ಪರದೆಯ ಮೇಲೆ ಮೂಡಿಬರುವ ಪ್ರತಿಯೊಂದು ಚಲನಚಿತ್ರದ ಹಿಂದೆಯೂ ಅದರ ಕಥೆ, ಧ್ವನಿ ಮತ್ತು ದೃಶ್ಯ ರೂಪವನ್ನು ರೂಪಿಸುವ ಸೃಜನಶೀಲ ಪ್ರತಿಭೆಗಳ ತಂಡವಿರುತ್ತದೆ. ಈ ಸಾಮೂಹಿಕ ಪ್ರತಿಭೆಯ ಮಹತ್ವವನ್ನು ಗುರುತಿಸಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಉಪಕ್ರಮವಾದ ಹಾಗೂ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದಿಂದ (ಎನ್‌ಎಫ್‌ಡಿಸಿ) ಅನುಷ್ಠಾನಗೊಳ್ಳುತ್ತಿರುವ 'ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ' (ಸಿಎಂಒಟಿ),ಭಾರತದಾದ್ಯಂತದ 100 ಯುವ ಪ್ರತಿಭೆಗಳೊಂದಿಗೆ ಗೋವಾದಲ್ಲಿ ನಡೆಯುತ್ತಿರುವ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ತನ್ನ ಆರನೇ ಆವೃತ್ತಿಯೊಂದಿಗೆ ಮರಳುತ್ತಿದೆ.
2026ರ ಈ ತಂಡವು ನಿರ್ದೇಶನ, ನಟನೆ, ಛಾಯಾಗ್ರಹಣ, ಸಂಕಲನ ಮತ್ತು ಉಪಶೀರ್ಷಿಕೆ (ಸಬ್‌ಟೈಟ್ಲಿಂಗ್), ಚಿತ್ರಕಥೆ ಬರವಣಿಗೆ, ಹಿನ್ನೆಲೆ ಗಾಯನ,ಸಂಗೀತ ಸಂಯೋಜನೆ, ಧ್ವನಿ ಮುದ್ರಣ, ವಸ್ತ್ರ ವಿನ್ಯಾಸ, ಕೇಶವಿನ್ಯಾಸ ಮತ್ತು ಮೇಕಪ್, ಕಲಾ ನಿರ್ದೇಶನ, ಅನಿಮೇಷನ್, ವಿಷುಯಲ್ ಎಫೆಕ್ಟ್ಸ್ (ವಿಎಫ್‌ಎಕ್ಸ್),ಆಗ್ಮೆಂಟೆಡ್ ರಿಯಾಲಿಟಿ (ಎಆರ್), ವರ್ಚುವಲ್ ರಿಯಾಲಿಟಿ (ವಿಆರ್), ಹಾಗೂ ಧ್ವನಿ ನೀಡುವಿಕೆ (ವಾಯ್ಸ್-ಓವರ್) ಹಾಗೂ ಡಬ್ಬಿಂಗ್ ಸೇರಿದಂತೆ 13 ಚಲನಚಿತ್ರ ನಿರ್ಮಾಣ ಕಲೆಗಳ ಉದಯೋನ್ಮುಖ ವೃತ್ತಿಪರರನ್ನು ಒಟ್ಟುಗೂಡಿಸುತ್ತದೆ. ವಿವಿಧ ಸೃಜನಶೀಲ ವಿಭಾಗಗಳ ಸ್ಪರ್ಧಿಗಳನ್ನು ಒಂದೆಡೆ ತರುವ ಮೂಲಕ, ಈ ಉಪಕ್ರಮವು ಚಲನಚಿತ್ರ ನಿರ್ಮಾಣದ ಅನುಭವದಲ್ಲಿ ಸಹಯೋಗಕ್ಕೆ ಕೇಂದ್ರ ಸ್ಥಾನವನ್ನು ನೀಡಿದೆ.
