ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಯೂಟ್ಯೂಬ್ ಇಂಪ್ಯಾಕ್ಟ್ ಶೃಂಗಸಭೆ 2026ರಲ್ಲಿ ವಿಕಸಿತ ಭಾರತ ನಿರ್ಮಾಣದಲ್ಲಿ ಸೃಜನಶೀಲ ಆರ್ಥಿಕತೆ ಮತ್ತು ಕೃತಕ ಬುದ್ಧಿ ಮತ್ತೆಯ ಪಾತ್ರವನ್ನು ಡಾ. ಎಲ್. ಮುರುಗನ್ ಒತ್ತಿ ಹೇಳಿದರು
ತಂತ್ರಜ್ಞಾನವು ವೇಗವಾಗಿ ಬದಲಾಗಬಹುದು, ಆದರೆ ಸಾಂವಿಧಾನಿಕ ಮೌಲ್ಯಗಳು ಶಾಶ್ವತವಾಗಿರಬೇಕು: ಯೂಟ್ಯೂಬ್ ಇಂಪ್ಯಾಕ್ಟ್ ಶೃಂಗಸಭೆ 2026ರಲ್ಲಿ ಯುವ ಸೃಜನಶೀಲರಿಗೆ ಡಾ. ಎಲ್. ಮುರುಗನ್ ಸಂದೇಶ
18,000ಕ್ಕೂ ಹೆಚ್ಚು ಭಾರತೀಯ ಯೂಟ್ಯೂಬ್ ಚಾನೆಲ್‌ಗಳು ಒಂದು ಮಿಲಿಯನ್‌ಗೂ ಅಧಿಕ ಚಂದಾದಾರರನ್ನು ದಾಟಿವೆ; ಬೆಳೆಯುತ್ತಿರುವ ಸೃಜನಶೀಲ ಆರ್ಥಿಕತೆಗೆ ಇದು ಸಾಕ್ಷಿಯಾಗಿದೆ
ಪ್ರಕಟಣಾ ದಿನಾಂಕ:
29 SEP 2026 7:46PM by PIB Bengaluru
ಯುವ ಸೃಜನಶೀಲರು ಕೃತಕ ಬುದ್ಧಿಮತ್ತೆಯನ್ನು ನಾವೀನ್ಯತೆ ಮತ್ತು ಸಬಲೀಕರಣಕ್ಕೆ ಪೂರಕವಾದ ಸಾಧನವಾಗಿ ಬಳಸಿಕೊಳ್ಳಬೇಕು ಎಂದು ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಕರೆ ನೀಡಿದರು. “ಭವಿಷ್ಯವು ಕೃತಕ ಬುದ್ಧಿಮತ್ತೆ ಮತ್ತು ಸೃಜನಶೀಲರ ನಡುವಿನ ಸ್ಪರ್ಧೆಯಾಗಿರಬಾರದು. ಬದಲಾಗಿ, ಕೃತಕ ಬುದ್ಧಿಮತ್ತೆಯು ಸೃಜನಶೀಲರನ್ನು ಸಬಲೀಕರಿಸುವಂತಿರಬೇಕು” ಎಂದು ಅವರು ಹೇಳಿದರು. “ಧೈರ್ಯದಿಂದ ಸೃಷ್ಟಿಸಿ. ಜವಾಬ್ದಾರಿಯಿಂದ ಸೃಷ್ಟಿಸಿ. ಉದ್ದೇಶದಿಂದ ಸೃಷ್ಟಿಸಿ” ಎಂದು ಯುವ ಸೃಜನಶೀಲರಿಗೆ ಕರೆ ನೀಡಿದ ಅವರು, “ತಂತ್ರಜ್ಞಾನವು ವೇಗವಾಗಿ ಬದಲಾಗುತ್ತದೆ. ಸಾಂವಿಧಾನಿಕ ಮೌಲ್ಯಗಳು ಶಾಶ್ವತವಾಗಿರುತ್ತವೆ” ಎಂದು ಒತ್ತಿ ಹೇಳಿದರು.
