ರೈಲ್ವೇ ಸಚಿವಾಲಯ

ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್)ಗೆ ಆಹಾರಧಾನ್ಯಗಳ ಲಭ್ಯತೆಯನ್ನು ಖಾತ್ರಿಪಡಿಸಲು ಕಳೆದ ವರ್ಷಕ್ಕಿಂತ ಹೆಚ್ಚಿನ ಮೊತ್ತದ ಆಹಾರಧಾನ್ಯಗಳನ್ನು ತುಂಬಿದ ರೈಲ್ವೆ

Posted On: 18 APR 2020 4:37PM by PIB Bengaluru

ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್)ಗೆ ಆಹಾರಧಾನ್ಯಗಳ ಲಭ್ಯತೆಯನ್ನು ಖಾತ್ರಿಪಡಿಸಲು ಕಳೆದ ವರ್ಷಕ್ಕಿಂತ ಹೆಚ್ಚಿನ ಮೊತ್ತದ ಆಹಾರಧಾನ್ಯಗಳನ್ನು ತುಂಬಿದ ರೈಲ್ವೆ

ಲಾಕ್ ಡೌನ್ ಅವಧಿಯಲ್ಲಿ 2020ರ ಮಾರ್ಚ್ 25ರಿಂದ ಏಪ್ರಿಲ್ 17ರ ವರೆಗೆ 1500 ರೇಖ್ ಗಳಿಗೂ ಅಧಿಕ ಮತ್ತು 4.2 ಮಿಲಿಯನ್ ಟನ್ ಗೂ ಅಧಿಕ ಆಹಾರಧಾನ್ಯಗಳನ್ನು ತುಂಬಿದ ರೈಲ್ವೆ; ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 2.31 ಮಿಲಿಯನ್ ಟನ್ ಗೂ ಅಧಿಕ

ಆಹಾರಧಾನ್ಯ ಸೇರಿದಂತೆ ಕೃಷಿ ಉತ್ಪನ್ನಗಳ ಸಕಾಲದಲ್ಲಿ ಭರ್ತಿಗೆ ಭಾರತೀಯ ರೈಲ್ವೆಯಿಂದ ಎಲ್ಲ ಕ್ರಮ ಮತ್ತು ಯಾವುದೇ ಅಡೆತಡೆ ಇಲ್ಲದೆ ಪೂರೈಕೆ ಸರಣಿ ಖಾತ್ರಿ

 

ಕೋವಿಡ್-19ನಿಂದಾಗಿ ರಾಷ್ಟ್ರವ್ಯಾಪಿ ಲಾಕ್ ಡೌನ್ ನಡುವೆಯೇ ಭಾರತೀಯ ರೈಲ್ವೆ ಅತ್ಯವಶ್ಯಕ ಸಾಮಗ್ರಿಗಳ ಲಭ್ಯತೆಯನ್ನು ಖಾತ್ರಿಪಡಿಸಲು ಆಹಾರಧಾನ್ಯಗಳನ್ನು ತನ್ನ ಸರಕು ಸೇವೆಗಳ ಮೂಲಕ ನಿರಂತರವಾಗಿ ಸಾಗಿಸುವ ಕಾರ್ಯದಲ್ಲಿ ತೊಡಗಿದೆ.

