ಪ್ರಧಾನ ಮಂತ್ರಿಯವರ ಕಛೇರಿ
ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನ ಮಂತ್ರಿ
Posted On:
11 MAY 2020 10:22PM by PIB Bengaluru
ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನ ಮಂತ್ರಿ
2020 ರ ಮಾರ್ಚ್ 20 ರಿಂದ ಮುಖ್ಯಮಂತ್ರಿಗಳೊಂದಿಗಿನ 5 ನೇ ಸಭೆ
ಗ್ರಾಮೀಣ ಪ್ರದೇಶದಲ್ಲಿ ಕೋವಿಡ್-19 ಹರಡುವುದನ್ನು ತಡೆಯುವ ಪ್ರಯತ್ನ ಈಗ ಆಗಬೇಕು: ಪ್ರಧಾನಿ ಶ್ರೀ ನರೇಂದ್ರ ಮೋದಿ
ಭಾರತವು ಕೋವಿಡ್ ನಂತರದ ಯುಗದಲ್ಲಿ ಉದ್ಭವಿಸುವ ಅವಕಾಶಗಳ ಪ್ರಯೋಜನ ಪಡೆಯಬೇಕು: ಪ್ರಧಾನಿ
ನಾವೆಲ್ಲರೂ ಹೊಸ ವಾಸ್ತವದ ಜಗತ್ತಿಗಾಗಿ ಸಿದ್ಧರಾಗಬೇಕು: ಪ್ರಧಾನಿ
ಕೋವಿಡ್-19ರ ವಿರುದ್ಧ ಭಾರತದ ಹೋರಾಟದಲ್ಲಿ ಮುಂದಿನ ಹಾದಿ ಕುರಿತು ಚರ್ಚಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಸಭೆ ನಡೆಸಿದರು.
ಪ್ರಧಾನ ಮಂತ್ರಿಯವರು ತಮ್ಮ ಆರಂಭಿಕ ನುಡಿಗಳಲ್ಲಿ, “ಭಾರತದಲ್ಲಿ ಹೆಚ್ಚು ಪೀಡಿತ ಪ್ರದೇಶಗಳೂ ಸೇರಿದಂತೆ ಸಾಂಕ್ರಾಮಿಕ ರೋಗದ ಭೌಗೋಳಿಕ ಹರಡುವಿಕೆಗೆ ಸಂಬಂಧಿಸಿದಂತೆ ನಾವು ಈಗ ಸ್ಪಷ್ಟತೆಯನ್ನು ಹೊಂದಿದ್ದೇವೆ. ಇದಲ್ಲದೆ, ಕಳೆದ ಕೆಲವು ವಾರಗಳಲ್ಲಿ, ಅಧಿಕಾರಿಗಳು ಜಿಲ್ಲಾ ಹಂತದವರೆಗೆ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು ಅರ್ಥಮಾಡಿಕೊಂಡಿದ್ದಾರೆ. ” ಎಂದು ಹೇಳಿದರು.
ಕೋವಿಡ್-19 ಹರಡುವಿಕೆಯ ಬಗೆಗಿನ ಈ ತಿಳುವಳಿಕೆಯು ದೇಶವು ಅದರ ವಿರುದ್ಧ ಕೇಂದ್ರೀಕೃತ ಹೋರಾಟವನ್ನು ನಡೆಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.
"ಆದ್ದರಿಂದ, ಕೊರೊನಾವೈರಸ್ ವಿರುದ್ಧದ ಈ ಯುದ್ಧದಲ್ಲಿ ನಾವು ಈಗ ನಮ್ಮ ಕಾರ್ಯತಂತ್ರವನ್ನು ಮತ್ತಷ್ಟು ಕೇಂದ್ರೀಕರಿಸಬಹುದು. ನಮಗೀಗ ಎರಡು ರೀತಿಯ ಸವಾಲುಗಳು ಎದುರಾಗಿವೆ, ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ರೋಗದ ಹರಡುವಿಕೆಯ ಪ್ರಮಾಣವನ್ನು ಕಡಿಮೆ ಮಾಡುವುದು ಮತ್ತು ಸಾರ್ವಜನಿಕ ಚಟುವಟಿಕೆಯನ್ನು ಕ್ರಮೇಣ ಹೆಚ್ಚಿಸುವುದು. ಈ ಎರಡೂ ಉದ್ದೇಶಗಳನ್ನು ಸಾಧಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ ”ಎಂದು ಅವರು ಹೇಳಿದರು.