ನವದೆಹಲಿಯಲ್ಲಿ ಇಂದು ನಡೆದ “ಸಹ-ಸೃಷ್ಟಿಯ ಪರಿಣಾಮ: ಭಾರತದ ಡಿಜಿಟಲ್ ನಾಯಕತ್ವ ಮತ್ತು ಆರೆಂಜ್ ಆರ್ಥಿಕತೆ” ಎಂಬ ವಿಷಯಾಧಾರಿತ ಯೂಟ್ಯೂಬ್ ಇಂಪ್ಯಾಕ್ಟ್ ಶೃಂಗಸಭೆ 2026ರಲ್ಲಿ ಮುಖ್ಯ ಭಾಷಣ ಮಾಡಿದ ಡಾ. ಎಲ್. ಮುರುಗನ್ ಅವರು, ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಜಾಗತಿಕ ಸಾಂಸ್ಕೃತಿಕ ಪ್ರಸಾರವನ್ನು ವೃದ್ಧಿಸುವಲ್ಲಿ ಭಾರತದ ಡಿಜಿಟಲ್ ಮತ್ತು ಸೃಜನಶೀಲ ಆರ್ಥಿಕತೆಯ ಹೆಚ್ಚುತ್ತಿರುವ ಪಾತ್ರವನ್ನು ಒತ್ತಿ ಹೇಳಿದರು. ನೀತಿ ನಿರೂಪಕರು, ತಂತ್ರಜ್ಞಾನ ಕ್ಷೇತ್ರದ ನಾಯಕರು, ಸೃಜನಶೀಲರು, ಉದ್ಯಮಿಗಳು ಮತ್ತು ನಾವೀನ್ಯಕಾರರನ್ನು ಶೃಂಗಸಭೆಯು ಒಂದೆಡೆ ಸೇರಿಸಿತು.
ಸೃಜನಶೀಲ ಆರ್ಥಿಕತೆಯಿಂದ ಬೆಳವಣಿಗೆ ಮತ್ತು ಉದ್ಯೋಗಕ್ಕೆ ಉತ್ತೇಜನ
ಶೃಂಗಸಭೆಯಲ್ಲಿ ಬಿಡುಗಡೆ ಮಾಡಲಾದ ಯೂಟ್ಯೂಬ್ ಇಂಪ್ಯಾಕ್ಟ್ ವರದಿ ಪ್ರಕಾರ, 2025ರಲ್ಲಿ ಯೂಟ್ಯೂಬ್‌ನ ಸೃಜನಶೀಲ ಪರಿಸರ ವ್ಯವಸ್ಥೆಯು ಭಾರತದ ಜಿಡಿಪಿಗೆ ₹18,000 ಕೋಟಿಗೂ ಹೆಚ್ಚು ಕೊಡುಗೆ ನೀಡಿದ್ದು, ದೇಶಾದ್ಯಂತ 9.6 ಲಕ್ಷಕ್ಕೂ ಹೆಚ್ಚು ಪೂರ್ಣಕಾಲಿಕ ಸಮಾನ ಉದ್ಯೋಗಗಳಿಗೆ ಬೆಂಬಲ ನೀಡಿದೆ.
ಭಾರತದಲ್ಲಿ ಸೃಷ್ಟಿಯಾಗುವ ವಿಷಯವಸ್ತುಗಳ (ಕಂಟೆಂಟ್) ವೀಕ್ಷಣಾ ಸಮಯದ ಪೈಕಿ 15 ಪ್ರತಿಶತಕ್ಕೂ ಹೆಚ್ಚು ಭಾಗವು ಭಾರತದ ಹೊರಗಿನ ಪ್ರೇಕ್ಷಕರಿಂದ ಬರುತ್ತಿದೆ ಎಂದು ಸಚಿವರು ತಿಳಿಸಿದರು. ಅಲ್ಲದೆ, 18,000ಕ್ಕೂ ಹೆಚ್ಚು ಭಾರತೀಯ ಯೂಟ್ಯೂಬ್ ಚಾನೆಲ್‌ಗಳು ಒಂದು ಮಿಲಿಯನ್‌ಗೂ ಅಧಿಕ ಚಂದಾದಾರರನ್ನು ಹೊಂದಿವೆ ಎಂದು ಅವರು ಹೇಳಿದರು.

