57th International Film Festival of India 2026
20 – 28 Nov 2026

ಭಾರತೀಯ ಕಥನ ಕಲೆಯಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಲು ಐಎಫ್‌ಎಫ್‌ಐ 57ರಲ್ಲಿ ಪ್ರಸಾರ ಭಾರತಿಯಿಂದ ‘ಪೇಜ್ ಸೆ ಪಿಚ್ ತಕ್’ ಕಾರ್ಯಕ್ರಮಕ್ಕೆ ಚಾಲನೆ


ಉದ್ಘಾಟನಾ ದಿನದಂದು ಹತ್ತು ಮಂದಿ ಸ್ಪರ್ಧಿಗಳಿಂದ ಗಣ್ಯ ತೀರ್ಪುಗಾರರ ಮುಂದೆ ಮೂಲ ಕಥೆಗಳ ಪ್ರಸ್ತುತಿ; ನವೆಂಬರ್ 24ರಂದು ವಿಜೇತರ ಘೋಷಣೆ

ಪ್ರಕಟಣಾ ದಿನಾಂಕ: 21 NOV 2026 8:34PMby PIB Bengaluruಪ್ರಕಟಣೆ ಐ.ಡಿ.: 2339886Views: 14

57ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) ಅಂಗವಾಗಿ, ಪ್ರಸಾರ ಭಾರತಿಯು ಇಂದು ಪಣಜಿಯ ಕಲಾ ಅಕಾಡೆಮಿಯಲ್ಲಿ ತನ್ನ ಮೊದಲ ಕಥಾ ಪ್ರಸ್ತುತಿ ಪ್ರಯೋಗಾಲಯವಾದ ‘ಪೇಜ್ ಸೆ ಪಿಚ್ ತಕ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ಪ್ರಸಾರ ಭಾರತಿಯ ಅಧ್ಯಕ್ಷರಾದ ಪದ್ಮಶ್ರೀ ಪ್ರಸೂನ್ ಜೋಶಿ ಅವರ ಪರಿಕಲ್ಪನೆಯ ಈ ಉಪಕ್ರಮವು, ದೇಶದ ವಿವಿಧ ಭಾಗಗಳ ಉದಯೋನ್ಮುಖ ಬರಹಗಾರರು ತಮ್ಮ ಮೂಲ ಕಥೆಗಳನ್ನು ಪ್ರಸ್ತುತಪಡಿಸಲು ವಾರ್ಷಿಕ ರಾಷ್ಟ್ರೀಯ ವೇದಿಕೆಯಾಗಿ ರೂಪುಗೊಂಡಿದೆ. ಚಲನಚಿತ್ರ, ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರ ವಿಭಾಗಗಳಲ್ಲಿ ಭಾರತದ ಹತ್ತು ಭಾಷೆಗಳಲ್ಲಿ ಕಥೆಗಳನ್ನು ಪ್ರಸ್ತುತಪಡಿಸಲು ಈ ವೇದಿಕೆ ಅವಕಾಶ ಕಲ್ಪಿಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಸೂನ್ ಜೋಶಿ ಅವರು, ವೈಯಕ್ತಿಕ ಅನುಭವಗಳು ಮತ್ತು ಸಾಂಸ್ಕೃತಿಕ ದೃಷ್ಟಿಕೋನಗಳಲ್ಲಿ ಬೇರೂರಿರುವ ನೈಜ ಕಥನಗಳ ಮಹತ್ವವನ್ನು ಒತ್ತಿಹೇಳಿದರು. ವಿಭಿನ್ನ ಅಭಿವ್ಯಕ್ತಿಗಳನ್ನು ಹೊಂದಿರುವ ಪ್ರತಿಭೆಗಳನ್ನು ಬೆಳೆಸಲು ಮತ್ತು ದೇಶದ ವಿವಿಧ ಭಾಗಗಳಿಂದ ಹೊರಹೊಮ್ಮುವ ಕಥೆಗಳಿಗೆ ವೇದಿಕೆ ಒದಗಿಸಲು ಪ್ರಸಾರ ಭಾರತಿ ಬದ್ಧವಾಗಿದೆ ಎಂದು ಅವರು ಹೇಳಿದರು. ಭಾರತದ ಪ್ರತಿಯೊಂದು ಪ್ರದೇಶ ಮತ್ತು ಜಾನಪದ ಸಂಪ್ರದಾಯವೂ ತನ್ನದೇ ಆದ ವಿಶಿಷ್ಟ ಕಥನಗಳನ್ನು ಹೊಂದಿದೆ. ಆಯಾ ಪ್ರದೇಶದ ಸ್ಥಳೀಯ ಸಂಸ್ಕೃತಿಯನ್ನು ಅರಿತುಕೊಂಡಾಗ ಮಾತ್ರ ಆ ಕಥೆಗಳನ್ನು ನೈಜವಾಗಿ ಹೇಳಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ದೂರದರ್ಶನದ ಮಹಾನಿರ್ದೇಶಕಿ ಶ್ರೀಮತಿ ರೀನಾ ಸೋನೋವಾಲ್ ಕೌಲಿ ಅವರು ಸ್ವಾಗತ ಭಾಷಣ ಮಾಡಿದರು. ಭಾರತದ ಭಾಷಾ ವೈವಿಧ್ಯತೆ ಮತ್ತು ಸೃಜನಶೀಲ ಪ್ರತಿಭೆಗಳನ್ನು ಪರಿಚಯಿಸುವಲ್ಲಿ ಈ ಉಪಕ್ರಮದ ಪಾತ್ರವನ್ನು ಅವರು ವಿವರಿಸಿದರು.