ಕೋವಿಡ್-19 ಗ್ರಾಮೀಣ ಪ್ರದೇಶಗಳಿಗೆ ಹರಡುವುದನ್ನು ತಡೆಯುವ ಪ್ರಯತ್ನ ಈಗ ಆಗಬೇಕು ಎಂದು ಪ್ರಧಾನಿ ಹೇಳಿದರು.
ಆರ್ಥಿಕತೆಯನ್ನು ಕುರಿತು ರಾಜ್ಯಗಳು ನೀಡಿದ ಸಲಹೆಗಳನ್ನು ಸೂಕ್ತವಾಗಿ ಪರಿಗಣಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
ಕೋವಿಡ್-19 ವಿರುದ್ಧ ದೇಶದ ಹೋರಾಟದಲ್ಲಿ ಪ್ರಧಾನ ಮಂತ್ರಿಯವರ ನಾಯಕತ್ವವನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು ಮತ್ತು ದೇಶದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸುವ ಅಗತ್ಯದ ಬಗ್ಗೆ ಗಮನ ಸೆಳೆದರು. ವಲಸೆ ಕಾರ್ಮಿಕರ ಮರಳುವಿಕೆಯೊಂದಿಗೆ, ಹೊಸ ಸೋಂಕಿನ ಮೂಲಕ ಹರಡುವಿಕೆಯನ್ನು ತಡೆಗಟ್ಟಲು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಅಂತರದ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಷ್ಠಾನ, ಮುಖಗವಸುಗಳ ಬಳಕೆ ಮತ್ತು ನೈರ್ಮಲ್ಯೀಕರಣದ ಬಗ್ಗೆ ಗಮನಹರಿಸುವ ಅವಶ್ಯಕತೆಯಿದೆ ಎಂದು ಅವರಲ್ಲಿ ಅನೇಕರು ಗಮನಸೆಳೆದರು.
ವಿದೇಶದಿಂದ ಹಿಂದಿರುಗಿದ ಭಾರತೀಯರ ಕಡ್ಡಾಯ ಕ್ವಾರಂಟೈನ್ ಬಗ್ಗೆ ಸಹ ಒತ್ತಿ ಹೇಳಲಾಯಿತು. ಎಂಎಸ್ಎಂಇಗಳು, ವಿದ್ಯುತ್ನಂತಹ ಮೂಲಸೌಕರ್ಯ ಯೋಜನೆಗಳಿಗೆ ಬೆಂಬಲ, ಸಾಲಗಳ ಮೇಲಿನ ಬಡ್ಡಿದರಗಳ ಕಡಿತ ಮತ್ತು ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಲಭ್ಯತೆಯ ಖಾತ್ರಿಯ ಬಗ್ಗೆ ಆರ್ಥಿಕತೆಯನ್ನು ಕುರಿತು ಮುಖ್ಯಮಂತ್ರಿಗಳು ತಮ್ಮ ಸಲಹೆಗಳನ್ನು ನೀಡಿದರು.
ಕೋವಿಡ್-19 ವಿರುದ್ಧದ ದೇಶದ ಹೋರಾಟದಲ್ಲಿ ಮತ್ತು ಅವರ ಸಕ್ರಿಯ ಪಾತ್ರ ಮತ್ತು ತಳಮಟ್ಟದ ಅನುಭವದಿಂದ ಹೊರಹೊಮ್ಮಿದ ಅಮೂಲ್ಯ ಸಲಹೆಗಳಿಗಾಗಿ ಮುಖ್ಯಮಂತ್ರಿಗಳಿಗೆ ಪ್ರಧಾನಿ ಧನ್ಯವಾದ ಅರ್ಪಿಸಿದರು.
ಕೋವಿಡ್-19 ರ ನಂತರ ವಿಶ್ವವು ಮೂಲಭೂತವಾಗಿ ಬದಲಾಗಿರುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು. ವಿಶ್ವ ಸಮರಗಳಂತೆಯೇ ಈಗ ವಿಶ್ವವು ಕೊರೋನಾಗೆ ಮೊದಲು, ಕೊರೊನಾ ನಂತರ ಎಂದು ಆಗಿರುತ್ತದೆ. ಇದು ನಾವು ಹೇಗೆ ಕಾರ್ಯನಿರ್ವಹಿಸುತ್ತೇವೆ ಎಂಬುದರ ಮೇಲೆ ಗಮನಾರ್ಹ ಬದಲಾವಣೆಗಳನ್ನು ಉಂಟುಮಾಡುತ್ತದೆ.