ಡಿಜಿಟಲ್ ಭಾರತದಿಂದ ಸೃಜನಶೀಲ ಭಾರತದೆಡೆಗೆ
ಡಿಜಿಟಲ್ ಪಾವತಿಗಳು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ನವೋದ್ಯಮಗಳು, ಕೃತಕ ಬುದ್ಧಿಮತ್ತೆ, ಕೈಗೆಟುಕುವ ಇಂಟರ್ನೆಟ್ ವ್ಯವಸ್ಥೆ ಮತ್ತು ಡಿಜಿಟಲ್ ಶಿಕ್ಷಣದ ಮೂಲಕ ಭಾರತದಲ್ಲಿ ನಡೆದಿರುವ ಡಿಜಿಟಲ್ ಪರಿವರ್ತನೆಯನ್ನು ಡಾ. ಮುರುಗನ್ ಎತ್ತಿ ಹಿಡಿದರು. ಗ್ರಾಹಕರಿಂದ ಸೃಷ್ಟಿಕರ್ತರತ್ತ, ಬಳಕೆದಾರರಿಂದ ನಾವೀನ್ಯಕಾರರತ್ತ ಮತ್ತು ವಿಷಯವಸ್ತು ಬಳಕೆಯಿಂದ ಬೌದ್ಧಿಕ ಆಸ್ತಿ ಸೃಷ್ಟಿಯತ್ತ ಸಾಗಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಡಿಜಿಟಲ್ ತಂತ್ರಜ್ಞಾನವು ಅವಕಾಶಗಳ ವ್ಯಾಪ್ತಿಯನ್ನೇ ಬದಲಿಸಿದೆ. ಇದರಿಂದ ಪ್ರತಿಯೊಂದು ಜಿಲ್ಲೆ, ಭಾಷೆ ಮತ್ತು ಸಮುದಾಯದ ಪ್ರತಿಭೆಗಳು ಜಾಗತಿಕ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಆರೆಂಜ್ ಆರ್ಥಿಕತೆಯನ್ನು ಬಲಪಡಿಸುವುದು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ “ಭಾರತದಲ್ಲಿ ಸೃಷ್ಟಿಸಿ, ಜಗತ್ತಿಗಾಗಿ ಸೃಷ್ಟಿಸಿ” ಎಂಬ ದೃಷ್ಟಿಕೋನವನ್ನು ಉಲ್ಲೇಖಿಸಿದ ಸಚಿವರು, ಆರೆಂಜ್ ಆರ್ಥಿಕತೆಯ ಮೂರು ಆಧಾರಸ್ತಂಭಗಳಾದ ವಿಷಯವಸ್ತು, ಸೃಜನಶೀಲತೆ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿದರು.
ಸೃಜನಶೀಲತೆ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ಅದು ಉದ್ಯೋಗ, ಉದ್ಯಮಗಳು, ಬೌದ್ಧಿಕ ಆಸ್ತಿ, ರಫ್ತು ಮತ್ತು ಸಾಂಸ್ಕೃತಿಕ ಪ್ರಭಾವವನ್ನು ಸೃಷ್ಟಿಸಬಲ್ಲದು ಎಂದು ಅವರು ಹೇಳಿದರು.

