ವಿಶೇಷಚೇತನರು ಮತ್ತು ಚಲನಶೀಲತೆ ಕಡಿಮೆ ಇರುವ ವ್ಯಕ್ತಿಗಳು ಸೇರಿದಂತೆ ಎಲ್ಲಾ ಸಿನಿಮಾ ಪ್ರೇಮಿಗಳಿಗೆ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಹೆಚ್ಚು ಪ್ರವೇಶಿಸಬಹುದಾದ ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ಮಾಡಲು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮವು (ಎನ್ ಎಫ್ ಡಿ ಸಿ) `ಸ್ವಯಂ’ ಸಂಸ್ಥೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. 55ನೇ ಇಫಿ ಮತ್ತು 18ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಎಂ ಐ ಎಫ್ ಎಫ್) ನಂತರ, ಈ ಎರಡು ಸಂಸ್ಥೆಗಳ ನಡುವಿನ ಮೂರನೇ ಸಹಯೋಗ ಇದಾಗಿದೆ.
ಪ್ರವೇಶಸಾಧ್ಯತಾ ಪಾಲುದಾರರಾಗಿ, ಸ್ವಯಂ ಸಂಸ್ಥೆಯು ಉತ್ಸವದ ಸ್ಥಳಗಳಲ್ಲಿ ಸುಲಭಲಭ್ಯತೆಯ ತಪಾಸಣೆಯನ್ನು ನಡೆಸುತ್ತಿದೆ. ಸಂದರ್ಶಕರಿಗೆ ಸುರಕ್ಷಿತ, ಹೆಚ್ಚು ಆರಾಮದಾಯಕ ಮತ್ತು ಸ್ವತಂತ್ರ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಸಂಭಾವ್ಯ ಅಡೆತಡೆಗಳನ್ನು ಗುರುತಿಸಿ, ಸೂಕ್ತ ಕ್ರಮಗಳನ್ನು ಶಿಫಾರಸು ಮಾಡುವುದು ಇದರ ಉದ್ದೇಶವಾಗಿದೆ.
ಈ ಪಾಲುದಾರಿಕೆಯು ಉತ್ಸವದ ಸ್ವಯಂಸೇವಕರಿಗಾಗಿ ದೈಹಿಕ ನ್ಯೂನತೆ ಮತ್ತು ಪ್ರವೇಶಸಾಧ್ಯತೆಯ ಕುರಿತು ಸಂವೇದನಾಶೀಲತೆಯ ಕಾರ್ಯಾಗಾರಗಳನ್ನು ಸಹ ಒಳಗೊಂಡಿದೆ. ಈ ಅಧಿವೇಶನಗಳು ಗೌರವಯುತ ಸಂವಹನ, ಎಲ್ಲರನ್ನೊಳಗೊಳ್ಳುವ ನೆರವು ಮತ್ತು ಸುಗಮ್ಯ , ಸುಲಭಲಭ್ಯತೆಗಾಗಿ ವಿವಿಧ ಅಗತ್ಯಗಳನ್ನು ಹೊಂದಿರುವ ವ್ಯಕ್ತಿಗಳನ್ನು ಬೆಂಬಲಿಸುವ ಪ್ರಾಯೋಗಿಕ ವಿಧಾನಗಳ ಮೇಲೆ ಕೇಂದ್ರೀಕರಿಸುತ್ತವೆ.
