ಉಪರಾಷ್ಟ್ರಪತಿಗಳ ಕಾರ್ಯಾಲಯ

ಲಾಕ್ ಡೌನ್ ವೇಳೆ ಶೈಕ್ಷಣಿಕ ಕ್ಯಾಲೆಂಡರ್ ಮುಂದುವರಿಕೆ ಖಾತ್ರಿಪಡಿಸುವಂತೆ ವಿಶ್ವವಿದ್ಯಾಲಯಗಳಿಗೆ ಉಪರಾಷ್ಟ್ರಪತಿ ಕರೆ

Posted On: 13 APR 2020 1:33PM by PIB Bengaluru

ಲಾಕ್ ಡೌನ್ ವೇಳೆ ಶೈಕ್ಷಣಿಕ ಕ್ಯಾಲೆಂಡರ್ ಮುಂದುವರಿಕೆ ಖಾತ್ರಿಪಡಿಸುವಂತೆ ವಿಶ್ವವಿದ್ಯಾಲಯಗಳಿಗೆ ಉಪರಾಷ್ಟ್ರಪತಿ ಕರೆ

ಆನ್ ಲೈನ್ ಬೋಧನೆಗೆ ತಂತ್ರಜ್ಞಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಉಪರಾಷ್ಟ್ರಪತಿ ಸೂಚನೆ

ವಿದ್ಯಾರ್ಥಿಗಳನ್ನು ತಲುಪಿ, ಜೊತೆ ಜೊತೆಯಾಗಿ ಕಲಿಕೆ ಮತ್ತು ಸ್ವಯಂ ಕಲಿಕೆಯನ್ನು ಉತ್ತೇಜಿಸಿ: ಉಪರಾಷ್ಟ್ರಪತಿ

ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆ ಕಾಯ್ದುಕೊಳ್ಳಿ: ಉಪರಾಷ್ಟ್ರಪತಿ

ಲಾಕ್ ಡೌನ್ ಅವಧಿಯಲ್ಲಿ ಹೊಸ ಭಾಷೆ ಕಲಿಯಿರಿ ಮತ್ತು ನಿರಂತರ ದೈಹಿಕ ಚಟುವಟಿಕೆಗಳಲ್ಲಿ ತೊಡಗಿ ಎಂದು ವಿದ್ಯಾರ್ಥಿಗಳಿಗೆ ಕರೆ

ದೆಹಲಿ, ಪಾಂಡಿಚೆರಿ, ಪಂಜಾಬ್, ಮಖನ್ ಲಾಲ್ ಚತುರ್ವೇದಿ ವಿಶ್ವ ವಿದ್ಯಾಲಯಗಳ ಉಪಕುಲಪತಿಗಳು ಮತ್ತು ಐಐಪಿಎ ನಿರ್ದೇಶಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಂವಾದ

 

ಭಾರತದ ಉಪರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯನಾಯ್ಡು ಅವರು, ಈ ಲಾಕ್ ಡೌನ್ ಅವಧಿಯಲ್ಲಿ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಮುಂದುವರಿಸುವುದನ್ನು ಖಾತ್ರಿಪಡಿಸಲು ವಿಶ್ವವಿದ್ಯಾಲಯಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ತಂತ್ರಜ್ಞಾನದ ಸಂಪೂರ್ಣ ಶಕ್ತಿಯನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಅವರು ವಿಡಿಯೋ ಕಾನ್ಫರೆನ್ಸ್ ನಲ್ಲಿಂದು ದೆಹಲಿ, ಪಾಂಡಿಚೆರಿ, ಪಂಜಾಬ್, ಮಖನ್ ಲಾಲ್ ಚತುರ್ವೇದಿ ವಿಶ್ವ ವಿದ್ಯಾಲಯಗಳ ಉಪಕುಲಪತಿಗಳು ಮತ್ತು ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ(ಐಐಪಿಎ) ನಿರ್ದೇಶಕರೊಂದಿಗೆ ಸಂವಾದ ನಡೆಸಿ, ಉಪರಾಷ್ಟ್ರಪತಿಗಳು ಸಾಮಾನ್ಯ ಸ್ಥಿತಿ ಮರಳಲು ಇನ್ನೂ ಸ್ವಲ್ಪ ಸಮಯ ಹಿಡಿಯಬಹುದು ಎಂದರು ಹಾಗೂ ಕೋವಿಡ್-19 ಸಾಂಕ್ರಾಮಿಕದಿಂದ ಆಗಿರುವ ತೊಂದರೆಗಳನ್ನು ಎದುರಿಸಲು ಕೈಗೊಂಡ ಕ್ರಮಗಳ ಬಗ್ಗೆ ಅವರು ವಿಚಾರಿಸಿದರು.

ನಾಲ್ಕು ವಿಶ್ವ ವಿದ್ಯಾಲಯಗಳ ಕುಲಾಧಿಪತಿಗಳು ಮತ್ತು ಐಐಪಿಎ ಅಧ್ಯಕ್ಷರು ಆಗಿರುವ ಉಪರಾಷ್ಟ್ರಪತಿಗಳು, ಸಂಸ್ಥೆಗಳು ವಿದ್ಯಾರ್ಥಿಗಳನ್ನು ತಲುಪಬೇಕು ಮತ್ತು ಅವರಲ್ಲಿ ಸ್ವಯಂ ಕಲಿಕೆ ಮತ್ತು ಜೊತೆ ಜೊತೆಯಾಗಿ ಕಲಿಕೆಗೆ ಉತ್ತೇಜನ ನೀಡಬೇಕು ಎಂದು ಕರೆ ನೀಡಿದರು. ಎಲ್ಲ ವಿದ್ಯಾರ್ಥಿಗಳೊಂದಿಗೆ ಸಂವಾದಾತ್ಮಕ ಕಲಿಕೆಯನ್ನು ಖಾತ್ರಿಪಡಿಸಲು ತಾಂತ್ರಿಕ ಉಪಕರಣಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದ ಅವರು, ತಂತ್ರಜ್ಞಾನವನ್ನು ಬಳಸಿಕೊಂಡು, ಲಾಕ್ ಡೌನ್ ಸಮಯದಲ್ಲಿ ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಯನ್ನು ಮುಂದುವರಿಸುವುದನ್ನು ಖಾತ್ರಿಪಡಿಸಬೇಕು ಎಂದರು.