ಸೃಜನಶೀಲರನ್ನು ಬದಲಿಸುವುದಲ್ಲ, ಅವರನ್ನು ಸಬಲೀಕರಿಸುವುದು ಕೃತಕ ಬುದ್ಧಿಮತ್ತೆಯ ಉದ್ದೇಶವಾಗಬೇಕು
ಬರಹ, ಅನುವಾದ, ಸಂಪಾದನೆ, ಅನಿಮೇಷನ್, ಸಂಗೀತ ಸಂಯೋಜನೆ, ವಿನ್ಯಾಸ ಮತ್ತು ವಿತರಣೆಯಲ್ಲಿ ಕೃತಕ ಬುದ್ಧಿಮತ್ತೆಯು ಸೃಜನಶೀಲರಿಗೆ ನೆರವಾಗಬಲ್ಲದು. ಆದರೆ ಮಾನವ ಕಲ್ಪನಾಶಕ್ತಿಯೇ ಸೃಜನಶೀಲತೆಯ ಕೇಂದ್ರಬಿಂದುವಾಗಿರುತ್ತದೆ ಎಂದು ಡಾ. ಮುರುಗನ್ ಹೇಳಿದರು.
ಕೃತಕ ಬುದ್ಧಿಮತ್ತೆಯು ಸೃಜನಶೀಲರನ್ನು ಬದಲಿಸುವ ಬದಲು ಅವರನ್ನು ಸಬಲೀಕರಿಸಬೇಕು ಎಂದು ಅವರು ಪುನರುಚ್ಚರಿಸಿದರು. ಇದೇ ವೇಳೆ, ಉದಯೋನ್ಮುಖ ತಂತ್ರಜ್ಞಾನಗಳ ಸುಲಭ ಲಭ್ಯತೆ, ಜವಾಬ್ದಾರಿಯುತ ಮತ್ತು ನೈತಿಕ ಬಳಕೆಯ ಅಗತ್ಯವನ್ನು ಅವರು ಒತ್ತಿಹೇಳಿದರು.
ಶೃಂಗಸಭೆಯಲ್ಲಿ ಭಾರತೀಯ ಸೃಜನಶೀಲ ತಂತ್ರಜ್ಞಾನ ಸಂಸ್ಥೆ (ಐಐಸಿಟಿ)ಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ “ಕೃತಕ ಬುದ್ಧಿಮತ್ತೆಯೊಂದಿಗೆ ಸೃಷ್ಟಿಸಿ” ಚಲನಚಿತ್ರಗಳನ್ನೂ ಬಿಡುಗಡೆ ಮಾಡಲಾಯಿತು.

ಸೃಜನಶೀಲ ಪ್ರತಿಭೆಗಾಗಿ ಸರ್ಕಾರದ ಉಪಕ್ರಮಗಳು
ಸೃಜನಶೀಲ ಪ್ರತಿಭೆಗಳನ್ನು ಗುರುತಿಸಲು, ಅಭಿವೃದ್ಧಿಪಡಿಸಲು ಹಾಗೂ ಅವರನ್ನು ಮಾರುಕಟ್ಟೆಗಳೊಂದಿಗೆ ಸಂಪರ್ಕಿಸಲು ಇರುವ ಮಾರ್ಗಗಳನ್ನು ಬಲಪಡಿಸುವ ಉದ್ದೇಶದಿಂದ ವೇವ್ಸ್, ಐಐಸಿಟಿ, ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜಸ್, ಜೆಮ್ಸ್ ಆಫ್ ಇಂಡಿಯಾ, ವೇವ್ಸ್ ಬಜಾರ್, ಮೈವೇವ್ಸ್ ಮತ್ತು ಕ್ರಿಯೇಟರ್ಸ್ ಕಾರ್ನರ್ ಸೇರಿದಂತೆ ಕೈಗೊಂಡಿರುವ ಉಪಕ್ರಮಗಳನ್ನು ಸಚಿವರು ಉಲ್ಲೇಖಿಸಿದರು.