ಇದಲ್ಲದೆ, 'ಸುಗಮ್ಯ ಅನುಭವ ವಲಯವು' ಸಂದರ್ಶಕರು ಮತ್ತು ಉತ್ಸವದ ಪಾಲುದಾರರಿಗೆ ವಿಶೇಷಚೇತನರು ಮತ್ತು ಚಲನಶೀಲತೆ ಕಡಿಮೆ ಇರುವ ವ್ಯಕ್ತಿಗಳು ಪ್ರತಿದಿನ ಎದುರಿಸುವ ಅಡೆತಡೆಗಳನ್ನು ಅರಿಯಲು ಸಂವಾದಾತ್ಮಕ ಅವಕಾಶವನ್ನು ಒದಗಿಸುತ್ತದೆ. ಸುಗಮ್ಯ ಸಾರ್ವಜನಿಕ ಸ್ಥಳಗಳ ಮಹತ್ವದ ಬಗ್ಗೆ ಹೆಚ್ಚಿನ ಜಾಗೃತಿ, ಸಹಾನುಭೂತಿ ಮತ್ತು ತಿಳುವಳಿಕೆಯನ್ನು ಬೆಳೆಸುವ ಗುರಿಯನ್ನು ಈ ಉಪಕ್ರಮ ಹೊಂದಿದೆ.
ಈ ಪಾಲುದಾರಿಕೆಯ ಕುರಿತು ಮಾತನಾಡಿದ ಸ್ವಯಂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಸ್ಮಿನು ಜಿಂದಾಲ್ ಅವರು, “ಸುಗಮ್ಯತೆ ಎಂದರೆ ಕೇವಲ ರಾಂಪ್ ಗಳನ್ನು ನಿರ್ಮಿಸುವುದು ಅಥವಾ ಭೌತಿಕ ಸ್ಥಳಗಳನ್ನು ಅಡೆತಡೆ ಮುಕ್ತಗೊಳಿಸುವುದು ಮಾತ್ರವಲ್ಲ; ಪ್ರತಿಯೊಬ್ಬ ವ್ಯಕ್ತಿಗೂ ಸಮಾಜದಲ್ಲಿ ಸಮಾನವಾಗಿ ಭಾಗವಹಿಸಲು ಘನತೆ, ಸ್ವಾತಂತ್ರ್ಯ ಮತ್ತು ಅವಕಾಶವಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಸಿನಿಮಾ ಎಂಬುದು ಜನರನ್ನು ಒಗ್ಗೂಡಿಸುವ, ಗಡಿಗಳನ್ನು ಮೀರುವ ಮತ್ತು ವೈವಿಧ್ಯಮಯ ಮಾನವ ಅನುಭವಗಳನ್ನು ಸಂಭ್ರಮಿಸುವ ಪ್ರಬಲ ಮಾಧ್ಯಮವಾಗಿದೆ. ಆದ್ದರಿಂದ ಚಲನಚಿತ್ರೋತ್ಸವಗಳು ಎಲ್ಲರಿಗೂ ಸಮಾನವಾಗಿ ಸ್ವಾಗತಾರ್ಹ ಮತ್ತು ಸುಗಮ್ಯವಾಗಿರುವುದು ಅತ್ಯಗತ್ಯ. 57ನೇ ಇಫಿಗಾಗಿ ಎನ್ ಎಫ್ ಡಿಸಿಯೊಂದಿಗಿನ ನಮ್ಮ ಸಹಯೋಗವು ಉತ್ಸವದ ಅನುಭವದಲ್ಲಿ ಒಳಗೊಳ್ಳುವಿಕೆಯನ್ನು ಅವಿಭಾಜ್ಯ ಅಂಗವಾಗಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ವಯಸ್ಸು, ತಾತ್ಕಾಲಿಕ ಗಾಯ ಅಥವಾ ಶಾಶ್ವತ ಅಂಗವೈಕಲ್ಯದಿಂದಾಗಿ ಉಂಟಾಗುವ ಕಡಿಮೆ ಚಲನಶೀಲತೆಯು ಸಿನಿಮಾದ ಸಂತೋಷವನ್ನು ಅನುಭವಿಸಲು ಅಡ್ಡಿಯಾಗದಂತಹ ಇಫಿಯನ್ನು ನಾವು ಕಲ್ಪಿಸಿಕೊಂಡಿದ್ದೇವೆ” ಎಂದು ಹೇಳಿದರು.