ಕೊರೊನಾ ಸೋಂಕು ಸೃಷ್ಟಿಸಿರುವ ಪ್ರತಿಕೂಲ ಪರಿಣಾಮದಿಂದಾಗಿ ಜನರು ಹೊಸ ಸೃಜನಶೀಲ ಪರಿಹಾರಗಳನ್ನು ಶೋಧಿಸುವಂತಹ ಒತ್ತಡಕ್ಕೆ ಸಿಲುಕಿದ್ದಾರೆ ಎಂದ ಅವರು, ವಿಶ್ವವಿದ್ಯಾಲಯಗಳು ಬೋಧನಾ – ಕಲಿಕಾ ಪ್ರಕ್ರಿಯೆಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದನ್ನು ಶ್ರೀ ನಾಯ್ಡು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಆನ್ ಲೈನ್ ಕೋರ್ಸ್ ಗಳು ಮುಖಾಮುಖಿ ಕಲಿಕೆಗೆ ಪೂರಕವಾಗಿರಲಿವೆ ಎಂದ ಅವರು, “ಪ್ರಸಕ್ತ ಬಿಕ್ಕಟ್ಟಿನಿಂದ ಹೊರಬಂದ ನಂತರ ಅದೇ ಸಾಮಾನ್ಯವಾಗಿ ಬಿಡುತ್ತದೆ” ಎಂದರು.

ವಿದ್ಯಾರ್ಥಿ ನಿಲಯಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ವಿಶ್ವ ವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಉಪರಾಷ್ಟ್ರಪತಿಗಳು ಪ್ರತಿಪಾದಿಸಿದರು. ಸರ್ಕಾರ ಮತ್ತು ಆರೋಗ್ಯ ತಜ್ಞರು ನೀಡುವ ಸಾಮಾಜಿಕ ಅಂತರ ಮತ್ತು ಐಸೋಲೇಶನ್ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ಆಗ್ರಹಿಸಿದರು.

ವಿದ್ಯಾರ್ಥಿಗಳಿಗೆ ಆರೋಗ್ಯಕರ ಆಹಾರ ಸೇವನೆ ಅಭ್ಯಾಸಗಳನ್ನು ಪಾಲಿಸುವಂತೆ ಸಲಹೆ ನೀಡಿದ ಅವರು, ನಿರಂತರ ದೈಹಿಕ ಚಟುವಟಿಕೆಗಳಲ್ಲಿ ತೊಡಗಬೇಕು, ಹೆಚ್ಚಾಗಿ ಕುಳಿತುಕೊಳ್ಳುವ ಜೀವನಶೈಲಿ ತಪ್ಪಿಸಿ ಎಂದ ಅವರು, ನಿಸರ್ಗದೊಂದಿಗೆ ಜೀವಿಸುವ ಪ್ರಾಮುಖ್ಯತೆ ಕುರಿತು ವಿವರಿಸಿದರು.

ವಿಶ್ವ ವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ತಮಗೆ ದೊರೆತಿರುವ ಸಮಯವನ್ನು ಅರ್ಥಪೂರ್ಣವಾಗಿ ಬಳಕೆ ಮಾಡಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು ಮತ್ತು ಈ ಕಲಿಕೆ ಸಾಮಗ್ರಿಗಳ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದು ಶ್ರೀ ನಾಯ್ಡು ಅವರು ಹೇಳಿದರು. ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಕಡಿಮೆ ಸಮಯವನ್ನು ಕಳೆಯಬೇಕು ಎಂದು ಹೇಳಿದ ಅವರು, ಲಾಕ್ ಡೌನ್ ಸಮಯದಲ್ಲಿ ಹೊಸ ಭಾಷೆಗಳನ್ನು ಕಲಿತುಕೊಳ್ಳಿ ಎಂದು ಕಿವಿಮಾತು ಹೇಳಿದರು. ಅಲ್ಲದೆ ಕುಟುಂಬದ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು, ಸರ್ಕಾರೇತರ ಸಂಸ್ಥೆಗಳು ತಮ್ಮ ತಮ್ಮ ಪ್ರದೇಶದಲ್ಲಿ ಕೈಗೊಂಡಿರುವ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಉಪರಾಷ್ಟ್ರಪತಿಗಳು ಸಲಹೆ ಮಾಡಿದರು. ಸರ್ಕಾರ ಕಾಲಕಾಲಕ್ಕೆ ನೀಡುವ ಮಾರ್ಗಸೂಚಿಗಳನ್ನು ನಾಗರಿಕರು ಕಡ್ಡಾಯವಾಗಿ ಪಾಲನೆ ಮಾಡುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಉಪರಾಷ್ಟ್ರಪತಿಗಳ ಕಾರ್ಯದರ್ಶಿ ಡಾ. ಐ.ವಿ. ಸುಬ್ಬರಾವ್ ಸಂವಾದದಲ್ಲಿ ಉಪಸ್ಥಿತರಿದ್ದರು.

 

****

 


(Release ID: 1613920) Visitor Counter : 249