ಆಯ್ಕೆ ಪ್ರಕ್ರಿಯೆಯು ಚಲನಚಿತ್ರ ಶಿಕ್ಷಣ ಮತ್ತು ಉದ್ಯಮದ ಪ್ರಾಯೋಗಿಕ ಅನುಭವಗಳ ದೃಷ್ಟಿಕೋನಗಳನ್ನು ಸಂಯೋಜಿಸುತ್ತದೆ. ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (ಎಫ್‌ಟಿಐಐ) ಅಧ್ಯಾಪಕರನ್ನು ಒಳಗೊಂಡ 13 ಸದಸ್ಯರ ಆಯ್ಕೆ ತೀರ್ಪುಗಾರರ ಮಂಡಳಿಯು ಆಯಾ ಕಲಾ ವಿಭಾಗಗಳಲ್ಲಿನ ಅರ್ಜಿಗಳನ್ನು ಮೌಲ್ಯಮಾಪನ ಮಾಡುತ್ತದೆ. ಮುಂದಿನ ಹಂತದ ಮೌಲ್ಯಮಾಪನವನ್ನು ಉದ್ಯಮದ ಹೆಸರಾಂತ ವೃತ್ತಿಪರರನ್ನು ಒಳಗೊಂಡ 12 ಸದಸ್ಯರ ಉನ್ನತ ತೀರ್ಪುಗಾರರ ತಂಡವು (ಗ್ರ್ಯಾಂಡ್ ಜ್ಯೂರಿ) ನಡೆಸಲಿದ್ದು, ಆಯ್ಕೆಯಾದ ಸ್ಪರ್ಧಿಗಳನ್ನು ಗುರುತಿಸುತ್ತದೆ. ಚಲನಚಿತ್ರ ನಿರ್ಮಾಣ ಸವಾಲು ಮತ್ತು ಅದರ ಅಂತಿಮ ಪ್ರಶಸ್ತಿಗಳನ್ನು ಖ್ಯಾತ ಚಲನಚಿತ್ರ ವೃತ್ತಿಪರರನ್ನು ಒಳಗೊಂಡ ಐವರು ಸದಸ್ಯರ ಗ್ರೇಟ್ ಗ್ರ್ಯಾಂಡ್ ಜ್ಯೂರಿ ಮೌಲ್ಯಮಾಪನ ಮಾಡುತ್ತದೆ.

ಈ ಕಾರ್ಯಕ್ರಮದ ಪ್ರಮುಖ ಭಾಗವೆಂದರೆ ಪುಣೆಯ ‘ಎಫ್‌ಟಿಐಐ’ ಮತ್ತು ‘ಎನ್‌ಎಫ್‌ಡಿಸಿ’ ಸಹಯೋಗದೊಂದಿಗೆ ಆಯೋಜಿಸಲಾದ '48-ಗಂಟೆಗಳ ಚಲನಚಿತ್ರ ನಿರ್ಮಾಣ ಸವಾಲು'. ವಿವಿಧ ಕಲಾ ವಿಭಾಗಗಳ ಸ್ಪರ್ಧಿಗಳು ಒಟ್ಟಾಗಿ ಕೆಲಸ ಮಾಡಿ 48 ಗಂಟೆಗಳ ಅವಧಿಯೊಳಗೆ ಕಿರುಚಿತ್ರಗಳ ಪರಿಕಲ್ಪನೆಯನ್ನು ರೂಪಿಸಿ ನಿರ್ಮಿಸಲಿದ್ದಾರೆ. ತಜ್ಞರ ಮಾರ್ಗದರ್ಶನ ಮತ್ತು ಸಾಂಸ್ಥಿಕ ಬೆಂಬಲದೊಂದಿಗೆ, ವೃತ್ತಿಪರ ನಿರ್ಮಾಣದ ಇತಿಮಿತಿಗಳ ಅಡಿಯಲ್ಲಿ ಚಲನಚಿತ್ರ ನಿರ್ಮಾಣ ತಂಡವಾಗಿ ಕೆಲಸ ಮಾಡುವ ತೀವ್ರ ಪ್ರಾಯೋಗಿಕ ಅನುಭವವನ್ನು ಈ ಸವಾಲು ನೀಡುತ್ತದೆ. ಪೂರ್ಣಗೊಂಡ ಚಲನಚಿತ್ರಗಳನ್ನು ‘ಐಎಫ್‌ಎಫ್‌ಐ’ನಲ್ಲಿ ವಿಶೇಷವಾಗಿ ಪ್ರದರ್ಶಿಸಲಾಗುವುದು ಮತ್ತು ಚಲನಚಿತ್ರೋದ್ಯಮದ ಖ್ಯಾತ ತೀರ್ಪುಗಾರರಿಂದ ಮೌಲ್ಯಮಾಪನ ಮಾಡಿ, ವಿವಿಧ ವಿಭಾಗಗಳಲ್ಲಿನ ಶ್ರೇಷ್ಠತೆಯನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಗುವುದು.