ಈ ಕಥಾ ಪ್ರಸ್ತುತಿ ಕಾರ್ಯಕ್ರಮದಲ್ಲಿ ಹತ್ತು ಮಂದಿ ಸ್ಪರ್ಧಿಗಳು ಗಣ್ಯ ತೀರ್ಪುಗಾರರ ಮುಂದೆ ತಮ್ಮ ಮೂಲ ಕಥೆಗಳನ್ನು ಪ್ರಸ್ತುತಪಡಿಸುತ್ತಾರೆ. ತೀರ್ಪುಗಾರರ ಸಮಿತಿಯಲ್ಲಿ ಅತ್ಯುತ್ತಮ ಪೋಷಕ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಟ ಪದ್ಮಶ್ರೀ ಮನೋಜ್ ಜೋಶಿ; ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ಸಾಹಿತ್ಯದ ಲೇಖಕ, ಸಂಪಾದಕ ಹಾಗೂ ಸ್ವತಂತ್ರ ಸಂಶೋಧಕ ಸಂದೀಪ್ ಬಾಲಕೃಷ್ಣ; 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಮತ್ತು 'ಬತ್ತಿ ಗುಲ್ ಮೀಟರ್ ಚಾಲು' ಚಿತ್ರಗಳಿಗೆ ಹೆಸರಾದ ಚಲನಚಿತ್ರ ನಿರ್ದೇಶಕ ಮತ್ತು ಸಂಕಲನಕಾರ ನಾರಾಯಣ್ ಸಿಂಗ್; ಹಾಗೂ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಪತ್ರಕರ್ತ, ಲೇಖಕ ಮತ್ತು ಚಲನಚಿತ್ರ ವಿಮರ್ಶಕರೂ ಆದ ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (ಎಫ್‌ಟಿಐಐ) ಆಡಳಿತ ಮಂಡಳಿಯ ಉಪಾಧ್ಯಕ್ಷ ಅನಂತ್ ವಿಜಯ್ ಅವರು ಇದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ಪ್ರಧಾನ ಮಹಾನಿರ್ದೇಶಕ ಶ್ರೀ ಧೀರೇಂದ್ರ ಓಜಾ; ಪ್ರಧಾನ ಮಹಾನಿರ್ದೇಶಕ  ಹಾಗೂ ಭಾರತದ ಪತ್ರಿಕಾ ನೋಂದಣಿ (ಪಿಆರ್‌ಜಿಐ) ಮಹಾನಿರದೇಶಕ ಶ್ರೀ ಯೋಗೇಶ್ ಕುಮಾರ್ ಬವೇಜಾ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪ್ರಸಾರ ಮತ್ತು ಆಡಳಿತ) ಶ್ರೀ ಪೃಥುಲ್ ಕುಮಾರ್ ಉಪಸ್ಥಿತರಿದ್ದರು.

ಕಥಾ ಪ್ರಸ್ತುತಿ ಪ್ರಯೋಗಾಲಯವು 2026ರ ನವೆಂಬರ್ 21ರಿಂದ 23ರವರೆಗೆ ನಡೆಯಲಿದೆ. ಈ ವಾರ್ಷಿಕ ಉಪಕ್ರಮದ ಮೂಲಕ ಉದಯೋನ್ಮುಖ ಬರಹಗಾರರನ್ನು ಚಲನಚಿತ್ರೋದ್ಯಮದ ವೃತ್ತಿಪರರೊಂದಿಗೆ ಸಂಪರ್ಕಿಸುವುದು ಮತ್ತು ಅವರ ಮೂಲ ಕಥಾ ಪರಿಕಲ್ಪನೆಗಳನ್ನು ಚಲನಚಿತ್ರ, ಸಾಕ್ಷ್ಯಚಿತ್ರ ಹಾಗೂ ಕಿರುಚಿತ್ರಗಳಾಗಿ ರೂಪಿಸಲು ಅವಕಾಶ ಕಲ್ಪಿಸುವುದು ಪ್ರಸಾರ ಭಾರತಿಯ ಉದ್ದೇಶವಾಗಿದೆ.

‘ಪೇಜ್ ಸೆ ಪಿಚ್ ತಕ್’ ಕಾರ್ಯಕ್ರಮದ ವಿಜೇತರನ್ನು 2026ರ ನವೆಂಬರ್ 24ರಂದು ಘೋಷಿಸಲಾಗುವುದು.

  

IFFILOIDಅನ್ನು ಇಲ್ಲಿ ಓದಬಹುದು: https://www.pib.gov.in/iffi/57/iffiLoid.aspx?yr=2026&lang=1&reg=48

 

*****

 


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2339886
•
Media Centre: Goa
•
Festival Dates: Nov 20 – 28, 2026