15,000 ಪ್ರೌಢಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಆಡಿಯೋ-ವಿಶುವಲ್, ಅನಿಮೇಷನ್, ವಿಷುಯಲ್ ಎಫೆಕ್ಟ್ಸ್ ಮತ್ತು ಗೇಮಿಂಗ್ (ಎವಿಜಿಸಿ) ಕಂಟೆಂಟ್-ಕ್ರಿಯೇಟರ್ ಪ್ರಯೋಗಾಲಯಗಳನ್ನು ಸ್ಥಾಪಿಸಲು ಕೇಂದ್ರ ಬಜೆಟ್ 2026–27ರಲ್ಲಿ ಮಾಡಲಾಗಿರುವ ನಿಬಂಧನೆಯನ್ನೂ ಅವರು ಪ್ರಸ್ತಾಪಿಸಿದರು. 2030ರ ವೇಳೆಗೆ ಈ ಕ್ಷೇತ್ರಕ್ಕೆ ಸುಮಾರು 20 ಲಕ್ಷ ವೃತ್ತಿಪರರ ಅಗತ್ಯವಿರಲಿದೆ ಎಂದು ಅವರು ತಿಳಿಸಿದರು.
ಡಿಜಿಟಲ್ ಯುಗದಲ್ಲಿ ಸಾಂವಿಧಾನಿಕ ಮೌಲ್ಯಗಳು
“ತಂತ್ರಜ್ಞಾನವು ವೇಗವಾಗಿ ಬದಲಾಗುತ್ತದೆ. ಸಾಂವಿಧಾನಿಕ ಮೌಲ್ಯಗಳು ಶಾಶ್ವತವಾಗಿರುತ್ತವೆ” ಎಂದು ಒತ್ತಿ ಹೇಳಿದ ಡಾ. ಮುರುಗನ್, ಭಾರತದ ಡಿಜಿಟಲ್ ಪರಿವರ್ತನೆಯಲ್ಲಿ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಪ್ರಸ್ತುತತೆಯನ್ನು ಒತ್ತಿ ಹೇಳಿದರು.
ಸಂವಿಧಾನದ 19ನೇ ವಿಧಿ ಮತ್ತು ಸಮಂಜಸವಾದ ಸಾಂವಿಧಾನಿಕ ನಿರ್ಬಂಧಗಳಿಗೆ ಒಳಪಟ್ಟಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಿದ ಸಚಿವರು, ಸೃಜನಶೀಲತೆಯ ಸ್ವಾತಂತ್ರ್ಯದೊಂದಿಗೆ ಜವಾಬ್ದಾರಿಯೂ ಇರಬೇಕು ಎಂದು ಒತ್ತಿ ಹೇಳಿದರು.
51 ಎ ವಿಧಿಯಲ್ಲಿರುವ ಮೂಲಭೂತ ಕರ್ತವ್ಯಗಳನ್ನೂ ಪ್ರಸ್ತಾಪಿಸಿದ ಸಚಿವರು, ಡಿಜಿಟಲ್ ಯುಗದಲ್ಲಿ ಜವಾಬ್ದಾರಿಯುತವಾಗಿ ಸೃಷ್ಟಿಸುವುದು, ಹಂಚಿಕೊಳ್ಳುವುದು, ಪರಿಶೀಲಿಸುವುದು ಮತ್ತು ನಾವೀನ್ಯತೆ ಕೈಗೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.
ಭಾರತದ ಕಥೆಗಳನ್ನು ಜಗತ್ತಿಗೆ ತಲುಪಿಸುವುದು
ಸಿನಿಮಾ, ಸಂಗೀತ, ಗೇಮಿಂಗ್, ಅನಿಮೇಷನ್, ಡಿಜಿಟಲ್ ಕಥನ, ವಿನ್ಯಾಸ, ಕರಕುಶಲ ಕಲೆಗಳು ಮತ್ತು ಸಾಹಿತ್ಯದ ಮೂಲಕ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಹೊಸ ಪ್ರೇಕ್ಷಕರಿಗೆ ತಲುಪಿಸಬಹುದು ಎಂದು ಡಾ. ಮುರುಗನ್ ಹೇಳಿದರು.