'ಸಿಎಂಒಟಿ’ ಟ್ಯಾಲೆಂಟ್ ಕ್ಯಾಂಪ್ ಸ್ಪರ್ಧಿಗಳನ್ನು ವಿಶಾಲವಾದ ಮಾಧ್ಯಮ ಮತ್ತು ಮನರಂಜನಾ ಉದ್ಯಮದೊಂದಿಗೆ ಸಂಪರ್ಕಿಸುತ್ತದೆ. ಇದು ಅವರನ್ನು ನಿರ್ಮಾಣ ಸಂಸ್ಥೆಗಳು, ಸ್ಟುಡಿಯೋಗಳು, ಮ್ಯೂಸಿಕ್ ಲೇಬಲ್‌ಗಳು, ಒಟಿಟಿ ವೇದಿಕೆಗಳು, ಪ್ರಸಾರಕರು ಮತ್ತು ಇತರ ಉದ್ಯಮದ ಪಾಲುದಾರರೊಂದಿಗೆ ಸಂಪರ್ಕಿಸುತ್ತದೆ. ಯುವ ಸೃಷ್ಟಿಕರ್ತರು ತಮ್ಮ ಸ್ವಂತ ಕೆಲಸವನ್ನು ಪ್ರಸ್ತುತಪಡಿಸಲು, ಉದ್ಯಮದ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸಲು ಮತ್ತು ವೃತ್ತಿಪರ ಅವಕಾಶಗಳನ್ನು ಅನ್ವೇಷಿಸಲು ಇದು ಅನುವು ಮಾಡಿಕೊಡುತ್ತದೆ.
2021ರಲ್ಲಿ ಪ್ರಾರಂಭವಾದಾಗಿನಿಂದ, ‘ಸಿಎಂಒಟಿ’ ಉದಯೋನ್ಮುಖ ಸೃಜನಶೀಲ ವೃತ್ತಿಪರರನ್ನು ಮಾಧ್ಯಮ ಮತ್ತು ಮನರಂಜನಾ ಉದ್ಯಮದೊಂದಿಗೆ ಬೆಸೆಯುವ ವೇದಿಕೆಯಾಗಿ ಬೆಳೆದಿದೆ. ಇದರ ಹಳೆಯ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ನಿರ್ಮಾಣ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ‘ಕೇನ್ಸ್’, ‘ಬರ್ಲಿನ್’, ‘ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸ’ವ ಮತ್ತು ಅಂತಾರಾಷ್ಟ್ರೀಯ ‘ಎಮ್ಮಿ’ ಪ್ರಶಸ್ತಿಗಳು ಸೇರಿದಂತೆ ಪ್ರತಿಷ್ಠಿತ ವೇದಿಕೆಗಳು ಮತ್ತು ಉತ್ಸವಗಳಲ್ಲಿ ಮನ್ನಣೆ ಗಳಿಸಿದ್ದಾರೆ.
ಭಾರತದ ಸೃಜನಶೀಲ ಆರ್ಥಿಕತೆಯು ಬೆಳೆಯುತ್ತಿರುವಂತೆ, ಚಲನಚಿತ್ರ ನಿರ್ಮಾಣದ ವಿವಿಧ ವಿಭಾಗಗಳಲ್ಲಿ ನುರಿತ ಮತ್ತು ನವೀನ ಆಲೋಚನೆಯ ವೃತ್ತಿಪರರನ್ನು ಪೋಷಿಸುವುದು ಹೆಚ್ಚು ಮಹತ್ವ ಪಡೆದಿದೆ. ಕಲಿಕೆ, ಪ್ರಾಯೋಗಿಕ ಸಹಯೋಗ ಮತ್ತು ಉದ್ಯಮದ ಒಡನಾಟವನ್ನು ಸಂಯೋಜಿಸುವ ಮೂಲಕ, ಉದಯೋನ್ಮುಖ ಪ್ರತಿಭೆಗಳು ತಮ್ಮ ಸೃಜನಶೀಲ ಸಾಮರ್ಥ್ಯವನ್ನು ವೃತ್ತಿಪರ ಅವಕಾಶಗಳಾಗಿ ಪರಿವರ್ತಿಸಿಕೊಳ್ಳಲು ಮಾರ್ಗಗಳನ್ನು ಸೃಷ್ಟಿಸಲು ‘ಸಿಎಂಒಟಿ’ ಪ್ರಯತ್ನಿಸುತ್ತದೆ.
ಗೋವಾಕ್ಕೆ ಆಗಮಿಸುತ್ತಿರುವ 100 ಸ್ಪರ್ಧಿಗಳಿಗೆ, ‘ಐಎಫ್‌ಎಫ್‌ಐ’ ಕೇವಲ ವಿಶ್ವ ಸಿನಿಮಾದ ಪ್ರದರ್ಶನಕ್ಕಿಂತ ಮಿಗಿಲಾದದ್ದಾಗಿರಲಿದೆ. ಇದು ಸಹಯೋಗ ಹೊಂದಲು, ಕಲಿಯಲು ಮತ್ತು ಭಾರತೀಯ ಚಲನಚಿತ್ರ ನಿರ್ಮಾಣದ ಭವಿಷ್ಯವನ್ನು ರೂಪಿಸುವತ್ತ ತಮ್ಮ ಮೊದಲ ಹೆಜ್ಜೆಗಳನ್ನು ಇಡಲು ಒಂದು ಉತ್ತಮ ಅವಕಾಶವಾಗಲಿದೆ.
*****