ಉಪರಾಷ್ಟ್ರಪತಿಗಳ ಕಾರ್ಯಾಲಯ

ರಾಜ್ಯಸಭಾ ಅಧ್ಯಕ್ಷರು ಮತ್ತು ಲೋಕಸಭಾ ಸ್ಪೀಕರ್, ಕೋವಿಡ್ ಮತ್ತು ಸಂಸದೀಯ ಸಮಿತಿಗಳ ಸಭೆ ಕುರಿತು ಚರ್ಚೆ

Posted On: 07 MAY 2020 5:12PM by PIB Bengaluru

ರಾಜ್ಯಸಭಾ ಅಧ್ಯಕ್ಷರು ಮತ್ತು ಲೋಕಸಭಾ ಸ್ಪೀಕರ್, ಕೋವಿಡ್ ಮತ್ತು ಸಂಸದೀಯ ಸಮಿತಿಗಳ ಸಭೆ ಕುರಿತು ಚರ್ಚೆ

 

ಭಾರತದ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷರಾಗಿರುವ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಇಂದು ಉಪರಾಷ್ಟ್ರಪತಿ ನಿವಾಸದಲ್ಲಿ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರೊಂದಿಗೆ ದೇಶದಲ್ಲಿ ಕೋವಿಡ್ 19 ರೋಗದ ಸ್ಥಿತಿಗತಿ, ಸಂಸದರು ವಹಿಸುತ್ತಿರುವ ಪಾತ್ರ ಮತ್ತು ಸಂಸದೀಯ ಸಮಿತಿಗಳ ಸಭೆಗಳನ್ನು ನಡೆಸುವ ಸಾಧ್ಯತೆಗಳ ಕುರಿತು ಚರ್ಚೆ ನಡೆಸಿದರು.

ಉಭಯ ಸದನಗಳ ಮುಖ್ಯಸ್ಥರು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸಂಸದರು, ಕ್ರಿಯಾಶೀಲ ಪಾತ್ರವಹಿಸುತ್ತಿರುವುದರ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಅಲ್ಲದೆ ಸಂಸದರು ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ, ಎರಡೂ ಸರ್ಕಾರಗಳು ಮತ್ತು ನಾಗರಿಕ ಸಮಾಜ ಕೈಗೊಂಡಿರುವ ಮಾನವೀಯತೆಯನ್ನು ಸಾರುವ ಹಲವು ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸಂಸದರು, ತಮ್ಮನ್ನು ಪ್ರತಿನಿಧಿಸುವ ಜನರೊಂದಿಗೆ ಅತ್ಯಂತ ಕಷ್ಟ ಕಾಲದಲ್ಲಿ ಜೊತೆಯಲ್ಲಿಇದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಶ್ರೀ ವೆಂಕಯ್ಯ ನಾಯ್ಡು ಮತ್ತು ಶ್ರೀ ಓಂ ಬಿರ್ಲಾ ಅವರು, ಪ್ರಸಕ್ತ ಸಂದರ್ಭದಲ್ಲಿ ಮತ್ತು ದೇಶಾದ್ಯಂತ ಪ್ರಯಾಣಕ್ಕೆ ಹಲವು ನಿರ್ಬಂಧಗಳಿರುವ ಸನ್ನಿವೇಶದಲ್ಲಿ ಸಂಸದೀಯ ಸಮಿತಿಗಳು ತಮ್ಮ ಸಭೆಗಳನ್ನು ನಡೆಸುವ ಸಾಧ್ಯತೆಗಳ ಕುರಿತಂತೆ ಚರ್ಚಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಸಮಿತಿಗಳು ಸಾಂಪ್ರದಾಯಿಕ ರೀತಿಯಲ್ಲಿ ಸಭೆಗಳನ್ನು ನಡೆಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಅವರು, ಅದಕ್ಕಾಗಿ ಸಭೆಗಳನ್ನು ನಡೆಸಲು ಪರ್ಯಾಯ ಮಾರ್ಗೋಪಾಯಗಳನ್ನು ಕೈಗೊಳ್ಳುವುದು ಅಗತ್ಯ ಎಂದರು.

ಅದರಂತೆ ಅವರು ಎರಡೂ ಸದನಗಳ ಸೆಕ್ರೇಟರಿ ಜನರಲ್ ಗಳಿಗೆ ಸಂಸತ್ತಿನ ಎರಡೂ ಸದನಗಳ ಕಲಾಪ ನಿಯಮದಡಿ ಸಮಿತಿಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಗಳನ್ನು ನಡೆಸುವ ಸಾಧ್ಯಾ-ಸಾಧ್ಯತೆಗಳ ಕುರಿತು ವಿವರವಾಗಿ ಪರಿಶೀಲಿಸುವಂತೆ ಸೂಚಿಸಿದರು. ಇತರೆ ರಾಷ್ಟ್ರಗಳಲ್ಲಿ ಬಳಕೆಯಲ್ಲಿರುವ ವಿಧಾನಗಳು ಮತ್ತು ವರ್ಚ್ಯುಯಲ್ ಸಭೆಗಳನ್ನು ನಡೆಸುವುದು ಮತ್ತು ಅದಕ್ಕೆ ಅಗತ್ಯ ತಂತ್ರಜ್ಞಾನ ವೇದಿಕೆಗಳನ್ನು ಹೊಂದಿಸುವ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದರು. ಸಂಸತ್ತಿನ ಇಬ್ಬರು ಉನ್ನತ ಮಟ್ಟದ ಅಧಿಕಾರಿಗಳು ನೀಡುವ ವರದಿ ಆಧರಿಸಿ ಎರಡೂ ಸದನಗಳ ಮುಖ್ಯಸ್ಥರು ವಿಷಯದಲ್ಲಿ ಒಂದು ಒಪ್ಪಿತ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ.

***



(Release ID: 1621978) Visitor Counter : 4224