ಯುವ ಸೃಜನಶೀಲರನ್ನುದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಭಾಷೆ, ಸಂಸ್ಕೃತಿ ಮತ್ತು ಕಥೆಗಳು ಜಾಗತಿಕ ಮಟ್ಟವನ್ನು ತಲುಪಬಹುದು ಎಂದು ಹೇಳಿದರು. ಭಾರತದ ವೈವಿಧ್ಯತೆಯ ಮೇಲಿನ ವಿಶ್ವಾಸದೊಂದಿಗೆ ಕಂಟೆಂಟ್ ಸೃಷ್ಟಿಸಲು ಅವರು ಯುವ ಸೃಜನಶೀಲರಿಗೆ ಕರೆ ನೀಡಿದರು.
ಭಾರತದ ಡಿಜಿಟಲ್ ಆರ್ಥಿಕತೆಯ ಭವಿಷ್ಯವು ತಂತ್ರಜ್ಞಾನದ ನೆರವಿನಿಂದ ದೇಶವು ಏನನ್ನು ಸೃಷ್ಟಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸಚಿವರು ಹೇಳಿದರು. ವಿಕಸಿತ ಭಾರತ 2047 ಗುರಿಯತ್ತ ಸಾಗುವ ಸಂದರ್ಭದಲ್ಲಿ ಉದ್ಯೋಗ, ಬೌದ್ಧಿಕ ಆಸ್ತಿ, ಜಾಗತಿಕ ಅವಕಾಶಗಳು ಮತ್ತು ಎಲ್ಲರನ್ನು ಒಳಗೊಂಡ ಬೆಳವಣಿಗೆಗೆ ಮಹತ್ವ ನೀಡಬೇಕು ಎಂದು ಅವರು ಒತ್ತಿ ಹೇಳಿದರು.
ವಿಕಸಿತ ಭಾರತ 2047 ನಿರ್ಮಾಣಕ್ಕೆ ಭಾರತದ ಡಿಜಿಟಲ್ ಮತ್ತು ಸೃಜನಶೀಲ ಉದ್ಯಮಗಳ ಹೆಚ್ಚುತ್ತಿರುವ ಪಾತ್ರವನ್ನು ಶೃಂಗಸಭೆಯು ಉಲ್ಲೇಖಿಸಿತು. ಒಳಗೊಳ್ಳುವ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾದ ಸೃಜನಶೀಲ ವ್ಯವಸ್ಥೆಯನ್ನು ನಿರ್ಮಿಸಲು ಸಾಮೂಹಿಕ ಪ್ರಯತ್ನಗಳ ಅಗತ್ಯವಿದೆ ಎಂದು ಸಚಿವರು ಕರೆ ನೀಡಿದರು. ಯೂಟ್ಯೂಬ್ ಇಂಡಿಯಾದ ಕಂಟ್ರಿ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀಮತಿ ಗುಂಜನ್ ಸೋನಿ, ಯೂಟ್ಯೂಬ್‌ನ ಜಾಗತಿಕ ಸರ್ಕಾರಿ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿಯ ಉಪಾಧ್ಯಕ್ಷೆ ಶ್ರೀಮತಿ ಲೆಸ್ಲಿ ಮಿಲ್ಲರ್ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಸೆಂಥಿಲ್ ರಾಜನ್ ಅವರು ಉಪಸ್ಥಿತರಿದ್ದರು.
*****
(ಪ್ರಕಟಣೆ ಐ.ಡಿ.: 2316759)
ವಿಸಿಟರ್ ಕೌಂಟರ್ : 12