ಹೊಸ ಜೀವನ ವಿಧಾನವು "ಜನ್ ಸೆ ಲೇಕರ್ ಜಗ್ ತಕ್" - ಒಬ್ಬ ವ್ಯಕ್ತಿಯಿಂದ ಇಡೀ ಮಾನವೀಯತೆಯವರೆಗೆ- ತತ್ತ್ವದ ಮೇಲೆ ಇರುತ್ತದೆ,
ಹೊಸ ವಾಸ್ತವಕ್ಕಾಗಿ ನಾವೆಲ್ಲರೂ ಸಿದ್ಧರಾಗಬೇಕು ಎಂದು ಅವರು ಹೇಳಿದರು.
"ಲಾಕ್ಡೌನ್ ಅನ್ನು ಕ್ರಮೇಣ ಹಿಂತೆಗೆದುಕೊಳ್ಳುವುದನ್ನು ಬಗ್ಗೆ ನಾವು ಯೋಚಿಸುತ್ತಿದ್ದರೂ ಸಹ, ಲಸಿಕೆ ಅಥವಾ ಪರಿಹಾರವನ್ನು ಕಂಡುಹಿಡಿಯದವರೆಗೂ, ವೈರಸ್ ವಿರುದ್ಧ ಹೋರಾಡಲು ನಮ್ಮೊಂದಿಗೆ ಇರುವ ದೊಡ್ಡ ಅಸ್ತ್ರ ಸಾಮಾಜಿಕ ಅಂತರ ಎಂಬುದನ್ನು ನಾವು ಸದಾ ನೆನಪಿಟ್ಟುಕೊಳ್ಳಬೇಕು" ಎಂದು ಅವರು ಹೇಳಿದರು.
‘ದೋ ಗಜ್ ಕಿ ದೂರಿ’ ಯ ಮಹತ್ವವನ್ನು ಪ್ರಧಾನ ಮಂತ್ರಿಯವರು ಪುನರುಚ್ಚರಿಸಿದರು. ಅನೇಕ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ ರಾತ್ರಿ ಕರ್ಫ್ಯೂ ಸಲಹೆಯು ಜನರಲ್ಲಿ ಎಚ್ಚರಿಕೆಯ ಭಾವನೆಯನ್ನು ಖಂಡಿತವಾಗಿ ಪುನರ್ ದೃಢೀಕರಿಸುತ್ತದೆ ಎಂದು ಹೇಳಿದರು.
ಲಾಕ್ಡೌನ್ ಕುರಿತು ನಿರ್ದಿಷ್ಟ ಫೀಡ್ ಬ್ಯಾಕ್ ನೀಡುವಂತೆ ಅವರು ಎಲ್ಲಾ ಮುಖ್ಯಮಂತ್ರಿಗಳನ್ನು ವಿನಂತಿಸಿದರು.
“ನಿಮ್ಮ ರಾಜ್ಯಗಳಲ್ಲಿನ ಲಾಕ್ಡೌನ್ ಅನ್ನು ಹೇಗೆ ಎದುರಿಸಲು ಬಯಸುತ್ತೀರಿ ಎಂಬ ಬಗ್ಗೆ ವಿಶಾಲ ಕಾರ್ಯತಂತ್ರವನ್ನು ಮೇ 15 ರೊಳಗೆ ನನ್ನೊಂದಿಗೆ ಹಂಚಿಕೊಳ್ಳಲು ನಿಮ್ಮೆಲ್ಲರಿಗೂ ವಿನಂತಿಸುತ್ತೇನೆ, ಲಾಕ್ಡೌನ್ ಅನ್ನು ಕ್ರಮೇಣ ಸರಾಗಗೊಳಿಸುವ ಸಮಯದಲ್ಲಿ ಮತ್ತು ನಂತರ ವಿವಿಧ ಸೂಕ್ಷ್ಮ ವ್ಯತ್ಯಾಸಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ರಾಜ್ಯಗಳು ನೀಲ ನಕಾಶೆಯನ್ನು ತಯಾರಿಸಬೇಕೆಂದು ನಾನು ಬಯಸುತ್ತೇನೆ ”ಎಂದು ಅವರು ಹೇಳಿದರು.
