಗಾಟಕ್ಕೆ ಸ್ಥಳೀಯ ಮಟ್ಟದಲ್ಲಿ ಯಾವುದೇ ಅಡಚಣೆಗಳಿಲ್ಲದಿದ್ದರೆ ಆರ್ಥಿಕ ಚಟುವಟಿಕೆಗಳು ವೃದ್ಧಿಸುತ್ತವೆ.

ಸ್ನೇಹಿತರೆ,

ರೈತರ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಇತ್ತೀಚೆಗೆ ನಡೆದ ಸುಧಾರಣೆಗಳು ರೈತರಿಗೆ ಅಪಾರ ಪ್ರಯೋಜನವನ್ನು ನೀಡುತ್ತಿವೆ. ಈ ಕಾರಣದಿಂದಾಗಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೊಸ ಪರ್ಯಾಯ ಪಡೆಯಲಿದ್ದಾರೆ ಮತ್ತು ಅವರ ಆದಾಯವು ಹೆಚ್ಚಾಗಲಿದೆ. ಪ್ರಕೃತಿ ಮುನಿಸಿನಿಂದ ಮತ್ತು ದಾಸ್ತಾನು ಸೌಲಭ್ಯದ ಕೊರತೆಯಿಂದ ರೈತರು ಅನುಭವಿಸುವ ನಷ್ಟವನ್ನು ನಾವು ತಗ್ಗಿಸಬಹುದಾಗಿದೆ. ಯಾವಾಗ ರೈತರ ಆದಾಯ ಹೆಚ್ಚಾಗುತ್ತದೆಯೋ ಬೇಡಿಕೆ ಸಹಜವಾಗೇ ಹೆಚ್ಚುತ್ತದೆ ಮತ್ತು ರಾಜ್ಯದ ಆರ್ಥಿಕತೆಗೆ ಚೈತನ್ಯ ಬರುತ್ತದೆ. ಅದರಲ್ಲೂ ಈಶಾನ್ಯ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಹಲವು ಅವಕಾಶಗಳು ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ತೆರೆದುಕೊಳ್ಳುತ್ತಿವೆ. ಅದು ಸಾವಯವ ಉತ್ಪನ್ನವಾಗಿರಲಿ, ಬಿದಿರಿನ ಉತ್ಪನ್ನವಾಗಿರಲಿ ಅಥವಾ ಇತರ ಬುಡಕಟ್ಟು ಉತ್ಪನ್ನವೇ ಆಗಿರಲಿ, ಈ ವಲಯಕ್ಕೆ ಹೊಸ ಮಾರುಕಟ್ಟೆಯ ಬಾಗಿಲು ತೆರೆಯಲಿದೆ. ಎಲ್ಲ ರಾಜ್ಯಗಳೂ ಸ್ಥಳೀಯ ಉತ್ಪನ್ನಗಳಿಗಾಗಿ ಪ್ರಕಟಿಸಲಾಗಿರುವ ಕ್ಲಸ್ಟರ್ ಆಧಾರಿತ ನೀತಿಯ ಪ್ರಯೋಜನ ಪಡೆಯಲಿವೆ.ಹೀಗಾಗಿ ನಾವು ಪ್ರತಿಯೊಂದು ವಿಭಾಗದಲ್ಲೂ ಪ್ರತಿ ಜಿಲ್ಲೆಯಲ್ಲೂ ಇಂಥ ಉತ್ಪನ್ನ ಗುರುತಿಸಿ, ಪ್ರಕ್ರಿಯೆ ಅಥವಾ ಮಾರುಕಟ್ಟೆ ಮಾಡಿದರೆ ನಾವು ಅವುಗಳಿಗೆ ದೇಶದಲ್ಲಿ ಅಷ್ಟೇ ಅಲ್ಲ ಜಾಗತಿಕ ಮಾರುಕಟ್ಟೆಯಲ್ಲೂ ಸ್ಥಾನ ಕೊಡಿಸಬಹುದು.

ಸ್ನೇಹಿತರೆ,

ಆತ್ಮ ನಿರ್ಭರ ಭಾರತ ಯೋಜನೆ ಅಡಿಯಲ್ಲಿ ಇತ್ತೀಚೆಗೆ ಮಾಡಲಾಗಿರುವ  ಪ್ರಕಟಣೆಗಳನ್ನು ನಾವು ಒಂದು ನಿರ್ದಿಷ್ಟ ಕಾಲದ ಚೌಕಟ್ಟಿನೊಳಗೆ ಜಾರಿಮಾಡಲು ಒಗ್ಗೂಡಿ ಶ್ರಮಿಸಬೇಕು. ಈ ಹಿನ್ನೆಲೆಯಲ್ಲಿ, ನಾನು ನಿಮ್ಮ ಸಲಹೆಗಳನ್ನು ಮತ್ತು ಕೊರೊನಾ ಸಾಂಕ್ರಾಮಿಕದ ವಿರುದ್ಧದ ಹೋರಾಟ ಮತ್ತು ಆರ್ಥಿಕ ಚಟುವಟಿಕೆ ನಿಟ್ಟಿನಲ್ಲಿ ನಿಮ್ಮ ಸಿದ್ಧತೆಗಳ ಬಗ್ಗೆ  ತಿಳಿಯಲು ಉತ್ಸುಕನಾಗಿದ್ದೇನೆ. ನಾನು ಈಗ ಗೃಹ ಸಚಿವರನ್ನು ಮುಂದಿನ ಚರ್ಚೆ ನಡೆಸಲು ಕೋರುತ್ತೇನೆ.

***



(Release ID: 1632306) Visitor Counter : 237