ಪ್ರಧಾನ ಮಂತ್ರಿಯವರ ಕಛೇರಿ

ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಮತ್ತು ಪ್ರಧಾನಿ ಮೋದಿ ನಡುವೆ ದೂರವಾಣಿ ಮಾತುಕತೆ

Posted On: 10 JUN 2020 9:49PM by PIB Bengaluru

ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಮತ್ತು ಪ್ರಧಾನಿ ಮೋದಿ ನಡುವೆ ದೂರವಾಣಿ ಮಾತುಕತೆ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ಶ್ರೀ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಇಂದು ದೂರವಾಣಿ ಮಾತುಕತೆ ನಡೆಸಿದರು.

ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಪ್ರಧಾನಿ ನೆತನ್ಯಾಹು ಅವರಿಗೆ ಪ್ರಧಾನಮಂತ್ರಿಯವರು ಅಭಿನಂದನೆಗಳನ್ನು ತಿಳಿಸಿದರು. ಪ್ರಧಾನಿ ನೆತನ್ಯಾಹು ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಭಾರತ-ಇಸ್ರೇಲ್ ಸಹಭಾಗಿತ್ವವು ಮುಂದುವರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲಸಿಕೆಗಳು, ಚಿಕಿತ್ಸೆ ಮತ್ತು ರೋಗನಿರ್ಣಯ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳು ಸೇರಿದಂತೆ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತ ಮತ್ತು ಇಸ್ರೇಲ್ ಸಹಕಾರವನ್ನು ವಿಸ್ತರಿಸಬಹುದಾದ ಸಂಭಾವ್ಯ ಕ್ಷೇತ್ರಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಉಭಯ ದೇಶಗಳ ತಜ್ಞರ ತಂಡಗಳ ನಡುವೆ ನಡೆಯುತ್ತಿರುವ ವಿನಿಮಯವನ್ನು ನಿರ್ವಹಿಸಲು ಅವರು ಒಪ್ಪಿಕೊಂಡರು ಮತ್ತು ಸಹಯೋಗದ ಪ್ರಯೋಜನಗಳು ಮಾನವಕುಲಕ್ಕೆ ವ್ಯಾಪಕವಾಗಿ ಲಭ್ಯವಾಗುವ ಬಗ್ಗೆ ಸಮ್ಮತಿಸಿದರು.

ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿನ ಇತರ ಪ್ರಮುಖ ವಿಷಯಗಳ ಬಗ್ಗೆಯೂ ಇಬ್ಬರೂ ನಾಯಕರು ಪರಿಶೀಲಿಸಿದರು. ಕೋವಿಡ್ ನಂತರದ ಪ್ರಪಂಚವು ಅನೇಕ ಕ್ಷೇತ್ರಗಳಲ್ಲಿ ಪರಸ್ಪರ ಲಾಭದಾಯಕ ಸಹಭಾಗಿತ್ವಕ್ಕೆ ಮತ್ತಷ್ಟು ಮಾರ್ಗಗಳನ್ನು ಸೃಷ್ಟಿಸುತ್ತದೆ ಎಂದು ಒಪ್ಪಿಕೊಂಡರು. ನಿರ್ದಿಷ್ಟವಾಗಿ ಹೇಳುವುದಾದರೆ, ಆರೋಗ್ಯ ತಂತ್ರಜ್ಞಾನ, ಕೃಷಿ ನಾವೀನ್ಯತೆ, ರಕ್ಷಣಾ-ಸಹಕಾರ ಮತ್ತು ಮಾಹಿತಿ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಈಗಾಗಲೇ ಬಲವಾಗಿರುವ ಭಾರತ-ಇಸ್ರೇಲ್ ಸಹಯೋಗದ ವ್ಯಾಪ್ತಿಯನ್ನು ವಿಸ್ತರಿಸಲು ಅವರು ನಿರ್ಣಯಿಸಿದರು.

ಮೌಲ್ಯಮಾಪನಗಳನ್ನು ಹಂಚಿಕೊಳ್ಳಲು, ನಿಯಮಿತವಾಗಿ ಸಂಪರ್ಕದಲ್ಲಿರಲು ಮತ್ತು ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಹೊರಹೊಮ್ಮುವ ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ಪರಸ್ಪರ ಸಮಾಲೋಚಿಸಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದರು.

***



(Release ID: 1630825) Visitor Counter : 242