ದೇಶದ ಎಲ್ಲ ಮನೆಗಳಲ್ಲಿ ಎಂದಿನಂತೆ ಆಹಾರ ತಯಾರಿಸುವ ಕಾರ್ಯ ಖಾತ್ರಿಪಡಿಸಲು 2020ರ ಏಪ್ರಿಲ್ 17ರಂದು 83 ರೇಖ್ ಗಳು/3601 ವ್ಯಾಗನ್ ಆಹಾರಧಾನ್ಯವನ್ನು ಭರ್ತಿ ಮಾಡಲಾಯಿತು(ಒಂದು ವ್ಯಾಗನ್ 58 ರಿಂದ 60 ಟನ್ ಸರಕು ಹೊಂದಿರುತ್ತವೆ). ಲಾಕ್ ಡೌನ್ ಅವಧಿಯಲ್ಲಿ 2020ರ ಮಾರ್ಚ್ 25ರಿಂದ ಏಪ್ರಿಲ್ 17ರ ವರೆಗೆ 1500 ರೇಖ್ ಗಳಿಗೂ ಅಧಿಕ ಮತ್ತು 4.2 ಮಿಲಿಯನ್ ಟನ್ ಗೂ ಅಧಿಕ ಆಹಾರಧಾನ್ಯಗಳನ್ನು ಸರಕು ಸಾಗಾಣೆ ರೈಲುಗಳಲ್ಲಿ ತುಂಬಲಾಗಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಆಗಿರುವ ಸಮಯದಲ್ಲಿ ಸರಿಯಾದ ಸಮಯಕ್ಕೆ ಕೃಷಿ ಉತ್ಪನ್ನಗಳು ಸೇರಿದಂತೆ ಆಹಾರಧಾನ್ಯಗಳನ್ನು ಸಕಾಲದಲ್ಲಿ ಭರ್ತಿಮಾಡಿ, ಲಭ್ಯವಾಗುವಂತೆ ಮಾಡಲು ಈ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಅತ್ಯವಶ್ಯಕ ವಸ್ತುಗಳನ್ನು ಸರಕು ಸಾಗಾಣೆ ರೈಲುಗಳಲ್ಲಿ ತುಂಬುವುದು, ಸಾಗಿಸುವುದು ಮತ್ತು ನಂತರ ಇಳಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ. ಆಹಾರಧಾನ್ಯಗಳನ್ನು ರೈಲುಗಳಿಗೆ ತುಂಬಲು ಕೃಷಿ ಸಚಿವಾಲಯದೊಂದಿಗೆ ನಿರಂತರ ನಿಕಟ ಸಮನ್ವಯ ಕಾಯ್ದುಕೊಳ್ಳಲಾಗುತ್ತಿದೆ. ಬೇಳೆಕಾಳುಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಗಾಣೆ ಮಾಡಲು ಸಿಒಎನ್ ಸಿಒಆರ್, ನಾಫೆಡ್ ಜೊತೆ ಕಾರ್ಯ ನಿರ್ವಹಿಸುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

ಲಾಕ್ ಡೌನ್ ಆರಂಭವಾದ ನಂತರ ಹಣ್ಣು, ತರಕಾರಿ, ಹಾಲು, ಹಾಲಿನ ಉತ್ಪನ್ನಗಳು, ಕೃಷಿ ಉದ್ದೇಶಕ್ಕೆ ಬೀಜ ಸಾಗಾಣೆ ಸೇರಿದಂತೆ ಹಾಳಾಗುವಂತಹ ವಸ್ತುಗಳನ್ನು ಸಾಗಿಸಲು ಭಾರತೀಯ ರೈಲ್ವೆ, 65 ಮಾರ್ಗಗಳಲ್ಲಿ ವಿಶೇಷ ಪಾರ್ಸಲ್ ರೈಲುಗಳನ್ನು ಓಡಿಸುತ್ತಿದೆ. ಏಪ್ರಿಲ್ 17ರ ವರೆಗೆ 66 ಮಾರ್ಗಗಳನ್ನು ಅಧಿಸೂಚನೆ ಹೊರಡಿಸಲಾಗಿದ್ದು, ಈ ಮಾರ್ಗಗಳಲ್ಲಿ ನಿಗದಿತ ವೇಳಾಪಟ್ಟಿಯಂತೆ ರೈಲುಗಳು ಚಲಿಸುತ್ತಿವೆ. ಕಡಿಮೆ ಬೇಡಿಕೆ ಇರುವಂತಹ ಮಾರ್ಗಗಳಲ್ಲೂ ರೈಲುಗಳು ಸಂಚರಿಸುತ್ತಿವೆ. ಆ ಮೂಲಕ ದೇಶದ ಯಾವುದೇ ಭಾಗವೂ ಸಂಪರ್ಕದಿಂದ ದೂರವಾಗದಂತೆ ನೋಡಿಕೊಳ್ಳಲಾಗಿದೆ. ರೈಲುಗಳಿಗೆ ಅಗತ್ಯವಿರುವ ಸ್ಥಳಗಳಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದ್ದು, ಆ ಮೂಲಕ ಗರಿಷ್ಠ ಪ್ರಮಾಣದ ಪಾರ್ಸಲ್ ಅನ್ನು ನೀಡುವ ಸಾಧ್ಯತೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.

***


(Release ID: 1615931) Visitor Counter : 192