ಈ ಉಪಕ್ರಮದ ಮಹತ್ವವನ್ನು ಒತ್ತಿಹೇಳಿದ ಎನ್ ಎಫ್ ಡಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಧೀರಜ್ ಸಿಂಗ್ ಅವರು, “ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಸಿನಿಮಾದ ಸಾರ್ವತ್ರಿಕ ಭಾಷೆಯನ್ನು ಗೌರವಿಸುತ್ತದೆ ಮತ್ತು ಈ ಗೌರವವು ನಿಜವಾಗಿಯೂ ಎಲ್ಲರಿಗೂ ಮುಕ್ತವಾಗಿರುವುದು ಮುಖ್ಯವಾಗಿದೆ. 57ನೇ ಇಫಿಯನ್ನು ಎಲ್ಲಾ ಸಿನಿಮಾ ಪ್ರೇಮಿಗಳಿಗೆ ಹೆಚ್ಚು ಸುಗಮ್ಯ, ಎಲ್ಲರನ್ನೊಳಗೊಳ್ಳುವ ಮತ್ತು ಸ್ವಾಗತಾರ್ಹವಾಗಿಸುವ ನಿಟ್ಟಿನಲ್ಲಿ ʻಸ್ವಯಂʼನೊಂದಿಗಿನ ನಮ್ಮ ಪಾಲುದಾರಿಕೆಯು ಒಂದು ಮಹತ್ವದ ಹೆಜ್ಜೆಯಾಗಿದೆ. ಸುಗಮ್ಯ ಸ್ಥಳಗಳು ಹಾಗೂ ತರಬೇತಿ ಪಡೆದ ಮತ್ತು ಸಂವೇದನಾಶೀಲ ಸ್ವಯಂಸೇವಕರ ಮೂಲಕ, ಪ್ರತಿಯೊಬ್ಬರೂ ಘನತೆ, ಆರಾಮ ಮತ್ತು ಸ್ವಾತಂತ್ರ್ಯದೊಂದಿಗೆ ಉತ್ಸವದಲ್ಲಿ ಭಾಗವಹಿಸಬಹುದಾದ ವಾತಾವರಣವನ್ನು ನಿರ್ಮಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಉಪಕ್ರಮವು ಭಾರತದಲ್ಲಿ ಎಲ್ಲರನ್ನೊಳಗೊಳ್ಳುವ ಸಾಂಸ್ಕೃತಿಕ ಮತ್ತು ಸಿನಿಮಾ ಕಾರ್ಯಕ್ರಮಗಳಿಗೆ ಅರ್ಥಪೂರ್ಣ ಮಾನದಂಡವನ್ನು ಸ್ಥಾಪಿಸುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಹೇಳಿದರು.
ವಿಶೇಷಚೇತನರು ಮತ್ತು ಚಲನಶೀಲತೆ ಕಡಿಮೆ ಇರುವ ವ್ಯಕ್ತಿಗಳು ಘನತೆ ಮತ್ತು ಸ್ವಾತಂತ್ರ್ಯದೊಂದಿಗೆ ಭಾಗವಹಿಸಲು, ಸಂಪರ್ಕ ಸಾಧಿಸಲು ಮತ್ತು ಕಥೆ ಹೇಳುವ ಶಕ್ತಿಯನ್ನು ಅನುಭವಿಸಲು ಅನುವು ಮಾಡಿಕೊಡುವ ಮೂಲಕ, ಭಾರತದ ಪ್ರಮುಖ ಚಲನಚಿತ್ರೋತ್ಸವವನ್ನು ನಿಜವಾದ ಎಲ್ಲರನ್ನೊಗೊಳ್ಳುವ ಸಿನಿಮಾ ಸಂಭ್ರಮವನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಸಹಯೋಗವು ಮತ್ತೊಂದು ಹೆಜ್ಜೆಯಾಗಿದೆ.
IFFILOID – Volume 5, Issue 1 : 20 November 2026
*****