ನಮ್ಮ ಮುಂದೆ ಉದ್ಭವಿಸುವ ವಿವಿಧ ಸವಾಲುಗಳನ್ನು ಎದುರಿಸಲು ನಮಗೆ ಎಲ್ಲರನ್ನೂ ಒಳಗೊಳ್ಳುವ ವಿಧಾನದ ಅಗತ್ಯವಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಮುಂಗಾರುವಿನೊಂದಿಗೆ ಕೋವಿಡೇತರ ಅನೇಕ ರೋಗಗಳ ಪ್ರಸರಣ ಆರಂಭವಾಗುತ್ತದೆ, ಇದಕ್ಕಾಗಿ ನಾವು ನಮ್ಮ ವೈದ್ಯಕೀಯ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ಸಿದ್ಧಪಡಿಸಬೇಕು ಮತ್ತು ಬಲಪಡಿಸಬೇಕು ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಬೋಧನೆ ಮತ್ತು ಕಲಿಕೆಯ ಹೊಸ ಮಾದರಿಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಸಹ ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಅವರು ನೀತಿ ನಿರೂಪಕರನ್ನು ಕೇಳಿದರು.
ಪ್ರವಾಸೋದ್ಯಮದ ಬಗ್ಗೆ ಉಲ್ಲೇಖಿಸಿದ ಪ್ರಧಾನಿಯವರು, ದೇಶೀಯ ಪ್ರವಾಸೋದ್ಯಮದ ಸಾಮರ್ಥ್ಯವನ್ನು ನಾನು ಕಂಡಿದ್ದೇನೆ. ಆದರೆ ನಾವು ಅದರ ಏರಿಳಿತಗಳ ಬಗ್ಗೆ ಯೋಚಿಸಬೇಕಾಗಿದೆ ಎಮದರು.
"ಮೊದಲ ಹಂತದ ಲಾಕ್ಡೌನ್ನಲ್ಲಿ ಅಗತ್ಯವಾದ ಕ್ರಮಗಳು 2 ನೇ ಹಂತದಲ್ಲಿ ಅಗತ್ಯವಿಲ್ಲ ಮತ್ತು ಅದೇ ರೀತಿ 3 ನೇ ಹಂತದಲ್ಲಿ ಅಗತ್ಯವಿರುವ ಕ್ರಮಗಳು ನಾಲ್ಕನೆಯದರಲ್ಲಿ ಅಗತ್ಯವಿರುವುದಿಲ್ಲ ಎಂದು ನಾನು ದೃಢವಾಗಿ ಭಾವಿಸುತ್ತೇನೆ" ಎಂದು ಅವರು ಹೇಳಿದರು.
ರೈಲು ಸೇವೆಗಳ ಪುನರಾರಂಭವನ್ನು ಉಲ್ಲೇಖಿಸಿದ ಪ್ರಧಾನಿಯವರು, ಆರ್ಥಿಕ ಚಟುವಟಿಕೆಯನ್ನು ಪುನಶ್ಚೇತನಗೊಳಿಸಲು ಇದು ಅಗತ್ಯವಾಗಿದೆ, ಆದರೆ ಎಲ್ಲಾ ಮಾರ್ಗಗಳನ್ನು ಪುನರಾರಂಭಿಸಲಾಗುವುದಿಲ್ಲ. ಸೀಮಿತ ಸಂಖ್ಯೆಯ ರೈಲುಗಳು ಮಾತ್ರ ಸಂಚರಿಸುತ್ತವೆ ಎಂದು ಹೇಳಿದರು.
ಒಂದೇ ಒಂದು ರಾಜ್ಯವೂ ಸಹ ನಿರಾಶೆಗೊಳಗಾಗದೆ ಇರುವುದರಿಂದ ಈ ಸಾಮೂಹಿಕ ದೃಢ ನಿಶ್ಚಯವು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತವನ್ನು ಗೆಲ್ಲುವಂತೆ ಮಾಡುತ್ತದೆ ಎಂಬ ಆಶಾಭಾವವನ್ನು ತಾವು ಹೊಂದಿರುವುದಾಗಿ ಎಂದು ಪ್ರಧಾನಿ ಹೇಳಿದರು.
ಕೋವಿಡ್ ನಂತರದ ಯುಗವು ಅನೇಕ ಅವಕಾಶಗಳನ್ನು ಸಹ ಸೃಷ್ಟಿಸುತ್ತದೆ, ಅವುಗಳ ಪ್ರಯೋಜನವನ್ನು ಭಾರತ ಪಡೆದುಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು.
***
(Release ID: 1623213)
Visitor Counter : 604
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam